For Quick Alerts
ALLOW NOTIFICATIONS  
For Daily Alerts

ನಿಮ್ಮ ಸೇವೆಗೆ ಸದಾ ಸಿದ್ಧನಿದ್ದ ನನ್ನನ್ನೇಕೆ ಸುಟ್ಟಿರಿ...!

|

ಭಾರತದಲ್ಲಿ ಆಗಾಗ್ಗೆ ಒಂದಿಲ್ಲೊಂದು ಕಾರಣ, ಸಮಸ್ಯೆಗಳಿಗಾಗಿ ಪ್ರತಿಭಟನೆ, ಬಂದ್ ಗಳು ನಡೆಯುತ್ತಲೇ ಇರುತ್ತದೆ. ಆದರೆ ಈ ಪ್ರತಿಭಟನೆಯ ನೆಪದಲ್ಲಿ ಕೆಲವು ಕಿಡಿಗೇಡಿಗಳು ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡುವ ಹುನ್ನಾರವನ್ನೂ ಹೊಂದಿರುತ್ತಾರೆ. ಹೀಗೆ ಯಾವುದೋ, ಯಾರದ್ದೋ ಕಾರಣಕ್ಕೆ ಕೆಎಸ್ಆರ್ ಟಿಸಿ ಬಸ್ ಮೇಲೆ ಜನರು ಕಲ್ಲು ಹಾಕಿ ಹೊಡೆದು, ಬೆಂಕಿಯಲ್ಲಿ ಸುಟ್ಟು ಅದರ ಅಸ್ತಿತ್ವವನ್ನೆ ಇಲ್ಲವಾಗಿಸಿದ್ದಾರೆ. ಹೀಗೆ ತನ್ನದಲ್ಲದ ತಪ್ಪಿಗೆ ಸುಟ್ಟು ಹೈರಾಣದ ಬಸ್ಸೊಂದು ಯಾವ ರೀತಿ ತನ್ನ ನೋವನ್ನು ತೋಡಿಕೊಂಡಿದೆ ನೋಡಿ....

ಚಿತ್ರ ಕೃಪೆ: ದಿ ಇಡಿಯನ್ ಎಕ್ಸ್ ಪ್ರೆಸ್

ನಿಮ್ಮಲ್ಲಿ ನನ್ನ ಒಂದು ಅಳಲು...

ನಾನು ಎಂದೂ ನನ್ನ ನಿತ್ಯದ ಕೆಲಸ ಮಾಡಲು ಸದಾ ಸಿದ್ಧನಾಗಿರುತ್ತೇನೆ. ನನ್ನೊಂದಿಗೆ ಹಲವಾರು ಜನರು ಬರುತ್ತಾರೆ, ಅವರಿಗೆ ನನ್ನಿಂದ ಪುಟ್ಟ ಸೇವೆ ಆಗಬೇಕು ಎನ್ನುವುದೊಂದೇ ನನ್ನ ಆಸೆಯಾಗಿರುತ್ತದೆ. ನಿಸ್ವಾರ್ಥ ಸೇವೆಯನ್ನು ಮಾಡಬೇಕು ಎನ್ನುವ ಹಂಬಲವನ್ನು ಬಿಟ್ಟರೆ ಬೇರಾವ ದುರಾಸೆಯೂ ನನಗಿಲ್ಲ. ಯಾಕೆಂದರೆ ನಾನು ಹುಟ್ಟಿದ್ದು, ಬೆಳೆದಿದ್ದು, ನನಗೊಂದು ಬಣ್ಣ ನೀಡಿದ್ದು, ಹೆಸರು ಕೊಟ್ಟಿದ್ದು ಎಲ್ಲವೂ ನಿಮ್ಮ ಶ್ರಮ ದಿಂದ ಬಂದ ಹಣದಿಂದಲೇ...

ನಿಮ್ಮ ಶ್ರಮದಿಂದ ಅಸ್ತಿತ್ವವನ್ನು ಕಂಡುಕೊಂಡ ನನಗೆ ನಿಮ್ಮ ಸೇವೆ ಮಾಡಬೇಕು ಎನ್ನುವುದು ಬಿಟ್ಟರೆ ಬೇರೇನು ತಿಳಿದಿಲ್ಲ... ನಿಮ್ಮಿಂದಲೇ ನನ್ನ ಹುಟ್ಟು... ನಿಮಗಾಗಿಯೇ ನನ್ನ ಜೀವನ ಎಂದುಕೊಂಡಿದ್ದೆ... ನಿಮ್ಮ ಮೇಲಿನ ನನ್ನ ನಂಬಿಕೆ ಎಂದಿಗೂ ಸುಳ್ಳಾಗುವುದಿಲ್ಲ. ಏಕೆಂದರೆ ನೀವು ಮಾನವರು, ಮಾನವೀಯತೆಯನ್ನು ತಿಳಿದವರು...

ತಪ್ಪು-ಸರಿ ಬಲ್ಲವರು... ಬುದ್ಧಿ ಜೀವಿಗಳು... ನಿಮ್ಮ ಮುಂದೆ ನಿಲ್ಲುವವರು ಯಾರು? ಎಂದು ನಿಮ್ಮ ಬಗ್ಗೆ ಹೆಮ್ಮೆಯನ್ನು ಹೊಂದಿದ್ದೆ... ಆದರೆ ಅದು ಇಷ್ಟು ಬೇಗ ಸುಳ್ಳಾಗಬಹುದು ಎಂದುಕೊಂಡಿರಲಿಲ್ಲ...

ನಿಮಗಾಗಿಯೇ ಇದ್ದ ನನ್ನನ್ನು ಏಕೆ ನೀವು ಸುಟ್ಟಿರಿ? ನಿಮ್ಮ ಬಗ್ಗೆ ಹೆಮ್ಮೆ, ನಿಮಗಾಗಿಯೇ ಸೇವೆ ಅಂದುಕೊಂಡಿದ್ದ ನಾನು ಮಾಡಿದ ತಪ್ಪಾದರೂ ಏನು? ನಾನು ನಿಮ್ಮ ಹಾಗೆ ಮಾತನಾಡುವ ಜೀವಿ ಅಲ್ಲದೆ ಇರಬಹುದು, ಆದರೆ ನಿಮ್ಮೊಂದಿಗೆ ಒಂದು ಭಾವನಾತ್ಮಕ ಬಂಧವನ್ನು ಪಡೆದುಕೊಂಡಿದ್ದೆ... ಅದೆಲ್ಲವನ್ನು ನೀವು ಇಷ್ಟು ಬೇಗ ಮರೆತು ಬಿಟ್ಟಿರಾ? ನೀವು ನನ್ನನ್ನು ಮರೆತು ಒಂದು ಮೂಲೆಯಲ್ಲಿ ನಿಲ್ಲಿಸಿದರೂ ಬೇಸರವಿರಲಿಲ್ಲ. ನಾನು ನಿಂತಲ್ಲೇ ನಿಮ್ಮನ್ನು ನೋಡುತ್ತಾ ಸಂತೋಷ ಪಡುತ್ತಿದ್ದೆ... ಆದರೆ ನೀವು ಹಾಗೂ ಮಾಡಲಿಲ್ಲ... ನನ್ನದಲ್ಲದ ಇನ್ಯಾವುದೋ ಕಾರಣಕ್ಕಾಗಿ ನೀವು ನನ್ನನ್ನು ಸುಟ್ಟುಬಿಟ್ಟಿರಿ... ಇದು ಸರಿಯಾ?

ಚಿತ್ರ ಕೃಪೆ: ಏಷ್ಯಾನೆಟ್ ಸ್ಯೂಸ್

ತಪ್ಪೇ ಮಾಡದ ಈ ಪುಟ್ಟ ಜೀವಕ್ಕೇಕೆ ಶಿಕ್ಷೆ ನೀಡಿದಿರಿ? ಇನ್ನೇನು ಎರಡನೇ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳಲು ಸಿದ್ಧವಾಗುತ್ತಿದ್ದ ನನಗೆ ಸಾವಿನ ಗಂಟೆ ಕಟ್ಟಿದ್ದಾದರೂ ಏಕೆ? ನನ್ನವರು ನನಗೆ ಹೇಳಿದ್ದು ಸುಳ್ಳಾಗಲಿಲ್ಲ... ಎಲ್ಲರನ್ನೂ ನಂಬಬೇಡ, ಕೆಲವರು ತಮ್ಮ ದುರಾಸೆಗಾಗಿ ಬೆಂಕಿ ಇಡುವ ಪಾಪಕೃತ್ಯವನ್ನು ಮಾಡುತ್ತಾರೆ, ಕೆಲವರು ಮತಿ ಹೀನರಂತೆ ವರ್ತಿಸಿ ನಮ್ಮ ದೇಹಕ್ಕೆ ಗಾಯ ಮಾಡುತ್ತಾರೆ... ಇವೆಲ್ಲವೂ ಆಗಾಗ ನಡೆಯುತ್ತಲೇ ಇರುತ್ತವೆ... ನಾವು ಮೂಕರಾಗಿರುವುದಕ್ಕೆ ಅವುಗಳನ್ನು ಅನುಭವಿಸಬೇಕು ಅಷ್ಟೆ ಎನ್ನುವುದು.

ನನ್ನನ್ನು ಇಂದು ಕೇವಲ ಅಸ್ತಿಯೊಂದಿಗೆ ಇಟ್ಟಿರಿ... ಚಿಂತೆಯಿಲ್ಲ... ನನ್ನ ಬದುಕು ಮುಗಿಯಿತು... ಆದರೆ ನಿಮ್ಮಲ್ಲಿ ಕೇಳಿಕೊಳ್ಳುವುದು ಒಂದೇ... ನನಗೆ ಮಾಡಿದ ಹಾಗೆ ಇನ್ಯಾರಿಗೂ ಮಾಡದಿರಿ... ನಿಮ್ಮ ಆಕ್ರೋಷ ಏನೇ ಇದ್ದರೂ ಸಾರ್ವಜನಿಕ ಆಸ್ತಿಯ ಮೇಲೆ ತೋರಿಸಬೇಡಿ. ಯಾವುದೋ ಕಾರಣಕ್ಕಾಗಿ, ನಿಮ್ಮ ಸ್ವಹಿತಸಾಧನೆಗಾಗಿ, ಯಾವುದೇ ತಪ್ಪು ಮಾಡದ ಬಡ ಜೀವಿಯ ಮೇಲೆ ಬ್ರಹ್ಮಾಸ್ತ್ರ ಬಿಡದಿರಿ. ಇದರಿಂದ ನಿಮಗೆ ಸಿಗುವುದೇನು ಇಲ್ಲ... ಬದಲಾಗಿ ನಿಮ್ಮ ಆಸ್ತಿಯ ಹಾನಿ... ನಿಮ್ಮದೇ ತೆರಿಗೆ ಹಣಕ್ಕೆ ಕತ್ತರಿ..... ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ... ಅದು ವಿಧಿ ನಿಯಮ. ಆದರೆ ತಪ್ಪು ಮಾಡದವರಿಗೆ ಶಿಕ್ಷೆ ನೀಡಲು ನಿಮಗೆ ಹಕ್ಕಿಲ್ಲ. ನೀವು ಒಂದು ವಸ್ತುವನ್ನು ಹಾಳು ಮಾಡುವಾಗ, ಅಂತಹ ಎರಡು ವಸ್ತುವನ್ನು ಸೃಷ್ಟಿಸುವ ಅಥವಾ ತಂದಿಡುವ ಯೋಗ್ಯತೆ ಇದೆಯೇ? ಎನ್ನುವುದನ್ನು ಯೋಚಿಸಿ...

ನಿಮಗೆ ಹೋರಾಟದ ಬುದ್ಧಿ ಇದೆ ಎಂದಾದರೆ ಅದಕ್ಕೆ ಬೇರೆ ಮಾರ್ಗ ಹುಡುಕಿ, ನನ್ನಂಥ ಸಾರ್ವಜನಿಕ ಆಸ್ತಿಯನ್ನೇಕೆ ಹಾಳು ಮಾಡುತ್ತೀರಿ. ಇಂದು ನೀವು ಮಾಡುವ ತಪ್ಪು ಮುಂದಿನ ಜನರಿಗೆ ಮಾದರಿಯಾಗಬಾರದು. ನಿಮ್ಮ ಸನ್ನಡತೆ ಹಾಗೂ ಯೋಗ್ಯ ಕೆಲಸವು ಸಮಾಜದ ಉನ್ನತಿಗೆ ದಾರಿಯಾಗಬೇಕು. ನೀವು ಕಿಡಿಗೇಡಿಗಳೇ ಆಗಿರಬಹುದು, ಆದರೆ ನಿಮಗೂ ದೇವರು ಬುದ್ಧಿ, ಮೆದುಳು ನೀಡಿದ್ದಾನೆ. ಅದನ್ನು ಇತರರಿಗೆ ಹೇಗೆ ಕಿಡಿ ಹಚ್ಚಬೇಕು ಎನ್ನುವ ಕೆಟ್ಟ ಕೆಲಸಕ್ಕೆ ಬಳಸಬೇಡಿ. ನಿಮ್ಮಲ್ಲಿ ಬೆಂಕಿ ಹಚ್ಚುವ ಬುದ್ಧಿ ಇದ್ದರೆ ದೇಶವನ್ನು ಬೆಳಗುವಂತಹ ದೀಪ ಬೆಳಗಿಸಿ. ಅದರಿಂದ ನಿಮಗೂ ನಿಮ್ಮ ಸುತ್ತಲಲ್ಲಿ ಇರುವವರಿಗೂ ಒಳ್ಳೆಯದಾಗುವುದು.

ಇಂತಿ ನಿಮ್ಮ

ಕೆಎಸ್ಆರ್ ಟಿಸಿ ಬಸ್

English summary

Why You Burnt Me?: Burnt KSRTC Bus Monologue!

A picture of a teary eyed burnt bus, stated “Serving you decades... Wish to serve you decades more.. ..Have mercy. I belong to you and carry lakhs of passengers every day. You need to protect me, Instead, you stone me, For what fault of mine??'' The gutted bus monologue about to inform people about the importance public property.
X