For Quick Alerts
ALLOW NOTIFICATIONS  
For Daily Alerts

ಜಾಗರಣೆಗೆ, ಏಕಾದಶಿಗೆ, ವಿರಹಿಗಳ ವೇದನೆ ಶಮನಕ್ಕೆ...

By Staff
|


ಯಾವುದ್ಯಾವುದೋ ವೆಬ್‌ಸೈಟು ರಿಸಿಪಿ ನೋಡಿ ಚಿಕನ್‌, ಮಟನ್‌ ಮಸಾಲಾ ತಿಂದು ಹೊಟ್ಟೆ ಕೆಡಿಸಿಕೊಂಡವರ ಆರೈಕೆ, ಉಪಚಾರಕ್ಕೆ...

ಅವಲಕ್ಕಿ ಮೊಸರು ಅಥವಾ ಮೊಸರವಲಕ್ಕಿ ಅನಾದಿ ಕಾಲದಿಂದಲೂ ಭಾರತೀಯರ ಹೊಟ್ಟೆ ತುಂಬಿಸುತ್ತಾ ಬಂದಿದೆ. ತಣಿಸುತ್ತಾ ಬರುತ್ತಿದೆ. ಶಿವರಾತ್ರಿಯ ಜಾಗರಣೆಗೆ, ಸುಬ್ಬಮ್ಮನ ಏಕಾದಶಿಗೆ, ಏಕಾಂಗಿಗಳ ವಿರಹ ವೇದನೆಗೆ ಮತ್ತು ಬಾಯಿರುಚಿಗೆ. ಶ್ರೀಕೃಷ್ಣ ಭಕ್ತರಿಗೆ ಪ್ರಸಾದವಾಗಿಯೂ, ಹಲ್ಲಿಲ್ಲದವರ ಬಾಯಿಗೆ ಸುಲಭಗ್ರಾಹಿಯೂ ಆಗಿರುವ ನಿರುಪದ್ರವಿ ಮೊಸರವಲಕ್ಕಿಯ ಮಹಾತ್ಮೆಯನ್ನು ಎಂತು ಬಣ್ಣಿಸುವುದು!

ಅತಿ ಸುಲಭವಾಗಿ ಮಾಡಬಹುದಾದ ಉಪಾಹಾರಗಳಲ್ಲಿ ಮೊಸವರಲಕ್ಕಿಗೆ ಮೊದಲ ಬಹುಮಾನ. ಬೇಕಾದವರು ಉಪ್ಪಿಟ್ಟು, ಚಿತ್ರಾನ್ನ ಅಂತಾ ಏನಾದರೂ ಹೇಳಲಿ. ಮೊಸರವಲಕ್ಕಿ ಮಾಡುವಷ್ಟು ಸುಲಭವಾಗಿ ಹಾಗೂ ಶೀಘ್ರವಾಗಿ ಇನ್ನೊಂದು ತಿಂಡಿ ಮಾಡೋಕಾಗಲ್ಲ. 2 ಮಿನಿಟ್ಸ್‌ ನೂಡಲ್ಸ್‌ಗೂ ಕೂಡ ಸವಾಲು ಹಾಕಬಹುದು. ಸಂಪತ್ತಿಗೆ ಸವಾಲ್‌ ಕೂಡ. ಅದರೆ ತಿನ್ನುವವರ ಸಮಯ, ಪರಿಕರ ಮತ್ತು ಬಾಯಿರುಚಿಯ ಮೇಲೆ ಎಲ್ಲಾ ಅಧಾರಿತ ಎನ್ನುವುದು ಬಾಟಮ್‌ ಲೈನ್‌.

ಮೊಸರವಲಕ್ಕಿ ಮಾಡಲು ಏನು ಬೇಕಾಗುತ್ತೆ?

ಮೊಸರು ಮತ್ತು ಅವಲಕ್ಕಿ ಸಾಕು. ಚಾಕುನಿಂದ ಕುಯ್ಯುವಂಥ ಗಟ್ಟಿ ಮೊಸರು, ದಪ್ಪ ಅವಲಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆ (ಬೇಕಾದರೆ)

ವಿಧಾನ :

ಅವಲಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಹಾಕಿ 10-15 ನಿಮಿಷ ನೆನೆಸಿಡಿ (ಮೆತ್ತಗಾಗಬೇಕು ಆದರೆ ಪಿತಪಿತ ಎನ್ನುವಂತಾಗಬಾರದು). ನೆಂದ ಅವಲಕ್ಕಿಯನ್ನು ನೀರಿನಿಂದ ತೆಗೆದು ಒಂದು ಪಾತ್ರೆಗೆ ಹಾಕಿ, ಮೊಸರು ಹಾಗೂ ಉಪ್ಪು ಹಾಕಿ ಕಲೆಸಿ. ಅವಸರವಿದ್ದರೆ ಹಾಗೆ ತಿನ್ನಿ. ಇಲ್ಲದಿದ್ದರೆ ಸ್ವಲ್ಪ ರಂಗು ರಂಗಾಗಿ ಮಾಡಿ. ಏನಾದರೂ ಆಗಲಿ, ಮೊಸರವಲಕ್ಕಿ ಮಾಡಿದ ಕೆಲವೇ ನಿಮಿಷಗಳಲ್ಲಿ ತಿನ್ನಬೇಕು. ನಿಧಾನಿಸಿದರೆ ಹುಳಿಯಾಗುತ್ತದೆ.

ಒಗ್ಗರಣೆ :

ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಸಾಸಿವೆ ಹಾಕಿ, ಸಾಸಿವೆ ಚಿಟಗುಟ್ಟಿದ ನಂತರ, ಕಡ್ಲೇಬೇಳೆ-ಉದ್ದಿನಬೇಳೆ , ಕರಿಬೇವು ಹಾಕಿ. ಮೊಸರಿನಲ್ಲಿ ಹಾಕಿದ ಅವಲಕ್ಕಿಗೆ ಒಗ್ಗರಣೆ ಬೆರೆಸಿ.

ತೆಳ್ಳನೆ ಅವಲಕ್ಕಿಯಾದರೆ ಈ ರಗಳೆಯೇ ಬೇಡ. ನೇರ ಅವಲಕ್ಕಿಯನ್ನು ತೆಗೆದುಕೊಳ್ಳಿ. ಒಂದು ಹಿಡಿ ನೀರು ತೆಗೆದುಕೊಂಡು ಅದರ ಮೇಲೆ ಚಿಮುಕಿಸಿ, ಒಗ್ಗರಣೆ ಹಾಕಿ, ಮೊಸರು ಬೆರೆಸಿ. (ಸಿಹಿ ಬೇಕಾದರೆ ಸಕ್ಕರೆ ಹಾಕಿಕೊಳ್ಳಿ)

ಕೆಲವರು ಚಟ್ನಿಪುಡಿಯನ್ನು ಮೊಸರವಲಕ್ಕಿ ಜತೆಗೆ ಬೆರೆಸಿ ರುಚಿನೋಡುವುದುಂಟು. ನೀವು ನಿಮ್ಮಿಷ್ಟ.

Story first published: Thursday, September 19, 2002, 5:30 [IST]
X
Desktop Bottom Promotion