For Quick Alerts
ALLOW NOTIFICATIONS  
For Daily Alerts

ವಿಶೇಷ ಚೇತನ ಮಕ್ಕಳು ಶಾಪವಲ್ಲ ವರವೆಂದು ಭಾವಿಸಿ..! ಈ ಕೆಲವು ಮಿಥ್ಯೆಗಳನ್ನು ಮನಸ್ಸಿನಿಂದ ಹೊರಹಾಕಿ..!

ವಿಶೇಷ ಚೇತನ ಮಕ್ಕಳು ಶಾಪವಲ್ಲ ವರವೆಂದು ಭಾವಿಸಿ..! ಈ ಕೆಲವು ಮಿಥ್ಯೆಗಳನ್ನು ಮನಸ್ಸಿನಿಂದ ಹೊರಹಾಕಿ..!

|

ಬೌದ್ಧಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ಅಸಾಮರ್ಥ್ಯವನ್ನು ಹೊಂದಿರುವ ವಿಶೇಷ ಚೇತನ ಮಕ್ಕಳಿಗೆ ವಿಶೇಷ ಆರೈಕೆಯೊಂದಿಗೆ ಶಿಕ್ಷಣವೂ ಬೇಕು. ವಿಶೇಷ ಚೇತನರೆಂದರೆ ಮಾನಸಿಕ ಮತ್ತು ದೈಹಿಕ ದೌರ್ಬಲ್ಯಗಳುಳ್ಳಂತಹ ಮಕ್ಕಳು. ಸಾಮಾನ್ಯವಾಗಿ ಈ ಮಕ್ಕಳು ಇತರ ಮಕ್ಕಳೊಂದಿಗೆ ಬೆರೆಯುವುದು ಸ್ವಲ್ಪ ಕಷ್ಟವೇ. ಈ ವಿಶೇಷಚೇತನ ಮಕ್ಕಳ ಮನಸ್ಸು ಸೂಕ್ಷ್ಮವಾದುದು ಹಾಗಾಗಿ ಇಂತಹ ಮಕ್ಕಳಿಗೆ ವಿಶೇಷವಾಗಿ ಕಾಳಜಿ ತೋರಿಸಬೇಕಾಗುತ್ತದೆ.

special education

ಹೈಪರ್‌ಆಕ್ಟಿವಿಟಿ ಡಿಸಾರ್ಡರ್‌, ಆಟಿಸಂ, ವರ್ತನೆಯಲ್ಲಿ ಸಮಸ್ಯೆ, ಸೆರೆಬ್ರಲ್‌ ಪಾಲ್ಸಿ, ಸೀಳು ತುಟಿ, ಸಿಸ್ಟಿಕ್‌ ಫೈಬ್ರೋಸಿಸ್‌ ಮತ್ತು ಡೌನ್‌ ಸಿಂಡ್ರೋಮ್‌ ಇರುವಂತಹ ಮಕ್ಕಳಿಗೆ ವಿಶೇಷವಾದ ಕಲಿಕೆಯ ಅಗತ್ಯವಿದೆ. ಈ ವಿಶೇಷ ಅಗತ್ಯವಿರುವ ಮಕ್ಕಳನ್ನು ವಿಶೇಷ ಚೇತನರೆಂದೂ ಕರೆಯುತ್ತಾರೆ.ಈ ಮಕ್ಕಳಲ್ಲಿ ಸಾಮಾನ್ಯವಾಗಿ ದೈಹಿಕ ಚಲನೆ, ಕಲಿಕೆ, ಸಂವಹನ, ಮತ್ತು ದೈನಂದಿನ ಜೀವನದ ಕ್ರಿಯೆಗಳನ್ನು ಸ್ವತಃ ನಿರ್ವಹಿಸಲು ಸಮಸ್ಯೆಯನ್ನು ಕಾಣುತ್ತೇವೆ. ಇಂತಹ ಮಕ್ಕಳನ್ನು ನೋಡಿಕೊಳ್ಳುವುದು ಪೋಷಕರಿಗೆ ಸವಾಲಿನ ಕೆಲಸ. ಅದರಲ್ಲೂ ಈ ಮಕ್ಕಳ ಕುರಿತಾಗಿ ಸಮಾಜದಲ್ಲಿ ಕೆಲವೊಂದು ತಪ್ಪು ಕಲ್ಪನೆಗಳಿವೆ. ಅದನ್ನು ಮೊದಲು ಸರಿಪಡಿಸಬೇಕಾಗಿದೆ. ಅಂತಹ ತಪ್ಪುಕಲ್ಪನೆಗಳೇನು ಎನ್ನುವುದನ್ನು ನೋಡುವುದಾದರೆ:

೧. ವಿಶೇಷ ಚೇತನ ಮಕ್ಕಳು ಮಾನಸಿಕ ವಿಕಲಾಂಗರು ಎನ್ನುವುದು

ವಿಶೇಷಚೇತನರು ಅಂದರೆ ಅಂಗವೈಕಲ್ಯವನ್ನು ಹೊಂದಿರುವ ಮಕ್ಕಳು ದೈಹಿಕ ಚಲನೆಯಲ್ಲಿ, ಕಲಿಕೆ, ಮಾತು ಮತ್ತು ಪರಸ್ಪರ ಕ್ರಿಯೆಯಂತಹ ಕೆಲಸಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಎಲ್ಲಾ ವಿಶೇಷ ಚೇತನ ಮಕ್ಕಳೂ ಮಾನಸಿಕವಾಗಿ ಸಮಸ್ಯೆ ಹೊಂದಿರುವುದಿಲ್ಲ. ಕೆಲವೊಮ್ಮೆ ಬೌದ್ಧಿಕವಾಗಿ ಇಂತಹ ಮಕ್ಕಳು ಸಾಮಾನ್ಯ ಆರೋಗ್ಯವಂತ ಮಕ್ಕಳಿಗಿಂತಲೂ ಹೆಚ್ಚಿನ ಬುದ್ಧಿವಂತಿಕೆ, ಸೃಜನಶೀಲತೆಯನ್ನು ಹೊಂದಿರುತ್ತಾರೆ. ಆಶ್ಚರ್ಯವಾದರೂ ಇದು ಸತ್ಯ.. ಕೆಲವೊಂದು ಕ್ಷೇತ್ರಗಳಲ್ಲಿ ಅವರ ದೈಹಿಕ ದುರ್ಬಲತೆಯ ಕಾರಣದಿಂದ ಶೈಕ್ಷಣಿಕವಾಗಿ ಹಿಂದುಳಿಯಬಹುದು. ಆದರೆ ಎಷ್ಟೋ ಮಂದಿ ಪ್ರತಿಭಾನ್ವಿತರು ಈ ವಿಶೇಷ ಚೇತನ ಮಕ್ಕಳೇ.

೨. ಹೈಪರ್‌ಆಕ್ಟೀವ್‌ ಆಗಿರುವ ಮಗುವಿಗೆ ಆಟಿಸಂ ಇದೆಯೆನ್ನುವುದು

ಅನೇಕರು ಈ ವಿಚಾರದಲ್ಲಿ ಕನ್‌ಫ್ಯೂಸ್‌ಗೆ ಒಳಗಾಗುತ್ತಾರೆ. ಹೈಪರ್‌ಆಕ್ಟೀವ್‌ ಆಗಿರುವುದು ಅಟೆನ್ಶನ್‌ ಡೆಫಿಸಿಟ್‌ ಹೈಪರ್‌ಆಕ್ಟಿವಿಟಿ ಡಿಸಾರ್ಡರ್‌(ADHD) ಎನ್ನುವುದು ನರವಿಜ್ಞಾನಕ್ಕೆ ಸಂಬಂಧಪಟ್ಟ ಸಮಸ್ಯೆಯಾಗಿದೆ. ಅಜಾಗರೂಕತೆ, ಅನಿರೀಕ್ಷಿತ ವರ್ತನೆ, ಹೈಪರ್‌ಆಕ್ಟಿವಿಟಿ ಅಥವಾ ಈ ಎಲ್ಲಾ ವರ್ತನೆಗಳನ್ನು ಅತಿಯಾಗಿ ಹೊಂದಿರುವುದು ಈ ಸಮಸ್ಯೆಯ ಲಕ್ಷಣ.

ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್‌ (ASD)ಎನ್ನುವುದು ಬೆಳವಣಿಗೆ ಮತ್ತು ನಡವಳಿಕೆಯಲ್ಲಿನ ಅಂಗವೈಕಲ್ಯ. ಇದು ಮಗುವಿನ ಮಾತು, ಸಂವಹನ, ಸಾಮಾಜಿಕ ಸಂವಹನ ಮತ್ತು ಕೆಲವೊಮ್ಮೆ ಶೈಕ್ಷಣಿಕ ಬೆಳವಣಿಗೆಯ ಮೇಲೂ ಗಮನಾರ್ಹ ಪರಿಣಾಮ ಬೀರುತ್ತದೆ.

ಮಗುವಿಗೆ ಎಡಿಹೆಚ್‌ಡಿ ಅಥವಾ ಆಟಿಸಂ ಇದೆಯೇ ಎನ್ನುವುದನ್ನು ನಿರ್ಧರಿಸಲು ವೈದ್ಯರ ಸಮಾಲೋಚನೆ ಅಗತ್ಯ. ಮಗುವು ಈ ಮೇಲೆ ತಿಳಿಸಿರುವಂತಹ ಲಕ್ಷಣಗಳನ್ನು ಹೊಂದಿದ್ದಲ್ಲಿ ಮೊದಲು ವೈದ್ಯರನ್ನು ಸಂಪರ್ಕಿಸಿ. ತಾವಾಗಿ ಮಗುವಿಗೆ ಈ ಸಮಸ್ಯೆ ಎನ್ನುವುದನ್ನು ನಿರ್ಧರಿಸಲು ಹೋಗಬೇಡಿ.

೩. ವಿಶೇಷ ಚೇತನ ಮಕ್ಕಳು ಯಶಸ್ಸು ಕಾಣಲು ಸಾಧ್ಯವಿಲ್ಲ ಎನ್ನುವುದು

ಕೆಲವರು ವಿಶೇಷ ಚೇತನ ಮಕ್ಕಳ ಬಗ್ಗೆ ಅವರ ಜೀವನದಲ್ಲಿ ಏನೂ ಸಾಧಿಸಬೇಕಾದುದು ಇಲ್ಲ ಎನ್ನುವುದು. ವಿಶೇಷ ಚೇತನ ಮಕ್ಕಳು ಇತರ ಸಾಮಾನ್ಯ ಮಕ್ಕಳಂತಲ್ಲ. ಸ್ವತಂತ್ರವಾಗಿ ಕಲಿಯಲು ಕಷ್ಟವನ್ನು ಎದುರಿಸುತ್ತಾರೆ. ಪ್ರತಿಯೊಂದು ಮಗುವಿಗೂ ತನ್ನದೇ ಆದ ವ್ಯಕ್ತಿತ್ವ, ಪ್ರತಿಭೆ, ಸ್ವಂತ ಆಲೋಚನೆಗಳಿರುತ್ತದೆ.ಕ್ಲಿಷ್ಟವೆನಿಸಿದ ಸಂದರ್ಭದಲ್ಲಿ ಈ ಮಕ್ಕಳಿಗೆ ಮಾರ್ಗದರ್ಶನ ಹಾಗೂ ಬೆಂಬಲ ನೀಡುವುದು ಪೋಷಕರ, ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ಇತರರ ಬೆಂಬಲ ದೊರೆತಲ್ಲಿ ಈ ಮಕ್ಕಳು ಯಶ ಕಾಣುವುದು ಕಷ್ಟವಲ್ಲ.

ಆರಂಭ ಶಿಕ್ಷಣ ಅಂದರೆ ಪ್ರೀಸ್ಕೂಲ್ ಹಂತದಲ್ಲಿ ಮಕ್ಕಳ ಸಾಮರ್ಥ್ಯವನ್ನು ಗಮನಿಸಿ, ಅವರ ಕೊರತೆಗಳನ್ನು ತುಂಬುವ ಕೆಲಸವನ್ನು ಮಾಡಬೇಕು. ಅಲ್ಲಿನ ಶಿಕ್ಷಣ ಮತ್ತು ಅಲ್ಲಿ ನೀಡುವ ಚಟುವಟಿಕೆಗಳ ಮುಖಾಂತರ ಗ್ರಹಿಕೆಯ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವ ಪ್ರಯತ್ನ ಮಾಡಬೇಕು. ಅವರ ಸಣ್ಣ ಸಣ್ಣ ಯಶಸ್ಸುಗಳನ್ನು ನೀವೂ ಕೂಡಾ ಸಂಭ್ರಮಿಸಲು ಕಲಿಯಿರಿ. ಹೀಗಾದಾಗ ಇನ್ನಷ್ಟು ಯಶಸ್ಸಿನ ಕಡೆಗೆ ದೃಷ್ಟಿಯನ್ನು ಹಾಯಿಸುತ್ತಾರೆ. ಸಣ್ಣ ಮಕ್ಕಳಿರುವಾಗಲೇ ಅವರ ಗ್ರಹಿಕೆಯ ಸಾಮರ್ಥ್ಯವನ್ನು ಬೆಳೆಸುವಂತಹ ಕೆಲಸ ಮಾಡಬೇಕು. ಆಟಿಸಂ, ಸೆರೆಬ್ರಲ್‌ ಪಾಲ್ಸಿ ಇದ್ದೂ ಜೀವನದಲ್ಲಿ ಗೆಲುವನ್ನು ಕಂಡಿರುವಂತಹ ಅನೇಕರಿದ್ದಾರೆ. ಅವರಂತೆ ನಿಮ್ಮ ಮಕ್ಕಳೂ ಕೂಡಾ ಯಶ ಕಾಣುತ್ತಾರೆ ಎನ್ನುವ ಭರವಸೆ ಇರಲಿ.

೪. ಮನೆಯಲ್ಲೇ ಇರಲು ಅರ್ಹರು ಎನ್ನುವುದು

ಹೆಚ್ಚಿನವರು ವಿಶೇಷ ಚೇತನ ಮಕ್ಕಳನ್ನು ಎಲ್ಲಿಗೂ ಕಳಿಸುವುದಿಲ್ಲ. ಬೇರೆಯವರು ಏನಾದರು ಹೇಳುತ್ತಾರೋ ಎನ್ನುವ ಮುಜುಗರ, ಅಥವಾ ಹೊರಗೆ ಹೋದಾಗ ಮಕ್ಕಳು ಯಾವ ರೀತಿ ಆಡುತ್ತಾರೋ, ಅವರನ್ನು ಹೇಗೆ ನಿಭಾಯಿಸುವುದು ಎನ್ನುವ ಆತಂಕದಿಂದ ಮನೆಯೊಳಗೆ ಇರಿಸುತ್ತಾರೆ. ಕೆಲವರಂತೂ ಸಾಮಾನ್ಯ ಮಕ್ಕಳೊಂದಿಗೆ ಈ ವಿಶೇಷ ಚೇತನ ಮಕ್ಕಳನ್ನು ಜೊತೆಯಾಗಿರಲೂ ಬಿಡರು. ಆದರೆ ಇದು ದೊಡ್ಡ ತಪ್ಪು. ವಿಶೇಷ ಅಗತ್ಯವುಳ್ಳಂತಹ ಮಕ್ಕಳಿಗೆ ವಿಶೇಷ ಆರೈಕೆಯ ಅಗತ್ಯವಿದೆ ಎನ್ನುವುದು ಸತ್ಯ. ಆದರೆ ಅವರು ಮನೆಯೊಳಗೇ ಇರಬೇಕೆಂದಿಲ್ಲ. ತಮ್ಮದೇ ವಯಸ್ಸಿನ ಇತರ ಸಾಮಾನ್ಯ ಮಕ್ಕಳಂತೆ ಕಲಿಯಲು ಹಾಗೂ ಆಡಲೂ ಅರ್ಹರು ಎನ್ನುವುದು ನೆನಪಿರಲಿ. ವಿಶೇಷ ಚೇತನ ಮಗುವಿಗೂ ಶಾಲೆಗೆ ಹೋಗುವ ಹಕ್ಕಿದೆ. ಮೊದಲಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ನಾಚಿಕೆ ಪಡುವ ಅಗತ್ಯವಿಲ್ಲ. ಮಕ್ಕಳು ಹೇಗಿರುತ್ತಾರೋ ಅದರಂತೆಯೇ ಅವರನ್ನು ಸ್ವೀಕರಿಸಿ ಮತ್ತು ಬೆಂಬಲಿಸಿ.

ಎಷ್ಟೋ ಜನ ಈ ವಿಕಲಾಂಗ, ವಿಶೇ‍ಷ ಚೇತನ ಮಕ್ಕಳು ಯಾವ ಜನ್ಮದ ಪಾಪಕರ್ಮವೋ ಎಂದುಬಿಡುತ್ತಾರೆ. ಕೊನೆಯವರೆಗೂ ಹೀಗೆಯೇ ಬದುಕಬೇಕು, ತಾವು ಶಾಪಗ್ರಸ್ತರು ಅಂದು ಬಿಡುತ್ತಾರೆ. ಆದರೆ ವಾಸ್ತವವರೆಂದರೆ ಇವರು ಅಂಗವೈಕಲ್ಯ ಶಾಪವಲ್ಲ. ದೇವರ ಮಕ್ಕಳು ಇವರು. ಯಾವುದೇ ಕಾರಣಕ್ಕೂ ಈ ಜನ್ಮವನ್ನು ಹಳಿಯುತ್ತಾ ಕೂರಬೇಡಿ. ಯಾವುದೇ ವಿಶೇಷ ಚೇತನ ಮಗುವನ್ನು ಅಪಹಾಸ್ಯ ಮಾಡಬೇಡಿ, ಇತರರ ಮಕ್ಕಳ ನಡುವೆ ವ್ಯತ್ಯಾಸವನ್ನೂ ಮಾಡಬೇಡಿ. ವೀಶೇಷ ಆರೈಕೆಯ ಅಗತ್ಯವಿರುವ ಮಗುವಿಗೆ ಸುರಕ್ಷಿತ ಕಲಿಕೆಯ ವಾತಾವರಣವನ್ನು ಅನುಭವಿಸುವ ಹಕ್ಕು ಇದೆ. ಅವರನ್ನೂ ಸಮಾನರಂತೆ ಗೌರವಿಸಿ. ಅವರ ಪ್ರತಿಭೆ, ಸಾಮರ್ಥ್ಯವನ್ನು ಗುರುತಿಸಿ ನೀರೆರೆಯುವ ಕೆಲಸಮಾಡಿ.

English summary

Myths and Facts About Children With Special Needs in kannada

Here are some of the special health care needs or developmental disabilities that occur among children who are born with the following ailments. Read more.
X
Desktop Bottom Promotion