For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಬಸವನಗುಡಿಯಲ್ಲಿ ಸ್ಪೆಷಲ್ ಸಂಕ್ರಾಂತಿ

By Srinath
|
Special Sankranti 2013 in Basavanagudi
ಬಸವನಗುಡಿ ಹೆಸರಿನ ಬಡಾವಣೆ ರಾಜಧಾನಿಯೊಂದರಲ್ಲೇ ಅಲ್ಲ ಇರುವುದು. ಅನೇಕ ಪ್ರಮುಖ ನಗರಗಳಲ್ಲಿ ಬಸವನಗುಡಿಗಳಿವೆ. ಅದು ಎಲ್ಲರಿಗೂ ಗೊತ್ತು ಈಗ್ಯಾಕೆ ಅದರ ಪ್ರಸ್ತಾಪ? ಎಂದು ಗೂಳಿ ಥರ ಗುಟುರು ಹಾಕಬೇಡಿ.

ಸಾಮಾನ್ಯಕ್ಕೆ, ಬಸವನಗುಡಿ ಅಂತ ಯಾಕೆ ಹೆಸರು ಇಡ್ತಾರಪ್ಪಾ ಅಂದರೆ ಅದಕ್ಕೂ ಮುನ್ನ... ಹುಟ್ಟಿಸಿದ ದೇವರು ಹುಲ್ಲು ಮೇಯಿಸೋಲ್ವಾ ಎಂದು ಬದುಕು ಕಟ್ಟಿಕೊಳ್ಳಲು 20 ವರ್ಷಗಳ ಹಿಂದೆ ಬೆಂಗಳೂರಿನ ಬಸವನಗುಡಿಗೆ ಬಂದೆ. ಆಗ ಬಸವನಗುಡಿ ಬಡಾವಣೆಗೆ ಪ್ರದಕ್ಷಿಣೆ ಹಾಕಿದಾಗ ದಾರಿಯುದ್ದಕ್ಕೂ 'ಬಸವನಗುಡಿಗೆ ಯಾಕೆ ಈ ಹೆಸರು ಬಂತು' ಎಂಬ ಪ್ರಶ್ನೆ ನನಗೆ ಸಾಥ್ ನೀಡಿತ್ತು.

ಆಮೇಲೆ ಅನಿಸಿದ್ದು, ಬೆಂಗಳೂರಿನ ಈ ಬಡಾವಣೆಗೆ ಬಸವನಗುಡಿ ಎಷ್ಟು ಅರ್ಥಪೂರ್ಣವಾಗಿದೆ ಎಂದು! ಏಕೆಂದರೆ ಎಲ್ಲೆಂದರಲ್ಲಿ, ಹೌದು ನಡುರಸ್ತೆಗಳಲ್ಲೂ ನಡುಚಾಚಿ ಮಲಗಿರುವ ಗೋವುಗಳನ್ನು ಕಂಡಾಗ ನಿಜಕ್ಕೂ ನನ್ನ ಹಳ್ಳಿ ವಾತಾವರಣ ನೆನಪಿಗೆ ಬಂದಿತ್ತು.

ಆಮೇಲಾಮೇಲೆ ಕಾಲ ಬದಲಾಗುತ್ತಾ ಬಂತು. ಅದೇನೋ Y2K ಅಂತ ಬಂದಮೇಲಿನ ಕಾಲಘಟ್ಟದಲ್ಲಿ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಪರಿವರ್ತನೆಯಾಗಿದ್ದೇ ಬಂತು, ಅದುವರೆಗೂ ಬಸವನಗುಡಿಯ ಕಾಲಬುಡಲದಲ್ಲಿ ಮಲಗಿದ್ದ ಜಾನುವಾರು ಸಂತತಿಗೆ ಸಾಫ್ಟ್ ವೇರುಗಳ ಬೈಕು, ಕಾರು ಬಾರಿನ ಆರ್ಭಟದಲ್ಲಿ ಗರಬಡಿದಂತಾಯಿತು.

ಬಸವನಗುಡಿ ಆಸುಪಾಸು ಹೊಲಗದ್ದೆಗಳು ಇದ್ದವಂತೆ. ಇಲ್ಲಿ ಗೌಳಿಗರು ಹೆಚ್ಚಾಗಿ ನೆಲೆಸಿದ್ದರಂತೆ. ಇಲ್ಲಿದ್ದ ಜನಸಂಖ್ಯೆಯಷ್ಟೇ ಹಸು-ಕರು ಎತ್ತುಗಳು ಇದ್ದವಂತೆ. ಇಲ್ಲಿ ಸಂಕ್ರಾಂತಿ ಊರಹಬ್ಬವಾಗಿ ನಡೆಯುತ್ತಿತ್ತು. ಕಡಲೆಕಾಯಿ ಪರಿಶೆಗಿಂತ ಜೋರಾಗಿ ಜನ ಸೇರುತ್ತಿದ್ದರಂತೆ ಎಂಬುದೆಲ್ಲ ಕಾಲಗರ್ಭದಲ್ಲಿ ಅಡಗಿಹೋಗಿದೆ.

ಆದರೂ ದೊಡ್ಡಗಣಪತಿ ದೇವಸ್ಥಾನದ ಬಂಡೆಬಸವ ಇದಕ್ಕೆ ಮೂಕ ಸಾಕ್ಷಿಯಾಗಿ ತಳವೂರಿರುವುದರಿಂದ ಬಸವನಗುಡಿಯಲ್ಲಿ ಸಂಕ್ರಾಂತಿ ಸಂಭ್ರಮವನ್ನು ಇನ್ನೂ ಕಾಣಬಹುದಾಗಿದೆ. ಮನೆಸಂಪ್ರದಾಯ, ಊರಸಂಪ್ರದಾಯ ಎಂದು ಇಲ್ಲಿನ ಗೋಪಾಲಕರು ಈಗಲೂ ತಮ್ಮ ಜಾನುವಾರುಗಳನ್ನು ಸಿಂಗರಿಸಿ, ಸಂಭ್ರಮಿಸುವುದುಂಟು.

ಸಿಂಗರಿಸಿದ ಎತ್ತುಗಳನ್ನು ಒಂದಷ್ಟು ಮೆರವಣಿಗೆ ಮಾಡಿಸಿ, ಮೈದಾನದಲ್ಲಿ ಹಾಕಿರುವ ಕಿಚ್ಚಿನ ಮೇಲೆ ಅವುಗಳನ್ನು ಹಾಯಿಸುವುದೂ ಉಂಟು. ನಶಿಸುತ್ತಿರುವ ಈ ಸಂಪ್ರದಾಯಕ್ಕೆ ಸಾಕ್ಷಿಯಾಗಲು ಈ ಬಾರಿಯಾದರೂ ಬಸವನಗುಡಿ ನೆಟ್ಟಕಲ್ಲಪ್ಪ ಸರ್ಕಲಿಗೆ ಜನವರಿ 14ರಂದು ಬರುತ್ತೀರಲ್ವೇ?

English summary

Special Sankranti 2013 in Basavanagudi | Bull temple in Bangalore | ಬೆಂಗಳೂರು ಬಸವನಗುಡಿಯಲ್ಲಿ ಸ್ಪೆಷಲ್ ಸಂಕ್ರಾಂತಿ

India has inumerable temples for bull, the vehicle for lord Shiva. The bull temple in Bangalore has organized a specil event to mark Sankranthi 2013.
X
Desktop Bottom Promotion