For Quick Alerts
ALLOW NOTIFICATIONS  
For Daily Alerts

ಪೋಷಕರೇ ರಿಲ್ಯಾಕ್ಸ್, ಇನ್ನು ಮುಂದೆ ಶಾಲೆಯ ಸಮೀಪ ಜಂಕ್‌ಫುಡ್ಸ್ ಸಿಗಲ್ಲ

|

ಇಂದಿನ ಮಕ್ಕಳಿಗೆ ಹೊಟ್ಟೆ ತುಂಬಿಸುವುದೇ ಪೋಷಕರಿಗೆ ದೊಡ್ಡ ಸಾಹಸವಾಗಿ ಬಿಟ್ಟಿದೆ. ಬೆಳಗ್ಗೆ ಬಾಕ್ಸ್‌ಗೆ ಏನು ತುಂಬಲಿ ಚಪಾತಿ ಕೊಡ್ಲಾ, ಅನ್ನ ಕೊಡ್ಲಾ ಅಂತ ಅಮ್ಮ ಕೇಳುತ್ತಿದ್ದರೆ ಮಕ್ಕಳು ನಮಗೆ ಕೇಳಿಸಿಯೇ ಇಲ್ಲ ಎನ್ನುವಂತೆ ಸುಮ್ಮನೆ ಕೂತಿರುತ್ತಾರೆ. ಇನ್ನು ಹಣ್ಣುಗಳನ್ನು ತಿನ್ನು-ತಿನ್ನು ಅಂತ ಒತ್ತಾಯಿಸಿದರೂ ತಿನ್ನುವುದು ಕಷ್ಟ. ಇನ್ನು ಕೆಲ ಮಕ್ಕಳಂತೂ ತರಕಾರಿ ತಿನ್ನಲ್ಲ, ಹಣ್ಣುಗಳು ಬೇಡ, ಅನ್ನ, ಮುದ್ದೆ, ಚಪಾತಿ, ಇಡ್ಲಿ ಇಂಥ ಆಹಾರಗಳು ಬೇಡ್ವೇ ಬೇಡ, ಹಾಗಾದರೆ ಇನ್ನೇನು ತಿಂದು ಬದುಕುತ್ತವೆ ಎಂದು ನೋಡಿದರೆ ಬರೀ ಜಂಕ್‌ಫುಡ್‌ಗಳಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತವೆ.

Junk food

ಇನ್ನು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರುವಾಗ ಅದರ ಪಕ್ಕ ಜಂಕ್‌ಫುಡ್ಸ್ ಅಂಗಡಿಯಿದ್ದರೆ ತಲೆನೋವು ತಪ್ಪಿದ್ದಲ್ಲ, ಕೊಡಿಸಲೇಬೇಕಾಗುತ್ತದೆ, ಇನ್ನು ಮೇಲೆ ಆ ತಲೆನೋವು ಇಲ್ಲ ಬಿಡಿ. ಏಕೆಂದರೆ ಕರ್ನಾಟಕದ ಶಾಲೆಗಳ ಅಕ್ಕ-ಪಕ್ಕದಲ್ಲಿ ಯಾವುದೇ ಜಂಕ್‌ಫುಡ್‌ ಅಂಗಡಿಗಳು ಇನ್ನು ಮುಂದೆ ಕಾಣ ಸಿಗುವುದಿಲ್ಲ. ಶಾಲೆಯಿಂದ 50 ಮೀಟರ್ ಒಳಗೆ ಯಾವುದೇ ಜಂಕ್‌ಫುಡ್ಸ್‌ ಅಂಗಡಿಗಳು ಇರಬಾರದೆಂದು ಕರ್ನಾಟಕ ಸರಕಾರ ನವೆಂಬರ್‌ 14ರಂದು ಈ ರೀತಿಯ ಆದೇಶ ಹೊರಡಿಸಿದ್ದು, ಈ ಆದೇಶ ಶೀಘ್ರದಲ್ಲಿಯೇ ಚಾಲ್ತಿಗೆ ಬರಲಿದೆ.

ಮಕ್ಕಳ ಆರೋಗ್ಯಕ್ಕೆ ಸರಕಾರ ಮುಂದಾಗಿದೆ, ಪೋಷಕರೇ ನೀವು?

ಆರೋಗ್ಯಕರ ಆಹಾರಕ್ಕೆ ಹೋಲಿಸಿದರೆ ಜಂಕ್‌ಫುಡ್‌ಗಳು ರುಚಿಯಲ್ಲಿ ಮಕ್ಕಳನ್ನು ಸೆಳೆಯುತ್ತವೆ. ಆದರೆ ಈ ಆಹಾರಗಳನ್ನು ನೀಡುವುದರಿಂದ ಮಕ್ಕಳ ದೈಹಿಕ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು. ಜಂಕ್‌ ಫುಡ್ಸ್ ತಿನ್ನುವ ಅಭ್ಯಾಸದಿಂದ ಚಿಕ್ಕ ಪ್ರಾಯದಲ್ಲಿಯೇ ಒಬೆಸಿಟಿ, ಅಧಿಕ ರಕ್ತದೊತ್ತಡ, ಖಿನ್ನತೆ, ಪೋಷಕಾಂಶದ ಕೊರತೆ ಈ ರೀತಿಯ ಸಮಸ್ಯೆಗಳು ಕಂಡು ಬರುವುದು. ಮಕ್ಕಳು ದೈಹಿಕವಾಗಿ ಗಟ್ಟಿಮುಟ್ಟಾಗಿ ಇದ್ದರೆ ಅವರ ಮನಸ್ಸು ಕೂಡ ಚುರುಕಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಆರೋಗ್ಯಕರ ಆಹಾರಶೈಲಿ ರೂಢಿಸುವುದು ಪೋಷಕರ ಕರ್ತವ್ಯವಾಗಿದೆ.

ಯಾವ ಆಹಾರ ಒಳ್ಳೆಯದು ಎಂಬ ಅರಿವು ಮಕ್ಕಳಿಗೆ ಇರುವುದಿಲ್ಲ

ಮಕ್ಕಳು ತಮಗೆ ರುಚಿ ಅನಿಸಿದ ಆಹಾರಗಳನ್ನು ತಿನ್ನಲು ಇಷ್ಟಪಡುತ್ತೇವೋ ಹೊರತು, ಯಾವ ಆಹಾರ ಒಳ್ಳೆಯದು, ಯಾವುದು ಒಳ್ಳೆಯದಲ್ಲ ಎಂಬ ಅರಿವು ಅವರಿಗೆ ಇರುವುದಿಲ್ಲ. ಮಕ್ಕಳು ಆರೋಗ್ಯಕರ ಆಹಾರ ತಿನ್ನಬೇಕೆಂದು ನೀವು ಬಯಸುವುದಾದರೆ ಮನೆಯಲ್ಲಿ ಮೊದಲು ಆರೋಗ್ಯಕರ ಆಹಾರಶೈಲಿ ರೂಢಿಸಿಕೊಳ್ಳಬೇಕಾಗುತ್ತದೆ. ಪಿಜ್ಜಾ, ಬರ್ಗರ್‌ ಮುಂತಾದ ಜಂಕ್‌ಫುಡ್ಸ್ ಆನ್‌ಲೈನ್‌ನಲ್ಲಿ ತರಿಸುತ್ತಿದ್ದರೆ ಅದಕ್ಕೆ ಮೊದಲು ಕಡಿವಾಣ ಹಾಕಬೇಕಿದೆ. ಮನೆಯಲ್ಲಿ ಆರೋಗ್ಯಕರ ಆಹಾರವನ್ನು ರುಚಿಕರವಾಗಿ ತಯಾರಿಸಿದರೆ ಖಂಡಿತ ಮಕ್ಕಳಿಗೆ ಇಷ್ಟವಾಗುವುದು. ಅಲ್ಲದೆ ಮಕ್ಕಳು ಹಠಮಾಡಿದಾಗ ಜಂಕ್‌ಫುಡ್ಸ್ ಕೊಡಿಸದಿದ್ದರೆ ಮಕ್ಕಳು ಮನೆ ಅಡುಗೆಯನ್ನು ತಿನ್ನಲು ಅಭ್ಯಾಸ ಮಾಡಿಕೊಳ್ಳುತ್ತವೆ.

ಜಂಕ್‌ ಫುಡ್‌ ಯಾವಾಗ ನೀಡಬಹುದು?

ಮಕ್ಕಳಿಗೆ ಜಂಕ್‌ಫುಡ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ, ಎಂದು ಜಂಕ್‌ ಫುಡ್ಸ್‌ ಕೊಡಿಸುವುದೇ ಇಲ್ಲ ಅಂತ ತೀರ್ಮಾನಕ್ಕೆ ಬರುವುದು ತಪ್ಪು. ಏಕೆಂದರೆ ಮಕ್ಕಳು ಟಿವಿಯಲ್ಲಿ ಬರುವ ಜಾಹೀರಾತುಗಳನ್ನು ನೋಡಿ ಬೇಕೆಂದು ಕೇಳುತ್ತಾರೆ, ನೀವು ಜಂಕ್‌ಫುಡ್ಸ್ ಕೊಡಿಸದೇ ಹೋದರೆ ಆ ಆಹಾರ ವಸ್ತುಗಳ ಕಡೆ ಮಕ್ಕಳಿಗೆ ಆಕರ್ಷಕಣೆ ಹೆಚ್ಚಾಗುತ್ತದೆ. ಮಕ್ಕಳು ಬೆಳೆಯುತ್ತಿದ್ದಂತೆ ನಿಮಗೆ ಗೊತ್ತಿಲ್ಲದೆ ಅವುಗಳನ್ನು ತಿನ್ನಲು ಶುರು ಮಾಡುತ್ತವೆ. ಆದ್ದರಿಂದ ಅಪರೂಪಕ್ಕೆ ಜಂಕ್‌ಫುಡ್ಸ್ ಕೊಡಿಸುವುದರಲ್ಲಿ ತಪ್ಪಿಲ್ಲ, ಆದರೆ ಅದೇ ಅಭ್ಯಾಸವಾಗಬಾರದು ಅಷ್ಟೇ.

English summary

No junk foods available near schools at karnataka

Karnataka government banned Junk food like soft drinks, burger, noodles, fries, in or around the school in Karnataka.
X
Desktop Bottom Promotion