For Quick Alerts
ALLOW NOTIFICATIONS  
For Daily Alerts

ಯಾವ ಬೆರಳಿಗೆ ಯಾವ ಬಗೆಯ ಉಂಗುರ? ಏನಿದರ ವಿಶೇಷತೆ?

|

ಇದುವರೆಗೂ ಚಿನ್ನದ ಬೆಲೆ ಗಗನಕ್ಕೇರಿದೆ. ಇನ್ನು ಸ್ವಲ್ಪ ದಿನಗಳು ಕಳೆದರೆ ಬಹುಷಃ ಕಡಿಮೆ ಆಗಬಹುದು. ಆಗ ನಮಗೆ ಬೇಕಾದ ಆಭರಣ ಖರೀದಿ ಮಾಡಿಕೊಳ್ಳೋಣ ಎಂದುಕೊಳ್ಳುತ್ತಿದ್ದೆವು. ಆದರೆ ಈಗ ಕೊರೋನಾ ಬಂದು ಜನರ ಬದುಕನ್ನು ಬೀದಿಗೆ ತಂದು ಮೂರಾಬಟ್ಟೆ ಮಾಡಿರುವುದರ ಜೊತೆಗೆ ನಮ್ಮ ಅಚ್ಚುಮೆಚ್ಚಿನ ಹಳದಿ ಲೋಹವನ್ನು ಗಗನಕ್ಕಿಂತಲೂ ತುಂಬಾ ಎತ್ತರದ ಸ್ಥಾನದಲ್ಲಿ ತೆಗೆದುಕೊಂಡು ಹೋಗಿ ನಿಲ್ಲಿಸಿದೆ.

ಇದು ನಮ್ಮಂಥಹವರಿಗಲ್ಲ ಅನ್ನಿಸುವುದರ ಜೊತೆಗೆ ಸಾಮಾನ್ಯ ಜನರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಚಿನ್ನ ಇನ್ನು ಮುಂದೆ ಕೇವಲ ಕೈಗೆಟುಕದ ಕನಸು ಮಾತ್ರ ಎಂಬ ಭಾವನೆ ಈಗಾಗಲೇ ಮೂಡಿದೆ. ಆದರೆ ಶ್ರೀಮಂತರಿಂದ ಚಿನ್ನದ ಬೇಟೆ ಇನ್ನೂ ನಿರಂತರವಾಗಿ ಮೊದಲಿನಷ್ಟು ಇಲ್ಲದಿದ್ದರೂ ಸರಿಸುಮಾರಾಗಿ ಹಾಗೋ ಹೀಗೋ ಸಾಗುತ್ತಿದೆ.

ಆಭರಣದ ಆಸೆಗೆ ಮಿತಿ ಉಂಟೇ?

ಒಂದು ದೇಶದಲ್ಲಿ ಜನ ಸಂಖ್ಯೆ ಹೆಚ್ಚಿದಂತೆಲ್ಲಾ ಆಭರಣ ಪ್ರಿಯರು ಕೂಡ ಹೆಚ್ಚಾಗುತ್ತಾರೆ ಎಂಬುದರಲ್ಲಿ ಅತಿಶಯೋಕ್ತಿ ಏನಿಲ್ಲ. ಕೈಯಲ್ಲಿ ಬಿಡಿಗಾಸು ಇಲ್ಲದವರಿಗೂ ಕೂಡ ಮೈ ತುಂಬಾ ಆಭರಣಗಳನ್ನು ತೊಟ್ಟುಕೊಳ್ಳಬೇಕು ಎಂಬ ಆಸೆ ಇರುವುದಂತೂ ಸತ್ಯ. ಇನ್ನು ಕೈಗೆ ಸಿಗುವಷ್ಟು ದುಡ್ಡಿದ್ದವರು ಆಭರಣಗಳನ್ನು ಬಿಡುವುದುಂಟೇ?
ಪ್ರಪ್ರಥಮವಾಗಿ ಬೆರಳಿಗೆ ಹಾಕುವ ಉಂಗುರದಿಂದ ಪ್ರಾರಂಭ ಆಗುವ ಆಭರಣದ ಆಸೆ ಮೈತುಂಬಾ ಚಿನ್ನವೇ ತುಂಬಿದ್ದರೆ ಎಷ್ಟು ಚೆನ್ನ ಎನ್ನುವವರೆಗೂ ಹೋಗಿ ನಿಲ್ಲುತ್ತದೆ. ಒಬ್ಬರ ಜೀವನದಲ್ಲಿ ಇದು ಎಷ್ಟರ ಮಟ್ಟಿಗೆ ಸಾಧ್ಯ ಆಗುತ್ತದೆ ಎಂಬುದು ಸ್ವತಃ ಅವರಿಗೂ ಗೊತ್ತಿರುವುದಿಲ್ಲ. ಆದರೂ ಕೂಡ ಆಭರಣದ ಮೇಲಿನ ವ್ಯಾಮೋಹ ಎಂದಿಗೂ ತೀರುವುದಿಲ್ಲ. ಅದೇನೇ ಇರಲಿ. ಈಗ ಕೈ ಬೆರಳಿಗೆ ಧರಿಸುವ ಉಂಗುರದ ವಿಚಾರಕ್ಕೆ ಬರೋಣ.

ಆಧುನಿಕ ಯುವ ಜನತೆ ಫ್ಯಾಶನ್ ಪ್ರಿಯರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ತಮ್ಮ ಜೀವನ ಶೈಲಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಇತರರ ಹಾಗೆ ನಾವೂ ಕೂಡ ಬದುಕಬೇಕು ಅಥವಾ ಅವರಿಗಿಂತ ಒಂದು ಹಂತ ಎತ್ತರವಾಗಿದ್ದರೂ ಪರವಾಗಿಲ್ಲ ಎನ್ನುವ ಮನಸ್ಥಿತಿ ಹೊಂದಿರುವ ಜನರೇ ಜಾಸ್ತಿ. ಹಾಗಾಗಿ ತಮ್ಮ ಕುಟುಂಬದ ಸ್ಥಿತಿಗತಿಗೆ ಅನುಸಾರವಾಗಿ ಬಟ್ಟೆಗಳನ್ನಾಗಲೀ ಅಥವಾ ಆಭರಣಗಳನ್ನಾಗಲೀ ಖರೀದಿ ಮಾಡಲು ಮುಂದಾಗುತ್ತಾರೆ.

ಕೆಲವರಿಗೆ ತಾವು ಮನೆಯಿಂದ ಹೊರ ಹೋದ ಸಂದರ್ಭದಲ್ಲಿ, ಯಾವುದಾದರೂ ಶುಭ ಸಂದರ್ಭದಲ್ಲಿ ಇತರರು ತಮ್ಮನ್ನು ಹೆಚ್ಚು ಗಮನಿಸುವ ಹಾಗೆ ಆಭರಣಗಳ ಸಹಿತ ಕೈಗೆ ಉಂಗುರಗಳನ್ನು ಧರಿಸಿಕೊಳ್ಳಬೇಕು ಎನ್ನುವ ಅಭಿಲಾಷೆ ಇರುತ್ತದೆ. ಇನ್ನು ಕೆಲವರಿಗೆ ನಮ್ಮ ಸರಳ ವ್ಯಕ್ತಿತ್ವದಲ್ಲೇ ನಮ್ಮ ಇಷ್ಟವಾದ ಕೈ ಬೆರಳುಗಳಲ್ಲಿ ಒಂದೊಂದೇ ಉಂಗುರವನ್ನು ಧರಿಸಿಯಾದರೂ ಬೇರೆಯವರ ಗಮನ ನಮ್ಮ ಕಡೆ ಹರಿಯುವಂತೆ ಮಾಡಿಕೊಳ್ಳಬೇಕು ಎನ್ನುವ ಒಂದು ಸಣ್ಣ ಕಾತುರದ ಭಾವ ಇರುತ್ತದೆ.

ಉಂಗುರಗಳು ಬೆರಳಿಗೆ ಸರಿ... ಆದರೆ ಯಾವ ಕೈಗೆ?

ಉಂಗುರಗಳು ಬೆರಳಿಗೆ ಸರಿ... ಆದರೆ ಯಾವ ಕೈಗೆ?

ಇದೊಂದು ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತದೆ ಎಂದು ಹೇಳಬಹುದು. ಹಿಂದೂ ಸಂಪ್ರದಾಯದಲ್ಲಿ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಮತ್ತು ಆತನ ಜಾತಕದಲ್ಲಿ ಉಚ್ಚ - ನೀಚ ಗ್ರಹಗಳ ಅನುಸಾರವಾಗಿ ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳಿದ ಉಂಗುರವನ್ನೇ ನಿಗದಿತ ದಿನ ಮತ್ತು ಸಮಯದಂದು ಸ್ನಾನ ಮಾಡಿ ಉಂಗುರಕ್ಕೆ ಪೂಜೆ ಸಲ್ಲಿಸಿ ನಂತರ ಧರಿಸಬೇಕು ಎನ್ನುವ ಪದ್ದತಿಯಿದೆ. ಆದರೆ ಎಲ್ಲರೂ ಇದನ್ನು ಅನುಸರಿಸುತ್ತಾರೆ ಎಂದು ಹೇಳಲು ಬರುವುದಿಲ್ಲ.

ಸಾಧಾರಣವಾಗಿ ಪ್ರತಿಯೊಬ್ಬರೂ ಎಲ್ಲಾ ಶುಭ ಕಾರ್ಯಗಳಿಗೆ ತಮ್ಮ ಬಲಗೈ ಉಪಯೋಗಿಸುತ್ತಾರೆ. ಕೆಲವರಿಗೆ ತಮ್ಮ ಬಲಗೈಗಿಂತ ಎಡಗೈ ಹೆಚ್ಚು ಬಲವಾಗಿರುವುದರಿಂದ ಎಡಗೈಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಆದರೆ ಉಂಗುರ ಧರಿಸುವ ವಿಚಾರದಲ್ಲಿ ಕೆಲವರು ಯಾವ ಕೈಗೆ ಧರಿಸಬೇಕು ಎಂದು ಇತರರನ್ನು ಅಥವಾ ಹಿರಿಯರನ್ನು ಕೇಳಿ ತಿಳಿದುಕೊಂಡು ಸಂಪ್ರದಾಯದ ಪ್ರಕಾರ ಉಂಗುರ ಧರಿಸಲು ಮುಂದಾದರೆ, ಇನ್ನು ಕೆಲವರು ಉಂಗುರ ಖರೀದಿ ಮಾಡಿದ ತಕ್ಷಣ ತಮಗೆ ಇಷ್ಟವಾಗುವ ಯಾವುದಾದರೂ ಒಂದು ಬೆರಳಿಗೆ ತೊಟ್ಟುಕೊಳ್ಳಲು ಮುಂದಾಗುತ್ತಾರೆ.

ದೇಶ - ವಿದೇಶಗಳ ಉಂಗುರದ ಗುಟ್ಟು : -

ದೇಶ - ವಿದೇಶಗಳ ಉಂಗುರದ ಗುಟ್ಟು : -

ಬೇರೆ ದೇಶಗಳಲ್ಲಿ ಉಂಗುರ ಧರಿಸುವ ಪದ್ಧತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಆಶ್ಚರ್ಯ ಎನಿಸುತ್ತದೆ. ಅವರು ಅಷ್ಟೊಂದು ಶ್ರೀಮಂತರಾಗಿದ್ದರೂ ಮತ್ತು ಅವರಿಗೆ ಅಷ್ಟೆಲ್ಲಾ ಅನುಕೂಲಗಳಿದ್ದು ಆಧುನಿಕತೆಯಲ್ಲಿ ಬದುಕುತ್ತಿದ್ದರೂ ಯಾವುದಾದರೂ ವಿಶೇಷ ಸಂದರ್ಭಗಳಲ್ಲಿ ತಮ್ಮ ಹಿಂದಿನ ಸಂಪ್ರದಾಯವನ್ನು ಮಾತ್ರ ಮರೆತಿಲ್ಲ. ಉದಾಹರಣೆಗೆ ಅಮೆರಿಕದಲ್ಲಿ ಪುರುಷರು ತಾವು ಮದುವೆ ಆಗುವ ಸಂದರ್ಭದಲ್ಲಿ ಇಂದಿಗೂ ಕೂಡ ತಮ್ಮ ಎಡಗೈ ನಲ್ಲಿರುವ ನಾಲ್ಕನೆಯ ಅಥವಾ ಉಂಗುರ ಬೆರಳಿಗೆ ಉಂಗುರವನ್ನು ಧರಿಸುತ್ತಾರೆ. ಯುರೋಪ್ ರಾಷ್ಟ್ರಗಳಲ್ಲಿ ಕ್ರಿಶ್ಚಿಯನ್ನರು ಚರ್ಚ್ ಗಳಲ್ಲಿ ಅನುಸರಿಸುವ ಪದ್ಧತಿಯ ಪ್ರಕಾರ ಮದುವೆ ಆಗುತ್ತಿರುವ ಪುರುಷ ತನ್ನ ಬಲಗೈ ಉಂಗುರ ಬೆರಳಿಗೆ ಉಂಗುರವನ್ನು ಧರಿಸಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ ವಿವಾಹ ನಿಶ್ಚಯ ಸಂದರ್ಭದಲ್ಲಿ ಇದಕ್ಕೆ ಯಾವುದೇ ಪದ್ಧತಿ ಎಂದಿಲ್ಲ.

ಹಾಗಾಗಿ ಒಂದು ವೇಳೆ ಭಾರತೀಯರಾಗಿ ನೀವು ಯಾವುದೇ ಸಂಪ್ರದಾಯವನ್ನು ಪಾಲನೆ ಮಾಡದೆ ಇರುವವರೇ ಆಗಿದ್ದರೆ, ನಿಮಗೆ ಇಷ್ಟ ಆಗುವ ಉಂಗುರವನ್ನು ನಿಮ್ಮ ಇಷ್ಟದ ಅನುಸಾರವಾಗಿ ಯಾವುದಾದರೂ ಬೆರಳಿಗೆ ಧರಿಸಿ ಸಂತೋಷ ಪಡಬಹುದು. ಇದನ್ನು ಯಾಕೆ ಹೇಳುತ್ತಿದ್ದೇವೆ ಎಂದರೆ ಜ್ಯೋತಿಷ್ಯಶಾಸ್ತ್ರದಲ್ಲಿ ಕೇವಲ ಮದುವೆ ವಿಚಾರಕ್ಕೆ ಸಂಬಂಧ ಪಟ್ಟಿರುವುದು ಮಾತ್ರವಲ್ಲದೆ ವಿವಾಹಿತ ಅಥವಾ ವಿವಾಹಿತರಲ್ಲದ ಇಂತಹ ರಾಶಿಯವರು ಇಂತಹ ಬೆರಳಿಗೆ ಇಂತಹದೇ ಬಣ್ಣದ ಹರಳನ್ನು ಹೊಂದಿರುವ ಉಂಗುರವನ್ನು ಧರಿಸಬೇಕೆಂಬ ನಿಯಮವಿರುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರಕ್ಕೆ ಸೆಡ್ಡು ಹೊಡೆದು ನಿಂತಿರುವ ವಿಜ್ಞಾನದ ಪ್ರಭಾವ ಹೆಚ್ಚಾಗಿರುವ ಈ ಕಾಲದಲ್ಲಿ ಹಲವರು ಇಂತಹ ಕಟ್ಟುಪಾಡುಗಳನ್ನು ನಂಬುವುದಿಲ್ಲ ಮತ್ತು ಅನುಸರಿಸುವುದಿಲ್ಲ. ಹಾಗಾಗಿ ಉಂಗುರ ಧರಿಸುವ ವಿಚಾರದಲ್ಲಿ ಅವರವರ ಅಭಿಪ್ರಾಯಕ್ಕೆ ತಕ್ಕಂತೆ ತಮಗೆ ಇಷ್ಟವಾದ ವಿವಿಧ ಬಣ್ಣ ಬಣ್ಣದ ವಜ್ರಗಳನ್ನು ಹೊಂದಿರುವ ಉಂಗುರವನ್ನು ಧರಿಸಲು ಇಷ್ಟ ಪಡುತ್ತಾರೆ.

ಚಿನ್ನದ ಬೆಲೆ ಇತಿ ಮಿತಿಯಿಲ್ಲದೆ ಗಗನಕ್ಕೇರಿ ಹೋಗಿರುವ ಈ ಕಾಲದಲ್ಲಿ ನೀವು ಕೈ ಬೆರಳುಗಳಿಗೆ ಉಂಗುರವನ್ನು ಧರಿಸಿಕೊಳ್ಳಲು ಕೇವಲ ಚಿನ್ನದ ಮೇಲೆಯೇ ಅವಲಂಬಿತರಾಗಿರಬೇಕು ಎಂದೇನಿಲ್ಲ. ಏಕೆಂದರೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ನಮ್ಮ ಕೈಯಲ್ಲಿ ಒಂದೊಂದು ಬೆರಳಿಗೆ ಒಂದೊಂದು ಬಗೆಯ ಗ್ರಹಗಳ ಅನುಗ್ರಹ ಇರುವುದರಿಂದ ಆಯಾ ಗ್ರಹಕ್ಕೆ ಅನುಗುಣವಾದ ಲೋಹದಿಂದ ತಯಾರು ಮಾಡಿದ ಉಂಗುರವನ್ನು ಧರಿಸಿಕೊಳ್ಳಬೇಕು ಎಂದು ಹೇಳಲಾಗಿದೆ. ಹಾಗಾಗಿ ಈ ಲೇಖನದಲ್ಲಿ ನೀವು ಯಾವ ಬೆರಳಿಗೆ ಯಾವ ಬಗೆಯ ಉಂಗುರವನ್ನು ಧರಿಸಿದರೆ ಸೂಕ್ತ ಮತ್ತು ಅದರ ವಿಶೇಷತೆ ಏನು ಎಂಬುದನ್ನು ತಿಳಿಸಿಕೊಡಲಾಗಿದೆ.

1 ಕಿರು ಬೆರಳು ಅಥವಾ ಕೊನೆಯ ಬೆರಳು : -

1 ಕಿರು ಬೆರಳು ಅಥವಾ ಕೊನೆಯ ಬೆರಳು : -

ಮೊಟ್ಟ ಮೊದಲಿಗೆ ಉಂಗುರ ಧರಿಸಲು ಬಯಸುವ ಯಾರೇ ಆದರೂ ಕಿರು ಬೆರಳಿನ ಉಂಗುರವನ್ನು ಹೆಚ್ಚು ಇಷ್ಟ ಪಡುತ್ತಾರೆ. ಏಕೆಂದರೆ ನಮ್ಮ ಕೈ ಬೆರಳುಗಳಲ್ಲಿ ಕೊನೆಯ ಬೆರಳು ಎನಿಸಿದ ಕಿರು ಬೆರಳಿಗೆ ಧರಿಸಿದ ಉಂಗುರ ನಾವು ಕೂತಲ್ಲಿ ನಿಂತಲ್ಲಿ ಹಾಗೆ ಕೈ ಇಟ್ಟುಕೊಂಡಿದ್ದರೂ ಇತರರಿಗೆ ಎದ್ದು ಕಾಣುತ್ತದೆ. ಹಾಗಾಗಿ ಇದೊಂದು ಆಕರ್ಷಣೀಯ ಬಿಂದುವಾಗಿ ಕಾಣುವುದರಲ್ಲಿ ಅನುಮಾನವಿಲ್ಲ. ಇದರ ಜೊತೆಗೆ ನಾವು ಕೈಯಿಂದ ಮಾಡುವ ಯಾವುದೇ ಕೆಲಸಗಳಲ್ಲಿ ಕಿರು ಬೆರಳಲ್ಲಿ ಧರಿಸಿರುವ ಉಂಗುರ ಅಷ್ಟಾಗಿ ತೊಂದರೆ ಕೊಡುವುದಿಲ್ಲ. ಹಾಗಾಗಿ ಇದು ಎಲ್ಲರಿಗೂ ಅತ್ಯಂತ ಪ್ರಿಯ ಎಂದು ಹೇಳಬಹುದು. ಮನೆಯಲ್ಲಿರುವ ಕೊನೆಯ ಮಗು ಹೇಗೆ ಪೋಷಕರಿಗೆ ತುಂಬಾ ಇಷ್ಟ ಆಗುತ್ತದೆ, ಅದೇ ರೀತಿ ನಮ್ಮ ಕೈಯಲ್ಲಿರುವ ಕೊನೆಯ ಬೆರಳು ಕೂಡ.

ಇನ್ನು ಜಾತಕ ನೋಡಿ ಅಥವಾ ಕೈ ನೋಡಿ ಭವಿಷ್ಯ ಹೇಳುವವರು ಮನುಷ್ಯನ ಕಿರು ಬೆರಳನ್ನು ಬುದ್ಧಿವಂತಿಕೆಯ ಸಂಕೇತ ಎಂದು ಬಿಂಬಿಸಿದ್ದಾರೆ. ಏಕೆಂದರೆ ಕಿರು ಬೆರಳಿನ ಭಾಗ ಬುಧ ಗ್ರಹವನ್ನು ಸಂಕೇತಿಸುತ್ತದೆ ಎಂದು ಜ್ಯೋತಿಶಾಸ್ತ್ರದಲ್ಲಿ ಬಲವಾಗಿ ನಂಬಲಾಗಿದೆ. ಬುಧ ಗ್ರಹವನ್ನು ಆಂಗ್ಲಭಾಷೆಯಲ್ಲಿ ' ಮರ್ಕ್ಯುರಿ ' ಎಂದು ಕರೆಯುತ್ತಾರೆ. ಕನ್ನಡದ ಅನುವಾದದಲ್ಲಿ ಮರ್ಕ್ಯುರಿ ಪಾದರಸ ಎಂದಾಗುತ್ತದೆ. ನಿಮಗೆಲ್ಲಾ ಗೊತ್ತಿರುವ ಹಾಗೆ ಪಾದರಸ ಸಾಮಾನ್ಯ ಕೊಠಡಿಯ ತಾಪಮಾನದಲ್ಲಿ ದ್ರವ ರೂಪದಲ್ಲಿ ಕಂಡು ಬರುತ್ತದೆ ಮತ್ತು ಮನುಷ್ಯರಿಗೆ ಹೆಚ್ಚು ವಿಷಕಾರಿಯೂ ಹೌದು. ಇದೇ ಕಾರಣದಿಂದ ಕಿರು ಬೆರಳಿಗೆ ಧರಿಸುವ ಉಂಗುರ ಯಾವುದೇ ಒಂದು ನಿರ್ದಿಷ್ಟ ಲೋಹವನ್ನು ಬಳಸಿ ತಯಾರು ಮಾಡಿದ ಉಂಗುರವೇ ಆಗಿರಬೇಕು ಎಂಬ ನಿಯಮ ಏನಿಲ್ಲ. ನಮ್ಮ ಭಾರತೀಯರು ತಮ್ಮ ಕಿರು ಬೆರಳಿಗೆ ಹೆಚ್ಚಾಗಿ ಚಿನ್ನದ ಅಥವಾ ಬೆಳ್ಳಿಯ ಉಂಗುರವನ್ನು ಧರಿಸುತ್ತಾರೆ.

2 ನಾಲ್ಕನೆಯ ಅಥವಾ ಉಂಗುರ ಬೆರಳು : -

2 ನಾಲ್ಕನೆಯ ಅಥವಾ ಉಂಗುರ ಬೆರಳು : -

ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ನಮ್ಮ ಕೈಯಲ್ಲಿರುವ ನಾಲ್ಕನೇ ಬೆರಳಿಗೆ ವಿವಾಹ ವಿಚಾರದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಕೈ ಗಳಲ್ಲಿರುವ ನಾಲ್ಕನೆಯ ಬೆರಳನ್ನು ಉಂಗುರ ಬೆರಳು ಎಂದು ಕರೆಯುತ್ತಾರೆ. ಬಲಗೈ ನಲ್ಲಿರುವ ನಾಲ್ಕನೇ ಬೆರಳಿಗೆ ಉಂಗುರ ತೊಡಿಸಿದರೆ ಅದು ವಿವಾಹದ ನಿಶ್ಚಯ ಎಂದು ಅರ್ಥ. ಅದೇ ಎಡಗೈ ನಲ್ಲಿರುವ ನಾಲ್ಕನೇ ಬೆರಳಿಗೆ ಉಂಗುರ ಧರಿಸಿದರೆ ವಿವಾಹ ಸಂದರ್ಭ ನೆರವೇರಿದಂತೆ ಎಂಬ ಭಾವನೆ ಇದೆ.

ಉಂಗುರದ ಬೆರಳಿಗೆ ಧರಿಸಲ್ಪಡುವ ಉಂಗುರ ಸಾಮಾನ್ಯವಾಗಿ ಚಿನ್ನ ಅಥವಾ ಬೆಳ್ಳಿಯ ಲೋಹದಿಂದ ಮಾಡಲ್ಪಟ್ಟಿರುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲೂ ನಿಶ್ಚಿತಾರ್ಥ ಅಥವಾ ಮದುವೆಯ ಸಂಭ್ರಮದಲ್ಲಿ ಚಿನ್ನದ ಉಂಗುರಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಬೇರೆ ದೇಶಗಳಲ್ಲಿ ಹೆಚ್ಚು ದಪ್ಪನಾದ ವಿವಿಧ ಬಗೆಯ ವಿನ್ಯಾಸವನ್ನು ಹೊಂದಿರುವ ಉಂಗುರವನ್ನು ನಿಶ್ಚಿತಾರ್ಥ ಅಥವಾ ವಿವಾಹದ ಸಂದರ್ಭದಲ್ಲಿ ವಧು - ವರರಿಗೆ ಪರಸ್ಪರ ತೊಡಿಸಲು ಮುಂದಾಗುತ್ತಾರೆ. ಹುಟ್ಟಿದ ಮಗುವಿನ ನಾಮಕರಣದಲ್ಲಿ ಕೂಡ ಮಗುವಿಗೆ ಇದೇ ಬೆರಳಿಗೆ ಉಂಗುರ ತೊಡಿಸುವ ಮೂಲಕ ಖುಷಿ ಪಡುತ್ತಾರೆ. ಅವರ ಪ್ರಕಾರ ಒಳ್ಳೆಯ ಗಾತ್ರ ಮತ್ತು ವಿನ್ಯಾಸವನ್ನು ಹೊಂದಿದ್ದ ಉಂಗುರ ಧರಿಸಿದರೆ ತಮ್ಮ ವಿವಾಹ ಸಂಬಂಧ ದೀರ್ಘ ಕಾಲ ಗಟ್ಟಿಯಾಗಿ ಉಳಿಯುವುದು ಎಂದು ಅರ್ಥ.

ಆದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸಾಧಾರಣವಾಗಿ ಚಿನ್ನದ ಉಂಗುರಕ್ಕೆ ಪ್ರತಿಯೊಬ್ಬರೂ ಬೇಡಿಕೆ ಇಡುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಕೈ ಗಳಲ್ಲಿರುವ ನಾಲ್ಕನೇ ಬೆರಳು ಭೂಮಿ, ಚಂದ್ರ, ಸೌಂದರ್ಯ, ಕ್ರಿಯಾತ್ಮಕ ಚಟುವಟಿಕೆ ಮತ್ತು ಸುಮಧುರ ಬಾಂಧವ್ಯವನ್ನು ಸಂಕೇತಿಸುತ್ತದೆ. ಚಂದ್ರ ಬಿಳಿ ಬಣ್ಣದಲ್ಲಿ ಇರುವುದರಿಂದ ವಿವಾಹೇತರ ಕಾರ್ಯಕ್ರಮಗಳಿಗೆ ಅಥವಾ ಸಾಮಾನ್ಯ ಸಂದರ್ಭಗಳಲ್ಲಿ ನಾಲ್ಕನೇ ಬೆರಳಿಗೆ ಉಂಗುರ ತೊಟ್ಟರೆ ಅದು ಬೆಳ್ಳಿಯ ಉಂಗುರವೇ ಆಗಿರಬೇಕು ಎಂದು ಹೇಳುತ್ತಾರೆ.

3 ಮಧ್ಯದ ಬೆರಳು ಅಥವಾ ಮೂರನೇ ಬೆರಳು : -

3 ಮಧ್ಯದ ಬೆರಳು ಅಥವಾ ಮೂರನೇ ಬೆರಳು : -

ಸಾಧಾರಣವಾಗಿ ಎಲ್ಲರ ಕೈಗಳಲ್ಲಿ ಮಧ್ಯದ ಬೆರಳು ಅಕ್ಕ ಪಕ್ಕದ ಬೆರಳುಗಳಿಗೆ ಹೋಲಿಸಿದರೆ ಉದ್ದವಾಗಿ ಮತ್ತು ದಪ್ಪನಾಗಿ ಕಾಣುತ್ತದೆ. ಮಧ್ಯದ ಬೆರಳನ್ನು ಆತ್ಮವಿಶ್ವಾಸದ ಸಂಕೇತ ಎಂದು ಕರೆಯುವುದೂ ಉಂಟು. ಸಾಧಾರಣವಾಗಿ ಪ್ರತಿಯೊಬ್ಬರೂ ತಮ್ಮ ಮಧ್ಯದ ಬೆರಳಿಗೆ ಉಂಗುರವನ್ನು ಧರಿಸಲು ಸ್ವಲ್ಪ ಹಿಂದೇಟು ಹಾಕುತ್ತಾರೆ. ಇದಕ್ಕೆ ಕಾರಣ ನಾವು ನಮ್ಮ ಕೈ ಬಳಸಿ ಮಾಡಲು ಮುಂದಾಗುವ ಯಾವುದೇ ಸಣ್ಣ ಪುಟ್ಟ ಚಟುವಟಿಕೆಗಳಲ್ಲಿ ಮಧ್ಯದ ಬೆರಳಿನ ಮೇಲಿರುವ ಉಂಗುರದಿಂದ ತೊಂದರೆ ಆಗುತ್ತದೆ ಎಂದು. ಹಾಗಾಗಿ ಒಂದು ವೇಳೆ ಮಧ್ಯದ ಬೆರಳಿಗೆ ಉಂಗುರ ಧರಿಸಿದರೂ ತುಂಬಾ ತೆಳುವಾಗಿ ಇರುವ ಉಂಗುರವನ್ನೇ ಧರಿಸಲು ಹೆಚ್ಚು ಇಷ್ಟ ಪಡುತ್ತಾರೆ.

ಉಂಗುರ ಧರಿಸುವ ಅಭ್ಯಾಸ ಇಲ್ಲದವರು ಮೊದಲ ಬಾರಿಗೆ ಉಂಗುರ ಧರಿಸಲು ತಮ್ಮ ಕಿರು ಬೆರಳಿನ ಜೊತೆಗೆ ಮಧ್ಯದ ಬೆರಳಿಗೂ ಅಷ್ಟೇ ಪ್ರಾಶಸ್ತ್ಯ ಕೊಡುತ್ತಾರೆ. ಏಕೆಂದರೆ ಮಧ್ಯದ ಬೆರಳು ಸ್ವಲ್ಪ ದಪ್ಪ ಇರುವುದರಿಂದ ಉಂಗುರ ಸಡಿಲವಾಗಿದ್ದರೂ ಕೂಡ ಇದರಿಂದ ಜಾರಿ ಬಿದ್ದು ಹೋಗುವುದಿಲ್ಲ ಎಂಬ ಧೈರ್ಯ ಇರುತ್ತದೆ. ಅಕ್ಕ ಪಕ್ಕದಲ್ಲಿ ಎರಡೆರಡು ಬೆರಳುಗಳು ಇರುವುದರಿಂದ ಮಧ್ಯದ ಬೆರಳಿನಲ್ಲಿ ಧರಿಸುವ ಉಂಗುರ ಸುರಕ್ಷಿತವಾಗಿ ಉಳಿದುಕೊಳ್ಳುತ್ತದೆ ಎಂಬ ಭಾವನೆ ಕೂಡ ಇರಬಹುದು. ಆದ್ದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ಒಂದು ವೇಳೆ ಪೋಷಕರು ಉಂಗುರ ತೊಡಿಸಿ ಕಳಿಸಲು ಇಷ್ಟ ಪಟ್ಟರೆ ಸಾಮಾನ್ಯವಾಗಿ ಮಗುವಿನ ಮಧ್ಯದ ಬೆರಳಿಗೆ ಸುಂದರವಾದ ಉಂಗುರ ಹಾಕುವುದನ್ನು ನೋಡಿದ್ದೇವೆ.

ಜ್ಯೋತಿಷಿಗಳು ಹೇಳುವ ಹಾಗೆ ಮಧ್ಯದ ಬೆರಳು ಶನಿಯ ಸ್ಥಾನ ಆಗಿದ್ದು, ಜೀವನದಲ್ಲಿ ನಮ್ಮ ಜವಾಬ್ದಾರಿಗಳನ್ನು ನೆನಪಿಸುವ ಮತ್ತು ನಮ್ಮ ಪ್ರತಿ ದಿನದ ಜೀವನ ನಿರ್ವಹಣೆಯಲ್ಲಿ ಸಮತೋಲನತೆಯ ಭಾವವನ್ನು ಕಾಯ್ದುಕೊಳ್ಳಬೇಕೆನ್ನುವ ಸಂಕೇತ ಆಗಿರುತ್ತದೆ. ಹಾಗಾಗಿ ಮಧ್ಯದ ಬೆರಳಿಗೆ ತೊಡುವ ಉಂಗುರ ಸೀಸದ ಬಣ್ಣ ಹೊಂದಿರುವ ಲೋಹದಿಂದ ತಯಾರು ಮಾಡಿರಬೇಕು. ಉದಾಹರಣೆಗೆ ಸ್ಟೀಲ್ ಉಂಗುರ ಹೆಚ್ಚು ಸೂಕ್ತ ಎಂದು ಹೇಳಬಹುದು.

4 ತೋರು ಬೆರಳು ಅಥವಾ ಎರಡನೇ ಬೆರಳು : -

4 ತೋರು ಬೆರಳು ಅಥವಾ ಎರಡನೇ ಬೆರಳು : -

ಹೆಬ್ಬೆರಳಿನ ಪಕ್ಕದ ಮತ್ತು ನಮ್ಮ ದಿನ ನಿತ್ಯದ ಸಾಮಾನ್ಯ ಚಟುವಟಿಕೆಗಳಲ್ಲಿ ನಮಗೆ ಹೆಚ್ಚು ಉಪಯೋಗ ಆಗುವಂತಹ ಬೆರಳು ಎಂದರೆ ಅದು ತೋರು ಬೆರಳು ಉಂಗುರ ಧರಿಸುವ ವಿಚಾರಕ್ಕೆ ಬರುವುದಾದರೆ ಪಾಶ್ಚಿಮಾತ್ಯ ದೇಶಗಳ ಜನರು ಮೊದಲಿಗೆ ಅಂದರೆ ಸುಮಾರು ನೂರಾರು ವರ್ಷಗಳ ಹಿಂದೆ ರಾಜ ಮಹಾರಾಜರು ಇದ್ದ ಕಾಲದಲ್ಲಿ ಅವರನ್ನು ಅನುಸರಣೆ ಮಾಡುತ್ತಾ ತೋರು ಬೆರಳಿಗೆ ಮಾತ್ರ ತಮಗೆ ಇಷ್ಟವಾದ ಉಂಗುರವನ್ನು ಧರಿಸುತ್ತಿದ್ದರು ಮತ್ತು ಇದು ಯಾವುದೇ ಶುಭ ಕಾರ್ಯದ ಸಂಕೇತ ಎಂಬ ದೃಢವಾದ ಭಾವನೆ ಅವರಲ್ಲಿತ್ತು. ಆದರೆ ಇದು ಬರುಬರುತ್ತಾ ನಿಧಾನವಾಗಿ ನಾಲ್ಕನೇ ಬೆರಳಿಗೆ ಉಂಗುರ ಧರಿಸುವ ಪದ್ಧತಿಯಾಗಿ ಬದಲಾಯಿತು. ಹಾಗಾಗಿ ಇಂದು ವಿವಾಹದ ಶುಭ ಸಂದರ್ಭದಲ್ಲಿ ನಮ್ಮ ಭಾರತವೂ ಸೇರಿ ವಿಶ್ವದಾದ್ಯಂತ ಇದೇ ಪದ್ಧತಿ ಚಾಲ್ತಿಯಲ್ಲಿದೆ.

ಯಾವುದೇ ಒಂದು ವಸ್ತುವನ್ನು ಅಥವಾ ಯಾವುದೇ ವ್ಯಕ್ತಿಯನ್ನು ತೋರಿಸಲು ನಾವು ತಕ್ಷಣದಲ್ಲಿ ಹೆಬ್ಬೆರಳಿನ ಪಕ್ಕದ ಬೆರಳನ್ನು ಬಳಸುತ್ತೇವೆ. ಹಾಗಾಗಿ ಇದನ್ನು ತೋರು ಬೆರಳು ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ ತೋರು ಬೆರಳನ್ನು ಗುರು ಗ್ರಹಕ್ಕೆ ಹೋಲಿಸಲಾಗಿದೆ. ಹಾಗಾಗಿ ತೋರು ಬೆರಳು ನಾಯಕತ್ವದ ಗುಣ, ಆಡಳಿತಾತ್ಮಕ ನಡವಳಿಕೆ ಮತ್ತು ಅಧಿಕಾರದ ಭಾವವನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ ಗಾಢವಾದ ಬಣ್ಣ ಹೊಂದಿರುವ ಬೆಳ್ಳಿಯ ಉಂಗುರವನ್ನು ತೋರು ಬೆರಳಿಗೆ ಧರಿಸುವುದು ವಾಡಿಕೆ.

5 ಹೆಬ್ಬೆರಳು ಅಥವಾ ನಮ್ಮ ಕೈನಲ್ಲಿರುವ ಮೊಟ್ಟಮೊದಲನೆಯ ಬೆರಳು : -

5 ಹೆಬ್ಬೆರಳು ಅಥವಾ ನಮ್ಮ ಕೈನಲ್ಲಿರುವ ಮೊಟ್ಟಮೊದಲನೆಯ ಬೆರಳು : -

ಹೆಸರೇ ಹೇಳುವಂತೆ ನಮ್ಮ ಎರಡೂ ಕೈಗಳಲ್ಲಿ ನೋಡಲು ಚಿಕ್ಕದಾಗಿದ್ದರೂ ತುಂಬಾ ದಪ್ಪನಾಗಿ ಎಲ್ಲರಿಗೂ ಎದ್ದು ಕಾಣುವ ಬೆರಳು ನಮ್ಮ ಹೆಬ್ಬೆರಳೇ ಆಗಿದೆ. ಆಸ್ತಿ, ಐಶ್ವರ್ಯ, ಸುಖ, ಸಂತೋಷವನ್ನು ಪ್ರತಿನಿಧಿಸುವ ಹೆಬ್ಬೆರಳು ನಮ್ಮ ಯಶಸ್ವಿ ಆತ್ಮಾಭಿಮಾನದ ಸಂಕೇತ ಕೂಡ ಹೌದು. ಆದರೆ ಉತ್ತರ ಅಮೇರಿಕಾದ ಸಂಸ್ಕೃತಿಯಲ್ಲಿ ಮಾತ್ರ ಹೆಬ್ಬೆರಳಿಗೆ ಉಂಗುರವನ್ನು ಧರಿಸುವ ಪದ್ಧತಿ ಇಲ್ಲ ಎನ್ನುವುದು ವಿಶೇಷ.

ನಮ್ಮ ಭಾರತ ಸೇರಿ ವಿವಿಧ ದೇಶಗಳಲ್ಲಿ ಹೆಬ್ಬೆರಳಿಗೆ ಉಂಗುರ ಧರಿಸುವ ಮಂದಿ ಸಾಮಾನ್ಯವಾಗಿ ತಮ್ಮ ಐದೂ ಬೆರಳುಗಳಿಗೆ ಉಂಗುರಗಳನ್ನು ಧರಿಸಿಕೊಂಡಿರುತ್ತಾರೆ. ಇತರ ಬೆರಳುಗಳ ಜೊತೆ ಸ್ವಲ್ಪ ಅಂತರವನ್ನು ಕಾಯ್ದುಕೊಂಡಿರುವ ನಮ್ಮ ಕೈ ಹೆಬ್ಬೆರಳು ಯಾವುದಾದರೂ ವಸ್ತುವನ್ನು ಬಿಗಿಯಾಗಿ ಹಿಡಿದುಕೊಳ್ಳಲು ಬಹಳ ಸಹಾಯಕ್ಕೆ ಬರುತ್ತದೆ. ಹೆಬ್ಬೆರಳಿಗೆ ಉಂಗುರ ಧರಿಸಿದರೂ ಕೂಡ ನಮ್ಮ ದಿನ ನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಯಾವುದೇ ತೊಂದರೆ ಆಗುವುದಿಲ್ಲ.

ಹೆಬ್ಬೆರಳು ಯಶಸ್ಸು ಮತ್ತು ಸ್ನೇಹದ ಸಂಕೇತ : -

ನಾವು ಯಾವುದಾದರೂ ಕೆಲಸವನ್ನು ಮಾಡಿ ಅದರಿಂದ ಯಶಸ್ಸು ಸಿಕ್ಕರೆ ಅಥವಾ ಸಿಗುವ ಮುನ್ಸೂಚನೆ ಸಿಕ್ಕಿದರೆ ನಮ್ಮ ಕೈ ಮುಷ್ಟಿಯನ್ನು ಮಡಚಿ ಹಿಡಿದುಕೊಂಡು ಕೇವಲ ಹೆಬ್ಬೆರಳನ್ನು ಮಾತ್ರ ಮೇಲ್ಮುಖವಾಗಿ ತೋರಿಸುತ್ತೇವೆ. ಅದೇ ರೀತಿ ಒಬ್ಬರ ಜೊತೆ ಸ್ನೇಹ ಬಾಂಧವ್ಯ ಹೊಂದುವ ಸಮಯದಲ್ಲಿ ಕೂಡ ಹೆಬ್ಬೆರಳಿನ ಪಾತ್ರವನ್ನು ಮರೆಯುವಂತಿಲ್ಲ.

ನಮ್ಮ ಗಟ್ಟಿತನ ಮತ್ತು ಆತ್ಮ ವಿಶ್ವಾಸದ ಪ್ರತಿಬಿಂಬ ನಮ್ಮ ಹೆಬ್ಬೆರಳು ಎಂದು ಹೇಳಬಹುದು. ಎಂತಹ ಕೆಲಸದಲ್ಲೂ ಧೈರ್ಯವಾಗಿ ಮುನ್ನುಗ್ಗುವವರನ್ನು ಸಂಕೇತಿಸುವ ಬೆರಳು ಎಂದರೆ ಅದು ಹೆಬ್ಬೆರಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.

ಒಬ್ಬ ವ್ಯಕ್ತಿ ಒಂದು ಕೈನಲ್ಲಿ ಇಷ್ಟೇ ಉಂಗುರಗಳನ್ನು ಧರಿಸಬೇಕು ಎಂಬ ನಿಯಮ ಏನಾದರೂ ಇದೆಯೇ ?

ಹಾಗೇನಿಲ್ಲ. ಸಾಮಾನ್ಯವಾಗಿ ನಾವು ನೀವು ಎಲ್ಲಾ ಕಡೆ ನೋಡಿರುವ ಹಾಗೆ ಮೈ ತುಂಬಾ ಒಡವೆ ಮತ್ತು ಕೈ ತುಂಬಾ ಉಂಗುರಗಳನ್ನು ಧರಿಸಿಕೊಂಡಿರುವವರು ಕೂಡ ಒಂದು ಬೆರಳಿಗೆ ಒಂದು ಉಂಗುರದಂತೆ ನಿರ್ವಹಣೆ ಕಾಯ್ದುಕೊಂಡಿರುತ್ತಾರೆ. ಒಂದೊಂದು ಬೆರಳಿಗೆ ಎರಡು ಅಥವಾ ಮೂರು ಉಂಗುರಗಳನ್ನು ಧರಿಸುವುದು ತುಂಬಾ ಅಪರೂಪ. ತಂತಿಗಳ ರೂಪದಲ್ಲಿ ಒಂದಕ್ಕೊಂದು ಬೆಸೆದುಕೊಂಡಿರುವ ಅತ್ಯಂತ ತೆಳುವಾದ ಉಂಗುರಗಳನ್ನು ಬೇಕೆಂದರೆ 4 ರಿಂದ 5 ಧರಿಸಬಹುದು. ಆದರೆ ಸ್ವಲ್ಪ ಮಧ್ಯಮ ಗಾತ್ರದ ಉಂಗುರಗಳಾದರೆ 2 ರಿಂದ 3 ಸುರಕ್ಷಿತ ಮತ್ತು ಸುಂದರ ಎಂದು ಹೇಳಬಹುದು.

ಸಾಧಾರಣವಾಗಿ ಒಂದು ಬೆರಳಿನಲ್ಲಿ ಒಂದು ವಜ್ರ ಖಚಿತವಾದ ಉಂಗುರ ಇದ್ದರೆ, ಕೈಗಳು ನೋಡಲು ತುಂಬಾ ಸುಂದರವಾಗಿ ಕಾಣುತ್ತವೆ. ಉಂಗುರ ಹೊಂದಿದ ಬೆರಳು ನಮ್ಮ ಆತ್ಮವಿಶ್ವಾಸವನ್ನು ಎತ್ತಿ ಹಿಡಿಯುವ ಸಂಕೇತವಾಗಿರುತ್ತದೆ.

English summary

Finger Ring Symbolism: Which finger should you wear your ring on

Do you know finger ring symbolism and which finger you should wear, raed on,
X
Desktop Bottom Promotion