For Quick Alerts
ALLOW NOTIFICATIONS  
For Daily Alerts

ಡೈಪರ್‌ ಗಾಯ ಬರದಿರಲು ಸರಳ ಮನೆಮದ್ದುಗಳು

|

ಹಿಂದೆಲ್ಲಾ ಮಕ್ಕಳಿಗೆ ಅಗಲವಾದ ಬಟ್ಟೆಯನ್ನೇ ಚಡ್ಡಿಯ ರೂಪದಲ್ಲಿ ತೊಡಲಾಗುತ್ತಿತ್ತು. ಇದಕ್ಕೆ ಕೂಸಿನ ಚೌಕ ಎಂದು ಕರೆಯುತ್ತಿದ್ದರು. ಮಗುವಿನ ಮಲಮೂತ್ರವೆಲ್ಲಾ ಇದರಲ್ಲಿ ಆದಷ್ಟೂ ಹೀರಲ್ಪಟ್ಟು ಹಾಸಿಗೆ ಅಥವಾ ಇತರ ಬಟ್ಟೆಗಳಿಗೆ ತಗಲುವ ಸಂಭವ ಕಡಿಮೆಯಾಗುತ್ತಿತ್ತು. ಈ ಚೌಕದ ಆಧುನಿಕ ರೂಪವೇ ಡೈಪರ್.

ಇದು ಮಲಮೂತ್ರಗಳನ್ನು ಹೊರಬರದಂತೆ ತನ್ನಲ್ಲೇ ಹುದುಗಿಸಿಕೊಳ್ಳುವ ಜೊತೆಗೇ ಮಗುವಿನ ಬುಡಭಾಗಗಳು ಆದಷ್ಟೂ ಒದ್ದೆಯಾಗದೇ ಒಣದಾಗಿಯೇ ಇರಿಸಿಕೊಳ್ಳುವುದು ಈ ಡೈಪರ್‌ ಗಳ ವೈಶಿಷ್ಟ್ಯವಾಗಿದೆ.

ಮಕ್ಕಳ ಲಾಲನೆ ನೋಡಿಕೊಳ್ಳುವ ತಾಯಂದಿರ ಪಾಲಿಗೆ ಈ ಡೈಪರ್‌ ಗಳು ವರದಾನವೇ ಹೌದು. ಈ ಡೈಪರ್‌ ಗಳು ಎಷ್ಟೇ ತ್ವಚೆಯನ್ನು ಒಣದಾಗಿಸಿರುತ್ತವೆ ಎಂದು ಹೇಳಿಕೊಂಡರೂ ವಾಸ್ತವದಲ್ಲಿ ನೀರಿನಲ್ಲಿ ತೊಳೆದಷ್ಟು ಸ್ವಚ್ಛವೇನೂ ಆಗುವುದಿಲ್ಲ.

ಹಾಗಾಗಿ, ಕಾಲಕಾಲಕ್ಕೆ ಡೈಪರ್‌ ಗಳನ್ನು ಬದಲಿಸುತ್ತಲೇ ಇರಬೇಕಾಗುತ್ತದೆ. ಕೆಲವೊಮ್ಮೆ ಈ ಡೈಪರ್‌ ಗಳನ್ನು ಹೆಚ್ಚು ಹೊತ್ತು ಬಿಗಿಯಾಗಿ ತೊಟ್ಟಿರುವ ಕಾರಣದಿಂದಲೇ ಮಕ್ಕಳ ಸೂಕ್ಷ್ಮ ಚರ್ಮದಲ್ಲಿ ಉರಿ ಮತ್ತು ಕೆಂಪಗಾಗುವುದು ಕಾಣಿಸಿಕೊಳ್ಳಬಹುದು. ಇದನ್ನು ಡೈಪರ್‌ ರ್‍ಯಾಶ್ (Diaper Rash) ಎಂದು ಕರೆಯುತ್ತಾರೆ. ಇದಕ್ಕೆ ಸಮಾನ ಕನ್ನಡ ಪದ ಇಲ್ಲದ ಕಾರಣ ಕೂಸಿನ ಚೌಕದ ಉರಿ ಎಂದೇ ಕರೆಯಬಹುದು!

ವಾಸ್ತವದಲ್ಲಿ ಮೂರು ವರ್ಷಕ್ಕೂ ಚಿಕ್ಕ ಮಕ್ಕಳಿಗೆ ಈ ತೊಂದರೆ ಸಾಮಾನ್ಯವಾಗಿ ಎದುರಾಗುತ್ತದೆ .ಅಲ್ಲದೇ ನಿತಂಬಗಳ ಕೆಳಭಾಗ, ಅಂದರೆ ಕುಳಿತುಕೊಳ್ಳುವ ಭಾಗದಲ್ಲಿ ಅತಿ ಹೆಚ್ಚು ಕೆಂಪಗಾಗುತ್ತದೆ. ಹೆಚ್ಚಿನ ಹೊತ್ತು ಈ ಡೈಪರ್‌ ಮೇಲೆ ಕುಳಿತಿದ್ದ ಕಾರಣ ದೇಹದ ಭಾರದಿಂದ ಈ ಭಾಗದಲ್ಲಿ ಹೆಚ್ಚಿನ ನೀರಿನಂಶ ಸತತವಾಗಿ ತಗಲುತ್ತಿರುವುದೇ ಈ ಉರಿಗೆ ಕಾರಣ.

ಈ ಬಗೆಯ ಉರಿಗೆ contact dermatitis ಎಂದು ಕರೆಯುತ್ತಾರೆ. ಸತತವಾಗಿ ಈ ಭಾಗದಲ್ಲಿ ಡೈಪರ್‌ ನ ಉಜ್ಜುವಿಕೆಯಿಂದ ಈ ಉರಿ ಇನ್ನಷ್ಟು ಹೆಚ್ಚುತ್ತದೆ. ಅಲ್ಲದೇ ಮಗುವಿನ ಮೂತ್ರ ಮತ್ತು ಮಲದ ಲವಣಗಳೂ ಈ ಉರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಡೈಪರ್‌ ಧರಿಸಿರುವ ಭಾಗದಲ್ಲಿ ಅತಿ ಎನಿಸುವಷ್ಟು ಕೆಂಪಗಾಗಿರುವ ಚರ್ಮ ಮತ್ತು ಸೂಕ್ಷ್ಮ ಗೆರೆಗಳಂತೆ ಕೆಂಪು ಗೆರೆಗಳು ಮೂಡಿರುವುದು ಈ ಉರಿಯ ಲಕ್ಷಣಗಳಾಗಿವೆ. ಡೈಪರ್‌ ಹೆಚ್ಚಿನ ಒತ್ತಡದಲ್ಲಿ ಚರ್ಮಕ್ಕೆ ತಾಗುವ ಭಾಗಗಳಾದ ನಿತಂಬಗಳು, ತೊಡೆಗಳ ಮೇಲ್ಭಾಗ ಮತ್ತು ಜನನಾಂಗಗಳ ಭಾಗದಲ್ಲಿ ಈ ಉರಿ ಗರಿಷ್ಟವಾಗಿರುತ್ತದೆ. ವಿಶೇಷವಾಗಿ ಒಂಭತ್ತು ತಿಂಗಳಿಂದ ಒಂದು ವರ್ಷದ ಮಕ್ಕಳಿಗೆ ಈ ತೊಂದರೆ ಎದುರಾಗುವ ಸಾಧ್ಯತೆ ಅತಿ ಹೆಚ್ಚಿರುತ್ತದೆ.

ಏಕೆಂದರೆ ಈ ತಿಂಗಳುಗಳಲ್ಲಿ ಮಗು ಮಗ್ಗುಲು ಬದಲಿಸುವುದರಿಂದ ಕುಳಿತುಕೊಳ್ಳುವ ಹಂತಕ್ಕೆ ತಲುಪುತ್ತದೆ ಹಾಗೂ ಹೆಚ್ಚಿನ ಹೊತ್ತು ಕುಳಿತೇ ಇರುತ್ತದೆ. ಪರಿಣಾಮವಾಗಿ ಈ ಭಾಗಗಳಲ್ಲಿ ಗಾಳಿ ಸಂಚಾರ ಕನಿಷ್ಟವಾಗುತ್ತದೆ. ಅಲ್ಲದೇ ಇದುವರೆಗೆ ಕೇವಲ ದ್ರವಾಹಾರವನ್ನೇ ಸೇವಿಸುತ್ತಿದ್ದ ಮಕ್ಕಳಿಗೆ ನಿಧಾನವಾಗಿ ಕೊಂಚ ಘನಾಹಾರವನ್ನೂ ನೀಡಲಾಗುತ್ತದೆ. ಪರಿಣಾಮವಾಗಿ ಕರುಳಿನ ಒಳಗೆ ಜೀರ್ಣಗೊಂಡ ಆಹಾರ ಹೆಚ್ಚು ಆಮ್ಲೀಯವಾಗಿರುತ್ತದೆ.

ಅಲ್ಲದೇ ದಿನದ ಹೆಚ್ಚು ಹೊತ್ತು ಮಲಗಿಯೇ ಇರುವ ಕಾರಣ ಅಷ್ಟೂ ಹೊತ್ತು ಗಾಳಿಯ ಸಂಚಾರವೂ ಕುಂಠಿತಗೊಳ್ಳುತ್ತದೆ. ಆದರೆ ಮಲ ಮೂತ್ರ ವಿಸರ್ಜನೆಗಳು ಅನೈಚ್ಛಿಕವಾಗಿ ಜರುಗುವ ಕಾರಣ ಡೈಪರ್‌ ಗಳು ಇನ್ನಷ್ಟು ಒದ್ದೆಯಾಗಿ ಚರ್ಮ ಕೆಂಪಗಾಗುವ ಸಾದ್ಯತೆಯೂ ಹೆಚ್ಚುತ್ತದೆ. ಡೈಪರ್‌ ಗಳನ್ನು ಧರಿಸುವ ಮಕ್ಕಳ ಹೊರತಾಗಿ ವಯಸ್ಕರ ಡೈಪರ್‌ ಗಳನ್ನು ತೊಡುವ ಹಿರಿಯ ವ್ಯಕ್ತಿಗಳಲ್ಲೂ ಈ ಪರಿಯ ಉರಿಯನ್ನು ಕಾಣಬಹುದು.

ಮೂತ್ರ ತಡೆದುಕೊಳ್ಳುವ ಅಸಮರ್ಥತೆ (incontinence)ಯ ತೊಂದರೆ ಇರುವ ವ್ಯಕ್ತಿಗಳು ಡೈಪರ್‌ ಧರಿಸುವುದರಿಂದಲೂ ತೊಡೆಸಂಧುಗಳಲ್ಲಿ ಉರಿ ಎದುರಾಗಬಹುದು.

ಈ ತೊಂದಗೆಗಳಿಗೆ ಅತ್ಯುತ್ತಮವಾದ ಐದು ಮನೆಮದ್ದುಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

ಮಗುವಿಗೆ ಆಗಾಗ ಡೈಪರ್‌ ತೊಡಿಸದೇ ನಿರಾಳವಾಗಿರಲು ಬಿಡಿ

ಮಗುವಿಗೆ ಆಗಾಗ ಡೈಪರ್‌ ತೊಡಿಸದೇ ನಿರಾಳವಾಗಿರಲು ಬಿಡಿ

ಮಗುವಿಗೆ ಉರಿ ಎದುರಾದರೆ ಆದಷ್ಟೂ ಹೊತ್ತು ಡೈಪರ್‌ ಇರದಂತೆ ಮಗು ಕಾಲ ಕಳೆಯಲು ಅವಕಾಶ ಮಾಡಿ ಕೊಡಬೇಕು. ಈ ಮೂಲಕ ಚರ್ಮ ಒಣದಾಗಿದ್ದು ಶೀಘ್ರವೇ ಗುಣಹೊಂದಲು ನೆರವಾಗುತ್ತದೆ. ಅಷ್ಟೇ ಅಲ್ಲ, ಸಾಮಾನ್ಯವಾಗಿ ಮಗುವಿನ ದೇಹ ಬೆಳೆದಂತೆ ಹಿಂದೆ ಕೊಂಡಿದ್ದ ಡೈಪರ್‌ ಈಗ ಬಿಗಿಯಾಗುತ್ತಿರಬಹುದು.

ಆದರೆ ಇದನ್ನು ಬಳಸದೇ ಹೋದರೆ ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆ ಕೆಲವರು ಕೊಂಚ ಬಿಗಿಯಾದರೂ ಸರಿ, ಹೆಚ್ಚು ಹೊತ್ತು ಬೇಡ ಎಂಬ ಇರಾದೆಯಿಂದ ತೊಡಿಸುತ್ತಾರೆ. ಆದರೆ ಮಗುವಿಗೆ ಬಿಗಿ ಇರುವಂತಹ ಡೈಪರ್‌ ಸೂಕ್ತವಲ್ಲ. ಇದು ಈಗಿರುವ ಉರಿಯನ್ನು ಇನ್ನಷ್ಟು ಹೆಚ್ಚಿಸಬಹುದು. ಅಲ್ಲದೇ ಈ ಡೈಪರ್‌ ಗಳು ನೂರು ಶೇಖಡಾ ಹತ್ತಿಯದ್ದಾಗಿರುವುದನ್ನು ಖಚಿತಪಡಿಸಿಕೊಂಡೇ ಖರೀದಿಸಿ. ಮಗುವಿನ ಮೂತ್ರವಿಸರ್ಜನೆಯ ಸಮಯದ ಸಾಧ್ಯತೆಯನ್ನು ಪರಿಗಣಿಸಿ ಅದಕ್ಕೂ ಮುನ್ನವೇ ಶೌಚಾಲಯಕ್ಕೆ ಕೊಂಡೊಯ್ಯುವ ಮೂಲಕ ಡೈಪರ್‌ ತೊಡದೇ ಇರುವ ಸಮಯವನ್ನು ಇನ್ನಷ್ಟು ಹೆಚ್ಚಿಸಬಹುದು.

ಪ್ರತಿ ಬಾರಿ ಡೈಪರ್‌ ಬದಲಿಸುವುದಕ್ಕೂ ಮುನ್ನ ನಿತಂಬಗಳನ್ನು ಸ್ವಚ್ಛಗೊಳಿಸಿದ ಬಳಿಕ ತೇವಗೊಳಿಸಿ

ಪ್ರತಿ ಬಾರಿ ಡೈಪರ್‌ ಬದಲಿಸುವುದಕ್ಕೂ ಮುನ್ನ ನಿತಂಬಗಳನ್ನು ಸ್ವಚ್ಛಗೊಳಿಸಿದ ಬಳಿಕ ತೇವಗೊಳಿಸಿ

ಹೊಸ ಡೈಪರ್‌ ತೊಡಿಸುವುದಕ್ಕೂ ಮುನ್ನ ಕೈಗೊಳ್ಳಬೇಕಾದ ಉತ್ತಮ ಕ್ರಮವೆಂದರೆ ಸ್ವಚ್ಛಗೊಳಿಸಿದ ಬಳಿಕ ಸಾಕಷ್ಟು ಪ್ರಮಾಣದ ಬೆಚ್ಚಗಿನ ನೀರು ಹಾಕಿ ತೇವಗೊಳಿಸುವುದು. ಸ್ವಚ್ಛಗೊಳಿಸಲು ನೀವು ಕೊಂಚ ಸೌಮ್ಯ ಸೋಪನ್ನು ಬಳಸಬಹುದು. ಆದರೆ ಸೋಪು ಬಳಸುವುದರಿಂದ ತ್ವಚೆ ಹೆಚ್ಚು ಒಣಗುತ್ತದೆ ಮತ್ತು ಉರಿ ಗುಣವಾಗುವ ಗತಿ ನಿಧಾನಗೊಳ್ಳುತ್ತದೆ. ಆದ್ದರಿಂದ ಸೋಪು ಬಳಕೆಯನ್ನು ಕೇವಲ ಮಲಿನಗೊಂಡ ಡೈಪರ್‌ ಬದಲಿಸುವಾಗ ಬಳಸಬೇಕು. ಉಳಿದಂತೆ ಬರೆಯ ನೀರು ಸಾಕಾಗುತ್ತದೆ. ಈ ಸೋಪು ಸುಗಂಧ ರಹಿತ, ಮಕ್ಕಳಿಗೆ ಸುರಕ್ಷಿತ ಎಂಬುದನ್ನು ಖಚಿತಪಡಿಸಿಯೇ ಬಳಸಿ.

ನೀರಿನಿಂದ ತೇವಗೊಳಿಸಿದ ಬಳಿಕ ಹೊಸ ಡೈಪರ್‌ ತೊಡಿಸುವುದಕ್ಕೂ ಮುನ್ನ ಚರ್ಮದ ಪೂರ್ಣವಾಗಿ ಒಣಗುವಂತೆ ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿ ಕೊಂಚ ಹೊತ್ತು ಬಿಡಬೇಕು. ಬೇಬಿ ವೈಪ್ಸ್ ಬಳಸುವುದಾದರೆ ಮಕ್ಕಳಿಗೆ ಸೂಕ್ತವಾದ ಮತ್ತು ನಂಬಲರ್ಹ ಸಂಸ್ಥೆಯ ಉತ್ಪನ್ನಗಳನ್ನೇ ಕೊಳ್ಳಬೇಕು. ಇದರಲ್ಲಿ ಆಲ್ಕೋಹಾಲ್ ಆಗಲೀ ಇತರ ಹೆಚ್ಚುವರಿ ಸುಗಂಧಗಳಾಗಲೀ ಇರಬಾರದು. ಕೆಲವು ತಾಯಂದಿರು ಸ್ವಚ್ಛಗೊಳಿಸಲು ಒದ್ದೆಬಟ್ಟೆಯನ್ನೂ ಬಳಸಬಹುದು. ಆದರೆ ಇದಕ್ಕೆ ಮೃದುವಾದ ಹತ್ತಿಯ ಬಟ್ಟೆಯನ್ನೇ ಬಳಸಬೇಕು.

ವಿನೆಗರ್‌ ಸೌಮ್ಯ ಸೋಂಕುನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ

ವಿನೆಗರ್‌ ಸೌಮ್ಯ ಸೋಂಕುನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ

ಮೂತ್ರ ಬಟ್ಟೆಯಲ್ಲಿ ಹೀರಲ್ಪಟ್ಟಾಗ ಈ ಬಟ್ಟೆ ಅತಿ ಕ್ಷಾರೀಯವಾಗಿರುತ್ತದೆ ಮತ್ತು ಮಗುವಿನ ಮೃದು ಚರ್ಮವನ್ನು ಆಮ್ಲದಂತೆ ಸುಡುತ್ತದೆ. ಈ ನಿಟ್ಟಿನಲ್ಲಿ, ಹೆಚ್ಚಿನ ಪಿಹೆಚ್ ಮಟ್ಟವನ್ನು ಅನ್ನು ಸರಿದೂಗಿಸಲು ಶಿರ್ಕಾ ಅತ್ಯುತ್ತಮ ಪದಾರ್ಥಗಳಲ್ಲಿ ಒಂದಾಗಿದೆ. ನೀವು ಮರುಬಳಕೆ ಮಾಡಬಹುದಾದ ಡೈಪರ್‌ ಅಥವಾ ಹತ್ತಿಯ ಒರೆಸುವ ಬಟ್ಟೆಗಳನ್ನು ಬಳಸುತ್ತಿದ್ದರೆ, ಅವುಗಳನ್ನು ಮೊದಲು ವಿನೆಗರ್‌ ಬೆರೆಸಿದ ನೀರಿನ ದ್ರಾವಣದಲ್ಲಿ ತೊಳೆಯಿರಿ.

1/2 ಬಕೆಟ್ ನೀರಿಗೆ 1/2 ಕಪ್ ವಿನೆಗರ್‌ ಸೇರಿಸಿ ಮತ್ತು ನಿಮ್ಮ ಮಗುವಿನ ಒರೆಸುವ ಬಟ್ಟೆಗಳನ್ನು ತೊಳೆಯಲು ಈ ದ್ರಾವಣವನ್ನು ಬಳಸಿ. ಇದು ಡೈಪರ್‌ ಗಳಲ್ಲಿ ಉಳಿದಿದ್ದ ಯಾವುದೇ ಸೋಪಿನ ಕಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಇಲ್ಲಿ ಇರಬಹುದಾದ ಹಿಂದಿನ ಮೂತ್ರದ ವಾಸನೆಯನ್ನೂ ನಿವಾರಿಸುತ್ತದೆ. ನೀಡುತ್ತದೆ. ಮಗುವಿನ ನಿತಂಬಗಳನ್ನು ಸ್ವಚ್ಛಗೊಳಿಸಲು ಶಿರ್ಕಾ ದ್ರಾವಣವನ್ನೂ ಬಳಸಬಹುದು. ಇದಕ್ಕಾಗಿ 1 ಕಪ್ ನೀರಿಗೆ 1 ಟೀಸ್ಪೂನ್ ಬಿಳಿ ವಿನೆಗರ್‌ಬೆರೆಸಿ. ಡೈಪರ್‌ ಬದಲಾಯಿಸುವಾಗ ನಿಮ್ಮ ಮಗುವಿನ ನಿತಂಬಗಳನ್ನು ಒರೆಸಲು ಈ ದ್ರಾವಣವನ್ನು ಬಳಸಿ. ಈ ಸರಳ ಬದಲಾವಣೆಯಿಂದ ನಿಮ್ಮ ಮಗುವಿನ ನಿತಂಬ ಹಾಗೂ ತೊಡೆಸಂಧುಗಳ ಭಾಗಗಳಲ್ಲಿ ಶಿಲೀಂಧ್ರದ ಸೋಂಕು ಎದುರಾಗದಂತೆ ರಕ್ಷಣೆ ಒದಗಿಸಬಹುದು.

ಪೆಟ್ರೋಲಿಯಂ ಜೆಲ್ಲಿ ಹಚ್ಚಿ

ಪೆಟ್ರೋಲಿಯಂ ಜೆಲ್ಲಿ ಹಚ್ಚಿ

ನೀವು ಪ್ರತಿ ಬಾರಿ ಡೈಪರ್‌ ಬದಲಾಯಿಸುವಾಗಲೂ ಮಗುವಿನ ಮೃದು ಚರ್ಮದ ಮೇಲೆ ರಕ್ಷಣಾತ್ಮಕ ಲೇಪನದ ತೆಳುವಾದ ಪದರವನ್ನು ಹಚ್ಚಿಕೊಳ್ಳುವಂತೆ ಹಲವು ಮಕ್ಕಳ ತಜ್ಞ ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಇದಕ್ಕಾಗಿ ವ್ಯಾಸೆಲಿನ್ ಅಥವಾ ಇತರ ಉತ್ತಮ ಸಂಸ್ಥೆಯ ಉತ್ಪನ್ನವಾದ ಪೆಟ್ರೋಲಿಯಂ ಜೆಲ್ಲಿ ಸೂಕ್ತವಾಗಿದೆ. ಮೂತ್ರ ಮತ್ತು ಮಲದಿಂದ ಉಂಟಾಗುವ ಉರಿ ಮತ್ತು ಇತರ ಪರಿಣಾಮಗಳಿಂದ ಡೈಪರ್‌ ಧರಿಸಿರುವ ಚರ್ಮದ ಭಾಗವನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ.

ಮಲಿನ ಡೈಪರ್‌ ಅನ್ನು ತೆಗೆದ ನಂತರ, ನಿಮ್ಮ ಮಗುವಿನ ನಿತಂಬ ಭಾಗಗಳನ್ನು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿದ ಬಳಿಕ ಅದನ್ನು ದಪ್ಪನೆಯ ಹತ್ತಿಯ ಟವೆಲ್ ನಿಂದ ಹೆಚ್ಚಿನ ಒತ್ತಡವಿಲ್ಲದೇ ಒತ್ತಿ ಚೆನ್ನಾಗಿ ಒಣಗಿಸಿ, ಕೆಲ ನಿಮಿಷಗಳ ಬಳಿಕ ಪೂರ್ಣವಾಗಿ ಒಣಗಿರುವ ಚರ್ಮದ ಭಾಗಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ. ಪ್ರತಿ ಬಾರಿ ನಿಮ್ಮ ಮಗುವಿಗೆ ಡೈಪರ್‌ ಬದಯಾಸಿಸುವಾಗಲೆಲ್ಲಾ ಇದನ್ನು ಮಾಡಿ. ಇದರಿಂದ ಡೈಪರ್‌ ಉರಿ ಶೀಘ್ರವಾಗಿ ಗುಣವಾಗುತ್ತದೆ.

ಕೊಬ್ಬರಿ ಎಣ್ಣೆ ಬಳಸಿ

ಕೊಬ್ಬರಿ ಎಣ್ಣೆ ಬಳಸಿ

ತೆಂಗಿನ ಎಣ್ಣೆಯಲ್ಲಿರುವ ಶಿಲೀಂಧ್ರ ನಿವಾರಕ ಗುಣ ಮತ್ತು ಅತಿಸೂಕ್ಷ್ಮಜೀವಿ ನಿವಾರಕ ಗುಣಗಳು ಡೈಪರ್‌ ಉರಿಯನ್ನು ಶಮನಗೊಳಿಸಿ ಶೀಘ್ರ ಗುಣವಾಗಲು ನೆರವಾಗುತ್ತವೆ. ಅಲ್ಲದೇ ಕೊಬ್ಬರಿ ಎಣ್ಣೆ ಮಗುವಿನ ಮೃದು ಚರ್ಮದ ಮೇಲೆ ಸೌಮ್ಯವಾಗಿದೆ ಮತ್ತು ಯಾವುದೇ ಉರಿ ಇಲ್ಲದೇ ಶೀಘ್ರವೇ ಗುಣಪಡಿಸುತ್ತದೆ. ತೆಂಗಿನ ಎಣ್ಣೆ ಉತ್ತಮ ತೇವಕಾರಕ ಅಥವಾ ಮಾಯಿಶ್ಚರೈಸರ್ ಆಗಿಯೂ ಕಾರ್ಯನಿರ್ವಹಿಸುತ್ತದೆ.

ದಿನಕ್ಕೆ ಹಲವಾರು ಬಾರಿ ಕೊಂಚ ಕೊಬ್ಬರಿ ಎಣ್ಣೆಯನ್ನು ಡೈಪರ್‌ ಧರಿಸುವ ಚರ್ಮದ ಭಾಗದಲ್ಲಿ ತೆಳುವಾಗಿ ಹಚ್ಚಿ. ಹೆಚ್ಚಿನ ತೇವಕಾರಕ ಪರಿಣಾಮಕ್ಕಾಗಿ ನೀವು ಕೆಲವಾರು ಚಮಚ ಕೊಬ್ಬರಿ ಎಣ್ಣೆಯನ್ನು ಸ್ನಾನದ ನೀರಿಗೆ ಬೆರೆಸಿ ಸ್ನಾನ ಮಾಡಿಸಬಹುದು. ಇದು ಕ್ಯಾಂಡಿಡಾದಂತಹ ಶಿಲೀಂಧ್ರವನ್ನು ಕೊಲ್ಲಲು ಸಹಾಯ ಮಾಡುತ್ತದೆ, ಇದು ಡೈಪರ್‌ ಉರಿ ಮತ್ತು ಚಿಕ್ಕ ಗುಳ್ಳೆಗಳಿಗೆ ಈ ಕ್ಯಾಂಡಿಡಾ ಕಾರಣವಾಗಿದ್ದು ಕೊಬ್ಬರಿ ಎಣ್ಣೆ ಹಚ್ಚಿರುವ ವಾತಾವರಣದಲ್ಲಿ ಇವು ಸಾಯುತ್ತವೆ. ತನ್ಮೂಲಕ ಡೈಪರ್‌ ಉರಿಯನ್ನು ಶೀಘ್ರವಾಗಿ ಗುಣಪಡಿಸುತ್ತವೆ.

English summary

Home Remedies To Prevent Diaper Rashes In Children

Here we are discussing about Home Remedies To Prevent Diaper Rashes In Children. your child’s sensitive skin is bound to get irritated within the warm and moist confines of a tightly secured diaper. Read more.
Story first published: Friday, April 10, 2020, 14:00 [IST]
X