For Quick Alerts
ALLOW NOTIFICATIONS  
For Daily Alerts

ಹೆರಿಗೆ ನಂತರ ಬರುವ ನಿದ್ರಾಹೀನತೆ ಸಮಸ್ಯೆ! ಇದಕ್ಕೆ ಪರಿಹಾರವೇನು?

|

ಹೆರಿಗೆಯ ನಂತರ ಅನೇಕ ಮಹಿಳೆಯರಲ್ಲಿ ನಿದ್ರಾಹೀನತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಅನೇಕರು ಒಪ್ಪದಿದ್ದರೂ ವಾಸ್ತವವಾಗಿ ಇಂಥ ಸಮಸ್ಯೆಯಿಂದ ಹಲವಾರು ತಾಯಂದಿರು ಬಳಲುವುದು ಸತ್ಯವಾಗಿದೆ. ಗರ್ಭಧಾರಣೆ ಅವಧಿಯಲ್ಲಿ ರಾತ್ರಿ ಆಗಾಗ ಎದ್ದು ಜಲಬಾಧೆ ತೀರಿಸಿಕೊಳ್ಳುವುದು ಅಥವಾ ಮತ್ತೆ ಮತ್ತೆ ಹಸಿಯುವ ಹೊಟ್ಟೆಗೆ ಏನಾದರೂ ಹಾಕಿಕೊಳ್ಳುವುದು ಸಾಮಾನ್ಯ ಸಂಗತಿ. ಅದರಲ್ಲೂ 9 ತಿಂಗಳ ಗರ್ಭಧಾರಣೆಯ ಅವಧಿಯಲ್ಲಿ ಇದು ಹೆಚ್ಚಾಗಿರುತ್ತದೆ. ಒಮ್ಮೆ ಹೆರಿಗೆ ಆದರೆ ಸಾಕು, ಮಗುವಿನ ನೆಮ್ಮದಿಯ ನಿದ್ರೆಯೊಂದಿಗೆ ತಾವೂ ನೆಮ್ಮದಿಯಾಗಿ ಯಾವಾಗ ಮಲಗುತ್ತೇವೋ ಎಂದು ತಾಯಂದಿರು ಚಿಂತಿಸುವಂತಾಗಿರುತ್ತದೆ. ಆದರೆ ಹೆರಿಗೆ ನಂತರ ಎಲ್ಲ ತಾಯಂದಿರೂ ರಾತ್ರಿ ಸುಖ ನಿದ್ರೆ ಪಡೆಯಲು ಸಾಧ್ಯವಾಗುತ್ತದೆಯಾ ಎಂಬ ಪ್ರಶ್ನೆ ಹಾಕಿದರೆ ಇದಕ್ಕೆ 'ಇಲ್ಲ' ಎಂಬ ಉತ್ತರ ಸಿಗುತ್ತದೆ.

ಹೆರಿಗೆಯಾದಾಗ ತಾಯಿ ಅಸ್ಪತ್ರೆಯಲ್ಲಿರುವ ಅವಧಿಯಲ್ಲಿ ಕೂಸು ರಾತ್ರಿ ಯಾವಾಗ ಬೇಕಾದರೂ ಎದ್ದು ಅಳುತ್ತದೆ. ಇನ್ನು ಆಗಾಗ ಚೆಕಪ್‌ಗೆ ಬರುವ ನರ್ಸ್, ಡಾಕ್ಟರ್‌ಗಳಿಂದ ಸಹ ನಿದ್ರೆ ಹಾರಿ ಹೋಗುತ್ತಲೇ ಇರುತ್ತದೆ. ರಾತ್ರಿಯಡೀ ಒಂದು ಗಂಟೆಯೂ ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಕೊನೆಗೆ ಹೆರಿಗೆ ಪ್ರಕ್ರಿಯೆಯನ್ನು ಸುಸೂತ್ರವಾಗಿ ಮುಗಿಸಿ ಮನೆಗೆ ಹೋದರೆ ಸಾಕು, ಅಲ್ಲಾದರೂ ನೆಮ್ಮದಿಯಿಂದ ರಾತ್ರಿ ನಿದ್ರೆ ಮಾಡಬಹುದು ಎಂಬುದು ತಾಯಂದಿರ ಆಸೆಯಾಗಿರುತ್ತದೆ. ಆದರೆ ಹೆರಿಗೆ ನಂತರ ಉದ್ಭವಿಸುವ ನಿದ್ರಾಹೀನತೆ ಸಮಸ್ಯೆಯಿಂದ ಸುಖ ನಿದ್ರೆ ಮರೀಚಿಕೆ ಆಗುವ ಸಾಧ್ಯತೆಗಳಿರುತ್ತವೆ. ಹೆರಿಗೆ ನಂತರದ ನಿದ್ರಾಹೀನತೆಗೆ ಕಾರಣಗಳು ಹಾಗೂ ಅದರ ನಿವಾರಣೋಪಾಯಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

Ways To Deal With Postpartum Insomnia

ಹೆರಿಗೆ ನಂತರದ ನಿದ್ರಾಹೀನತೆ ಎಂದರೇನು?

ಬಹುತೇಕ ಎಲ್ಲ ನವ ತಾಯಂದಿರು ಅನುಭವಿಸುವ ಈ ಹೆರಿಗೆ ನಂತರದ ನಿದ್ರಾಹೀನತೆಯಿಂದ ಮಾನಸಿಕ ಒತ್ತಡ ಆವರಿಸಿ ಅವರಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪುಟ್ಟ ಕಂದ ನೆಮ್ಮದಿಯಯಾಗಿ ತನ್ನ ಪಾಡಿಗೆ ತಾನು ನಿದ್ರಿಸುತ್ತಿದ್ದರೂ ತಾಯಿಗೆ ಮಾತ್ರ ನಿದ್ದೆ ಬರುತ್ತಿಲ್ಲ ಎಂದಾದರೆ ಅದು ನಿದ್ರಾಹೀನತೆಯ ಲಕ್ಷಣವಾಗಿದೆ. ಪುಟ್ಟ ಮಗುವಿನ ಆರೋಗ್ಯ, ಅದರ ಲಾಲನೆ ಪಾಲನೆ ಹೇಗೆ ಎಂಬಿತ್ಯಾದಿ ವಿಚಾರಗಳು ಸಹ ನಿದ್ರೆ ಹಾರಿ ಹೋಗುವಂತೆ ಮಾಡಬಲ್ಲವು.

Most Read: ಎದೆ ಹಾಲನ್ನು ಪಂಪ್ ಮಾಡುವುದು ಹೇಗೆ? ಸೂಕ್ತ ಸೂಚನೆಗಳು ಮತ್ತು ಸಲಹೆಗಳು

ಹೆರಿಗೆ ನಂತರದ ನಿದ್ರಾಹೀನತೆಗೆ ಕಾರಣಗಳು

ಹೆರಿಗೆ ಪ್ರಕ್ರಿಯೆಯ ಅವಧಿಯಲ್ಲಿ ತಾಯಿಯ ದೇಹದ ಹಾರ್ಮೋನ್ ಗಳ ಸ್ಥಿತಿ ಏರುಪೇರಾಗಿರುತ್ತದೆ. ಇದರ ನಂತರ ಆರೋಗ್ಯ ಮತ್ತೆ ಸಹಜ ಸ್ಥಿತಿಗೆ ಬರಲು ಕಾಲಾವಕಾಶ ಬೇಕಾಗುತ್ತದೆ. ಇದರಿಂದ ದೇಹದ ನೈಸರ್ಗಿಕ ಗಡಿಯಾರ ಸಹ ತಾಳ ತಪ್ಪಿದಂತಾಗಿ ಮಲಗುವ ಹಾಗೂ ಎಚ್ಚರಾಗಿರುವ ವೇಳಾಪಟ್ಟಿ ಸಮತೋಲನ ಕಳೆದುಕೊಳ್ಳುತ್ತದೆ.

ಹೆರಿಗೆ ನಂತರ ರಾತ್ರಿ ಸಮಯದಲ್ಲಿ ಬೆವರುವಿಕೆ ಸಹ ಸಾಮಾನ್ಯ. ಇದಕ್ಕೂ ಸಹ ಹಾರ್ಮೋನಗಳೇ ಕಾರಣ ಎಂಬುದು ಗೊತ್ತಿರಲಿ. ಗರ್ಭಿಣಿಯಾಗಿರುವಾಗ ತಾಯಿ ಹಾಗೂ ಮಗುವಿನ ಪೋಷಣೆಗೆ ಅಗತ್ಯವಾದ ಹೆಚ್ಚುವರಿ ನೀರಿನಂಶ ಇನ್ನು ಅವಶ್ಯವಾಗಿರುವುದಿಲ್ಲ. ಈ ಹೆಚ್ಚುವರಿ ನೀರು ಬೆವರಿನ ಮೂಲಕ ದೇಹದಿಂದ ಹೊರಹಾಕಲ್ಪಡುತ್ತದೆ.

ಮಾನಸಿಕ ಸ್ಥಿತಿಯ ಏರುಪೇರು ಸಹ ನಿದ್ರಾಹೀನತೆ ತರಬಲ್ಲದು. ಹೆರಿಗೆ ನಂತರದ ಖಿನ್ನತೆ ಎಂದು ಈ ಸ್ಥಿತಿಯನ್ನು ಕರೆಯಲಾಗುತ್ತದೆ. ಇಂಥ ಸಂದರ್ಭಗಳಲ್ಲಿ ಖಿನ್ನತೆ ಹಾಗೂ ಉದ್ವೇಗಗಳನ್ನು ನಿವಾರಿಸಲು ತಜ್ಞ ವೈದ್ಯರ ಸಲಹೆ ಪಡೆಯಬೇಕಾಗಬಹುದು. ಆಗಾಗ ಮಗುವಿಗೆ ಮೊಲೆಯೂಡಿಸಬೇಕಾಗುವುದರಿಂದ ಸಹ ನಿದ್ರೆಗೆ ಭಂಗ ಬರುತ್ತದೆ. ಒಮ್ಮೆ ನಿದ್ರಾಭಂಗವಾದ ಮೇಲೆ ಮತ್ತೆ ನಿದ್ರೆಗೆ ಜಾರುವುದು ಕಠಿಣವಾಗುತ್ತದೆ.

Most Read: ಗರ್ಭಿಣಿಯರಿಗೆ ಕಾಣಿಸಿಕೊಳ್ಳುವ ಮೈಗ್ರೇನ್‌ನ್ನು ನಿಯಂತ್ರಿಸಲು ಸಲಹೆಗಳು

ಹೆರಿಗೆ ನಂತರದ ನಿದ್ರಾಹೀನತೆಯ ಲಕ್ಷಣಗಳು

ನವಜಾತ ಶಿಶುವಿನ ಲಾಲನೆ ಪಾಲನೆ ಹಾಗೂ ರಾತ್ರಿಯ ನಿದ್ರಾಭಂಗದಿಂದ ತಾಯಿಯಲ್ಲಿ ಭಾವನಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಖಿನ್ನತೆಯ ಕಾರಣದಿಂದಲೂ ಭಾವನಾತ್ಮಕ ಬದಲಾವಣೆಗಳು ಕಂಡು ಬರಬಹುದಾಗಿದ್ದು, ಇದರ ನಿವಾರಣೆಗೆ ವೈದ್ಯರನ್ನು ಕಾಣುವುದು ಸೂಕ್ತ. ನಿದ್ರಾಹೀನತೆಯಿಂದ ಸಹಜವಾಗಿಯೇ ಎಲ್ಲ ವಿಷಯಗಳಿಗೂ ಬೇಗನೆ ಕೋಪ ಬರುವಂತಾಗುತ್ತದೆ. ಒಂದೇ ರಾತ್ರಿ ಸರಿಯಾದ ನಿದ್ದೆ ಆಗದಿದ್ದರೂ ಸಹ ಮೆದುಳಿನ ಸಹಜ ಕ್ರಿಯೆಗಳು ಏರುಪೇರಾಗಿ ಮಾನಸಿಕ ಸ್ಥಿತಿ ಹದಗೆಡುತ್ತದೆ. ಹೆರಿಗೆ ನಂತರದ ನಿದ್ರಾಹೀನತೆಯಿಂದ ಬಳಲುತ್ತಿರುವವರಲ್ಲಿ ಖಿನ್ನತೆ ಹಾಗೂ ದುಃಖದ ಭಾವನೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸರಿಯಾಗಿ ನಿದ್ರೆ ಬಾರದಿರುವುದರಿಂದ ಉದ್ವೇಗ ಹೆಚ್ಚಾಗುತ್ತದೆ. ಅಲ್ಲದೆ ಮರುದಿನ ರಾತ್ರಿ ಸಹ ಹೀಗೇ ಆದರೆ ಏನು ಮಾಡುವುದು ಎಂಬ ಚಿಂತೆಯು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹೆರಿಗೆ ನಂತರದ ನಿದ್ರಾಹೀನತೆ ನಿವಾರಿಸಲು ಹೀಗೆ ಮಾಡಿ

ರಾತ್ರಿ ಎದ್ದು ಮಗುವಿಗೆ ಹಾಲೂಡಿಸುವ ಸಂದರ್ಭದಲ್ಲಿ ಕೋಣೆಯಲ್ಲಿ ಅತಿ ಪ್ರಖರ ದೀಪಗಳನ್ನು ಆನ್ ಮಾಡಬಾರದು. ಜೊತೆಗೆ ರಾತ್ರಿ ಸಂದರ್ಭದಲ್ಲಿ ತಾಯಿಯಾದವಳು ಮೊಬೈಲ್‌ನಲ್ಲಿ ಇಮೇಲ್ ಚೆಕ್ ಮಾಡುವುದು ಅಥವಾ ಸೋಶಿಯಲ್ ಮೀಡಿಯಾ ಬಳಸುವುದು ಸರಿಯಲ್ಲ. ಇದರಿಂದ ಸಹ ನಿದ್ರೆಯ ಚಕ್ರ ಏರುಪೇರಾಗಿ ಬೇಗ ನಿದ್ರೆ ಬರದಂತಾಗುತ್ತದೆ. ಪ್ರಖರ ದೀಪಗಳು ಹಾಗೂ ಮೊಬೈಲ್ ಸ್ಕ್ರೀನ್ ಬೆಳಕುಗಳು ಈಗ ಹಗಲಾಗಿದೆ ಎಂಬ ಸೂಚನೆಯನ್ನು ಮೆದುಳಿಗೆ ರವಾನಿಸುತ್ತವೆ ಎಂಬುದು ತಿಳಿದಿರಲಿ.

ಪರಿಸ್ಥಿತಿಯನ್ನು ಅರಿತು ಸಹಾಯ ಮಾಡುವ ಸಂಗಾತಿ ಜೊತೆಗಿದ್ದರೆ ರಾತ್ರಿ ಸಮಯದಲ್ಲಿ ಸಾಕಷ್ಟು ಸಹಾಯವಾಗುತ್ತದೆ. ಕಷ್ಟದ ಸಮಯದಲ್ಲಿ ಸಹಾಯ ಮಾಡುವ ಪತಿ ಜೊತೆಗಿದ್ದರೆ ತಾಯಿಯ ಆರೋಗ್ಯ ಬೇಗ ಸುಧಾರಿಸುವುದರಲ್ಲಿ ಸಂಶಯವಿಲ್ಲ. ಮಗು ಹಸಿವಾಗಿ ಅಳುತ್ತಿರುವಾಗ ಸಂಗಾತಿಯು ಬಾಟಲಿಯಲ್ಲಿ ತುಂಬಿಸಿಟ್ಟ ಹಾಲನ್ನು ಮಗುವಿಗೆ ಕುಡಿಸಿದಲ್ಲಿ ಎಷ್ಟೋ ಸಹಾಯ ಮಾಡಿದಂತಾಗುತ್ತದೆ. ಇದರಿಂದ ಪ್ರತಿ ಬಾರಿಯೂ ತಾಯಿಯ ನಿದ್ರಾಭಂಗವಾಗುವುದನ್ನು ತಪ್ಪಿಸಬಹುದು.

ಮಗು ಮಲಗಿದಾಗ ಮನೆಗೆಲಸ ಮಾಡುವುದನ್ನು ಆದಷ್ಟೂ ಕಡಿಮೆ ಮಾಡಬೇಕು. ಮಗು ಮಲಗಿದ ಸಂದರ್ಭದಲ್ಲಿ ತಾಯಿಯೂ ಮಲಗಿ ವಿಶ್ರಾಂತಿ ಪಡೆಯಬೇಕೆಂದು ಹಿರಿಯರು ಹೇಳುತ್ತಾರೆ. ಹೆರಿಗೆ ನಂತರ ಕೆಲ ತಿಂಗಳುಗಳವರೆಗೆ ತಾಯಿಯಾದವಳು ತನ್ನ ಆರೋಗ್ಯ ಸುಧಾರಣೆಯ ಕಡೆಗೆ ಗಮನ ನೀಡುವುದು ಅತಿ ಅಗತ್ಯವಾಗಿದೆ.

ರಾತ್ರಿ ಆದಷ್ಟೂ ಬೇಗ ಮಲಗುವುದರಿಂದ ಹೆಚ್ಚು ಅವಧಿಯವರೆಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ. ಮಗು ಯಾವ ಸಂದರ್ಭದಲ್ಲಾದರೂ ಹಸಿವಾಗಿ ಏಳಬಹುದಾದ್ದರಿಂದ ಬೇಗನೆ ನಿದ್ರೆ ಆರಂಭಿಸುವುದು ಸೂಕ್ತ. ಹೀಗೆ ಮಾಡುವುದರಿಂದ ಆದಷ್ಟೂ ನಿದ್ರೆಯ ಕೊರತೆಯನ್ನು ದೂರ ಮಾಡಬಹುದು.

ಮಲಗುವ ಕೋಣೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು, ಟಿವಿ ಹಾಗೂ ಕೆಲಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಇಟ್ಟುಕೊಳ್ಳಲೇಬಾರದು. ಬೆಡ್ ರೂಂ ಗೆ ಹೋದ ತಕ್ಷಣ ಮಲಗಬೇಕೆಂಬ ಭಾವನೆ ಬರಬೇಕಾದರೆ ಈ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು. ಜೊತೆಗೆ ಮಲಗುವ ಮುನ್ನ ಯಾವುದೋ ಆಫೀಸ್ ಕೆಲಸ ಮುಗಿಸಲು ಕುಳಿತುಕೊಳ್ಳಬಾರದು.

ಮಲಗುವ ಮುನ್ನ ಕೆಲ ಹೊತ್ತು ಧ್ಯಾನ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಧ್ಯಾನದಿಂದ ನೆಮ್ಮದಿಯ ನಿದ್ರೆ ಬರುತ್ತದೆ ಎಂಬುದು ಸಾಬೀತಾದ ಅಂಶವಾಗಿದೆ. ಜೊತೆಗೆ ಬಿಸಿ ನೀರಿನ ಹಿತವಾದ ಸ್ನಾನ ಮಾಡುವುದು ಅಥವಾ ಮಸಾಜ್ ಮಾಡಿಸಿಕೊಳ್ಳುವುದರಿಂದ ಸಹ ನಿದ್ರಾಹೀನತೆಯನ್ನು ದೂರ ಮಾಡಬಹುದು.

Most Read: ಗರ್ಭಾವಸ್ಥೆಯಲ್ಲಿ ಗರ್ಭಿಣಿಗೆ ಯಾರೂ ಹೇಳದೇ ಇರುವ ಕಿವಿಮಾತುಗಳು

ಮಲಗುವ ಕೋಣೆಯಲ್ಲಿ ಎಲ್ಲ ದೀಪಗಳನ್ನು ಆರಿಸಿ ಸಂಪೂರ್ಣ ಕತ್ತಲೆ ಇರುವಂತೆ ಮಾಡಬೇಕು. ದೀಪಗಳನ್ನೆಲ್ಲ ಆರಿಸಿ ಕತ್ತಲೆ ಆವರಿಸಿದಾಗ ಮೆದುಳು ತನ್ನಿಂತಾನೇ ನಿದ್ರೆ ಬರುವಂತೆ ಮಾಡುತ್ತದೆ. ಹೀಗಾಗಿಯೇ ರಾತ್ರಿ ಎದ್ದಾಗ ಪ್ರಕಾಶಮಾನವಾದ ಲೈಟ್‌ಗಳನ್ನು ಆನ್ ಮಾಡಬಾರದು. ಕೋಣೆಯಲ್ಲಿ ಕಡಿಮೆ ಬೆಳಕು ಸೂಸುವ ಬಲ್ಬ್ ಅಳವಡಿಸಿ ಬೇಕಾದಾಗ ಅದನ್ನು ಮಾತ್ರ ಆನ್ ಮಾಡಬೇಕು. ಇದರಿಂದ ನಿದ್ರಾಭಂಗವಾಗುವ ಸ್ಥಿತಿಯನ್ನು ತಪ್ಪಿಸಬಹುದಾಗಿದೆ.

ದಿನದಲ್ಲಿ ಕಾಫಿ ಹಾಗೂ ಟೀ ಸೇವನೆಯನ್ನು ಸಹ ಕಡಿಮೆ ಮಾಡಬೇಕು. ದಿನಕ್ಕೆ ಕೇವಲ ಎರಡು ಕಪ್ ಕಾಫಿ ಅಥವಾ ಟೀ ಕುಡಿದರೆ ಸಾಕು. ದೀರ್ಘ ಶ್ವಾಸೋಚ್ಛಾಸದಿಂದ ಸಹ ಸಾಕಷ್ಟು ನಿರಾಳತೆ ಲಭಿಸುತ್ತದೆ. ಅಂಗಾತ ಮಲಗಿ ಒಂದರಿಂದ ಹತ್ತರವರೆಗೆ ಎಣಿಸುವುದು ಕೂಡ ನಿರಾಳತೆ ಪಡೆಯಲು ಅನುಕೂಲವಾಗಿದೆ. ಬಹು ಹಿಂದಿನಿಂದಲೂ ಉದ್ವೇಗ ನಿವಾರಣೆಗೆ ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ.

English summary

Ways To Deal With Postpartum Insomnia

Almost faced by every new mother, postpartum insomnia can get really stressful, taking a toll on the health. There are several causes for postpartum insomnia as it takes time for the body to normalize post delivery. The best ways to get over the situation is to sleep early, sleeping in a dark room, avoiding caffeine, etc.
Story first published: Saturday, November 24, 2018, 16:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more