For Quick Alerts
ALLOW NOTIFICATIONS  
For Daily Alerts

ನಾನಾ ಪತ್ರೆಗಳ ತಂಬ್ಳಿ ಅಥವಾ ತಂಬುಳಿ

By ಮಾಲತಿ ಶೆಣೈ, ಬೆಂಗಳೂರು
|
ಔಷಧೀಯ ಗುಣಗಳುಳ್ಳ ತಿಮರೆ ಎಲೆಗಳಿಂದ ತಯಾರಿಸಿದ ತಂಬುಳಿ ಬಾಯಿ ರುಚಿಯನ್ನು ತಣಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ಬ್ರಾಹ್ಮಿ ಎಲೆಯನ್ನು ಬ್ರಾಹ್ಮಿ ಮೂಹೂರ್ತದಲ್ಲಿ (ಬೆಳಿಗ್ಗೆ 4.30 ಗಂಟೆಗೆ) ಬರಿಹೊಟ್ಟೆಯಲ್ಲಿ ತಿಂದರೆ ನೆನಪಿನ ಶಕ್ತಿಯೂ ವೃದ್ಧಿಸುತ್ತದೆ.

ತಂಪು ಮತ್ತು ಹುಳಿ ಸೇರಿ ತಂಫ್ಹುಳಿ. ಇದೇ ತಂಬುಳಿ, ತಂಬಳಿ, ತಂಬ್ಳಿ ಆಗಿರಬಹುದೇ? ಪದಮೂಲ, ಪದೋತ್ಪತ್ತಿ ಪರಿಣಿತರಾದ ಜಿ.ವಿ. ವೆಂಕಟಸುಬ್ಬಯ್ಯ ಅಥವಾ ಕಮಲಾ ಹಂಪನಾ ಅವರನ್ನು ಹೇಳಬೇಕು. ಕಾಡಲ್ಲಾಗಲೀ, ಹಿತ್ತಲಲ್ಲಾಗಲೀ ಅರಳಿದ ವಿವಿಧ ಬಗೆಯ ಸಸ್ಯಗಳ ಎಲೆಗಳನ್ನು ಬಳಸಿ ತಯಾರಿಸುವ, ಬಾಯಿ ರುಚಿಯನ್ನು ತಣಿಸುತ್ತಲೇ ಸಹಜ ಆರೋಗ್ಯವನ್ನು ವೃದ್ಧಿಸುವ ತಂಬುಳಿ ಮೂಲತಃ ತಣ್ಣಗಿನ ಪದಾರ್ಥ. ಇದೇವೇಳೆ, ನಿತ್ಯ ಅಡುಗೆ ಮಾಡುವ ಹೊಣೆಹೊತ್ತ ಮಹಿಳೆಯರು ಮೊನಾಟನಿ ಕಿಲ್ ಮಾಡಿ ತಮ್ಮ ಕೈರುಚಿಯನ್ನು ಸಾದರಬಡಿಸಲು ಸದವಕಾಶ. ಬನ್ನಿ, ಒಂದೆರಡು ಬಗೆಯ ತಂಬಳಿಗಳ ಬಗ್ಗೆ ತಿಳಿಯೋಣವಂತೆ.

ಆಹಾರ ಒಂದೆಲಗ / ಬ್ರಾಹ್ಮಿ / ತಿಮರೆ ತಂಬುಳಿ
(Indian Penny Wort) (Latin Name: Centella Asiatica)

ಬೇಕಾಗುವ ಪದಾರ್ಥಗಳು : ತಿಮರೆ ; ಒಂದು ಹಿಡಿ, ಅರ್ಧ ಕಪ್ ತಾಜಾ ತೆಂಗಿನಕಾಯಿ ತುರಿ; 8-10 ಕಾಳು ಮೆಣಸು; ಅರ್ಧ ಟೀ ಚಮಚ ಜೀರಿಗೆ; ಚಿಕ್ಕ ಗಾತ್ರದ ಹುಣಸೆ ಹುಳಿ; (ಬೇಕಾದರೆ ಹಸಿ ಶುಂಠಿಯನ್ನು ಕೂಡಾ ಬಳಸಬಹುದು) ರುಚಿಗೆ ಉಪ್ಪು. ಒಗ್ಗರಣೆಗೆ ತುಪ್ಪ, ಸಾಸಿವೆ, ಒಣ ಮೆಣಸು.

ತಯಾರಿ : ಎಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಿ. 4 ಕಪ್ ಮಜ್ಜಿಗೆ (ಅಥವಾ ಮೊಸರು) ಬೆರೆಸಿ. ಮತ್ತು ತುಪ್ಪದಲ್ಲಿ ಸಾಸಿವೆ, ಒಣಮೆಣಸಿನ ಒಗ್ಗರಣೆ ಹಾಕಿ. ಬೇಸಗೆಯಲ್ಲಿ ಇದು ಬಹಳ ತಂಪು.

ತಿಮರೆಯ ಔಷಧೀಯ ಗುಣಗಳು : ನೆನಪಿನ ಶಕ್ತಿಯನ್ನು ಚುರುಕುಗೊಳಿಸುತ್ತದೆ. ಮುಂಜಾನೆ (ಬ್ರಾಹ್ಮಿ ಮುಹೂರ್ತ?) ಎದ್ದು ಒಂದೆರಡು ಒಂದೆಲಗದ ಎಲೆಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ತಂಬುಳಿ ಹೊಟ್ಟೆಯನ್ನು ಕಾಡುವ ಜಾಡ್ಯಗಳನ್ನು ಹೊಡೆದೋಡಿಸುತ್ತದೆ.

ಮೇಲೆ ಕೊಟ್ಟಿರುವ ತಂಬ್ಳಿಯಲ್ಲಿ ಒಂದೆಲಗ/ತಿಮರೆಯ ಬದಲಾಗಿ ಸಾಂಬಾರ್ ಬಳ್ಳಿ(ದೊಡ್ಡಪತ್ರೆ) ಎಲೆ/ ಸೀಬೆ ಮರದ ಕುಡಿ /ಹೀರೆಕಾಯಿ ಸಿಪ್ಪೆಯನ್ನು (ಎಣ್ಣೆಯಲ್ಲಿ ಹುರಿದು) ಉಪಯೋಗಿಸಬಹುದು.

ಪಡವಳಕಾಯಿ ಬೀಜದ ತಂಬುಳಿ

ಬೇಕಾಗುವ ಪದಾರ್ಥಗಳು : ಎರಡು ಪಡವಳಕಾಯಿಯಿಂದ ತೆಗೆದ ಬೀಜಗಳು (ಪಡವಳಕಾಯಿಯನ್ನು ಉದ್ದಕ್ಕೆ ಸೀಳಿದರೆ ಸುಲಭದಲ್ಲಿ ಬೀಜ ತೆಗೆಯಬಹುದು), ಅರ್ಧ ಕಪ್ ತಾಜಾ ತೆಂಗಿನಕಾಯಿ ತುರಿ, ಎರಡೋ ಮೂರೋ ಹುರಿದ ಒಣ ಮೆಣಸು, ಸಣ್ಣ ತುಂಡು ಹುಣಸೆ ಹುಳಿ, ಉಪ್ಪು, ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು.

ತಯಾರಿ : ಮೊದಲಿಗೆ ಎಣ್ಣೆಯಲ್ಲಿ ಸಾಸಿವೆ, ಕರಿಬೇವನ್ನು ಒಗ್ಗರಿಸಿ ಅದಕ್ಕೆ ಪಡವಳಕಾಯಿಯ ಬೀಜವನ್ನು ಹಾಕಿ, ಅದು ಕೆಂಪು ಬಣ್ಣಕ್ಕೆ ತಿರುಗುವ ತನಕ ಹುರಿದು ಪಕ್ಕಕ್ಕಿಡಿ. ಉಳಿದೆಲ್ಲ ಪದಾರ್ಥವನ್ನು ನುಣ್ಣಗೆ ರುಬ್ಬಿಕೊಳ್ಳಿ. ಊಟಕ್ಕೆ ಬಡಿಸುವ ಸ್ವಲ್ಪ ಮುಂಚೆ ಹುರಿದಿಟ್ಟ ಪಡವಳಕಾಯಿ ಬೀಜವನ್ನು ಬೆರೆಸಿ.

English summary

Indian PennyWort (Ondelaga) Curry - ನಾನಾ ಪತ್ರೆಗಳ ತಂಬ್ಳಿ ಅಥವಾ ತಂಬುಳಿ

Indian Penny Wort Herbal Curry: Karnataka vgetarian delight by Malathi Shenoy in Bengaluru.
X
Desktop Bottom Promotion