For Quick Alerts
ALLOW NOTIFICATIONS  
For Daily Alerts

ಸಹಜ ಹೆರಿಗೆಯ ಬಳಿಕ ಬಾಣಂತನದ ಚೇತರಿಕೆ - ಏನನ್ನು ನಿರೀಕ್ಷಿಸಬಹುದು?

|

ಒಂಬತ್ತು ತಿಂಗಳ ಗರ್ಭಾವಸ್ಥೆಯ ಬಳಿಕ ಸಹಜ ಹೆರಿಗೆಯಾಗಿ ಮುದ್ದುಮಗುವಿನ ತಾಯಿಯಾದ ಬಳಿಕ ಎಲ್ಲಾ ಜವಾಬ್ದಾರಿ ಕಳೆಯಿತು ಎಂದು ನಿರಾಳರಾಗುವವರೇ ಹೆಚ್ಚು. ಆದರೆ ಹೆರಿಗೆಯ ಬಳಿಕದ ಅವಧಿ ಅಥವಾ ಬಾಣಂತನವೂ ತಾಯಿಯ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಬಹುತೇಕ ಕುಟುಂಬಗಳಲ್ಲಿ ಹೆರಿಗೆಯವರೆಗೂ ಮನೆಯ ಸದಸ್ಯರು ಗರ್ಭಿಣಿಗೇ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದು ಮಗುವಿನ ಆಗಮನದ ಬಳಿಕ ಈ ಪ್ರಾಮುಖ್ಯತೆಯನ್ನು ಮಗುವಿನತ್ತ ಕೇಂದ್ರೀಕರಿಸಿ ತಾಯಿಗೆ ನೀಡುವ ಪ್ರಾಮುಖ್ಯತೆಯನ್ನು ಕೊಂಚ ಕಡೆಗಣಿಸುವುದನ್ನು ಗಮನಿಸಬಹುದು.

ವಾಸ್ತವದಲ್ಲಿ, ಬಹುತೇಕ ತಾಯಂದಿರೇ ಮಗುವಿಗೆ ಅತಿ ಹೆಚ್ಚು ಗಮನ ನೀಡುವ ಮೂಲಕ ತಮ್ಮ ಆರೋಗ್ಯವನ್ನೂ ಕಡೆಗಣಿಸುತ್ತಾರೆ. ಆದರೆ ಬಾಣಂತನದ ಅವಧಿಯಲ್ಲಿ ಗರ್ಭಾವಸ್ಥೆಯಲ್ಲಿ ದೇಹ ಪಡೆದಿದ್ದ ಬದಲಾವಣೆಗಳು ಈಗ ಇನ್ನಷ್ಟು ಮುಂದುವರೆದು ಕೆಲವು ಹಿಮ್ಮುಖವಾದರೆ (ಗರ್ಭಾಶಯ ಹಿಂದಿನ ಸ್ಥಿತಿಗೆ ತಲುಪುವುದು) ಕೆಲವು ಹೊಸದಾಗಿ ಪ್ರಾರಂಭವಾಗುತ್ತವೆ (ಮಗುವಿಗೆ ಊಡಿಸಬೇಕಾದ ಹಾಲಿನ ಉತ್ಪಾದನೆ). ಹಾಗಾಗಿ ಗರ್ಭಾವಸ್ಥೆಯಷ್ಟೇ ಬಾಣಂತನವೂ ಮುಖ್ಯ ಘಟ್ಟವಾಗಿದ್ದು ಈ ಅವಧಿಯಲ್ಲಿ ಮಗುವಿಗೆ ನೀಡಬೇಕಾದ ಕಾಳಜಿಯಷ್ಟೇ ತಾಯಿಗೂ ನೀಡಬೇಕಾಗುತ್ತದೆ.

recovery tips after vaginal delivery

ಹೆರಿಗೆಗೂ ಮುನ್ನ ಗರ್ಭಿಣಿಯ ದೇಹ ಅಪಾರವಾದ ಬದಲಾವಣೆಗಳಿಗೆ ಒಳಪಟ್ಟಿರುತ್ತದೆ. ಒಂದು ವೇಳೆ ಸಹಜ ಹೆರಿಗೆಯಾಗಿದ್ದರೆ ತಾಯಿಯ ನಿತ್ಯದ ಚಟುವಟಿಕೆಗಳಾದ ಕುಳಿತುಕುಳ್ಳುವುದು, ಮೂತ್ರವಿಸರ್ಜನೆ, ಮಲವಿಸರ್ಜನೆ ಮೊದಲಾದ ಕಾರ್ಯಗಳೂ ಕಷ್ಟಕರವಾಗುತ್ತವೆ.

Most Read: ಈ ಮೂರು ರಾಶಿಯವರು ಮನಸ್ಸು ಮಾಡಿದರೆ ವಿಶ್ವವನ್ನೇ ಬದಲಿಸಬಲ್ಲರು

ಹೆರಿಗೆಯಾಗಲು ಹಲವಾರು ಗಂಟೆಗಳ ಕಾಲ ನೋವನ್ನನುಭವಿಸಿದ ಬಳಿಕ ಆಗಮಿಸಿದ ಕಂದನನ್ನು ನೋಡಿದಾಗ ತಾಯಿ ತನ್ನೆಲ್ಲಾ ನೋವನ್ನು ಮರೆತರೂ ಹೆರಿಗೆಯ ಸಮಯದಲ್ಲಿ ಜನನಾಂಗ ಗರಿಷ್ಟ ಪ್ರಮಾಣದಲ್ಲಿ ಹಿಗ್ಗಬೇಕಾಗುತ್ತದೆ ಹಾಗೂ ಹೀಗೆ ಹಿಗ್ಗುವಿಕೆಗೆ ಒಳಗಾದ ಸ್ನಾಯುಗಳು ಮತ್ತೆ ಮೊದಲಿನ ಸ್ಥಿತಿಗೆ ಬರುವುದು ಬಾಣಂತನದ ಅವಧಿಯಲ್ಲಿ ಪ್ರಮುಖವಾದ ಸವಾಲಾಗಿರುತ್ತದೆ.

ಒಂದು ವೇಳೆ ಇತ್ತೀಚೆಗೆ ನಿಮಗೂ ಸಹಜ ಹೆರಿಗೆಯಾಗಿದ್ದರೆ ಬಾಣಂತನ ಅವಧಿಯಲ್ಲಿ ನಿಮ್ಮ ಜನನಾಂಗದ ಬಗ್ಗೆ ವಹಿಸಬೇಕಾದ ಕಾಳಜಿಯನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದ್ದು ಪ್ರತಿ ತಾಯಿಯೂ, ತಾಯಿಯಾಗುವವಳೂ ಕಡ್ಡಾಯವಾಗಿ ಅರಿತಿರಲೇಬೇಕಾದ ಅಮೂಲ್ಯ ಮಾಹಿತಿಯಾಗಿದೆ.

ಸಹಜ ಹೆರಿಗೆಯ ಬಳಿಕ ಬಾಣಂತನದ ಚೇತರಿಕೆ - ಏನನ್ನು ನಿರೀಕ್ಷಿಸಬಹುದು?

* ಒಂದು ವೇಳೆ ಹೆರಿಗೆ ಆಸ್ಪತ್ರೆ ಅಥವಾ ಎಲ್ಲಾ ಸೌಲಭ್ಯಗಳಿರುವ ಪ್ರಸೂತಿಗೃಹದಲ್ಲಿ ಆಗಿದ್ದರೆ ಹೆರಿಗೆಯ ಬಳಿಕ ಸುಮಾರು ಎರಡು ದಿನಗಳವರೆಗೆ ವೈದ್ಯರು ಆಸ್ಪತ್ರೆಯಲ್ಲಿಯೇ ಉಳಿಸಿಕೊಂಡು ಬಳಿಕವೇ ಮನೆಗೆ ಕಳುಹಿಸಿಕೊಡುತ್ತಾರೆ. ಈ ಅವಧಿಯಲ್ಲಿ ಬಾಣಂತಿಯ ದೇಹದ ಹಿಮ್ಮುಖ ಬದಲಾವಣೆ ಸಹಜಗತಿಯಲ್ಲಿ ಪ್ರಾರಂಭವಾಗಿದೆಯೇ ಉಳಿದ ಕಾರ್ಯಗಳು ಏನೂ ತೊಂದರೆಯಿಲ್ಲದೇ ಮನೆಯಲ್ಲಿಯೇ ಹಿರಿಯ ಮಹಿಳೆಯರ ಆರೈಕೆಯಲ್ಲಿ ನಡೆಯಬಹುದು ಎನ್ನುವ ಖಾತರಿ ಇದ್ದರೆ ಮಾತ್ರವೇ ವೈದ್ಯರು ಮನೆಗೆ ಕಳುಹಿಸುವ ನಿರ್ಧಾರ ಮಾಡುತ್ತಾರೆ. ಎರಡು ದಿನಕ್ಕೇ ಮನೆಗೆ ಹಿಂದಿರುಗಿದ್ದೇವೆ ಎಂದ ಮಾತ್ರಕ್ಕೇ ಬಾಣಂತಿಯ ದೇಹ ಹಿಂದಿನ ಆರೋಗ್ಯ ಪಡೆದಿದೆ ಎಂದು ಅರ್ಥವಲ್ಲ, ಬದಲಿಗೆ, ನಿಜವಾದ ಸವಾಲುಗಳು ನೀವು ಮನೆಗೆ ಮಗುವಿನೊಂದಿಗೆ ಹಿಂದಿರುಗಿದ ಬಳಿಕವೇ ಪ್ರಾರಂಭವಾಗುತ್ತದೆ. ಈ ಬಳಿಕ ನೀವು ಯಾವ ವಿಷಯಗಳಲ್ಲಿ ಕಾಳಜಿ ವಹಿಸಬೇಕೆಂದರೆ:

• ರಕ್ತಸ್ರಾವ

• ಊದಿಕೊಳ್ಳುವುದು ಮತ್ತು ಕೆಂಪಗಾಗುವುದು

* ಹೆರಿಗೆಯ ಬಳಿಕ ಎದುರಾಗುವ ಸೆಡೆತಗಳು

* ಮಲಬದ್ದತೆ

* ಸೋಂಕುಗಳು (ಎಂಡೋಮೆಟ್ರೈಟಿಸ್ ಮತ್ತು ಮಾಸ್ಟೈಟಿಸ್)

* ತೂಕದಲ್ಲಿ ಇಳಿಕೆ

* ಮೂತ್ರ ವಿಸರ್ಜನೆ ಕಷ್ಟಕರವಾಗುವುದು

1) ರಕ್ತಸ್ರಾವ

ಹೆರಿಗೆಯ ಬಳಿಕ ಎದುರಾಗುವ ಪ್ರಮುಖ ಸಮಸ್ಯೆ ಎಂದರೆ ನಿಲ್ಲದ ರಕ್ತಸ್ರಾವ. ಕೆಲವರಲ್ಲಿ ಹೆರಿಗೆಯ ತಕ್ಷಣವೇ ನಿಂತರೆ ಕೆಲವು ಮಹಿಳೆಯರಿಗೆ ಆರು ವಾರಗಳ ಕಾಲ ಕಾಡಬಹುದು. ಆದರೆ ಹೆಚ್ಚಿನ ಬಾಣಂತಿಯರಲ್ಲಿ ಭಾರೀ ಪ್ರಮಾಣದ ರಕ್ತಸ್ರಾವ ಸುಮಾರು ಐದು ವಾರಗಳವರೆಗೆ ಇರಬಹುದು, ಆ ಬಳಿಕ ರಕ್ತಸ್ರಾವ ಪೂರ್ಣವಾಗಿ ನಿಲ್ಲದೇ ಇದ್ದರೂ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಪ್ರಾರಂಭದ ದಿನದಲ್ಲಿ ಇದು ಪ್ರಖರ ಕೆಂಪು ಬಣ್ಣದಲ್ಲಿದ್ದು ಕ್ರಮೇಣ ಗಾಢ ಕಂದು ಬಣ್ಣ ಪಡೆಯುತ್ತಾ ಸ್ರಾವದ ಪ್ರಮಾಣ ಕಡಿಮೆಯಾಗುತ್ತಾ ಹೋದಂತೆ ಗುಲಾಬಿ ಬಣ್ಣವನ್ನು ಪಡೆಯುತ್ತದೆ. ಒಂದು ವೇಳೆ ರಕ್ತದಲ್ಲಿ ಹೆಪ್ಪುಗಟ್ಟಿದ ರಕ್ತ ಕಂಡುಬಂದರೆ ಅಥವಾ ಭಾರೀ ರಕ್ತಸ್ರಾವ ಒಂದು ವಾರಕ್ಕೂ ಹೆಚ್ಚು ಕಾಲ ಮುಂದುವರೆದರೆ ತಕ್ಷಣವೇ ವೈದ್ಯರ ಗಮನಕ್ಕೆ ತರುವುದು ಅವಶ್ಯವಾಗಿದೆ. ಈ ಬಗೆಯ ಸ್ರಾವ ಸಹಜವಾಗಿದ್ದು ಗರ್ಭಾವಸ್ಥೆಯಲ್ಲಿ ಗರ್ಭಾಶಯದಲ್ಲಿ ಹಳೆಯ ಜೀವಕೋಶಗಳನ್ನು ನಿವಾರಿಸಿ ಹೊಸ ಜೀವಕೋಶಗಳನ್ನು ಸೃಷ್ಟಿಸಿ ಮುಂದಿನ ಅಂಡಾಣುವಿನ ಆಗಮನಕ್ಕೆ ಸಜ್ಜುಗಳಿಸಬೇಕಾದ ಕಾರಣ ಈ ಸ್ರಾವ ಅನಿವಾರ್ಯವೂ ಹೌದು. ಹಾಗಾಗಿ ಈ ಕ್ರಿಯೆಯಲ್ಲಿ ಜ್ವರ ಇರುವುದಿಲ್ಲ. ಒಂದು ವೇಳೆ ಜ್ವರ ಇದೆ ಎಂದಾದರೆ ಗರ್ಭಾಶಯದ ಭಾಗಗಳಲ್ಲಿ ಸೋಂಕು ಇದೆ ಎಂದೇ ಅರ್ಥವಾಗಿದ್ದು ತಕ್ಷಣ ವೈದ್ಯರನ್ನು ಕಾಣಬೇಕು.

Most Read: ಪುರುಷರ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುವ ಅದ್ಭುತ ಆಹಾರಗಳು

2) ಊದಿಕೊಳ್ಳುವುದು ಮತ್ತು ಕೆಂಪಗಾಗುವುದು

ಹೆರಿಗೆಯ ಸಮಯದಲ್ಲಿ ಯೋನಿಯ ಸ್ನಾಯುಗಳು ಮಗುವನ್ನು ಹೊರದೂಡಲು ಗರಿಷ್ಟ ಒತ್ತಡವನ್ನು ಹೇರಿರುವ ಕಾರಣ ಹೆಚ್ಚಿನ ಒತ್ತಡವನ್ನು ಪಡೆದಿರುತ್ತವೆ. ಇದಕ್ಕಾಗಿ ಗರಿಷ್ಟ ಪ್ರಮಾಣದ ರಕ್ತಪರಿಚಲನೆಯೂ ಆಗಿರುತ್ತದೆ. ಪರಿಣಾಮವಾಗಿ ಹೆರಿಗೆಯ ಬಳಿಕ ಜನನಾಂಗದ ಹೊರಭಾಗ ಕೆಂಪಗಾಗಿ ಊದಿಕೊಂಡಿರುತ್ತದೆ. ಅಲ್ಲದೇ ಮುಟ್ಟಲೂ ಆಗದಷ್ಟು ಸೂಕ್ಷ್ಮ ಸಂವೇದನೆಯನ್ನೂ ಪಡೆದಿರುತ್ತದೆ. ಇದೇ ಕಾರಣದಿಂದಾಗಿ ಬಾಣಂತಿಯರು ಕೊಂಚ ಕಾಲನ್ನು ಅಗಲಿಸಿಯೇ ಮಲಗುವುದು ಅನಿವಾರ್ಯ. ಆದರೆ ಈ ಭಂಗಿಯಲ್ಲಿ ಮಲಗಿರುವಾಗ ಆಪ್ತರು ಎದುರಾದರೆ ಕಾಲುಗಳನ್ನು ಮಡಚಲೂ ಆಗದೇ ಇದೇ ಭಂಗಿಯಲ್ಲಿ ಇರಲೂ ಆಗದೇ ಬಾಣಂತಿಯರು ಕೊಂಚ ಮುಜುಗರ ಅನುಭವಿಸುತ್ತಾರೆ. ಹೆರಿಗೆಯ ಸಮಯದಲ್ಲಿ ಹೆರಿಗೆ ಸರಾಗವಾಗಲು ವೈದ್ಯರು ಅರವಳಿಕೆ ಹಾಗೂ ಕೊಂಚ ಶಸ್ತ್ರಚಿಕಿತ್ಸೆಯನ್ನೂ ನಡೆಸಿರುತ್ತಾರೆ. ಹೆರಿಗೆಯ ಬಳಿಕ ಈ ಭಾಗದಲ್ಲಿ ಹೊಲಿಗೆ ಹಾಕುತ್ತಾರೆ ಹಾಗೂ ಈ ಗಾಯಗಳು ಮಾಗಲು ಕೊಂಚ ಹೆಚ್ಚೇ ಸಮಯ ತೆಗೆದುಕೊಳ್ಳುತ್ತದೆ. ಅರವಳಿಕೆಯ ಪ್ರಭಾವ ಇಳಿದ ಬಳಿಕ ಈ ಭಾಗ ಸ್ಪರ್ಶಿಸಲೂ ಆಗದಷ್ಟು ಸೂಕ್ಷ್ಮಸಂವೇದನೆ ಪಡೆಯುತ್ತದೆ. ಪರಿಣಾಮವಾಗಿ ಈ ಭಾಗ ಕೊಂಚ ಊದಿಕೊಂಡಿದ್ದು ಕೆಂಪಗಾಗಿರುತ್ತದೆ. ಹೊಲಿಗೆಯ ಭಾಗದಲ್ಲಿ ಕೊಂಚ ತುರಿಕೆಯೂ ಎದುರಾಗಬಹುದು. ಸಾಮಾನ್ಯವಾಗಿ ಈ ಅಹಿತಕರ ಅನುಭವ ನಿಧಾನವಾಗಿ ಕಡಿಮೆಯಾಗುತ್ತಾ ಸುಮಾರು ಏಳರಿಂದ ಹತ್ತು ದಿನಗಳ ಬಳಿಕ ಪೂರ್ಣವಾಗಿ ಇಲ್ಲವಾಗುತ್ತದೆ. ಕುಳಿತುಕೊಳ್ಳುವ ಯಾವುದೇ ಭಂಗಿಯಲ್ಲಿ ಹೊಲಿಗೆಯ ಭಾಗದ ಮೇಲೆ ದೇಹದ ಭಾರ ಬಿದ್ದೇ ಬೀಳುವ ಕಾರಣ ಬಾಣಂತಿಗೆ ಕುಳಿತುಕೊಳ್ಳುವುದು ಅಹಿತಕರವಾಗಿ ಪರಿಣಮಿಸಬಹುದು. ಇದಕ್ಕಾಗಿ ದಿಂಬುಗಳ ಮೇಲೆ ದೇಹದ ಭಾರ ಬೀಳುವಂತೆ ಮಾಡಿ ಕುಳಿತುಕೊಳ್ಳಬಹುದು.

3) ಹೆರಿಗೆಯ ಬಳಿಕ ಎದುರಾಗುವ ಸೆಡೆತಗಳು

ಹೆರಿಗೆಗೂ ಮುನ್ನ ದೇಹದಲ್ಲಿ ಕೆಲವಾರು ಸೆಡೆತಗಳು ಎದುರಾಗುತ್ತವೆ. ಹೆರಿಗೆಯ ಸಮಯ ಹತ್ತಿರಾಗುತ್ತಿದ್ದಂತೆಯೇ ಈ ಸೆಡೆತಗಳೂ ಹೆಚ್ಚುತ್ತಾ ಹೋಗುತ್ತವೆ. ಹೆರಿಗೆಯ ಬಳಿಕವೂ ಈ ಸೆಡೆತಗಳು ಮುಂಚಿನಷ್ಟಿಲ್ಲದಿದ್ದರೂ ಸರಿ, ಇರುತ್ತವೆ. ಏಕೆಂದರೆ ಹೆರಿಗೆಯ ಸಮಯದಲ್ಲಿ ಅಪಾರವಾಗಿ ಹಿಗ್ಗಿದ್ದ ಗರ್ಭಾಶಯ ಮತ್ತೆ ಮೊದಲಿನ ಸ್ಥಿತಿಗೆ ಮರಳಲು ಈ ಸೆಡೆತಗಳು ಅವಶ್ಯವಾಗಿವೆ. ಅಲ್ಲದೇ ಗರ್ಭಾಶಯದ ಹಳೆಯ ಜೀವಕೋಶಗಳು ಅಥವಾ ಮಾಸುವಿನ ಉಳಿದ ಭಾಗದ ಅಂಶವೇನಾದರೂ ಉಳಿದಿದ್ದರೆ ಇದನ್ನು ದೇಹ ಈ ಸೆಡೆತಗಳ ಮೂಲಕ ಮುಂದೂಡಿ ದೇಹದಿಂದ ವಿಸರ್ಜಿಸುತ್ತದೆ. ಈ ಸೆಡೆತಗಳು ಸಹಜ ಆರೋಗ್ಯದ ಲಕ್ಷಣವಾಗಿವೆ ಹಾಗೂ ಇವುಗಳನ್ನು ತಡೆಯಲು ಯತ್ನಿಸಬಾರದು. ಆದರೆ ಸೂಕ್ಷಸಂವೇದಿಯಾಗಿರುವ ದೇಹದ ಕೆಳಭಾಗಕ್ಕೆ ಈ ಸೆಡೆತಗಳು ಕಿರಿಕಿರಿ ಎನಿಸುತ್ತದೆ. ಹಾಗಾಗಿ ಇವುಗಳನ್ನು ಸುಲಭವಾಗಿಸಲು ಹೊಟ್ಟೆಯ ಭಾಗದಲ್ಲಿ ಬಿಸಿನೀರಿನ ಕಾವು ನೀಡುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ. ಹಾಗಾಗಿ ಬಾಣಂತಿಯ ದೇಹಕ್ಕೆ, ವಿಶೇಷವಾಗಿ ಸೊಂಟ ಮತ್ತು ಹೊಟ್ಟೆಯ ಭಾಗದಲ್ಲಿ ಬಿಸಿನೀರಿನ ಕಾವನ್ನು ನೀಡುವುದು ಅಗತ್ಯವಾಗಿದ್ದು ಸುಮಾರು ಎರಡು ವಾರಗಳವರೆಗಾದರೂ ಮುಂದುವರೆಸಬೇಕು.

Most Read: ಈ 5 ರಾಶಿಯವರು ಕಷ್ಟಪಡದೇ- ಜೀವನದಲ್ಲಿ ಸುಖ ಭೋಗಗಳನ್ನು ಹೊಂದಲು ಇಷ್ಟಪಡುತ್ತಾರೆ!

4) ಮಲಬದ್ದತೆ:

ಹೆರಿಗೆಗೂ ಮುನ್ನ ಹೆರಿಗೆಯ ನೋವನ್ನು ಸಹಿಸಿಕೊಳ್ಳಲು ವೈದ್ಯರು ಸೂಚಿಸಿದ ಹಲವಾರು ಔಷಧಿಗಳ ಸೇವನೆಯ ಪರಿಣಾಮವಾಗಿ ಹೆರಿಗೆಯ ಬಳಿಕ ಅನಿವಾರ್ಯವಾಗಿ ಮಲಬದ್ದತೆಯನ್ನು ಅನುಭವಿಸಬೇಕಾಗುತ್ತದೆ. ಅದರಲ್ಲೂ ಹೆರಿಗೆ ಸುಲಭವಾಗಲು ನಡೆಸಿದ ಶಸ್ತ್ರಚಿಕಿತ್ಸೆಯ ಬಳಿಕವಂತೂ ಮಲವಿಸರ್ಜನೆ ಭಾರೀ ತ್ರಾಸಿನ ಮತ್ತು ನೋವು ನೀಡುವ ಕಾರ್ಯವಾಗುತ್ತದೆ. ಹಾಗಾಗಿ ಹೆರಿಗೆಯ ಬಳಿಕ ಸುಲಭವಾಗಿ ವಿಸರ್ಜನೆಯಾಗುವ ಆಹಾರಗಳನ್ನೇ ಸೇವಿಸುವುದು ಅಗತ್ಯವಾಗಿದೆ. ಸುಲಭ ಮಲವಿಸರ್ಜನೆಗೆ ನೆರವಾಗುವ ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು. ಒಂದು ವೇಳೆ ಮಲವಿಸರ್ಜನೆ ಕೊಂಚ ಕಷ್ಟವಾಗಿದ್ದರೆ ವೈದ್ಯರಿಗೆ ಯಾವುದೇ ಮುಜುಗರವಿಲ್ಲದೇ ತಿಳಿಸಬೇಕು. ಈ ಸಮಯದಲ್ಲಿ ಮಲವನ್ನು ಸಡಿಲಗೊಳಿಸುವ ಔಷಧಿಗಳನ್ನು ವೈದ್ಯರು ಸಲಹೆ ಮಾಡುತ್ತಾರೆ ಹಾಗೂ ಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಸೂಚಿಸಿದ ಪ್ರಮಾಣದಷ್ಟು ಔಷಧಿಗಳನ್ನು ಸೇವಿಸುತ್ತಾ ಬಂದರೆ ಈ ತೊಂದರೆ ಇಲ್ಲವಾಗುತ್ತದೆ. ಸಾಮಾನ್ಯವಾಗಿ ಬಾಣಂತಿಯರು ಈ ಬಗ್ಗೆ ಸ್ಪಷ್ಟವಾಗಿ ಹೇಳಲು ಮುಜುಗರ ಪಡುತ್ತಾರೆ ಹಾಗೂ ಮಲಬದ್ದತೆಯ ತೊಂದರೆಯನ್ನು ಮೌನವಾಗಿ ಸಹಿಸಿಕೊಂಡಿರುತ್ತಾರೆ.

5) ಸೋಂಕುಗಳು (ಎಂಡೋಮೆಟ್ರೈಟಿಸ್ ಮತ್ತು ಮಾಸ್ಟೈಟಿಸ್)

ಹೆರಿಗೆಯ ಸಮಯದಲ್ಲಿ ವೈದ್ಯರು ಸೋಂಕು ಎದುರಾಗದಂತೆ ಗರಿಷ್ಟ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಆದರೆ ಜನನಾಂಗದಲ್ಲಿ ಈಗಾಗಲೇ ಇರುವ ಕೆಲವು ನೈಸರ್ಗಿಕ ಬ್ಯಾಕ್ಟೀರಿಯಾಗಳು ಹೆರಿಗೆಯ ಬಳಿಕ ಸೋಂಕಿಗೆ ಕಾರಣವಾಗುತ್ತವೆ. ಈ ಸ್ಥಿತಿಯನ್ನು ವೈದ್ಯರು endometritis ಎಂದು ಕರೆಯುತ್ತಾರೆ. ಹೆರಿಗೆಯ ಬಳಿಕ ಹಿಮ್ಮುಖ ಸಾಗುವ ದ್ರವದ ಜೊತೆಗೇ ಈ ಬ್ಯಾಕ್ಟೀರಿಯಾಗಳೂ ಗರ್ಭಕಂಠದವರೆಗೂ ಸಾಗಿ ಗರ್ಭಾಶಯಕ್ಕೂ ನುಸುಳಬಹುದು. ಪರಿಣಾಮವಾಗಿ ಗರ್ಭಾಶಯದ ಒಳಗೋಡೆಗಳಲ್ಲಿಯೂ ಸೋಂಕು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಸಹಜ ಹೆರಿಗೆಯಲ್ಲಿ ಈ ಸೋಂಕಿನ ಸಾಧ್ಯತೆ ಗರಿಷ್ಟವಾಗಿರುತ್ತದೆ. ಇದೇ ರೀತಿಯಾಗಿ ಸ್ತನಗಳ ಒಳಭಾಗದಲ್ಲಿರುವ ಗ್ರಂಥಿಗಳಲ್ಲಿಯೂ ಕೆಲವು ಬ್ಯಾಕ್ಟೀರಿಯಾಗಳು ಆವರಿಸಿ ಸೋಂಕು ಉಂಟುಮಾಡುತ್ತವೆ ಹಾಗೂ ಸ್ತನಗಳಲ್ಲಿ ಹಾಲು ತುಂಬಿಕೊಂಡರೂ ತೊಟ್ಟಿನ ಮೂಲಕ ಹೊರಬರದಂತೆ ಅಡ್ಡಿಯುಂಟುಮಾಡುತ್ತವೆ. ಈ ಸೋಂಕಿಗೆ mastitis ಎಂದು ಕರೆಯುತ್ತಾರೆ. ಈ ಸೋಂಕು ಉಂಟಾದರೆ ಸ್ತನಗಳು ಬಿರಿಯುವಂತೆ ಹಿಗ್ಗುತ್ತವೆ ಹಾಗೂ ಸ್ತನತೊಟ್ಟಿನಲ್ಲಿ ನೋವು ಎದುರಾಗುತ್ತದೆ. ಸ್ತನದ ಚರ್ಮ ಕೆಂಪಗಾಗಿ ಕೊಂಚ ಬಿಸಿಯಾಗಿರುವಂತೆ ತೋರುತ್ತದೆ. ಈ ತೊಂದರೆಗಳನ್ನು ವೈದ್ಯರಲ್ಲಿ ತಕ್ಷಣವೇ ವಿವರಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ತುಂಬಾ ಅವಶ್ಯವಾಗಿದೆ.

6) ತೂಕದಲ್ಲಿ ಇಳಿಕೆ

ಸಹಜ ಹೆರಿಗೆಯ ಬಳಿಕ ಬಾಣಂತನದ ಆರು ವಾರಗಳ ಅವಧಿಯಲ್ಲಿ ತಾಯಿ ಗರ್ಭಾವಸ್ಥೆಯಲ್ಲಿ ಪಡೆದಿದ್ದ ತೂಕದ ಅರ್ಧದಷ್ಟನ್ನು ಕಳೆದುಕೊಳ್ಳುತ್ತಾಳೆ. ಅಲ್ಲದೇ ಬಾಣಂತಿಯ ದೇಹ ಇನ್ನೂ ಹಿಮ್ಮುಖ ಬದಲಾವಣೆಯ ದಾರಿಯಲ್ಲೇ ಇರುವುದರಿಂದ ಮೊದಲಿನ ಅಂಗಸೌಷ್ಠವವನ್ನು ಪಡೆಯಲು ಆತುರ ಖಂಡಿತಾ ಪಡಬಾರದು. ಏಕೆಂದರೆ ಎಲ್ಲಾ ಬದಲಾವಣೆಗಳ ಬಳಿಕ ಮೊದಲಿನ ಅಂಗಸೌಷ್ಟವ ಪಡೆಯಲು ದೇಹ ನೈಸರ್ಗಿಕವಾದ ಗತಿಯನ್ನೇ ಅನುಸರಿಸಿದಷ್ಟೂ ಒಳ್ಳೆಯದು. ಅಲ್ಲದೇ ಈ ಅವಧಿಯಲ್ಲಿ ಆದಷ್ಟೂ ಪೌಷ್ಟಿಕ ಆಹಾರ, ಸಾಕಷ್ಟು ನಿದ್ದೆಯನ್ನು ಪಡೆಯಬೇಕು ಹಾಗೂ ಈ ಮೂಲಕ ಮಗುವಿಗೆ ಅಗತ್ಯವಾದ ತಾಯಿಹಾಲನ್ನು ಒದಗಿಸಲು ಸಾಧ್ಯವಾಗುತ್ತದೆ.

Most Read: ಒಂದೇ ಒಂದು 'ಟೊಮೆಟೊ' ಕೂದಲಿನ ಅಂದ-ಚೆಂದ ಹೆಚ್ಚಿಸುತ್ತದೆ!

7) ಮೂತ್ರ ವಿಸರ್ಜನೆ ಕಷ್ಟಕರವಾಗುವುದು-

ಸಹಜ ಹೆರಿಗೆಯ ಸಮಯದಲ್ಲಿ ಮೂತ್ರನಾಳ ಮತ್ತು ಸುತ್ತಲಿನ ನರಗಳು ಮತ್ತು ಸ್ನಾಯುಗಳು ಸಹಾ ಹೆಚ್ಚಿನ ಸೆಳೆತಕ್ಕೆ ಒಳಗಾಗುತ್ತವೆ ಹಾಗೂ ಹೆರಿಗೆಯ ಬಳಿಕ ಮೂತ್ರವಿಸರ್ಜನೆ ಕಷ್ಟಕರವಾಗುತ್ತದೆ. ಸೆಳೆತದ ಪರಿಣಾಮವಾಗಿ ಈ ನರಗಳು, ನಾಳಗಳು ಮತ್ತು ಮೂತ್ರಕೋಶದ ಗೋಡೆಗಳು ಕೊಂಚ ಸೀಳಿದ್ದು ಈ ಮೂಲಕ ಧಾವಿಸುವ ಮೂತ್ರ ಭಾರೀ ಉರಿಯನ್ನುಂಟುಮಾಡುತ್ತದೆ. ಅಲ್ಲದೇ ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೂ ಕುಗ್ಗುತ್ತದೆ. ಪರಿಣಾಮವಾಗಿ ಕೆಮ್ಮು, ದೊಡ್ಡದನಿಯ ನಗು, ಸೀನು ಮೊದಲಾದ ಸಂದರ್ಭಗಳಲ್ಲಿ ಅನೈಚ್ಛಿಕವಾಗಿ ಕೊಂಚ ಮೂತ್ರ ಹೊರಬರಹುದು. ಪ್ರತಿ ಬಾಣಂತಿಗೂ ಇದು ಸಾಮಾನ್ಯವಾಗಿದ್ದು ಒಂದು ವಾರ ಅಥವಾ ಹತ್ತು ದಿನಗಳವರೆಗೆ ಇದು ಕಾಣಿಸಿಕೊಳ್ಳಬಹುದು. ಈ ಉರಿಯನ್ನು ತಡೆದುಕೊಳ್ಳಲು ಮೂತ್ರ ವಿಸರ್ಜನೆಯ ಸಮಯದಲ್ಲಿ ತಣ್ಣೀರನ್ನು ಕೊಂಚ ಮೇಲಿನಿಂದ ನಿಧಾನವಾಗಿ ಸುರಿದುಕೊಳ್ಳುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಇನ್ನೂ ಉತ್ತಮ ವಿಧಾನವೆಂದರೆ ಮೂತ್ರ ವಿಸರ್ಜನೆಯ ಸಮಯದಲ್ಲಿ ಯೋನಿಯ ಸ್ನಾಯುಗಳನ್ನು ಸಂಕುಚಿಸಿ ವಿಕಸಿಸುವ ವ್ಯಾಯಾಮ (ಕೀಗಲ್ ವ್ಯಾಯಾಮ - Kegel exercises) ಗಳನ್ನು ನಿರ್ವಹಿಸುವ ಮೂಲಕ ಈ ಉರಿಯನ್ನು ಸಮರ್ಥವಾಗಿ ನಿರ್ವಹಿಸಬಹುದು.

ಬಾಣಂತಿಯ ದೇಹ ಮೊದಲ ಸ್ಥಿತಿಗೆ ಮರಳುವ ಚೇತರಿಕೆಯ ಅವಧಿ ಅಥವಾ ಬಾಣಂತನದ ಅವಧಿಯೂ ತುಂಬಾ ಮುಖ್ಯವಾಗಿದೆ. ಈ ಅವಧಿಯಲ್ಲಿ ನಿಮಗೆ ಹೆಚ್ಚಿನ ಸಹಾಯ ಮತ್ತು ಸಹಕಾರದ ಅಗತ್ಯವಿದ್ದು ನಿಮ್ಮ ಮತ್ತು ನಿಮ್ಮ ಮಗುವಿನ ಲಾಲನೆಗಾಗಿ ಆಪ್ತರೊಬ್ಬರು ಸದಾ ನಿಮ್ಮ ಬಳಿ ಇರುವುದು ಅಗತ್ಯವಾಗಿದೆ. ಇದರೊಂದಿಗೆ ನಿಮ್ಮ ಸಂಗಾತಿ, ಮನೆಯ ಸದಸ್ಯರು, ಆತ್ಮೀಯರು ಮತ್ತು ಹಿತೈಷಿಗಳ ಸತತ ಪ್ರೀತಿ, ವಿಶ್ವಾಸ ಮತ್ತು ನೆರವಿನ ಮೂಲಕ ಶೀಘ್ರ ಚೇತರಿಕೆಗೆ ನೆರವಾಗುತ್ತದೆ ಹಾಗೂ ಕೆಲವೇ ದಿನಗಳಲ್ಲಿ ಹಿಂದಿನ ಜೀವನಕ್ಕೆ ಉತ್ತಮ ಆರೋಗ್ಯದೊಂದಿಗೆ ಮರಳಲು ಸಾಧ್ಯವಾಗುತ್ತದೆ.

Read more about: ಹಾಲು ತಾಯಿ breast
English summary

Recovery After Vaginal Delivery - What To Expect?

They say that the most difficult part of pregnancy is over after delivering your baby. But they certainly forgot about the postpartum issues that a mother faces after giving birth. Most of the time, pregnancy is all about the baby and once the baby arrives, the family usually focuses more on the newborn, ignoring the mother. In fact, even the mother ignores herself as her motherly instincts take over in the joy of giving birth to the baby. In fact, this is the time, when you need to take care of yourself as much as your baby needs you. Your body has literally gone through hell while giving birth to your baby. If you have had a vaginal delivery, your very basic actions such as sitting, peeing or even passing bowel may become a Herculean task.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more