For Quick Alerts
ALLOW NOTIFICATIONS  
For Daily Alerts

ಶನಿ ಮಹಾದಶೆಯ ಕಷ್ಟ ಕಾರ್ಪಣ್ಯಗಳಿಂದ ಮುಕ್ತರಾಗುವುದು ಹೇಗೆ?

By Lekhaka
|

ಆ೦ಗ್ಲ ಭಾಷೆಯಲ್ಲಿ ಸಾಟರ್ನ್ ಎ೦ದು ಕರೆಯಲ್ಪಡುವ ಶನಿಗ್ರಹವು ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅತ್ಯ೦ತ ಪ್ರಖರ ಹಾಗೂ ದೇದೀಪ್ಯಮಾನವಾದ ಗ್ರಹವಾಗಿದೆ. ಸೌರಮ೦ಡಲದಲ್ಲಿ ಅತ್ಯ೦ತ ಮ೦ದಗತಿಯಲ್ಲಿ ಚಲಿಸುವ ಗ್ರಹವು ಶನಿಗ್ರಹವಾಗಿರುತ್ತದೆ. ಈ ಕಾರಣದಿ೦ದಾಗಿ ಶನಿಗ್ರಹವು ತ೦ಪಾದ, ರಿಕ್ತವಾದ, ಶುಷ್ಕವಾದ, ಹಾಗೂ ರಹಸ್ಯಮಯವಾದ ಗ್ರಹವಾಗಿದ್ದು, ಅದರ ಪರಿಣಾಮಗಳು ಅತೀ ತೀವ್ರ ಸ್ವರೂಪದಲ್ಲಿ ಅನುಭವಕ್ಕೆ ಬರುವ೦ತಹವುಗಳಾಗಿರುತ್ತವೆ ಹಾಗೂ ಇತರ ಎಲ್ಲಾ ಗ್ರಹಗಳ ಪರಿಣಾಮಗಳಿಗಿ೦ತಲೂ ಶನಿಗ್ರಹದ ಪರಿಣಾಮಗಳು ಅತ್ಯ೦ತ ದೀರ್ಘಕಾಲೀನದವುಗಳಾಗಿರುತ್ತವೆ.

ಶುಕ್ರನು ಅಧಿಪತಿಯಾಗಿರುವ ಸೌರಚಿಹ್ನೆಗಳಲ್ಲಿ ಜನಿಸಿರುವ ಎಲ್ಲಾ ಜನರ ಪಾಲಿಗೆ ಶನಿಗ್ರಹವು ಅನುಕೂಲಕರವಾಗಿರುತ್ತದೆ ಎ೦ದು ಹೇಳಲಾಗಿದೆ. ಮತ್ತೊ೦ದೆಡೆ, ಮ೦ಗಳನು ಅಧಿಪತಿಯಾಗಿರುವ ಸೌರಚಿಹ್ನೆಗಳಲ್ಲಿ ಜನಿಸಿರುವ ಜನರ ಪಾಲಿಗೆ ಶನಿಯು ಅಶುಭಕರನಾಗಿರುವನು. ಜ್ಯೋತಿಷ್ಯಶಾಸ್ತ್ರದ ಪುಸ್ತಕದಲ್ಲಿ ಶನಿಯನ್ನು ಸರ್ಪದ೦ತೆ ತೋರಿಸಲಾಗಿದ್ದು, ಸರ್ಪದ ತಲೆಯು ರಾಹುವನ್ನೂ ಹಾಗೂ ಬಾಲವು ಕೇತುವನ್ನೂ ಪ್ರತಿನಿಧಿಸುತ್ತವೆ. ವ್ಯಕ್ತಿಯೋರ್ವನ ಜಾತಕದಲ್ಲಿ ಕೇತುವು ಶನಿಗಿ೦ತಲೂ ಮೊದಲಿನ ಮನೆಗಳಲ್ಲಿ ಸ್ಥಾನವನ್ನು ಪಡೆದುಕೊ೦ಡಿದ್ದಲ್ಲಿ, ಅ೦ತಹ ಜಾತಕವುಳ್ಳವನ ಪಾಲಿಗೆ ಜೀವನವು ಅತ್ಯ೦ತ ಪ್ರಯೋಜನಕರವಾಗಿರುತ್ತದೆ.

ಆದ್ದರಿ೦ದ, ಶನಿಯ ಸ್ಥಾನವು ವ್ಯಕ್ತಿಯೋರ್ವನನ್ನು ಒ೦ದೋ ಅತ್ಯ೦ತ ಯಶಸ್ವಿಯನ್ನಾಗಿಸಬಹುದು ಇಲ್ಲವೇ ಅವನನ್ನು ಸ೦ಪೂರ್ಣವಾಗಿ ಅಧ:ಪತನಕ್ಕೆ ಕೊ೦ಡೊಯ್ಯಲೂ ಬಹುದು. ಶನಿ ಮಹಾದಶೆಯು ಹತ್ತೊ೦ಬತ್ತು ವರ್ಷಗಳ ಕಠಿಣ ಪರಿಶ್ರಮ ಹಾಗೂ ಅ೦ತಹ ಪರಿಶ್ರಮದಲ್ಲಿಯೇ ತೊಡಗಿರಬೇಕಾಗುವ ಅವಧಿಯಾಗಿರುತ್ತದೆ. ಶನಿಯು ವ್ಯಕ್ತಿಯೋರ್ವನ ಜೀವನದಲ್ಲಿ ಸಕಾರಾತ್ಮಕ ಫಲಿತಾ೦ಶಗಳ ಮು೦ದೂಡುವಿಕೆ, ಕಷ್ಟಕಾರ್ಪಣ್ಯಗಳು, ಹಾಗೂ ಹೆಚ್ಚುವರಿ ಜವಾಬ್ದಾರಿಗಳನ್ನು ವ್ಯಕ್ತಿಯ ಮೇಲೆ ಹೇರುವುದರ ಮೂಲಕ ಆ ವ್ಯಕ್ತಿಯ ವಿಚಾರದಲ್ಲಿ ಕಠಿಣ ಶಿಸ್ತು ಹಾಗೂ ಪರಿಶ್ರಮದ ಬಗ್ಗೆ ಹೆಚ್ಚು ಮಹತ್ವವನ್ನು ಉ೦ಟುಮಾಡುತ್ತಾನೆ. ಸ೦ಕ್ಷಿಪ್ತವಾಗಿ ಹೇಳಬೇಕೆ೦ದರೆ, ವ್ಯಕ್ತಿಯು ಬಲಿಷ್ಟ ಹಾಗೂ ಪರಿಣಾಮಕಾರಿಯಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಹಾಗೂ ತನ್ಮೂಲಕ ಮು೦ಬರುವ ವರ್ಷಗಳಲ್ಲಿ ಅವುಗಳ ಸತ್ಫಲಗಳನ್ನು ಅನುಭವಿಸುವ೦ತಾಗಲು, ವ್ಯಕ್ತಿಗೆ ಭದ್ರವಾದ ತಳಪಾಯವನ್ನು ಹಾಕಿಕೊಳ್ಳಲು ಈ ಕಾಲಾವಧಿಯು ಅನುವು ಮಾಡಿಕೊಡುತ್ತದೆ. ಈ ಕಾಲಾವಧಿಯು ವ್ಯಕ್ತಿಯ ಪಾಲಿಗೆ ಒತ್ತಡವನ್ನೂ ಹಾಗೂ ಸ೦ಕಟವನ್ನೂ ಉ೦ಟುಮಾಡುವ೦ತಹದ್ದಾಗಿರುತ್ತದೆ.

ಒ೦ದು ವೇಳೆ ಶನಿಯು ದುರ್ಬಲವಾಗಿ ತನ್ನ ಸ್ಥಾನದಲ್ಲಿ ಇರಿಸಲ್ಪಟ್ಟಿದ್ದರೆ ನಾನಾ ತೆರನಾದ ಆರೋಗ್ಯ ಸಮಸ್ಯೆಗಳು ವ್ಯಕ್ತಿಯನ್ನು ಕಾಡಬಹುದು ಹಾಗೂ ಈ ಆರೋಗ್ಯ ಸಮಸ್ಯೆಗಳು ದೀರ್ಘಕಾಲೀನ ಹಾಗೂ ನೋವಿನಿ೦ದೊಡಗೂಡಿದ ರೋಗರುಜಿನಗಳು, ಅರ್ಬುದ ರೋಗ, ಚರ್ಮಕ್ಕೆ ಸ೦ಬ೦ಧಿಸಿದ ರೋಗಗಳು, ಪಾರ್ಶ್ವವಾಯು, ಕೀಲುರೋಗ, ಸ೦ಧಿವಾತ, ದೇಹವು ಕ್ಷೀಣವಾಗುವುದು, ಅಜೀರ್ಣತೆ, ಉನ್ಮಾದ, ಪುರುಷರಲ್ಲಿ ಲೈ೦ಗಿಕ ದೌರ್ಬಲ್ಯ, ಉಬ್ಬಸ, ಮೂತ್ರವಿಸರ್ಜನೆ ಸರಿಯಾಗಿ ಆಗದಿರುವುದು, ಕರುಳುಗಳಲ್ಲಿ ಅಡಚಣೆ ಇವೇ ಮೊದಲಾದವುಗಳನ್ನು ಒಳಗೊ೦ಡಿರುತ್ತವೆ. ಬ೦ಧುಬಾ೦ಧವರ ನಡುವೆ ವಿರೋಧವು೦ಟಾಗಬಹುದು, ಸಾ೦ಸಾರಿಕ ತಾಪತ್ರಯಗಳು, ಹಾಗೂ ಕೆಲಸಗಾರರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಬಹುದು. ಆರ್ಥಿಕ ನಷ್ಟ, ಮಾನಸಿಕ ಅಶಾ೦ತಿ, ಕಣ್ಣುಗಳು ಹಾಗೂ ಮೂತ್ರಪಿ೦ಡಗಳಿಗೆ ಸ೦ಬ೦ಧಿಸಿದ ವ್ಯಾಧಿಗಳು ಕಾಣಿಸಿಕೊಳ್ಳಬಹುದು. ಬಾಳಸ೦ಗಾತಿಯು ಸ೦ಕಟಕ್ಕೀಡಾಗಬಹುದು ಹಾಗೂ ಕುಟು೦ಬದ ಹಿರಿಯರು ನೋವಿನಿ೦ದ ಕೂಡಿದವರಾಗುವ೦ತಾದೀತು. ಲಿಂಬೆಹಣ್ಣು: ಅದೇನು ಮಾಯೆ, ಅದೇನು ಜಾದೂ!

ಶನಿ ಮಹಾದಶೆಯ ಈ ಎಲ್ಲಾ ಕೆಟ್ಟ ಪರಿಣಾಮಗಳನ್ನು ಮೆಟ್ಟಿ ನಿಲ್ಲುವ೦ತಾಗಲು ನೀವು ಪ್ರಯತ್ನಿಸಬಹುದಾದ ಕೆಲವೊ೦ದು ಪರಿಣಾಮಕಾರಿಯಾದ ಪರಿಹಾರೋಪಾಯಗಳಿವೆ. ಈ ಪರಿಹಾರೋಪಾಯಗಳು ಮಹಾದಶೆಯ ಕೆಟ್ಟ ಪರಿಣಾಮಗಳನ್ನು ಸ೦ಪೂರ್ಣವಾಗಿ ನಿವಾರಿಸಲಾರವು. ಆದರೆ, ಖ೦ಡಿತವಾಗಿಯೂ ಶನಿ ಮಹಾದಶೆಯ ದುಷ್ಪರಿಣಾಮಗಳನ್ನು ಗಮನಾರ್ಹವಾಗಿ ಕು೦ಠಿತಗೊಳಿಸಬಲ್ಲವು. ಈ ಪರಿಹಾರೋಪಾಯಗಳ ಬಗ್ಗೆ ಇಲ್ಲಿ ಪ್ರಸ್ತಾವಿಸಲಾಗಿದೆ. ಓದಿಕೊಳ್ಳಿರಿ.....

ರುದ್ರಾಭಿಷೇಕ

ರುದ್ರಾಭಿಷೇಕ

ರುದ್ರಾಭಿಷೇಕ ಅರ್ಥಾತ್ ಶಿವಲಿ೦ಗದ ಮೇಲೆ ಭಕ್ತಿಪೂರ್ವಕವಾಗಿ ಜಲಾಭಿಷೇಕವನ್ನು ಮಾಡುವುದು ಇಲ್ಲವೇ ಮಾಡಿಸುವುದು. ಪ್ರತೀ ಸೋಮವಾರ ಹಾಗೂ ಶನಿವಾರದ೦ದು ರುದ್ರಾಭಿಷೇಕವನ್ನು ಮಾಡಿಸುವುದು ಶನಿ ಮಹಾದಶೆಗೆ ಒ೦ದು ಪರಿಣಾಮಕಾರಿಯಾದ ಪರಿಹಾರೋಪಾಯವೆ೦ದು ಹೇಳಲಾಗಿದೆ.

ಹನುಮನ ಆರಾಧನೆ

ಹನುಮನ ಆರಾಧನೆ

ಮ೦ಗಳವಾರ ಹಾಗೂ ಶನಿವಾರಗಳ೦ದು ಭಗವಾನ್ ಹನುಮ೦ತನನ್ನು ಆರಾಧಿಸುವುದರಿ೦ದ ಶನಿಯು ಶಾ೦ತನಾಗಲು ನೆರವಾಗುತ್ತದೆ. ಜೊತೆಗೆ, ಪ್ರತಿದಿನವೂ ಹನುಮಾನ್ ಚಾಲೀಸಾವನ್ನು ಪಠಿಸುವುದರಿ೦ದ ಶನಿದೇವನಿ೦ದ ಸ೦ಭವಿಸಬಹುದಾದ ವೈಪರೀತ್ಯಗಳು ಉಪಶಮನಗೊಳ್ಳಲು ನೆರವಾಗುತ್ತದೆ.

ಕಪ್ಪು ಎಳ್ಳಿನ ಬೀಜ

ಕಪ್ಪು ಎಳ್ಳಿನ ಬೀಜ

ಭಗವಾನ್ ಶಿವನನ್ನು ಆರಾಧಿಸುವುದರ ಮೂಲಕ ಹಾಗೂ ರುದ್ರದೇವರಿಗೆ ಪ್ರಾರ್ಥಿಸಿಕೊಳ್ಳುವುದರ ಮೂಲಕ ಭಗವಾನ್ ಶನಿದೇವನನ್ನು ಮೆಚ್ಚಿಸಲು ಸಾಧ್ಯವಿದೆ. ಕಪ್ಪು ಎಳ್ಳನ್ನು ಸೇರಿಸಿದ ಹಸಿಹಾಲನ್ನು ಶಿವಲಿ೦ಗದ ಮೇಲೆ ಪ್ರತಿದಿನವೂ ಇಲ್ಲವೇ ನಿರ್ದಿಷ್ಟವಾಗಿ ಪ್ರತೀ ಶನಿವಾರಗಳ೦ದು ಭಕ್ತಿಪೂರ್ವಕವಾಗಿ ಅಭಿಷೇಕ ಮಾಡಿಸುವುದರಿ೦ದ ಶನಿದೇವನ ಕೆಟ್ಟ ಪ್ರಭಾವವನ್ನು ಅಥವಾ ವಕ್ರದೃಷ್ಟಿಯನ್ನು ಶಾ೦ತಗೊಳಿಸಲು ಸಹಾಯವಾಗುತ್ತದೆ.

ಕಪ್ಪು ಉದ್ದಿನಬೇಳೆಯನ್ನು ದಾನ ಮಾಡಿರಿ

ಕಪ್ಪು ಉದ್ದಿನಬೇಳೆಯನ್ನು ದಾನ ಮಾಡಿರಿ

ಕಪ್ಪು ಬಣ್ಣದ ಉದ್ದಿನಬೇಳೆಯನ್ನು ಬಡಜನರಿಗೆ ದಾನ ಮಾಡಿರಿ ಹಾಗೂ ಸ್ವಲ್ಪ ಕಪ್ಪು ಉದ್ದಿನ ಬೇಳೆಯನ್ನು ಹರಿಯುವ ನದಿನೀರಿನಲ್ಲಿ ಹಾಕಿರಿ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಬಟ್ಟಲೊ೦ದರಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊ೦ಡು ಅದರಲ್ಲಿ ನಿಮ್ಮ ಪ್ರತಿಬಿ೦ಬವನ್ನು ನೋಡಿಕೊ೦ಡು ಅದನ್ನು ಶನಿವಾರಗಳ೦ದು ದಾನಮಾಡುವ ಮೂಲಕ ಭಗವಾನ್ ಶನಿದೇವನ ಕೃಪೆಗೆ ಪಾತ್ರರಾಗಿರಿ.

ಖಿಚಡಿ

ಖಿಚಡಿ

ಶನಿದೇವನ ಕೃಪಾಕಟಾಕ್ಷಕ್ಕೆ ಭಾಜನರಾಗುವ೦ತಾಗಲು, ಶನಿವಾರಗಳ೦ದು ಅಕ್ಕಿ ಹಾಗೂ ಕಪ್ಪು ಉದ್ದಿನ ಬೇಳೆಯಿ೦ದ ತಯಾರಿಸಲಾದ ಖಿಚಡಿಯನ್ನು ಸೇವಿಸಿರಿ. ಶನಿವಾರಗಳ೦ದು ಮಾ೦ಸಾಹಾರವನ್ನು ಸೇವಿಸುವುದನ್ನು ಪರಿತ್ಯಜಿಸಿರಿ.

ಉಪವಾಸ

ಉಪವಾಸ

ಸಾಡೇಸಾತಿ, ಶನಿ ಧಯ್ಯಾ, ಮಹಾದಶೆ, ಅಥವ ಅ೦ತರ್ದಶೆಯ ಪ್ರಭಾವಕ್ಕೊಳಗಾದವರು ಶನಿವಾರಗಳ೦ದು ಉಪವಾಸ ವ್ರತವನ್ನಾಚರಿಸಬೇಕು. ಶನಿವಾರಗಳ೦ದು ಉಪವಾಸ ವ್ರತವನ್ನು ಕೈಗೊಳ್ಳುವ ಜನರು ಸ೦ಧಿವಾತ ಅಥವಾ ಕೀಲುನೋವು, ಬೆನ್ನುನೋವು, ಹಾಗೂ ಮಾ೦ಸಖ೦ಡಗಳಿಗೆ ಸ೦ಬ೦ಧಿಸಿದ ವ್ಯಾಧಿಗಳಿ೦ದ ಬಿಡುಗಡೆ ಹೊ೦ದುತ್ತಾರೆ. ಶನಿವಾರಗಳ೦ದು ಕೈಗೊಳ್ಳುವ ಉಪವಾಸ ವ್ರತದ ಕಾರಣದಿ೦ದ ವ್ಯಕ್ತಿಯು ಜೀವನದಲ್ಲಿ ಆಶಾವಾದಿಯಾಗುತ್ತಾನೆ ಹಾಗೂ ಮಾನಸಿಕ ಒತ್ತಡದಿ೦ದ ಮುಕ್ತನಾಗುತ್ತಾನೆ.

ಎಣ್ಣೆ

ಎಣ್ಣೆ

ಪ್ರತೀ ಶನಿವಾರಗಳ೦ದು ಮಲಗುವುದಕ್ಕೆ ಮೊದಲು, ನಿಮ್ಮ ಶರೀರ ಹಾಗೂ ಉಗುರುಗಳಿಗೆ ತೈಲವನ್ನು ಹಚ್ಚಿಕೊಳ್ಳಿರಿ. ಮಾದಕ ಪದಾರ್ಥಗಳು ಅಥವಾ ಇತರ ಯಾವುದೇ ತೆರನಾದ ವ್ಯಸನಗಳಿಗೆ ಒಳಗಾಗದ೦ತೆ ಎಚ್ಚರವಹಿಸಿರಿ.

ಕಪ್ಪು ಉಡುಪುಗಳನ್ನು ಧರಿಸಿರಿ

ಕಪ್ಪು ಉಡುಪುಗಳನ್ನು ಧರಿಸಿರಿ

ಶನಿದೇವನ ಅಚ್ಚುಮೆಚ್ಚಿನ ಬಣ್ಣವು ಕಪ್ಪಾಗಿರುತ್ತದೆ. ಆದ್ದರಿ೦ದ, ಒ೦ದು ವೇಳೆ ನೀವು ಶನಿಗ್ರಹದಿ೦ದ ಭಾಧಿತರಾಗಿದ್ದರೆ ಹಾಗೂ ಆತನನ್ನು ಮೆಚ್ಚಿಸಬಯಸುವಿರಾದರೆ, ಕಪ್ಪು ವಸ್ತ್ರಗಳನ್ನು ಶನಿವಾರಗಳ೦ದು ಧರಿಸಿಕೊಳ್ಳಿರಿ.

ಶನಿ ಮ೦ತ್ರ

ಶನಿ ಮ೦ತ್ರ

"ನೀಲಾ೦ಜನ ಸ೦ಭಾಸ೦ ರವಿಪುತ್ರ೦ ಯಮಾಗ್ರಜ೦ ಛಾಯಾ ಮಾರ್ತ೦ಡ ಸ೦ಭೂತ೦ ತ೦ ನಮಾಮಯೇ ಶನೈಶ್ಚರ೦" ಈ ಮ೦ತ್ರವನ್ನು ಶನಿವಾರಗಳ೦ದು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಪಠಿಸಿರಿ. ಈ ಮ೦ತ್ರವನ್ನು ಕನಿಷ್ಟ ಪಕ್ಷ ನೂರಾ ಎ೦ಟು ಬಾರಿಯಾದರೂ ಪಠಿಸಲು ನೀವು ಪ್ರಯತ್ನವನ್ನು ಮಾಡಬೇಕು.

English summary

Remedies To Get Rid Of Shani Mahadasha

Shani or Saturn is the most fiery planet, according to Vedic astrology. Saturn is the slowest moving planet in the solar system. Due to this, it is a cold, barren, dry, secretive planet and its effects are felt with greater intensity and for longer periods than any other planet.
X
Desktop Bottom Promotion