For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಲ್ಲಿ ಕಂಡುಬರುವ ಮುಖ್ಯವಾದ ಹತ್ತು ಲಕ್ಷಣಗಳು

By Pooja Bhat
|

ತಾಯಿ ಎಂಬ ಪದಕ್ಕೆ ಬಹಳ ವಿಶಾಲವಾದ ಅರ್ಥವಿದೆ. ನಮ್ಮನ್ನೆಲ್ಲ ಹೊತ್ತ ಭೂಮಿಯೂ ತಾಯಿಯೆಂದೇ ಪರಗಣಿಸಲ್ಪಟ್ಟಿದ್ದಾಳೆ. ಹೇಗೆ ಭೂಮಿತಾಯಿ ನಮ್ಮನ್ನು ಹೊತ್ತು ಸಲಹುತ್ತಾಳೋ ಹಾಗೆಯೇ ಹೆಣ್ಣು ನವಮಾಸಗಳ ಕಾಲ ಮಗುವನ್ನು ಹೊತ್ತು-ಹೆತ್ತು ಸಲಹುತ್ತಾಳೆ. ಹೆಣ್ಣು ಎಷ್ಟೇ ಆಧುನಿಕವಾಗಿದ್ದರೂ ಅಥವಾ ಸಾಂಪ್ರದಾಯಿಕತೆಗೆ ಒಗ್ಗಿದವಳಾದರೂ ತಾಯಿಯಾಗುವ ಇಚ್ಛೆಯನ್ನು ಹೊಂದಿದವಳಾಗಿರುತ್ತಾಳೆ. ಒಂದು ವಿವಾಹಿತ ಹೆಣ್ಣು ತಾಯಿಯಾಗುವ ಅನುಭವದ ನಿರೀಕ್ಷೆಯಲ್ಲಿ ಸದಾ ಇರುತ್ತಾಳೆ.

ಆ ಅಪೂರ್ವವಾದ ಕ್ಷಣದ ಆಗಮನಕ್ಕಾಗಿ ತನಗೇ ಗೊತ್ತಿರದಂತೆ ತಾನು ಸಿದ್ಧಗೊಳ್ಳುತ್ತಾ ಕನಸು ಕಾಣುತ್ತಿರುತ್ತಾಳೆ. ತಾಯ್ತನ ಎಂಬುದು ಹೇಳಲು ಬಹಳ ಸುಲಭವೆನಿಸುವ ಅಂಶವಾದರೂ ತನ್ನೊಳಗೆ ಇನ್ನೊಂದು ಜೀವವನ್ನು ಹೊತ್ತು ಹೆರುವ ಜವಾಬ್ದಾರಿಯುತವಾದ ಪಾತ್ರವನ್ನು ನಿರ್ವಹಿಸುವಿಕೆ ಜಗತ್ತಿನ ಎಲ್ಲಾ ಸಾಧನೆಗಳನ್ನೂ ಮೀರಿಸುವಂತದ್ದು. ಇಂತಹ ತಾಯಿಯಾಗುವ ಅದೃಷ್ಟ ಎಲ್ಲರಿಗೂ ಒದಗಿ ಇರುವುದಿಲ್ಲ.

ನಮ್ಮಲ್ಲಿ ಹಲವು ಮಹಿಳೆಯರಿಗೆ ತಾಯಿಯಾಗುವ ಕನಸನ್ನು ಸಾಕಾರಗೊಳಿಸಿಕೊಳ್ಳಲು ಅಗತ್ಯವಿರುವ ಅವಯವಗಳಿಂದ ವಂಚಿತರಾಗಿರುತ್ತಾರೆ ಅಥವ ಅಂಗಗಳು ಇನ್ನೊಂದು ಜೀವವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿರದ ತೊಂದರೆಗೆ ಸಿಲುಕುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಸಾಮಾಜಿಕವಾದ ಸಮಸ್ಯೆಗಳಿಂದಾಗಿ ಮತ್ತು ವೈಯಕ್ತಿಕ ಸಮಸ್ಯೆಗಳಿಂದಾಗಿ ಮಹಿಳೆಯರು ತಾಯ್ತನದ ಸುಖದಿಂದ ವಂಚಿತರಾಗುತ್ತಾರೆ.

ಕಾರಣಗಳೇನೇ ಇದ್ದರೂ ಕೂಡ ತಾಯಿಯಾಗುವ ಅನುಭವವನ್ನು ಪಡೆಯುವ ಮಹಿಳೆಯರು ಒಂದರ್ಥದಲ್ಲಿ ತಮ್ಮನ್ನು ತಾವು ಅದೃಷ್ಟವಂತರೆಂದೇ ತಿಳಿದುಕೊಳ್ಳುವುದು ಸಹಜವಾದ ಸಂಗತಿಯಾಗಿದೆ. ಅಪರೂಪವೆಂಬಂತೆ ಕೆಲವು ಸಂದರ್ಭಗಳಲ್ಲಿ ಮಹಿಳೆಯರಿಗೆ ತಾವು ಗರ್ಭಿಣಿಯೆಂಬುದರ ಅರಿವು ಕೆಲವು ವಾರಗಳವರೆಗೂ ಇರುವುದಿಲ್ಲ. ಇದಕ್ಕೆ ಗರ್ಭಿಣಿಯರಲ್ಲಿ ಕಾಣಬಹುದಾದ ಸಾಧಾರಣ ಲಕ್ಷಣಗಳು ತಿಂಗಳಾಗುವ ವರೆಗೂ ಸಾಮಾನ್ಯವಾಗಿ ಕಾಣದೇ ಇರುವಂತದ್ದು ಮುಖ್ಯ ಕಾರಣವೆನಿಸುತ್ತದೆ.

ಇಂತಹ ಸಂದರ್ಭಗಳಲ್ಲಿ ನಮ್ಮಿಂದ ತಿಳಿಯದೇ ಆಗುವ ಕೆಲವು ತಪ್ಪುಗಳು ಬರಿಸಲಾಗದ ನಷ್ಟವನ್ನು ಉಂಟುಮಾಡಬಲ್ಲದು. ಆದ್ದರಿಂದ ಗರ್ಭಿಣಿಯಾಗುವ ನಿರೀಕ್ಷೆಯಲ್ಲಿರುವವರು ಚಿಕ್ಕ್ ಚಿಕ್ಕದೆನಿಸುವ ಲಕ್ಶಣಗಳನ್ನೂ ಕೂಡ ಕಡೆಗಣಿಸದೆ ಪ್ರತಿಯೊಂದೂ ಲಕ್ಷಣಗಳ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳುತ್ತಾ ಮುಂದುವರಿಯಬೇಕಾಗುತ್ತದೆ. ನಮಗೆ ತೋಚಿದ ಚಿಕಿತ್ಸೆಗಳನ್ನು ನಾವೇ ತೆಗೆದುಕೊಳ್ಳುತ್ತಾ ಕುಳಿತುಕೊಳ್ಳುವುದಕ್ಕಿಂತ ಸೂಕ್ತ ಸಮಯಕ್ಕೆ ವೈದ್ಯರನ್ನು ಅಥವ ಅನಭವಿಗಳಲ್ಲಿ ಸಮಾಲೋಚಿಸುವುದು ಅತ್ಯಂತ ಅವಶ್ಯಕವಾದುದು. ಗರ್ಭಿಣಿಯರಲ್ಲಿ ಕಂಡುಬರುವ ಕೆಲವು ಗುಣಲಕ್ಷಣಗಳ ಬಗೆಗಿನ ಅರಿವನ್ನು ಮೂಡಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಈ ಕೆಳಗಿನ 10 ಲಕ್ಷಣಗಳನ್ನು ನೆನಪಿನ್ನಲ್ಲಿಟ್ಟು ಕೊಳ್ಳುವುದರ ಜೊತೆಗೆ ಯಾವುದೇ ಕಾರಣಗಳಿಗೂ ಕಡೆಗಾಣಿಸದಿರುವುದು ಸೂಕ್ತವಾದುದು.

ಉಸಿರಾಟದ ಸಮಸ್ಯೆ

ಉಸಿರಾಟದ ಸಮಸ್ಯೆ

ಎಂದಿನಂತೆ ಮಾಡುವ ಕೆಲಸಗಳಲ್ಲಿಯೂ ಸುಸ್ತಾಗುವಿಕೆ ಮತ್ತು ಉಸಿರುಕಟ್ಟಿದಂತಾಗುವುದು ಗರ್ಭಿಣಿಯರಲ್ಲಿ ಕಂಡುಬರುವ ಮುಖ್ಯ ಲಕ್ಷಣಗಳಲ್ಲೊಂದಾಗಿದೆ. ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಆಮ್ಲಜನಕದ ಅವಶ್ಯಕತೆ ಹೆಚ್ಚುವುದರಿಂದ ಕಷ್ಟಕರವಾದ ಕೆಲಸಗಳನ್ನು ಮಾಡಿದಾಗ ಆಮ್ಲಜನಕದ ಕೊರತೆಯುಂಟಾಗುತ್ತದೆ. ಈ ಸಂದರ್ಭಗಳಲ್ಲಿ ತಾಯಿಯು ಉಸಿರಾಟದ ಸಮಸ್ಯೆಯನ್ನು ಅನುಭವಿಸುವುದು ಸಾಮನ್ಯವಾದುದು. ಅದರಲ್ಲಿಯೂ ಜೋರಾಗಿ ನಡೆದಾಗ, ಬುಸ್ಸುಗಳಲ್ಲಿ ಪ್ರಯಾಣಿಸಿದಾಗ ಅಥವ ಏರುಗಳನ್ನು ಹತ್ತುವಾಗ, ಮೆಟ್ಟಿಲುಗಳನ್ನು ಹತ್ತಿದಾಗ, ಇತರೆ ಅಯಾಸದಾಯಕವಾದ ಕೆಲಸಗಳನ್ನು ಮಾಡಿದಾದ ಈ ಲಕ್ಷಣವನ್ನು ಕಾಣಬಹುದಾಗಿದೆ.

ಸ್ತನಗಳ ಬಿಗಿಯಾಗುವಿಕೆ

ಸ್ತನಗಳ ಬಿಗಿಯಾಗುವಿಕೆ

ನಿಮ್ಮ ಒಳಉಡುಪು ಅಚಾನಕ್ಕಾಗಿ ಬಿಗಿಯಾಗುವುದು ನಿಮ್ಮ ಸ್ತನಗಳ ನರಗಳು ಹಿಗ್ಗುವುದರ ಮೂಲಕ ಗಾತ್ರವೂ ಕೂಡ ಹಿಗ್ಗಿದಂತಿರುತ್ತದೆ. ಒಳಡುಪನ್ನು ಧರಿಸುವುದು ಕಿರಿಕಿರಿಯೆನಿಸುವುದು ಸಾಮನ್ಯವಾಗಿ ಕಂಡುಬರುವಂತಹ ಲಕ್ಷಣವಾಗಿದೆ. ಇಂತಹ ಸಂದರ್ಭಗಳಲ್ಲಿ ಆರಾಮದಾಯಕವೆನಿಸುವ ಸ್ಫೋರ್ಟ್ಸ್ ಒಳಡುಪುಗಳನ್ನು ಧರಿಸಬಹುದು. ಅಷ್ಟೇ ಅಲ್ಲದೆ ಸ್ತನದ ತುದಿಗಳ ಗಾತ್ರ ಹಿಗುಗುವುದು ಮತ್ತು ಸ್ತನದ ನಿಪ್ಪಲ್ಲುಗಳ ಬಣ್ಣ ಬದಲಾಗುವುದೂ ಕೂಡ ನೀವು ಗರ್ಭಿಣಿ ಎನ್ನುವ ಲಕ್ಷಣವನ್ನು ತೋರಿಸುತ್ತದೆ. ಆದ್ದರಿಂದಲೇ ಬೇಸಿಗೆಯ ದಿನಗಳಲ್ಲಿ ಗರ್ಭಿಣಿಯರು ಬಿಗಿಯಾದ ಬಟ್ಟೆಗಳನ್ನು ಧರಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲವೆನ್ನಲಾಗುತ್ತದೆ.

ಕೆಲವು ಆಹಾರ ಪದಾರ್ಥಗಳ ಬಗೆಗೆ ಒಲವು ಮತ್ತು ಕೆಲವು ಆಹಾರ ಪದಾರ್ಥಗಳನ್ನು ದೂರವಿಡಿಸುವುದು

ಹಿಂದೆಂದೂ ತಿನ್ನಲು ಇಚ್ಚಿಸದ ಕೆಲವು ಆಹಾರಪದಾರ್ಥಗಳು ರುಚಿಕರವೆನಿಸುವುದು ಮತ್ತು ಅವುಗಳನ್ನು ತಿನ್ನುವ ಹಂಬಲ ಉಂಟಾಗುವುದು. ಹಾಗೆಯೇ ನಿಮಗೆ ರುಚಿಸುವ ಆಹಾರವೂ ರುಚಿಸದೇ ಇರುವುದು ಈ ಎರಡೂ ಬಗೆಯ ಲಕ್ಷಣಗಳೂ ಗರ್ಭಿಣಿಯರಲ್ಲಿ ಸಹಜವಾಗಿ ಕಂಡುಬರುವಂತಹುದು. ಒಂದು ಗಮನಿಸಬೇಕಾದ ಅಂಶವೆಂದರೆ ಆಹರಪದಾರ್ಥಗಳಲ್ಲಿ ನಿಯಮಿತ ಆಯ್ಕೆಗಳನ್ನು ಹೊಂದಿರುವುದು ಆರೋಗ್ಯಕರ ಸಂಗತಿಯಾಗಿರದು. ಎಲ್ಲಾ ಬಗೆಯ ಆಹರವನ್ನೂ ತಿನ್ನುವಂತಹ ಕ್ರಮವನ್ನು ರೂಢಿಸಿಕೊಂಡಿರುವುದು ಅವಶ್ಯಕವಾದುದಾಗಿದೆ. ಕೆಲವು ಮಹಿಳೆಯರಲ್ಲಿ ಗರ್ಭಿಣಿಯಾಗಿದ್ದಾಗ ಕೆಲವು ಆಹಾರ ಪದಾರ್ಥಗಳ ಪರಿಮಳವನ್ನು ತೆಗೆದುಕೊಂಡರೂ ವಾಂತಿ ಅಥವ ವಾಕರಿಕೆಯಾಗುವುದನ್ನು ಕಾಣಬಹುದಾಗಿದೆ.

ಆಯಾಸಗೊಳ್ಳುವುದು

ಆಯಾಸಗೊಳ್ಳುವುದು

ಈ ದಿನಗಳಲ್ಲಿ ಯಾವಾಗಲೂ ಆಯಾಸದಿಂದ ಕೂಡಿರುವುದೂ ಕೂಡ ಸರ್ವೇ ಸಾಮಯವಾದ ಲಕ್ಷಣಗಳಲ್ಲಿ ಒಂದಾಗಿರುತ್ತದೆ. ಆಯಾಸದ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಆದರೂ ಮೊದಲ ದಿನಗಳಲ್ಲಿ ಆಯಾಸ ಉಂಟಾಗುವುದು ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಂಡುಬರುತ್ತದೆ. ಸಾದಾ ದಿನಗಳಲ್ಲಿ ನಿರಾಸಾದಾಯಕವಾಗಿ ಮಾಡುತ್ತಿದ್ದ ಕೆಲಸಗಳು ಈ ದಿನಗಳಲ್ಲಿ ಹೆಚ್ಚಿನ ಆಯಾಸವನ್ನುಂಟುಮಾಡಬಲ್ಲದು. ಇಂತಹ ಸಂದರ್ಭಗಳಲ್ಲಿ ಮೊದಲಿಗೆ ಮನೆಯಲ್ಲಿಯೇ ಪರೀಕ್ಷೆಯನ್ನು ಮಾಡಿಕೊಳ್ಳುವುದರ ಮೂಲಕ ನೀವು ಗರ್ಭಿಣಿಯೇ ಅಥವ ಅಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾದುದಾಗಿದೆ. ಪ್ರೆಗ್ನೆನ್ಸಿ ಕಿಟ್ ಗಳ ಸಹಾಯದಿಂದ ಪ್ರಾಥಮಿಕ ಪರೀಕ್ಷೆಯನ್ನು ಸುಲಭದಲ್ಲಿ ಮಾಡಿಕೊಳ್ಳಬಹುದು.

ವಾಕರಿಕೆ

ವಾಕರಿಕೆ

ಅಜೀರ್ಣ ಅಥವ ಪಿತ್ತಗಳ ಸಮಸ್ಯೆಗಳಿಲ್ಲದ ವಾಕರಿಕೆಯೂ ಕೂಡ ಗರ್ಭಿಣಿಯರ ಲಕ್ಷಣಗಳಲ್ಲೊಂದಾಗಿರುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಬೆಳಗಿನ ವಾಕರಿಕೆಯೂ ಕೂಡ ಗರ್ಭಿಣಿಯರಲ್ಲಿ ಕಂಡುಬರಬಹುದಾದ ಲಕ್ಷಣವಾಗಿದೆ. ಈ ಬಗೆಯ ವಾಕರಿಕೆಗಳು ಕೆಲವು ಪರಿಮಳವನ್ನು ತೆಗೆದುಕೊಂಡಾಗ ಅಥವ ಕೆಲವು ಆಹಾರ ಪದಾರ್ಥಗಳನ್ನು ನೋಡಿದಾಗ, ತಿಂದಾಗ ಇನ್ನಿತರೆ ಸಂದರ್ಭಗಳಲ್ಲಿ ದಿನದ ಯಾವುದೇ ಸಮಯದಲ್ಲಿಯೂ ಕಾಣಿಸಿಕೊಳ್ಳುವ ಲಕ್ಷಣವಾಗಿದೆ. ಇದರ ತೀವ್ರತೆ ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರುತ್ತದೆ ಎನ್ನಬಹುದಾಗಿದೆ.

ಋತುಚಕ್ರದಲ್ಲಿನ ಬದಲಾವಣೆ

ಋತುಚಕ್ರದಲ್ಲಿನ ಬದಲಾವಣೆ

ನಿಮ್ಮ ಋತುಚಕ್ರದ ದಿನಗಳಲ್ಲಿನ ಬದಲಾವಣೆಯೂ ಕೂಡ ಗರ್ಭಿಣಿಯಾಗಿರುವ ಮುನ್ಸೂಚನೆಯನ್ನು ಕೊಡುವಂತಹ ಲಕ್ಷಣವೆನಿಸುತ್ತದೆ. ಕೆಲವು ದಿನಗಳು ವ್ಯತ್ಯಾಸವಾಗುವುದು ಸಾಮಾನ್ಯಸಂಗತಿಯಾದರೂ, ಗರ್ಭಿಣಿಯಾಗುವ ನಿರೀಕ್ಷೆಯಲ್ಲಿರುವ ಮಹಿಳೆಯರು ಋತುಚಕ್ರದ ದಿನಗಳ ತಪ್ಪುವಿಕೆ ಅಥವ ವ್ಯತ್ಯಾಸಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವುದು ಸಮಂಜಸವಲ್ಲ. ಏಕೆಂದರೆ ಋತುಚಕ್ರವಾಗದೇ ಇರುವಿಕೆಯೂ ಕೂಡ ಗರ್ಭ ಧರಿಸಿದ ಲಕ್ಷಣಗಳಲ್ಲಿ ಅತ್ಯಂತ ಮುಖ್ಯವಾದ ಮತ್ತು ಮಹತ್ವದ ಲಕ್ಷಣಗಳಲ್ಲಿ ಒಂದಾಗಿರುತ್ತದೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ವೈದ್ಯರನ್ನು ಭೇಟಿ ಆಗುವುದು ಅಥವ ಮೊದಲಿಗೆ ಮನೆಯಲ್ಲಿಯೇ ಪ್ರಾಥಮಿಕ ಪರೀಕ್ಷೆಯನ್ನು ಮಾಡಿಕೊಳ್ಳುವುದು ಸೂಕ್ತವಾದುದು.

ಮೊದಲಿಗಿಂತ ಹೆಚ್ಚಿನ ಬಾರಿ ಮೂತ್ರ ವಿಸರ್ಜನೆಯಾಗುವುದು

ಮೊದಲಿಗಿಂತ ಹೆಚ್ಚಿನ ಬಾರಿ ಮೂತ್ರ ವಿಸರ್ಜನೆಯಾಗುವುದು

ಗರ್ಭಿಣಿಯರ ಶರೀರವು ಮೊದಲಿಗಿಂತ ಹೆಚ್ಚಿನ ದ್ರವವನ್ನು ಉತ್ಪತ್ತಿ ಮಾಡುವ ಕಾರಣದಿಂದ ಮೂತ್ರಕೋಶ ತನ್ನ ಶುದ್ಧೀಕರಣ ಕಾರ್ಯವನ್ನು ಹೆಚ್ಚು ಸಮಯ ಮಾಡಬೇಕಾಗುತ್ತದೆ. ಆಗ ಮೊದಲಿಗಿಂತ ಹೆಚ್ಚಿನ ಬಾರಿ ಮೂತ್ರವಿಸರ್ಜಿಸುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ಮೊದಲಿಗೆ ಹೋಲಿಸಿದಾಗ ನಿಮ್ಮಲ್ಲಿ ಪದೇ ಪದೇ ಮೂತ್ರವಿಸರ್ಜನೆ ಹೆಚ್ಚಳವಾದಂತೆ ಕಂಡುಬಂದರೆ ಇದೂ ಕೂಡ ನೀವು ಗರ್ಭಿಣಿಯಾಗಿರುವ ಸಾಧ್ಯತೆಗೆ ಇಂಬು ಕೊಡುವಂತಹ ಲಕ್ಷಣಗಳಲ್ಲೊಂದಾಗಿರುತ್ತದೆ. ಹೆಚ್ಚು ನೀರನ್ನು ಸೇವಿಸುವುದರಿಂದಲೂ ಕೆಲವೊಮ್ಮೆ ಮೂತ್ರವಿಸರ್ಜನೆಯ ಪ್ರಮಾಣ ಹೆಚ್ಚುವುದಾಗಿರುವುದರಿಂದ ಕಾರಣವನ್ನು ಮೊದಲು ಸರಿಯಾಗಿ ತಿಳಿದುಕೊಂಡು ನಂತರ ಮುಂದಿನ ಕ್ರಮವನ್ನು ತೆಗೆದುಕೊಳ್ಳುವುದು ಸೂಕ್ತವಾದುದು.

ಸೆಳೆತಗಳು

ಸೆಳೆತಗಳು

ತಿಂಗಳಿಂದ ತಿಂಗಳು ಬದಲಾದಂತೆ ಗರ್ಭಿಣಿಯರಲ್ಲಿ ವಿವಿಧ ಬಗೆಯ ನೋವುಗಳು ಕಂಡುಬರುತ್ತದೆ. ಇವುಗಳು ಸಾಮಾನ್ಯ ನೋವುಗಳೇ ಆಗಿದ್ದರೂ ಕೆಲವೊಮ್ಮೆ ದೀರ್ಘಕಾಲದವರೆಗೂ ನೋವುಗಳು ಉಳಿಯುವಂತಹ ಉದಾಹರಣೆಗಳನ್ನು ಕಾಣಬಹುದಾಗಿದೆ. ಸಂತಾನೋತ್ಪತ್ತಿಯ ಅಂಗಾಂಗಗಳು ಮಗುವನ್ನು ನಿರ್ವಹಿಸುವ ತಯಾರಿಯಲ್ಲಿರುವುದರ ಫಲವಾಗಿ ಮತ್ತು ಅಂಗಾಂಗಗಳ ಈ ರೀತಿಯ ಬದಲಾವಣೆಗಳ ಪರಿಣಾಮವಾಗಿ ದೇಹದ ವಿವಿಧ ಭಾಗಗಳಲ್ಲಿ ನೋವುಗಳು ಕಾಣಿಸಿಕೊಳ್ಳುತ್ತವೆ. ಕೈ ನೋವು, ಕಾಲು ನೋವು, ಮೊಣಕೈ-ಮೊಣಕಾಲುಗಳಲ್ಲಿ ನೋವುಗಳು, ಬೆನ್ನು ನೋವು ಇನ್ನಿತರೆ ನೋವುಗಳು ಕಾಣಿಸಿಕೊಳ್ಳುತ್ತವೆ.

ಮನಸ್ಥಿತಿಯಲ್ಲಿನ ಅಸಮತೋಲನ

ಮನಸ್ಥಿತಿಯಲ್ಲಿನ ಅಸಮತೋಲನ

ಸಣ್ಣ ಸಣ್ಣ ಕಾರಣಗಳಿಗೆ ಕೋಪಗೊಳ್ಳುವುದು, ಬೇಸರದ ಭಾವನೆ, ಕೆಲವೊಮ್ಮೆ ಭಯ ಹುಟ್ಟುವುದು, ಉತ್ಸಾಹವಿಲ್ಲದಂತಿರುವುದು ಹೀಗೆ ಮನಸ್ಥಿತಿಯಲ್ಲಿನ ಅಸಮತೋಲನವೂ ಕೂಡ ಗರ್ಭಿಣಿಯರ ಲಕ್ಷಣಗಳಲ್ಲಿ ಒಂದು ಎನ್ನಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ತತ್ ಕ್ಷಣದ ಉತ್ತರಗಳು, ಅತಿಯಾದ ಕೋಪಗಳನ್ನು ತೋರ್ಪಡಿಸುವುದು ಸರ್ವೇಸಾಮಾನ್ಯವಾದ ಪ್ರತಿಕ್ರಿಯೆಗಳು. ಕೆಲವೊಮ್ಮೆ ಕ್ರಿಯೆಯೇ ಇಲ್ಲದೆಯೂ ತೀಕ್ಷ್ಣವಾದ ಪ್ರತಿಕ್ರಿಯೆಯುಂಟಾಗುತ್ತದೆ. ಇವುಗಳು ಸಾಮಾನ್ಯ ಲಕ್ಷಣಗಳಾದ್ದರಿಂದ ತಲೆಕೆಡಿಸಿಕೊಳ್ಳುವ ಸಂಗತಯಲ್ಲ. ಅದಕ್ಕೆ ಬದಲಾಗಿ ಒತ್ತಡವನ್ನು ಆದಷ್ಟು ಕಡಿಮೆಮಾಡಿಕೊಳ್ಳಲು ಪ್ರಯತ್ನಿಸಬೇಕು. ಇಷ್ಟವಾದ ಹಾಡುಗಳನ್ನು ಕೇಳುವುದು, ಹಾಡುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು ಇವೇ ಮೊದಲಾದ ಮನಸ್ಸನ್ನು ಸ್ಥಿರವಾಗಿಡುವಂತಹ ಹವ್ಯಾಸಗಳನ್ನು ರೂಢಿಸಿಕೊಂಡರೆ ಈ ಸಮಸ್ಯೆಗಳಿಂದ ಸುಲಭವಾಗಿ ಹೊರಬರಬಹುದಾಗಿದೆ.

ತಲೆತಿರುಗುವಿಕೆ

ತಲೆತಿರುಗುವಿಕೆ

ತಲೆ ಸುತ್ತುವುದು ಅಥವ ತೆಲೆತಿರುಗುವುದು ಗರ್ಭಿಣಿಯರ ಸಾಮಾನ್ಯ ಲಕ್ಷಣಗಳಲ್ಲಿ ಒಂದು. ಗರ್ಭಿಣಿಯರಲ್ಲಿ ರಕ್ತದ ಶರ್ಕರ ಪ್ರಮಾಣ ಮತ್ತು ರಕ್ತದೊತ್ತಡ ಕಡಿಮೆಯಾಗುವುದರ ಪರಿಣಾಮವಾಗಿ ತಲೆತಿರುಗುವುದು ಕಂಡುಬರುತ್ತದೆ. ತಲೆಸುತ್ತುವಿಕೆಯನ್ನು ಹೋಗಲಾಡಿಸಲು ಅಥವ ತಡೆಗಟ್ಟಲು ಆದಷ್ಟು ಹೆಚ್ಚಿನ ನೀರನ್ನು ಕುಡಿಯುವುದು ಮತ್ತು ಸೂಕ್ತವಾದ ಆಹಾರವನ್ನು ತೆಗೆದುಕೊಳ್ಳುವುದು ಅತ್ಯಂತ ಅವಶ್ಯಕವಾದುದಾಗಿದೆ. ಒಂದೊಮ್ಮೆ ವಾಕರಿಕೆಯ ಸಮಸ್ಯೆಯಿದ್ದರೂ ಕೂಡ ನಿಮಗೆ ರುಚಿಸುವಂತಹ ಆಹಾರವನ್ನು ಆಯ್ದು ಸೇವಿಸಿದರೆ ಅವು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗುತ್ತದೆ.

ಗರ್ಭಿಣಿಯಾಗುವ ನಿರೀಕ್ಷೆಯಲ್ಲಿರುವವರು ಈ ಮೇಲಿನ ಎಲ್ಲಾ ದೈಹಿಕ ಬದಲಾವಣೆಗಳಿಗೊಳಪಡುವುದಷ್ಟೇ ಅಲ್ಲದೆ ಮಾನಸಿಕ ಬದಲಾವಣೆಗಳಿಗೂ ಕೂಡ ತನ್ನನ್ನು ತಾನು ತಯಾರಿಗೊಳಿಸಬೇಕಾಗುತ್ತದೆ. ದೈಹಿಕ ಬದಲಾವಣೆಗಳು ನಿರಂತರವಾಗಿ ಆಗುತ್ತಿರುವ ಈ ದಿನಗಳಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ ಮಾನಸಿಕ ಒತ್ತಡಗಳು, ಚಿಂತೆಗಳು ದೇಹದ ಮೇಲೆಯೂ ಕೂಡ ಪ್ರಭಾವವನ್ನು ಬೀರುತ್ತಿರುತ್ತವೆ. ಗರ್ಭಾವಸ್ಥೆಯ ಮೊದಲ ದಿನಗಳಲ್ಲಿ ತಾಯಿಯ ದೇಹಸ್ಥಿತಿ ಸೂಕ್ಷ್ಮವಾಗಿರುವುದರಿಂದ ಆದಷ್ಟು ಜಾಗರೂಕತೆಯನ್ನು ವಹಿಸುವುದು ಮುಖ್ಯವಾದುದು. ಒತ್ತಡಗಳಿಂದ ಮತ್ತು ಆಯಾಸಗಳಿಂದ ತಮ್ಮನ್ನು ದೂರವಿರಿಸಿಕೊಳ್ಳುವುದರೊಂದಿಗೆ, ನಿಯಮಿತ ಸುಲಭ ಗರ್ಭಿಣಿಯರ ವ್ಯಾಯಾಮಗಳು ಮತ್ತು ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಸೂಕ್ತ ಧ್ಯಾನ ಇತ್ಯಾದಿಗಳನ್ನು ಮಾಡುವುದು ಈ ಸಮಯದಲ್ಲಿ ಸೂಕ್ತವೆನಿಸುತ್ತವೆ.

English summary

10 Signs You Might Be Pregnant And You Are Not Aware Of It

Feeling too tired early morning or having a nausea the moment you wake up? Then, you might be pregnant. There are many women out there who may not realise that they are pregnant only until a few weeks later. After the normal symptoms persist for long, they will know that they are carrying a tiny baby inside their womb.
X