For Quick Alerts
ALLOW NOTIFICATIONS  
For Daily Alerts

ಸೊಂಟದ ಕೊಬ್ಬು ಅತಿಯಾದರೆ ಆರೋಗ್ಯಕ್ಕೇ ವಿಷ!

|

ಸೊಂಟದ ಕೊಬ್ಬು, ಅಥವಾ ಅಡಿಪೋಸ್ ಟಿಶ್ಯೂ, ಇದು ಹೊಟ್ಟೆ, ಸೊಂಟದ ಸುತ್ತ ಸಂಗ್ರಹವಾಗಿರುವ ಕೊಬ್ಬಾಗಿದೆ. ಇವುಗಳಲ್ಲಿ ಅಡಿಪೋಸೈಟ್ಸ್ ಎಂಬ ಜೀವಕೋಶಗಳು ಸಡಿಲವಾಗಿ ಸಂಗ್ರಹಿಸಲ್ಪಟ್ಟಿರುತ್ತದೆ. ಈ ಕೊಬ್ಬು ಸೊಂಟದ ಹೊರತು ದೇಹದ ಇನ್ನೂ ಐದು ಭಾಗಗಳಲ್ಲಿ ಪ್ರಮುಖವಾಗಿ ಸಂಗ್ರಹವಾಗಿರುತ್ತದೆ. ಈ ಭಾಗಗಳನ್ನು ಅನುಸರಿಸಿ ಈ ಕೊಬ್ಬಿಗೂ ಅದೇ ಹೆಸರಿನ ರೂಪಕವನ್ನು ಒದಗಿಸಲಾಗಿದೆ. ಅವೆಂದರೆ:
1. ಸಬ್ಕುಟೇನಿಯಸ್ ಕೊಬ್ಬು Subcutaneous Fat - ಚರ್ಮದ ಅಡಿಯಲ್ಲಿ ಸಂಗ್ರಹವಾಗುವ ಕೊಬ್ಬು
2. ವಿಸೆರಲ್ ಕೊಬ್ಬು - Visceral Fat - ನಮ್ಮ ದೇಹದ ಒಳಗಣ ಅಂಗಗಳ ನಡುವೆ ಸಂಗ್ರಹವಾಗುವ ಕೊಬ್ಬು
3. ಮ್ಯಾರೋ ಕೊಬ್ಬು ಅಥವಾ ಮಜ್ಜೆ ಕೊಬ್ಬು -Marrow Fat - ಅಸ್ಥಿ ಮಜ್ಜೆಯಲ್ಲಿ ಸಂಗ್ರಹವಾಗುವ ಕೊಬ್ಬು
4. ಮಸ್ಕುಲ್ಯಾರ್ ಅಥವಾ ಸ್ನಾಯುಗಳ ಕೊಬ್ಬು-muscular fat - ಸ್ನಾಯುಗಳ ಅಂಗಾಂಶಗಳ ನಡುವೆ ಸಂಗ್ರಹವಾಗುವ ಕೊಬ್ಬು
5. ಬ್ರೆಸ್ಟ್ ಕೊಬ್ಬು - Breast Fat- ಸ್ತನಗಳಲ್ಲಿ ಸಂಗ್ರಹವಾಗುವ ಕೊಬ್ಬು

ದೇಹದಲ್ಲಿರುವ ಕೊಬ್ಬು ನಮ್ಮ ರಸದೂತಗಳೊಂದಿಗೆ ಯಾವುದೇ ಬಗೆಯಲ್ಲಿ ಪ್ರತಿಕ್ರಿಯೆ ತೋರದ ಕಾರಣ ಅಪಾಯಕಾರಿಯಲ್ಲದ ಘಟಕ ಎಂದೇ ಪರಿಗಣಿಸಲ್ಪಡುತ್ತದೆ. ವಾಸ್ತವವಾಗಿ ಕೊಬ್ಬು ನಮ್ಮ ದೇಹಕ್ಕೆ ಅಗತ್ಯ. ಇದು ಶಕ್ತಿಯನ್ನು ಮೇಧಸ್ಸಿನ ರೂಪದಲ್ಲಿ ಸಂಗ್ರಹಿಸಿಟ್ಟು ಅಗತ್ಯವಿದ್ದಾಗ ಬಳಸಿಕೊಳ್ಳುತ್ತದೆ. ಅಲ್ಲದೇ ನಮ್ಮ ದೇಹಕ್ಕೆ ಮೆತ್ತೆಯ ರೂಪದಲ್ಲಿ ಆಘಾತಗಳಿಂದ ರಕ್ಷಿಸುತ್ತದೆ ಮತ್ತು ಹೊರಗಿನ ತಾಪಮಾನದಿಂದ ದೇಹವನ್ನು ರಕ್ಷಿಸುತ್ತದೆ. ಇದೇ ಕಾರಣಕ್ಕೆ ಕೊಬ್ಬು ಹೆಚ್ಚಿರುವ ವ್ಯಕ್ತಿಗಳಿಗೆ ಚಳಿಗಾಲದಲ್ಲಿ ತೆಳ್ಳನೆಯ ವ್ಯಕ್ತಿಗಳಿಗೆ ಆಗುವಷ್ಟು ಚಳಿ ಆಗುವುದಿಲ್ಲ.

ಕೊಬ್ಬು ಪುರುಷರನ್ನೂ ಮಹಿಳೆಯರನ್ನೂ ಸಮಾನವಾಗಿ ಬಾಧಿಸುತ್ತದೆ. ಇದರ ಇರುವಿಕೆಯಿಂದ ದೇಹದ ಗಾತ್ರ ಆಕರ್ಷಕವಾಗದ ಕಾರಣಕ್ಕೇ ಎಲ್ಲರೂ ಕೊಬ್ಬನ್ನು ದ್ವೇಶಿಸುತ್ತಾರೆ. ಆದರೆ ಕೊಬ್ಬಿನ ಇರುವಿಕೆಯ ಪರಿಣಾಮ ದೇಹದ ಮೂಲಕಾರ್ಯಗಳಿಗೂ ಸಂಬಂಧಿಸಿದೆ. ಹಾಗಾಗಿ ಕೊಬ್ಬನ್ನು ಒಂದೇ ಪದದಲ್ಲಿ ಅನಗತ್ಯ ಎನ್ನುವಂತಿಲ್ಲ.

ನಮ್ಮ ದೇಹದ ಕೊಬ್ಬಿನ ಸಂಗ್ರಹ ದೇಹದ ಕೇಂದ್ರಭಾಗದಲ್ಲಿಯೇ ಆಗುತ್ತದೆ, ದೇಹದ ಭಾರವನ್ನು ಗುರುತ್ವಕೇಂದ್ರದ ಸುತ್ತಲೇ ಇರುವಂತೆ ಮಾಡಲು ಇದು ಅನಿವಾರ್ಯ ಕೂಡಾ! ಇದರಲ್ಲಿ ಎರಡು ಬಗೆಗಳಿವೆ-ಸಬ್ಕುಟೇನಿಯಸ್ ಮತ್ತು ವಿಸೆರಲ್ ಕೊಬ್ಬು. ಇದರಲ್ಲಿ ಮೊದಲನೆಯದ್ದು ಅಗತ್ಯವಾಗಿ ಬೇಕಾದ ಕೊಬ್ಬಾಗಿದ್ದರೆ ಎರಡನೆಯದೇ 'ಊಟ ಹೆಚ್ಚು, ವ್ಯಾಯಾಮ ಕಡಿಮೆ' ಎಂಬ ಸೂತ್ರದ ಪಾತ್ರಧಾರಿಗಳಿಗೆ ಹೆಚ್ಚಾಗಿ ಆವರಿಸುವ ಕಳ್ಳ ಕೊಬ್ಬು ಅಥವಾ ವಿಸೆರಲ್ ಕೊಬ್ಬು ಹಾಗೂ ಇದೇ ಅನಾರೋಗ್ಯಕರ ಕೊಬ್ಬಾಗಿದೆ. ವಿಪರ್ಯಾಸವೆಂದರೆ ಸಬ್ಕುಟೇನಿಯಸ್ ಕೊಬ್ಬು ಮೇಲ್ನೋಟಕ್ಕೇ ಕಾಣುತ್ತದೆ ಆದರೆ ಈ ಕಳ್ಳ ಕೊಬ್ಬು ಸಬ್ಕುಟೇನಿಯಸ್ ಕೊಬ್ಬಿನ ಅಡಿಯಲ್ಲಿ ಅಡಗಿರುತ್ತದೆ.

ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಈ ಕೊಬ್ಬಿಗೆ "active pathogenic fat" ಕೊಬ್ಬು ಎಂದು ಕರೆಯುತ್ತಾರೆ ಹಾಗೂ ಇದು ಕೇವಲ ಸೊಂಟದಲ್ಲಿ ಮಾತ್ರವಲ್ಲ, ನಮ್ಮ ದೇಹದ ಎಲ್ಲಾ ಪ್ರಮುಖ ಅಂಗಗಳಿಗೂ ಆವರಿಸಿಕೊಂಡಿರುತ್ತದೆ. ಹೃದಯ, ಯಕೃತ್, ಶ್ವಾಸಕೋಶ, ಹೊಟ್ಟೆ, ಮೇದೋಜೀರಕ ಗ್ರಂಥಿ ಮೊದಲಾದವು. ಈ ಕೊಬ್ಬು ಈ ಅಂಗಗಳಿಗೆ ಅಗತ್ಯವಾದ ಸ್ಥಳಾವಕಾಶವನ್ನೇ ಕಬಳಿಸಿಬಿಟ್ಟಿರುವುದರಿಂದ ಹಾಗೂ ಅಂಗಗಳನ್ನೂ ಸುತ್ತುವರೆದಿರುವ ಕಾರಣ ಎಲ್ಲಾ ಅಂಗಗಳು ತಮ್ಮ ಪೂರ್ಣ ಕ್ಷಮತೆಯಲ್ಲಿ ಕಾರ್ಯ ನಿರ್ವಹಿಸಲು ವಿಫಲವಾಗುತ್ತವೆ. ಆದ್ದರಿಂದ ಅಗತ್ಯಕ್ಕೂ ಹೆಚ್ಚು ಕೊಬ್ಬು ಹೊಂದಿದ್ದರೆ ಕೆಲವಾರು ಆರೋಗ್ಯಕ್ಕೆ ಮಾರಕವಾದ ಪರಿಣಾಮಗಳನ್ನು ಎದುರಿಸ ಬೇಕಾಗುತ್ತದೆ. ಇವುಗಳಲ್ಲಿ ಪ್ರಮುಖವಾದವು ಇಲ್ಲಿವೆ....

ಹೆಚ್ಚುವ ಉರಿಯೂತ

ಹೆಚ್ಚುವ ಉರಿಯೂತ

ವಿಸೆರಲ್ ಕೊಬ್ಬು ಸುಮ್ಮನೇ ಕುಳಿತಿರದೇ ಕೆಲಸವಿಲ್ಲದ ಬಡಗಿ ಮಾಡಿದಂತೆ ಉರಿಯೂತವುಂಟುಮಾಡುವ ಕೆಲವು ಕಣಗಳನ್ನು ಉತ್ಪಾದಿಸುತ್ತದೆ. ಈ ಕಣಗಳು ನೇರವಾಗಿ ಯಕೃತ್ ಗೆ ತಲುಪುತ್ತವೆ. ಈ ಕಣಗಳು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತವೆ ಹಾಗೂ ಕೆಲವು ರಸದೂತಗಳ ಪರಿಣಾಮಗಳನ್ನು ಬದಲಿಸಿಬಿಡುವ ಕ್ಷಮತೆ ಹೊಂದಿವೆ. ನಮ್ಮ ದೇಹದ ಯಾವುದೇ ಕಾಯಿಲೆಗೆ ಈ ಉರಿಯೂತವೇ ಮೂಲವಾಗಿದೆ. ಒಂದು ವೇಳೆ ಸೊಂಟದ ಕೊಬ್ಬು ನಿಮ್ಮ ದೇಹದಲ್ಲಿ ತೀರಾ ಎನಿಸುವಷ್ಟಿದ್ದರೆ ನಿಮ್ಮ ದೇಹ ಉರಿಯೂತಕ್ಕೆ ಮತ್ತು ರಸದೂತಗಳ ಏರುಪೇರಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಪಡೆದಿರುತ್ತದೆ. ತನ್ಮೂಲಕ ದೇಹದ ಜೀವ ರಾಸಾಯನಿಕ ಕ್ರಿಯೆಯೂ ಪ್ರಮುಖವಾಗಿ ಬಾಧಿಸಲ್ಪಡುತ್ತದೆ.

ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆಯಲ್ಲಿ ಹೆಚ್ಚಳ

ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆಯಲ್ಲಿ ಹೆಚ್ಚಳ

ತೊಡೆ ಮತ್ತು ನಿತಂಬಗಳಲ್ಲಿ ಹೆಚ್ಚಿನ ಕೊಬ್ಬು ಇದ್ದು ಸೊಂಟದಲ್ಲಿ ಕಡಿಮೆ ಕೊಬ್ಬು ಇರುವ ವ್ಯಕ್ತಿಗಳಿಗಿಂತಲೂ ಸೊಂಟದಲ್ಲಿಯೇ ಹೆಚ್ಚಿನ ಕೊಬ್ಬು ಇರುವ ವ್ಯಕ್ತಿಗಳು ಟೈಪ್ ೨ ಮಧುಮೇಹಕ್ಕೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚು ಹೊಂದಿರುತ್ತಾರೆ. ಇದಕ್ಕೆ ಕಾರಣವೇನೆಂದರೆ ಇವರ ದೇಹದಲ್ಲಿರುವ ವಿಸೆರಲ್ ಕೊಬ್ಬು ದೇಹದಲ್ಲಿ ಉತ್ಪಾದನೆಯಾದ ಇನ್ಸುಲಿನ್ ಅನ್ನು ಬಳಸಿಕೊಳ್ಳದಂತೆ ತಡೆಯಲು ಅಡ್ಡಗಾಲು ಹಾಕುತ್ತದೆ. ಇದು ಇನ್ಸುಲಿನ್ ನಿರೋಧಕ ಗುಣಕ್ಕೆ ಕಾರಣವಾಗುತ್ತದೆ. ಈ ವ್ಯಕ್ತಿಗಳು ಸಕ್ಕರೆ ಹೆಚ್ಚಿರುವ ಆಹಾರಗಳನ್ನು ಸೇವಿಸಿದಾಗ ರಕ್ತದಲ್ಲಿ ಸಕ್ಕರೆ ಹಾಗೂ ಇದನ್ನು ಜೀರ್ಣಿಸಿಕೊಳ್ಳಲು ಇನ್ಸುಲಿನ್ ಸಹಾ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಆರೋಗ್ಯಕರ ವ್ಯಕ್ತಿಗಳಲ್ಲಿ ಹೀಗೆ ಸಕ್ಕರೆ ಹೆಚ್ಚಾಗಿ ರಕ್ತಕ್ಕೆ ಆಗಮಿಸಿದಾಗ ಜೀವಕೋಶಗಳು ಸಕ್ಕರೆ ಮತ್ತು ಇನ್ಸುಲಿನ್ ಬಳಕೆಯಿಂದ ಶಕ್ತಿಯನ್ನು ಉತ್ಪಾದಿಸುತ್ತವೆ. ಆದರೆ ವಿಸೆರಲ್ ಕೊಬ್ಬಿನ ಅಡ್ಡಗಾಲಿನ ಪರಿಣಾಮದಿಂದ ಕ್ರಮೇಣ ಜೀವಕೋಶಗಳು ಇನ್ಸುಲಿನ್ ಇದ್ದರೂ ಇದನ್ನು ಪಡೆಯಲಾಗದೇ ಸಕ್ಕರೆಯನ್ನೂ ಪಡೆದುಕೊಳ್ಳಲು ವಿಫಲವಾಗಿ ಸಕ್ಕರೆ ಹಾಗೇ ದೇಹದಿಂದ ಮೂತ್ರದ ಮೂಲಕ ಹೊರಹೋಗುತ್ತದೆ. ಈ ಪರಿಣಾಮದಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚುವುದು ಹಾಗೂ ಇನ್ಸುಲಿನ್ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಹೃದಯಸಂಬಂಧಿ ತೊಂದರೆಗಳು ಮತ್ತು ಹೃದಯಾಘಾತ

ಹೃದಯಸಂಬಂಧಿ ತೊಂದರೆಗಳು ಮತ್ತು ಹೃದಯಾಘಾತ

ಸಂಶೋಧನೆಗಳ ಮೂಲಕ ದೃಢೀಕರಿಸಿದಂತೆ ವಿಸೆರಲ್ ಕೊಬ್ಬು ಕೆಲವು ಪ್ರೋಟೀನ್ ಕಣಗಳನ್ನು ಉತ್ಪಾದಿಸುತ್ತದೆ ಹಾಗೂ ಇವು ನಮ್ಮ ದೇಹಕ್ಕೆ ಹಾನಿಕರವಾಗಿವೆ. ಇವುಗಳಲ್ಲಿ ಕೆಲವು ರಕ್ತನಾಳಗಳ ಒಳವ್ಯಾಸವನ್ನು ಕುಗ್ಗಿಸಿ ರಕ್ತದ ಒತ್ತಡವನ್ನು ಹೆಚ್ಚಿಸಲು ಕಾರಣವಾಗುತ್ತವೆ. ಅಲ್ಲದೇ, ವಿಸೆರಲ್ ಕೊಬ್ಬು ಉರಿಯೂತ ವನ್ನುಂಟು ಮಾಡುತ್ತದೆ ಎಂದು ಈಗಾಗಲೇ ಅರಿತಿದ್ದೇವೆ, ಈಗ ಇವೆರಡೂ ಕೂಡಿದಾಗ ರಕ್ತನಾಳಗಳ ಒಳಭಾಗ ಇನ್ನಷ್ಟು ಕಿರಿದಾಗಿ ರಕ್ತ ಹರಿಯುದನ್ನು ನಿಲ್ಲಿಸಲೂಬಹುದು. ಒಂದು ವೇಳೆ ನಿಮ್ಮ ಸೊಂಟದ ಸುತ್ತ ಹೆಚ್ಚಿನ ಕೊಬ್ಬು ಇದ್ದು ನಿಮ್ಮ ರಕ್ತಪರೀಕ್ಷೆಯಲ್ಲಿ ಟ್ರೈಗ್ಲಿಸರೈಡ್ ಮತ್ತು ಕೊಲೆಸ್ಟ್ರಾಲ್ ಮಟ್ಟಗಳಲ್ಲಿ ಹೆಚ್ಚಳವಾಗಿರುವುದು ಹಾಗೂ ರಕ್ತದ ಒತ್ತಡದಲ್ಲಿಯೂ ಹೆಚ್ಚಳ ಕಂಡುಬಂದರೆ ನಿಮ್ಮ ಆರೋಗ್ಯ ತಪ್ಪು ಹಾದಿಯಲ್ಲಿ ಸಾಗುತ್ತಿದೆ ಎಂದು ಅರಿಯಬೇಕು.

 ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ರಕ್ತದ ಒತ್ತಡ ಅಧಿಕವಾಗಲು ರಕ್ತನಾಳಗಳು ಕಿರಿದಾಗಲೇಬೇಕೆಂದಿಲ್ಲ, ಬದಲಿಗೆ ರಕ್ತದಲಿ ಸಕ್ಕರೆ ಮತ್ತು ಇನ್ಸುಲಿನ್ ಪ್ರಮಾಣ ಹೆಚ್ಚಾಗಿ ಇವುಗಳ ಬಳಕೆಯಾಗದಿದ್ದರೂ ಆಗುತ್ತದೆ. ಸಕ್ಕರೆ ಹೆಚ್ಚಿರುವ ಆಹಾರಗಳನ್ನು ಸೇವಿಸಿದಾಗ ನಮ್ಮ ರಕ್ತದಲ್ಲಿ ತಕ್ಷಣವೇ ಸಕ್ಕರೆಯ ಮಟ್ಟ ಹೆಚ್ಚುತ್ತದೆ ಹಾಗೂ ಇದೇ ಸಮಯಕ್ಕೆ ಇನ್ಸುಲಿನ್ ಮಟ್ಟವೂ ಏರುತ್ತದೆ, ಏರಲೂಬೇಕು. ಇದು ಸಕ್ಕರೆಯನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ. ಯಾವಾಗ ನಮ್ಮ ದೇಹದಲ್ಲಿ ಇವೆರಡಕ್ಕೂ ನಿರೋಧಕ ಶಕ್ತಿ ಹೆಚ್ಚಿದರೆ ಸಕ್ಕರೆ ಮತ್ತು ಇನ್ಸುಲಿನ್ ಎರಡೂ ಬಳಕೆಯಾಗದೇ ರಕ್ತದಲ್ಲಿಯೇ ಉಳಿದುಬಿಡುತ್ತವೆ. ಇವು ರಕ್ತದ ಒತ್ತಡವನ್ನು ಹೆಚ್ಚಿಸುತ್ತವೆ.

ಖಿನ್ನತೆ

ಖಿನ್ನತೆ

ನಾವು ಈಗಾಗಲೇ ತಿಳಿದುಕೊಂಡಿರುವಂತೆ, ವಿಸೆರಲ್ ಕೊಬ್ಬನ್ನು "active pathogenic fat" ಎಂದೂ ಕರೆಯುತ್ತೇವೆ, ಏಕೆಂದರೆ ಇದರ ಪರಿಣಾಮ ನಮ್ಮ ದೇಹದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಬಗ್ಗೆ ನಡೆದ ಅಧ್ಯಯನಗಳಲ್ಲಿ ಸಾಬೀತುಕೊಂಡಂತೆ ನಮ್ಮ ದೇಹದ ಆರೋಗ್ಯಕರ ನ್ಯೂರೋಟ್ರಾನ್ಸ್ ಮಿಟರ್ ಗಳ ಕಾರ್ಯಕ್ಷಮತೆ ಕುಗ್ಗುತ್ತದೆ. ಇದರ ಜೊತೆಗೆ ರಸದೂತಗಳ ಬದಲಾವಣೆಯ ಕಾಟ ಬೇರೆ! ಈ ಅಸಮತೋಲನ ಮನೋಭಾವದಲ್ಲಿ ವಿಪರೀತವಾದ ಏರಿಳಿತಗಳನ್ನು ಮೂಡಿಸುತ್ತದೆ. ತಕ್ಷಣವೂ ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆಯದೇ ಇದ್ದರೆ ಇದು ಖಿನ್ನತೆಗೆ ಮೂಲವಾಗಬಹುದು.

ನಿದ್ರಾರಾಹಿತ್ಯ ಮತ್ತು ಇದಕ್ಕೆ ಸಂಬಂಧಿಸಿದ ತೊಂದರೆಗಳು

ನಿದ್ರಾರಾಹಿತ್ಯ ಮತ್ತು ಇದಕ್ಕೆ ಸಂಬಂಧಿಸಿದ ತೊಂದರೆಗಳು

ಡೊಳ್ಳು ಹೊಟ್ಟೆ ಮತ್ತು ಕುತ್ತಿಗೆಯ ಸುತ್ತ ತುಂಬಿರುವ ಕೊಬ್ಬು ಇರುವ ವ್ಯಕ್ತಿಗಳಿಗೆ ಬೇಡವೆಂದರೂ ಗೊರಕೆಯ ತೊಂದರೆ ಇದ್ದೇ ಇರುತ್ತದೆ. ಇದರ ಜೊತೆಗೇ sleep apnea ಎಂಬ ತೊಂದರೆ ಬೇರೆ. ಈ ತೊಂದರೆಯಿಂದ ಈ ವ್ಯಕ್ತಿಗಳ ನಿದ್ದೆಯಲ್ಲಿ ಉಸಿರಾಟ ತಕ್ಷಣವೇ ನಿಂತು ಕೆಲಕ್ಷಣಗಳ ಬಳಿಕ ತೀವ್ರವಾಗುತ್ತದೆ, ಇದು ರಾತ್ರಿ ಹಲವಾರು ಬಾರಿ ಎದುರಾಗಬಹುದು. ಪರಿಣಾಮವಾಗಿ ಸಾಕಷ್ಟು ನಿದ್ದೆ ಮಾಡಿದ್ದರೂ ಮರುದಿನ ಇವರಲ್ಲಿ ಚೈತನ್ಯ ಕಡಿಮೆ ಇರುತ್ತದೆ. ಶ್ವಾಸಕೋಶ ಮತ್ತು ಶ್ವಾಸನಾಳಗಳ ಬಳಿಯಲ್ಲೆಲ್ಲಾ ಈ ವಿಸೆರಲ್ ಕೊಬ್ಬು ತುಂಬಿಕೊಂಡು ಉಸಿರಾಟದ ಸ್ಥಳಾವಕಾಶವನ್ನೇ ಕಸಿದುಕೊಂಡಿರುವುದರಿಂದ ಉಸಿರಾಟ ಕಷ್ಟವಾಗುತ್ತದೆ. ಹೀಗೆ ಉಸಿರಾಟ ಥಟ್ಟನೇ ನಿಲ್ಲುವುದರಿಂದ ವ್ಯಕ್ತಿಯ ನಿದ್ದೆಗೂ ಭಂಗವಾಗುತ್ತದೆ ಹಾಗೂ ಅಗತ್ಯವಾದ ವಿಶ್ರಾಂತಿ ಪಡೆಯದೇ ಹೋಗಬಹುದು. ಪರಿಣಾಮವಾಗಿ ಇವರ ಮನೋಭಾವವೂ ನಿದ್ದೆಯ ಕೊರತೆಯಿಂದ ಬದಲಾಗುತ್ತಿರುತ್ತದೆ. ಕೆಲವೊಮ್ಮೆ ಈ ವ್ಯಕಿಗಳಿಗೆ ನಿದ್ದೆ ಆವರಿಸುವುದೇ ಕಷ್ಟವಾಗಿ ನಿದ್ರಾರಾಹಿತ್ಯಕ್ಕೂ ಒಳಗಾಗಬಹುದು.

ಮರೆಗುಳಿತನ ಮತ್ತು ಅಲ್ಜೀಮರ್ಸ್ ಕಾಯಿಲೆ

ಮರೆಗುಳಿತನ ಮತ್ತು ಅಲ್ಜೀಮರ್ಸ್ ಕಾಯಿಲೆ

ದೊಡ್ಡ ಹೊಟ್ಟೆಯ ವ್ಯಕ್ತಿಗಳು ಮರೆಗುಳಿತನ ಮತ್ತು ಅಲ್ಜೀಮರ್ಸ್ ಕಾಯಿಲೆಗೆ ಒಳಗಾಗುವ ಸಾಧ್ಯತೆಯನ್ನು ಸಪಾಟಾದ ಹೊಟ್ಟೆ ಇರುವ ವ್ಯಕ್ತಿಗಳಿಗಿಂತ ಹೆಚ್ಚು ಹೊಂದಿರುತ್ತಾರೆ. ದೇಹದ ಗಾತ್ರ ಎಷ್ಟೇ ಹೆಚ್ಚಾದರೂ ನಮ್ಮ ಮೆದುಳಿನ ಮತ್ತು ಎಲ್ಲಾ ಅಂಗಗಳ ಗಾತ್ರ ಹೆಚ್ಚುವುದಿಲ್ಲ. ಹಾಗಾಗಿ ದೇಹದ ಗಾತ್ರಕ್ಕೆ ಹೋಲಿಕೆಗೆ ಈಗಿರುವ ಮೆದುಳು ಚಿಕ್ಕದಾಗಿಬಿಡುತ್ತದೆ, ಅಂದರೆ ಮೆದುಳಿನ ಕ್ಷಮತೆ ಅಷ್ಟು ಮಟ್ಟಿಗೆ ಕುಗ್ಗುತ್ತದೆ. ಈ ವಿಷಯವನ್ನು ಇನ್ನೂ ದೃಢೀಕರಿಸಲಾಗಿಲ್ಲ, ಆದರೆ ಕೊಬ್ಬಿನ ಕಣಗಳು ಬಿಡುಗಡೆ ಮಾಡುವ ಲೆಪ್ಟಿನ್ ಎಂಬ ರಸದೂತದ ಅವಾಂತರವನ್ನು ನೋಡಿದರೆ ಇದು ಸತ್ಯ ಎನಿಸುತ್ತದೆ. ಈ ಲೆಪ್ಟಿನ್ ಮೆದುಳಿನ ಜೀವಕೋಶಗಳ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ. ತನ್ಮೂಲಕ ಕಲಿಯುವಿಕೆ, ಸ್ಮರಣಶಕ್ತಿ, ಹಸಿವನ್ನು ನಿಗ್ರಹಿಸಿಕೊಳ್ಳಲು ಬೇಕಾದ ಮನೋಬಲ ಮೊದಲಾದ ಎಲ್ಲವೂ ಉಡುಗುತ್ತವೆ. ಹಾಗಾಗಿ, ಎಷ್ಟು ದೊಡ್ಡ ಹೊಟ್ಟೆಯೋ, ಅಷ್ಟೂ ಮಟ್ಟಿಗೆ ಮೆದುಳಿನ ಕ್ಷಮತೆ ಕಡಿಮೆಯಾಗುತ್ತದೆ ಎಂದೇ ಹೇಳಬಹುದು.

ಕ್ಯಾನ್ಸರ್

ಕ್ಯಾನ್ಸರ್

ಈ ವಿಸೆರಲ್ ಕೊಬ್ಬು ಬಿಡುಗಡೆಗೊಳಿಸುವ ಕಣಗಳಲ್ಲಿ ಸೈಟೋಕೈನ್ಸ್ ಎಂಬ ಕಣಗಳೂ ಒಂದು. ಇವು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಚಟುವಟಿಕೆಗೆ ಪ್ರಚೋದನೆ ನೀಡುತ್ತವೆ. ವಿಶೇಷವಾಗಿ ರಜೋನಿವೃತ್ತಿ ಪಡೆದಿರುವ ಮಹಿಳೆಯರ ದೇಹದಲ್ಲಿ ಈ ಕಣಗಳು ಹೆಚ್ಚು ಕ್ರಿಯಾಶೀಲರಾಗಿರುತ್ತವೆ. ಏಕೆಂದರೆ ರಜೋನಿವೃತ್ತಿಯ ಬಳಿಕ ಮಹಿಳೆಯರ ಗರ್ಭಾಶಯದಿಂದ ಈಸ್ಟ್ರೋಜೆನ್ ಉತ್ಪತ್ತಿಯಾಗುವುದು ಕಡಿಮೆಯಾಗುತ್ತಾ ಹೋಗುತ್ತದೆ ಹಾಗೂ ಈಗ ಈಸ್ಟ್ರೋಜೆನ್ ಪೂರೈಸಲು ಕೊಬ್ಬಿನ ಜೀವಕೋಶಗಳು ಮುಖ್ಯ ಸೆಲೆಗಳಾಗಿ ಪರಿವರ್ತಿತವಾಗುತ್ತವೆ. ಈಗ ಅಗತ್ಯಕ್ಕೂ ಹೆಚ್ಚೇ ಇರುವ ಈಸ್ಟ್ರೋಜೆನ್ ಸ್ತನಗಳಲ್ಲಿ ಆರೋಗ್ಯಕ್ಕೆ ಮಾರಕವಾಗುವ ಗಡ್ಡೆಗಳನ್ನು ಉಂಟುಮಾಡುತ್ತದೆ. ಈ ಗಡ್ಡೆಗಳು ಸ್ತನ ಕ್ಯಾನ್ಸರ್ ರೂಪ ಪಡೆಯುವ ಸಾಧ್ಯತೆ ಹೆಚ್ಚು. ಇದೇ ರೀತಿಯಲ್ಲಿ ಪುರುಷರ ದೇಹದಲ್ಲಿ ಈ ಕಣಗಳು ಕರುಳು ಮತ್ತು ಗುದದ್ವಾರದ ಕ್ಯಾನ್ಸರ್ ಎದುರಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

ವಿಸೆರಲ್ ಕೊಬ್ಬನ್ನು ನಿವಾರಿಸುವುದು ಬಹಳ ಕಷ್ಟ

ವಿಸೆರಲ್ ಕೊಬ್ಬನ್ನು ನಿವಾರಿಸುವುದು ಬಹಳ ಕಷ್ಟ

ದೇಹದಿಂದ ಈ ವಿಸೆರಲ್ ಕೊಬ್ಬನ್ನು ನಿವಾರಿಸುವುದು ಬಹಳ ಕಷ್ಟ. ಏಕೆಂದರೆ ಇದು ದೇಹಕ್ಕೊಂದು ವ್ಯಸನದಂತಿದ್ದು ಇದರ ಕೊರತೆಯಾದ ತಕ್ಷಣ ಮೆದುಳಿನಿಂದ ಹೆಚ್ಚಿನ ಆಹಾರ, ಕಡಿಮೆ ವ್ಯಾಯಾಮದ ಸಂಕೇತಗಳು ರವಾನಿಸಲ್ಪಟ್ಟು ವ್ಯಕ್ತಿ ಹೆಚ್ಚು ಹೆಚ್ಚು ಆಹರಕ್ಕೆ ದಾಸನಾಗುತ್ತಾ ಸಾಗುತ್ತಾನೆ. ಆದ್ದರಿಂದ ಈ ಕೊಬ್ಬನ್ನು ನಿವಾರಿಸಬೇಕೆಂದರೆ ದೃಢವಾದ ಮನೋಬಲ ಮತ್ತು ಒಂದೂ ದಿನ ಬಿಡದ ವ್ಯಾಯಾಮ ಹಾಗೂ ಸೂಕ್ತ ಆಹಾರಕ್ರಮ, ಜೀವನಕ್ರಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

* ನಿಮ್ಮ ಆಹಾರದಲ್ಲಿ ಇಡಿಯ ಧಾನ್ಯಗಳು, ಸಮತೋಲನದ ಆಹಾರಕ್ರಮ, ಕಡಿಮೆ ಕೊಬ್ಬಿನ ಆಹಾರ ತಯಾರಿಕಾ ಕ್ರಮಗಳಾದ ಬಾಡಿಸುವುದು, ಬೇಯಿಸುವುದು, ಹಬೆಯಲ್ಲಿ ಬೇಯಿಸುವುದು ಸೂಕ್ತ ಆಹಾರಗಳನ್ನೇ ಆರಿಸಿಕೊಳ್ಳುವುದು ಮೊದಲಾದವುಗಳನ್ನು ಅನುಸರಿಸಬೇಕು.

* ವಿಸೆರಲ್ ಕೊಬ್ಬನ್ನು ಕರಗಿಸಲು ವ್ಯಾಯಾಮ ಅನಿವಾರ್ಯ. ರಜಾದಿನವನ್ನೂ ಬಿಡದಂತೆ ನಿತ್ಯವೂ ಮೂವತ್ತು ನಿಮಿಷಗಳ ಕಾಲ ಹೆಚ್ಚಿನ ಶ್ರಮದ ವ್ಯಾಯಾಮ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಇದು ಸಾಧ್ಯವಾಗದೇ ಹೋದರೆ ಇಷ್ಟೇ ಸಮಯದ ವೇಗದ ನಡಿಗೆಯನ್ನಾದರೂ ಸಾಧಿಸಲೇಬೇಕು.

* ಒತ್ತಡಕ್ಕೆ ಕಾರಣವಾಗುವ ರಸದೂತವಾದ ಕಾರ್ಟಿಸೋಲ್ ಸಹಾ ಒಂದು ತೊಂದರೆ ಕೊಡುವ ಮಾಧ್ಯಮವಾಗಿದೆ. ಕಣ್ಣಿಗೆ ಸುಂದರವಾಗಿ ಕಾಣುವ ಅನಾರೋಗ್ಯಕರ ಆಹಾರಗಳನ್ನು ಸೇವಿಸಲು ಇದು ಪ್ರಚೋದನೆ ನೀಡುತ್ತದೆ ಹಾಗೂ ಇದು ಕಾಲಕ್ರಮೇಣ ವಿಸೆರಲ್ ಕೊಬ್ಬು ಸಂಗ್ರಹಣೆಗೆ ಮೂಲವಾಗುತ್ತದೆ. ಆದ್ದರಿಂದ ಒತ್ತಡರಹಿತರಾಗಿರಲು ಧ್ಯಾನ ಮತ್ತು ಯೋಗಾಭ್ಯಾಸಗಳಂತಹ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ವೃತ್ತಿಪರರ ನೆರವನ್ನೂ ಪಡೆದುಕೊಳ್ಳಬೇಕಾಗಿ ಬಂದರೆ ಹಿಂಜರಿಯಬಾರದು. ಒಂದು ವೇಳೆ ನಿಮ್ಮ ಸೊಂಟದ ಸುತ್ತಳತೆ ಮೂವತ್ತೆಂಟು ಇಂಚಿಗೂ ಹೆಚ್ಚಿದ್ದರೆ, ನಿಮ್ಮ ಕುಟುಂಬ ವೈದ್ಯರನ್ನು ಭೇಟಿಯಾಗಿ ಉತ್ತಮ ಆರೋಗ್ಯಕ್ಕಾಗಿ ಯಾವ ಬಗೆಯಲ್ಲಿ ಜೀವನಕ್ರಮವನ್ನು ಬದಲಿಸಿಕೊಳ್ಳಬೇಕು ಎಂದು ಸಲಹೆ ಪಡೆಯುವುದು ಅಗತ್ಯ.

English summary

The Dangers Of Excess Belly Fat

Belly fat can be of two types - Subcutaneous fat or visceral fat, the latter being the more dangerous one. Subcutaneous fat is easier to see and grab, but visceral fat is not. Visceral fat has been called the "active pathogenic fat" over the years because it is present around all the major organs in the abdomen, like the heart, liver, lungs and stomach and excess of it adversely affects these organs. Having an excess of belly fat can have really fatal consequences. Here are a few of them.
X
Desktop Bottom Promotion