For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ಪರಿಣಾಮಕಾರಿಯಾಗಿ ಕಚೇರಿ ಕೆಲಸ ಮಾಡಲು ಇಲ್ಲಿದೆ ಟಿಪ್ಸ್

|

ಇತ್ತೀಚಿಗೆ ಇಡೀ ವಿಶ್ವದಾದ್ಯಂತ ಜನರನ್ನು ತಲ್ಲಣಗೊಳಿಸುತ್ತಿರುವ ಕೊರೋನ ವೈರಸ್ COVID-19 ಸೋಂಕು ಎಲ್ಲರನ್ನೂ ಮನೆಯಲ್ಲಿ ಕೂಡಿ ಹಾಕಿ, ಹೊರಗಡೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ಮುಂದುವರಿದ ರಾಷ್ಟ್ರಗಳು ಮತ್ತು ಹಿಂದುಳಿದ ರಾಷ್ಟ್ರಗಳ ಸಮೇತ ಎಲ್ಲರೂ ಕರೋನಾ ವೈರಸ್ ರೋಗಾಣುವಿನಿಂದ ಬಹಳಷ್ಟು ಹೆಣಗಾಡುತ್ತಿದ್ದಾರೆ.

ದಿನೇ ದಿನೇ ಕರೋನಾಗೆ ಬಲಿಯಾಗುವವರ ಸಂಖ್ಯೆ ಮಿತಿಮೀರಿ ಹೋಗುತ್ತಿದೆಯೇ ವಿನಃ ಎಲ್ಲೂ ಕೂಡ ಕಡಿಮೆಯಾದ ಅಥವಾ ನಿಯಂತ್ರಣಕ್ಕೆ ಬಂದ ಉದಾಹರಣೆಗಳು ಸಿಗುತ್ತಿಲ್ಲ. ಇದಕ್ಕೆ ಕಾರಣ ಕೊರೋನಾ ಸಾಂಕ್ರಾಮಿಕ ಕಾಯಿಲೆಯ ನಿರ್ಮೂಲನೆಗೆ ಔಷಧಿ ಇನ್ನೂ ಸಹ ಲಭ್ಯವಿಲ್ಲದೇ ಇರುವುದು. ಅದೇನೇ ಇರಲಿ ಇದರಿಂದ ಎಷ್ಟೋ ಜನರ ಜೀವನ ಬೀದಿ ಪಾಲಾಗಿ ಅವರ ಸಂಸಾರ ನರಕ ಯಾತನೆ ಅನುಭವಿಸುತ್ತಿರುವುದಂತೂ ಸತ್ಯ.

ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಹಲವಾರು ಬಹುರಾಷ್ಟ್ರೀಯ ಕಂಪನಿಗಳು, ಐಟಿ ಕಂಪನಿಗಳು ಮತ್ತು ಕಂಪ್ಯೂಟರ್ ಮತ್ತು ಅಂತರ್ಜಾಲದ ಮೇಲೆ ಸಂಪೂರ್ಣವಾಗಿ ಕೆಲಸ ನಿರ್ವಹಿಸುವ ಇನ್ನಿತರ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಿವೆ. ಆದರೆ ಮನೆ ಎಂದ ತಕ್ಷಣ ನಿಮಗೇ ಗೊತ್ತಿದೆಯಲ್ಲ.

ಕಚೇರಿ ಕೆಲಸದಿಂದ ಬೇಸತ್ತು ಬಂದ ನಾವು ವಿಶ್ರಾಂತಿ ತೆಗೆದುಕೊಳ್ಳುವ ಜಾಗ ಎಂದು. ಆದರೆ ಅದೇ ಜಾಗದಿಂದ ಕೆಲಸ ಮಾಡಬೇಕು ಎಂದರೆ ನಮ್ಮ ಮನಸ್ಸು ಖಂಡಿತ ಆ ಕಡೆ ಈ ಕಡೆ ತಲೆ ಆಡಿಸುತ್ತದೆ. ಜೊತೆಗೆ ಮನೆಯಲ್ಲಿ ಎದುರಾಗುವ ಸಣ್ಣಪುಟ್ಟ ಅಡಚಣೆಗಳು ನಮ್ಮನ್ನ ಕೆಲಸ ಮಾಡಲು ಬಿಡುವುದೇ ಇಲ್ಲ. ಆದರೂ ಇಂತಹ ಅನೇಕ ಸಂಗತಿಗಳನ್ನು ಬದಿಗೊತ್ತಿ ಕೆಲಸ ಮಾಡಿ ನಮ್ಮ ಸಂಸ್ಥೆಯ ಬೆಳವಣಿಗೆಯನ್ನು ಕಾಪಾಡಬೇಕಾದ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ.

ಹಾಗಾಗಿ ಈ ಲೇಖನದಲ್ಲಿ ತಿಳಿಸಿರುವ ಮನೆಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಅವುಗಳಿಂದ ಸುಲಭವಾಗಿ ಮುಕ್ತಿ ಪಡೆಯುವಂತಹ ಟಿಪ್ಸ್ ಗಳು ಖಂಡಿತ ನಿಮಗೆ ಸಹಾಯ ಮಾಡಬಲ್ಲವು.

ಮೊದಲು ಕೆಲಸ ಮಾಡುವ ವಾತಾವರಣವನ್ನು ನಿರ್ಮಿಸಿಕೊಳ್ಳಿ

ಮೊದಲು ಕೆಲಸ ಮಾಡುವ ವಾತಾವರಣವನ್ನು ನಿರ್ಮಿಸಿಕೊಳ್ಳಿ

ಮನೆಯಲ್ಲಿ ಕೆಲಸ ಮಾಡುವ ಮನಸ್ಸು ಹೊಂದುವ ಮುಂಚೆ ನಮ್ಮ ಕೆಲಸಕ್ಕೆ ಬೇಕಾದ ಸ್ಥಳವನ್ನು ನಮಗೆ ಬೇಕಾದ ಹಾಗೆ ನಾವು ನಿರ್ಮಾಣ ಮಾಡಿಕೊಳ್ಳುವತ್ತ ಗಮನಹರಿಸಬೇಕು. ಏಕೆಂದರೆ ಇದುವರೆಗೂ ಇಂತಹ ಸಂದರ್ಭ ಎದುರಾಗದ ಕಾರಣ ನಮ್ಮ ಮನೆಯಲ್ಲಿ ಬೇಕಾದ ಮತ್ತು ಬೇಡದ ವಸ್ತುಗಳನ್ನು ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆ ಚೆಲ್ಲಾಪಿಲ್ಲಿ ಮಾಡಿರುತ್ತೇವೆ. ಇವೆಲ್ಲಾ ಕೆಲಸ ಮಾಡಲು ನಮಗೆ ತೊಂದರೆ ಕೊಡುವುದಂತೂ ಸತ್ಯ.

ನಮ್ಮ ಸಂಸ್ಥೆಯ ಏಳಿಗೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸುವಂತಹ ಯಾವುದೇ ವಸ್ತುಗಳು ಅಂದರೆ, ದೂರದರ್ಶನ, ಆಟಿಕೆಗಳು, ಮ್ಯೂಸಿಕ್ ಸಿಸ್ಟಮ್ ಇತ್ಯಾದಿಗಳನ್ನು ಮನೆಯಲ್ಲಿ ಸಿದ್ಧ ಪಡಿಸಿದ ಕೆಲಸದ ಸ್ಥಳದಿಂದ ಮೊದಲು ದೂರ ಮಾಡಿ. ನೀವು ಕೆಲಸ ಮಾಡುವ ಸ್ಥಳ ಹೇಗಿರಬೇಕು ಎಂದರೆ, ನೋಡಿದ ತಕ್ಷಣ ನಾನು ಕಚೇರಿಗೇ ಬಂದಿದ್ದೇನೆ ಎನ್ನುವ ಭಾವನೆ ನಿಮ್ಮ ಮನಸ್ಸಿನಲ್ಲಿ ಬರಬೇಕು. ಹಾಗಾಗಿ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕಾದ ಕ್ಷಣದಲ್ಲಿ ಇಡಬೇಕಾದ ಮೊದಲ ಹೆಜ್ಜೆ ಇದು ಎಂಬುದನ್ನು ಮರೆಯಬೇಡಿ.

ಮನೆಯಲ್ಲಿದ್ದರೂ ಆಫೀಸ್ ಬಟ್ಟೆ ಧರಿಸಿ

ಮನೆಯಲ್ಲಿದ್ದರೂ ಆಫೀಸ್ ಬಟ್ಟೆ ಧರಿಸಿ

ಕೆಲವು ಸೌಂದರ್ಯಪ್ರಜ್ಞೆಯ ತಜ್ಞರು ಹೇಳುವ ಪ್ರಕಾರ ನಮ್ಮ ಮೈ ಮೇಲಿನ ಬಟ್ಟೆ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆಯಂತೆ. ನಾವು ಪ್ರತಿಯೊಂದು ಸಂದರ್ಭಕ್ಕೂ ಅದರ ಅನುಗುಣವಾಗಿ ಡ್ರೆಸ್ ಮಾಡಿಕೊಳ್ಳುವ ವಿಧಾನವನ್ನು ಕಲಿತಿರುತ್ತೇವೆ. ಎಲ್ಲಾ ಕಡೆಯೂ ಒಂದೇ ರೀತಿಯ ಬಟ್ಟೆ ಹಾಕಿಕೊಂಡು ನಡೆದಾಡಲು ಸಾಧ್ಯವಿಲ್ಲ. ಉದಾಹರಣೆಗೆ ಯಾವುದಾದರೂ ಶುಭ ಸಮಾರಂಭ, ಬರ್ತಡೆ ಪಾರ್ಟಿ, ರೆಸೆಪ್ಷನ್ ಗೆ ಹೋದ ಸಂದರ್ಭದಲ್ಲಿ ಒಂದು ರೀತಿ ಇತರರ ಮಧ್ಯೆ ಎದ್ದು ಕಾಣುವಂತಹ ಬಟ್ಟೆ ತೊಟ್ಟಿರುತ್ತೇವೆ.

ಅದೇ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟುಕೊಂಡಿರುತ್ತೇವೆ. ಇದರಿಂದ ನಮ್ಮ ಮನಸ್ಸು ದೇವಸ್ಥಾನದ ವಾತಾವರಣಕ್ಕೆ ತಕ್ಕಂತೆ ಭಕ್ತಿ ಪರವಶವಾಗಿ ವರ್ತಿಸುತ್ತದೆ. ಅದೇ ರೀತಿ ಕೆಲಸದ ಸಮಯದಲ್ಲೂ ಅಷ್ಟೇ. ಯೋಗ್ಯವಾದ ಉಡುಗೆ ತೊಡುಗೆಗಳಿಂದ ನಮ್ಮ ಕೆಲಸದ ಜವಾಬ್ದಾರಿ ನಮ್ಮ ಕಣ್ಣಿಗೆ ಕಾಣುತ್ತದೆ. ಆದ್ದರಿಂದ ಮನೆಯಲ್ಲಿ ಇದ್ದರೂ ಸಹ ಕಚೇರಿಗೆ ಹೋಗುವಾಗ ಧರಿಸುವ ಬಟ್ಟೆಗಳನ್ನೇ ಧರಿಸಿ ಕೆಲಸ ಮಾಡಲು ಕುಳಿತುಕೊಂಡರೆ ನಿಮ್ಮ ಮನಸ್ಸು ದೃಢ ನಿಶ್ಚಯದಿಂದ ಕೆಲಸ ನಿರ್ವಹಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ.

52 ಮತ್ತು 17ರ ನಿಯಮ ಪಾಲಿಸಿ

52 ಮತ್ತು 17ರ ನಿಯಮ ಪಾಲಿಸಿ

ಒಂದು ಅಧ್ಯಯನದ ಪ್ರಕಾರ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ತಮ್ಮ ಸಂಸ್ಥೆಗಾಗಿ, ಹೆಚ್ಚು ಕಷ್ಟ ಪಟ್ಟು ದುಡಿಯುವ ಮಂದಿ ಸಾಮಾನ್ಯವಾಗಿ ಈ 52 ಮತ್ತು 17 ರ ನಿಯಮವನ್ನು ಪಾಲಿಸುತ್ತಾರೆ. ಅಂದರೆ ತಾವು ಕೆಲಸ ಮಾಡುವ ಸ್ಥಳದಲ್ಲಿ ತಮ್ಮ ಕೆಲಸದ ಮೇಲೆ ಹೆಚ್ಚಾಗಿ ತಮ್ಮ ಮನಸ್ಸು ಕೇಂದ್ರೀಕರಿಸುವ ಜನರು ಪ್ರತಿ 52 ನಿಮಿಷಗಳಿಗೊಮ್ಮೆ ಸುಮಾರು 17 ನಿಮಿಷಗಳು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ.

ಇದರ ಹಿಂದಿರುವ ವೈಜ್ಞಾನಿಕ ಕಾರಣವನ್ನು ಸರಳವಾಗಿ ಹೇಳಬೇಕೆಂದರೆ, ಯಾವುದೇ ವ್ಯಕ್ತಿ ಕೆಲಸದ ಮಧ್ಯೆ ತೆಗೆದುಕೊಳ್ಳುವ ಅಲ್ಪವಿರಾಮ ಆತನ ಮನಸ್ಸನ್ನು ಪುನಶ್ಚೇತನಗೊಳಿಸಿ, ಆತನನ್ನು ಸಂಸ್ಥೆಯ ಆದಾಯದ ದೃಷ್ಟಿಯಿಂದ ಇನ್ನಷ್ಟು ಹೆಚ್ಚು ಕೆಲಸ ಮಾಡಲು ಪ್ರೇರೇಪಿಸುತ್ತದೆ. ಆದ್ದರಿಂದ ಮನೆಯಲ್ಲಿ ಕೆಲಸ ಮಾಡುವ ನೀವು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಲು ಮೊದಮೊದಲು ಕಷ್ಟ ಎನಿಸಿದ ಪಕ್ಷದಲ್ಲಿ ಪ್ರತಿ 52 ಮತ್ತು 17 ನಿಮಿಷಗಳಿಗೊಮ್ಮೆ ಅಲಾರ್ಮ್ ಇಟ್ಟು ರೂಡಿ ಮಾಡಿಕೊಳ್ಳಬಹುದು.

ವಿರಾಮದ ಸಮಯದಲ್ಲಿ ಸಿಗುವ ಸ್ವಲ್ಪ ಕಾಲ ಕೆಲಸ ಬಿಟ್ಟು ಬೇರೆ ಕಡೆ ನಿಮ್ಮ ಗಮನಹರಿಸುವುದು ಒಳ್ಳೆಯದು. ಉದಾಹರಣೆಗೆ ನಿಮ್ಮ ಕೈಕಾಲುಗಳನ್ನು ಆಡಿಸಿ ವ್ಯಾಯಾಮ ಮಾಡುವುದು, ಬೇಕಾದ ತಿಂಡಿಯನ್ನು ತಿನ್ನುವುದು, ಮನೆಯವರ ಜೊತೆ ಆರಾಮವಾಗಿ ಖುಷಿಯಾಗಿ ಮಾತನಾಡುತ್ತಾ ಕಾಲ ಕಳೆಯುವುದು ಹೀಗೆ. ನಿಮ್ಮ ಮನಸ್ಸಿಗೆ ತೃಪ್ತಿ ಕೊಡುವ ಯಾವುದಾದರೂ ಚಟುವಟಿಕೆಗೆ ನಿಮ್ಮನ್ನು ನೀವು ಒಡ್ಡಿಕೊಳ್ಳುವುದು ಸೂಕ್ತ.

ಮನೆಯಲ್ಲಿದ್ದರೂ ಕೆಲಸ ಮಾತ್ರ ಕಟ್ಟುನಿಟ್ಟಾಗಿ ಮಾಡಿ

ಮನೆಯಲ್ಲಿದ್ದರೂ ಕೆಲಸ ಮಾತ್ರ ಕಟ್ಟುನಿಟ್ಟಾಗಿ ಮಾಡಿ

ಪ್ರತಿ ದಿನ ಮನೆಯಿಂದ ಆಫೀಸಿಗೆ ಹೊರಟು ಅಲ್ಲಿ ಇತರ ಸಹೋದ್ಯೋಗಿಗಳ ಜೊತೆ ಕೆಲಸ ಹಂಚಿಕೊಂಡು ಮಾಡುತ್ತಿದ್ದ ಯಾವುದೇ ವ್ಯಕ್ತಿಗೆ ಇದ್ದಕ್ಕಿದ್ದಂತೆ ಅದೇ ಕೆಲಸವನ್ನು ಸುತ್ತಮುತ್ತ ಯಾರೂ ಇಲ್ಲದೆ ಮಾಡಬೇಕು ಎಂದರೆ ಮನಸ್ಸಿಗೆ ತುಂಬಾ ಕಷ್ಟವಾಗುತ್ತದೆ ನಿಜ. ಹಾಗಾಗಿ ಕಚೇರಿಯಲ್ಲಿ ಕೆಲಸ ಮಾಡಿದಷ್ಟು ಆಸಕ್ತಿ ಮನೆಯಲ್ಲಿ ಕೆಲಸ ಮಾಡುವಾಗ ಬರುವುದಿಲ್ಲ.

ಇದರಿಂದ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯೊಳಗೆ ಮುಗಿಯುವ ಕೆಲಸ ರಾತ್ರಿ ಊಟ ಮಾಡಿ ಮಲಗಿಕೊಳ್ಳುವವರೆಗೂ ಮುಂದಕ್ಕೆ ಹೋಗುತ್ತದೆ. ಇದರಿಂದ ಮನಸ್ಸಿಗೆ ಬಹಳಷ್ಟು ಕಷ್ಟವಾಗುತ್ತದೆ ಜೊತೆಗೆ ಕೆಲಸವೂ ಕೂಡ ಮಂದಗತಿಯಲ್ಲಿ ಸಾಗುತ್ತದೆ. ಸಾಲದಕ್ಕೆ ಕಚೇರಿಯ ಮೇಲಧಿಕಾರಿಗಳಿಂದ ಕೆಲಸದ ಸ್ಥಿತಿಗತಿಯ ಬಗ್ಗೆ ವಿಚಾರಿಸಲು ಆಗಾಗ ದೂರವಾಣಿ ಕರೆಗಳು ಬೇರೆ. ಈ ಕಾರಣದಿಂದ ಕೆಲಸ ಮಾಡಲು ಆಸಕ್ತಿಯೇ ಇಲ್ಲದಂತಾಗುತ್ತದೆ. ಇಡೀ ದಿನ ನಮ್ಮ ಮುಂದಿದೆ. ಆಮೇಲೆ ಮಾಡಿದರಾಯಿತು ಎಂಬ ಸೋಮಾರಿತನ ಆವರಿಸುತ್ತದೆ.

ಆದ್ದರಿಂದ ಈ ಸಮಯದಲ್ಲಿ ನಿಮ್ಮ ಸಂಸ್ಥೆಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ನಿಮಗಾಗಿ ನೀವು ಕಟ್ಟುನಿಟ್ಟಿನ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಬೇರೆ ಯಾವುದೇ ಅನ್ಯ ವಿಚಾರಗಳಿಗೆ ಕಿವಿಗೊಡದೇ, ನಿಮ್ಮ ಕೆಲಸವನ್ನು ನೀವು ಅಚ್ಚುಕಟ್ಟಾಗಿ ಮಾಡುವ ಜವಾಬ್ದಾರಿ ಹೊಂದಿರಬೇಕು.

ಮನೆಯಲ್ಲಿದ್ದರೇನಾಯಿತು? ನಿಮ್ಮ ಸಹೋದ್ಯೋಗಿಗಳ ಜೊತೆ ಸಂಪರ್ಕವಿರಲಿ

ಮನೆಯಲ್ಲಿದ್ದರೇನಾಯಿತು? ನಿಮ್ಮ ಸಹೋದ್ಯೋಗಿಗಳ ಜೊತೆ ಸಂಪರ್ಕವಿರಲಿ

ಆಗಲೇ ಹೇಳಿದಂತೆ ಕಚೇರಿಯಲ್ಲಿ ಮಾಡುವ ಕೆಲಸಕ್ಕೂ ಮತ್ತು ಮನೆಯಲ್ಲಿ ಮಾಡುವ ಕಚೇರಿ ಕೆಲಸಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಕಚೇರಿಯಲ್ಲಿ ಕೆಲಸ ಮಾಡಲು ಸಹೋದ್ಯೋಗಿಗಳಿಂದ ನಿರಂತರವಾಗಿ ಪ್ರೇರೇಪಣೆ ಸಿಗುತ್ತಲೇ ಇರುತ್ತದೆ.

ಅಂದರೆ ಕೆಲಸದ ಸ್ಥಿತಿಗತಿಯ ಬಗ್ಗೆ ಮಾತು ಕಥೆಗಳು, ಚರ್ಚೆಗಳು, ಕೆಲಸದ ವಿಷಯವಾಗಿ ಮೀಟಿಂಗ್ ಗಳು ಹೀಗೆ ಹತ್ತಾರು ವಿಚಾರಗಳಿಂದ ಕೆಲಸದಲ್ಲಿ ಆಳವಾಗಿ ತಲ್ಲೀನರಾಗಿರುತ್ತೀರಿ. ಆದರೆ ಮನೆಯಲ್ಲಿ ಈ ವಾತಾವರಣವಿರುವುದಿಲ್ಲ. ಹಾಗೆಂದು ಕೆಲಸ ಮಾಡದೆ ಸೋಮಾರಿತನ ತೋರಿಸಲೂ ಸಾಧ್ಯವಿಲ್ಲ. ಮನೆಯಲ್ಲಿ ಆ ವಾತಾವರಣ ಇಲ್ಲದಿದ್ದರೂ ನೀವೇ ಅದನ್ನು ಸ್ವಯಂ ಸೃಷ್ಟಿ ಮಾಡಿಕೊಳ್ಳಬೇಕು.

ಅಂದರೆ ನಿಮ್ಮ ಸಹೋದ್ಯೋಗಿಗಳ ಜೊತೆ ಅವರ ಕೆಲಸದ ವಿಷಯವಾಗಿ ಆಗಾಗ ಫೋನ್ ಕರೆ ಮಾಡಿ ವಿಚಾರಿಸುತ್ತಿರಿ. ಇದರಿಂದ ನಿಮಗೆ ನಿಮ್ಮ ಕೆಲಸದ ಮೇಲೆ ಆಸಕ್ತಿ ಹೆಚ್ಚಾಗುತ್ತದೆ ಮತ್ತು ನಿಮ್ಮ ಸಂಸ್ಥೆಯ ಕೆಲಸವು ಸರಿಯಾದ ಸಮಯಕ್ಕೆ ಮುಗಿಸಿಕೊಡಲು ಸಹಾಯವಾಗುತ್ತದೆ.

English summary

How To Stay Focused While Working From Home

Here we are discussing about how to stay focused while working from home. let's look at a few tips to stay focused and avoid distractions while working from home. Read more.
Story first published: Friday, March 27, 2020, 18:00 [IST]
X