Just In
Don't Miss
- News
LIVE: ಜಾರ್ಖಂಡ್ 3ನೇ ಹಂತದ ಮತದಾನ ಸಂಪೂರ್ಣ ಅಪ್ಡೇಟ್ಸ್
- Sports
ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್ಮ್ಯಾನ್ ರೋಹಿತ್!
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Technology
ಗೂಗಲ್ ಮ್ಯಾಪ್ಸ್ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್ ಹೇಗೆ..?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಪೈಲೋನೈಡಲ್ ಸೈನಸ್ (ಕುರ): ಲಕ್ಷಣಗಳು, ಉಲ್ಬಣಗೊಳ್ಳುವ ಅಪಾಯ ಮತ್ತು ಚಿಕಿತ್ಸೆ
ಪೈಲೋನೈಡಲ್ ಸೈನನ್ ಎಂದರೆ ಬೆನ್ನ ಕೆಳಭಾಗದಲ್ಲಿ, ನಟ್ಟ ನಡುವೆ, ಬೆನ್ನಮೂಳೆಯ ತುದಿಯಲ್ಲಿ, ನಿತಂಬಗಳ ಸೀಳು ಪ್ರಾರಂಭವಾಗುವಲ್ಲಿ ಉಂಟಾಗುವ ಚಿಕ್ಕ ತೂತು ಅಥವಾ ಕೊಳವೆಯಂತಹ ಬೆಳವಣಿಗೆಯಾಗಿದೆ. ಈ ತೂತಿನಲ್ಲಿ ಕೀವು ಅಥವಾ ಸೋಂಕುಭರಿತ ದ್ರವ ತುಂಬಿಕೊಂಡು ಬೊಕ್ಕೆ ಅಥವಾ ಕೀವುಗುಳ್ಳೆ ಉಂಟಾಗುತ್ತದೆ. ಈ ಕೀವಿನಲ್ಲಿ ಹೆಚ್ಚಿನಾಂಶ ಕೊಳೆ, ಕೂದಲು ಮತ್ತು ಸತ್ತ ಜೀವಕೋಶಗಳಿರುತ್ತವೆ. ಪರಿಣಾಮವಾಗಿ ಅಪಾರವಾದ ನೋವು ಮತ್ತು ಕೆಲವೊಮ್ಮೆ ಸೋಂಕು ವಿಪರೀತವಾರಿ ಹರಡಿ ತೂತಿನಿಂದ ಹೊರಹೊಮ್ಮತೊಡಗುತ್ತದೆ. ಜೊತೆಗೇ ರಕ್ತವೂ ಹೊರಜಿನುಗುತ್ತಾ ದುರ್ವಾಸನೆ ಸೂಸುತ್ತದೆ. ಸಾಮಾನ್ಯವಾಗಿ ವಯಸ್ಕ ಪುರುಷರು ಮತ್ತು ತರುಣರಿಗೆ ಈ ತೊಂದರೆ ಕಾಡುತ್ತದೆ.
ಪೈಲೋನೈಡಲ್ ಸೈನಸ್ ಎದುರಾಗಲು ಕಾರಣವೇನು?
ಈ ಸೋಂಕು ಎದುರಾಗಲು ಸ್ಪಷ್ಟವಾದ ಕಾರಣವನ್ನು ನೀಡಲು ಇಂದಿಗೂ ಸಾಧ್ಯವಾಗಿಲ್ಲ. ಆದರೆ ಸಾಮಾನ್ಯವಾದ ಕಾರಣಗಳನ್ನು ಹೇಳಬಹುದಾದರೆ ಒಂದಕ್ಕಿಂತ ಹೆಚ್ಚಿನ ಸಂದರ್ಭಗಳು ಒಟ್ಟಾಗಿ ಈ ಸ್ಥಿತಿ ಬಂದಿರಬಹುದು. ಬದಲಾಗುವ ರಸದೂತಗಳ ಮಟ್ಟಗಳು, ಕೂದಲ ಬೆಳವಣಿಗೆ, ತೊಟ್ಟ ಬಟ್ಟೆಯ ಒಂದು ಭಾಗ ಸತತವಾಗಿ ಒಂದೇ ಕಡೆ ಘರ್ಷಣೆ ನೀಡುವುದು, ಅತಿ ಹೆಚ್ಚು ಹೊತ್ತು ಒಂದೇ ಕಡೆ ಕುಳಿತಿರುವುದು. ಸತತ ಒಂದೇ ಕಡೆ ಕುಳಿತಿರುವುದು ಮತ್ತು ಬಟ್ಟೆಯ ಘರ್ಷಣೆಯಿಂದ ಈ ಭಾಗದಲ್ಲಿ ಹೊಸದಾಗಿ ಹುಟ್ಟಲಿರುವ ಕೂದಲನ್ನು ಒಳಮುಖವಾಗಿ ಬೆಳೆಯುವಂತೆ ಮಾಡಬಹುದು. ಹೀಗೆ ಒಳಮುಖವಾಗಿ ಬೆಳೆಯುವ ಕೂದಲನ್ನು ನಮ್ಮ ದೇಹದ ರೋಗ ನಿರೋಧಕ ಶಕ್ತಿ ಪರಕೀಯ ವಸ್ತುವಿನಂತೆ ಪರಿಗಣಿಸಿ ಇದನ್ನು ನಿಗ್ರಹಿಸಲು ಬಿಳಿರಕ್ತಕಣಗಳ ಸೈನ್ಯವನ್ನು ನಿಯೋಜಿಸುತ್ತದೆ. ಪರಿಣಾಮವಾಗಿ ಬಿಳಿರಕ್ತಕಣಗಳು ಕೂದಲನ್ನು ಸುತ್ತುವರೆದು ಸತ್ತು ಕೀವಿನ ರೂಪ ಪಡೆಯುತ್ತವೆ. ಆದರೆ ಕೂದಲು ಸುಲಭವಾಗಿ ಕರಗದ ವಸ್ತುವಾದುದರಿಂದ ನಷ್ಟಗೊಳ್ಳದೇ ನಿಧಾನವಾಗಿ ಈ ಸೋಂಕು ಹೆಚ್ಚುತ್ತಾ ಹೋಗುತ್ತದೆ.
ಪೈಲೋನೈಡಲ್ ಸೈನಸ್ ನ ಲಕ್ಷಣಗಳು
ಅತಿ ಪ್ರಮುಖವಾಗಿ ಕಣ್ಣಿಗೆ ಕಾಣಬರುವ ಲಕ್ಷಣವೆಂದರೆ ನಿತಂಬಗಳ ನಡುವಣ ಮೇಲ್ಭಾಗದಲ್ಲಿ ಚಿಕ್ಕ ಕುಳಿಯಂತೆ ಚರ್ಮ ಒಳಕ್ಕೆ ಧಾವಿಸಿರುವುದು ಕಾಣಿಸುತ್ತದೆ. ಯಾವಾಗ ಚರ್ಮದ ಅಡಿಯಲ್ಲಿ ಸೋಂಕು ಹೆಚ್ಚುತ್ತಾ ಕೀವು ಹೆಚ್ಚಾಯಿತೋ ಆಗ ಒಳಗಿನ ಒತ್ತಡ ಹೆಚ್ಚಾಗಿ ಹೊರ ಉಬ್ಬತೊಡಗುತ್ತದೆ. ಉಬ್ಬುವುದು ಹೆಚ್ಚಿದಷ್ಟೂ ಇದು ನೋವನ್ನೂ ಹೆಚ್ಚಿಸುತ್ತಾ ಹೋಗುತ್ತದೆ. ನಿಂತಿದ್ದರೂ ಕುಳಿತಿದ್ದರೂ ನೋವು ತಡೆಯಲಾಗದಾಗುತ್ತದೆ. ಕುಳಿಯ ಸುತ್ತಲ ಚರ್ಮ ಕೆಂಪಗಾಗಿ ಉರಿಯತೊಡಗುತ್ತದೆ. ಬಳಿಕ ನಿಧಾನವಾಗಿ ಕೀವು ಹೊರ ಒಸರತೊಡಗುತ್ತದೆ ಹಾಗೂ ಒಳಮುಖ ಬೆಳೆದಿದ್ದ ಕೂದಲನ್ನು ಹೊರತಳ್ಳುತ್ತದೆ. ಆ ಬಳಿಕವೇ ಸೋಂಕು ಗುಣವಾಗಲು ಪ್ರಾರಂಭವಾಗುತ್ತದೆ.
ಪೈಲೋನೈಡಲ್ ಸೈನಸ್ ಉಲ್ಬಣಗೊಂಡರೆ ಎದುರಾಗಬಹುದಾದ ಅಪಾಯಗಳು:
* ಅತೀವವಾದ ನೋವು
* ಉರಿಯೂತ
* ಸುತ್ತಲ ಚರ್ಮ ಊದಿಕೊಳ್ಳುವುದು
* ನಡುವಿನಿಂದ ಕೀವು ಮತ್ತು ರಕ್ತ ಒಸರುವುದು
* ಗಾಯದಿಂದ ದುರ್ವಾಸನೆ ಸೂಸುವುದು
* 100.4ಡಿಗ್ರಿ ಫ್ಯಾರನ್ ಹೀಟ್ ಅಥವಾ ಅದಕ್ಕಿಂತಲೂ ಹೆಚ್ಚಿನ ತಾಪಮಾನದ ಜ್ವರ
ಪೈಲೋನೈಡಲ್ ಸೈನಸ್ ಗೆ ಚಿಕಿತ್ಸೆಗಳು
ಈ ಕುರದ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆಯನ್ನು ವೈದ್ಯರು ನಿರ್ಧರಿಸುತ್ತಾರೆ. ಕುರ ಪ್ರಾರಂಭಗೊಂಡ ಬಳಿಕ ಕಳೆದ ಅವಧಿ, ಕುರದ ಗಾತ್ರ, ಒಂದು ವೇಳೆ ಇದಕ್ಕೂ ಮುನ್ನ ಬಂದಿದ್ದು ಮರುಕಳಿಸುತ್ತಿದೆಯೇ ಇತ್ಯಾದಿ ವಿವರಗಳನ್ನು ವೈದ್ಯರು ಪಡೆದುಕೊಂಡು ಚಿಕಿತ್ಸೆ ಪ್ರಾರಂಭಿಸುತ್ತಾರೆ. ಇವುಗಳಲ್ಲಿ ಪ್ರಮುಖವಾಗಿ ನೀಡಲಾಗುವ ಚಿಕಿತ್ಸೆಗಳೆಂದರೆ:
* ಪ್ರತಿಜೀವಕ ಔಷಧಿಗಳು (ಆಂಟಿ ಬಯಾಟಿಕ್ಸ್)
ಒಂದು ವೇಳೆ ನೋವು ಅತಿ ಎನಿಸುವಷ್ಟಿಲ್ಲದಿದ್ದರೆ ಹಾಗೂ ಉರಿಯೂತವಾದ ಚಿಹ್ನೆಗಳು ಕಾಣಿಸದಿದ್ದರೆ ವೈದ್ಯರು ಹಲವು ಬಗೆಯ ಸೋಂಕುಗಳಿಗೆ ಉತ್ತರವಾಗಬಲ್ಲ ಪ್ರತಿಜೀವಕ ಔಷಧಿಗಳನ್ನು(broad-spectrum antibiotic) ಸೇವಿಸಲು ಸಲಹೆ ಮಾಡಬಹುದು. ಈ ಔಷಧಿಗಳು ಹಲವಾರು ಬಗೆಯ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಕ್ಷಮತೆ ಹೊಂದಿದ್ದು ಈ ಕೀವಿಗೆ ಕಾರಣವಾದ ಕ್ರಿಮಿಗಳನ್ನೂ ನಾಶಪಡಿಸಬಲ್ಲುದು. ಆದರೆ ಈ ಮೂಲಕ ಕುರ ಎದುರಾದ ಕೊಳವೆ ಅಥವಾ ಗುಳಿಯನ್ನು ಗುಣಪಡಿಸಲು ಸಾಧ್ಯವಾಗುವುದಿಲ್ಲ. ಆದರೆ ರೋಗಿಗೆ ನೋವಿಲ್ಲದಂತೆ ಮಾಡಿ ಕುಳಿತುಕೊಳ್ಳಲು ಆರಾಮದಾಯಕವಾಗಿಸುತ್ತದೆ.
* ಲ್ಯಾನ್ಸಿಂಗ್
ಕುರದ ಒಳಗಿರುವ ಸೋಂಕು ಮತ್ತು ಕೀವಿನ ಸಂಗ್ರಹವನ್ನು ಕಡಿಮೆಗೊಳಿಸಿ ನೋವನ್ನು ನಿವಾರಿಸುವ ವಿಧಾನವೇ ಲ್ಯಾನ್ಸಿಂಗ್. ಈ ಚಿಕಿತ್ಸೆಯಲ್ಲಿ ವೈದ್ಯರು ಕುರದ ಭಾಗದಲ್ಲಿ ಸ್ಥಳೀಯ ಅರವಳಿಕೆಯನ್ನು ನೀಡಿ ಸ್ಕ್ಯಾಲ್ಪೆಲ್ ಎಂಬ ಚರ್ಮವನ್ನು ಕತ್ತರಿಸುವ ಉಪಕರಣವನ್ನು ಬಳಸಿ ಚರ್ಮವನ್ನು ಕತ್ತರಿಸಿ ಒಳಗಿನ ಭಾಗದ ಕೀವು, ರಕ್ತ ಮತ್ತು ಕೂದಲನ್ನು ನಿವಾರಿಸಿ ಸ್ವಚ್ಛಗೊಳಿಸಿ ಬಳಿಕ ಗಾಯವನ್ನು ಹೊಲಿದು ಕ್ರಿಮಿರಹಿತವಾಗಿಸಿದ ಪಟ್ಟಿಯನ್ನು ಬಳಸಿ ಬ್ಯಾಂಡೇಜು ಮಾಡುತ್ತಾರೆ. ಈ ಮೂಲಕ ಗಾಯ ಒಳಗಿನಿಂದಲೇ ಗುಣವಾಗಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಪೂರ್ಣವಾಗಿ ಗುಣವಾಗಲು ನಾಲ್ಕು ವಾರಗಳ ಕಾಲ ಬೇಕಾಗಾತ್ತದೆ.
* ಫಿನಾಲ್ ಇಂಜೆಕ್ಷನ್
ಈ ಬಗೆಯ ಚಿಕಿತ್ಸೆ ನೀಡುವ ಮೊದಲು ಕುರದ ಭಾಗಕ್ಕೆ ಸ್ಥಳೀಯ ಅರವಳಿಕೆ ನೀಡಲಾಗುತ್ತದೆ. ಬಳಿಕ, ಪ್ರತಿಜೀವಕ ಔಷಧಿಯಾದ ಫಿನಾಲ್ ಎಂಬ ರಾಸಾಯನಿಕ ದ್ರವನ್ನು ಕುರದ ಒಳಗೆ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ. ಕುರದ ಲಕ್ಷಣಗಳನ್ನು ಅನುಸರಿಸಿ ಕೆಲವಾರು ಬಾರಿ ಈ ಚುಚ್ಚುಮದ್ದುಗಳನ್ನು ನೀಡಬಹುದು. ಈ ಮೂಲಕ ಕುರದ ಒಳಭಾಗ ತುಂಬಿಕೊಳ್ಳುತ್ತಾ, ಗಟ್ಟಿಯಾಗಿ ಕಡೆಗೆ ಕ್ರಮೇಣ ಈ ತೂತು ಇಲ್ಲವಾಗುವಂತೆ ಮಾಡುವುದು ಈ ಚಿಕಿತ್ಸೆಯ ವಿಧಾನವಾಗಿದೆ.
* ಶಸ್ತ್ರಚಿಕಿತ್ಸೆ:
ಒಂದು ವೇಳೆ ಪೈಲೋನೈಡಲ್ ಸೈನಸ್ ಒಂದು ಬಾರಿ ಬಂದ ಬಳಿಕ ಮತ್ತೊಮ್ಮೆ ಮಗದೊಮ್ಮೆ ಮರುಕಳಿಸುತ್ತಿದ್ದರೆ ಇದಕ್ಕೆ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಶಿಫಾರಸ್ಸು ಮಾಡುತ್ತಾರೆ. ಇದಕ್ಕಾಗಿ ಮೊದಲು ಸ್ಥಳೀಯ ಅರವಳಿಕೆಯನ್ನು ನೀಡಿ ಬಳಿಕ ಶಸ್ತ್ರಕ್ರಿಯೆಅ ಮೂಲಕ ಕುರವಿರುವ ಭಾಗವನ್ನು ತೆರೆದು ಸೋಂಕು, ಕೂದಲು ಮತ್ತು ಇತರ ಕೊಳೆಗಳನ್ನು ನಿವಾರಿಸಲಾಗುತ್ತದೆ. ಬಳಿಕ ಗಾಯವನ್ನು ಹೊಲಿದು ಪಟ್ಟಿ ಮಾಡಲಾಗುತ್ತದೆ.
ಪೈಲೋನೈಡಲ್ ಸೈನಸ್ ಬರದಂತೆ ತಡೆಯಬಹುದೇ?
ಈ ಸ್ಥಿತಿ ಬರದೇ ಇರಲು ನಿತ್ಯವೂ ಈ ಭಾಗವನ್ನು ಸೌಮ್ಯ ಸೋಪು ಬಳಸಿ ಚೆನ್ನಾಗಿ ತೊಳೆದುಕೊಳ್ಳುತ್ತಾ ಇರಬೇಕು. ಅಲ್ಲದೇ ಈ ಭಾಗವನ್ನು ಒಣದಾಗಿರಿಸಬೇಕು. ಅಲ್ಲದೇ ಹೆಚ್ಚು ಹೊತ್ತು ಒಂದೇ ಕಡೆ ಕುಳಿತಿರದೇ ವಿವಿಧ ಚಟುವಟಿಕೆಗಳಲ್ಲಿ ತೊಡಗಿರಬೇಕು.