For Quick Alerts
ALLOW NOTIFICATIONS  
For Daily Alerts

ಕಪ್ಪು ಮೂತ್ರ: ಕಾರಣಗಳು, ಪತ್ತೆಹಚ್ಚುವಿಕೆ, ಚಿಕಿತ್ಸೆ ಮತ್ತು ತಡೆಗಟ್ಟುವ ವಿಧಾನ

By Arshad
|

ಮೂತ್ರ ಸಾಮಾನ್ಯವಾಗಿ ಬಣ್ಣವಿಲ್ಲದ್ದಾಗಿದ್ದು ಹೆಚ್ಚು ಹೊತ್ತು ತಡೆದು ಹಿಡಿದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರ ಹೊರತಾಗಿ ಕೆಲವು ಕಾಯಿಲೆಗಳ ಪರಿಣಾಮದಿಂದ ಗಾಢಹಳದಿ, ಕಂದು ಅಥವಾ ಕೆಂಪುಬಣ್ಣ ಪಡೆಯಬಹುದು. ಆದರೆ ಇದೇನಿದು ಕರಿ ಮೂತ್ರ? ಹೆಸರು ಕೊಂಚ ಹೆದರಿಕೆ ಹುಟ್ಟಿಸುತ್ತದೆ ಅಲ್ಲವೇ? ಹೆಸರೇ ತಿಳಿಸುವಂತೆ ಇದು ಅತಿಗಾಢ ವರ್ಣ ಹೊಂದಿರುವ ಮೂತ್ರವಾಗಿದ್ದು ಇದಕ್ಕೆ ಹಲವಾರು ಕಾರಣಗಳಿವೆ. ಕೆಲವು ಔಷಧಿ ಅಥವಾ ಆಹಾರಗಳ ಸೇವನೆಯ ಪರಿಣಾಮವಾಗಿ ಇದು ತಾತ್ಕಾಲಿಕವಾಗಿ ಕಂಡುಬರಬಹುದು ಅಥವಾ ಯಾವುದಾದರೂ ಅನಾರೋಗ್ಯದ ಪರಿಣಾಮವಾಗಿರಬಹುದು. ಇಂದಿನ ಲೇಖನದಲ್ಲಿ ಈ ಸ್ಥಿತಿ ಹೇಗೆ ಎದುರಾಗುತ್ತದೆ, ಇದನ್ನು ಪತ್ತೆಹಚ್ಚುವುದು ಹೇಗೆ, ಚಿಕಿತ್ಸೆ ಹಾಗೂ ತಡೆಗಟ್ಟುವ ವಿಧಾನಗಳ ಬಗ್ಗೆ ಅಗತ್ಯ ಮಾಹಿತಿಗಳನ್ನು ಒದಗಿಸಲಾಗಿದೆ.

ಕರಿಮೂತ್ರವನ್ನು ಒಂದು ಕಾಯಿಲೆ ಎಂದೇ ವೈದ್ಯವಿಜ್ಞಾನ ಪರಿಗಣಿಸುತ್ತದೆ ಹಾಗೂ ಇದಕ್ಕೆ 'alkaptonuria' ಅಥವಾ 'black bone disease' ಎಂಬ ಹೆಸರನ್ನಿಡಲಾಗಿದೆ. ಸಾಮಾನ್ಯವಾಗಿ ಇದು ಅನುವಂಶಿಕ ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಇರುವ ವ್ಯಕ್ತಿಗಳ ಮೂತ್ರ ವಿಸರ್ಜನೆಯ ಸಮಯದಲ್ಲಿ ಆರೋಗ್ಯವಂತರ ಮೂತ್ರದಂತೆಯೇ ಅಥವಾ ಗಾಬರಿಪಡಿಸುವಷ್ಟೇನೂ ಗಾಢವಿರುವುದಿಲ್ಲ. ಆದರೆ ಮೂತ್ರವನ್ನು ಒಂದು ಬಟ್ಟಲಿನಲ್ಲಿ ಸಂಗ್ರಹಿಸಿಟ್ಟು ಕೊಂಚ ಕಾಲ ಹಾಗೇ ಅಲುಗಾಡದಂತೆ ಇರಿಸಿದರೆ ನಿಧಾನವಾಗಿ ಇದು ಕರ್ರಗಾಗುತ್ತಾ ಕಪ್ಪನೆಯ ದ್ರವದಂತಾಗುತ್ತದೆ.

dark orange urine

ಕರಿಮೂತ್ರಕ್ಕೆ ಕಾರಣಗಳೇನು?

ಇದಕ್ಕೆ ಕೆಲವು ಆಹಾರಗಳು, ಕೆಲವು ಬಗೆಯ ಅನಾರೋಗ್ಯಗಳು ಹಾಗೂ ಕೆಲವು ಔಷಧಿಗಳ ಅಡ್ಡಪರಿಣಾಮವೂ ಆಗಿರಬಹುದು. ಕೆಲವು ಪ್ರಮುಖ ಕಾರಣಗಳನ್ನು ಕೆಳಗೆ ವಿವರಿಸಲಾಗಿದೆ.

1. ಆಹಾರಕ್ಕೆ ಸಂಬಂಧಿಸಿದ ಬದಲಾವಣೆಗಳು:

ಒಂದು ವೇಳೆ ಎಂದೂ ಇಲ್ಲದ ಈ ತೊಂದರೆ ಯಾವುದೋ ಆಹಾರ ಸೇವನೆಯ ಬಳಿಕ ಕಂಡುಬಂದರೆ ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಈ ಆಹಾರ ಯಾವುದು ಎಂದು ಕೊಂಚ ಗಮನಿಸಿ ಇದರ ಸೇವನೆಯನ್ನು ಹತ್ತಿಕ್ಕಿದರಾಯ್ತು, ಕೆಲವೇ ದಿನಗಳಲ್ಲಿ ಮೂತ್ರ ಸಹಜವರ್ಣ ಪಡೆಯುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಸಂದರ್ಭಗಳಲ್ಲಿ ಈ ತೊಂದರೆಗೆ ಕೆಲವು ಆಹಾರಗಳೇ ಕಾರಣವಾಗಿರುತ್ತವೆ. ಸಿದ್ದ ಆಹಾರಗಳು ಆಕರ್ಷಕವಾಗಿರಲು ಕೃತಕ ಬಣ್ಣಗಳನ್ನು (ಇವುಗಳು ಬಟ್ಟೆಗಳಿಗೆ ಬಣ್ಣ ಕೊಡುವ ಡೈ ಎಂಬ ರಾಸಾಯನಗಳಷ್ಟೇ ಪ್ರಬಲವಾಗಿರುತ್ತವೆ) ಸೇರಿಸಲಾಗುತ್ತದೆ. ಈ ಡೈ ರಾಸಾಯನಿಕಗಳು ನಮ್ಮ ಜೀರ್ಣಾಂಗಗಳಲ್ಲಿ ಕರಗದೇ ಬಣ್ಣ ಬಿಡುತ್ತಾ ಮೂತ್ರದೊಂದಿಗೆ ಮಿಶ್ರಣಗೊಂಡು ಮೂತ್ರದ ಬಣ್ಣವನ್ನೂ ಬದಲಿಸುತ್ತಾ ಹೋಗುತ್ತವೆ. ಪರಿಣಾಮವಾಗಿ ಮೂತ್ರ ಗಾಢ ಕಂದು ಅಥವಾ ಕಪ್ಪು ಬಣ್ಣ ಪಡೆಯುತ್ತದೆ.

2. ಔಷಧಿಗಳು:

ಒಂದು ವೇಳೆ ಈ ಸ್ಥಿತಿಗೆ ಯಾವುದೇ ಆಹಾರ ಕಾರಣವಲ್ಲವೆಂದಾದರೆ ಇದಕ್ಕೆ ನೀವು ಸೇವಿಸುತ್ತಿರುವ ಕೆಲವು ಔಷಧಿಗಳೂ ಕಾರಣವಾಗಿರಬಹುದು. ಪ್ರತಿ ಔಷಧಿಯಲ್ಲಿಯೂ ಕೆಲವು ಅಡ್ಡಪರಿಣಾಮಗಳಿದ್ದು ಕೆಲವು ವ್ಯಕ್ತಿಗಳಲ್ಲಿ ಈ ಅಡ್ಡಪರಿಣಾಮಗಳಿಂದಾಗಿ ಅಥವಾ ಹಲವಾರು ಮಾತ್ರೆ-ಔಷಧಿಗಳನ್ನು ಸತತವಾಗಿ ದೀರ್ಘಕಾಲದಿಂದ ಸೇವಿಸುತ್ತಾ ಬಂದಿದ್ದರೂ ಈ ಸ್ಥಿತಿ ನಿಧಾನವಾಗಿ ಆಗಮಿಸಿರಬಹುದು. ಈ ಬದಲಾವಣೆಗೆ ಈ ಮಾತ್ರೆಗಳನ್ನು ಸೂಚಿಸಿದ ವೈದ್ಯರ ಬಳಿ ಸಮಾಲೋಚಿಸಿ ಸೂಕ್ತ ಪರೀಕ್ಷೆಗೊಳಪಡಬೇಕು ಹಾಗೂ ಇವುಗಳ ಫಲಿತಾಂಶವನ್ನು ಅನುಸರಿಸಿ ಕಾರಣವನ್ನು ವೈದ್ಯರೇ ಕಂಡುಕೊಳ್ಳುತ್ತಾರೆ.

3. ಕೆಲವು ಅನಾರೋಗ್ಯದ ಪರಿಣಾಮಗಳು:

ಒಂದು ವೇಳೆ ಆಹಾರ ಮತ್ತು ಔಷಧಿಗಳಿಂದ ಕರಿಮೂತ್ರ ಎದುರಾಗಿದ್ದರೆ ಇವನ್ನು ಬದಲಿಸಿಕೊಳ್ಳುವ ಮೂಲಕ ತೊಂದರೆ ಶೀಘ್ರವೇ ಪರಿಹಾರವಾಗುತ್ತದೆ. ಒಂದು ವೇಳೆ ಇವು ಅಲ್ಲವೆಂದಾದರೆ ಯಾವುದಾದರೊಂದು ಅನಾರೋಗ್ಯದ ಪರಿಣಾಮದಿಂದ ಕರಿಮೂತ್ರ ಕಂಡುಬರುತ್ತಿದ್ದಿರಬಹುದು. ಉದಾಹರಣೆಗೆ 'alkaptonuria' ಎಂಬ ಕಾಯಿಲೆಯಿಂದ ಕರಿಮೂತ್ರ ಕಂಡುಬರುತ್ತದೆ. ಹಾಗಾಗಿ ಕರಿಮೂತ್ರವನ್ನು ಗಮನಿಸಿದ ತಕ್ಷಣ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆಗಳಿಗೊಳಪಡಬೇಕು ಹಾಗೂ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

4. ಅಲ್ಕಾಪ್ಟೋನೂರಿಯಾ (Alkaptonuria)

ಇದೊಂದು ಅಪರೂಪದ ಅನುವಂಶಿಕ ತೊಂದರೆಯಾಗಿದ್ದು ಇದರ ಪರಿಣಾಮವಾಗಿ ಕರಿಮೂತ್ರ ಕಂಡುಬರುತ್ತದೆ. ವಂಶವಾಹಿನಿಯ HGD ಎಂಬ ಹೆಸರಿನ ಒಂದು ವರ್ಣತಂತು ಫಿನೈಲಮೈನ್ ಹಾಗೂ ಟೈರೋಸೀನ್ ಎಂಬ ಅಮೈನೋ ಆಮ್ಲಗಳನ್ನು ಒಡೆಯಲು ಉಪಯೋಗಿಸಲ್ಪಡುತ್ತದೆ ಹಾಗೂ ಈ ಮೂಲಕ ಪ್ರೋಟೀನುಗಳನ್ನು ವೃದ್ದಿಸಲು ನೆರವಾಗುತ್ತದೆ. ಈ ಕಾಯಿಲೆ ಇರುವ ವ್ಯಕ್ತಿಗಳ HGD ಎಂಬ ವರ್ಣತಂತು ಕೊಂಚ ಬದಲಾವಣೆ ಪಡೆದು homogentisate 1,2-dioxygenase ಎಂಬ ಕಿಣ್ವ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸದಂತೆ ಮಾಡುತ್ತದೆ. ಇದರ ಪರಿಣಾಮವಾಗಿ ರಾಸಾಯನಿಕ ಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಉತ್ಪತ್ತಿಯಾಗುವ ಮಧ್ಯಂತರ ಉತ್ಪನ್ನವಾಗಿ homogentisic acid ಎಂಬ ಆಮ್ಲ ಅಂಗಾಂಶ ಹಾಗೂ ರಕ್ತದಲ್ಲಿ ಬೆರೆಯತೊಡಗುತ್ತದೆ. ರಕ್ತದಲ್ಲಿನ ಆಮ್ಲಜನಕದೊಡನೆ ಈ ಆಮ್ಲ ಮಿಳಿತಗೊಂಡು ಆಮ್ಲಜನೀಕೃತಗೊಂಡು ಅಲ್ಕಾಪ್ಟೋನ್ (alkapton) ಎಂಬ ರೂಪ ಪಡೆಯುತ್ತದೆ. ಇದು ಕಡು ಕಪ್ಪು ಬಣ್ಣವನ್ನು ಹೊಂದಿದ್ದು ರಕ್ತವನ್ನು ಶೋಧಿಸಿದ ಬಳಿಕ ಮೂತ್ರದಲ್ಲಿ ಸಂಗ್ರಹಗೊಂಡು ಸಾಂದ್ರತೆ ಹೆಚ್ಚಿದಂತೆಲ್ಲಾ ಮೂತ್ರವನ್ನೇ ಕಡುಕಪ್ಪಾಗಿಸುತ್ತದೆ.

5. ವಿಷಪ್ರಾಶನ

ಕೆಲವು ಅಪರೂಪದ ಸಂದರ್ಭಗಳಲ್ಲಿ ಕೆಲವು ಔಷಧಿಗಳನ್ನು ಸೇವಿಸುತ್ತಿರುವ ವ್ಯಕ್ತಿಗಳು ಮದ್ಯಪಾನವನ್ನೂ ಸೇವಿಸಿದರೆ ಇದು ವಿಶಷಪ್ರಾಶನದಂತಾಗಿ ಕರಿಮೂತ್ರ ಪರಿಣಾಮವಾಗಿ ಕಂಡುಬರಬಹುದು. ಈ ವಿಷಪ್ರಾಶನದಂತಹ ಪರಿಣಾಮಕ್ಕೆ ದೇಹದ ಆರೋಗ್ಯ ನೇರವಾಗಿ ಕಾರಣವಾಗದೇ ಇದ್ದರೂ ದೇಹ ತನ್ನಲ್ಲಿರುವ ಈ ವಿಷದಲ್ಲಿರುವ ರಾಸಾಯನಿಕಗಳನ್ನು ಸಂಸ್ಕರಿಸಲು ಕಷ್ಟಪಡಬೇಕಾಗುತ್ತದೆ ಹಾಗೂ ವಿಚಿತ್ರವಾದ ಅನುಭವವನ್ನು ಪ್ರಕಟಿಸುತ್ತದೆ.

ಕರಿಮೂತ್ರದ ಲಕ್ಷಣಗಳು:

ಯುವಕರಲ್ಲಿ ಈ ತೊಂದರೆ ಇದ್ದರೂ ಇದರ ಲಕ್ಷಣಗಳು ತಕ್ಷಣವೇ ಸ್ಪಷ್ಟವಾಗಿ ಗೋಚರಿಸದೇ ಹೋಗಬಹುದು. ಏಕೆಂದರೆ ಉಳಿದಂತೆ ಆರೋಗ್ಯಕರವಾಗಿರುವ ಇವರು ಮೂತ್ರವಿಸರ್ಜಿಸಿದ ಕೊಂಚ ಹೊತ್ತಿನ ಬಳಿಕವೇ ಮೂತ್ರದ ಬಣ್ಣ ಬದಲಾಗಿರುವುದರಿಂದ ಬೇರಾವುದೋ ತೊಂದರೆಗೆ ಮೂತ್ರಪರೀಕ್ಷೆ ಮಾಡಿಸಿದಾಗಲೇ ಈ ತೊಂದರೆಯ ಇರುವಿಕೆ ಕಾಣಬರುತ್ತದೆ. ಆದರೆ ಕಾಲಕ್ರಮೇಣ ಈ ಕಾಯಿಲೆ ಉಲ್ಬಣಗೊಳ್ಳುತ್ತಾ ನಿಧಾನವಾಗಿ ಕೆಲವು ಲಕ್ಷಣಗಳನ್ನು ಪ್ರಕಟಿಸತೊಡಗುತ್ತದೆ. ಇವುಗಳೆಂದರೆ:

* ಕಿವಿ ಮತ್ತು ಕಣ್ಣುಗಳ ಬಳಿ ಚರ್ಮದ ಬಣ್ಣ ಗಾಢವಾಗತೊಡಗುತ್ತದೆ

* ವಯಸ್ಸಾಗುತ್ತಾ ಹೋದಂತೆ ನಿತಂಬಗಳು, ಮೊಣಕಾಲು ಮತ್ತು ಬೆನ್ನುಹುರಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ

* ಮೂಳೆಗಳು ಶಿಥಿಲವಾಗುತ್ತಾ ಹೋಗುತ್ತವೆ, ಚಿಕ್ಕದಾಗಿ ಬಿದ್ದರೂ ಮೂಳೆ ತುಂಡಾಗುವಂತಿರುತ್ತದೆ

* ಕೆಲವು ವ್ಯಕ್ತಿಗಳಲ್ಲಿ ಹೃದಯದ ಬಡಿತ ಏಕಪ್ರಕಾರವಾಗಿರದೇ ಏರಿಳಿತಗಳಿಂದ ಕೂಡಿರುತ್ತದೆ.

* ಕೆಲವು ಅಂಗಗಳಲ್ಲಿ ಕಲ್ಲುಗಳುಂಟಾಗುತ್ತವೆ. ವಿಶೇಷವಾಗಿ ಮೂತ್ರಪಿಂಡ, ಪಿತ್ತಕೋಶ, ಪ್ರಾಸ್ಟೇಟ್ ಗ್ರಂಥಿ ಹಾಗೂ ಲಾಲಾರಸ ಉತ್ಪತ್ತಿಯಾಗುವ ಗ್ರಂಥಿಗಳಲ್ಲಿ ಕಲ್ಲುಗಳಾಗತೊಡಗುತ್ತವೆ.

ಕರಿಮೂತ್ರವನ್ನು ಕಂಡುಹಿಡಿಯುವುದು ಹೇಗೆ?

ಈ ಮೂತ್ರ ಗಾಳಿಗೆ ಒಡ್ಡಿದ ಕೊಂಚ ಹೊತ್ತಿನ ಬಳಿಕ ಗಾಢಕಂದುಬಣ್ಣಕ್ಕೆ ತಿರುಗುತ್ತದೆ. ಈ ಸ್ಥಿತಿ ಕಾಣತೊಡಗಿದ ತಕ್ಷಣವೇ ಮೂತ್ರಪರೀಕ್ಷೆ ಮಾಡಿಸಿಕೊಳ್ಳಲು ವೈದ್ಯರು ಸಲಹೆ ಮಾಡುತ್ತಾರೆ. ಜೊತೆಗೆ ವರ್ಣತಂತುವಿನಲ್ಲಿ ಬದಲಾವಣೆ ಇದೆಯೇ ಎಂದು ಕಂಡುಕೊಳ್ಳಲು ರಕ್ತಪರೀಕ್ಷೆಯನ್ನೂ ಮಾಡಲಾಗುತ್ತದೆ. osteoarthritis ಅಥವಾ ಗಂಟುಗಳ ನಡುವಣ ಮೃದುಭಾಗದ ಸವೆತ ಕಂಡುಬರುವ ಕಾಯಿಲೆ ಇದೆಯೇ ಎಂಬ ಪರೀಕ್ಷೆ ಮಾಡಿಸಿಕೊಳ್ಳಲೂ ಸಲಹೆ ಮಾಡಬಹುದು. ಒಂದು ವೇಳೆ ಈ ಪರೀಕ್ಷೆಗಳಲ್ಲಿ ಕರಿಮೂತ್ರ ಕಾಯಿಲೆ ಇರುವ ಲಕ್ಷಣ ಕಂಡುಬಂದರೆ ಖಚಿತಪಡಿಸಿಕೊಳ್ಳಲು ಮೂತ್ರವನ್ನು ಇಪ್ಪತ್ತನಾಲ್ಕು ಘಂಟೆಗಳ ಕಾಲ ಅಲ್ಲಾಡಂತೆ ಇರಿಸಿ ಆ ಬಳಿಕ ಕ್ರೋಮಟೋಗ್ರಫಿ ಎಂಬ ಪ್ರಯೋಗದ ಮೂಲಕ ಮೂತ್ರದಲ್ಲಿ Homogentisic Acid (HGA) ಎಂಬ ಆಮ್ಲ ಎಷ್ಟು ಸಂಗ್ರಹವಾಗಿದೆ ಎಂಬುದನ್ನು ಅಳೆಯಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಕಣ್ಣು ಕಿವಿಗಳ ಬಳಿ ಚರ್ಮದಲ್ಲಿ ಕಲೆಗಳು ಮೂಡುವುದು, ಸಂಧುಗಳಲ್ಲಿ ನೋವು, ಹೃದಯದ ಬಡಿತದಲ್ಲಿ ತೊಂದರೆ ಮೊದಲಾದವುಗಳನ್ನೂ ವೈದ್ಯರು ಪರಿಗಣಿಸಿ ಈ ಖಾಯಿಲೆಯ ಖಚಿತತೆಯನ್ನು ಸಾಬೀತು ಪಡಿಸುತ್ತಾರೆ.

ಕರಿಮೂತ್ರದ ಚಿಕಿತ್ಸೆ ಹೇಗೆ?

* ಕರಿಮೂತ್ರ ಅಥವಾ ಅಲ್ಕಾಪ್ಟೋನೂರಿಯಾ ಕಾಯಿಲೆಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಆದರೆ ಅತಿ ಕಡಿಮೆ ಪ್ರೋಟೀನ್ ಆಹಾರ ಹಾಗೂ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಸೇವನೆಯ ಮೂಲಕ ಮೂಳೆಗಳ ಮೃದ್ವಸ್ಥಿಗಳಲ್ಲಿ HGA ಸಂಗ್ರಹಗೊಳ್ಳದಂತೆ ತಡೆಯಬಹುದು

* ಇತರ ಚಿಕಿತ್ಸೆಗಳೆಂದರೆ ಹೃದಯದ ಬಡಿತ, ಸಂಧಿವಾತ, ಮೂತ್ರಪಿಂಡದಲ್ಲಿ ಕಲ್ಲು ಮೊದಲಾದ ತೊಂದರೆಗಳನ್ನು ಸರಿಪಡಿಸಲು ಔಷಧಿಗಳನ್ನು ಹಾಗೂ ಉರಿಯೂತ ನಿವಾರಕ ಔಷಧಿಗಳನ್ನು ನೀಡಲಾಗುತ್ತದೆ.

* ದೈಹಿಕ ಹಾಗೂ ಔದ್ಯೋಗಿಕ ಚಿಕಿತ್ಸೆಯನ್ನು ನೀಡುವ ಮೂಲಕ ಮೂಳೆಗಳ ನಮ್ಯತೆ ಅಥವಾ ಬಾಗುವಿಕೆಯನ್ನು ಹೆಚ್ಚಿಸಿ ಸ್ನಾಯುಗಳನ್ನು ಬಲಪಡಿಸಲು ಯತ್ನಿಸಲಾಗುತ್ತದೆ.

* ಅಪರೂಪದ ಸಂದರ್ಭಗಳಲ್ಲಿ, ಈ ತೊಂದರೆ ಇರುವ ವ್ಯಕ್ತಿಗಳಿಗೆ ಅಗತ್ಯವೆನಿಸಿದರೆ ಮೊಣಕಾಲಿನ ಶಸ್ತ್ರಚಿಕಿತ್ಸೆ, ಸೊಂಟದ ಮೂಳೆಯ ಬದಲಿ ಅಥವಾ ಹೃದಯದ ಕವಾಟ ಬದಲಾವಣೆಯ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮೂತ್ರಪಿಂಡ ಅಥವಾ ಪ್ರಾಸ್ಟೇಟ್ ಗ್ರಂಥಿಗಳಲ್ಲಿ ಆಗಿರುವ ಕಲ್ಲುಗಳನ್ನು ನಿವಾರಿಸಲೂ ಶಸ್ತ್ರಚಿಕಿತ್ಸೆ ನಡೆಸಬೇಕಾಗಿ ಬರಬಹುದು.

ಈ ಕಾಯಿಲೆ ಬರದಂತೆ ತಡೆಗಟ್ಟುವುದು ಹೇಗೆ?

* ಸಕಾಲದಲ್ಲಿ ಕಾಯಿಲೆಯ ಇರುವಿಕೆಯನ್ನು ಕಂಡುಕೊಂಡು ತಕ್ಷಣವೇ ಚಿಕಿತ್ಸೆ ಹಾಗೂ ನಿಯಮಿತ ತಪಾಸಣೆಗಳನ್ನು ಪ್ರಾರಂಬಿಸಿದರೆ ಈ ತೊಂದರೆಯ ವೈಪರೀತ್ಯಗಳನ್ನು ತಡವಾಗಿಸಬಹುದು. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಇದು ಕಂಡುಬಂದರೆ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸಬೇಕು.

* ಒಂದು ವೇಳೆ ವಂಶವಾಹಿನಿಯಲ್ಲಿ ಈ ತೊಂದರೆ ಇದ್ದರೆ ತಂದೆತಾಯಿಗಳ ಆರೋಗ್ಯ ತಪಾಸಣೆಯ ಮೂಲಕ ಈ ತೊಂದರೆ ಮಕ್ಕಳಿಗೆ ಬರುತ್ತದೆಯೇ ಎಂಬುದನ್ನು ಮುಂಚಿತವಾಗಿಯೇ ತಿಳಿದುಕೊಳ್ಳಬಹುದು.

* ಆರೋಗ್ಯದ ತಪಾಸಣೆ ಮಾಡುವ ವೈದ್ಯರು ಮೆದುಳುಬಳ್ಳಿಯ ಎಕ್ಸ್-ರೇ ಪರೀಕ್ಷೆ ಹಾಗೂ ಮೆದುಳುಬಳ್ಳಿ ಶಿಥಿಲಗೊಳ್ಳುತ್ತಿರುವ, ಮೂಳೆಗಳು ಶಿಥಿಲಗೊಳ್ಳುತ್ತಿರುವ, ಹೃದಯದ ಕವಾಟಗಳ ಕಾರ್ಯಕ್ಷಮತೆ ಕುಸಿಯುತ್ತಿರುವ ಬಗ್ಗೆ ಸೂಕ್ತ ಪರೀಕ್ಷೆಗಳನ್ನು ನಡೆಸುತ್ತಾರೆ. ಅಥವಾ ರಕ್ತನಾಳಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಸಿಟಿ ಸ್ಕ್ಯಾನ್ ಮೂಲಕ ಪರೀಕ್ಷಿಸಲಾಗುತ್ತದೆ.

* ಈ ತೊಂದರೆ ಬರುವ ಸಾಧ್ಯತೆ ಇದ್ದರೆ ಬರುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಆರೋಗ್ಯಕರ ಜೀವನಶೈಲಿ, ಸಮತೋತಲನದ ಆಹಾರ, ಪ್ರೋಟೀನ್ ಸೇವನೆಯನ್ನು ಕನಿಷ್ಟವಾಗಿಸುವುದು ಹಾಗೂ ನಿತ್ಯದ ವ್ಯಾಯಾಮಗಳಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಕಾಯಿಲೆ ಬರುವುದನ್ನು ಸಾಧ್ಯವಾದಷ್ಟೂ ತಡವಾಗಿಸಬಹುದು.

English summary

What Is Black Urine: Causes, Diagnosis,Treatment & Prevention

We all may be aware of different shades of urine like yellow, dark yellow, red or brown, but, the term 'black urine' sounds scary, doesn't it? Black urine is the darkest of all urine colours, and this could be due to several causes. While the intake of certain foods or medications may cause a temporary change in colour of the urine, black urine can also occur due to an underlying health condition. This article explains the causes, diagnosis, treatment and prevention of black urine disease.
Story first published: Tuesday, August 7, 2018, 8:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more