For Quick Alerts
ALLOW NOTIFICATIONS  
For Daily Alerts

ರುಚಿಯಾದ ಖಾದ್ಯಕ್ಕೆ ಸಾಥ್ ನೀಡುವ ಸಾಂಬಾರ್, ಚಟ್ನಿ ಪುಡಿ ರೆಸಿಪಿ

|

ಸಾಂಬಾರನ್ನು ಇಡ್ಲಿ, ದೋಸೆ, ಉತ್ತಪ್ಪ, ವಡೆ ಇತ್ಯಾದಿಗಳ ಜೊತೆಗೆ ಬಡಿಸುತ್ತಾರೆ ಎಂಬುದು ನಮಗೆಲ್ಲ ಗೊತ್ತು. ದಕ್ಷಿಣ ಭಾರತದ ಆಹಾರದ ಅವಿಭಾಜ್ಯ ಅಂಗವಾದ ಇದನ್ನು ಬಗೆ ಬಗೆಯ ತರಕಾರಿ ಮತ್ತು ಮಸಾಲೆಗಳ ಜೊತೆಗೆ ತಯಾರಿಸಲಾಗುತ್ತದೆ. ಇದಕ್ಕೆ ಅತ್ಯಗತ್ಯವಾಗಿ ಬೇಕಾದ ಪದಾರ್ಥವೆಂದರೆ ಅದು ಸಾಂಬಾರ್ ಮಸಾಲೆ. ನಾವು ಯಾವಾಗಲು ರುಚಿಕರವಾದ ಸಾಂಬಾರ್ ಮಾಡಲು ಯಾವ ಬ್ರ್ಯಾಂಡ್ ಮಸಾಲೆಯನ್ನು ಕೊಳ್ಳಬೇಕೆಂದು ಗೊಂದಲಕ್ಕೆ ಒಳಗಾಗುತ್ತಿರುತ್ತೇವೆ.

ಆದರೆ ಆ ಮಸಾಲೆಯನ್ನು ನೀವು ಮನೆಯಲ್ಲಿಯೇ ತಯಾರಿಸಿಕೊಳ್ಳಿ ಎಂಬುದು ನಮ್ಮ ಸಲಹೆ. ಚಟ್ನಿ ಪುಡಿಯನ್ನು ಸಹ ದಕ್ಷಿಣ ಭಾರತದಲ್ಲಿ, ಅದರಲ್ಲೂ ನಮ್ಮ ಉತ್ತರ ಕರ್ನಾಟಕದ ಜನ ಹೆಚ್ಚು ಸವಿಯಲು ಇಷ್ಟಪಡುತ್ತಾರೆ. ಈ ಮಸಾಲೆ ಮತ್ತು ಖಾರದಿಂದ ಕೂಡಿದ ಚಟ್ನಿ ಪುಡಿಯನ್ನು ಮನೆಯಲ್ಲಿ ತಯಾರಿಸಿಕೊಂಡಷ್ಟು ಅದರ ರುಚಿ ಹೆಚ್ಚಾಗಿರುತ್ತದೆ.

Easy To Prepare Sambar Masala & Chutney Pudi Recipe

ಹಾಗಾದರೆ ಬನ್ನಿ ಇಂದು ನಾವು ನಮ್ಮ ಸಾಮಾನ್ಯವಾದ ಖಾದ್ಯಗಳನ್ನು ಬಿಟ್ಟು ಸಾಂಬಾರ್ ಮಸಾಲ ಮತ್ತು ಚಟ್ನಿ ಪುಡಿಗಳನ್ನು ಮನೆಯಲ್ಲಿ ಹೇಗೆ ತಯಾರಿಸುವುದು ಎಂದು ತಿಳಿದುಕೊಂಡು ಬರೋಣ. ಆಹಾ ಉಡುಪಿ ಶೈಲಿಯ ರುಚಿಕರ ಸಾಂಬಾರ್ ರೆಸಿಪಿ!

ಅಗತ್ಯವಾಗಿರುವ ಪದಾರ್ಥಗಳು
*ಕೊತ್ತೊಂಬರಿ ಬೀಜ - 1 ಕಪ್
*ಸಾಸಿವೆ - 1 ಟೀ.ಚಮಚ


*ಜೀರಿಗೆ - 2 ಟೀ.ಚಮಚ
*ಮೆಂತ್ಯೆ - 2 ಟೀ.ಚಮಚ
*ಒಣಗಿದ ಮೆಣಸಿನ ಕಾಯಿ - 10-12
*ಒಣಗಿದ ಕರಿಬೇವು - 20
*ಇಂಗು - 3/4 ಟೀ.ಚಮಚ
*ಅರಿಶಿನ ಪುಡಿ - 1/2 ಟೀ.ಚಮಚ

ತಯಾರಿಸುವ ವಿಧಾನ
1. ಮೊದಲು ಬಾಣಲೆಯನ್ನು ಕಾಯಿಸಿ. ಅದರಲ್ಲಿ ಕೊತ್ತೊಂಬರಿ ಬೀಜಗಳನ್ನು ಹಾಕಿ 2-3 ನಿಮಿಷಗಳ ಕಾಲ ಉರಿದುಕೊಳ್ಳಿ. ಆನಂತರ ಅದನ್ನು ಒಂದು ತಟ್ಟೆಗೆ ವರ್ಗಾಯಿಸಿಕೊಳ್ಳಿ.
2. ಅದೇ ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಮೆಂತ್ಯೆ, ಒಣಗಿದ ಮೆಣಸಿನಕಾಯಿಗಳನ್ನು ಹಾಕಿಕೊಂಡು 2-3 ನಿಮಿಷಗಳ ಕಾಲ ಹುರಿದುಕೊಳ್ಳಿ.
3. ಇದಾದ ಮೇಲೆ ಉರಿಯನ್ನು ಆರಿಸಿ ಮತ್ತು ಪದಾರ್ಥಗಳನ್ನು ಆರಲು ಬಿಡಿ.
4. ಈಗ ಉರಿದುಕೊಂಡಿರುವ ಎಲ್ಲಾ ಪದಾರ್ಥಗಳನ್ನು ಒಣಗಿದ ಕರಿಬೇವಿನ ಜೊತೆಗೆ ರುಬ್ಬಿಕೊಳ್ಳಿ. ಚೆನ್ನಾಗಿ ಪುಡಿಯಾದ ಅದಕ್ಕೆ ಇಂಗು ಮತ್ತು ಅರಿಶಿನ ಪುಡಿಯನ್ನು ಬೆರೆಸಿಕೊಳ್ಳಿ.
5. ಈ ಸಾಂಬಾರ್ ಮಸಾಲೆಯನ್ನು ಗಾಳಿಯಾಡದ ಜಾಡಿಯಲ್ಲಿ ಹಾಕಿ ಇಡಿ.

ಚಟ್ನಿ ಪುಡಿಯ ರೆಸಿಪಿ
*ಅಗತ್ಯವಾದ ಪದಾರ್ಥಗಳು
*ಕಡಲೆ ಬೇಳೆ - 1 ಕಪ್
*ಉದ್ದಿನ ಬೇಳೆ - 1/2 ಕಪ್
*ಒಣ ಕೊಬ್ಬರಿ- 1/2 ಕಪ್ (ತುರಿದಂತಹುದು)
*ಒಣ ಮೆಣಸಿನ ಕಾಯಿ - 20
*ಕರಿ ಬೇವು - 20
*ರುಚಿಗೆ ತಕ್ಕಷ್ಟು ಉಪ್ಪು
*ಬೆಲ್ಲ- 1 ಟೀ.ಚಮಚ
*ಹುಣಸೆ ತಿರುಳು - 1 ಟೀ.ಚಮಚ
*ಇಂಗು - ಒಂದು ಚಿಟಿಕೆ
*ಎಣ್ಣೆ - 2 ಟೀ.ಚಮಚ
*ಸಾಸಿವೆ - 1 ಟೀ.ಚಮಚ

ತಯಾರಿಸುವ ವಿಧಾನ
1. ಮೊದಲು ಬಾಣಲೆಯನ್ನು ಕಾಯಿಸಿಕೊಳ್ಳಿ ಮತ್ತು ಅದರಲ್ಲಿ ಕಡಲೆ ಬೇಳೆಯನ್ನು ಹೊಂಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ. ಇದಾದ ಮೇಲೆ ಇದನ್ನು ಒಂದು ತಟ್ಟೆಗೆ ವರ್ಗಾಯಿಸಿಕೊಳ್ಳಿ.
2. ಇದೇ ಬಾಣಯಲ್ಲಿ ಉದ್ದಿನ ಬೇಳೆಯನ್ನು ಸಹ ಹೊಂಬಣ್ಣಕ್ಕೆ ಬರುವ ಹಾಗೆ ಹುರಿದುಕೊಳ್ಳಿ. ಇದಾದ ಮೇಲೆ ಇದನ್ನು ಒಂದು ತಟ್ಟೆಗೆ ವರ್ಗಾಯಿಸಿಕೊಳ್ಳಿ.
3. ಇನ್ನು ಬಾಣಲೆಯ ಮೇಲೆ ಎಣ್ಣೆಯನ್ನು ಹಾಕಿಕೊಂಡು ಅದನ್ನು ಕಾಯಿಸಿ, ನಂತರ ಅದಕ್ಕೆ ಸಾಸಿವೆ, ಇಂಗು ಮತ್ತು ಕರಿಬೇವು ಸೊಪ್ಪನ್ನು ಹಾಕಿ. ಒಗ್ಗರೆಣ್ಣೆಯ ರೀತಿ ಇದನ್ನು ತಯಾರಿಸಿಕೊಳ್ಳಿ.
4. ನಂತರ ಇದಕ್ಕೆ ಒಣ ಮೆಣಸಿನಕಾಯಿ ಹಾಕಿ ಮತ್ತು 3-4 ನಿಮಿಷಗಳ ಕಾಲ ಹುರಿದುಕೊಳ್ಳಿ.
5. ತದನಂತರ ಇದಕ್ಕೆ ಒಣ ತೆಂಗಿನಕಾಯಿ ತುರಿಯನ್ನು ಹಾಕಿ ಕೆಲ ನಿಮಿಷಗಳ ಕಾಲ ಹುರಿದುಕೊಳ್ಳಿ.
6. ಇಷ್ಟೆಲ್ಲಾ ಆದ ನಂತರ ಇದಕ್ಕೆ ಉದ್ದಿನ ಬೇಳೆ ಮತ್ತು ಕಡಲೆ ಬೇಳೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
7. ಈಗ ಇದಕ್ಕೆ ಉಪ್ಪು, ಬೆಲ್ಲ ಮತ್ತು ಹುಣಸೆ ತಿರುಳನ್ನು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ ಉರಿಯನ್ನು ಆರಿಸಿ.
8. ಇದಾದ ಮೇಲೆ ಪದಾರ್ಥಗಳನ್ನು ಆರಲು ಬಿಡಿ, ನಂತರ ಈ ಎಲ್ಲವನ್ನು ಮಿಕ್ಸರ್‌ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈಗ ನಿಮ್ಮ ಮುಂದೆ ಚಟ್ನಿ ಪುಡಿ ಸಿದ್ಧವಾಗಿದೆ. ಇದನ್ನು ರೋಟಿ, ಚಪಾತಿ ಮತ್ತು ದೋಸೆಯ ಜೊತೆಗೆ ಸವಿಯಲು ಚೆನ್ನಾಗಿರುತ್ತದೆ.

ಸಲಹೆ
ಈ ಮಸಾಲೆಗಳನ್ನು ಹೆಚ್ಚು ಪ್ರಮಾಣದಲ್ಲಿ ತಯಾರಿಸಿಕೊಳ್ಳಬೇಡಿ. ಏಕೆಂದರೆ ತುಂಬಾ ದಿನಗಳು ಇವುಗಳನ್ನು ಇಟ್ಟುಕೊಂಡಲ್ಲಿ ಅವುಗಳ ಸ್ವಾದವು ಕಳೆದು ಹೋಗುತ್ತದೆ.

English summary

Easy To Prepare Sambar Masala & Chutney Pudi Recipe

Sambar is served with idli, dosa, utapam, vada etc as a side dish.It is the staple food of South-India. You can make sambar with many various vegetables and spices. The most important ingredient in sambar is the sambar masala. We often get confused as to which brand of sambar masala to buy which will give it an authentic taste. We advise, you prepare it at home.
Story first published: Thursday, January 22, 2015, 11:58 [IST]
X
Desktop Bottom Promotion