For Quick Alerts
ALLOW NOTIFICATIONS  
For Daily Alerts

ಜೊತೆ-ಜೊತೆಯಲ್ಲಿ ಮಕ್ಕಳಾದರೆ ಪ್ರಯೋಜವೂ ಇದೆ, ಈ ಸವಾಲುಗಳೂ ಇವೆ

|

ಮುದ್ದಾದ ಪುಟ್ಟ ಮಕ್ಕಳನ್ನು ಹೆರುವುದು, ಅವರ ಆಟ-ಪಾಠ, ಲೀಲಾ ವಿನೋದಗಳನ್ನು ನೋಡುತ್ತ ಸಂತಸದಿಂದ ಜೀವನ ಕಳೆಯುವುದು ಬಹುತೇಕ ಎಲ್ಲ ಪಾಲಕರ ಆಸೆಯಾಗಿರುತ್ತದೆ. ಹೀಗಾಗಿಯೇ ಮಕ್ಕಳಿರಲವ್ವ ಮನೆ ತುಂಬ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು.

ಆದರೆ ಬದಲಾದ ಇಂದಿನ ಕಾಲಘಟ್ಟದಲ್ಲಿ ಮಕ್ಕಳಿರಲವ್ವ ಮನೆ ತುಂಬ ಎಂಬುದು ವಾಸ್ತವಿಕವಾಗಿ ಸಾಧ್ಯವಿಲ್ಲದ ಸಂಗತಿಯಾಗುತ್ತಿದೆ. ದಿನಬೆಳಗಾದರೆ ಕೆಲಸದ ಒತ್ತಡ, ನಿತ್ಯದ ಜಂಜಾಟದಲ್ಲಿ ಮುಳುಗಿರುವ ಗಂಡ-ಹೆಂಡತಿಯರಿಗೆ ಒಂದೇ ಒಂದು ಮಗುವನ್ನು ಹೆತ್ತು ಸಾಕುವುದೇ ದೊಡ್ಡ ಸವಾಲಾಗುತ್ತಿದೆ. ಆದರೂ ಮದುವೆಯಾದ ನಂತರ ಬೇಗನೇ ಒಂದು ಮಗು ಹೆತ್ತು ನಂತರ ಬಹಳ ಸಮಯ ಬಿಡದೆ ಮತ್ತೊಂದು ಮಗು ಮಾಡಿಕೊಳ್ಳುವುದು ಹೇಗೆ ಎಂಬ ಜಿಜ್ಞಾಸೆ ಮೂಡುತ್ತದೆ.

ಮಕ್ಕಳನ್ನು ಹೆರುವ ಮಧ್ಯೆ ಬಹಳ ಅಂತರವಿಡದೆ ಕಡಿಮೆ ಅವಧಿಯಲ್ಲಿಯೇ ಒಂದಕ್ಕಿಂತ ಹೆಚ್ಚು ಮಕ್ಕಳು ಮಾಡಿಕೊಳ್ಳುವುದು ಕೆಲ ದೃಷ್ಟಿಯಿಂದ ಒಳ್ಳೆಯದಾದರೆ, ಮತ್ತೊಂದು ದೃಷ್ಟಿಯಿಂದ ಸಮಸ್ಯೆಗಳನ್ನು ತಂದೊಡ್ಡಬಹುದು.

ಬೇಗನೇ ಹೆಚ್ಚು ಮಕ್ಕಳನ್ನು ಹೆರುವುದರಿಂದಾಗುವ ಪ್ರಯೋಜನಗಳು

ಬೇಗನೇ ಹೆಚ್ಚು ಮಕ್ಕಳನ್ನು ಹೆರುವುದರಿಂದಾಗುವ ಪ್ರಯೋಜನಗಳು

ಒಂದು ಮಗು ಹೆತ್ತು ಈಗಾಗಲೇ ತಾಯಿಯಾದವಳು ಮಗುವಿನ ಲಾಲನೆ-ಪಾಲನೆಯ ವಿಷಯಕ್ಕೆ ಸಾಕಷ್ಟು ಒಗ್ಗಿಕೊಂಡಿರುತ್ತಾಳೆ. ಮಗುವಿಗೆ ಹಾಲೂಡಿಸುವುದು, ಸಮಾಧಾನ ಪಡಿಸುವುದು, ಮಲಗಿಸುವುದು ಹೀಗೆ ಎಲ್ಲ ವಿಷಯಗಳಲ್ಲೂ ಆಕೆಗೆ ಒಂದು ಹದವಾದ ಹಿಡಿತ ಸಿಕ್ಕಿರುತ್ತದೆ. ಹೀಗಿರುವಾಗ ಮೊದಲ ಮಗುವಿನ ನಂತರ ಬೇಗನೇ ಮತ್ತೊಂದು ಮಗುವಾದಲ್ಲಿ ಅದರ ಪೋಷಣೆ ಆಕೆಗೆ ಅಷ್ಟೊಂದು ಕಷ್ಟವೆನಿಸಲಾರದು ಎಂಬುದು ಒಂದು ಅಭಿಪ್ರಾಯವಾಗಿದೆ.

ಇನ್ನು ಒಂದಕ್ಕಿಂತ ಹೆಚ್ಚು ಮಕ್ಕಳು ಜೊತೆಯಾಗಿ ಬೆಳೆಯುತ್ತಿದ್ದಲ್ಲಿ ಅವು ಒಂದಕ್ಕೊಂದು ಬೆರೆತು ಆಟವಾಡುತ್ತವೆ ಹಾಗೂ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುತ್ತವೆ. ಹೀಗಾಗಿ ಎರಡು ಮಕ್ಕಳನ್ನು ಬೇಗನೇ ಹೆರುವುದರಿಂದ ಮತ್ತೆ ಮಕ್ಕಳನ್ನು ಹೆರುವ ತಾಪತ್ರಯ ತಪ್ಪಿದಂತಾಗುತ್ತದೆ. ಎರಡಕ್ಕಿಂತ ಹೆಚ್ಚು ಮಕ್ಕಳು ಬೇಕಿರುವವರಿಗೆ ಈ ಮಾತು ಅನ್ವಯಿಸದು!

30 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದರೆ?

30 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದರೆ?

ತಾಯಿಯಾಗುವವಳಿಗೆ ಈಗಾಗಲೇ 30 ವರ್ಷ ವಯಸ್ಸಾಗಿದ್ದು, ಜಸ್ಟ್ ಈಗ ಮೊದಲ ಮಗು ಪಡೆಯುವ ವಿಚಾರವಿದ್ದಲ್ಲಿ ಅಂಥವರು ಬೇಕಾದಲ್ಲಿ ಬೇಗನೇ ಮತ್ತೊಂದು ಮಗು ಹೆರುವ ಬಗ್ಗೆಯೂ ಯೋಚಿಸುವುದೊಳಿತು. ವಯಸ್ಸು ಇನ್ನಷ್ಟು ಹೆಚ್ಚಾದಂತೆ ಗರ್ಭ ಧರಿಸುವ ಸಾಧ್ಯತೆಗಳು ಕ್ಷೀಣವಾಗತೊಡಗುತ್ತವೆ.

ಇಂಥ ಸಮಸ್ಯೆಗಳೂ ಎದುರಾಗಬಹುದು..!

ಇಂಥ ಸಮಸ್ಯೆಗಳೂ ಎದುರಾಗಬಹುದು..!

ಒಂದೇ ಸಮಯದಲ್ಲಿ ಎರಡು ಪುಟ್ಟ ಕಂದಮ್ಮಗಳನ್ನು ನೋಡಿಕೊಳ್ಳುವುದು ಅಂಥ ಸುಲಭದ ಮಾತಲ್ಲ. ಮೊದಲ ಮಗುವಿನ ಪೋಷಣೆಯ ಸುಸ್ತು ಮಾಸುವ ಮುನ್ನವೇ ಮತ್ತೊಂದು ಮಗುವಾದಲ್ಲಿ ತಾಯಿಗೆ ರಾತ್ರಿಯ ನಿದ್ರೆ ಕಡಿಮೆಯಾಗಬಹುದು. ರಾತ್ರಿಯೆಲ್ಲ ಒಂದಿಲ್ಲೊಂದು ಮಗುವಿನ ಬಗ್ಗೆ ನೋಡಿಕೊಳ್ಳುವುದೇ ಒಂದು ಕೆಲಸವಾಗಬಹುದು.

ಬುದ್ಧಿ ಬಲಿಯದ ಚಿಕ್ಕ ಮಕ್ಕಳು ಜೊತೆಯಾಗಿ ಬೆಳೆಯುವಾಗ ಅವುಗಳ ಮಧ್ಯೆ ಸಹೋದರ ಕಲಹಗಳು ಹೆಚ್ಚಾಗಬಹುದು. ಎರಡೂ ಮಕ್ಕಳಿಗೆ ಮೊಲೆಯೂಡಿಸುವುದು ಸಹ ತಾಯಿಗೆ ದೊಡ್ಡ ಸವಾಲಾಗಬಹುದು. ಹೀಗಾಗಿ ತಾಯಿ ಸ್ವತಃ ತನ್ನ ಬಗ್ಗೆ ಹಾಗೂ ಪತಿಯ ಬಗ್ಗೆ ಕಾಳಜಿ ವಹಿಸಲು ಸಮಯ ನೀಡುವುದು ಸಾಧ್ಯವಾಗದಿರಬಹುದು.

18 ತಿಂಗಳ ಗ್ಯಾಪ್ ಇರಲಿ

18 ತಿಂಗಳ ಗ್ಯಾಪ್ ಇರಲಿ

ಮೊದಲ ಮಗು ಹುಟ್ಟಿದ ನಂತರ ಇನ್ನೊಂದು ಮಗುವಿಗಾಗಿ ಪ್ರಯತ್ನಿಸಲು ಕನಿಷ್ಠ 6 ತಿಂಗಳು ಕಾಯಬೇಕು. ವೈಜ್ಞಾನಿಕವಾಗಿ ಈ ಅಂತರ 18 ತಿಂಗಳಾಗಿರುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತಾರೆ ವೈದ್ಯಕೀಯ ಪರಿಣಿತರು. ಎರಡು ಮಕ್ಕಳ ಜನನದ ನಡುವೆ ತೀರಾ ಕಡಿಮೆ ಅವಧಿಯ ಅಂತರವಿದ್ದಲ್ಲಿ ಹುಟ್ಟುವ ಮಗು ಅವಧಿಪೂರ್ವ ಹುಟ್ಟಬಹುದು ಅಥವಾ ಮಗು ಕಡಿಮೆ ತೂಕದ್ದಾಗಿರಬಹುದು ಎನ್ನುತ್ತಾರೆ ವೈದ್ಯರು.

English summary

Benefits And Challenges Of Having Back To Back Babies

Here we explain benefits and challenges of having back to back babies, Read on..
X
Desktop Bottom Promotion