For Quick Alerts
ALLOW NOTIFICATIONS  
For Daily Alerts

ಬಂಗಾರದಂಥ ಅಕ್ಕಿಯನ್ನು ಉಳಿಸುವುದು ಹೇಗೆ?

By * ಯಶ್
|
How to save rice?
ದಿನನಿತ್ಯದ ಊಟಕ್ಕೆ ಅಕ್ಕಿಯನ್ನೇ ನಂಬಿದ ಜನ ನಾವು. ಅಕ್ಕಿಯೇ ನಮ್ಮ ಜೀವಾಳ, ಅನ್ನವೇ ಬ್ರಹ್ಮ. ವಿವಿಧ ಸಂದರ್ಭಗಳಲ್ಲಿ ಬಿಳಿ ಅನ್ನ, ಚಿತ್ರಾನ್ನ, ಕೊಬ್ಬರಿ ಅನ್ನ, ಘೀ ರೈಸ್, ಪುಳಿಯೋಗರೆ, ಪುಲಾವ್, ಸಕ್ಕರೆ ಅನ್ನ ಮುಂತಾದ ವೈವಿಧ್ಯಮಯ ಭಕ್ಷ್ಯಗಳನ್ನು ಮಾಡಿ ನಾವೂ ಮಾಡಿ ಅತಿಥಿಗಳನ್ನೂ ಸತ್ಕರಿಸಿ ಊಟ ಹಾಕುವ ಸಂಪ್ರದಾಯ, ಸಂಸ್ಕೃತಿ ನಮ್ಮದು.

ಮದುವೆ ಮುಂತಾದ ಸಮಾರಂಭಗಳಲ್ಲಿ, ಮನೆಯಲ್ಲಿ ಊಟ ಮಾಡುವಾಗ ಎಷ್ಟೊಂದು ಅನ್ನ ಭೂಮಿಯ ಪಾಲಾಗಿ ಕೊನೆಗೆ ತಿಪ್ಪೆ ಸೇರುತ್ತದೆ ಎಂಬುದನ್ನು ನಾವು ಲೆಕ್ಕ ಇಡುತ್ತೇವೆಯೆ? ಖಂಡಿತ ಇಲ್ಲ. ದೇವಸ್ಥಾನಗಳಲ್ಲಿ ಎಂಜಲು ಎಲೆಯ ಮೇಲೆ ಅನಾಥವಾಗಿ ಬಿದ್ದ ಅನ್ನದ ಮೇಲೆ ಉರುಳಾಡುತ್ತೇವೆಯೇ ಹೊರತು ಆ ಅನ್ನವನ್ನು ಉಳಿಸಿದರೆ, ಇನ್ನೂ ನಾಲ್ಕಾರು ಜನ ಊಟ ಮಾಡಬಹುದಿತ್ತು ಎಂದು ಚಿಂತಿಸುವುದಿಲ್ಲ. ಹಂಡೆಗಟ್ಟಲೆ ಅನ್ನ ಸಾರು ಉಳಿದಾಗ ಹತ್ತಿರದಲ್ಲಿರುವ ಅನಾಥಾಶ್ರಮಕ್ಕೆ ಕೊಟ್ಟು ಬರುವ ಮನಸು ಮಾಡುವುದಿಲ್ಲ.

ಅಕ್ಕಿ ಬಗ್ಗೆ ಈಗ ಯಾಕಿಷ್ಟು ತಲೆಕೆಡಿಸಿಕೊಳ್ಳಬೇಕೆಂದರೆ. ಅಕ್ಕಿ ರೇಟು ದಿನದಿನಕ್ಕೆ ರಾಕೆಟ್‌ನಂತೆ ಮೇಲೇರುತ್ತಿದೆ. ಉತ್ತಮ ಗುಣಮಟ್ಟದ ಅಕ್ಕಿ ಬಡವರ ಕೈಗೆಟುಕದಂತಾಗಿದೆ. ಗೋದಾಮುಗಳಲ್ಲಿ ಅಕ್ಕಿ ಹೆಗ್ಗಣ ಮತ್ತು ಕಳ್ಳರ ಪಾಲಾಗುತ್ತಿದೆ. ಅಕ್ಕಿಯನ್ನು ಈಪಾಟಿ ಪೋಲು ಮಾಡುವ ಬದಲು ಉಳಿಸಿದರೆ ನಮಗೇ ಉಳಿತಾಯ. ಮುಂಬೈನಲ್ಲಿ ಯಾರೋ ಪ್ರಜ್ಞಾವಂತರೊಬ್ಬರು ಮದುವೆ ಮುಂತಾದ ಶುಭ ಸಮಾರಂಭದಲ್ಲಿ ಆರಕ್ಷತೆಗೆ ಅಕ್ಕಿ ಬಳಸಬಾರದು ಎಂದು ಅಭಿಯಾನವನ್ನು ಆರಂಭಿಸಿದ್ದರು ಮತ್ತು ಮದುವೆಯಲ್ಲೆಲ್ಲ ಕಾಲಬಳಿ ಬಿದ್ದು ಒದ್ದಾಡುತ್ತಿದ್ದ ಅಕ್ಕಿಯನ್ನು ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದರು.

ಅಕ್ಕಿಯನ್ನು ಉಳಿಸಲು ನಾವು ಏನು ಮಾಡಬಹುದು

* ಮನೆಯಲ್ಲಿ ಜನರು ಇದ್ದಷ್ಟೇ ಅನ್ನ ಬೇಯಿಸಿರಿ.
* ಅತಿಥಿಗಳಿಗೆ ಅನ್ನ ಹಾಕುವಾಗ ಅವರು ಕೇಳಿದಷ್ಟೇ ಬಡಿಸಿರಿ. ಬಲವಂತಮಾಡಿ ಬಡಿಸಬೇಡಿ.
* ಆರತಕ್ಷತೆಯಲ್ಲಿ ವಧುವರರನ್ನು ಆಶೀರ್ವದಿಸುವಾಗ ಮುಷ್ಟಿಗಟ್ಟಲೆ ಎಸೆಯಬೇಡಿ.
* ಮನೆಯಲ್ಲಿ ಕ್ವಿಂಟಾಲ್‌ಗಟ್ಟಲೆ ಅಕ್ಕಿ ಶೇಖರಿಸಿಟ್ಟಾಗ ಕೆಡದಂತೆ ಮುಂಜಾಗ್ರತೆ ವಹಿಸಿ.
* ಅಕಸ್ಮಾತ್ ಅನ್ನ ಜಾಸ್ತಿ ಉಳಿದರೆ ತಿಪ್ಪೆಗೆ ಹಾಕದೆ, ಅನಾಥಾಲಯಕ್ಕೆ ದಾನ ಮಾಡಿರಿ.
* ಅಕ್ಕಿ ಪೋಲಾಗುವ ಸಮಯ ಬಂದಾಗ ಅನ್ನವೇ ನಮ್ಮ ಪಾಲಿನ ದೇವರು ಎಂದು ನೆನೆಸಿಕೊಳ್ಳಿ.

ಹಾಗೆಯೆ, ಅಕ್ಕಿಗೆ ಸಂಬಂಧಿಸಿದಂತೆ ಬಂದಿರುವ ಎರಡು ಪ್ರತಿಕ್ರಿಯೆಗಳು

ಅಕ್ಕಿಯನ್ನು ಮೆಡಿಕಲ್ ಸ್ಟೋರ್ನಲ್ಲಿ ಸಿಗುವ PARAD TABLETS ಅನ್ನು ಮೂಟೆ ಒಳಗೆ ಮಧ್ಯೆ ಮಧ್ಯೆ ಸೇರಿಸಿ ಇಡುವುದರಿಂದ ಅಕ್ಕಿಯು ಹಾಳಾಗದಂತೆ ಹೆಚ್ಚು ತಿಂಗಳುಗಳ ಕಾಲ ರಕ್ಷಿಸಬಹುದು. ಬೇರೆ ಕಾಳು ಮತ್ತು ಇತರ ಧಾನ್ಯಗಳನ್ನು ಇದೇ ರೀತಿ ಸಂರಕ್ಷಿಸಬಹುದು.

ಹಿಂದೂ ಸಂಪ್ರದಾಯದಲ್ಲಿ ವಧು-ವರರನ್ನು ಲಕ್ಷ್ಮಿ ನಾರಾಯಣ ಸ್ವರೂಪವೆಂದು ನಂಬಲಾಗಿದೆ. ಹಾಗಾಗಿ ವಧು ವರರಿಗೆ ಅಕ್ಕಿಯಿಂದ ಧಾರೆ ಎರೆಯುವುದು ಲಕ್ಷ್ಮಿ ನಾರಾಯಣರಿಗೆ ಸುವರ್ಣ ಧಾರೆ ಎಂದೆನಿಸುತ್ತದೆ. ಈ ಅಕ್ಕಿಯು ಎಲ್ಲೂ ಹಾಳಾದ ಉದಾಹರಣೆ ಇಲ್ಲ. ಈ ಅಕ್ಕಿಯನ್ನು ಮತ್ತೆ ಉಪಯೋಗಿಸುತ್ತಾರೆ. ಎಲ್ಲರೂ ಇದನ್ನು ತುಳಿದು ಹಾಳುಮಾಡುವುದಿಲ್ಲ. ಎಲ್ಲಾ ಸಂಪ್ರದಾಯಗಳನ್ನು ಹೀಗೆ ಅವಹೇಳನ ಮಾಡಿ ಅಮೆರಿಕ ಸಂಸ್ಕೃತಿಯನ್ನು ತಂದು ಎಲ್ಲರ ಭಾವನೆ, ನಂಬಿಕೆ ಹಾಳು ಮಾಡುವುದು ಅಭ್ಯಾಸವಾಗಿದೆ. ದೊಡ್ಡ ಜನರು ತಿಂದು ಎಸೆಯುವ ಆಹಾರವನ್ನು ಗಮನಿಸಿ. ಅವರಿಗೆ ಅನ್ನಬ್ರಹ್ಮನ ಪಾವಿತ್ರತೆಯನ್ನು ಅರಿಕೆ ಮಾಡಿ ಪೋಲು ಮಾಡುವುದನ್ನು ನಿಲ್ಲಿಸಿ.

English summary

How to save rice | Rice is precious | Do not waste rice | ಬಂಗಾರದಂಥ ಅಕ್ಕಿಯನ್ನು ಉಳಿಸುವುದು ಹೇಗೆ?

How to save rice? Rice is precious, rice is our lifeline, rice is our GOD. Do not waste it. Find here tips to save rice and recipes made out of rice.
Story first published: Thursday, February 23, 2012, 13:49 [IST]
X
Desktop Bottom Promotion