For Quick Alerts
ALLOW NOTIFICATIONS  
For Daily Alerts

ರಕ್ಷಾಬಂಧನ ಹಬ್ಬದ ಹಿಂದಿರುವ ಪುರಾಣ ಕಥೆಗಳನ್ನು ಕೆಣಕಿದಾಗ..!

|

ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸುಗ್ಗಿ. ಈ ಮೂರು ನಾಲ್ಕು ತಿಂಗಳುಗಳಲ್ಲಿ ಒಂದಾದ ಮೇಲೊಂದರಂತೆ ಸಾಲುಸಾಲಾಗಿ ಹಬ್ಬಗಳು ಬರುತ್ತಾ ಹೋಗುತ್ತವೆ, ಸಂತೋಷವನ್ನು ನೀಡುತ್ತಾ ಹೋಗುತ್ತವೆ. ಅದರಲ್ಲಿ ಅತ್ಯಂತ ಸಂತೋಷ ತರುವ ಹಬ್ಬವೆಂದರೆ ತಂಗಿಯು ಅಣ್ಣನಿಗೆ ರಾಖಿ ಕಟ್ಟುವ ರಕ್ಷಾಬಂಧನ ಹಬ್ಬ. ಅಣ್ಣನ ಕೈಗಂಟಿಗೆ ಬಣ್ಣದ ರಾಖಿ ಕಟ್ಟುವ ಮೂಲಕ ತಂಗಿ ತನ್ನ ಅಣ್ಣನು ತನಗೆ ದುಷ್ಟಶಕ್ತಿಗಳಿಂದ ಸುರಕ್ಷತೆಯನ್ನು ನೀಡುವಂತಾಗಲಿ ಎಂದು ಹಾರೈಸುತ್ತಾಳೆ.

ಹೌದು, ಅಣ್ಣ ತಂಗಿಯ ಅನುಬಂಧ ಬೆಲೆ ಕಟ್ಟಲಾಗದ್ದು. ತಾಯಿಯ ಮಮತೆಯಂತೆಯೇ ಅಣ್ಣನ ರಕ್ಷಣೆ ಪ್ರೀತಿ ಹೆಣ್ಣಿಗೆ ಬಲವಿದ್ದಂತೆ. ಅನಾದಿ ಕಾಲದಿಂದಲೂ ಅಣ್ಣ ತಂಗಿಯ ಪವಿತ್ರ ಅನುಬಂಧ ಗಟ್ಟಿಯಾಗಿ ನೆಲೆ ನಿಂತಿರುವಂಥದ್ದು. ಸಹೋದರನ ಶ್ರೀರಕ್ಷೆ ಎಂದಿಗೂ ಸಹೋದರಿಯ ಮೇಲಿರಲಿ ಎಂಬ ಆಶಯದೊಂದಿಗೆ ರಕ್ಷಾ ಬಂಧನವನ್ನು ಭಾರತದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ.

The Story Behind Raksha Bandhan

ಈ ಹಬ್ಬವನ್ನು ಆಧ್ಯಾತ್ಮಿಕವಾಗಿ ನೋಡಿದರೆ, ಈ ಹಬ್ಬವು ನಡೆ, ನುಡಿ ಮತ್ತು ಕ್ರಿಯೆಗಳಲ್ಲಿ ಪರಿಶುದ್ಧತೆಯನ್ನು ಹೊಂದುವಂತೆ ಸೂಚಿಸುತ್ತದೆ. ಬಲಗೈಗೆ ಕಟ್ಟಿಕೊಳ್ಳುವ ಈ ಪವಿತ್ರ ದಾರವಾದ ರಾಖಿಯು ಪ್ರತಿಯೊಬ್ಬರಿಗೂ ಪ್ರಪಂಚದ ಐಹಿಕ ಸುಖ ಭೋಗಗಳಿಗೆ ಮರುಳಾಗದಿರುವಂತೆ ನೆನಪಿಸುತ್ತ ಇರುತ್ತದೆ. ಇನ್ನು ರಾಖಿಯನ್ನು ಕಟ್ಟುವ ಸಹೋದರಿಯು ತನ್ನ ಸಹೋದರನಲ್ಲಿ ತನ್ನ ಧಾರ್ಮಿಕ ನಂಬಿಕೆ ಮತ್ತು ಹಂಬಲಗಳನ್ನು ಕಾಣುತ್ತಾಳೆ. ಸದಾ ಆತನ ಶ್ರೇಯಸ್ಸನ್ನು ಕೋರಿ ಕಟ್ಟುವ ಈ ರಾಖಿಯು ಒಂದು ನಿಷ್ಕಲ್ಮಶವಾದ ಪ್ರೀತಿಯ ಧ್ಯೋತಕವಾಗಿ ನಿಲ್ಲುತ್ತದೆ. ಈ ಬಂಧನ ಆಕೆಯ ಭರವಸೆ, ನಂಬಿಕೆ ಹಾಗು ಶಕ್ತಿಯನ್ನು ಸೋದರನಿಗೆ ನೆನಪು ಮಾಡಿಕೊಡುತ್ತದೆ.

ಪುರಾಣದಲ್ಲಿರುವ ಕಥೆಯೊಂದರ ಪ್ರಕಾರ ರಾಕ್ಷಸರ ವಿರುದ್ಧ ಎಲ್ಲಾ ಯುದ್ಧಗಳನ್ನು ಸೋತು ಬಂದ ಇಂದ್ರ ತನ್ನ ಆತ್ಮವಿಶ್ವಾಸ ಕಳಕೊಂಡು ಖಿನ್ನತೆಗೆ ಒಳಗಾಗಿ ತನ್ನ ಅರಮನೆಗೆ ಬಂದಿದ್ದ. ಈ ವೇಳೆ ಆತನ ಪತ್ನಿ, ತನ್ನ ಗುರುವಿನ ಸಲಹೆಯಂತೆ ಒಂದು ದಾರವನ್ನು ತೆಗೆದುಕೊಂಡು ಅದನ್ನು ಪವಿತ್ರಗೊಳಿಸಿ ಇಂದ್ರನ ಕೈಗೆ ಕಟ್ಟುತ್ತಾಳೆ. ಇದರಿಂದ ಇಂದ್ರನು ಖಿನ್ನತೆಯಿಂದ ಹೊರಬಂದು ರಾಕ್ಷಸರನ್ನು ಸೋಲಿಸುತ್ತಾನೆ. ಅಂದಿನಿಂದ ಈ ದಾರವನ್ನು ಕಟ್ಟುವ ರಕ್ಷಾ ಬಂಧನ ಪರಿಕಲ್ಪನೆಯು ಆರಂಭವಾಯಿತು. ಸಹೋದರನಿಗಾಗಿ ರಾಖಿ ತಯಾರಿಸಲು ಸರಳ ಉಪಾಯಗಳು

ರಕ್ಷಾ ಬಂಧನದ ಬಗ್ಗೆ ಇರುವ ಇನ್ನೊಂದು ಕಥೆಯೆಂದರೆ ಅದು ದ್ರೌಪದಿ ಮತ್ತು ಭಗವಾನ್ ಶ್ರೀಕೃಷ್ಣನದ್ದು. ಭಗವಾನ್ ಕೃಷ್ಣನು ಶಿಶುಪಾಲನನ್ನು ಕೊಲ್ಲಲು ತನ್ನ ಸುದರ್ಶನ ಚಕ್ರವನ್ನು ಬಳಸುತ್ತಾನೆ. ಈ ವೇಳೆ ಆತನ ಕೈ ಬೆರಳಿಗೆ ಗಾಯವಾಗುತ್ತದೆ. ಎಲ್ಲರೂ ಕೈಬೆರಳಿಗೆ ಕಟ್ಟಲು ಬಟ್ಟೆಯನ್ನು ತರಲು ಓಡುತ್ತಾರೆ. ಆದರೆ ದ್ರೌಪದಿ ತನ್ನ ಸೀರೆಯ ಒಂದು ತುಂಡನ್ನು ಕತ್ತರಿಸಿ ರಕ್ತ ಸುರಿಯುತ್ತಿರುವ ಕೃಷ್ಣನ ಕೈಗೆ ಕಟ್ಟುತ್ತಾಳೆ. ಇದಕ್ಕೆ

ಪ್ರತಿಫಲವನ್ನು ನೀಡಿದ ಶ್ರೀಕೃಷ್ಣ ಹಸ್ತಿನಾಪುರದ ಅರಮನೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆದಾಗ ಅದು ಎಳೆದಷ್ಟು ಉದ್ದವಾಗುವಂತೆ ಮಾಡಿ ದ್ರೌಪದಿಯ ಮಾನ ಕಾಪಾಡಿದ. ಇದರ ಜೊತೆಗೆ, ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದಳಂತೆ. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಅಭಯವನ್ನಿತ್ತನಂತೆ. ರಕ್ಷಾ ಬಂಧನ ಆಚರಣೆಯ ಪ್ರಾಮುಖ್ಯತೆ ಏಕೆ ವಿಶಿಷ್ಟವಾಗಿದೆ?

ಇನ್ನೊಂದು ಕಥೆಯೆಂದರೆ ಅದು ರಾಜ ಬಲಿ ಮತ್ತು ಲಕ್ಷ್ಮೀ ದೇವಿಯದ್ದಾಗಿದೆ. ಬಲಿ ಚಕ್ರವರ್ತಿಯು ವಿಷ್ಣು ದೇವರನ್ನು ತನ್ನ ಅರಮನೆಗೆ ಆಹ್ವಾನಿಸುತ್ತಾನೆ. ಬಲಿಯ ಅರಮನೆಯಲ್ಲಿ ಉಳಿಯಲು ವಿಷ್ಣು ದೇವರು ಬಯಸುತ್ತಾರೆ. ಆದರೆ ಲಕ್ಷ್ಮೀ ದೇವಿಗೆ ಇದು ಇಷ್ಟವಾಗುವುದಿಲ್ಲ ಮತ್ತು ಆಕೆ ವಿಷ್ಣು ದೇವರನ್ನು ಹಿಂಬಾಲಿಸಿಕೊಂಡು ಬಂದು ಬಲಿ ಚಕ್ರವರ್ತಿ ಮುಂದೆ ಬಂದು ನಿಲ್ಲುತ್ತಾರೆ.

ಬಲಿ ಚಕ್ರವರ್ತಿಯ ಭಕ್ತಿಯಿಂದ ಪ್ರಸನ್ನಳಾದ ಲಕ್ಷ್ಮೀ ದೇವಿಯು ಆತನನ್ನು ತನ್ನ ಸಹೋದರನೆಂದು ಸ್ವೀಕರಿಸಿ ರಾಖಿ ಕಟ್ಟುತ್ತಾಳೆ. ತನ್ನ ರಾಜ್ಯದಿಂದ ಏನು ಬೇಕಾದರೂ ಕೇಳಬಹುದೆಂದು ಬಲಿ ಚಕ್ರವರ್ತಿಯು ಲಕ್ಷ್ಮೀ ದೇವಿಗೆ ಹೇಳುತ್ತಾನೆ. ವಿಷ್ಣು ದೇವರು ವೈಕುಂಠಕ್ಕೆ ಮರಳಬೇಕೆಂದು ಲಕ್ಷ್ಮೀ ದೇವಿ ಕೇಳಿಕೊಳ್ಳುತ್ತಾಳೆ. ಇದಕ್ಕೆ ಬಲಿ ಚಕ್ರವರ್ತಿ ಒಪ್ಪಿಕೊಳ್ಳುತ್ತಾನೆ. ರಾಖಿ ಕಟ್ಟುವ ಸಂಪ್ರದಾಯವು ಈ ದಿನದಿಂದ ಆರಂಭವಾಯಿತೆಂದು ನಂಬಲಾಗಿದೆ.

English summary

The Story Behind Raksha Bandhan

Rakshabandhan is a mark of bonding between brothers and sisters. The word itself means a bond of protection which implies protection from both sides. It is also a mark of social bonding. Though it is popular as a festival of brothers and sisters, Rakhi can also be tied as a mark of protection by wife to her husband, mother to son etc. Indian history is full of instances where women have tied Rakhi on the wrists of great men as a mark of bonding and have prevented many catastrophes.
Story first published: Friday, August 28, 2015, 19:27 [IST]
X
Desktop Bottom Promotion