For Quick Alerts
ALLOW NOTIFICATIONS  
For Daily Alerts

ಸ್ನೇಹಿತರ ದಿನ ವಿಶೇಷ ಲೇಖನ-'ಗೆಳೆತನವೆಂಬ ಸಿರಿತನ'

By Manorama Hejmadi
|

ಒಂದು ಒಳ್ಳೆಯ ಪುಸ್ತಕ ಒಬ್ಬ ಒಳ್ಳೆಯ ಗೆಳೆಯನಿದ್ದಂತೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಒಳ್ಳೆಯ ಗೆಳೆಯನೊಬ್ಬ ನಮ್ಮ ಇಡೀ ಜೀವನವನ್ನು ಸುಂದರವಾಗಿಸಬಲ್ಲ. ಜೀವನದಲ್ಲಿ ಎದುರಾಗುವ ಕಷ್ಟ- ನಷ್ಟಗಳನ್ನು ಸಹೃದಯಿಗಳೊಂದಿಗೆ ಮಾತ್ರ ಹಂಚಿಕೊಳ್ಳಬಹುದು. ಅವರ ಸಲಹೆಗಳಿಂದ ಧೈರ್ಯ, ಸ್ಫೂರ್ತಿ ಸಿಗುವುದು.

ಹಾಗೆಯೇ ಸಂತೋಷವನ್ನು ಹಂಚಿಕೊಳ್ಳುವುದಕ್ಕೂ ಸಹೃದಯಿಗಳೇ ಬೇಕು. ಇಲ್ಲವಾದರೆ, ಸಂತೋಷ ಸಂಪೂರ್ಣ ಅನುಭವಕ್ಕೆ ಬರುವುದಿಲ್ಲ!! ಸಮಾಜದಲ್ಲಿ ಎಲ್ಲ ರೀತಿಯ ಜನಗಳೂ ಇರುತ್ತಾರೆ. ನಮ್ಮ ಕಷ್ಟ ಗಳಿಗೆ ಸ್ಪಂದಿಸುವುದು ಹಾಗಿರಲಿ, " ಕೆಳಗೆ ಬಿದ್ದವನಿಗೆ ತಲೆಗೊಂದು ಕಲ್ಲು" ಎಂಬಂತೆ ಅವಹೇಳನ ಮಾಡುವವರೂ ಇರುತ್ತಾರೆ.

Friendship-Day Special: Facts About Friendship

ನೋವಿಗೆ ಉಪ್ಪು ಹಚ್ಚುವ ಇಂತಹವರ ನಡುವೆ ಒಬ್ಬ ಸಹೃದಯಿಯ ಬೆಂಬಲ ನಮಗೆ ಇದ್ದರೂ ಸಾಕು; ಬದುಕು ಬಂಗಾರ ವಾಗಬಲ್ಲದು. ದುರ್ಜನರು ನಮ್ಮ ಸಂತೋಷವನ್ನು ಸಹಿಸರು. ಆದ್ದರಿಂದ ಅಂತಹವರಿಂದ ದೂರವಿರುವುದೇ ಮೇಲು.

ಗೆಳೆಯ-ಗೆಳತಿಯರ ದೊಡ್ಡ ಗುಂಪೇ ನಿಮ್ಮ ಸುತ್ತಲೂ ಇದೆ ಎಂದಾದರೆ, ನೀವು ಪರಮ ಸುಖಿಗಳು.ಅದೃಷ್ಟವಂತರು. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಎಂದು ಪರಸ್ಪರ ಸಹಾಯ ಮಾಡಿಕೊಳ್ಳುತ್ತಾ, ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಸಂತೋಷವನ್ನು ಇಮ್ಮಡಿಗೊಳಿಸಿಕೊಳ್ಳುತ್ತಾ,( ಬೆಳಕಿನ ಎದುರು ಕನ್ನಡಿ ಇಟ್ಟರೆ ಹೇಗೋ ಹಾಗೆ, ಸಂತೋಷ ಸಹೃದಯರ ಸಹವಾಸದಲ್ಲಿ ಇಮ್ಮಡಿಗೊಳ್ಳುವುದು) ಜೀವನದ ಜಟಕಾ ಬಂಡಿ ಸುಗಮವಾಗಿ ಸಾಗುವುದು. ಸ್ನೇಹಕ್ಕೇಕೆ ಶಾಸ್ತ್ರದ ಹಂಗು !!

ಕೆಲವೊಮ್ಮೆ ಒಳ್ಳೆಯ ಗೆಳೆಯ/ತಿಯರ ಸಹೃದಯತೆಯ ಮೌಲ್ಯ ನಮಗೆ ತಿಳಿದಿರುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಎಂಬ ಭಾವನೆ ನಮ್ಮದಾಗಿರುತ್ತದೆ. ನಮಗೆ ಸಂಕಷ್ಟ ಎದುರಾದಾಗ ಯಾರು ನಮ್ಮನ್ನು ಧೃತಿಗೆಡದಂತೆ ಕಾಪಾಡಿ ನೆರವಾಗುತಾರೋ, ಆಗ ಮಾತ್ರ " ನಿಜವಾದ" ಗೆಳೆತನದ ಪರಿಚಯವಾಗುತ್ತದೆ. ಇವರು ನಮ್ಮ ಸುಖವನ್ನು ಕಂಡು ತಾವೇ ಸುಖಿಸಿದಷ್ಟು ಸಂತಸ ಪಡಬಲ್ಲರು! ನಿಜವಾದ ಪೀತಿ ನಿಸ್ವಾರ್ಥವಾದುದು. ಸ್ವಹಿತಕ್ಕಾಗಿ ನಮಗೆ ಹತ್ತಿರವಾಗುವ ಜನ, ನಿಜವಾದ ಗೆಳೆಯರಲ್ಲ. ಅಂತಹವರಿಗೆ ಗೆಳೆತನವೂ ಒಂದು ವ್ಯಾಪಾರದಂತೆ. "ಉಂಟಾದ ಕಾಲಕ್ಕೆ ನೆಂಟರು ಇಷ್ಟರು...".ಮನೆ ತುಂಬಿಕೊಳ್ಳುತ್ತಾರೆ .

ಕೈ ಖಾಲಿಯಾದಾಗ ಯಾರು ನಮ್ಮ ಕೈ ಹಿಡಿದು ಮುನ್ನಡೆಯಲು ಅನುವಾಗುತ್ತಾರೋ ಅವರು ನಿಜವಾದ ಗೆಳೆಯರು. ಗೆಳೆತನದಿಂದ ಅನೇಕ ರೀತಿಯ ಲಾಭಗಳೂ ಇವೆ. ಗೆಳೆತನದಿಂದ ಮನಸ್ಸು ಪ್ರಫುಲ್ಲವಾಗುತ್ತದೆ, ನಿರಾಳ ವಾಗುತ್ತದೆ. ಇದರಿಂದಾಗಿ ಹೃದ್ರೋಗ, ಮಾನಸಿಕ ಒತ್ತಡದಂತಹ ಖಾಯಿಲೆಯೂ ಹತ್ತಿರ ಸುಳಿಯದು.

ಮನಸ್ಸು ಭಾರವಾದಾಗ ಗೆಳೆಯ/ತಿಯರೊಂದಿಗೆ ದುಃಖ ಹಂಚಿಕೊಂಡರೆ ಮನಸ್ಸು ಹಗುರಾಗುತ್ತದೆ. ನೀವು ಕೆಲಸ ಮಾಡುವ ಕಚೇರಿಯಲ್ಲಿ ಸಹೃದಯಿಗಳಿದ್ದರಂತೂ ನೀವು ತುಂಬ ಅದೃಷ್ಟವಂತರು. ನಿಮ್ಮ ಕೆಲಸ ಸಲೀಸು ಮಾತ್ರವಲ್ಲ, ನಿಮ್ಮ ಕೆಲಸ ಕೆಲಸವೇ ಅನಿಸದೆ, ಅದೊಂದು ಆಟದಂತೆ ಸುಲಲಿತವಾಗುವುದು.

ಕೆಲವೊಮ್ಮೆ ಸಂದರ್ಭಕ್ಕನುಸಾರವಾಗಿ ಪುರುಷ-ಸ್ತ್ರೀಯರ ನಡುವೆ ಸ್ನೇಹ ಉಂಟಾದಾಗ, ಆ ಸ್ನೇಹವನ್ನು ಒಂದು ಶಿಷ್ಟ ಸಂಸೃತಿಯ ಪರಿಧಿಯೊಳಗೆ ಹಿಡಿದಿಡಬೆಕಾಗುವುದು. ಅನ್ಯ ಲಿಂಗದವರೊಂದಿಗಿನ ಸ್ನೇಹವು, ಶರೀರದ ಮಿಲನದಲ್ಲೇ ಪರ್ಯಾವಸಾನಗೊಳ್ಳಬೇಕೆಂದೇನೂ ಇಲ್ಲ.

ಇದನ್ನು ಅರಿತು ಕೊಳ್ಳಲು ಒಂದು ಸಭ್ಯ ಸಂಸ್ಕಾರದ ಹಿನ್ನೆಲೆ ಬೇಕಾಗುತ್ತದೆ. ಪ್ರಾಣಿಗಳಿಗೂ ಮತ್ತು ಮನುಷ್ಯರಿಗೂ ಇರುವ ವ್ಯತ್ಯಾಸ ಇಲ್ಲೇ ಅಲ್ಲವೇ? ಒಟ್ಟಿನಲ್ಲಿ ಸ್ನೇಹದ ಎಡ-ಬಲವನ್ನರಿತು ಪ್ರಬುದ್ಧ ಸಂಸ್ಕಾರದ ಹಿನ್ನೆಲೆಯಲ್ಲಿ ಮುಂದುವರೆಯುವ ಸ್ನೇಹ ಜೀವನ ಪಥಕ್ಕೆ ಅನಿವಾರ್ಯವೂ ಹೌದು, ಆನಂದವು ಹೌದು!

English summary

Friendship-Day Special: Facts About Friendship

Friendships make life meaningful and beautiful. Having a friend's companionship feels great. Good friends are surely strength. If you have someone to tell all your secrets and if you have someone who knows your weaknesses but still helps you, you are lucky.
X
Desktop Bottom Promotion