For Quick Alerts
ALLOW NOTIFICATIONS  
For Daily Alerts

ಓ ಇಡ್ಲಿಯೇ ನೀನು ಬಲು ಡೆಡ್ಲಿಯೇ?

By Super
|

ಪ್ರತಿವರ್ಷ ಜುಲೈ 21ರಂದು ಸಿಂಗಪುರದಲ್ಲಿ ಆಚರಿಸಲಾಗುವ ಸರ್ವಧರ್ಮ ಸಮನ್ವಯ ದಿನದಂದು ಭಾರತೀಯ ಆಹಾರ ಸಂಸ್ಕೃತಿಯನ್ನೂ ಪರಿಚಯಿಸಲಾಗುತ್ತದೆ. ಅಂದು ಪರಿಚಯಿಸಲ್ಪಟ್ಟ ನಮ್ಮ ಡೆಡ್ಲಿ ಇಡ್ಲಿಯ ಕುರಿತು ಒಂದು ಲೈವ್ಲಿ ಲೇಖನ.


ಜುಲೈ 21ರ ಶುಕ್ರವಾರ ಬೆಳಿಗ್ಗೆ ಬೆಳಿಗ್ಗೆ ನನ್ನೊಡನೆ ಕೆಲಸ ಮಾಡುವ ಚುವಾಬಂದು "ವಾನಿ, ಟುಡೇ ಐ ಏಟ್ ಇಡ್ಲೀ, ಓಹ್ ಇಟ್ ಈಸ್ ಡೆಡ್ಲಿ" ಎಂದ ಹೊಟ್ಟೆ ಹಿಡಿದುಕೊಂಡು. ಈ ಚುವಾ ಹೊಗಳ್ತಾ ಇದಾನಾ ತೆಗಳ್ತಾ ಇದಾನಾ ಅರಿವಾಗದೆ ಎಲ್ಲಿ ತಿಂದೆ ಎಂದಾಗ "ಓಹ್, ಇಟ್ ಈಸ್ ರೇಷಿಯಲ್ ಹಾರ್ಮೊನಿ ವೀಕ್, ಅ ಬಾಯ್ ಗೇವ್ ಮೀ ಒನ್ ಪೀಸ್", ಸಾಲ್ಟೀ, ಸಾಫ್ಟೀ, ನಥಿಂಗ್ ಇನ್‌ಸೈಡ್ ಎಂದ. ಬರೀ ಇಡ್ಲಿ ಮೆಯ್ದಿದ್ದಾನೆ ಅದಕ್ಕೆ ಡೆಡ್ಲೀ ಅನ್ನುತ್ತಿದ್ದಾನೆ ಎಂದು ಆಗ ಗೊತ್ತಾಯಿತು.

ಸಾಂಬಾರ್, ಚಟ್ನಿ, ವಡೆಯೊಂದಿಗೆ ಪ್ರಿಯವಾಗಿ ಸವಿಯುವ ನನಗಿಷ್ಟವಾದ ಮೆದು ಇಡ್ಲಿಯನ್ನು ಡೆಡ್ಲಿ ಎಂದು ಬಯ್ದನಲ್ಲಾ ಎಂದು ಸ್ವಲ ಕಿರಿ ಕಿರಿ ಎನಿಸಿತು. ಒಂದು ಪೀಸ್ ಇಡ್ಲಿ ಕೊಟ್ಟ ಆ ಬಾಯ್ ಚಟ್ನಿ/ಸಾಂಬಾರ್ ಜೊತೆ ಕೊಟ್ಟಿದ್ದರೆ ಚೆನ್ನಾಗಿತ್ತು. ಖಾರ, ಹುಳಿ ಇಲ್ಲದ ಮೆದು, ಸಪ್ಪೆ ಇಡ್ಲಿ ತಿಂದ ಆ ಇಡ್ಲಿ ಚುವಾನಿಗೆ ಡೆಡ್ಲಿ ಅನಿಸಿದ್ದು ಅವನ ತಪ್ಪೇ?

ಶೇ.70ರಷ್ಟು ಚೀನಿಯರು, ಶೇ.20ರಷ್ಟು ಮಲಯರು, ಶೇ.8ರಷ್ಟು ಭಾರತೀಯರು ಜನಸಂಖ್ಯೆ ಇರುವ ಸಿಂಗಪುರದಲ್ಲಿ ಜುಲೈ 21ರಂದು "ಸರ್ವಧರ್ಮ ಸಮನ್ವಯ ದಿನ" ಆಚರಿಸಲಾಗುತ್ತದೆ. ಒಂದು ವಾರದ ಮೊದಲಿನಿಂದಲೇ ಶಾಲಾ, ಕಾಲೇಜುಗಳ ಗ್ರಂಥಾಲಯಗಳಲ್ಲಿ ಚೀನಿ, ಮಲಯ್ ಹಾಗೂ ಭಾರತೀಯರ ವಸ್ತ್ರ, ವಿನ್ಯಾಸ, ಮದುವೆ, ಮನೆಯುಪಯೋಗಿ ಸಾಮಾನು, ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ. ಅಂದು ಒಂದಿಬ್ಬರು ಚೀನಿ ಹುಡುಗಿಯರು ಚಾಂಗ್‌ಸಮ್(ಉದ್ದನೆಯ ನಿಲುವಂಗಿ), ಮಲಯದ ಹುಡುಗಿಯರು ಬಾಜು ಕುರುಂಗ್, ಭಾರತೀಯರು ಸೀರೆಗಳನ್ನು ಉಟ್ಟು ವೇದಿಕೆಯ ಮೇಲೆ ತಮ್ಮ ತಮ್ಮ ಜನಾಂಗಗಳ ಊಟ, ಉಪಚಾರ, ಮದುವೆ, ರೀತಿ ನೀತಿಗಳ ಅಲ್ಪ ಪರಿಚಯ ನೀಡುತ್ತಾರೆ. ಇಂತಿಪ್ಪ ಹೂವಿನಂಥ ಮೆದು ಇಡ್ಲಿಯನ್ನು ಚುವಾ ತಿಂದಿದ್ದು ಅದನ್ನು ಡೆಡ್ಲಿ ಅಂದದ್ದು ಸರ್ವಧರ್ಮ ಸಮನ್ವಯ ದಿನದಂದು.

ಶಾಲಾ, ಕಾಲೇಜಿನ ಮಕ್ಕಳನ್ನು ದೇಗುಲ, ಚರ್ಚ್, ಮಸೀದೀ, ಚೀನಿ ಪಗೋಡಗಳಿಗೆ ಕರೆದೊಯ್ದು ಅಲ್ಲಿನ ಪೂಜೆ, ಪುನಸ್ಕಾರಗಳ ರೀತಿ, ದೇವರುಗಳ ಮಾಹಿತಿ ನೀಡಿ ಆಯಾ ಧರ್ಮಗಳ ಕಿರು ಮಾಹಿತಿ ನೀಡುತ್ತಾರೆ.

ಸಮನ್ವಯದಿನಾಚರಣೆಯ ಹಿನ್ನಲೆ

1964ರಲ್ಲಿ ಸಿಂಗಪುರ ಮಲೇಷಿಯಾದ ಒಂದು ಪ್ರಾಂತ್ಯವಾಗಿದ್ದ ಕಾಲ. 1964 ಜುಲೈ 21ರಂದು ಪಡಾಂಗ್ ಎಂಬ ಜಾಗದಲ್ಲಿ ಮುಸಲ್ಮಾನ ಗುರು ಮೊಹಮದ್ ಪೈಗಂಬರ್ ಹುಟ್ಟುಹಬ್ಬದ ಪ್ರಯುಕ್ತ ಹೊರಟ ಒಂದು ಮೆರವಣಿಗೆ ಜಾತಿ ವೈಷಮ್ಯಕ್ಕೆ ಎಡೆಕೊಟ್ಟು 36 ಜನರನ್ನು ಬಲಿ ತೆಗೆದುಕೊಂಡಿತ್ತು. ಈ ಗಲಭೆಯಲ್ಲಿ 556 ಜನ ತೀವ್ರವಾಗಿ ಗಾಯಗೊಂಡು 3 ಸಾವಿರ ಜನ ಸೆರೆಮನೆ ಸೇರಿದ್ದರು.

ಮತ್ತೆ 1964, ಸೆಪ್ಟೆಂಬರ್ 3ರಂದು ಮಲಯ್ ಸೈಕಲ್ ರಿಕ್ಷಾ ಸವಾರನೊಬ್ಬನನ್ನು ಚೀನಿಯರು ಹೊಡೆದ ಕಾರಣ ಅಂದೇ ಸಾವಿಗೀಡಾದನು. ಈ ಕಾರಣದಿಂದಾಗಿ ಜಾತಿ ಗಲಭೆ ಶುರುವಾಗಿ 13 ಜನ ಸತ್ತು ಮತ್ತೆ ನೂರಾರು ಜನ ಗಾಯಗೊಂಡು, ಗಲಭೆ ತಹಬಂದಿಗೆ ತರಲು ಮಾಸಗಟ್ಟಲೆ ಕರ್ಫ್ಯೂ ಜಾರಿಗೆ ತರಲಾಯಿತಂತೆ.

1965 ಆಗಸ್ಟ್ 9ರಂದು ಮಲೇಷಿಯಾದಿಂದ ಬೇರ್ಪಟ್ಟು ಸಿಂಗಪುರ ಸ್ವತಂತ್ರ ದೇಶವಾಯಿತು. 1964ರ ಜಾತಿ ಗಲಭೆಯಲ್ಲಿ ಮಡಿದ ಜನರ ನೆನಪಿಗಾಗಿ 1966, ಜುಲೈ 21ನೇ ತಾರೀಖಿನಂದು "ಸರ್ವಧರ್ಮ ಸಮನ್ವಯ ದಿನ" ಆಚರಣೆಗೆ ತರಲಾಯಿತು.

1969ರಲ್ಲಿ ಮತ್ತೆ ಜಾತಿ ಗಲಭೆ ತಲೆದೋರಿ 4 ಜನ ಮಡಿದು 80 ಜನ ಗಾಯಗೊಂಡರು. ಅದು ಸ್ವತಂತ್ರ ಸಿಂಗಪುರದಲ್ಲಿ ನಡೆದ ಮೊದಲ ಮತ್ತು ಕೊನೆಯ ಜಾತಿ ಗಲಭೆ. ಅಂದಿನಿಂದ ಇಂದಿನವರೆಗೆ ಮತ್ತೆ ಯಾವುದೇ ಗಲಭೆ ತಲೆ ಎತ್ತದಂತೆ ಸರಕಾರ ಕಠಿಣ ಕಾನೂನು ಜಾರಿಗೆ ತಂದಿದೆ. ಸರ್ವಧರ್ಮಕ್ಕೂ ಮನ್ನಣೆ ನೀಡುವ ಸಿಂಗಪುರ ಇಂದು ವಿಶ್ವದಲ್ಲೇ ಆರ್ಥಿಕ, ಸಾಮಾಜಿಕ, ಶಾಂತಿಯುತ ದೇಶವಾಗಿ ಮುನ್ನಡೆಯುತ್ತಿದೆ.

ಇಡ್ಲಿ...ಡೆಡ್ಲಿ?

ಭಗವದ್ಗೀತೆಯಲ್ಲಿ ತಿನಿಸುಗಳನ್ನು ಭಕ್ಷ್ಯ, ಭೋಜ್ಯ, ಲೇಹ್ಯ, ಪೇಯ ಹಾಗೂ ಚೋಶ್ಯ (ಕರಿದ, ಚಿಕ್ಕ ಹಾಗೂ ಸೂಕ್ಷರೂಪದ) ಎಂದು ವಿಂಗಡಿಸಲಾಗಿದೆ. ಭಾರತೀಯ ಅಡುಗೆಯಲ್ಲಿ ಪರಂಪರೆಯಿದೆ, ಸಂಸ್ಕೃತಿಯಿದೆ, ಪ್ರಾಂತ್ಯಗಳ ವೈವಿಧ್ಯತೆಯಿದೆ, ಆರೋಗ್ಯದ ಕಾಳಜಿ ಹಾಗೂ ಅಡುಗೆಯ ಕಲೆಯೂ ಅಲ್ಲಿ ಅಡಗಿದೆ.

ದ್ರಾವಿಡ ಭಾಷೆಗಳಾದ ಕನ್ನಡ ಮತ್ತು ತಮಿಳಿನ ಇಟ್ಟು+ಆವಿ ಇಡ್ಲಿ ಆಯಿತೆಂದು ಕ್ರಿಸ್ತಶಕ 920 ಇಡ್ಲಿಯ ಬಗ್ಗೆ ಮೊದಲ ಲಿಖಿತ ಮಾಹಿತಿ ಹೇಳಲ್ಪಟ್ಟಿದೆಯಂತೆ. ಮಹಾಭಾರತದಲ್ಲಿ, ಮೂರನೆಯ ಸೋಮೇಶ್ವರರ ವಿಶ್ವಜ್ಞಾನಕೋಶದಲ್ಲಿ ಇಡ್ಲಿಯ ಉಲ್ಲೇಖನವಿದೆಯಂತೆ. ಕ್ರಿಸ್ತಪೂರ್ವ 1025ರಲ್ಲಿ ಇಡ್ಲಿ ಬಗ್ಗೆ ತಿಳಿಸುತ್ತಾ ಬೇಳೆಯನ್ನು ಮಜ್ಜಿಯಲ್ಲಿ ಮೂರು ಗಂಟೆಗಳ ಕಾಲ ನೆನೆಸಿ, ನಂತರ ರುಬ್ಬಿ ಅದಕ್ಕೆ ಕರಿಮೆಣಸು, ಕೊತ್ತಂಬರಿ, ಜೀರಿಗೆ ಹಾಗೂ ಇಂಗನ್ನು ಸೇರಿಸಿ ಆವಿಯಲ್ಲಿಡುತ್ತಿದ್ದರಂತೆ. ಅಂದೂ ಇಂದೂ ಆವಿಯಲ್ಲಿ ಬೇಯಿಸುವ ಇಡ್ಲಿ ಮಾಡುವ ವಿಧಾನ ಅದೇ ಆದರೂ ಇಡ್ಲಿ ಹಿಟ್ಟಿಗೆ ಇದೀಗ ಅನೇಕಾನೇಕ ಸಾಮಾಗ್ರಿಗಳು ಜೊತೆಗೂಡಿವೆ.

ನಿಖರವಾಗಿ ಇದೇ ಪ್ರಾಂತ್ಯ ಇಡ್ಲಿಯ ಮೂಲ ಎಂದು ಹೇಳಲಾಗದಿದ್ದರೂ "ರವೆ ಇಡ್ಲಿ"ಯ ಮೂಲ ಮಾತ್ರ ಬೆಂಗಳೂರಿನ ನಮ್ಮ "ಎಂಟಿಆರ್". ಎರಡನೇ ವಿಶ್ವಯುದ್ಧದ ಕಾಲದಲ್ಲಿ ಅಕ್ಕಿಗೆ ಬರಗಾಲ ಬಂದಿತ್ತು. ಆ ದಿನಗಳಲ್ಲಿ ಅಕ್ಕಿ ಸಿಗುತ್ತಿರಲಿಲ್ಲ. ಇಡ್ಲಿ/ದೋಸೆಗೇ ಧಕ್ಕೆ ಬಂದಿತ್ತು. ಆಗ ಗೋದಿರವೆಯಿಂದ ಇಡ್ಲಿ ತಯಾರಿಕೆಗೆ ಮುನ್ನುಡಿ ಹಾಡಿತು ಎಂಟಿಆರ್.

ಮಲ್ಲಿಗೆ ಇಡ್ಲಿ, ಮಸಾಲೆ ಇಡ್ಲಿ, ಹುರಿ ಇಡ್ಲಿ, ಮಿನಿ ಇಡ್ಲಿ, ತಟ್ಟೆ ಇಡ್ಲಿ, ಓಟ್ ಇಡ್ಲಿ, ಅವಲಕ್ಕಿ ಇಡ್ಲಿ, ರಸಂ ಇಡ್ಲಿ, ಸಾಂಬಾರಿ ಇಡ್ಲಿ, ಪುಡಿ ಇಡ್ಲಿ, ಕಾಂಚೀಪುರಂ ಇಡ್ಲಿ, ರಾಗಿ ಇಡ್ಲಿ, ಸ್ಟಫ್ಡ್ ಇಡ್ಲಿ ಹೀಗೆ ಕಡೆಯ ನಾಮ ಇಡ್ಲಿ ಸ್ಥಿರವಾಗಿದ್ದು ಹೆಸರು, ಸೇರಿಪ ಸಾಮಾಗ್ರಿ ಹೆಚ್ಚಾಗಿ ರೂಪ, ರುಚಿ, ಗಾತ್ರ ಸೇರಿಕೊಳ್ಳುತ್ತಾ ಹೋಗುತ್ತಿದೆ.

ಚುವಾನ ಬಾಯಲ್ಲಿ ಡೆಡ್ಲಿ, ನನ್ನ ಬಾಯಲ್ಲಿ ಗ್ಲೀ...

ಚಿಕ್ಕಂದಿನಲ್ಲಿ ನನ್ನ ಅಣ್ಣ ಮೋನು ಇಡ್ಲಿ ಪದವನ್ನು ಫಾಸ್ಟ್ ಆಗಿ ತಪ್ಪದಂತೆ 25 ಸಲ ಹೇಳು ನಿಂಗೆ ಒಂದು ಐಸ್‌ಕ್ಯಾಂಡಿ ಕೊಡಿಸ್ತೀನಿ ಎಂದು ಆಸೆ ತೋರಿಸ್ತಾ ಇದ್ದ. ಇಡ್ಲಿ, ಇಡ್ಲಿ ಪ್ರಾರಂಭಗೊಂಡು ಇಡ್ಲಿ ನಿಧಾನವಾಗಿ ಹೇಳಿದರೆ ಇಡಲಿಯಾಗಿ ವೇಗದಿಂದ ಹೇಳಿದಾಗ ಇಗ್ಲಿಯಾಗಿ 25ಕ್ಕೆ ಬರುವಷ್ಟರಲ್ಲಿ ಬರೀ ಗ್ಲೀ, ಗ್ಲೀ ಆಗಿ ನನಗೆ ಇಷ್ಟವಾದ ಐಸ್‌ಕ್ಯಾಂಡಿಗೆ ಪಂಗನಾಮ ಹಾಕುತ್ತಿತ್ತು.

ಇಂದು ಇಡ್ಲಿಯನ್ನು ತಿಂದು ಅಲ್ಲಾರೀ ಬರೆದು ನಾನು ಗ್ಲೀ ಆಗಿದೀನೀ...ನೀವು?

X
Desktop Bottom Promotion