For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿ 2021: ಕೃಷ್ಣನಿಂದ ಸಂಹಾರವಾದ ರಾಕ್ಷಸರು ಇವರೇ ನೋಡಿ

|

ನಮಗೆ ಧರ್ಮ, ಜೀವನದ ಬಗ್ಗೆ ಅತ್ಯಂತ ಮಹತ್ವದ ಪಾಠ ಹೇಳಿದ ಶ್ರೀಕೃಷ್ಣ, ಬಹುತೇಕರ ಅತ್ಯಂತ ಪ್ರಿಯವಾದ ದೇವರು. ಕೃಷ್ಣ ಮಾನವಕುಲದ ಮೇಲೆ ಮಹತ್ತರವಾದ ಪ್ರಭಾವ ಬೀರಿದ್ದಾನೆ. ಶ್ರೀಕೃಷ್ಣ ಯಾವಾಗಲೂ ಜ್ಞಾನ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿದ್ದಾನೆ.

ಶ್ರೀಕೃಷ್ಣನು ತನ್ನ ಹುಟ್ಟಿದ ಕ್ಷಣದಿಂದ ಬದುಕಿನುದ್ದಕ್ಕೂ ಪ್ರತಿ ಹಂತದಲ್ಲೂ ಸವಾಲುಗಳನ್ನು ಎದುರಿಸುತ್ತಲೇ ಬಂದವನು. ತನ್ನ ದೈವಿಕ ಬಲದಿಂದ ಜೀವನದ ಪ್ರತಿ ಹೆಜ್ಜೆಯಲ್ಲೂ ಕಂಸನಿಂದ ಕಳೆಸಲ್ಪಟ್ಟ ದುಷ್ಟಶಕ್ತಿಗಳು, ರಾಕ್ಷಸರನ್ನು ಹತ್ಯೆಗೈದವ.

ಕಂಸಸಂಹಾರಕ ವಾಸುದೇವನಿಂದ ಹತ್ಯೆಯಾದ ರಾಕ್ಷಸರು ಒಬ್ಬಿಬ್ಬರಲ್ಲ. ನಂದಗೋಪಾಲನಿಂದ ಸಂಹಾರರಾದ ರಾಕ್ಷಸರು ಯರ್ಯಾರು, ಹೇಗೆ ಹತರಾದರು ಮುಂದೆ ನೋಡೋಣ:

ಕಂಸ ಸಂಹಾರ

ಕಂಸ ಸಂಹಾರ

ಮಥುರಾ ನಗರದ ಅತ್ಯಂತ ಕ್ರೂರ ರಾಜ ಕಂಸ, ರಾಕ್ಷಸರು ಹಾಗೂ ಅಧರ್ಮೀಯರನ್ನು ನಾಶಪಡಿಸಲೆಂದೇ ವಿಷ್ಣು ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅವತಾರವೆತ್ತಿದ ಎಂದು ಪುರಾಣ ಹೇಳುತ್ತವೆ. ದ್ವಾಪರಯುಗದಲ್ಲಿ, ಉಗ್ರಸೇನನ ಮಗ ಕಂಸ, ತನ್ನ ತಂಗಿ ದೇವಕಿ ಹಾಗೂ ಆತನ ಪತಿ ವಸುದೇವನನ್ನು ಬಂಧಿಸಿದ್ದ. ಇದಕ್ಕೆ ಕಾರಣ ಸ್ವತಃ ತಂಗಿ ದೇವಕಿಯ ಗರ್ಭದಲ್ಲಿ ಜನಿಸುವ ಎಂಟನೇ ಮಗುವಿನಿಂದ ತನಗೆ ಮೃತ್ಯುವಾಗಲಿದೆ ಎನ್ನುವುದು. ಇದರಿಂದಾಗಿ ಕಂಸ, ದೇವಕಿ ಹಾಗೂ ವಸುದೇವರಿಗೆ ಜನಿಸುವ ಎಲ್ಲಾ 7 ಮಕ್ಕಳನ್ನು ನಿರ್ದಯೆಯಿಂದ ಹತ್ಯೆ ಮಾಡುತ್ತಾನೆ.

ನಂತರ ಈ ದಂಪತಿಗೆ ಕೃಷ್ಣ ಎಂಟನೆಯ ಮಗುವಿನ ರೂಪದಲ್ಲಿ ಜನಿಸುತ್ತಾನೆ. ವಸುದೇವ ಆಗತಾನೇ ಜನಿಸಿದ ತನ್ನ ನವಜಾತ ಶಿಶು ಶ್ರೀಕೃಷ್ಣನನ್ನು ಕಂಸನಿಂದ ರಕ್ಷಿಸಲೇಬೇಕೆಂದು ನಿರ್ಧರಿಸಿ, ಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ನಡುರಾತ್ರಿಯ ಗುಟ್ಟಾಗಿ ಕಾರಾಗೃಹದಿಂದ ತಪ್ಪಿಸಿಕೊಂಡು ನೆರೆಯ ರಾಜ್ಯ ಗೋಕುಲಕ್ಕೆ ತಲುಪುತ್ತಾನೆ.

ಗೋಕುಲದಲ್ಲಿ ನಂದಗೋಪ ಹಾಗೂ ಆತನ ಪತ್ನಿ ಯಶೋದೆಯ ಮಗುವಿದ್ದ ಜಾಗದಲ್ಲಿ ವಸುದೇವ ಕೃಷ್ಣನನ್ನು ಇಟ್ಟು ಆತನ ಮಗುವನ್ನು ಹೊತ್ತು ಕಾರಾಗೃಹಕ್ಕೆ ಬರುತ್ತಾನೆ.

ಕಂಸ ಆ ಮಗುವನ್ನು ಕಂಡು ತನ್ನ ತಂಗಿ ದೇವಕಿಯ ಎಂಟನೆಯ ಮಗುವೆಂದು ಭಾವಿಸಿ ಅದನ್ನು ಕೊಲ್ಲಲು ಯತ್ನಿಸುತ್ತಾನೆ. ಅಷ್ಟರಲ್ಲೇ ಪವಾಡ ಸದೃಶದಂತೆ ಆ ನವಜಾತ ಶಿಶುವೇ ಮಾತನಾಡಿ ಕಂಸನನ್ನು ಕಂಡು, ನಿನ್ನನ್ನು ಸಂಹಾರ ಮಾಡುವವನು ಈಗಾಗಲೇ ಭೂಮಿಯ ಮೇಲೆ ಜನ್ಮ ತಾಳಿದ್ದಾನೆ ಎಂದು ಹೇಳಿ ಕೂಡಲೇ ಅದೃಶ್ಯವಾಗುತ್ತದೆ.

ನಂತರ ಕೃಷ್ಣ ಬೆಳೆದ ನಂತರ ಮತ್ತೆ ಮಥುರಕ್ಕೆ ಬಂದು ಕಂಸನ ದುಷ್ಟ ಆಡಳಿತ ಕಂಡು ಹಾಗೂ ತನ್ನ ಹಿನ್ನಲೆ ಅರಿತು ಕಂಸನ ಸಂಹಾರಕ್ಕೆ ಮುಂದಾಗುತ್ತಾನೆ. ಕೃಷ್ಣ ಕಂಸನನ್ನು ಎಷ್ಟೇ ಕೊಲ್ಲಲು ಯತ್ನಿಸಿದರೂ ಅದು ವಿಫಲವಾಗುತ್ತದೆ. ನಂತರ ಕಂಸನ ಆಹ್ವಾನದ ಮೇರೆಗೆ ಕೃಷ್ಣ ಮತ್ತು ಬಲರಾಮರು ಕುಸ್ತಿ ಪಂದ್ಯಕ್ಕೆ ಹಾಜರಾಗುತ್ತಾರೆ. ಅಲ್ಲಿ ಕಂಸನ ಎಲ್ಲಾ ಸೇವಕರನ್ನು ಕೃಷ್ಣ ಹತ್ಯೆಗೈಯ್ಯುತ್ತಾನೆ. ಇದರಿಂದ ಕೋಪಗೊಂಡ ಕಂಸನು ಕೃಷ್ಣನನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ಕೃಷ್ಣ ಕಂಸನ ಮೇಲೆ ಎರಗಿ ಆತನ ಕಿರೀಟವನ್ನು ಕಿತ್ತು, ಕಂಸನನ್ನು ಕೊಲ್ಲುತ್ತಾನೆ. ನಂತರ ತನ್ನ ತಾಯಿ ದೇವಕಿ ಮತ್ತು ವಾಸುದೇವರನ್ನು ಸೆರೆಯಿಂದ ಹೊರತಂದು, ಉಗ್ರಸೇನನ್ನು ಮತ್ತೆ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುತ್ತಾನೆ.

ಪೂತನಿ ಸಂಹಾರ

ಪೂತನಿ ಸಂಹಾರ

ಕಂಸನ ಬಳಿ ಕೃಷ್ಣನನ್ನು ಕೊಲ್ಲಲು ಸಾಧ್ಯವಾಗದೇ ಇದ್ದಾಗ ಅವನು ಹತಾಶನಾಗಿ ಪೂತನಿ ಎನ್ನುವ ರಾಕ್ಷಸಿಯನ್ನು ಸುಂದರ ಯುವತಿಯ ರೂಪದಲ್ಲಿ ಕೃಷ್ಣನ ವಾಸಸ್ಥಳಕ್ಕೆ ಕಳುಹಿಸುತ್ತಾನೆ. ಕಳೆದ 10 ದಿನಗಳೊಳಗೆ ಜನಿಸಿದ ನವಜಾತ ಶಿಶುಗಳನ್ನು ಕೊಲ್ಲಲು ಪೂತನಿಗೆ ಕಂಸ ಆದೇಶ ನೀಡುತ್ತಾನೆ. ಕಂಸನ ಮಾತಿನಂತೆ ಪೂತನಿ ಕೃಷ್ಣನನ್ನು ಹುಡುಕಿಕೊಂಡು ಗೋಕುಲಕ್ಕೆ ಬರುತ್ತಾಳೆ. ಹಳ್ಳಿಯಲ್ಲಿ ಮಾತನಾಡುತ್ತಿದ್ದ ಮಾತುಗಳನ್ನು ಆಲಿಸಿ ಯಶೋದಾಳ ಬಳಿ ಇರುವ ಮಗುವೇ ಕೃಷ್ಣ ಎಂದು ತಿಳಿದು, ಪೂತನಿ ಯಶೋದಾಳ ಬಳಿ ಹೋಗಿ ಆಕೆಯನ್ನು ವಿಚಲಿತಗೊಳಿಸಿ ಕೃಷ್ಣನಿಗೆ ವಿಷದ ಎದೆಹಾಲುಣಿಸಲು ಹೋಗುತ್ತಾಳೆ. ಬಾಲಕೃಷ್ಣನು ಎದೆಹಾಲುಣಿಸಲು ಮುಂದಾದ ಪೂತನಿಯ ಎದೆಯನ್ನು ರಕ್ತ ಸಹಿತ ಹೀರಿ ಬಾಲ್ಯದಲ್ಲೇ ಪೂತನಿಯ ಸಂಹಾರಗೈಯುತ್ತಾನೆ, ಪೂತನಿ ಮೃತಳಾಗುತ್ತಾಳೆ.

ಕಾಳಿಂಗ ಸರ್ಪ

ಕಾಳಿಂಗ ಸರ್ಪ

ಯಮುನಾ ನದಿಯ ಆಳದಲ್ಲಿ ಕಾಳಿಂಗ ಎನ್ನುವ ದೈತ್ಯ ಸರ್ಪ ವಾಸವಾಗಿರುತ್ತದೆ. ಸೊಕ್ಕಿನ ಕಾಳಿಂಗ ಸರ್ಪವು ಯಮುನಾ ನದಿಯ ಸಂಪೂರ್ಣ ನೀರನ್ನು ವಿಷಪೂರಿತವನ್ನಾಗಿಸಿ ನದಿಯ ಸಮೀಪವಿರುವ ಸ್ಥಳೀಯರು, ಪ್ರಾಣಿ, ಪಕ್ಷಿಗಳ ಮರಣಕ್ಕೆ ಕಾರಣವಾಗಿರುತ್ತದೆ. ಇದನ್ನು ತಿಳಿದ ಕೃಷ್ಣ ನದಿಯ ದಡದಲ್ಲಿ ಚೆಂಡಾಟ ಆಡುವ ನೆಪದಿಂದ ಯಮುನಾ ನದಿಗೆ ಹೋಗುತ್ತಾನೆ. ಆಟವಾಡುವಾಗ ಚೆಂಡು ನದಿಯ ನೀರಿಗೆ ಬೀದ್ದಾಗ ಕಾಳಿಂಗ ಸರ್ಪದೊಂದಿಗೆ ಯುದ್ಧಕ್ಕೆ ನಿಲ್ಲುತ್ತಾನೆ. ಸಾಕಷ್ಟು ಹೋರಾಟದ ಬಳಿಕ ಕೃಷ್ಣನ ಶಕ್ತಿಯಿಂದ ಕಾಳಿಂಗ ಸರ್ಪವು ಸೋಲುತ್ತದೆ ಮತ್ತು ತಾನು ಮಾಡಿದ ತಪ್ಪಿಗೆ ಕ್ಷಮೆಯನ್ನು ಸಹ ಕೇಳುತ್ತದೆ.

ಜರಾಸಂಧನ ಸಾವು

ಜರಾಸಂಧನ ಸಾವು

ಮಗಧ ದೇಶದ ಅರಸ ಜರಾಸಂಧ ದೊಡ್ಡ ಶಿವಭಕ್ತ. ಜರಾಸಂಧನಿಗೆ ಯಾದವರೊಂದಿಗೆ ಶತ್ರುತ್ವ ಇದ್ದುದರಿಂದ ಕೃಷ್ಣನು ಭೀಮಸೇನನ ಮೂಲಕ ಇವನ ಸಂಹಾರ ಮಾಡುತ್ತಾನೆ.

ಜರಾಸಂಧ ಒಂದು ದೊಡ್ಡ ನಗಾರಿಯನ್ನು ಮಾಡಿಸಿ ತನ್ನ ರಾಜಧಾನಿಯ ಹೆಬ್ಟಾಗಿಲಿನಲ್ಲಿ ತೂಗುಹಾಕಿದ್ದ. ಆ ನಗಾರಿಯನ್ನು ಯಾರು ಒಡೆದು ಹಾಕುತ್ತಾರೋ ಅವರಿಂದ ಜರಾಸಂಧನ ಮರಣ ಎಂಬ ನಂಬಿಕೆಯಿತ್ತು. ಒಂದು ದಿನ ಶ್ರೀಕೃಷ್ಣ, ಭೀಮಾರ್ಜುನರನ್ನು ಕರೆದು ಕೊಂಡು ಮಗಧಕ್ಕೆ ಬಂದ. ಅರ್ಧರಾತ್ರಿಯಲ್ಲಿ ನಗರ ಪ್ರವೇಶ ಮಾಡಿದ ಮೂವರೂ ರಾಜಧಾನಿಯ ಹೆಬ್ಬಾಗಿಲಿನಲ್ಲಿದ್ದ ಬೃಹತ್‌ ಗಾತ್ರದ ನಗಾರಿಯನ್ನು ಒಡೆದುಹಾಕಿದರು.

ಗಸ್ತಿನ ಸೈನಿಕರು ಇದನ್ನು ನೋಡಿ ಜರಾಸಂಧನಿಗೆ ಈ ವಿಷಯ ಮುಟ್ಟಿಸಿದರು. ಜರಾಸಂಧ ಕೂಡಲೇ ಕೃಷ್ಣಾರ್ಜುನ ಭೀಮರನ್ನು ಕರೆಸಿದ, ಯಾರು ಏನು ಎಂದು ವಿಚಾರಿಸಿದಾಗ ಕೃಷ್ಣ ತಾನುಯಾರಾದರೇನದಂತೆ, ನಮ್ಮ ಬಳಿ ಯಾರಾದರೂ ಒಬ್ಬರನ್ನು ಆಯ್ದುಕೊಂಡು ಮಲ್ಲಯುದ್ಧ ಮಾಡು ಎಂದು ಹೇಳಿದ. ಭೀನ ಜೊತೆ ಯುದ್ಧಕ್ಕೆ ನಿಂಯ ಜರಾಸಂಧನು ಆಶ್ಚರ್ಯವೆಂಬಂತೆ ಎಷ್ಟು ಬಾರಿ ಸೋತರೂ, ದೇಹ ಎರಡು ತುಂಡಾದರೂ ಮತ್ತೆ ಮತ್ತೆ ಬದುಕುತ್ತಿದ್ದ, ಎರಡಾಗಿ ಸೀಳಿದಷ್ಟೂ ಅವನು ಮತ್ತೆ ಹುಟ್ಟಿಬರುತ್ತಿದ್ದ. ಈ ರೀತಿ ಹಲವಾರು ಬಾರಿ ನಡೆಯಿತು. ಜರಾಸಂಧನನ್ನು ವಧಿಸುವ ಉಪಾಯ ಕಾಣದೆ ಭೀಮ ಕಕ್ಕಾಬಿಕ್ಕಿಯಾದ. ಕೃಷ್ಣನಿಗೆ ಜರಾಸಂಧನ ಹುಟ್ಟಿನ ಹಿನ್ನೆಲೆ ಗೊತ್ತಿತ್ತು.

ನಂತರ ಕೃಷ್ಣನ ಸಲಹೆಯ ಮೇರೆಗೆ ಭೀಮ ಜರಾಸಂಧನನ್ನು ಎರಡಾಗಿ ಸೀಳಿ ಎರಡು ಭಾಗವನ್ನೂ ತಲೆಯನ್ನು ಕಾಲಿಗೆ ಕಾಲನ್ನು ತಲೆಗೆ ಜೋಡಿಸಿ ಬಿಸಾಡಿದ. ಜರಾಸಂಧ ಸತ್ತುಬಿದ್ದ. ಅವನ ಶರೀರ ಬೃಹದಾಕಾರದ ಪರ್ವತದಂತೆ ಭೂಮಿಯಲ್ಲಿ ಬಿತ್ತು. ಜರಾಸಂಧ ಸೆರೆಯಲ್ಲಿಟ್ಟಿದ್ದ ರಾಜರನ್ನೆಲ್ಲಾ ಕೃಷ್ಣಾರ್ಜುನಭೀಮರು ಬಿಡಿಸಿದರು.

ಅರಿಷ್ಟಾಸುರ ವಧೆ

ಅರಿಷ್ಟಾಸುರ ವಧೆ

ಬೃಹಸ್ಪತಿಯ ಶಿಷ್ಯನಾಗಿರುವ ಅರಿಸ್ಟಾಸುರನು ಗುರುವಿಗೆ ಅಗೌರವ ತೋರಿಸಿದ್ದ ಕಾರಣಕ್ಕಾಗಿ ಬೃಹಸ್ಪತಿಯಿಂದ ಗೂಳಿಯಾಗುವಂತೆ ಶಾಪವನ್ನು ಪಡೆದಿರುತ್ತಾನೆ. ಒಂದು ದಿನ ದೊಡ್ಡ ಗೂಳಿಯೊಂದು ಬೃಂದಾವನಕ್ಕೆ ನುಗ್ಗಿ ಅಲ್ಲಿನ ಗ್ರಾಮಸ್ಥರ ಮೇಲೆ ದಾಳಿ ಮಾಡಲು ಆರಂಭಿಸಿತು. ಗೂಳಿಯಿಂದ ತಪ್ಪಿಸಿಕೊಳ್ಳಲು ಗ್ರಾಮಸ್ಥರು ಓಡಲು ಆರಂಭಿಸಿದರು. ಈ ವೇಳೆ ತಮ್ಮನ್ನೆಲ್ಲಾ ರಕ್ಷಿಸಲು ಜನರೆಲ್ಲಾ ಶ್ರೀ ಕೃಷ್ಣನನ್ನು ಕರೆದರು. ಕೃಷ್ಣ ಗೂಳಿಯನ್ನು ನೋಡುತ್ತಿದ್ದಂತೆ ಇದು ಗೂಳಿಯಲ್ಲ ಅರಿಷ್ಟಾಸುರ ಎಂದು ತಿಳಿಯುತ್ತದೆ. ಕೂಡಲೇ ಕೃಷ್ಣನು ಗೂಳಿಯ ಎರಡೂ ಕೊಂಬುಗಳನ್ನು ಹಿಡಿದು ನೆಲಕ್ಕೆ ಬೀಳಿಸುತ್ತಾನೆ. ಆಗ ಗೂಳಿಯ ರೂಪದಲ್ಲಿದ್ದ ಅರಿಷ್ಟಾಸುರ ತನ್ನ ನೈಜ ರೂಪವನ್ನು ತಾಳಿ ಕೃಷ್ಣನ ಕ್ಷಮೆಯಾಚಿಸುತ್ತಾನೆ.

ಅಘಾಸುರ ಹತ್ಯೆ

ಅಘಾಸುರ ಹತ್ಯೆ

ಕೃಷ್ಣ ತನ್ನ ಸ್ನೇಹಿತರೊಂದಿಗೆ ಕಾಡಿನಲ್ಲಿ ಸಮಯ ಕಳೆಯುವಾಗ, ಅವರು ಸಂತೋಷವಾಗಿದ್ದ ಕ್ಷಣವನ್ನು ಕಂಡ ಪೂತನಿಯ ಸಹೋದರ ಅಘಾಸುರನು ಹೆಬ್ಬಾವಿನ ರೂಪವನ್ನು ತಾಳಿ ತನ್ನನ್ನು ಗುಹೆಯುಳ್ಳ ಪರ್ವತದಂತೆ ರೂಪಿಸಿಕೊಳ್ಳುತ್ತಾನೆ. ಈ ಪರ್ವತ ಕಂಡಾಕ್ಷಣ ಕೃಷ್ಣನ ಸ್ನೇಹಿತರು ಆಶ್ಚರ್ಯದಿಂದ ಗುಹೆಯೊಳಗೆ ಹೋಗಲು ಇಚ್ಛಿಸುತ್ತಾರೆ, ಕೃಷ್ಣ ಎಷ್ಟೇ ಹೇಳಿದರೂ ಆತನ ಮಾತನ್ನು ಕೇಳದೆ ಗುಹೆಯೊಳಗೆ ಹೋಗುತ್ತಾರೆ.

ಕೃಷ್ಣನಿಗೆ ಈ ಗುಹೆಯು ಅಘಾಸುರ ರಾಕ್ಷಸನದ್ದು ಎಂದು ತಿಳಿದಿದ್ದರೂ ಸ್ನೇಹಿತರೊಂದಿಗೆ ಗುಹೆ ಪ್ರವೇಶಿಸುತ್ತಾನೆ. ಕೃಷ್ಣ ಗುಹೆಯ ಒಳಗೆ ಬಂದಾಕ್ಷಣ ಹೆಬ್ಬಾವಿನ ಬಾಯನ್ನು ಮುಚ್ಚಲು ಅಘಾಸುರ ಮುಂದಾಗುತ್ತಾನೆ. ಈ ವೇಳೆ ಶ್ರೀಕೃಷ್ಣನು ತನ್ನ ಲೀಲೆ, ದೈವಿಕ ಜ್ಞಾನದಿಂದ ಗುಹೆಯ ದೇಹವನ್ನು ವಿಸ್ತರಿಸಿಕೊಳ್ಳುತ್ತಾನೆ. ಆಗ ಅಘಾಸುರನು ತನ್ನ ಬಾಯಿಯನ್ನು ಮುಚ್ಚಲಾಗದೇ ಉಸಿರುಗಟ್ಟಿ ಸಾವನ್ನಪ್ಪುತ್ತಾನೆ.

ಕೇಶಿ ಅಸುರ

ಕೇಶಿ ಅಸುರ

ದೇವಕಿಯ 8ನೇ ಮಗನ ಉಳಿವಿನ ಕುರಿತು ನಾರದ ಮುನಿಗಳ ಸೂಚನೆಯ ಮೇರೆಗೆ ಕಂಸ ಕೋಪಗೊಂಡ ಕೃಷ್ಣನ ಹತ್ಯೆಗೆ ಪ್ರಯತ್ನ ಮಾಡುತ್ತಾನೆ. ಕಂಸನು ಕೇಶಿ ಎನ್ನುವ ರಾಕ್ಷಸನನ್ನು ಕರೆದು ದೇವಕಿಯ ಎಂಟನೇ ಮಗನಾರೆಂದು ಹುಡುಕಿ ಹತ್ಯೆಗೈಯುವಂತೆ ಹೇಳುತ್ತಾನೆ. ಕೇಶಿ ರಾಕ್ಷಸನು ದೈತ್ಯ ಕುದುರೆಯಾಗಿ ಕೃಷ್ಣನನ್ನು ಸಂಹಾರ ಮಾಡಲು ಬಂದಾಗ ಕೃಷ್ಣನೇ ಆತನನ್ನು ಸಂಹಾರ ಮಾಡುತ್ತಾನೆ.

ತೃಣಾವರ್ತ

ತೃಣಾವರ್ತ

ಕೃಷ್ಣನ ಮೊದಲ ಹುಟ್ಟುಹಬ್ಬ ಮತ್ತು ಸಂಭ್ರಮದ ಸಂಭ್ರಮವಿತ್ತು. ಆ ಸಮಯದಲ್ಲಿ, ಕಂಸನ ಸೂಚನೆಯಂತೆ ಕಂಸನ ಸೇವಕನಾದ ತೃಣಾವರ್ತನು ಅಲ್ಲಿ ಸುಂಟರಗಾಳಿಯ ರೂಪದಲ್ಲಿ ಕಾಣಿಸಿಕೊಂಡನು. ಅವನು ಕೃಷ್ಣನನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು ಬೃಂದಾವನದಾದ್ಯಂತ ದೊಡ್ಡ ಧೂಳಿನ ಬಿರುಗಾಳಿಯನ್ನು ಎಬ್ಬಿಸಿ, ಎಲ್ಲರ ಕಣ್ಣುಗಳನ್ನು ಮುಚ್ಚಿದನು. ಕೆಲವೇ ಕ್ಷಣಗಳಲ್ಲಿ ಬೃಂದಾವನದ ಇಡೀ ಪ್ರದೇಶವು ದಟ್ಟವಾದ ಕತ್ತಲೆಯಾಯಿತು, ಯಾರೂ ತನ್ನನ್ನು ಅಥವಾ ಬೇರೆಯವರಿಗೆ ಕಾಣುವುದಿಲ್ಲ. ಈ ದುರಂತದ ಸಮಯದಲ್ಲಿ, ತಾಯಿ ಯಶೋದಾ ತನ್ನ ಮಗುವನ್ನು ಕಾಣದೇ, ಸುಂಟರಗಾಳಿಯಿಂದ ಮಗುವನ್ನು ರಕ್ಷಿಸಲು ಸಾಧ್ಯವಾಗದೆ ಕರುಣಾಜನಕವಾಗಿ ಅಳಲು ಪ್ರಾರಂಭಿಸಿದಳು.

ತೃಣಾವರ್ತ ರಾಕ್ಷಸನು ಕೃಷ್ಣನನ್ನು ಭುಜದ ಮೇಲೆ ಹೊತ್ತು ಆಕಾಶಕ್ಕೆ ಏರಿದನು, ಆದರೆ ಇದ್ದಕ್ಕಿಂದ್ದಂತೆ ಕೃಷ್ಣನ ತೂಕದಲ್ಲಿ ಆಗುವ ಹೆಚ್ಚಳದಿಂದ ಅವನು ಮುಂದೆ ಹೋಗಲು ಸಾಧ್ಯವಾಗಲಿಲ್ಲ ಮತ್ತು ತೃಣಾವರ್ತನು ಸುಂಟರಗಾಳಿಯನ್ನು ನಿಲ್ಲಿಸಬೇಕಾಯಿತು. ಬಾಲ ಕೃಷ್ಣನು ತನ್ನನ್ನು ತಾನೇ ಭಾರವಾಗಿಸಿಕೊಂಡನು ಮತ್ತು ರಾಕ್ಷಸನ ಮೇಲೆ ಅತಿಯಾದ ತೂಕ ಹೇರಲು ಪ್ರಾರಂಭಿಸಿದನು, ಆತನ ಕುತ್ತಿಗೆ ಹಿಡಿದನು. ತೃಣಾವರ್ತನಿಗೆ ಮಗುವು ದೊಡ್ಡ ಪರ್ವತದಂತೆ ಭಾರವಾಗಿದ್ದನೆಂದು ಭಾಸವಾಯಿತು, ತೃಣಾವರ್ತ ಕೃಷ್ಣದ ಹಿಡಿತದಿಂದ ಹೊರಬರಲು ಪ್ರಯತ್ನಿಸಿದನು, ಆದರೆ ಅವನಿಗೆ ಅದು ಸಾಧ್ಯವಾಗಲಿಲ್ಲ ಮತ್ತು ಅವನ ಕಣ್ಣು ಗುಡ್ಡೆಗಳು ಹೊರಬಂದವು. ತೃಣಾವರ್ತ ಅಳುತ್ತಾ ಬೃಂದಾವನದ ನೆಲಕ್ಕೆ ಬಿದ್ದು ಸತ್ತನು.

ಬಕಾಸುರ ವಧೆ

ಬಕಾಸುರ ವಧೆ

ಒಂದು ದಿನ ಎಲ್ಲಾ ದನಗಾಹಿ ಹುಡುಗರು ತಮ್ಮ ಕರುಗಳಿಗೆ ನೀರು ಹಾಕಿದ ನಂತರ ಯಮುನಾ ನದಿಯ ದಡದಲ್ಲಿ ಕುಳಿತಿದ್ದಾಗ, ಅವರು ಒಂದು ದೊಡ್ಡ ಪ್ರಾಣಿಯನ್ನು ನೋಡಿದರು, ಅದು ಒಂದು ಬೆಕ್ಕಿನಂತೆ ಕಾಣುತ್ತದೆ ಮತ್ತು ಬೆಟ್ಟದಷ್ಟು ದೊಡ್ಡದಾಗಿರುತ್ತದೆ. ಅದರ ಮೇಲ್ಭಾಗವು ಸಿಡಿಲಿನಂತೆ ಬಲವಾಗಿತ್ತು. ಅವರಿಗೆ ಆ ಅಸಾಮಾನ್ಯ ಪ್ರಾಣಿಯನ್ನು ನೋಡಿದಾಗ ಭಯವಾಯಿತು. ಈ ಮೃಗದ ಹೆಸರು ಬಕಾಸುರ ಮತ್ತು ಅವನು ಕಂಸನ ಸ್ನೇಹಿತನಾಗಿದ್ದನು. ಅವನು ಇದ್ದಕ್ಕಿದ್ದಂತೆ ಕೃಷ್ಣನನ್ನು ತನ್ನ ಮೊನಚಾದ, ತೀಕ್ಷ್ಣವಾದ ಕೊಕ್ಕಿನಿಂದ ಹೊಡೆದು ಅವನನ್ನು ದಿಢೀರ್‌ ಎಂದು ನುಂಗಿದನು.

ಹೀಗೆ ಕೃಷ್ಣನನ್ನು ನುಂಗಿದಾಗ, ಬಲರಾಮನ ನೇತೃತ್ವದ ಹುಡುಗರೆಲ್ಲರೂ ಬಹುತೇಕ ಉಸಿರುಗಟ್ಟಿದರು. ಆದರೆ ಬಕಾಸುರ ರಾಕ್ಷಸನು ಕೃಷ್ಣನನ್ನು ನುಂಗಿದಾಗ, ಅವನ ಗಂಟಲಿನಲ್ಲಿ ಉರಿಯುತ್ತಿರುವ ಸಂವೇದನೆಯನ್ನು ಅನುಭವಿಸಿದನು. ಬಕಾಸುರನು ಕೃಷ್ಣನನ್ನು ಬೇಗನೆ ಎಸೆದು ಕೊಕ್ಕಿನಲ್ಲಿ ಚುಚ್ಚಿ ಕೊಲ್ಲಲು ಪ್ರಯತ್ನಿಸಿದನು. ಕೃಷ್ಣನು ದೊಡ್ಡ ದೈತ್ಯಾಕಾರದ ಪ್ರಾಣಿಯ ಕೊಕ್ಕಿನ ಎರಡು ಭಾಗಗಳಿಂದ ಹಿಡಿದನು ಮತ್ತು ಅವನ ಗೋಪಾಲಕರ ಗೆಳೆಯರನ್ನು ಬಾಯಿಯಿಂದ ಹೊರಬರುವಂತೆ ಮಾಡುತ್ತಾನೆ, ನಂತರ ಕೃಷ್ಣನು ಕೊಕ್ಕನ್ನು ಬಹಳ ಸುಲಭವಾಗಿ ವಿಭಜಿಸಿ ಕೊಂದನು.

ವತ್ಸಾಸುರನ ಸಾವು

ವತ್ಸಾಸುರನ ಸಾವು

ಒಂದು ದಿನ ಬಲರಾಮ ಮತ್ತು ಕೃಷ್ಣ ಸಹಪಾಠಿಗಳೊಂದಿಗೆ ಯಮುನಾ ನದಿಯ ದಡದಲ್ಲಿ ಕರುಗಳನ್ನು ನೋಡಿಕೊಳ್ಳುತ್ತಿದ್ದಾಗ, ಇನ್ನೊಂದು ರಾಕ್ಷಸನು ಅಂದರೆ ವತ್ಸಾಸುರನು ಅವರನ್ನು ಕೊಲ್ಲಲು ಅಲ್ಲಿಗೆ ಬಂದನು.

ರಾಕ್ಷಸನು ಕರುವಿನ ರೂಪವನ್ನು ಪಡೆದುಕೊಂಡು ಇತರ ಕರುಗಳ ಗುಂಪಿನೊಳಗೆ ಪ್ರವೇಶಿಸಿದ್ದನ್ನು ಕೃಷ್ಣನು ಕಂಡಾಗ, ಆತನು ಬಲದೇವನಿಗೆ ಸೂಚಿಸಿದನು. ನಂತರ ಅವನು ರಾಕ್ಷಸನ ಉದ್ದೇಶಗಳನ್ನು ಅರ್ಥಮಾಡಿಕೊಳ್ಳದವನಂತೆ ನಿಧಾನವಾಗಿ ರಾಕ್ಷಸನನ್ನು ಸಮೀಪಿಸಿದನು.

ನಂತರ, ಶ್ರೀ ಕೃಷ್ಣನು ರಾಕ್ಷಸನ ಹಿಂಗಾಲುಗಳು ಮತ್ತು ಬಾಲದಿಂದ ಹಿಡಿದು ಅವನು ಸಾಯುವವರೆಗೂ ವತ್ಸಾಸುರನ ಇಡೀ ದೇಹವನ್ನು ಬಲವಾಗಿ ತಿರುಗಿಸಿದನು ಮತ್ತು ಅವನನ್ನು ಮರದ ಮೇಲೆ ಎಸೆದನು, ನಂತರ ಅದು ರಾಕ್ಷಸನ ಶರೀರದೊಂದಿಗೆ ಕೆಳಗೆ ಬಿದ್ದಿತು.

ಇಷ್ಟೇ ಅಲ್ಲದೇ ಶ್ರೀ ಕೃಷ್ಣ ಪರಮಾತ್ಮನು ಕಂಸನ ಕುಕೃತ್ಯದಿಂದ ಸಮಕಷ್ಟಕ್ಕೆ ಒಳಗಾಗುತ್ತಾನೆ. ಕಂಸನು ಕೃಷ್ಣನನ್ನು ಕೊಲ್ಲಲು ಹಲವಾರು ರಾಕ್ಷಸರನ್ನು ಕಳುಹಿಸುತ್ತಾನೆ, ಆದರೆ ಕೃಷ್ಣನ ದೈವಿಶಕ್ತಿಯಿಂದ ಎಲ್ಲಾ ರಾಕ್ಷಸರು ಹತರಾಗುತ್ತಾರೆ. ಕೃಷ್ಣನಿಂದ ಹತರಾದ ರಾಕ್ಷಸರ ಪಟ್ಟಿಯಲ್ಲಿ ಈ ಕೆಳಗಿನವರು ಇದ್ದಾರೆ.

ಧೇನುಕಾಸುರ

ಕಾಡ್ಗಿಚ್ಚು

ಪ್ರಲಂಬಾಸುರ

ಶಂಕಚೂಡ

ನರಕಾಸುರ

ಬಾಣಾಸುರ

ಪೌಂಡರಿಕ

ತ್ರಿನವರ್ತ

ಶಿಶುಪಾಲ

ವ್ಯೋಮಾಸುರ

ಶಕಟಾಸುರ

ಕುವಲ್ಯಪೀಡ

English summary

Krishna Janmashtami: List of demons killed by Lord Krishna in kannada

Here we are discussing about Krishna Janmashtami 2021: List of demons killed by Lord Krishna in kannada. Read more.
X
Desktop Bottom Promotion