For Quick Alerts
ALLOW NOTIFICATIONS  
For Daily Alerts

ಬಲು ಪೌಷ್ಟಿಕ ಅಲಸಂದೆ ರೊಟ್ಟಿ

By * ನಿವೇದಿತಾ ಪ್ರಭಾಕರ್, ಬೆಂಗಳೂರು
|
Alasande grains
ಅಲಸಂದೆ ರೊಟ್ಟಿ ತಿಂಡಿಯನ್ನು ತಯಾರಿಸುವ ಮುನ್ನ ಅಲಸಂದೆ ಕುರಿತಂತೆ ನನ್ನ ಬಾಲ್ಯದ ಅನುಭವವನ್ನು ಹೇಳಲೇಬೇಕು. ಆಗ ನಾವಿನ್ನೂ ಚಿಕ್ಕವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಎಂಬ ಗ್ರಾಮಕ್ಕೆ ಶಾಲೆಗೆ ರಜೆ ಬಂದಾಗಲೆಲ್ಲ ಅಲ್ಲಿಗೆ ಓಡುತ್ತಿದ್ದೆವು. ರಜಾ ಮಜಾಕ್ಕಾಗಿ ಅಲ್ಲಿಗೆ ಹೋಗಲು ಅಲ್ಲಿದ್ದ ದೊಡ್ಡ ಮನೆ, ಹಸು, ಸಾಕಿದ ಮುಧೋಳದ ನಾಯಿಗಳಷ್ಟೇ ಆಕರ್ಷಣೆಯಾಗಿರಲಿಲ್ಲ. ಮನೆಯಿಂದ ಎರಡು ಕಿ.ಮೀ.ದೂರದಲ್ಲಿದ್ದ ಗದ್ದೆ, ತೆಂಗಿನ ತೋಟ, ಬತ್ತದ ತೆನೆಗಳು, ಪಕ್ಕದಲ್ಲಿದ್ದ ಮಾವಿನ ಮರ, ಭಡಾರನೆ ನೀರು ಚಿಮ್ಮುಕಿಸುತ್ತಿದ್ದ ಬೋರವೆಲ್ ನೀರು, ಪರಿಶುದ್ಧ ಹವೆ...

ಆದಿನಗಳನ್ನು ನೆನೆಸಿಕೊಳ್ಳುತ್ತಿದ್ದರೆ ಈಗಲೂ ಕಣ್ಣು ಅರಳುತ್ತವೆ. ಮತ್ತೊಮ್ಮೆ ಹಳ್ಳಿಗೆ ಓಡಿಹೋಗಬೇಕು ಅಂತ ಅನ್ನಿಸುತ್ತದೆ.

ಗದ್ದೆಯಲ್ಲಿರುವ ಹಾವು ದೂರ ಓಡಿಹೋಗಲೆಂದು ಹಯ್ ಹುಯ್ ಅಂತ ಸದ್ದು ಮಾಡುತ್ತ ಬತ್ತದ ಜೊತೆಗೆ ಬೆಳೆಯುತ್ತಿದ್ದ ಮೆಣಸಿನಕಾಯಿ, ಕುಂಬಳಕಾಯಿ, ಬೆಂಡೆಕಾಯಿ, ಅಲಸಂದೆ ಮುಂತಾದವುಗಳನ್ನು ಹೆಕ್ಕಲು ಗದ್ದೆಗೆ ಹೋಗುತ್ತಿದ್ದೆವು. ನಿಮಗೆ ಆಶ್ಚರ್ಯವಾಗಬಹುದು, ಎಳೇ ಹಸಿರು ಮೆಣಸಿನಕಾಯಿಗಳನ್ನು ಬರಿಬಾಯಲ್ಲೇ ಕಚ್ಚಿ ತಿನ್ನುತ್ತಿದ್ದೆವು, ಖಾರವಿರುತ್ತಿರಲಿಲ್ಲ. ಜೊತೆಗೆ ಎಳೇ ಎಳೇ ಅಲಸಂದೆ ಕಾಯಿಗಳು ನೇರವಾಗಿಯೇ ಹೊಟ್ಟೆಗಿಳಿಯುತ್ತಿದ್ದವು. ಯಾವುದೇ ರಾಸಾಯನಿಕ ಸಿಂಪಡಿಸಿರದಿದ್ದರಿಂದ ಯಾವುದೇ ತೊಂದರೆಯಿರುತ್ತಿರಲಿಲ್ಲ.

ಬಲಿತ ಅಲಸಂದೆ ಕಾಳುಗಳನ್ನು ಬೇಯಿಸದೆ ತಿನ್ನಲು ಸಾಧ್ಯವಿಲ್ಲ. ಆದರೆ, ಎಳೇ ಅಲಸಂದೆ ಕಾಯಿ ತಿನ್ನಲು ಬಲುರುಚಿ. ಅಲಸಂದೆಯ ಮತ್ತೊಂದು ಮಹತ್ವವೆಂದರೆ, ಅದರಲ್ಲಿಯ ಕ್ಯಾಲರಿ ಅಂಶ. ಅಲಸಂದೆಯಲ್ಲಿನ ಫೈಬರ್ ರಕ್ತದಲ್ಲಿನ ಕೊಬ್ಬನ್ನು ಕರಗಿಸಲು ಬಲು ಸಹಕಾರಿ. ಇದರಲ್ಲಿ ಖನಿಜಾಂಶಗಳೂ ಸಾಕಷ್ಟಿದ್ದು, ಪೊಟ್ಯಾಷಿಯಂ ಅಂಶ ರಕ್ತದೊತ್ತಡ ಕಡಿಮೆಮಾಡುತ್ತದೆ. ಪ್ರೋಟೀನ್ ಅಲಸಂದೆಯಲ್ಲಿ ಜಾಸ್ತಿ ಇರುವುದರಿಂದ ಮಾಂಸ ತಿನ್ನುವವರು ಮಾಂಸವನ್ನು ತ್ಯಜಿಸಿ ಅಲಸಂದೆಗೆ ಶರಣಾಗಬಹುದು. ಇದು ಕ್ಯಾನ್ಸರ್ ಹರಡದಂತೆ ಕೂಡ ತಡೆಯುತ್ತದೆ ಎನ್ನುತ್ತದೆ ವೈದ್ಯಕೀಯ.

ಇಷ್ಟೆಲ್ಲ ಸತ್ವಯುತ ಆಹಾರ ಅಲಸಂದೆಯಿಂದ ರೊಟ್ಟಿಯನ್ನು ಕೂಡ ತಯಾರಿಸಬಹುದು. ಆದರೆ ಇದನ್ನು ಮಾಡುವುದನ್ನು ನೋಡಿದ್ದು ಮಾತ್ರ ಬೆಂಗಳೂರಿನಲ್ಲಿ. ಜೋಳದ ರೊಟ್ಟಿಯಂತೆಯೇ ಇದು ಕೂಡ ಪೌಷ್ಟಿಕ. ಹಾಗಾದರೆ ಒಮ್ಮೆ ನೀವೂ ತಯಾರಿಸಿ ನೋಡಿ.

ಬೇಕಾಗುವ ಪದಾರ್ಥಗಳು :

3 ಕಪ್‌ ಅಲಸಂದೆ ಕಾಳು
ಸ್ವಲ್ಪ ಎಳ್ಳು
1 ಕಪ್ಪು ಗೋದಿಹಿಟ್ಟು
4 -6 ಹಸಿ ಮೆಣಸಿನ ಕಾಯಿ
ಅರ್ಧ ಚಮಚದಷ್ಟು ಜೀರಿಗೆ
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದೆರಡು ಎಸಳು ಕೊತ್ತಂಬರಿಸೊಪ್ಪು.

ಮಾಡುವ ವಿಧಾನ :

ಮೊದಲು ಅಲಸಂದೆ ಕಾಳನ್ನು ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಬೇಕು. ಅಲಸಂದೆ ಚೆನ್ನಾಗಿ ಬೇಯದಿದ್ದರೆ ಅರಗಿಸಿಕೊಳ್ಳುವುದು ಕಷ್ಟ. ಹಾಗಾಗಿ ಚೆನ್ನಾಗಿ ಬೇಯಲಿ. ಅದು ಆರಿದ ಬಳಿಕ ಸುಣ್ಣಗೆ ರುಬ್ಬಿಟ್ಟುಕೊಳ್ಳಿ. ಇದಕ್ಕೆಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ, ಕೊತ್ತಂಬರಿಸೊಪ್ಪು, ಹುರಿದ ಎಳ್ಳು, ಜೀರಿಗೆ, ಗೋದಿಹಿಟ್ಟು ಹಾಗೂ ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ರೀತಿಯಲ್ಲಿ ಕಲೆಸಿ.

ಆನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಟ್ಟುಕೊಂಡು ಮಣೆಯ ಮೇಲೆ ಚಪಾತಿಯಂತೆ ಲಟ್ಟಿಸಬಹುದು ಅಥವಾ ಜೋಳದ ರೊಟ್ಟಿಯಂತೆ ತಟ್ಟಬಹುದು (ತಟ್ಟಲು ಬಾರದವರು ಲಟ್ಟಿಸಬಹುದು ಅಷ್ಟೆ). ಎಣ್ಣೆಯನ್ನು ಅವರವರ ಅಗತ್ಯಗಳಿಗೆ ತಕ್ಕಂತೆ ಹಚ್ಚಬಹುದು. ಆನಂತರ ಕಾದ ಕಾವಲಿಯ ಮೇಲೆ ಎರಡೂ ಬದಿ ಚೆನ್ನಾಗಿ ಬೇಯಿಸಿ. ಬೇಯಿಸುವಾಗ ಎಣ್ಣೆ ಹಚ್ಚದಿದ್ದರೆ ಆರೋಗ್ಯಕ್ಕೂ ಹಿತ. ಅಲಸಂದೆ ರೊಟ್ಟಿಯನ್ನು ಉಪ್ಪಿನಕಾಯಿ, ಬದನೆಕಾಯಿ ಎಣ್ಣೆಗಾಯಿ, ಚಟ್ನಿಪುಡಿ, ಗುರೆಳ್ಳು, ಕಾಯಿ ಚಟ್ನಿಯ ಜತೆ ತಿನ್ನಲು ಬಲು ಸೊಗಸಾಗಿರುತ್ತದೆ.

Story first published: Saturday, February 20, 2010, 16:23 [IST]
X
Desktop Bottom Promotion