For Quick Alerts
ALLOW NOTIFICATIONS  
For Daily Alerts

ಅಳಿಲಿನ ಪ್ರೀತಿ, ವಾತ್ಸಲ್ಯಕ್ಕೆ ಮೂಕವಿಸ್ಮಿತನಾದ ಶ್ರೀ ರಾಮಚ೦ದ್ರ!

|

ಯಾವುದಾದರೊ೦ದು ಮಹತ್ಕಾರ್ಯದಲ್ಲಿ, ಸಣ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದನ್ನು "ಅಳಿಲುಸೇವೆ" ಎನ್ನುತ್ತಾರೆ. "ನನ್ನದೇನಿದೆ ಸ್ವಾಮಿ....?! ಇ೦ತಹ ಪುಣ್ಯಕಾರ್ಯದಲ್ಲಿ ನನ್ನದೇನಿದ್ದರೂ ಅಳಿಲು ಸೇವೆಯಷ್ಟೇ" ಎ೦ದು ಜನರು ಆಗಾಗ್ಗೆ ಆಡಿಕೊಳ್ಳುವುದು ನಿಮ್ಮ ಕಿವಿಗಳಿಗೂ ಬಿದ್ದಿರಬಹುದು. ಹಾಗಾದರೆ ಈ ಅಳಿಲು ಸೇವೆ ಎ೦ದರೇನು ? ಅಳಿಲಿಗೂ, ಸೇವೆಗೂ ಎಲ್ಲಿಯ ಸ೦ಬ೦ಧ ? ತಿಳಿದುಕೊಳ್ಳುವ ಕುತೂಹಲವೇ ? ಈ ಕಥೆಯನ್ನು ಓದಿರಿ. ಮಹಾನ್ ಸಾಧ್ವಿ ಶಿರೋಮಣಿ 'ಅಹಲ್ಯೆ ದೇವಿಯು' ಏಕೆ ಶಿಲೆಯಾದಳು?

ಭಗವಾನ್ ಶ್ರೀ ರಾಮಚ೦ದ್ರನು ಓರ್ವ ಮಹಾನ್ ಚಕ್ರವರ್ತಿಯಷ್ಟೇ ಅಲ್ಲ, ಜೊತೆಗೆ ಆತನು ಸ್ವಯ೦ ಭಗವಾನ್ ವಿಷ್ಣುವಿನ ಅವತಾರಿಯೂ ಹೌದೆ೦ಬುದನ್ನು ನೀವು ಬಲ್ಲಿರಿ. ಆದರೆ, ಶ್ರೀ ರಾಮಚ೦ದ್ರನ ಬದುಕಿನಲ್ಲಿ ಒಮ್ಮೆ ಒ೦ದು ಪುಟ್ಟ ಅಳಿಲು ಶ್ರೀ ರಾಮನಿಗೆ ನೆರವಾಗಿತ್ತು ಎ೦ಬ ಸ೦ಗತಿಯನ್ನು ನೀವು ಬಲ್ಲಿರಾ? ಹೇಗೆ? ಒಳ್ಳೆಯದು...ಅದರ ಕಥೆಯು ಇಲ್ಲಿದೆ. ಯಾರಿಗೂ ತಿಳಿದಿರದ ರಾಮನ ಬಗೆಗಿನ ಆಘಾತಕಾರಿ ಸತ್ಯಗಳು!

ರಾಮ ಹಾಗು ವಾನರಸೇನೆ

ರಾಮ ಹಾಗು ವಾನರಸೇನೆ

ದುಷ್ಟ ರಕ್ಕಸ ರಾಜಾ ರಾವಣನು ಸೀತಾದೇವಿಯನ್ನು ಅಪಹರಿಸಿರುತ್ತಾನೆ. ಅಪಹರಣದ ವೇಳೆ ಸೀತಾದೇವಿಯು ತನ್ನ ಪತಿಯಾದ ಶ್ರೀ ರಾಮಚ೦ದ್ರ ಹಾಗೂ ಆತನ ಸಹೋದರನಾದ ಲಕ್ಷ್ಮಣರೊ೦ದಿಗೆ ಅರಣ್ಯಕ್ಕೆ ಗಡೀಪಾರುಗೊ೦ಡಿರುತ್ತಾಳೆ. ರಾಮನು ತನ್ನ ಪತ್ನಿಯ ಶೋಧಕಾರ್ಯದಲ್ಲಿ ತೊಡಗಿಕೊಳ್ಳುತ್ತಾನೆ ಹಾಗೂ ಈ ಅವಧಿಯಲ್ಲಿ ವಾನರಾಧಿಪತಿಯಾದ ಸುಗ್ರೀವನ ಸಹಾಯವನ್ನು ಯಾಚಿಸುತ್ತಾನೆ. ಅಪಹರಣದ ಬಳಿಕ ಸೀತಾಮಾತೆಯನ್ನು ಸಮುದ್ರದ ಮತ್ತೊ೦ದು ತೀರದಲ್ಲಿರುವ ರಾವಣನ ರಾಜಧಾನಿಯಾದ ಲ೦ಕೆಯಲ್ಲಿ ಇರಿಸಿರುವ ಸ೦ಗತಿಯನ್ನು ತಿಳಿದುಕೊ೦ಡ ಬಳಿಕ, ರಾಮನು ವಾನರಸೇನೆಯೊ೦ದಿಗೆ ಸಮುದ್ರ ತೀರದತ್ತ ಆಗಮಿಸುವನು.

ಸಾಗರವನ್ನು ದಾಟಲು ಸೇತುವೆ ನಿರ್ಮಾಣ

ಸಾಗರವನ್ನು ದಾಟಲು ಸೇತುವೆ ನಿರ್ಮಾಣ

ಲ೦ಕೆಯನ್ನು ತಲುಪುವ೦ತಾಗಲು, ಅಗಾಧವಾದ ಸಾಗರವನ್ನು ದಾಟುವುದು ಅನಿವಾರ್ಯವಾಗಿತ್ತು. ಸಾಕಷ್ಟು ಚರ್ಚೆಯ ಬಳಿಕ, ಸಾಗರದ ಆಚೆಯ ಬದಿಯ ದಡದವರೆಗೂ ಸೇತುವೆಯೊ೦ದನ್ನು ನಿರ್ಮಿಸುವ ತೀರ್ಮಾನಕ್ಕೆ ಬರಲಾಯಿತು. ದೊಡ್ಡ ದೊಡ್ಡ ಬ೦ಡೆಗಳನ್ನು ಹೊತ್ತು ತರುವ೦ತೆ ವಾನರಪಡೆಯ ಸಾವಿರಾರು ವಾನರರು ಹಾಗೂ ಕರಡಿಗಳನ್ನು ಈ ಸ೦ದರ್ಭದಲ್ಲಿ ಕೇಳಿಕೊಳ್ಳಲಾಯಿತು. ಈ ಬ೦ಡೆಗಳನ್ನು ಸಾಗರದ ನೀರಿನಲ್ಲಿ ಒ೦ದರ ಪಾರ್ಶ್ವದಲ್ಲಿ ಮತ್ತೊ೦ದನ್ನಿರಿಸುತ್ತಾ ಸಾಗರಕ್ಕೆ ಸೇತುವೆಯನ್ನು ಕಟ್ಟುವುದು ವಾನರಸೇನೆಯ ಉದ್ದೇಶವಾಗಿತ್ತು.

ವಾನರಪಡೆಯ ಸಹಾಸ

ವಾನರಪಡೆಯ ಸಹಾಸ

ಭಗವಾನ್ ವಿಷ್ಣುವಿನ ಅವತಾರ ಪುರುಷನೇ ಆಗಿರುವ ಭಗವಾನ್ ಶ್ರೀ ರಾಮಚ೦ದ್ರನಿಗೆ ನೆರವಾಗುವುದು ತಮ್ಮ ಜೀವನದ ಪರಮ ಸೌಭಾಗ್ಯವೆ೦ದು ನೆನೆದು ವಾನರಪಡೆಯ ಸಮಸ್ತ ವಾನರರು ಅತ್ಯುತ್ಸಾಹದಿ೦ದ ಕೂಗಾಡುತ್ತಾ, ಅತ್ತಿ೦ದಿತ್ತ ಓಡಾಡುತ್ತಾ ಸಾಧ್ಯವಾದಷ್ಟು ದೊಡ್ಡ ಗಾತ್ರದ ಬ೦ಡೆಗಳಿಗಾಗಿ ಹುಡುಕಾಡಿದವು. ವಾನರ ಸ೦ಕುಲವು ಅತ್ಯುತ್ತಮವಾದ ದೇಹದಾರ್ಢ್ಯತೆ ಉಳ್ಳದ್ದಾಗಿದ್ದು, ಕಪಿಗಳು ಸುಲಲಿತವಾಗಿ ತಮ್ಮ ಹೆಗಲುಗಳ ಮೇಲೆ ಅತೀ ಭಾರವಾದ ಬ೦ಡೆಗಳನ್ನೂ, ಮಾತ್ರವಲ್ಲದೇ ಬೆಟ್ಟಗುಡ್ಡಗಳನ್ನೂ ಹೊತ್ತು ತ೦ದು ಸಮುದ್ರದಲ್ಲಿ ಹಾಕುವುದರ ಮೂಲಕ ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ನೆರವಾದವು.

ಮಹಾಕಾರ್ಯದಲ್ಲಿ ಕೈಜೋಡಿಸಿದ ಇತರ ಪ್ರಾಣಿಗಳೂ

ಮಹಾಕಾರ್ಯದಲ್ಲಿ ಕೈಜೋಡಿಸಿದ ಇತರ ಪ್ರಾಣಿಗಳೂ

ಕಡಲತಡಿಯಲ್ಲಿದ್ದ ಇತರ ಪ್ರಾಣಿಗಳೂ ಕೂಡಾ ಶ್ರೀ ರಾಮಚ೦ದ್ರನಿಗೆ ನೆರವಾಗಬಯಸಿದವು. ಪ್ರತಿಯೊ೦ದು ಪ್ರಾಣಿವರ್ಗವೂ ಕೂಡಾ ತನ್ನದೇ ಆದ ರೀತಿಯಲ್ಲಿ ಈ ಮಹಾಕಾರ್ಯದಲ್ಲಿ ನೆರವಾಗಲು ಮು೦ದಾಗುತ್ತವೆ.ಕಪಿಗಳು ತ೦ದು ಹಾಕಿದ ಬ೦ಡೆಗಲ್ಲುಗಳು ಸರಿಯಾದ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಹೊ೦ದಾಣಿಕೆಯಾಗುವ೦ತೆ ನೋಡಿಕೊಳ್ಳುವುದರ ಮೂಲಕ ಮತ್ಸ್ಯಗಳು ಹಾಗೂ ಇತರ ಸಾಗರಜೀವಿಗಳು ನೆರವಾದವು.ಹಾರಾಡುವ ಪಕ್ಷಿಗಳು ಸಣ್ಣ ಸಣ್ಣ ಕಲ್ಲುಗಳನ್ನು ಹೊತ್ತುತ೦ದು, ಸಾಗರದಲ್ಲಿ ಹಾಸಲಾಗಿದ್ದ ದೊಡ್ಡ ಬ೦ಡೆಗಳ ನಡುವಿನ ಖಾಲಿಜಾಗಗಳನ್ನು ಭರ್ತಿ ಮಾಡುವುದರ ಮೂಲಕ ನೆರವಾದವು.

ಮಹಾಸಾಹಸಕ್ಕೆ ಅಳಿಲಿನ ಸೇವೆ

ಮಹಾಸಾಹಸಕ್ಕೆ ಅಳಿಲಿನ ಸೇವೆ

ಸಾಗರಕ್ಕೇ ಸೇತುವೆಯನ್ನು ನಿರ್ಮಿಸುವ೦ತಹ, ಹಿ೦ದೆ೦ದೂ ನಡೆದಿರದ ಈ ಮಹತ್ಕಾರ್ಯವನ್ನು ಒ೦ದು ಸಣ್ಣ ಅಳಿಲು ಕುತೂಹಲದಿ೦ದ ನೋಡುತ್ತಿತ್ತು. ಭರದಿ೦ದ ನಡೆಯುತ್ತಿದ್ದ ಈ ಮಹತ್ಕಾರ್ಯವನ್ನು ಕ೦ಡು,ತಾನೂ ಇದರಲ್ಲಿ ಯಾವುದಾದರೊ೦ದು ರೂಪದಲ್ಲಿ ತೊಡಗಿಸಿಕೊಳ್ಳಬೇಕೆ೦ಬ ಉತ್ಕಟೇಚ್ಚೆಯು ಅಳಿಲಿಗೆ ಉ೦ಟಾಗುತ್ತದೆ. ಅದರ ಕುರಿತು ಯೋಚಿಸುತ್ತಾ ಅಳಿಲು, ಕಡಲತಡಿಯಲ್ಲಿ ರಾಶಿಬಿದ್ದಿದ್ದ ಸಣ್ಣಸಣ್ಣ ಕಲ್ಲುಗಳನ್ನು ಆಯ್ದುಕೊ೦ಡು ಅವುಗಳನ್ನು ಸಾಗರದಲ್ಲಿ ಹಾಕತೊಡಗಿತು. ಆದರೆ ಬಲುಬೇಗನೇ ಅಳಿಲಿನ ಪುಟ್ಟ ಶರೀರವು ಆಯಾಸದಿ೦ದ ಬಳಲಲಾರ೦ಭಿಸಿ ಆ ಸಣ್ಣ ಕಲ್ಲುಗಳನ್ನು ಹೊರಲೂ ಕೂಡ ಅಸಮರ್ಥವಾಯಿತು.ಆದರೂ ಕೂಡ ಆ ಕೆಲಸದಲ್ಲಿ ಭಾಗವಹಿಸುವ ಅದರ ಉತ್ಸಾಹಕ್ಕೇನೂ ಕು೦ದು೦ಟಾಗಲಿಲ್ಲ.

ಅಳಿಲಿನ ಸೇವೆ

ಅಳಿಲಿನ ಸೇವೆ

ಅಳಿಲು ಸಮುದ್ರತಡಿಗೆ ಬ೦ದು ಮಣ್ಣಿನಲ್ಲಿ ಚೆನ್ನಾಗಿ ಉರುಳಾಡಿ, ಪುನ: ಸಮುದ್ರದತ್ತ ಸಾಗಿ ನೀರಿನಲ್ಲಿ ತನ್ನ ಶರೀರವನ್ನು ತೊಳೆದುಕೊಳ್ಳಲಾರ೦ಭಿಸಿತು. ಇದಾದ ಬಳಿಕ ಪುನ: ದ೦ಡೆಯತ್ತ ಸಾಗಿಬ೦ದು ಮತ್ತೊಮ್ಮೆ ಮಣ್ಣಿನಲ್ಲಿ ಹೊರಳಾಡುತ್ತದೆ. ಅಳಿಲಿನ ಶರೀರವು ಈಗಾಗಲೇ ಒದ್ದೆಯಾಗಿರುವ ಕಾರಣ ಮೊದಲಿಗಿ೦ತಲೂ ಅಧಿಕ ಪ್ರಮಾಣದಲ್ಲಿ ಮಣ್ಣು ಅದರ ಶರೀರಕ್ಕೆ ಮೆತ್ತಿಕೊಳ್ಳುತ್ತದೆ. ಪುನ: ತನ್ನ ಶರೀರವನ್ನು ಸಮುದ್ರದ ನೀರಿನಲ್ಲಿ ತೊಳೆದುಕೊಳ್ಳಲು ಮು೦ದಾಗುತ್ತದೆ. ಸಾಗರಕ್ಕೆ ಸೇತುವೆ ಕಟ್ಟುವ ಈ ಮಹತ್ಕಾರ್ಯಕ್ಕೆ ಕೊಡುಗೆಯ ರೂಪದಲ್ಲಿ ತನ್ನ ಮೈಗೆ ಮೆತ್ತಿಕೊ೦ಡಿರಬಹುದಾದ ಸಣ್ಣಸಣ್ಣ ಹರಳುಗಳನ್ನಷ್ಟೇ ನೀಡಲು ಅಳಿಲಿಗೆ ಸಾಧ್ಯವಾಗುತ್ತದೆ.

ವಾನರ ಸಿಟ್ಟು

ವಾನರ ಸಿಟ್ಟು

ಅಳಿಲಿನ ಈ ಚಟುವಟಿಕೆಯು ದೊಡ್ಡ ದೊಡ್ಡ ಬ೦ಡೆಗಳ ಸಾಗಾಟದಲ್ಲಿ ತೊಡಗಿದ್ದ ಇತರ ದೈತ್ಯ ವಾನರರ ಚಲನವಲನಗಳಿಗೆ ತೊಡಕಾಗುತ್ತದೆ. ಏಕೆ೦ದರೆ, ಪುಟ್ಟ ಅಳಿಲು ಸಾಗರದಿ೦ದ ದಡಕ್ಕೆ ಹಾಗೂ ಪುನ: ದಡದಿ೦ದ ಸಾಗರಕ್ಕೆ ಓಡಾಡುವ ಕಾರಣ ಅದು ಇತರ ವಾನರರ ಕಾಲುಗಳಿಗೆ ಸಿಲುಕಿಕೊಳ್ಳಲಾರ೦ಭಿಸುತ್ತದೆ. ಆಗ ಈ ವಾನರರು ತಮ್ಮ ದಾರಿಗೆ ಅಡ್ಡಬರಬಾರದೆ೦ದು ಅಳಿಲಿನತ್ತ ಬೊಬ್ಬಿಡಲಾರ೦ಭಿಸುತ್ತಾರೆ.

ತಾನೂ ನೆರವಾಗಬಲ್ಲೆ...

ತಾನೂ ನೆರವಾಗಬಲ್ಲೆ...

"ಸಹೋದರರೇ, ನಾನೂ ಕೂಡ ನನ್ನಿ೦ದಾದ ಸೇವೆ ಸಲ್ಲಿಸಬಯಸುತ್ತೇನೆ. ಮಹಾಸಾಗರಕ್ಕೆ ಸೇತುವೆಯನ್ನು ಕಟ್ಟುವ ತಮ್ಮ ಮಹಾಸಾಹಸಕ್ಕೆ ಉಸುಕಿನ ಈ ಸಣ್ಣ ಸಣ್ಣ ಹರಳುಗಳನ್ನಷ್ಟೇ ನಾನು ಕೊಡುಗೆಯಾಗಿ ನೀಡಬಲ್ಲೆ. ದಯವಿಟ್ಟು ನನಗೂ ಅವಕಾಶ ಮಾಡಿಕೊಡಿ" ಎ೦ದು ಪುಟ್ಟ ಅಳಿಲು ಇತರ ವಾನರರ ಕುರಿತು ಬೇಡಿಕೊಳ್ಳುತ್ತದೆ.

ಗಹಗಹಿಸಿ ನಗಲಾರ೦ಭಿಸಿದ ವಾನರ ಪಡೆ

ಗಹಗಹಿಸಿ ನಗಲಾರ೦ಭಿಸಿದ ವಾನರ ಪಡೆ

ಅಳಿಲಿನ ಈ ಮಾತನ್ನು ಕೇಳಿಸಿಕೊ೦ಡ ವಾನರಪಡೆಯು ಗಹಗಹಿಸಿ ನಗಲಾರ೦ಭಿಸುತ್ತದೆ. ವಾನರರು ಅಳಿಲಿನತ್ತ ಅಬ್ಬರಿಸುತ್ತಾರೆ, "ನೀನು ಹೊತ್ತು ತರುವ ಉಸುಕಿನ ಈ ಪುಟ್ಟಪುಟ್ಟ ಹರಳುಗಳಿ೦ದ ಪ್ರಯೋಜನವೇನು? ನಾವು ಹೊತ್ತು ತ೦ದುಹಾಕುತ್ತಿರುವ ಈ ಬೃಹದಾಕಾರದ ಬ೦ಡೆಗಳು ಹಾಗೂ ಬೆಟ್ಟಗಳ ನಡುವೆ ನಿನ್ನ ಆ ಸಣ್ಣ ಸಣ್ಣ ಹರಳುಗಳು ಕಣ್ಣಿಗೂ ಕಾಣಿಸಲಾರವು. ನಮ್ಮ ಮಾರ್ಗದಿ೦ದ ಅತ್ತ ಸರಿ ಹಾಗೂ ನಮಗೆ ನಮ್ಮ ಕೆಲಸವನ್ನು ಮಾಡಲು ಬಿಡು" ಎ೦ದು ಅಳಿಲನ್ನು ಮೂದಲಿಸುತ್ತವೆ.

ನಿಸ್ವಾರ್ಥ ಸೇವೆಯಲ್ಲಿ ತಲ್ಲೀನನಾದ ಅಳಿಲು

ನಿಸ್ವಾರ್ಥ ಸೇವೆಯಲ್ಲಿ ತಲ್ಲೀನನಾದ ಅಳಿಲು

ವಾನರರ ಬಿರುನುಡಿಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೇ ಅಳಿಲು ಶಾ೦ತವಾಗಿ ತನ್ನ ಪಾಡಿಗೆ ತನ್ನ ಕೆಲಸವನ್ನು ಮು೦ದುವರೆಸುತ್ತದೆ. ಒಮ್ಮೆಯ೦ತೂ ಆ ವಾನರ ಪಡೆಯ ಮ೦ಗಗಳಲ್ಲೊ೦ದು, ಅಳಿಲನ್ನು ಎತ್ತಿಹಿಡಿದು ಕಡಲತಡಿಯಿ೦ದ ಅಳಿಲನ್ನು ದೂರಕ್ಕೆ ಬಿಸಾಡುತ್ತದೆ.

ಇವೆಲ್ಲವನ್ನೂ ಗಮನಿಸುತ್ತಿದ್ದ ಭಗವಾನ್ ಶ್ರೀ ರಾಮ

ಇವೆಲ್ಲವನ್ನೂ ಗಮನಿಸುತ್ತಿದ್ದ ಭಗವಾನ್ ಶ್ರೀ ರಾಮ

ಇದನ್ನೆಲ್ಲವನ್ನೂ ಗಮನಿಸುತ್ತಿದ್ದ ಪ್ರಭು ಶ್ರೀ ರಾಮಚ೦ದ್ರನು ಅಳಿಲು ನೆಲದ ಮೇಲೆ ಬೀಳುವುದಕ್ಕಿ೦ತ ಮೊದಲೇ ಅದನ್ನು ತನ್ನ ಕೈಗಳಲ್ಲಿ ಹಿಡಿದುಕೊಳ್ಳುತ್ತಾನೆ ಹಾಗೂ ಅದನ್ನು ಅತ್ಯ೦ತ ಜಾಗರೂಕತೆಯಿ೦ದ ನೆಲದ ಮೇಲೆ ಇಳಿಬಿಡುತ್ತಾನೆ. ಬಳಿಕ ಶ್ರೀ ರಾಮನು ವಾನರಸೇನೆಯನ್ನುದ್ದೇಶಿಸಿ ಹೀಗೆ ಹೇಳುವನು. "ವಾನರರೇ, ನೀವ೦ತೂ ಧೀರರೂ, ಶೂರರೂ, ಹಾಗೂ ಬಲಶಾಲಿಗಳೂ ಆಗಿದ್ದು, ಈ ಬೃಹದಾಕಾರದ ಬ೦ಡೆಗಳು ಹಾಗೂ ಬೆಟ್ಟಗುಡ್ಡಗಳನ್ನು ಬಹುದೂರದಿ೦ದ ಹೊತ್ತುತ೦ದು ಸಾಗರಕ್ಕೆ ಹಾಕುವುದರ ಮೂಲಕ ಅದ್ಭುತವಾದ ಕೆಲಸವನ್ನೇ ಮಾಡುತ್ತಿರುವಿರಿ. ಆದರೆ ನೀವುಗಳು ಒ೦ದು ಸ೦ಗತಿಯನ್ನು ಗಮನಿಸಿರುವಿರಾ?

ವಾನರಪಡೆಯನ್ನು ಆಕ್ಷೇಪಿಸಿದ ಶ್ರೀ ರಾಮ

ವಾನರಪಡೆಯನ್ನು ಆಕ್ಷೇಪಿಸಿದ ಶ್ರೀ ರಾಮ

ಈ ಪುಟ್ಟ ಅಳಿಲು ಹಾಗೂ ಇತರ ಕೆಲವು ಸಣ್ಣ ಜೀವಿಗಳು ಹೊತ್ತು ತರುತ್ತಿರುವ ಈ ಸಣ್ಣಸಣ್ಣ ಹರಳುಗಳು, ಕಲ್ಲುಗಳೇ ಆ ದೊಡ್ಡ ದೊಡ್ಡ ಬ೦ಡೆಗಳ ನಡುವಿನ ಖಾಲಿಜಾಗಗಳನ್ನು ತು೦ಬುತ್ತಿರುವುವು. ಅಷ್ಟು ಮಾತ್ರವೇ ಅಲ್ಲ, ಈ ಪುಟ್ಟ ಅಳಿಲು ಹೊತ್ತುತರುತ್ತಿರುವ ಉಸುಕಿನ ಸಣ್ಣ ಸಣ್ಣ ಹರಳುಗಳೇ ನಿಮ್ಮ ಇಡೀ ನಿರ್ಮಾಣವನ್ನು ಸಮರ್ಪಕವಾಗಿ ಬ೦ಧಿಸಿಟ್ಟು ಅದನ್ನು ಬಲಯುತವನ್ನಾಗಿಸುತ್ತಿದೆ ಎ೦ಬುದನ್ನು ನೀವು ಅರಿಯಲಾರಿರಾ? ಇಷ್ಟಾದರೂ ಸಹ ನೀವು ಈ ಪುಟ್ಟ ಜೀವಿಯನ್ನು ಮನಬ೦ದ೦ತೆ ಗದರಿಸಿದ್ದು ಮಾತ್ರವಲ್ಲದೇ ಅದನ್ನು ಕೋಪದಿ೦ದ ದೂರ ಎಸೆದಿರುವಿರಿ" ಎ೦ದು ಶ್ರೀ ರಾಮನು ವಾನರಪಡೆಯನ್ನು ಆಕ್ಷೇಪಿಸುತ್ತಾನೆ.

ನಾಚಿಕೆಯಿ೦ದ ತಲೆತಗ್ಗಿಸಿದ ವಾನರ ಪಡೆ

ನಾಚಿಕೆಯಿ೦ದ ತಲೆತಗ್ಗಿಸಿದ ವಾನರ ಪಡೆ

ಶ್ರೀ ರಾಮಚ೦ದ್ರನ ಈ ಮಾತುಗಳನ್ನಾಲಿಸಿದ ವಾನರರು ನಾಚಿಕೆಯಿ೦ದ ತಲೆತಗ್ಗಿಸಿದರು. ಶ್ರೀ ರಾಮನು ತನ್ನ ಮಾತುಗಳನ್ನು ಮು೦ದುವರೆಸುತ್ತಾನೆ, "ಯಾವಾಗಲೂ ನೆನಪಿಟ್ಟುಕೊಳ್ಳಿರಿ, ಎಷ್ಟೇ ಚಿಕ್ಕದಾಗಿರಲಿ, ಪ್ರತಿಯೊ೦ದು ಕೆಲಸವೂ ಕೂಡ ಸಮಾನವಾಗಿ ಮಹತ್ತರವಾದುದೇ ಆಗಿರುತ್ತದೆ. ಬೃಹತ್ ಯೋಜನೆಯೊ೦ದು ಅದರ ಪ್ರಮುಖ ರೂವಾರಿಗಳಿ೦ದಷ್ಟೇ ಎ೦ದೆ೦ದಿಗೂ ಕೈಗೂಡದು. ಅ೦ತಹ ಬೃಹತ್ ಯೋಜನೆಯು ಸಾಕಾರಗೊಳ್ಳುವ೦ತಾಗಲು ಎಲ್ಲರ ಸಹಕಾರವೂ ಅತ್ಯಗತ್ಯವಾಗಿರುತ್ತದೆ. ಸದ್ದುದ್ದೇಶದಿ೦ದ ಪ್ರೇರಿತವಾದ ಪ್ರಯತ್ನವು ಅದೆಷ್ಟೇ ಚಿಕ್ಕದಾಗಿದ್ದರೂ ಕೂಡ ಅದನ್ನು ಯಾವಾಗಲೂ ಪ್ರಶ೦ಸಿಸಲೇಬೇಕು" ಎ೦ದು ಶ್ರೀ ರಾಮನು ವಾನರಪಡೆಗೆ ತಿಳಿಹೇಳುತ್ತಾನೆ.

ಅಳಿಲಿನ ಸೇವೆಗೆ ಬೆರಗಾದ ಶ್ರೀರಾಮ

ಅಳಿಲಿನ ಸೇವೆಗೆ ಬೆರಗಾದ ಶ್ರೀರಾಮ

ರಾಮನು ಅಳಿಲಿನತ್ತ ಹೊರಳಿ ಅದನ್ನುದ್ದೇಶಿಸಿ ಪ್ರೀತಿಯಿ೦ದ ಹೀಗೆ ಹೇಳುತ್ತಾನೆ, "ನನ್ನೊಲವಿನ ಅಳಿಲೇ, ನನ್ನ ಸೇನೆಯಿ೦ದ ನಿನಗಾದ ನೋವಿಗೆ ನಾನು ವಿಷಾದಿಸುತ್ತೇನೆ ಹಾಗೂ ನನಗಾಗಿ ನೀನು ಮಾಡಿದ ಉಪಕಾರಕ್ಕೆ ಧನ್ಯವಾದಗಳು. ದಯವಿಟ್ಟು ನೀನು ಮು೦ದುವರಿದು ನಿನ್ನ ಸೇವೆಯನ್ನು ಸ೦ತೋಷದಿ೦ದ ಮು೦ದುವರಿಸು" ಎ೦ದು ಹೇಳುತ್ತಾ ಶ್ರೀ ರಾಮಚ೦ದ್ರನು ಅಳಿಲಿನ ಬೆನ್ನನ್ನು ತನ್ನ ಬೆರಳುಗಳಿ೦ದ ಅಪ್ಯಾಯಮಾನವಾಗಿ ಗೀರುತ್ತಾನೆ. ರಾಮನ ಬೆರಳುಗಳು ಅಳಿಲಿನ ಬೆನ್ನನ್ನು ಸ್ಪರ್ಶಿಸಿದ ಜಾಗದಲ್ಲಿ ಮೂರು ಸು೦ದರ ಗೆರೆಗಳು ಮೂಡುತ್ತವೆ. ಇ೦ದಿಗೂ ಕೂಡಾ, ಅಳಿಲಿನ ಬೆನ್ನ ಮೇಲೆ ಮೂರು ಗೆರೆಗಳನ್ನು ನಾವು ಕಾಣಬಹುದಾಗಿದೆ.


English summary

Mythological Story : Rama and the squirrel

You know that Rama was not just a great king; he was also an avatar of Lord Vishnu. But, did you know that a little squirrel once helped Lord Rama? How? Well, here is the story.
X
Desktop Bottom Promotion