For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಉಸಿರಾಟದ ತೊಂದರೆ ಏಕೆ ಉಂಟಾಗುತ್ತದೆ?

|

ಗರ್ಭಾವಸ್ಥೆಯ ದಿನಗಳು ಮುಂದುವರೆಯುತ್ತಿದ್ದಂತೆಯೇ ಗರ್ಭಿಣಿಗೆ ತನ್ನ ನಿತ್ಯದ ಕೆಲಸಗಳು ಹಿಂದಿನಷ್ಟು ಸರಾಗವಾಗಿ ಮಾಡಲು ಆಗುತ್ತಿಲ್ಲ ಎಂಬುದು ತಿಳಿಯತೊಡಗುತ್ತದೆ. ಉದಾಹರಣೆಗೆ ಮೆಟ್ಟಿಲೇರುವುದು. ಹಿಂದೆಲ್ಲಾ ನಾಲ್ಕು ಮಹಡಿಗಳನ್ನೂ ಸರಾಗವಾಗಿ ಏರುತ್ತಿದ್ದ ಆಕೆ ಈಗ ಮೊದಲ ಮಹಡಿ ಏರುವಷ್ಟರಲ್ಲಿಯೇ ಏದುಸಿರು ಬಿಡುವಂತಾಗುತ್ತದೆ. ಈ ಪರಿಯ ಉಸಿರು ಕಟ್ಟುವಿಕೆಗೆ ಕಟ್ಟುಸಿರು ಎಂದು ಕರೆಯುತ್ತಾರೆ (shortness of breath).

2015 ರಲ್ಲಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, 60 ರಿಂದ 70 ಶೇಖಡಾದಷ್ಟು ಗರ್ಭಿಣಿಯರಿಗೆ ಕಟ್ಟುಸಿರಿನ ತೊಂದರೆ ಎದುರಾಗಿದೆ. ಇದು ಸ್ವಾಭಾವಿಕವೂ ಹೌದು. ಏಕೆಂದರೆ ಗರ್ಭದಲ್ಲಿನ ಮಗು ಬೆಳೆಯುತ್ತಾ ಹೋದಂತೆ ಹೊಟ್ಟೆಯನ್ನು ಮುಂದೆ ಬರಿಸುವುದಷ್ಟೇ ಅಲ್ಲ, ಜೀರ್ಣಾಂಗಗಳನ್ನೂ ಕೊಂಚ ಹಿಂದಕ್ಕೆ ತಳ್ಳುತ್ತದೆ ಹಾಗೂ ವಪೆಯ ಮೇಲೆ ಮೇಲ್ಮುಖ ಒತ್ತಡ ನೀಡುವ ಕಾರಣ ಶ್ವಾಸಕೋಶಗಳು ಪೂರ್ಣವಾಗಿ ಹಿಗ್ಗಲು ಕಷ್ಟವಾಗುತ್ತದೆ.

ಇದು ಮೊದಲ ಕಾರಣವಾದರೆ ಬೆಳೆಯುತ್ತಿರುವ ಮಗುವಿನ ಅವಶ್ಯಕತೆಗಳನ್ನು ಪೂರೈಸಲು ಆಕೆಯ ದೇಹದಿಂದಲೇ ಪೋಷಕಾಂಶಗಳ ಸರಬರಾಗು ಆಗಬೇಕಾಗಿರುವುದರಿಂದ ಇತರ ಕಾರ್ಯಗಳಿಗೆ ದೇಹವೇ ಶಕ್ತಿಯನ್ನು ಒದಗಿಸುವ ಗತಿಯನ್ನು ಕೊಂಚ ಕಡಿಮೆ ಮಾಡಿ ಬಿಡುತ್ತದೆ. ಇವೆಲ್ಲವೂ ಕಟ್ಟುಸಿರು ಎದುರಾಗಲು ಒಟ್ಟಾರೆಯಾಗಿ ಕಾರಣವಾಗಿವೆ. ಆದರೆ ಇದು ಗಂಭೀರವಾದ ತೊಂದರೆಯೇನೂ ಅಲ್ಲ.

ಒಂದು ವೇಳೆ ಇದು ತೊಂದರೆ ಎನಿಸಿದರೆ ವೈದ್ಯರನ್ನು ಯಾವಾಗ ಕಾಣಬೇಕು ಎಂಬುದು ಮುಖ್ಯವಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗಳನ್ನು ನೋಡೋಣ:

ಕಟ್ಟುಸಿರು ಎದುರಾಗಲು ಕಾರಣಗಳು:

ಕಟ್ಟುಸಿರು ಎದುರಾಗಲು ಕಾರಣಗಳು:

ಗರ್ಭಾವಸ್ಥೆಯಲ್ಲಿ ಕಟ್ಟುಸಿರು ಸಾಮಾನ್ಯವೇ ಆದರೂ ಇದಕ್ಕೆ ಒಂದೇ ಖಚಿತ ಕಾರಣವನ್ನು ನೀಡಲು ವೈದ್ಯರಿಗೂ ಸಾಧ್ಯವಾಗುವುದಿಲ್ಲ. ಇದಕ್ಕೆ ಹಲವಾರು ಅಂಶಗಳು ಜಂಟಿಯಾಗಿ ಕಾರಣವಾಗುತ್ತವೆ.

ಗರ್ಭಕೋಶದ ಗಾತ್ರದ ಹಿಗ್ಗುವಿಕೆಯಿಂದ ಶ್ವಾಸಕೋಶ ಹಿಗ್ಗಲು ಆಗುವ ಅಡ್ಡಿ, ಗರ್ಭಕೋಶದ ಅಗತ್ಯತೆಗಳನ್ನು ಪೂರೈಸಲು ಹೃದಯ ಮತ್ತು ಇತರ ಪ್ರಮುಖ ಅಂಗಗಳ ಮೇಲೆ ಉಂಟಾಗಿರುವ ಬೇಡಿಕೆಗಳು ಇವುಗಳಲ್ಲಿ ಪ್ರಮುಖವಾಗಿವೆ.

ಕೆಲವು ಗರ್ಭಿಣಿಯರಿಗೆ ಮೊದಲ ತ್ರೈಮಾಸಿಕದಲ್ಲಿಯೇ ಇದು ಗಮನಕ್ಕೆ ಬಂದರೆ ಉಳಿದವರಿಗೆ ಎರಡನೆಯ ಮತ್ತು ಮೂರನೆಯ ತ್ರೈಮಾಸಿಕದಲ್ಲಿ ಅನುಭವಕ್ಕೆ ಬರಬಹುದು.

ಮೊದಲ ತ್ರೈಮಾಸಿಕ:

ಮೊದಲ ತ್ರೈಮಾಸಿಕ:

ಈ ಹಂತದಲ್ಲಿ ಭ್ರೂಣ ಹೆಚ್ಚಿನ ಬೆಳವಣಿಗೆಯನ್ನು ಪಡೆಯದಿದ್ದರೂ ಮೂಲ ಕಾರ್ಯಗಳು ಜರುಗುತ್ತಿರುತ್ತವೆ. ಹಾಗಾಗಿ ಹೊಟ್ಟೆಯೂ ಅತಿ ಎನ್ನುವಷ್ಟು ದೊಡ್ಡದಾಗಿರದೇ ಉಸಿರಾಟ ಮೊದಲಾದ ಎಲ್ಲಾ ಕಾರ್ಯಗಳು ಸಾಮಾನ್ಯ ಗತಿಯಲ್ಲಿಯೇ ನಡೆಯುತ್ತಿರುತ್ತವೆ.

ಆದರೆ ಗರ್ಭಕೋಶ ಮತ್ತು ಗರ್ಭಕೋಶದ ಒಳಗಿನ ಭ್ರೂಣವನ್ನು ಆವರಿಸಿರುವ ಆಮ್ನಿಯಾಟಿಕ್ ದ್ರವ ಹೊಟ್ಟೆಯ ಗಾತ್ರವನ್ನು ಕೊಂಚವೇ ಹೆಚ್ಚಿಸುವ ಮೂಲಕ ಜೀರ್ಣಾಂಗಗಳನ್ನು ಕೊಂಚವೇ ಮೇಲಕ್ಕೆತ್ತುತ್ತವೆ. ಪರಿಣಾಮವಾಗಿ ವಪೆ, ಅಂದರೆ ಹೊಟ್ಟೆ ಮತ್ತು ಎದೆಯನ್ನು ಪ್ರತ್ಯೇಕಿಸುವ ಕೊಡೆಯಂತಹ ಪದರ ಸುಮಾರು ನಾಲ್ಕು ಸೆಂಟಿ ಮೀಟರ್ ನಷ್ಟು ಮೇಲಕ್ಕೇರುತ್ತದೆ. ಶ್ವಾಸಕೋಶ ಪೂರ್ಣವಾಗಿ ತುಂಬಿದಾಗ ವಪೆ ಆದಷ್ಟೂ ಕೆಳಕ್ಕೆ ಬರುತ್ತದೆ.

ಈಗ ವಪೆಯೇ ಕೊಂಚ ಮೇಲೆ ಬಂದಿರುವ ಕಾರಣ ಪೂರ್ಣ ಶ್ವಾಸಕೋಶ ತುಂಬಿಕೊಳ್ಳಲು ಕೊಂಚ ಕಷ್ಟಪಡಬೇಕಾಗುತ್ತದೆ. ಆದರೆ ಇದು ಸಾಮಾನ್ಯ ಉಸಿರಾಟದಲ್ಲಿ ಗಮನಕ್ಕೇ ಬರುವುದಿಲ್ಲ. ಆದರೆ ದೀರ್ಘ ಉಸಿರನ್ನೆಳೆದುಕೊಳ್ಳುವ ಸಂದರ್ಭ ಬಂದಾಗಲೇ ಇದರ ಅರಿವಾಗುತ್ತದೆ. ಪ್ರಥಮ ತ್ರೈಮಾಸಿಕದಲ್ಲಿ ರಸದೂತಗಳ ಪ್ರಭಾವ ಎಲ್ಲಕ್ಕಿಂತಲೂ ಹೆಚ್ಚಾಗಿರುವ ಕಾರಣ (ರಸದೂತಗಳ ಪರಿಣಾಮವನ್ನು ಆಧರಿಸಿಯೇ ಈ ಅವಧಿಯನ್ನು ತ್ರೈಮಾಸಿಕಗಳಾಗಿ ವಿಂಗಡಿಸಲಾಗಿದೆ) ಗರ್ಭಿಣಿ ಬೇಗಬೇಗನೇ ಉಸಿರಾಡುತ್ತಿರುತ್ತಾಳೆ. ವಿಶೇಷವಾಗಿ ಪ್ರೊಜೆಸ್ಟರಾನ್ ರಸದೂತ ಉಸಿರಾಟವನ್ನು ದೀರ್ಘಗೊಳಿಸುತ್ತದೆ.

ಇದು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ರಸದೂತವಾಗಿದೆ ಹಾಗೂ ಶ್ವಾಸಕ್ರಿಯೆಯನ್ನು ಪ್ರಚೋದಿಸುವ ರಸದೂತವೂ ಆಗಿದೆ. ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ

ಎರಡನೆಯ ತ್ರೈಮಾಸಿಕ

ಎರಡನೆಯ ತ್ರೈಮಾಸಿಕ

ಈ ಅವಧಿಯಲ್ಲಿ ಗರ್ಭಿಣಿಯರು ಉಸಿರಾಟದಲ್ಲಿ ಗಮನಾರ್ಹ ಬದಲಾವಣೆಯನ್ನು ಅನುಭವಿಸುತ್ತಾರೆ. ಈ ಅವಧಿಯಲ್ಲಿ ಹೊಟ್ಟೆಯ ಗಾತ್ರ ಹೆಚ್ಚು ಸ್ಪಷ್ಟವಾಗಿ ಹೊರಕ್ಕೆ ಉಬ್ಬಿರುವುದು ಕಾಣುತ್ತದೆ ಹಾಗೂ ಇದೇ ಕಟ್ಟುಸಿರಿಗೆ ಬಹುತೇಕ ಕಾರಣವಾಗಿದೆ. ಅಲ್ಲದೇ ಹೃದಯದ ಕ್ಷಮತೆಯಲ್ಲಿ ಆಗುವ ಬದಲಾವಣೆಯೂ ಕಾರಣವಾಗಬಹುದು.

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರ ದೇಹದಲ್ಲಿ ರಕ್ತಪರಿಚಲನೆ ಹೆಚ್ಚುತ್ತದೆ, ಹೆಚ್ಚಲೇಬೇಕು. ಅಂದರೆ ಹೃದಯಕ್ಕೆ ಹೆಚ್ಚಿನ ಹೊರೆ ಅನಿವಾರ್ಯ! ವಿಶೇಷವಾಗಿ ಮಾಸು ಅಥವಾ ಪ್ಲಾಸೆಂಟಾ ಅತಿ ಹೆಚ್ಚಿನ ರಕ್ತ ಬೇಡುತ್ತದೆ.

ಹೃದಯದ ಕಾರ್ಯ ಹೆಚ್ಚಿದಾಗ ಇದಕ್ಕೆ ಆಮ್ಲಜನಕ ಪೂರೈಸುವ ಶ್ವಾಸಕೋಶಗಳಿಗೂ ಕಾರ್ಯ ಅನಿವಾರ್ಯವಾಗಿ ಹೆಚ್ಚುತ್ತದೆ. ಅಂದರೆ ಸುಮ್ಮನಿದ್ದರೂ ಗರ್ಭಿಣಿಯರಿಗೆ ಏದುಸಿರು ಬಿಡುತ್ತಿರಬೇಕಾಗುತ್ತದೆ. ಈ ಹೊತ್ತಿನಲ್ಲಿ ಯಾವುದೇ ಶ್ರಮದಾಯಕ ಕೆಲಸ ಮಾಡಿದರೆ ಕಟ್ಟುಸಿರು ತಕ್ಷಣವೇ ಕಾಣಬರುತ್ತದೆ.

ಮೂರನೆಯ ತ್ರೈಮಾಸಿಕ:

ಮೂರನೆಯ ತ್ರೈಮಾಸಿಕ:

ಈ ಹಂತದಲ್ಲಿ ಹೊಟ್ಟೆ ಅಪಾರವಾಗಿ ಉಬ್ಬಿದ್ದು ಗರ್ಭಿಣಿಯರು ಹಿಂದಕ್ಕೆ ವಾಲದೇ ನಡೆಯಲು ಸಾಧ್ಯವಾಗುವುದಿಲ್ಲ. ವಪೆ ಇನ್ನಷ್ಟು ಮೇಲೆ ಸರಿದಿದ್ದು ಉಸಿರು ತೆಗೆದುಕೊಳ್ಳುವುದು ಹಿಂದಿನ ದಿನಗಳಷ್ಟು ಸರಾಗವಾಗಿ ಆಗುವುದಿಲ್ಲ.

ಅಲ್ಲದೇ ಈಗ ಮಗು ಹೊಟ್ಟೆಯೊಳಗೇ ಚಲನೆ ತೋರಿಸುವ ಕಾರಣ ಮತ್ತು ಮಗುವಿನ ತಲೆ ಸೊಂಟದ ಭಾಗದತ್ತ ಇನ್ನಷ್ಟು ಒತ್ತುವ ಮೂಲಕ ವಪೆ ಇನ್ನಷ್ಟು ಮೇಲಕ್ಕೆ ಒತ್ತಡ ನೀಡುತ್ತದೆ ಇದರಿಂದ ಉಸಿರು ತೆಗೆದುಕೊಳ್ಳುವುದು ಕಷ್ಟಕರವಾಗುತ್ತದೆ. National Women's Health Resource Center ಸಂಸ್ಥೆಯ ಪ್ರಕಾರ ಈ ಬಗೆಯ ಕಟ್ಟುಸಿರು ಮೂವತ್ತೊಂದರಿಂದ ಮೂವತ್ತ ನಾಲ್ಕನೇ ವಾರದಲ್ಲಿ ಕಾಣಿಸಿಕೊಳ್ಳುತ್ತದೆ.

ಇತರ ಕಾರಣಗಳು:

ಇತರ ಕಾರಣಗಳು:

ಒಂದು ವೇಳೆ ಗರ್ಭಿಣಿ ಅತಿ ಎನಿಸುವಷ್ಟು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದರೆ ತಕ್ಷಣ ವೈದ್ಯರಲ್ಲಿ ಪರೀಕ್ಷೆಗೆ ಒಳಪಡಬೇಕು. ಗರ್ಭಾವಸ್ಥೆಯಿಂದ ಇದು ಎದುರಾಗುವುದೇನೋ ಸರಿ, ಆದರೆ ಇದರೊಂದಿಗೆ ಇತರ ಆರೋಗ್ಯ ಸಂಬಂಧಿ ಕಾರಣಗಳೂ ಇರಬಹುದು. ಇವುಗಳಲ್ಲಿ ಪ್ರಮುಖವಾದವು ಎಂದರೆ:

ಅಸ್ತಮಾ: ಒಂದು ವೇಳೆ ಗರ್ಭಿಣಿ ಅಸ್ತಮಾ ರೋಗಿಯಾಗಿದ್ದರೆ ಗರ್ಭಾವಸ್ಥೆಯಲ್ಲಿ ಅಸ್ತಮಾ ಇನ್ನಷ್ಟು ಉಲ್ಬಣಗೊಳ್ಳಬಹುದು. ಹಾಗಾಗಿ ಈ ತೊಂದರೆ ಇರುವ ಗರ್ಭಿಣಿಯರು ತಪ್ಪದೇ ವೈದ್ಯರ ಸಲಹೆಯನ್ನು ಮೊದಲೇ ಪಡೆಯಬೇಕು ಹಾಗೂ ವೈದ್ಯರು ಸೂಚಿಸುವ ಇನ್ ಹೇಲರ್ ಉಪಕರಣ ಮತ್ತು ಔಷಧಿಗಳನ್ನು ಸದಾ ತಮಗೆ ತಕ್ಷಣ ಕೈಗೆ ಸಿಗುವಂತೆ ಇರಿಸಿಕೊಳ್ಳಬೇಕು.

ಪೆರಿಪಾರ್ಟಂ ಕಾರ್ಡಿಯೋಮೈಪಥಿ (Peripartum cardiomyopathy): ಇದೊಂದು ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರದ ಕ್ಷಣಗಳಲ್ಲಿ ಕಾಣಬರುವ ಹೃದಯದ ಆಘಾತವಾಗಿದೆ. ಈ ತೊಂದರೆ ಇರುವ ಗರ್ಭಿಣಿಯರಿಗೆ ಪಾದದ ಮಣಿಕಟ್ಟಿನ ಭಾಗದಲ್ಲಿ ಊದಿಕೊಳ್ಳುವುದು, ರಕ್ತದೊತ್ತಡ ಕುಸಿಯುವುದು, ಸುಸ್ತು ಮತ್ತು ಹೃದಯ ಸ್ತಂಭನಗಳ ಅನುಭವವಾಗುವುದು ಎದುರಾಗುತ್ತದೆ. ಸಾಮಾನ್ಯವಾಗಿ ಗರ್ಭಿಣಿಯರು ಇದೆಲ್ಲಾ ಗರ್ಭಾವಸ್ಥೆಯ ಪರಿಣಾಮಗಳು ಎಂದೇ ತಿಳಿದು ಮೌನವಾಗಿ ಅನುಭವಿಸುತ್ತಿರುತ್ತಾರೆ. ಆದರೆ ಈ ಸ್ಥಿತಿ ಗರ್ಭಿಣಿಯ ಆರೋಗ್ಯಕ್ಕೆ ಮಾರಕವಾಗಿದ್ದು ಸೂಕ್ತ ಚಿಕಿತ್ಸೆಯ ಅಗತ್ಯವಿದೆ.

ಪಲ್ಮುನರಿ ಎಂಬೋಲಿಸಂ (Pulmonary embolism): ಯಾವಾಗ ಶ್ವಾಸಕೋಶದ ನರದಲ್ಲಿ ಹೆಪ್ಪುಗಟ್ಟಿರುವ ರಕ್ತದ ಬಿಂದು ತಲುಪಿತೋ ಆಗ ಆ ನರವನ್ನು ಹೊಂದಿಕೊಂಡಿರುವ ಅಷ್ಟೂ ನರತಂತುಗಳಿಗೆ ಕಾರ್ಯ ನಿರ್ವಹಿಸಲು ಸಾಧ್ಯವಾಗದೇ ಸ್ಥಗಿತಗೊಳ್ಳುತ್ತವೆ. ಇದು ಸತತ ಕೆಮ್ಮು ಮತ್ತು ತೀವ್ರ ಉಸಿರಾಟಕ್ಕೆ ಕಾರಣವಾಗುತ್ತದೆ. ಏಕೆಂದರೆ ಈ ಭಾಗ ನಿಷ್ಟೇಷ್ಟಿತವಾಗಿರುವ ಕಾರಣ ಇವು ಮಾಡಬೇಕಾಗಿದ್ದ ಕಾರ್ಯವನ್ನು ಉಳಿದ ಭಾಗಗಳು ನಿರ್ವಹಿಸಬೇಕಾಗಿ ಬರುತ್ತದೆ. ಪರಿಣಾಮವಾಗಿ ಎದೆ ನೋವು ಮತ್ತು ಕಟ್ಟುಸಿರು ಎದುರಾಗುತ್ತದೆ.

ಈ ಸ್ಥಿತಿಯನ್ನು ಎದುರಿಸುವುದು ಹೇಗೆ?

ಈ ಸ್ಥಿತಿಯನ್ನು ಎದುರಿಸುವುದು ಹೇಗೆ?

ಯಾವ ಕೆಲಸ ಮಾಡಲು ಹೋದರೂ ಕಟ್ಟುಸಿರು ಎದುರಾದರೆ ಗರ್ಭಿಣಿಯರಿಗೆ ಕೆಲಸ ಮಾಡುವ ಉತ್ಸಾಹವೇ ಉಡುಗುತ್ತದೆ ಹಾಗೂ ತಮ್ಮ ಅಸಹಾಯಕತೆಯನ್ನು ಪರಿಗಣಿಸಿ ಮಾನಸಿಕವಾಗಿ ಕುಗ್ಗುತ್ತಾರೆ.

ಆದರೆ ಗರ್ಭಿಣಿಯರು ಧೃತಿಗೆಡಬೇಕಾಗಿಲ್ಲ. ಈ ಸ್ಥಿತಿಯನ್ನುಎದುರಿಸಲು ಕೆಲವು ಕ್ರಮಗಳಿವೆ

ಇವುಗಳಲ್ಲಿ ಪ್ರಮುಖವಾದವು ಎಂದರೆ:

ಇವುಗಳಲ್ಲಿ ಪ್ರಮುಖವಾದವು ಎಂದರೆ:

* ಸೂಕ್ತ ಭಂಗಿಯನ್ನು ಅನುಸರಿಸುವುದು. ಅಂದರೆ ಮಗುವಿನ ಬೆಳವಣಿಗೆಯನ್ನು ಅನುಸರಿಸಿ ಗರ್ಭಕೋಶ ವಪೆಯಿಂದ ಆದಷ್ಟೂ ದೂರ ಇರುವಂತೆ ತಮ್ಮ ಶರೀರರದ ಭಂಗಿಗಳನ್ನು ಬದಲಿಸಿಕೊಳ್ಳಬೇಕು. ಕುಳಿತುಕೊಳ್ಳುವಾಗ, ಮಲಗುವಾಗ ವೈದ್ಯರು ಸೂಚಿಸುವ ಈ ಭಂಗಿಗಳನ್ನೇ ಅನುಸರಿಸಬೇಕು.

* ಗರ್ಭಿಣಿಯರ ಬೆಲ್ಟ್ ಧರಿಸುವುದು : ವೈದ್ಯರು ಅಗತ್ಯ ಬಿದ್ದರೆ ಈ ಬಗೆಯ ಸೊಂಟದ ಪಟ್ಟಿಯನ್ನು ಕಟ್ಟಿಕೊಳ್ಳಲು ತಿಳಿಸಬಹುದು. ಇವು ಇಂದು ಔಷಧಿ ಅಂಗಡಿಗಳಲ್ಲೂ ಆನ್ಲೈನ್ ಮೂಲಕವೂ ಲಭ್ಯವಿವೆ.

* ಮಲಗುವಾಗ ಮೇಲ್ಬೆನ್ನ ಕೆಳಗೆ ದಿಂಬುಗಳನ್ನಿರಿಸಿಕೊಳ್ಳಬೇಕು. ಈ ಮೂಲಕ ಗುರುತ್ವ ಬಲದಿಂದ ಗರ್ಭಕೋಶ ಆದಷ್ಟೂ ಕೆಳಕ್ಕಿರುತ್ತದೆ ಹಾಗೂ ಶ್ವಾಸಕೋಶಗಳಿಗೆ ಹಿಗ್ಗಲು ಸ್ಥಳಾವಕಾಶ ದೊರಕುತ್ತದೆ. ಎಡ ಮಗ್ಗುಲಿಗೆ ಮಲಗುವ ಮೂಲಕವೂ ಹೆಚ್ಚು ಸ್ಥಳಾವಕಾಶ ನೀಡಬಹುದು. ಈ ಮೂಲಕ ಹೃದಯದ ಶುದ್ದರಕ್ತವನ್ನು ವಿತರಿಸುವ ಅಯೋರ್ಟಾ ರಕ್ತನಾಳಕ್ಕೂ ಹೆಚ್ಚಿನ ಒತ್ತಡ ಬೀಡಲೇ ಪೂರ್ಣಪ್ರಮಾಣದ ರಕ್ತ ಸರಬರಾಜು ಮಾಡಲು ಸಾಧ್ಯವಾಗುತ್ತದೆ.

* ಉಸಿರಾಟದ ಕ್ರಮಗಳನ್ನು ಅಭ್ಯಾಸ ಮಾಡುವುದು: Lamaze breathing, ಪ್ರಾಣಾಯಾಮ ಮೊದಲಾದ ಉಸಿರಾಟದ ಕ್ರಮಗಳಿಂದಲೂ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಹೆಚ್ಚಿನ ಆಮ್ಲಜನಕ ಪಡೆಯಲು ಸಾಧ್ಯವಾಗುತ್ತದೆ.

* ದೇಹ ಹೇಳಿದಂತೆ ಕೇಳುವುದು: ಒಂದು ವೇಳೆ ನಿತ್ಯದ ಕೆಲಸದಲ್ಲಿ ಸುಸ್ತಾಗಿದೆ ಎನಿಸಿದರೆ ತಕ್ಷಣ ಕೆಲಸ ನಿಲ್ಲಿಸಿ ಬಿಡಬೇಕು. ನಿತ್ಯದ ಕೆಲಸಗಳಲ್ಲಿ ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಸಾಧ್ಯವಾದರೆ ನಿತ್ಯದ ಕೆಲಸಗಳನ್ನು ನಿರ್ವಹಿಸಲು ಸಹಾಯಕಿ ಅಥವಾ ಆಪ್ತರನ್ನು ಜೊತೆಯಲ್ಲಿರಿಸಿ ತಾನು ಆದಷ್ಟೂ ವಿಶ್ರಾಂತಿ ಪಡೆಯಬೇಕು.

* ಒಂದು ವೇಳೆ ಇತರ ಆರೋಗ್ಯ ಸಂಬಂಧಿ ತೊಂದರೆ ಇದಕ್ಕೆ ಕಾರಣವಾಗಿದ್ದರೆ ವೈದ್ಯರು ಸೂಚಿಸಿದ ಔಷಧಿಗಳು ಮತ್ತು ಕ್ರಮಗಳನ್ನು ಸರಿಯಾಗಿ ಅನುಸರಿಸಬೇಕು

ವೈದ್ಯರನ್ನು ಯಾವಾಗ ಕಾಣಬೇಕು?

ವೈದ್ಯರನ್ನು ಯಾವಾಗ ಕಾಣಬೇಕು?

ಗರ್ಭಾವಸ್ಥೆಯ ಎಲ್ಲಾ ಹಂತಗಳಲ್ಲಿಯೂ ಕೊಂಚ ಪ್ರಮಾಣದ ಕಟ್ಟುಸಿರು ಎದುರಾಗದೇ ಇರುವುದಿಲ್ಲ. ಆದರೆ ಎಲ್ಲ ಸಂದರ್ಭಗಳು ವೈದ್ಯರನ್ನು ಕಾಣಬೇಕಾದಷ್ಟು ಗಂಭೀರವಾಗಿರುವುದಿಲ್ಲ. ಆದರೆ ಕೆಲವು ಸಂದರ್ಭಗಳನ್ನು ಮಾತ್ರ ಕಡೆಗಣಿಸದೇ ವೈದ್ಯರನ್ನು ಕಾಣಬೇಕು. ಇವುಗಳೆಂದರೆ:

* ನೀಲಿಗಟ್ಟಿದ ತುಟಿಗಳು, ಬೆರಳುಗಳು ಮತ್ತು ಕಾಲ್ಬೆರಳುಗಳು

* ಹೃದಯ ಸ್ತಂಭನ ಅಥವಾ ಅತಿ ಎನಿಸುವಷ್ಟು ಹೆಚ್ಚಿನ ಹೃದಯದ ಬಡಿತ

* ಉಸಿರಾಡುವಾಗ ನೋವಿನ ಅನುಭವ

* ಕಟ್ಟುಸಿರು ನಿಧಾನವಾಗಿ ಉಲ್ಬಣಿಸುತ್ತಿರುವ ಅನುಭವ

* ಉಸಿರಾಡುವಾಗ ಸೀಟಿ ಹೊಡೆದಂತಹ ಸದ್ದು ಬರುವುದು

ಮೊದಲ ಗರ್ಭಾವಸ್ಥೆಯ ಅನುಭವ ಆಗಿದ್ದರೆ ಈ ಕಟ್ಟುಸಿರು ಹೊಸ ಅನುಭವವಾಗಿದ್ದು ಕೊಂಚ ಗಾಬರಿ ಎನಿಸಬಹುದು. ಆದರೂ ಇದನ್ನು ಕಡೆಗಣಿಸದೇ ಈ ಬಗ್ಗೆ ವೈದ್ಯರಲ್ಲಿ ಸಲಹೆ ಪಡೆಯಬೇಕು. ವೈದ್ಯರು ಕೆಲವು ಪರೀಕ್ಷೆಗಳನ್ನು ಸೂಚಿಸಬಹುದು. ಉದಹಾರಣೆಗೆ ಕಾಲಿನ ಅಲ್ಟ್ರಾ ಸೌಂಡ್. ಈ ಮೂಲಕ ಹೆಪ್ಪುಗಟ್ಟಿದ ರಕ್ತವೇನಾದರೂ ಈ ತೊಂದರೆಗೆ ಕಾರಣ ಇರಬಹುದು ಎಂಬ ಸಾಧ್ಯತೆಯನ್ನು ಅವರು ಪರಿಗಣಿಸುತ್ತಾರೆ. ಉಳಿದಂತೆ ಕಟ್ಟುಸಿರು ಎದುರಾದರೂ ಇದು ಸಾಮಾನ್ಯ ಎಂದು ತಿಳಿದು ನಿರಾಳವಾಗಿ ಇರಬಹುದು.

English summary

Causes Of Shortness Of Breath During Pregnancy

Here we are discussing about causes of shortness of breath during pregnancy. Read more.
Story first published: Thursday, February 27, 2020, 13:38 [IST]
X