For Quick Alerts
ALLOW NOTIFICATIONS  
For Daily Alerts

ಸ್ತನ ಕ್ಯಾನ್ಸರ್ ಕುರಿತು ಇರುವ 9 ತಪ್ಪು ಕಲ್ಪನೆಗಳಿವು

|

ಹೆಲ್ತ್ ಚೆಕ್-ಅಪ್ ಮಾಡಿಸ್ಕೊಳ್ಳೋಕೆ ಅಂತಾ ಡಾಕ್ಟ್ರ ಹತ್ರ ಹೋದಾಗ, ಡಾಕ್ಟ್ರು ಎಲ್ಲವನ್ನೂ ಪರೀಕ್ಷಿಸಿ "ನಿಮಗೆ ಕ್ಯಾನ್ಸರ್ ಇದೆ" ಅಂತೇನಾದ್ರೂ ಹೇಳಿದ್ರೆ ಆ ಮಾತು ಕೇಳುಗನ ಕಿವಿಯೊಳಗೆ ಕಾದ ಸೀಸಾನಾ ಸುರಿದಂತಹ ಅನುಭವ ಕೊಡುತ್ತೆ. ಯಾಕಂದ್ರೆ ಈ ಕ್ಯಾನ್ಸರ್ ಖಾಯಿಲೆಯ ಹೆಸರನ್ನ ಕೇಳಿದ್ರೇನೇ ಸಾಕು ಎಂತಹ ಎಂಟೆದೆಯ ಭಂಟನ ಎದೆಯೂ ಕೂಡ ಒಂದು ಸಲ ಧಸಕ್ಕಂದುಬಿಡುತ್ತೆ. ಆ ಖಾಯಿಲೇನೇ ಅಷ್ಟು ಘನಘೋರ!! ಮುಂದುವರೆದ ಸ್ಥಿತಿಯಲ್ಲಿ ಕ್ಯಾನ್ಸರ್ ರೋಗಿ ಬದುಕುಳಿಯೋ ಸಾಧ್ಯತೆ ತೀರಾ ವಿರಳ!! ಇನ್ನು ಆ ಖಾಯಿಲೆಗೆ ಚಿಕಿತ್ಸೆ, ಆ ಯಾತನೆ, ಇವುಗಳನ್ನ ನೆನೆಸಿಕೊಂಡ್ರಂತೂ "ಅಬ್ಬಬ್ಬಾ ಶತ್ರುವಿಗೂ ಬೇಡ ಈ ಖಾಯಿಲೆ" ಅಂತಾ ಅನ್ನಿಸದೇ ಇರೋಲ್ಲ!!

ಕ್ಯಾನ್ಸರ್ ನಲ್ಲೂ ಹಲವಾರು ಬಗೆಗಳಿವೆ ಅನ್ನೋದು ನಮ್ಮೆಲ್ಲರಿಗೂ ಗೊತ್ತಿರೋ ವಿಚಾರಾನೇ. ಈ ಲೇಖನದಲ್ಲಿ ನಾವು ಮುಖ್ಯವಾಗಿ ಬಹುತೇಕ ಸ್ತ್ರೀಯರನ್ನೇ ಕಾಡೋವಂತಹ (ಗಂಡಸರಿಗೂ ಬರಬಾರದೂಂತ ಏನಿಲ್ಲ!!) ಸ್ತನಕ್ಯಾನ್ಸರ್ ನ ಕುರಿತು ಜನರಲ್ಲಿರೋ ತಪ್ಪುಕಲ್ಪನೆಗಳು ಏನೇನು, ವಾಸ್ತವಿಕ ಸಂಗತಿ ಏನೇನು ಅನ್ನೋದರ ಮೇಲೆ ಬೆಳಕು ಚೆಲ್ಲಿದೀವಿ. ಇದನ್ನ ಓದೋದರ ಮೂಲಕ ಸ್ತನ ಕ್ಯಾನ್ಸರ್ ನ ಬಗ್ಗೆ ನಿಮಗೂ ಏನಾದ್ರೂ ತಪ್ಪು ಕಲ್ಪನೆಗಳು ಇರೋದೇ ಆದ್ರೆ ಅವುಗಳನ್ನ ನೀವು ನಿವಾರಿಸಿಕೊಂಡು ನಿಜವಾದ ಸಂಗತಿಯನ್ನ ಅರಿತುಕೊಂಡು ಅದರಂತೆ ನಡೆದುಕೊಂಡ್ರಿ ಅಂತಾದರೆ ನಮ್ಮ ಶ್ರಮ ಸಾರ್ಥಕವಾದ ಹಾಗೇ.....

ಭಾರತೀಯ ಸ್ತ್ರೀಯರಲ್ಲಿ ಅತ್ಯಂತ ಸಾಮಾನ್ಯವಾಗಿ ಪತ್ತೆಯಾಗೋ ಕ್ಯಾನ್ಸರ್ ನ ಪ್ರಕಾರವೆಂದರೆ ಅದು ಸ್ತನದ ಕ್ಯಾನ್ಸರ್ ಅಥವಾ ಬ್ರೆಸ್ಟ್ ಕ್ಯಾನ್ಸರ್. ಪ್ರತೀ ವರ್ಷವೂ ಸರಿಸುಮಾರು 1.5 ಲಕ್ಷದಷ್ಟು ಸ್ತ್ರೀಯರಲ್ಲಿ ಈ ರೋಗವು ಪತ್ತೆಯಾಗುತ್ತಿದೆ. ಭಾರತದಲ್ಲಿ ಪರಿಸ್ಥಿತಿ ಹೇಗಿದೆಯೆಂದರೆ, ಸ್ತನ ಕ್ಯಾನ್ಸರ್ ನಿಂದ ಗುರುತಿಸಲ್ಪಟ್ಟ ಸ್ತೀಯರ ಪೈಕಿ ಶೇ. 70% ರಷ್ಟು ಸ್ತ್ರೀಯರ ಶರೀರದಲ್ಲಿ ರೋಗವು ಸಾಕಷ್ಟು ಬೆಳವಣಿಗೆ ಹೊಂದಿದ ಬಳಿಕವೇ ರೋಗದ ಇರುವಿಕೆ ಪತ್ತೆಯಾಗೋದು. ರೋಗವು ಹೀಗೆ ಉಲ್ಬಣಾವಸ್ಥೆಯನ್ನ ತಲುಪಿದ ನಂತರ ಅದರ ಅಸ್ತಿತ್ವ ಪತ್ತೆಯಾದರೆ ಅದು ಈ ಕೆಳಗಿನ ಅಂಶಗಳ ಮೇಲೆ ಪರಿಣಾಮ ಬೀರುತ್ತೆ.

1. ಕ್ಯಾನ್ಸರ್ ಎಷ್ಟು ಬೆಳೆದಿದೆ ಅನ್ನೋದನ್ನ ನೇರವಾಗಿ ಅವಲಂಬಿಸಿ, ದೇಹಕ್ಕೆ ಅದು ಮಾಡಿರಬಹುದಾದ ಹಾನಿಯ ಮಟ್ಟ.

2. ರೋಗದ ಇರುವಿಕೆ ತಡವಾಗಿ ಪತ್ತೆಯಾಗಿರೋದ್ರಿಂದ, ಅದು ಆವರೆಗೆ ದೇಹಕ್ಕೆ ಮಾಡಿರೋ ಹಾನೀನೂ ಜಾಸ್ತಿ ಆಗಿರುತ್ತೆ, ಹಾನಿ ಜಾಸ್ತಿ ಇದ್ದಷ್ಟೂ ಚಿಕಿತ್ಸೆಯ ಖರ್ಚೂ ಜಾಸ್ತಿ ಆಗುತ್ತೆ. ಜೊತೆಗೆ, ತಡವಾಗಿ ರೋಗ ಇರೋದು ಪತ್ತೆಯಾದ್ರೆ ಕೊಡಬೇಕಾದ ಚಿಕಿತ್ಸೇನೂ ಕಷ್ಟಕರದ್ದೂ, ದೊಡ್ಡಮಟ್ಟದ್ದೂ ಆಗಿರುತ್ತೆ.

ಇಷ್ಟಕ್ಕೂ, ಈ ರೋಗ ಇರೋ ರೋಗಿಗಳಲ್ಲಿ ಅದು ಪತ್ತೆಯಾಗೋದಕ್ಕೆ ಅಷ್ಟೊಂದು ತಡ ಆಗೋದಕ್ಕೆ ಕಾರಣವಾದ್ರೂ ಏನೂ ಅನ್ನೋ ಕುತೂಹಲದಿಂದ ಸಮೀಕ್ಷೆಯೊಂದನ್ನ ನಡೆಸಿದ್ವಿ. ಇದಕ್ಕಾಗಿ ಕೆಲವು ರೋಗಿಗಳನ್ನ ಆರಿಸಿಕೊಂಡ್ವಿ. ಆ ರೋಗಿಗಳ ಜೊತೆಗೆ ಚರ್ಚೆ ಮಾಡಿದಾಗ, ನಮಗೆ ಗೊತ್ತಾದ ಸಂಗತಿಯೇನೆಂದರೆ, ಆ ರೋಗಿಗಳಲ್ಲಿ ಇದ್ದ ಕೆಲವು ತಪ್ಪು ಗ್ರಹಿಕೆಗಳು ಮತ್ತು ಮಿಥ್ಯಾಕಲ್ಪನೆಗಳೇ ಅವರಲ್ಲಿ ರೋಗ "ತಡವಾಗಿ ಪತ್ತೆಯಾಗೋದಕ್ಕೆ" ಕಾರಣ ಆಗಿದ್ದು ಅನ್ನೋದು. ಅವರಲ್ಲಿದ್ದ ಕೆಲವು ತಪ್ಪುಗ್ರಹಿಕೆಗಳು ಅಥವಾ ಮಿಥ್ಯಾಕಲ್ಪನೆಗಳು ಯಾವುವು ಅನ್ನೋದನ್ನ ಇಲ್ಲಿ ಕೊಟ್ಟಿದ್ದೇವೆ ನೋಡಿ....

ತಪ್ಪುಕಲ್ಪನೆ 1 :

ತಪ್ಪುಕಲ್ಪನೆ 1 :

ಸ್ತನದಲ್ಲಿ ಯಾತನಾಮಯ ಗೆಡ್ಡೆ ಏನಾದ್ರೂ (ಗಂಟು) ಇದ್ರೆ ಮಾತ್ರ ಸ್ತನದ ಕ್ಯಾನ್ಸರ್ ಇರೋದು ಅಂತ ಅರ್ಥ.

ಸತ್ಯಸಂಗತಿ: ಸ್ತ್ರೀಯರು ಪ್ರತೀ ತಿಂಗಳೂ "ಸ್ವಯಂ-ಸ್ತನ" ಪರೀಕ್ಷೆಯನ್ನ ಮಡ್ಕೊಳ್ಳೋದರ ಮೂಲಕ ಸ್ತನದ ಗೆಡ್ಡೆಗಳನ್ನ ಪತ್ತೆಮಾಡ್ಕೋಬೋದು. ಈ ಕೆಲಸಾನಾ ಸ್ತ್ರೀಯರು ತಮ್ಮ 20 ನೇ ವಯಸ್ಸಿನಿಂದ್ಲೇ ಶುರುವಿಟ್ಟುಕೊಳ್ಬೇಕು. ಮೊಲೆಗಳಲ್ಲಿ ಅಥವಾ ಕಂಕುಳಗಳಲ್ಲಿ ಏನಾದ್ರೂ ಗೆಡ್ಡೆಗಳು ಅಥವಾ ಉಬ್ಬಿಕೊಂಡಿರೋ ಭಾಗಗಳು ಇವೆಯೋ ಅಂತಾ ತಿಳ್ಕೋಳೋಕೆ ಎಡಗಡೆಯ ಮೊಲೆಗೆ ಬಲಗೈಯನ್ನ ಮತ್ತೆ ಬಲಗಡೆಯ ಮೊಲೆಗೆ ಎಡಗೈಯನ್ನ ಉಪಯೋಗಿಸ್ಕೋಬೇಕು. ಪತ್ತೆಯಾಗೋ ಬಹುತೇಕ ಗೆಡ್ಡೆಗಳು ಕ್ಯಾನ್ಸರ್ ಗೆಡ್ಡೆಗಳೇನೂ ಆಗಿರೋದಿಲ್ಲ. ಏನೇ ಆದರೂ, 40 ವರ್ಷಗಳಾದ ಮೇಲೆ ಸ್ತ್ರೀಯರ ಸ್ತನ ಅಥವಾ ಕಂಕುಳಿನಲ್ಲಿ ಯಾವುದಾದರೂ ಗೆಡ್ಡೆ ಇರೋದು ಗೊತ್ತಾದ್ರೆ (ಅದು ನೋವಿಲ್ದೇ ಇದ್ರೂ ಕೂಡ) ಅದರ ಬಗ್ಗೆ ಕುಟುಂಬ ವೈದ್ಯರಿಗೋ ಅಥವಾ ಸ್ತ್ರೀರೋಗ ತಜ್ಞರಿಗೋ ವರದಿ ಮಾಡ್ಬೇಕು. ಯಾಕೇಂತಂದ್ರೆ, ಬಹಳ ಸಾರಿ ಮೊಲೆಯ ಕ್ಯಾನ್ಸರ್ ಶುರುವಾಗೋದೇ ಈ ಥರದ ನೋವಿಲ್ದೇ ಇರೋ ಗೆಡ್ಡೆಯಿಂದಲೇ!!

ತಪ್ಪುಕಲ್ಪನೆ 2:

ತಪ್ಪುಕಲ್ಪನೆ 2:

ಕುಟುಂಬದಲ್ಲಿ ಯಾರ್ಗಾದ್ರೂ ಸ್ತನದ ಕ್ಯಾನ್ಸರ್ ಇದ್ರಷ್ಟೇ ಸಾಮಾನ್ಯವಾಗಿ ನಮ್ಗೂ ಸ್ತನದ ಕ್ಯಾನ್ಸರ್ ಬರೋದು.

ಸತ್ಯಸಂಗತಿ: ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳೋದರ ಅತೀ ಸಾಮಾನ್ಯ ಕಾರಣವೆಂದರೆ ವಯಸ್ಸು. ಸ್ತನ ಕ್ಯಾನ್ಸರ್ ನ ಬಹುತೇಕ ಪ್ರಕರಣಗಳು ಕಾಣಿಸಿಕೊಳ್ಳೋದೇ 50 ವರ್ಷಗಳಾದ ಮೇಲೆ. ಹಾಗೆ ಕಾಣಿಸಿಕೊಳ್ಳುವುದಕ್ಕೂ ಮೊದಲು ದೀರ್ಘಕಾಲದವರೆಗೆ ಅದು ದೇಹದಲ್ಲಿ ಬೆಳವಣಿಗೆ ಸಾಧಿಸಿರುತ್ತದೆ (ಋತುಚಕ್ರದ ಆರಂಭದ ಹಂತದಿಂದ ಮೊದಲ್ಗೊಂಡು ಋತುಚಕ್ರ ನಿಂತ ಅದೆಷ್ಟೋ ಸಮಯದ ಬಳಿಕವೂ). ಋತುಚಕ್ರದ ಈ ಸುದೀರ್ಘ ಅವಧಿಯಲ್ಲಿ ಕ್ಯಾನ್ಸರ್ ಹಾರ್ಮೋನಿನ ಚಕ್ರದ ಬದಲಾವಣೆಗಳಿಗೆ ಒಳಗಾಗಿರುತ್ತದೆ. ಸ್ತನ ಕ್ಯಾನ್ಸರ್ ಉಂಟಾಗೋದಕ್ಕೂ ಈ ಹಾರ್ಮೋನಿನ ವ್ಯತ್ಯಯಗಳೇ ಕಾರಣವಾಗಿರುತ್ವೆ. ಜೊತೆಗೆ ಬಂಜೆತನ ಹಾಗೂ ಮೊಲೆಹಾಲಿನ ಕೊರತೆಯೂ ಸ್ತನ ಕ್ಯಾನ್ಸರ್ ಗೆ ಕಾರಣವಾಗಿರುತ್ವೆ. ಸ್ತನ ಕ್ಯಾನ್ಸರ್ ಗೆ ದೇಣಿಗೆ ಸಲ್ಲಿಸೋ ಮತ್ತೊಂದು ಅಂಶವೆಂದರೆ ಅದು ಸ್ಥೂಲಕಾಯ ಅಥವಾ ಬೊಜ್ಜು ಮೈ. ಕೌಟುಂಬಿಕ ಸ್ತನ ಕ್ಯಾನ್ಸರ್ ಗಳ ಪೈಕಿ ಶೇ. 10% ರಿಂದ ಶೇ. 15% ರವರೆಗಿನ ಪ್ರಕರಣಗಳಿಗೆ ಕಾರಣವಾಗೋ ಅತ್ಯಂತ ಸಾಮಾನ್ಯ ವಂಶವಾಹಿ ಎಂದರೆ ಅದು ಬಿ.ಆರ್.ಸಿ.ಎ (ಸ್ತನ ಕ್ಯಾನ್ಸರ್ ನ ವಂಶವಾಹಿ) ಮ್ಯುಟೇಷನ್. ಸ್ತ್ರೀಯರಲ್ಲಿ ಸ್ತನ ಕ್ಯಾನ್ಸರ್ ಮತ್ತು ಅಂಡಾಶಯ ಕ್ಯಾನ್ಸರ್ ಗಳೆರಡಕ್ಕೂ ಹಾಗೂ ಪುರುಷರಲ್ಲಿ ಕಾಣಿಸಿಕೊಳ್ಳುವ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಗೂ ಈ ವಂಶವಾಹಿಯೇ ಕಾರಣ. ಹಾಗಾಗಿ, ಈ ಕ್ಯಾನ್ಸರ್ ಗಳಿಗೆ ಚಿಕಿತ್ಸೆ ಕೊಡೋ ಡಾಕ್ಟರರ ಹತ್ರ ಕುಟುಂಬದ ಸಂಪೂರ್ಣ ಆರೋಗ್ಯ ಹಿನ್ನೆಲೆಯನ್ನ ಚರ್ಚಿಸಲೇಬೇಕು.

ತಪ್ಪುಕಲ್ಪನೆ3 :

ತಪ್ಪುಕಲ್ಪನೆ3 :

ಮ್ಯಾಮೋಗ್ರಾಂ ಸ್ತನ ಕ್ಯಾನ್ಸರ್ ನ ತಡೆಗಟ್ಟತ್ತೆ, ವಿಕಿರಣ ಪ್ರಕ್ರಿಯೆಗೆ ಒಳಪಡಬೇಕಾಗೋದ್ರಿಂದ ಮ್ಯಾಮೋಗ್ರಾಂ ಗಳು ಹಾನಿಕಾರಕ.

ಸತ್ಯಸಂಗತಿ : ತೀರಾ ಆರಂಭಿಕ ಹಂತದಲ್ಲೇ ಸ್ತನದ ಕ್ಯಾನ್ಸರ್ ಇರುವಿಕೆಯನ್ನ ಪತ್ತೆಮಾಡೋದಕ್ಕೆ ಒಂದು ಸ್ಕ್ರೀನಿಂಗ್ ಪರೀಕ್ಷೆಯ ರೂಪದಲ್ಲಿ ಮ್ಯಾಮೋಗ್ರಾಂ ಅನ್ನ ಬಳಸಲಾಗುತ್ತೆ. ಹಾಗಾಗಿ ರೋಗಿಯು ಬದುಕುಳಿಯುವ ಸಾಧ್ಯತೆ ಹೆಚ್ಚಾಗಿರುತ್ತೆ. ಮ್ಯಾಮೋಗ್ರಾಂ ನ ಪ್ರಯೋಜನಗಳು ಅಗಾಧ. ಆ ಪ್ರಯೋಜನಗಳಿಗೆ ಹೋಲಿಸಿದರೆ, ಮ್ಯಾಮೋಗ್ರಾಂ ನಲ್ಲಿ ಉಪಯೋಗ್ಸೋ ಸಣ್ಣ ಪ್ರಮಾಣದ ಎಕ್ಸ್-ರೇ ಇಂದಾಗೋ ಅಡ್ಡಪರಿಣಾಮ ಏನೇನೂ ಅಲ್ಲ. ಸ್ತ್ರೀಯರಿಗೆ 50 ವರ್ಷಗಳಾದ ಬಳಿಕ ವರ್ಷಕ್ಕೊಮ್ಮೆ ಮ್ಯಾಮೋಗ್ರಾಂ ಗೆ ಒಳಗಾಗಬೇಕೂಂತ ವೈದ್ಯರು ಸಲಹೆ ಮಾಡ್ತಾರೆ.

ತಪ್ಪುಕಲ್ಪನೆ 4 :

ತಪ್ಪುಕಲ್ಪನೆ 4 :

ಕ್ಯಾನ್ಸರ್ ಕೋಶಗಳ ಹರಡುವಿಕೆಗೆ/ಸೋರಿಕೆಗೆ ಬಯಾಪ್ಸಿಯೇ ಕಾರಣ

ಸತ್ಯಸಂಗತಿ : ಬೇರೆ ಕ್ಯಾನ್ಸರ್ ಗಳ ವಿಚಾರದಲ್ಲೂ ಈ ಒಂದು ತಪ್ಪುಕಲ್ಪನೆ ವ್ಯಾಪಕವಾಗಿ ಹರಡಿಕೊಂಡಿದೆ. ನಿಜ ಹೇಳಬೇಕೆಂದರೆ, ಚಿಕಿತ್ಸೆಯನ್ನ ಆರಂಭಿಸೋದಕ್ಕೆ ಮೊದಲು ಬಯಾಪ್ಸಿ ಮಾಡಿಸ್ಕೊಳ್ಳೋದು ತುಂಬಾನೇ ಮುಖ್ಯ. ಹಾಗಾಗಿಯೇ, ಈ ಆರಂಭಿಕ ಹಂತದಲ್ಲೇ, ಮುಂದಿನ ಸರಿಯಾದ ಚಿಕಿತ್ಸಾ ಕ್ರಮವನ್ನ ನಿರ್ಧರಿಸೋದಕ್ಕಾಗಿ, ಒಂದು ಸಮಗ್ರ ರೋಗನಿದಾನವನ್ನ ಕಂಡುಕೊಳ್ಳೋದಕ್ಕಾಗಿ ಬಯಾಪ್ಸಿ ತುಂಬಾನೇ ಅಗತ್ಯ ಅನ್ನೋದು.

ತಪ್ಪುಕಲ್ಪನೆ 5 :

ತಪ್ಪುಕಲ್ಪನೆ 5 :

ಸ್ತನ ಕ್ಯಾನ್ಸರ್ ರೋಗೀನಾ ಉಳಿಸಿಕೊಳ್ಳೋ ನಿಟ್ನಲ್ಲಿ, ಸ್ತನವನ್ನ ಉಳಿಸಿಕೊಳ್ಳೋದರ ಬದಲು ಸ್ತನದ ಶಸ್ತ್ರ ಚಿಕಿತ್ಸೆ ಅರ್ಥಾತ್ "ಮ್ಯಾಸ್ಟೆಕ್ಟಮಿ" ಅಂತಾ ಕರೆಸಿಕೊಳ್ಳೋ ಶಸ್ತ್ರಚಿಕಿತ್ಸೆನೇ ಉತ್ತಮ

ಸ್ತನವನ್ನ ಉಳಿಸಿಕೊಳ್ಳೋ ಶಸ್ತ್ರಚಿಕಿತ್ಸೆ ಅಂದರೆ, ಕ್ಯಾನ್ಸರ್ ನ ಬಾಧೆಗೆ ಒಳಗಾದ ಸ್ತನದ ಭಾಗವನ್ನ ತೆಗೆದು ಹಾಕೋದು ಮತ್ತು ಆರೋಗ್ಯವಾಗಿರೋ ಭಾಗಾನ ಹಾಗೇ ಉಳುಸ್ಕೊಳ್ಳೋದು.

ಸತ್ಯಸಂಗತಿ: ಸಾಧ್ಯವಾದರೆ ಸ್ತನವನ್ನ ಉಳಿಸಿಕೊಳ್ಳೋ ರೀತಿಯಲ್ಲೇ ಶಸ್ತ್ರಚಿಕಿತ್ಸೇನಾ ಮಾಡಿಸಿಕೊಳ್ಳೋದು ಒಳ್ಳೆಯದು. ರೋಗೀನಾ ಉಳಿಸಿಕೊಳ್ಳೋ ವಿಚಾರದಲ್ಲಿ, ಈ ರೀತಿಯ ಶಸ್ತ್ರಚಿಕಿತ್ಸೆ, ಮ್ಯಾಸ್ಟೆಕ್ಟಮಿ ಗಿಂತಾ ಯಾವುದರಲ್ಲೂ ಕಡಿಮೆ ಇಲ್ಲ.

ತಪ್ಪುಕಲ್ಪನೆ 6 :

ತಪ್ಪುಕಲ್ಪನೆ 6 :

ಎಲ್ಲ ಸ್ತನ ಕ್ಯಾನ್ಸರ್ ಗಳಿಗೂ ಶಸ್ತ್ರಚಿಕಿತ್ಸೆಯೇ ಪ್ರಥಮ ಹಂತದ ಚಿಕಿತ್ಸೆ

ಸತ್ಯಸಂಗತಿ : ಕೆಲನಿರ್ಧಿಷ್ಟ ರೋಗಿಗಳಲ್ಲಿ, ಸ್ತನವನ್ನ ಉಳಿಸಿಕೊಳ್ಳೋ ನಿಟ್ನಲ್ಲಿ, ಕಿಮೋಥೆರಪಿಯೇ ಮೊದಲ ಹೆಜ್ಜೆಯಾಗಿರುತ್ತದೆ ಮತ್ತು ಆ ಬಳಿಕ ಶಸ್ತ್ರಚಿಕಿತ್ಸೆ ಮುಖ್ಯವಾಗುತ್ತದೆ. ಟ್ಯೂಮರ್ ಬೋರ್ಡ್ ನಲ್ಲಿ ಸಂಪೂರ್ಣ ಚಿಕಿತ್ಸಾ ಯೋಜನೆ ಚರ್ಚೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ಮೆಡಿಕಲ್, ಸರ್ಜಿಕಲ್ (ಶಸ್ತ್ರಚಿಕಿತ್ಸಾ ತಜ್ಞರು), ಮತ್ತು ರೇಡಿಯೇಷನ್ ಆಂಕಾಲಜಿಸ್ಟ್ ಗಳಂತಹ ವಿವಿಧ ಕ್ಯಾನ್ಸರ್ ತಜ್ಞರುಗಳನ್ನೊಳಗೊಂಡಿರುತ್ತದೆ ಟ್ಯೂಮರ್ ಬೋರ್ಡ್.

ತಪ್ಪುಕಲ್ಪನೆ 7 :

ತಪ್ಪುಕಲ್ಪನೆ 7 :

ಎಲ್ಲ ಸ್ತನಕ್ಯಾನ್ಸರ್ ರೋಗಿಗಳಿಗೂ ಕಿಮೋಥೆರಪಿ ಅತ್ಯಗತ್ಯ

ಸತ್ಯಸಂಗತಿ : ಸ್ತನಕ್ಯಾನ್ಸರ್ ನ ನಮೂನೆಯ ಮೇಲೆ ಇದು ಅವಲಂಬಿತವಾಗಿದೆ. ಪ್ರಬಲ ಈಸ್ಟ್ರೋಜಿನ್ ರಿಸೆಪ್ಟರ್ ಮತ್ತು ಪ್ರಬಲ ಪ್ರೊಜೆಸ್ಟೆರೋನ್ ರಿಸೆಪ್ಟರ್ ಪೊಸಿಟಿವಿಟಿಯಂತಹ ನಮೂನೆಗಳಿಗೆ ಬಾಯಿಯ ಹಾರ್ಮೋನು ಚಿಕಿತ್ಸೆಯಷ್ಟೇ ಸಾಕಾಗುತ್ತದೆ. ಓಂಕೋಟೈಪ್ ಡಿಎಕ್ಸ್ ಮತ್ತು ಮಾಮ್ಮಪ್ರಿಂಟ್ ಗಳಂತಹ ಕೆಲವು ವರ್ಣತಂತು ಪರೀಕ್ಷೆಗಳೂ ಇದ್ದು, ಜೊತೆಗೆ ಕೆಲನಿರ್ಧಿಷ್ಟ ವರ್ಣತಂತು ಪರೀಕ್ಷೆಗಳೂ ಇವೆ. ಒಂದೇ ಗುಂಪಿಗೆ ಸೇರಿರೋ ರೋಗಿಗಳು ಹಾರ್ಮೋನ್ ಚಿಕಿತ್ಸೆಯಿಂದ ಪ್ರಯೋಜನ ಪಡೆಯುವರೋ ಅಥವಾ ಕಿಮೋಥೆರಪಿಯಿಂದ ಪ್ರಯೋಜನ ಪಡೆಯುವರೋ ಎಂಬುದನ್ನ ನಿರ್ಧರಿಸಲು ಈ ವರ್ಣತಂತು ಪರೀಕ್ಷೆಗಳು ನೆರವಾಗುತ್ತವೆ. ಇದರ ಬಗ್ಗೆ ಚಿಕಿತ್ಸಾತಜ್ಞರು ರೋಗಿಗೆ ವಿವರಿಸುತ್ತಾರೆ.

ತಪ್ಪುಕಲ್ಪನೆ 8 :

ತಪ್ಪುಕಲ್ಪನೆ 8 :

ಕಿಮೋಥೆರಪಿಯು ತಲೆಯನ್ನು ಶಾಶ್ವತವಾಗಿ ಬೋಳಾಗಿಸುತ್ತದೆ

ಸತ್ಯಸಂಗತಿ : ಕಿಮೋಥೆರಪಿ ತಲೆಯನ್ನ ಬೋಳಾಗಿಸುತ್ತದೆ ಅನ್ನೋದೇನೋ ನಿಜ. ಆದರೆ, ಒಮ್ಮೆ ಕಿಮೋಥೆರಪಿಯ ಅವಧಿ ಮುಗಿದ ಮೇಲೆ, ತಿಂಗಳೋ ಅಥವಾ ಎರಡು ತಿಂಗಳುಗಳಲ್ಲಿ ಮತ್ತೆ ಕೂದಲು ಬೆಳೆಯಲಾರಂಭಿಸುತ್ತೆ. ಇನ್ನು ಕೆಲವು ರೋಗಿಗಳಂತೂ ಕಿಮೋಥೆರಪಿಗೆ ಒಳಗಾದ ಮೇಲೆ ಕೂದಲು ಮತ್ತಷ್ಟು ಕಾಂತಿಯುತವಾಗಿ, ದಟ್ಟವಾಗಿ ಬೆಳೆದಿದೆಯೆಂದು ವರದಿ ಮಾಡಿದ್ದಾರೆ.

ತಪ್ಪುಕಲ್ಪನೆ 9 :

ತಪ್ಪುಕಲ್ಪನೆ 9 :

ಸಾಮಾನ್ಯವಾಗಿ ಆರೋಗ್ಯವಾಗೇ ಇರೋ ಸ್ತ್ರೀಯರಲ್ಲಿ ಒಂದೊಮ್ಮೆ ಬಿ.ಆರ್.ಸಿ.ಎ. ವರ್ಣತಂತು ಪಾಸಿಟಿವ್ ಅಂತಾ ಕಂಡುಬಂದಲ್ಲಿ, ಅಂತಹ ಸ್ತ್ರೀಯರು ಉಭಯ ಸ್ತನಗಳನ್ನೂ ತೆಗೆದುಹಾಕುವಂತಹ ಶಸ್ತ್ರಚಿಕಿತ್ಸೆಗೆ (ಮ್ಯಾಸ್ಟೆಕ್ಟಮಿ) ಒಳಪಡಬೇಕಾಗುತ್ತದೆ (ಅಂಜೆಲಿನಾ ಜೂಲಿ ಯ ಹಾಗೆ?)

ಸತ್ಯಸಂಗತಿ : ಪತ್ತೆಯಾದ ಮ್ಯುಟೇಷನ್ ವೈದ್ಯಕೀಯವಾಗಿ ಮಹತ್ವದ್ದು ಹೌದೋ ಅಲ್ಲವೋ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ. ಹೌದು, ಮ್ಯುಟೇಷನ್ ಪ್ರಕ್ರಿಯೆಯು ವೈದ್ಯಕೀಯವಾಗಿ ಮಹತ್ವದ್ದೇ ಆಗಿದ್ದರೆ, ಸ್ತನ ಕ್ಯಾನ್ಸರ್ ಅಥವಾ ಅಂಡಾಶಯದ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಶೇ. 50‍% ಕ್ಕಿಂತಲೂ ಹೆಚ್ಚಾಗಿರುತ್ತದೆ. ಆದರೆ, ಆರೋಗ್ಯಕರ ಜೀವನಶೈಲಿಯನ್ನ ಅಳವಡಿಸಿಕೊಳ್ಳೋದ್ರಿಂದ (ಅಂದರೆ ನಿಯಮಿತವಾಗಿ ವ್ಯಾಯಾಮ ಮಾಡೋದು, ಆ್ಯಂಟಿ-ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರೋ ಊಟ ಮಾಡೋದು, ಪ್ರತ್ಯಕ್ಷ ಅಥವಾ ಪರೋಕ್ಷ ಧೂಮಪಾನ ಮಾಡದಿರುವುದು) ಕ್ಯಾನ್ಸರ್ ಬರೋ ಅಪಾಯ ತಗ್ಗುತ್ತೆ. ಇದರ ಹೊರತಾಗಿ, ವರ್ಷಕ್ಕೊಂದು ಬಾರಿ ಸ್ತನಗಳ ಎಂ.ಆರ್.ಐ. ಮಾಡಿಸ್ಕೊಳ್ಳೋದು ಮತ್ತು ಹಾರ್ಮೋನಿನ ಚಿಕಿತ್ಸೆಗೊಳಗಾಗೋದು ಸೂಕ್ತ.

ಕಡೆಯದಾಗಿ ನಮ್ಮ ಸಮೀಕ್ಷೆಗೆ ಒಳಗಾಗಿದ್ದ ರೋಗಿಯೊಬ್ಬರು ಹೇಳಿದ ಮುತ್ತಿನಂತಹ ಮಾತೊಂದನ್ನ ಇಲ್ಲಿ ಉಲ್ಲೇಖಿಸೋದಕ್ಕೆ ಬಯಸ್ತೇನೆ. ಅದೇನಂದ್ರೆ "ಆತ್ಮಸ್ಥೈರ್ಯವಂತರಾಗಿ ಉಳಿಯೋದಷ್ಟೇ ನಿಮಗಿರೋ ಒಂದೇ ಒಂದು ಆಯ್ಕೆ ಅಂತ ಆಗೋವರೆಗೂ, ನೀವು ಅದೆಷ್ಟು ಆತ್ಮಸ್ಥೈರ್ಯ ಇರೋರು, ನೀವು ಅದೆಷ್ಟು ಧೈರ್ಯವಂತರು ಅನ್ನೋದು ನಿಮ್ಗೇ ಗೊತ್ತಿರಲ್ಲ".....

English summary

Common Breast Cancer Myths Busted

There are lots of myths about breast cancer, here common breast cancer myths busted read on.
Story first published: Wednesday, November 18, 2020, 16:00 [IST]
X