For Quick Alerts
ALLOW NOTIFICATIONS  
For Daily Alerts

ಬೆನ್ನುನೋವಿನ ಶಮನಕ್ಕೆ ಹತ್ತು ಪವರ್‌ಫುಲ್ ನೈಸರ್ಗಿಕ ಎಣ್ಣೆಗಳು

|

ಪ್ರತಿಯೊಬ್ಬರಿಗೂ ಬೆನ್ನುನೋವು ಒಂದಲ್ಲಾ ಒಂದು ಬಾರಿ ಎದುರಾಗಿಯೇ ಇರುತ್ತದೆ. ಕೆಲವರಿಗಂತೂ ಬೆನ್ನುನೋವು ನಿತ್ಯದ ಬವಣೆಯೂ ಹೌದು. ಆಧುನಿಕ ಜೀವನದಲ್ಲಿ ಅನಿವಾರ್ಯವಾದ ಜಡತೆ ಇದಕ್ಕೆ ಪ್ರಮುಖ ಕಾರಣ. ಆದರೆ ಈ ನೋವಿನ ಬಗ್ಗೆ ಸಮಾಧಾನಪಟ್ಟುಕೊಳ್ಳಬಹುದಾದ ಅಂಶವೆಂದರೆ 95%ರಷ್ಟು ಪ್ರಕರಣಗಳಲ್ಲಿ ಈ ನೋವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ. ಆದರೆ ಒಂದು ವೇಳೆ ಬೆನ್ನುನೋವನ್ನು ಅಲಕ್ಷಿಸಿ ಹೆಚ್ಚಿನ ಕಾಲದವರೆಗೆ ಚಿಕಿತ್ಸೆ ಪಡೆಯದೇ ಇದ್ದರೆ ಇದು ನಿಧಾನವಾಗಿ ಉಲ್ಬಣಿಸುತ್ತಾ ಗಂಭೀರ ರೂಪ ಪಡೆಯಬಹುದು.

ಬೆನ್ನುನೋವಿಗೆ ನೀಡಲಾಗುತ್ತಿರುವ ಚಿಕಿತ್ಸೆಗಳಲ್ಲಿ ಹೆಚ್ಚು ಜನಪ್ರಿಯವಾದವು ಎಂದರೆ ಯೋಗಾಭ್ಯಾಸ, ಫಿಸಿಯೋಥೆರಪಿ, ನೋವು ನಿವಾರಕ ಔಷಧಿಗಳು, ಅಕ್ಯುಪಂಕ್ಚರ್ ಇತ್ಯಾದಿಗಳು. ಸಾಮಾನ್ಯವಾಗಿ ಕೆಲವರಿಗೆ ಅಲ್ಪಾವಧಿಗೆ ಬೆನ್ನುನೋವು ಎದುರಾದರೆ ಇದಕ್ಕೆ ಸಾಕಷ್ಟು ವಿಶ್ರಾಂತಿ ಹಾಗೂ ಕೆಲವು ಸುಲಭ ಔಷಧಿಗಳೇ ಸಾಕಾಗುತ್ತವೆ. ಆದರೆ ತೀವ್ರತರದ ಬೆನ್ನುನೋವಿಗೆ ಮಾತ್ರ ಹೆಚ್ಚಿನ ಕಾಳಜಿ, ವಿಶೇಷ ಔಷಧಿಗಳು ಹಾಗೂ ಜೀವನಕ್ರಮದಲ್ಲಿ ಬದಲಾವನೆ ಅವಶ್ಯವಾಗಿವೆ.

Oils For Back Pain

ಬೆನ್ನುನೋವಿನ ಶಮನಕ್ಕೆ ನಿಸರ್ಗದಲ್ಲಿಯೂ ಕೆಲವಾರು ಆಯ್ಕೆಗಳಿದ್ದು ಅವಶ್ಯಕ ತೈಲಗಳು ಇದರಲ್ಲಿ ಪ್ರಮುಖವಾಗಿವೆ. ಸಾಮಾನ್ಯವಾಗಿ ಇವುಗಳನ್ನು ಎಲೆಗಳು, ಬೀಜಗಳು, ಹೂವುಗಳು, ಹಣ್ಣುಗಳು ಹಾಗೂ ತೊಗಟೆಯಿಂದ ಸೆಳೆಯಲ್ಪಟ್ಟದ್ದಾಗಿರುತ್ತದೆ. ಅಪ್ಪಟ ಸಾಂದ್ರತೆಯಲ್ಲಿ ಇವು ಅತಿ ಹೆಚ್ಚು ಪ್ರಭಾವ ಶಾಲಿಯಾಗಿರುವ ಕಾರಣ ಇವುಗಳನ್ನು ಇತರ ಲಘುಪ್ರಭಾವದ ಹಾಗೂ ಅವಶ್ಯಕ ತೈಲದ ಮೂಲಗುಣಗಳನ್ನು ಬದಲಿಸದ ಇತರ ಎಣ್ಣೆಗಳೊಂದಿಗೆ ಮಿಶ್ರಣ ಮಾಡಿ ನೀಡಲಾಗುತ್ತದೆ. ಈ ಎಣ್ಣೆಗಳನ್ನು ನೋವಿರುವ ಭಾಗದ ಮೇಲೆ ನೇರವಾಗಿ ಹಚ್ಚಿಕೊಂಡಾಗ ನೋವು ಹೆಚ್ಚೂ ಕಡಿಮೆ ಇಲ್ಲವಾಗುತ್ತದೆ. ಬನ್ನಿ, ಈ ಅವಶ್ಯಕ ತೈಲಗಳು ಯಾವುವು ಎಂಬುದನ್ನು ನೋಡೋಣ....

ಪುದಿನಾ ಎಣ್ಣೆ (Peppermint oil)

ಅಪ್ಪಟ ಪು಼ದಿನಾ ಎಣ್ಣೆಯಲ್ಲಿ ನಲವತ್ತನಾಲ್ಕು ಶೇಖಡಾ ಮೆಂಥಾಲ್ ಇರುತ್ತದೆ. ಈ ಮೆಂಥಾಲ್ ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಶೀಘ್ರವಾಗಿ ಇಳಿದು ರಕ್ತನಾಳಗಳನ್ನು ಪ್ರಚೋದಿಸುವ ಮೂಲಕ ರಕ್ತಸಂಚಾರವನ್ನು ಹೆಚ್ಚಿಸಿ ನೋವನ್ನು ಇಲ್ಲವಾಗಿಸುತ್ತದೆ ಹಾಗೂ ಸ್ನಾಯುಗಳನ್ನೂ ಸಡಿಲಿಸುತ್ತದೆ. ತನ್ಮೂಲಕ ಈ ಭಾಗದಲ್ಲಿ ತಂಪಾಗಿರುವ ಭಾವನೆಯನ್ನು ಮೂಡಿಸುತ್ತದೆ. ಈ ಎಣ್ಣೆಯನ್ನು ನೋವಿರುವ ಭಾಗಕ್ಕೆ ನೇರವಾಗಿ ಹಚ್ಚಿ ಮಸಾಜ್ ಮಾಡಿಕೊಳ್ಳಭೌದು ಅಥವಾ ಬಿಸಿನೀರಿನ ಸ್ನಾನದ ನೀರಿನಲ್ಲಿ ಬೆರೆಸಿ ನೋವಿರುವ ಭಾಗಕ್ಕೆ ಹೆಚ್ಚು ಶಾಖ ತಗಲುವಂತೆ ನೀರು ಸುರಿಯುವ ಮೂಲಕ ಹಲವು ಬಗೆಯ ನೋವುಗಳನ್ನು ನಿವಾರಿಸಬಹುದು.

ವಿಂಟರ್ ಗ್ರೀನ್ ಎಣ್ಣೆ (Wintergreen oil)

ವಿಂಟರ್ ಗ್ರೀನ್ ಎಂಬ ಸಸ್ಯದ ಎಲೆಗಳನ್ನು ನೀರಿನಲ್ಲಿ ನೆನೆಸಿ ಇದರ ಮೂಲಕ ಹಬೆಯನ್ನು ಹಾಯಿಸಿ ಈ ಹಬೆಯನ್ನು ತಣಿಸಿ ಸಂಸ್ಕರಿಸಿ ಎಣ್ಣೆಯನ್ನು ಪ್ರತ್ಯೇಕಿಸಲಾಗುತ್ತದೆ. ಈ ಎಣ್ಣೆಯಲ್ಲಿಯೂ ಪುದಿನಾ ಎಣ್ಣೆಯಂತಹ ಗುಣಗಳೇ ಇವೆ. ಇದರಲ್ಲಿ ಪ್ರಮುಖವಾಗಿ ಮೀಥೈಲ್ ಸ್ಯಾಲಿಸೈಲೇಟ್ ಎಂಬ ಪೋಷಕಾಂಶವಿದ್ದು ಸರಿಸುಮಾರು ಆಸ್ಪಿರಿನ್ ನಂತಹದ್ದೇ ಗುಣಗಳನ್ನು ಪಡೆದಿದೆ. ಈ ಎಣ್ನೆಯನ್ನು ವಿಶೇಷವಾಗಿ ಸ್ನಾಯುಗಳ ನೋವಿನ ನಿವಾರಣೆಗಾಗಿ ಬಳಸಲಾಗುತ್ತದೆ. ಈ ಎಣ್ಣೆಯಲ್ಲಿ 'ಉರಿಯೂತ-ವಿರುದ್ದ' (counter-irritant) ಗುಣಗಳಿದ್ದು ಯಾವ ಭಾಗದಲ್ಲಿ ಸ್ನಾಯುಗಳಲ್ಲಿ ನೋವಿದ್ದು ಚರ್ಮ ಬಾತುಕೊಂಡು ಉರಿ ಎದುರಾಗಿರುತ್ತದೆಯೋ ಅಲ್ಲಿ ಈ ಎಣ್ಣೆಯನ್ನು ಹಚ್ಚಿದಾಗ ತಕ್ಷಣವೇ ಬಾವು ಮತ್ತು ಉರಿ ಇಲ್ಲವಾಗುತ್ತದೆ. ವಿಶೇಷವಾಗಿ ಈ ಎಣ್ಣೆಯನ್ನು ಕೆಳಬೆನ್ನನ ನೋವಿನ ನಿವಾರಣೆಗೆ ನೇರವಾಗಿ ಹಚ್ಚಿಕೊಳ್ಳಬಹುದು.

ಶುಂಠಿಯ ಎಣ್ಣೆ

ಶುಂಠಿ ಉತ್ತಮ ಸಾಂಬಾರ ಪದಾರ್ಥವಾಗಿದ್ದು ಅಡುಗೆಯ ರುಚಿಯನ್ನು ಹೆಚ್ಚಿಸುವ ಜೊತೆಗೇ ವಿಶ್ವದ ಎಲ್ಲಾ ಕಡೆಗಳಲ್ಲಿ ಅತ್ಯುತ್ತಮ ಔಷಧೀಯ ಮೂಲಿಕೆಯೆಂದೂ ಪರಿಗಣಿಸಲ್ಪಟ್ಟಿದೆ. ಇದರ ಉರಿಯೂತ ನಿವಾರಕ ಗುಣಗಳು ಹಲವಾರು ಬಗೆಯಲ್ಲಿ ಆರೋಗ್ಯಕ್ಕೆ ನೆರವಾಗುತ್ತದೆ. ವಿಶೇಷವಾಗಿ ತೀವ್ರತರದ ಬೆನ್ನುನೋವಿನ ಶಮನಕ್ಕೂ ಶುಂಠಿಯ ಎಣ್ಣೆ ಅತ್ಯುತ್ತಮ ಶಮನಕಾರಿಯಾಗಿದೆ. ಈ ಎಣ್ಣೆ ಅಂಗಡಿಗಳಲ್ಲಿ ಸಿದ್ಧ ರೂಪದಲ್ಲಿಯೂ ಲಭ್ಯವಿದೆ ಹಾಗೂ ಮನೆಯಲ್ಲಿಯೂ ಸುಲಭವಾಗಿ ತಯಾರಿಸಿಕೊಳ್ಳಬಹುದು. ಈ ಎಣ್ಣೆಯನ್ನು ನೇರವಾಗಿ ನೋವಿರುವ ಭಾಗಕ್ಕೆ ಹಚ್ಚಿಕೊಂಡಾಗ ಕೇವಲ ಮೂವತ್ತು ನಿಮಿಷಗಳಲ್ಲಿಯೇ ಪರಿಣಾಮವನ್ನು ಕಾಣಬಹುದು.

ಹುಲ್ಲೆಣ್ಣೆ (Lemongrass oil)

ಲೆಮನ್ ಗ್ರಾಸ್ ಎಂಬ ಸಸ್ಯದ ಎಲೆ ಮತ್ತು ದಂಟುಗಳಿಂದ ಪ್ರತ್ಯೇಕಿಸಲ್ಪಟ್ಟ ಈ ಅವಶ್ಯಕ ಎಣ್ಣೆ ಅತ್ಯುತ್ತಮ ಶಿಲೀಂಧ್ರ ನಿವಾರಕ, ಬ್ಯಾಕ್ಟೀರಿಯಾ ನಿವಾರಕ, ಉರಿಯೂತ ನಿವಾರಕ ಗುಣಗಳನ್ನು ಪಡೆದಿದೆ. ಉರಿಯೂತದ ಪರಿಣಾಮವಾಗಿ ಎದುರಾಗಿರುವ ಯಾವುದೇ ಬಗೆಯ ನೋವುಗಳನ್ನು ನಿವಾರಿಸಲು ಈ ಎಣ್ಣೆಯನ್ನು ಬಳಸಬಹುದು.

Oils For Back Pain

ಲ್ಯಾವೆಂಡರ್ ಎಣ್ಣೆ (Lavender oil)

ಇದೊಂದು ಬಹುವಿಧ ಬಳಕೆಯ ಎಣ್ಣೆಯಾಗಿದ್ದು ವಿಶೇಷವಾಗಿ ಅರೋಮಾಥೆರಪಿ ಅಥವಾ ಸುವಾಸನೆಯ ಮೂಲಕ ನೀಡಲಾಗುವ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಇದರ ಪ್ರಬಲ ಉರಿಯೂತ ನಿವಾರಕ ಗುಣಗಳು ಬೆನ್ನು ನೋವನ್ನೂ ಕಡಿಮೆಗೊಳಿಸಲು ಶಕ್ತವಾಗಿವೆ. ವಿಶೇಷವಾಗಿ ನೋವಿರುವ ಯಾವುದೇ ಭಾಗದಲ್ಲಿ ಈ ಎಣ್ಣೆಯನ್ನು ಹಚ್ಚಿಕೊಂಡಾಗ ಹಾಗೂ ಉರಿಯೂತದ ಪರಿಣಾಮವಾಗಿ ಬಾವು ಕಂಡುಬಂದಾಗ ಈ ಎಣ್ನೆಯನ್ನು ಇನ್ನೊಂದು ಎಣ್ಣೆಯೊಂದಿಗೆ ಬೆರೆಸಿ ಕೊಂಚವೇ ಬಿಸಿ ಮಾಡಿ ನೇರವಾಗಿ ಹಚ್ಚಿಕೊಳ್ಳಬಹುದು. ಅಲ್ಲದೇ ನರಗಳನ್ನು ಶಾಂತಗೊಳಿಸಿ ರಕ್ತಪರಿಚಲನೆಯನ್ನು ಸುಗಮಗೊಳಿಸುವ ಮೂಲಕ ಮಾನಸಿಕ ಒತ್ತಡವನ್ನು ನಿವಾರಿಸಿ ನಿದ್ರಾರಾಹಿತ್ಯದ ತೊಂದರೆಯನ್ನೂ ನಿವಾರಿಸುತ್ತದೆ.

ನೀಲಗಿರಿ ಎಣ್ಣೆ (Eucalyptus oil)

ಇದೊಂದು ಪ್ರಬಲ ಬ್ಯಾಕ್ಟೀರಿಯಾ ನಿವಾರಕ ಹಾಗೂ ಉರಿಯೂತ ನಿವಾರಕ ಗುಣ ಹೊಂದಿರುವ ಎಣ್ಣೆಯಾಗಿದ್ದು ಸ್ನಾಯುಗಳ ಸೆಡೆತ, ಸ್ನಾಯುಗಳ ನೋವು ಹಾಗೂ ಬಾವುಗಳನ್ನು ತಕ್ಷಣವೇ ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಇದರ ಸೆಡೆತನಿವಾರಕ ಗುಣ ಯಾವುದೇ ಬಗೆಯ ಸ್ನಾಯುಗಳ ಸೆಡೆತವನ್ನು ನಿವಾರಿಸಿ ಸ್ನಾಯುಗಳು ನಿರಾಳವಾಗಲು ನೆರವಾಗುತ್ತದೆ. ಆದರೆ ಈ ಎಣ್ಣೆ ಅಪ್ಪಟವಾಗಿದ್ದ ಅತ್ಯಂತ ಪ್ರಬಲವಾಗಿದ್ದು ಈ ಪ್ರಬಲತೆಯನ್ನು ನಮ್ಮ ದೇಹ ತಾಳಿಕೊಳ್ಳಲು ಸಾಧ್ಯವಿಲ್ಲದ ಕಾರಣ ಇದನ್ನು ಸಮಪ್ರಮಾಣದಲ್ಲಿ ಬೇರೊಂದು ಎಣ್ಣೆಯ ಜೊತೆ ಬೆರೆಸಿ ಹಚ್ಚಬೇಕು.

ರೋಸ್ಮರಿ ಎಣ್ಣೆ (Rosemary oil)

ರೋಸ್ಮರಿ ಎಂಬ ಮೂಲಿಕೆ ಅಡುಗೆಗೆ ಬಳಸಲಾಗುವ ಸಾಂಬಾರ ಪದಾರ್ಥವಾಗಿದ್ದರೂ ಬೆನ್ನುನೋವು, ರ್‍ಹೂಮಾಟಿಕ್ ನೋವು ಹಾಗೂ ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಎದುರಾಗುವ ಹೊಟ್ಟೆಯ ಸೆಡೆತಗಳನ್ನು ನಿವಾರಿಸಲು ಅತ್ಯುತ್ತಮ ಔಷಧಿಯಾಗಿದೆ. ಈ ಎಣ್ಣೆಯಲ್ಲಿಯೂ ಸೆಡೆತನಿವಾರಕ ಹಾಗೂ ಗುಣಪಡಿಸುವ ಪೋಷಕಾಂಶಗಳಿವೆ.

ಗಂಧದ ಎಣ್ಣೆ (Sandalwood oil)

ನಮ್ಮ ಆಯುರ್ವೇದ ಸಾವಿರಾರು ವರ್ಷಗಳಿಂದ ಗಂಧದ ಎಣ್ಣೆಯನ್ನು ಔಷಧೀಯ ರೂಪದಲ್ಲಿ ಬಳಸುತ್ತಾ ಬಂದಿದೆ. ಈ ಎಣ್ಣೆಯ ಸುಗಂಧ ಅತಿ ಹೆಚ್ಚು ಕಾಲ ಉಳಿಯುತ್ತದೆ ಹಾಗೂ ಇದರ ಉರಿಯೂತ ನಿವಾರಕ ಗುಣ ಉರಿಯೂತದಿಂದ ಎದುರಾಗಿದ್ದ ನೋವನ್ನು ನಿವಾರಿಸಲು ನೆರವಾಗುತ್ತದೆ. ವಿಶೇಷವಾಗಿ ಸಿಯಾಟಿಕಾ (sciatica) ಅಥವಾ ಸೊಂಟದಿಂದ ಪ್ರಾರಂಭವಾಗಿ ಕಾಲುಗಳ ತುದಿಯವರೆಗೆ ಸಾಗುವ ಪ್ರಮುಖ ರಕ್ತನಾಳದ ಉರಿಯೂತದ ಪರಿಣಾಮವಾಗಿ ಎದುರಾಗುವ ನೋವಿಗೆ ಗಂಧದ ಎಣ್ಣೆ ಅತ್ಯುತ್ತಮವಾದ ಪರಿಹಾರವಾಗಿದೆ.

ತುಳಸಿ ಎಣ್ಣೆ (Basil oil)

ಸ್ನಾಯುಗಳ ಸೆಡೆತದಿಂದ ಎದುರಾಗಿರುವ ನೋವನ್ನು ನಿವಾರಿಸಲು ತುಳಸಿ ಎಣ್ಣೆಯ ಶಮನಕಾರಕ ಗುಣ ನೆರವಿಗೆ ಬರುತ್ತದೆ. ವಿಶೇಷವಾಗಿ ನ್ಯೂರೈಟಿಸ್ (neuritis) ಅಥವಾ ಕಣ್ಣಿನೀಂದ ಮೆದುಳಿಗೆ ಸಂದೇಶಗಳನ್ನು ರವಾನಿಸುವ ದೃಷ್ಟಿನರದಲ್ಲಿ ಎದುರಾಗುವ ನೋವನ್ನು ನಿವಾರಿಸಲು ಈ ಎಣ್ಣೆ ಉತ್ತಮ ಆಯ್ಕೆಯಾಗಿದೆ.

Oils For Back Pain

ಕ್ಯಾಮೋಮೈಲ್ ಎಣ್ಣೆ (Chamomile oil)

ನರಗಳಲ್ಲಿ ಎದುರಾಗುವ ಉರಿಯೂತವನ್ನು ನಿವಾರಿಸಲು ಈ ಎಣ್ಣೆ ಅತ್ಯುತ್ತಮವಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳಿದ್ದು ಸ್ನಾಯುಗಳ ಸೆಡೆತ ಹಾಗೂ ದೇಹದಲ್ಲಿ ಎದುರಾಗುವ ಉರಿಯೂತಗಳನ್ನು ನಿವಾರಿಸಲು ನೆರವಾಗುತ್ತದೆ.

ಅವಶ್ಯಕ ಎಣ್ಣೆಗಳನ್ನು ಬಳಸುವುದು ಹೇಗೆ?

ಎಲ್ಲಾ ಅವಶ್ಯಕ ತೈಲಗಳು ಸುಗಂಧಭರಿತವಾದ ಕಾರಣ ಇವುಗಳನ್ನು ಅರೋಮಾಥೆರಪಿ ಅಥವಾ ಸುಗ್ರಾಣಚಿಕಿತ್ಸೆಯಲ್ಲಿಯೂ ಬಳಸಲಾಗುತ್ತದೆ. ಇದಕ್ಕಾಗಿ ಕೆಲವು ತೊಟ್ಟು ತೈಲವನ್ನು ಸ್ವಚ್ಛಬಟ್ಟೆಯ ಮೇಲೆ ಚಿಮುಕಿಸಿ ಸುಗಂಧವನ್ನು ದೀರ್ಘ ಉಸಿರಾಟದ ಮೂಲಕ ಎಳೆದುಕೊಳ್ಳಬೇಕು. ಬೆನ್ನು ನೋವಿದ್ದರೆ ಈ ಎಣ್ಣೆಯನ್ನು (ಪ್ರಾಬಲ್ಯವನ್ನು ಅನುಸರಿಸಿ ಬೇರೆ ಎಣ್ಣೆಯೊಂದಿಗೆ ಮಿಶ್ರಣ ಮಾಡಿ) ನೋವಿರುವ ಭಾಗಕ್ಕೆ ಹಚ್ಚಿ ತೀಡಿಕೊಳ್ಳಬಹುದು. ಅಥವಾ ಬಿಸಿನೀರಿನಲ್ಲಿ ಬೆರೆಸಿ ಸ್ನಾನವನ್ನೂ ಮಾಡಬಹುದು.

ಚರ್ಮಕ್ಕೆ ಉರಿಯಾಗದಂತೆ ಬಳಸುವ ವಿಧಾನವನ್ನು ನೋಡೋಣ:

ನೇರವಾಗಿ ಹಚ್ಚಿಕೊಳ್ಳಲು

ಚರ್ಮದ ಮೇಲೆ ನೇರವಾಗಿ ಯಾವುದೇ ಅವಶ್ಯಕ ತೈಲವನ್ನು ಹಚ್ಚಿಕೊಳ್ಳುವ ಮೊದಲು ನಿಮ್ಮ ಆಯ್ಕೆಯ ಇತರ ಎಣ್ಣೆಯೊಂದಿಗೆ ಇದನ್ನು ಮಿಶ್ರಣ ಮಾಡಬೇಕು. ಆಲಿವ್ ಎಣ್ಣೆ, ಬಾದಾಮಿ ಎಣ್ಣೆ ಹಾಗೂ ಹೋಹೋಬಾ ಎಣ್ಣೆಗಳು ಸೂಕ್ತ ಆಯ್ಕೆಗಳಾಗಿವೆ. ಆರು ಚಿಕ್ಕ ಚಮಚ ಈ ಎಣ್ಣೆಗೆ ಆರು ತೊಟ್ಟು ಅವಶ್ಯಕ ತೈಲವನ್ನು ಬೆರೆಸಿ. ನೋವಿರುವ ಭಾಗಕ್ಕೆ ಹಚ್ಚಿಕೊಳ್ಳುವ ಮೊದಲು ದೇಹದ ಬೇರೊಂದು ಭಾಗದ ಚರ್ಮಕ್ಕೆ ಎಣ್ಣೆಯನ್ನು ಹಚ್ಚಿ ಅಲರ್ಜಿಕಾರಕವೇ ಎಂದು ಪರೀಕ್ಷಿಸಿಕೊಳ್ಳಬೇಕು. ಹಚ್ಚಿದ ಒಂದು ದಿನದ ಬಳಿಕವೂ ಯಾವುದೇ ಬಗೆಯ ಅಲರ್ಜಿಯ ಸೂಚನೆಗಳು ಕಂಡುಬರದೇ ಇದ್ದಲ್ಲಿ ಮಾತ್ರ ಇದು ನಿಮಗೆ ಸುರಕ್ಷಿತ ಎಂದು ಪರಿಗಣಿಸಬಹುದು. ಬಳಿಕವೇ ನೋವಿರುವ ಭಾಗಕ್ಕೆ ಹಚ್ಚಿಕೊಳ್ಳಲು ತೊಡಗಬೇಕು. ಸಾಕಷ್ಟು ಪ್ರಮಾಣದ ಮಿಶ್ರಣವನ್ನು ನೋವಿರುವ ಭಾಗಕ್ಕೆ ಹಚ್ಚಿ ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಿಕೊಳ್ಳಬೇಕು. ಈ ಮೂಲಕ ಎಣ್ಣೆ ಚರ್ಮದಲ್ಲಿ ಹೀರಲ್ಪಟ್ಟು ಶೀಘ್ರವೇ ನೋವು ಕಡಿಮೆಯಾಗುತ್ತದೆ.

ಆಘ್ರಾಣ

ಕೆಲವು ತೊಟ್ಟು ಅವಶ್ಯಕ ತೈಲವನ್ನು ಕೊಂಚ ನೀರಿನಲ್ಲಿ ಬೆರೆಸಿ ಡಿಫ್ಯೂಸರ್ ಯಂತ್ರದಲ್ಲಿ ಹಾಕಬೇಕು. ಈ ಯಂತ್ರದ ಹಬೆಯನ್ನು ಆಘ್ರಾಣಿಸುವ ಮೂಲಕ ಒಟ್ಟಾರೆ ದೇಹ ಮತ್ತು ಮನಸ್ಸಿಗೆ ಮುದ ನೀಡುವ ಜೊತೆಗೇ ಸ್ನಾಯುಗಳು ನಿರಾಳಗೊಂಡು ನೋವನ್ನು ಇಲ್ಲವಾಗಿಸುತ್ತದೆ.

ಬಿಸಿನೀರಿನ ಸ್ನಾನ

ನೀವು ಸ್ನಾನ ಮಾಡುವ ತೊಟ್ಟಿಯ ನೀರಿನಲ್ಲಿ ಸುಮಾರು ಹತ್ತು ತೊಟ್ಟು ಅವಶ್ಯಕ ತೈಲವನ್ನು ಹಾಕಿ ಬೆರೆಸಿ ಈ ನೀರಿನಲ್ಲಿ ದೇಹವನ್ನು ಮುಳುಗಿಸಿಡುವ ಅಥವಾ ಸುರಿದುಕೊಂಡು ಸ್ನಾನ ಮಾಡುವ ಮೂಲಕ ಉರಿಯೂತ ನಿವಾರಣೆಗೊಂಡು ನೋವು ಇಲ್ಲವಾಗುತ್ತದೆ. ಸಾಮಾನ್ಯವಾಗಿ ಯಾವುದೇ ಅವಶ್ಯಕ ತೈಲದಲ್ಲಿ ಯಾವುದೇ ಅಡ್ಡಪರಿಣಾಮ ಕಂಡುಬರುವುದಿಲ್ಲ.

ಆದರೂ, ಇದನ್ನು ತೀವ್ರತರದ ಬೆನ್ನುನೋವಿಗೆ ಚಿಕಿತ್ಸಾ ರೂಪದಲ್ಲಿ ಪ್ರಾರಂಭಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದೇ ಮುಂದುವರೆಯಿಸಿ. ಗರ್ಭಿಣಿಯರು, ಬಾಣಂತಿಯರು ಅಥವಾ ಬೇರೆ ಆರೋಗ್ಯಸಂಬಂಧಿತ ತೊಂದರೆ ಇರುವ ವ್ಯಕ್ತಿಗಳು ವೈದ್ಯರ ಸಲಹೆಯನ್ನು ಪಡೆಯುವುದು ಅವಶ್ಯ. ವಿಶೇಷವಾಗಿ ಈ ಎಣ್ಣೆಗಳು ಕಣ್ಣು ಮತ್ತು ಬಾಯಿಯ ಸಂಪರ್ಕಕ್ಕೆ ಬರದಂತೆ ಜಾಗ್ರತೆ ವಹಿಸಿ. ಈ ಎಣ್ಣೆಯನ್ನು ಹಚ್ಚಿಕೊಂಡ ಬಳಿಕ ಕೈಗಳನ್ನು ಚೆನ್ನಾಗಿ ತೊಳೆದುಕೊಂಡ ಬಳಿಕವೇ ಇತರ ಕಾರ್ಯಗಳನ್ನು ನಿರ್ವಹಿಸಿ.

English summary

10 Natural Oils For Back Pain

Chronic back pain can sometimes be recurring and irritating. Yoga, physiotherapy, pain medication and acupuncture are a few popular ways to deal with this condition. However, some lifestyle modifications can also go a long way. Essential oils like peppermint, wintergreen, lemongrass, eucalyptus, basil etc. can be helpful in relieving back pain.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X