For Quick Alerts
ALLOW NOTIFICATIONS  
For Daily Alerts

ನಿದ್ದೆ ಕೆಡಿಸುವ ಅತೀ ಜವಾಬ್ದಾರಿಯುತ 12 ಉದ್ಯೋಗಗಳು

By Super
|

ಸುಖಜೀವನಕ್ಕೆ ಸುಖನಿದ್ದೆಯೂ ಅತಿ ಅಗತ್ಯ ಎಂದು ಎಲ್ಲಾ ಆರೋಗ್ಯಶಾಸ್ತ್ರಗಳು ಹೇಳುತ್ತವೆ. ವೈದ್ಯಕೀಯ ವಿಜ್ಞಾನದ ಪ್ರಕಾರ ಪ್ರತಿದಿನ ಆರರಿಂದ ಎಂಟು ಘಂಟೆಗಳ ನಿದ್ದೆ ಬೇಕೇ ಬೇಕು. ಈ ಆರರಿಂದ ಎಂಟು ಘಂಟೆಗಳು ರಾತ್ರಿಯಲ್ಲಿರಬೇಕಾಗಿರುವುದು ನೈಸರ್ಗಿಕ ಅಗತ್ಯ.

ಆದರೆ ಇಂದಿನ ದಿನಗಳಲ್ಲಿ ಹಲವು ಸಂಸ್ಥೆಗಳು ದಿನದ ಇಪ್ಪತ್ತನಾಲ್ಕೂ ಘಂಟೆ ಕಾರ್ಯನಿರ್ವಹಿಸಬೇಕಾಗುವಾಗ ಅದರ ಉದ್ಯೋಗಿಗಳಲ್ಲಿ ಕೆಲವರಿಗೆ ಅನಿವಾರ್ಯವಾಗಿ ರಾತ್ರಿಯ ಸಮಯದಲ್ಲಿ ಪಾಳಿ ನಿರ್ವಹಿಸಬೇಕಾಗಿರುವುದರಿಂದ ದಿನದಲ್ಲಿ ನಿದ್ದೆ ಪೂರೈಸಬೇಕಾಗುತ್ತದೆ. ಆದರೆ ಕೆಲವು ಕ್ಷಣಗಳ ನಿದ್ರಾಪರವಶತೆ ಹೆಚ್ಚಿನ ತೊಂದರೆ ಹಾಗೂ ಹಾನಿಗಳನ್ನೂ ಉಂಟುಮಾಡಬಹುದು.

ಎರಡು ವರ್ಷಗಳ ಹಿಂದೆ ಮಂಗಳೂರಿನ ಬಳಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರ್ಘಟನೆಗೀಡಾಗಿದ್ದು ಆ ಸಮಯದಲ್ಲಿ ಪೈಲಟ್ ಕೆಲಕ್ಷಣಗಳ ನಿದ್ದೆಗೆ ಶರಣಾಗಿದ್ದು ಎಂದು ಸಾಬೀತಾಗಿದೆ. ಆದರೆ ಆ ಕ್ಷಣಗಳು ಹಲವು ಜೀವಗಳ ಹರಣಕ್ಕೆ ಕಾರಣವಾದುದು ಮಾತ್ರ ಅತ್ಯಂತ ಶೋಚನೀಯ. ಅಂತಹದ್ದೇ ಕಣ್ಣಿಗೆ ಎಣ್ಣೆ ಬಿಟ್ಟು ನಿದ್ದೆ ಬಿಟ್ಟು ನಿರ್ವಹಿಸಬೇಕಾದ ಪ್ರಮುಖ ಹನ್ನೆರಡು ಉದ್ಯೋಗಗಳ ಮಾಹಿತಿ ಇಲ್ಲಿದೆ.

1) ಏರ್ ಟ್ರಾಫಿಕ್ ಕಂಟ್ರೋಲರ್ (ವಿಮಾನಯಾನ ನಿಯಂತ್ರಕ)

1) ಏರ್ ಟ್ರಾಫಿಕ್ ಕಂಟ್ರೋಲರ್ (ವಿಮಾನಯಾನ ನಿಯಂತ್ರಕ)

ಯಾವುದೇ ವಿಮಾನ ನಿಲ್ದಾಣದಲ್ಲಿ ಅತ್ಯಂತ ಕಷ್ಟಕರವಾದ ಮತ್ತು ಪ್ರಮುಖವಾದ ಉದ್ಯೋಗವೆಂದರೆ ಏರ್ ಟ್ರಾಫಿಕ್ ಕಂಟ್ರೋಲರ್ ರದ್ದು. ಆ ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಮತ್ತು ಒಂದರಿಂದ ಇನ್ನೊಂದರ ಸುರಕ್ಷಿತ ಅಂತರವಿರುವಂತೆ ನೋಡಿಕೊಳ್ಳುವುದು, ಯಾವ ವಿಮಾನ ಯಾವ ರನ್ ವೇ ನಲ್ಲಿ ಇಳಿಯಬೇಕು, ಯಾವ ರನ್ ವೇ ಯಿಂದ ಹಾರಬೇಕು ಎಂಬುದನ್ನು ರಾಡಾರ್ ಪರದೆಯ ಮೇಲೆ ವೀಕ್ಷಿಸುತ್ತಾ ನಿರ್ದೇಶನ ನೀಡಬೇಕಾದುದು ಈ ಉದ್ಯೋಗಿಯ ಪ್ರಮುಖ ಕರ್ತವ್ಯ. ಒಂದು ಸೆಕೆಂಡ್ ಕೂಡಾ ರಾಡಾರ್ ಪರದೆಯಿಂದ ಕಣ್ಣನ್ನು ತೆಗೆಯುವಂತಿಲ್ಲ. ರಾತ್ರಿಯಾದರೂ ಸರಿ ಹಗಲಾದರೂ ಸರಿ, ಪಾಳಿಯಲ್ಲಿರುವ ಉದ್ಯೋಗಿಗಳು ಸತತವಾಗಿ ಪರದೆ ನೋಡುತ್ತಾ ನಿರ್ದೇಶನವನ್ನು ನೀಡುತ್ತಲೇ ಇರಬೇಕು. ತುರ್ತು ಸಮಯದಲ್ಲಿ ಕ್ಷಿಪ್ರವಾಗಿ ತೀರ್ಮಾನಗಳನ್ನು ಕೈಗೊಳ್ಳಬೇಕು. ಉದ್ಯೋಗಿಯ ಒಂದು ಕ್ಷಣದ ಮೈಮರೆಯುವಿಕೆ ನೂರಾರು ಪ್ರಯಾಣಿಕರ ಪ್ರಾಣಕ್ಕೇ ಕುತ್ತಾಗಬಲ್ಲದು. ಈ ಅಗತ್ಯತೆಗಳು ಈ ಪಟ್ಟಿಯಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ಉದ್ಯೋಗವನ್ನು ಮೊದಲ ಸ್ಥಾನದಲ್ಲಿ ನಿಲ್ಲಿಸುತ್ತವೆ.

2) ನೆಟ್ವರ್ಕ್ ಅಡ್ಮಿನಿಸ್ಟ್ರೇಟರ್ (ಜಾಲತಾಣ ನಿರ್ವಾಹಕ)

2) ನೆಟ್ವರ್ಕ್ ಅಡ್ಮಿನಿಸ್ಟ್ರೇಟರ್ (ಜಾಲತಾಣ ನಿರ್ವಾಹಕ)

ಇಂಟರ್ನೆಟ್ ಇಂದಿನ ಜೀವನವನ್ನೇ ಬದಲಿಸಿದೆ. ಹೆಚ್ಚೂ ಕಡಿಮೆ ಎಲ್ಲಾ ವ್ಯವಸ್ಥೆಗಳು ಅಂತರ್ಜಾಲವನ್ನು ಒಂದಲ್ಲಾ ಒಂದು ರೀತಿಯಲ್ಲಿ ಅವಲಂಬಿಸಿವೆ. ಈ ವ್ಯವಸ್ಥೆ ದಿನದ ಇಪ್ಪತ್ತನಾಲ್ಕೂ ಘಂಟೆ ಕಾರ್ಯನಿರ್ವಹಿಸುವುದು ಅನಿವಾರ್ಯ. ಅಂದಮೇಲೆ ಇದನ್ನು ನೋಡಿಕೊಳ್ಳುವ ಜವಾಬ್ದಾರಿ ಇರುವವರು ಸಹಾ ಇಪ್ಪತ್ತನಾಲ್ಕೂ ಘಂಟೆ ಕಾರ್ಯನಿವಹಿಸಬೇಕು. ಎಲ್ಲಿಯಾದರೂ ಮೈಮರೆತ ಒಂದು ಕ್ಷಣದಲ್ಲಿ ಏನಾದರೂ ತೊಂದರೆ ಸಂಭವಿಸಿ ಅಗತ್ಯವಿದ್ದ ಕ್ರಮ ಕೈಗೊಳ್ಳದಿದ್ದರೆ ಆ ತೊಂದರೆ ಇಡಿಯ ಜಾಲಕ್ಕೇ ವ್ಯಾಪಿಸಿ ವ್ಯವಸ್ಥೆ ಕುಸಿಯುವ ಭಯವಿರುತ್ತದೆ. ಉದ್ಯೋಗಿ ಅನಿವಾರ್ಯವಾಗಿ ಕ್ಷಣವನ್ನೂ ಬಿಡದೆ ಜಾಲತಾಣದ ನಿರ್ವಹಣೆಯನ್ನು ಗಮನಿಸಬೇಕಾಗುತ್ತದೆ.

3) ಕಾರ್ಖಾನೆಯ ಕಾರ್ಮಿಕ

3) ಕಾರ್ಖಾನೆಯ ಕಾರ್ಮಿಕ

ಹಲವು ಕಾರ್ಖಾನೆಗಳು ದಿನವಿಡೀ ಕಾರ್ಯನಿರ್ವಹಿಸುತ್ತವೆ. ಏಕೆಂದರೆ ಕೆಲವು ಯಂತ್ರಗಳು ಆರಂಭವಾಗಲಿಕ್ಕೇ ಆರರಿಂದ ಎಂಟು ಘಂಟೆಗಳನ್ನು ಪಡೆದುಕೊಳ್ಳುತ್ತವೆ. ಉದಾಹರಣೆಗೆ ಪ್ಲಾಸ್ಟಿಕ್ ಮೌಲ್ಡಿಂಗ್ (ಅಚ್ಚು) ಯಂತ್ರ. ಇದರಲ್ಲಿರುವ ಹೀಟರುಗಳು ಬಿಸಿಯಾಗಲಿಕ್ಕೇ ಸುಮಾರು ಎಂಟು ಘಂಟೆ ತೆಗೆದುಕೊಳ್ಳುತ್ತವೆ. ಪ್ರತಿದಿನ ಬೆಳಿಗ್ಗೆ ಬಂದು ಯಂತ್ರಕ್ಕೆ ಚಾಲನೆ ನೀಡಿದರೆ ಅದು ಪೂರ್ಣವಾಗಿ ಬಿಸಿಯಾಗುವುದರೊಳಗೇ ದಿನದ ಪಾಳಿ ಮುಗಿದಿರುತ್ತದೆ. ಆಗ ಕೆಲಸವನ್ನು ಮುಂದಿನ ಪಾಳಿಗೆ ಮುಂದುವರೆಸಬೇಕಾಗಿರುವುದು ಅನಿವಾರ್ಯವಾಗುತ್ತದೆ. ಅಲ್ಲದೇ ಖರ್ಚು ನಿರ್ವಹಣೆಗೂ ಈ ಪಾಳಿಗಳು ಅನಿವಾರ್ಯವಾಗಿವೆ. ಯಂತ್ರದೊಂದಿಗೆ ಯಂತ್ರವಾಗಿ ಬದುಕುವ ಕಾರ್ಮಿಕನಿಗೆ ಯಂತ್ರದೊಂದಿಗಿನ ಪ್ರತಿಕ್ಷಣ ಕಳೆಯಬೇಕಾಗಿರುವುದರಿಂದ ಒಂದು ಕ್ಷಣದ ನಿದ್ದೆಯೂ ಮಾರಕವಾಗಬಲ್ಲದು. ಅದರಲ್ಲೂ ಮೈಮರೆತ ಒಂದು ಕ್ಷಣದಲ್ಲಿ ಬೆರಳು ಅಥವಾ ಬೇರೆ ಅಂಗಗಳು ಯಂತ್ರಕ್ಕೆ ಸಿಲುಕಿ ಅಪಘಾತವಾಗುವ ಸಂಭವವಿರುತ್ತದೆ. ನಿದ್ದೆಗೆಟ್ಟ ಪರೋಕ್ಷ ಪರಿಣಾಮಗಳಾಗಿ ಹೆಚ್ಚಿದ ರಕ್ತದೊತ್ತಡ, ಸಕ್ಕರೆ ಖಾಯಿಲೆ ಮತ್ತು ಖಿನ್ನತೆಯಂತಹ ತೊಂದರೆಗಳನ್ನೂ ಕಾರ್ಮಿಕರು ಎದುರಿಸಬೇಕಾಗಿ ಬರುತ್ತದೆ.

4) ಸೀನಿಯರ್ ಮ್ಯಾನೇಜರ್ (ಉನ್ನತ ಅಧಿಕಾರಿ)

4) ಸೀನಿಯರ್ ಮ್ಯಾನೇಜರ್ (ಉನ್ನತ ಅಧಿಕಾರಿ)

ತಮ್ಮ ಕೈಕೆಳಗಿನ ಉದ್ಯೋಗಿಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಉನ್ನತ ಅಧಿಕಾರಿಯ ಆದ್ಯ ಕರ್ತವ್ಯ. ಆದರೆ ಹೆಚ್ಚಿನ ಕಾರ್ಯಕ್ಷಮತೆಯ ಅಪೇಕ್ಷೆ ಹೆಚ್ಚು ನಿದ್ದೆಗೆಡಲು ಪ್ರೇರೇಪಿಸುತ್ತದೆ. ಉದ್ಯೋಗಿಗಳಲ್ಲಿ ಯಾರೊಬ್ಬರಿಂದ ತಪ್ಪು ಸಂಭವಿಸಿದರೂ ಉನ್ನತ ಅಧಿಕಾರಿಯೇ ಉತ್ತರಿಸಬೇಕಾದುದರಿಂದ ಯಾವಾಗಲೂ ಒಂದು ರೀತಿಯ ಒತ್ತಡ ಇದ್ದೇ ಇರುತ್ತದೆ. ಈ ಒತ್ತಡವೇ ಕುಂಠಿತವಾದ ನಿದ್ದೆಗೆ ಕಾರಣ ಎಂದು ವೈದ್ಯಕೀಯ ಸಮೀಕ್ಷೆಗಳು ಸಾಬೀತುಪಡಿಸಿವೆ. ಉದ್ಯೋಗದಲ್ಲಿ ಅತೃಪ್ತಿಗೂ ನಿದ್ದೆ ಇಲ್ಲದಿರುವುದಕ್ಕೂ ನೇರ ಸಂಬಂಧವಿದೆ ಎಂದೂ ವೈದ್ಯಕೀಯ ಸಮೀಕ್ಷೆಗಳು ತಿಳಿಸುತ್ತವೆ.

5) ವಾರ್ತಾ ನಿರೂಪಕ

5) ವಾರ್ತಾ ನಿರೂಪಕ

ದೂರದರ್ಶನ ಪ್ರಾರಂಭಿಕ ಹಂತದಲ್ಲಿದ್ದಾಗ ವಾರ್ತೆಗಳು ಬರುತ್ತಿದ್ದುದೇ ದಿನಕ್ಕೆ ಮೂರು ನಾಲ್ಕು ಬಾರಿ ಮಾತ್ರ. ಇಂದು ವಾರ್ತೆಗಳಿಗೇ ಮೀಸಲಾದ ಹಲವು ಚಾನೆಲುಗಳಿವೆ. ಈ ವಾರ್ತಾ ಚಾನೆಲುಗಳು ದಿನದ ಇಪ್ಪತ್ತನಾಲ್ಕೂ ಘಂಟೆಗಳ ಕಾಲ ಸತತವಾಗಿ ವಾರ್ತೆಗಳನ್ನು ಬಿತ್ತರಿಸುತ್ತಲೇ ಇರುತ್ತವೆ. ನಿರೂಪಕರು, ವರದಿಗಾರರು, ಸಂಪಾದಕರು, ಕ್ಯಾಮೆರಾ ತಂತ್ರಜ್ಞರು ದಿನವಿಡೀ ಕಾರ್ಯನಿರ್ವಹಿಸುತ್ತಲೇ ಇರುತ್ತಾರೆ. ಈ ಅಗತ್ಯತೆ ಉದ್ಯೋಗಿಗಳಲ್ಲಿ ನಿದ್ದೆಯ ಅವಧಿಯನ್ನೇ ಕಡಿತಗೊಳಿಸಿವೆ. ಅದರಲ್ಲೂ ಏನಾದರೂ ವಿಶೇಷವಾದದುದನ್ನು ಬಿತ್ತರಿಸಬೇಕಾಗಿ ಬಂದಾಗ ಆ ಸ್ಥಳಕ್ಕೆ ತುರ್ತಾಗಿ ಆಗಮಿಸಿ ಮಾಹಿತಿಯನ್ನು ಬಿತ್ತರಿಸುವ ಒತ್ತಡದಲ್ಲಿ ನಿದ್ದೆ ಮರೀಚಿಕೆಯಾಗುತ್ತದೆ.

6) ನರ್ಸ್ (ಆಸ್ಪತ್ರೆಯ ದಾದಿ) ಹಾಗೂ ವೈದ್ಯರು

6) ನರ್ಸ್ (ಆಸ್ಪತ್ರೆಯ ದಾದಿ) ಹಾಗೂ ವೈದ್ಯರು

ವ್ಯಕ್ತಿಯ ಆರೋಗ್ಯದ ವಿಷಯ ಬಂದಾಗ ಒಂದು ಕ್ಷಣದ ವಿರಾಮವನ್ನೂ ಪಡೆಯದೇ ಸೇವೆ ಸಲ್ಲಿಸುವ ವೈದ್ಯರು ಮತ್ತು ದಾದಿಯರು ಸಹಾ ಈ ಪಟ್ಟಿಯಲ್ಲಿ ಸೇರ್ಪಡುತ್ತಾರೆ. ವೈದ್ಯರಲ್ಲಿ ಸಾಕ್ಷಾತ್ ದೇವರನ್ನೇ ಕಾಣುವ ರೋಗಿಗಳ ಪಾಲಿಗೆ ವೈದ್ಯರ ಅಥವಾ ದಾದಿಯರ ಮೈಮರೆತ ಒಂದು ಕ್ಷಣ ಮೃತ್ಯುವಾಗಿ ಪರಿಣಮಿಸಬಲ್ಲದು.

7) ಹಣಕಾಸು ವಿಶ್ಲೇಷಕ (ಫೈನಾನ್ಸಿಯಲ್ ಅನಾಲಿಸ್ಟ್)

7) ಹಣಕಾಸು ವಿಶ್ಲೇಷಕ (ಫೈನಾನ್ಸಿಯಲ್ ಅನಾಲಿಸ್ಟ್)

ವಿದೇಶೀ ವಿನಿಮಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಈ ಉದ್ಯೋಗಿಗಳು ಹಲವು ರಾಷ್ಟ್ರಗಳೊಂದಿಗೆ ಸಹಕರಿಸಬೇಕಾದುದರಿಂದ ಹಗಲು ಮತ್ತು ರಾತ್ರಿ ಕಾರ್ಯನಿರತರಾಗಿರುವುದು ಅವಶ್ಯವಾಗಿದೆ. ಅದರಲ್ಲೂ ಪಾಶ್ಚಾತ್ಯ ದೇಶಗಳ ಸಮಯದಲ್ಲಿ ಮತ್ತು ನಮ್ಮ ಸಮಯದಲ್ಲಿ ಸರಿಯಾಗಿ ಹನ್ನೆರಡು ಘಂಟೆಗಳ ವ್ಯತ್ಯಾಸವಿರುವುದರಿಂದ ಸರಿರಾತ್ರಿ ಕಾರ್ಯನಿರ್ವಹಿಸಬೇಕಾಗಿರುವುದು ಉದ್ಯೋಗಿಗಳಿಗೆ ಅಗತ್ಯವಾಗಿದೆ. ಕಾರ್ಯ ಪೂರ್ಣಗೊಳ್ಳಲು ಸಾಧಾರಣವಾಗಿ ನಿಗದಿತ ಸಮಯಕ್ಕಿಂತಲೂ ಹೆಚ್ಚಿನ ಬೇಡುವ ಈ ಉದ್ಯೋಗದಲ್ಲಿ ಯಶಸ್ವಿಯಾದವರು ಹೆಚ್ಚಿನ ಅವಧಿಯನ್ನು ಕೆಲಸದಲ್ಲಿ ಕಳೆದಿರುವುದು ಸಮೀಕ್ಷೆಗಳಿಂದ ಧೃಢಪಟ್ಟಿದೆ.

8) ಪೋಲೀಸ್ ಅಧಿಕಾರಿ

8) ಪೋಲೀಸ್ ಅಧಿಕಾರಿ

ಜನಸಾಮಾನ್ಯರು ಸುಖಕರವಾಗಿ ನಿದ್ದೆ ಮಾಡುವಲ್ಲಿ ರಾತ್ರಿ ಗಸ್ತು ತಿರುಗುವ ಪೋಲೀಸರ ಕೊಡುಗೆ ಮಹತ್ವದ್ದಾಗಿದೆ. ದಿನದ ಇಪ್ಪತ್ತನಾಲ್ಕೂ ಘಂಟೆ ಕಾಲ ಸುರಕ್ಷತೆಯನ್ನು ಒದಗಿಸುವ ಇಲಾಖೆಗೆ ಸಿಬ್ಬಂದಿಯನ್ನು ಹೇಗೆ ಬಳಸಿಕೊಳ್ಳಬೇಕೆಂಬ ತರಬೇತಿ ನೀಡಲಾಗಿರುತ್ತದೆ. ಹಬ್ಬವೇ ಬರಲಿ, ರಜಾದಿನವೇ ಇರಲಿ, ಮಳೆ ಗಾಳಿ, ಚಳಿಯೇ ಇರಲಿ ಉದ್ಯೋಗದ ಮೇಲಿರುವ ಅಧಿಕಾರಿಗಳಿಗೆ ತಮ್ಮ ಕರ್ತವ್ಯ ನಿರ್ವಹಿಸುವುದು ಪ್ರಮುಖ ಆದ್ಯತೆಯಾಗಿರುತ್ತದೆ. ಕೆಲವೊಮ್ಮೆ ಅನಿರೀಕ್ಷಿತವಾದ ಅಗತ್ಯತೆ ಕಂಡು ಬಂದಾಗ ಸಿಬ್ಬಂದಿಯನ್ನು ಬೇರೆ ಬೇರೆ ಪಾಳಿಗಳಿಗೆ ವರ್ಗಾಯಿಸುವುದು ಅನಿವಾರ್ಯವಾಗುತ್ತದೆ. ಹಗಲಿನ ಎರಡು ಪಾಳಿಗಳಲ್ಲಿ ಬದಲಿಸುವುದು ಕಷ್ಟವಾಗುವುದಿಲ್ಲ. ಆದರೆ ದಿನದ ಪಾಳಿಯಿಂದ ರಾತ್ರಿ ಪಾಳಿಗೆ ಬದಲಾವಣೆಯಾದಾಗ ಮಾತ್ರ ನಿದ್ದೆಗೆ ಸಂಚಕಾರವಾಗುತ್ತದೆ.

9) ವಿಮಾನ ಚಾಲಕ (ಪೈಲಟ್)

9) ವಿಮಾನ ಚಾಲಕ (ಪೈಲಟ್)

ಪೈಲಟ್ ಎಂದಾಕ್ಷಣ ಠಾಕು ಠೀಕಾಗಿ ಸಮವಸ್ತ್ರ ಧರಿಸಿದ ಅಧಿಕಾರಿಯ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಒಂದು ವಿಮಾನಯಾನ ಹೆಚ್ಚೆಂದರೆ ಮೂರು ನಾಲ್ಕು ಘಂಟೆ ಇರಬಹುದು ಆಮೇಲೆ ಆರಾಮ ಎಂದೆಲ್ಲಾ ನಾವು ಮಾತನಾಡಿಕೊಳ್ಳುತ್ತೇವೆ. ಆದರೆ ನಾವು ತಿಳಿದಿರುವುದಕ್ಕಿಂತಲೂ ಹೆಚ್ಚು ಸಮಯವನ್ನು ಅವರು ವಿಮಾನದಲ್ಲಿ ಕಳೆಯಬೇಕಾಗುತ್ತದೆ. ಅಲ್ಲದೇ ವಿಮಾನಯಾನದ ಅವಧಿ ದಿನದಿಂದ ದಿನಕ್ಕೆ ಬದಲಾಗುತ್ತಾ ಇರುವುದರಿಂದ ನಿಯಮಿತ ನಿದ್ದೆ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲದೇ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಾರಾಟ ನಡೆಸುವಾಗ ಆ ರಾಷ್ಟ್ರಗಳ ನಡುವಿನ ಸಮಯದ ಅಂತರ ಜೆಟ್ ಲ್ಯಾಗ್ ತೊಂದರೆಗೂ ಕಾರಣವಾಗುತ್ತದೆ. ಈ ತೊಂದರೆಗಳನ್ನು ಎದುರಿಸಲು FAA (Federal Aviation Administration) ಸಂಸ್ಥೆ ಹಲವು ನಿಯಮಗಳನ್ನು ಪ್ರಕಟಿಸಿದೆ. ಅದರಲ್ಲಿ ಪೈಲಟುಗಳಿಗೆ ದಿನದ ಇಪ್ಪತ್ತನಾಲ್ಕು ಘಂಟೆಗಳ ನಡುವೆ ಎಂಟು ಘಂಟೆಗಳ ತಡೆರಹಿತ ನಿದ್ದೆ ವ್ಯವಸ್ಥೆ ಮಾಡುವುದು ಸಹಾ ಒಂದು.

10) ನವಜಾತ ಶಿಶುವಿನ ಪಾಲಕರು

10) ನವಜಾತ ಶಿಶುವಿನ ಪಾಲಕರು

ನವಜಾತ ಶಿಶು ದಿನವಿಡೀ ಮಲಗುತ್ತಾ ಏಳುತ್ತಾ ಅಳುತ್ತಾ ಇರುತ್ತದೆ. ಪ್ರತಿಸಾರಿ ಅತ್ತಾಗಲೂ ಪಾಲಕರು ಎದ್ದು ಹಾಲೂಡಿಸುವುದು, ಸ್ವಚ್ಛಗೊಳಿಸುವುದು ಲಾಲಿ ಹಾಡುವುದು ಮೊದಲಾದ ಕೆಲಸವನ್ನು ಮಾಡಬೇಕಾಗುತ್ತದೆ. ಅದರಲ್ಲೂ ಮಗುವಿನ ತಾಯಿ ತನ್ನ ರಾತ್ರಿಯಿಡೀ ಹಲವು ಬಾರಿ ನಿದ್ದೆಯಿಂದ ಏಳಬೇಕಾಗುತ್ತದೆ. ಆಕೆ ದಿನಕ್ಕೆ ಏಳು ಘಂಟೆಗಳ ಕಾಲ ನಿದ್ದೆ ಮಾಡುತ್ತಳಾದರೂ ಆ ನಿದ್ದೆಯ ನಡುವೆ ಹಲವು ಬಾರಿ ಮಗು ಅಳುವುದರಿಂದ ಏಳಬೇಕಾಗಿ ಬರುತ್ತದೆ. ಆದರೆ ಮಗುವಿಗೆ ಸುಮಾರು ನಾಲ್ಕು ತಿಂಗಳಾದ ಬಳಿಕ ಈ ಪರಿಸ್ಥಿತಿ ಸುಧಾರಿಸುತ್ತದೆ.

11) ಚಾಲಕ

11) ಚಾಲಕ

ನಮಗೆ ಅಗತ್ಯವಿರುವ ದಿನಬಳಕೆಯ ವಸ್ತುಗಳನ್ನು ಟ್ರಕ್ಕುಗಳಲ್ಲಿ ಸಾಗಿಸಿ ಸಮಯಕ್ಕೆ ಸರಿಯಾಗಿ ತಲುಪಿಸುವಲ್ಲಿ ಟ್ರಕ್ ಚಾಲಕರ ಕೊಡುಗೆ ಮಹತ್ವದ್ದಾಗಿದೆ. ಅದರಲ್ಲೂ ಆಹಾರ ವಸ್ತುಗಳು, ಹಾಲು, ಹಣ್ಣು ಹಂಪಲು, ತರಕಾರಿ ಮೊದಲಾದವುಗಳನ್ನು ಕನಿಷ್ಟ ಸಮಯದಲ್ಲಿ ಸಾಗಿಸಬೇಕಾಗಿ ಬರುವುದರಿಂದ ರಾತ್ರಿ ಹಗಲು ವಾಹನ ಚಲಾಯಿಸುವುದು ಅಗತ್ಯವಾಗಿರುತ್ತದೆ. ನಿದ್ದೆಗೆಡುವ ಟ್ರಕ್ ಚಾಲಕರಿಂದ ಹಲವು ಅಪಘಾತಗಳಾಗಿರುವ ಪ್ರಕರಣಗಳಿವೆ. ಈ ಕಾರಣದಿಂದ ನಿದ್ದೆಗೆಡಬೇಕಾದ ಸಂದರ್ಭದಲ್ಲಿ ಇಬ್ಬರು ಚಾಲಕರಿರುವುದನ್ನು ಟ್ರಕ್ ಚಾಲಕರ ಸಂಘ ಕಡ್ಡಾಯಗೊಳಿಸಿದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಕಲವು ಸಲಹೆಗಳು:

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಕಲವು ಸಲಹೆಗಳು:

ರಾತ್ರಿ ಪಾಳಿಯಲ್ಲಿದ್ದರೆ ಪ್ರತಿದಿನ ಒಂದೇ ಸಮಯವನ್ನು ಪಾಲಿಸಿರಿ. ಇದೇ ಸಮಯವನ್ನು ವಾರಾಂತ್ಯದ ದಿನಗಳಲ್ಲೂ ಪಾಲಿಸಿರಿ. ಉದ್ಯೋಗದ ಅವಧಿಯಲ್ಲಿ ಒಬ್ಬಂಟಿಯಾಗಿರುವುದನ್ನು ಆದಷ್ಟು ತಪ್ಪಿಸಿರಿ. ಕೆಲಸದ ಪ್ರಾರಂಭದಲ್ಲಿ ಕೆಫೇನ್ ಉಳ್ಳ ಪೇಯ ಅಂದರೆ ಟೀ ಕಾಫಿ ಮೊದಲಾದವುಗಳನ್ನು ಸೇವಿಸಿರಿ. ಮಧ್ಯೆ ಮಧ್ಯೆ ಎಷ್ಟು ಸಾಧ್ಯವೋ ಅಷ್ಟು ನಡೆಯಿರಿ. ಕೆಲ ಘಂಟೆಗಳ ಬಳಿಕ ಸಾಧ್ಯವಾದರೆ ಮತ್ತು ನಿಮ್ಮ ಕೆಲಸದಲ್ಲಿ ಯಾವುದೇ ತೊಂದರೆಯಾಗದಿದ್ದರೆ ಸ್ವಲ್ಪ ಸಮಯದ ಅವಧಿಗಾಗಿ ಮಲಗಿರಿ.

ದಿನದ ಅವಧಿಯಲ್ಲಿ ನಿದ್ದೆ ಮಾಡಬೇಕಾಗಿ ಬರುವವರಿಗೆ ಕೆಲವು ಸಲಹೆಗಳು:

ದಿನದ ಅವಧಿಯಲ್ಲಿ ನಿದ್ದೆ ಮಾಡಬೇಕಾಗಿ ಬರುವವರಿಗೆ ಕೆಲವು ಸಲಹೆಗಳು:

ನೈಸರ್ಗಿಕವಾಗಿ ದಿನದ ಅವಧಿಯಲ್ಲಿ ನಿದ್ದೆ ಮಾಡುವುದು ಸ್ವಲ್ಪ ಕಷ್ಟ. ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗುವಾಗ ಕಣ್ಣಿಗೆ ತಂಪುಕನ್ನಡಕ ಧರಿಸಿರಿ ಹಾಗೂ ಸೂರ್ಯನ ನೇರಕಿರಣಗಳಿಂದ ಆದಷ್ಟು ತಪ್ಪಿಸಿಕೊಳ್ಳಿ. ನೀವು ಮಲಗುವ ಸ್ಥಳ ಆದಷ್ಟು ಕತ್ತಲುಮಯವಾಗಿರುವಂತೆ ನೋಡಿಕೊಳ್ಳಿ. ಸಾಧ್ಯವಾದರೆ ಕಣ್ಣಿಗೆ ಒಂದು ಪಟ್ಟಿ ಕಟ್ಟಿಕೊಳ್ಳಿ. ಕಿವಿಗೆ ಇಯರ್ ಪ್ಲಗ್ ಧರಿಸಿ ದಿನದ ಸದ್ದುಗಳಿಂದ ನಿಮ್ಮ ನಿದ್ದೆಗೆಡದಂತೆ ನೋಡಿಕೊಳ್ಳಿ. ನಿದ್ದೆಗೂ ಮೊದಲು ಸ್ನಾನ ಮಾಡುವುದು ಹಾಗೂ ಸ್ವಲ್ಪ ಸಮಯದವರೆಗೆ ಪುಸ್ತಕವೊಂದನ್ನು ಓದುವುದೂ ಶ್ರೇಯಸ್ಕರ.

English summary

Jobs That Ruin Your Sleep

A busy adult is advised to sleep between six to eight hours per night … but for many, a good night’s sleep can mean little more than four hours. Take a look at a few of the world’s worst jobs for shifting sleep patterns.
X
Desktop Bottom Promotion