For Quick Alerts
ALLOW NOTIFICATIONS  
For Daily Alerts

ಮೂತ್ರದ ಪ್ರಮಾಣ ಕಡಿಮೆಯಾಗುವುದು! ಯಾಕೆ ಹೀಗೆ? ಇದರ ಲಕ್ಷಣವೇನು?

|

ನಮ್ಮ ರಕ್ತವನ್ನು ಮೂತ್ರಪಿಂಡಗಳು ಸತತವಾಗಿ ಶೋಧಿಸುತ್ತಾ ಕಲ್ಮಶಗಳನ್ನು ಮೂತ್ರರೂಪದಲ್ಲಿ ಮೂತ್ರಕೋಶಗಳಲ್ಲಿ ಸಂಗ್ರಹಿಸಿ ಆಗಾಗ ವಿಸರ್ಜಿಸುವ ಮೂಲಕ ಕಲ್ಮಶಗಳನ್ನು ಹೊರಹಾಕುತ್ತವೆ. ಆರೋಗ್ಯವಂತ ವ್ಯಕ್ತಿಗಳೆಲ್ಲರೂ ಆಗಾಗ ಮೂತ್ರ ವಿಸರ್ಜಿಸುತ್ತಲೇ ಇರಬೇಕು. ಇದರ ಪ್ರಮಾಣ ದಿನಕ್ಕೆ ನಾನೂರು ಮಿಲೀ ಗಿಂತಲೂ ಕಡಿಮೆಯಾದರೆ ಮಾತ್ರ ಇದು ಒಲಿಗ್ಯೂರಿಯಾ (oliguria)ಎಂಬ ಕಾಯಿಲೆ ಎದುರಾಗಿರುವುದನು ಪ್ರಕಟಿಸುತ್ತದೆ. ಮಕ್ಕಳಿಗೆ ವಯಸ್ಸಗಿನುಸಾರವಾಗಿ ಈ ಪ್ರಮಾಣ ಬೇರೆಬೇರೆಯಾಗಿರುತ್ತದೆ. ಅಂದರೆ 0.5 ml/kg/h (ಒಂದು ಘಂಟೆಯಲ್ಲಿ ಮಗುವಿನ ತೂಕಕ್ಕನುಗುಣವಾಗಿ ಪ್ರತಿಕೇಜಿಗನುಸಾರ ಸಂಗ್ರಹವಾದ ಮೂತ್ರ 0.5 ಮಿಲಿ ಲೀಟರ್) ಗೂ ಕಡಿಮೆ ಇದ್ದರೆ (ಶಿಶುಗಳಿಗೆ ಇದು ಒಂದು ಮಿಲಿಲೀಟರ್) ಇದನ್ನು ಒಲಿಗ್ಯೂರಿಯಾ ಎಂದು ಕರೆಯಬಹುದು. ಇದರ ಅರ್ಥವೆಂದರೆ 'ಸಾಕಷ್ಟು ಮೂತ್ರ ಇಲ್ಲ' ಎಂದಾಗಿದೆ.

ವೈದ್ಯಕೀಯವಾಗಿ ಹೇಳಬಹುದೆಂದರೆ ಒಲಿಗ್ಯೂರಿಯಾ ಎದುರಾಗಿರುವುದು ಮುಂದೆ ಎದುರಾಗಲಿರುವ ಮೂತ್ರಪಿಂಡಗಳ ವೈಫಲ್ಯದ (renal failure) ಮುನ್ಸೂಚನೆಯಾಗಿದೆ. ಕೆಲವೊಮ್ಮೆ ಮೂತ್ರಪಿಂಡಕ್ಕಾದ ಲಘು ಗಾಯ (acute kidney injury (AKI))ಸೂಚನೆಯೂ ಆಗಿರುತ್ತದೆ. ಅಂದರೆ ಮೂತ್ರಪಿಂಡಗಳ ಕ್ಷಮತೆ ತಗ್ಗಿದ್ದು ಕುಸಿಯುವ ಹಂತದ ಮುನ್ಸೂಚನೆಯೇ ಒರಿಗ್ಯೂರಿಯಾ ಆಗಿದೆ. ಅಲ್ಲದೇ ಇದು ಪ್ರಾರಂಭಿಕ ಹಂತದಲ್ಲಿದ್ದಾಗಲೇ ಒಲಿಗ್ಯೂರಿಯಾ ಕಾಣಿಸಿಕೊಳ್ಳುವುದರಿಂದ ಚಿಕಿತ್ಸೆಯನ್ನೂ ಬೇಗನೇ ಪ್ರಾರಂಭಿಸಿ ಇನ್ನಷ್ಟು ಉಲ್ಬಣಗೊಳ್ಳುವುದರಿಂದ ರಕ್ಷಣೆ ಪಡೆಯುವುದು ಮಾತ್ರವಲ್ಲ ಗುಣವಾಗುವ ಸಾಧ್ಯತೆಗಳೂ ಹೆಚ್ಚುತ್ತವೆ.

Low Urine Output

ಒಲಿಗ್ಯೂರಿಯಾಕ್ಕೆ ಕಾರಣಗಳು

ಮೂತ್ರದ ಪ್ರಮಾಣ ಕಡಿಮೆಯಾಗುವುದನ್ನು ಮೂರು ಹಂತಗಳಲ್ಲಿ ವಿವರಿಸಬಹುದು. ಮೂತ್ರಪಿಂಡಕ್ಕೂ ಮುನ್ನ, ಮೂತ್ರಪಿಂಡಗಳಲ್ಲಿ ಅಥವಾ ಮೂತ್ರಪಿಂಡಗಳ ನಂತರ ಎದುರಾಗುವ ಕಾರಣಗಳು (pre-renal, renal and post-renal).

ಮೊದಲನೆಯ ಸ್ಥಿತಿಯಲ್ಲಿ: ಮೂತ್ರಪಿಂಡಕ್ಕೆ ಹರಿದು ಬರುವ ರಕ್ತದ ಪ್ರಮಾಣವೇ ಕಡಿಮೆಯಾದರೆ ಇಲ್ಲಿ ಸಂಗ್ರಹವಾಗುವ ಮೂತ್ರವೂ ಸ್ವಾಭಾವಿಕವಾಗಿಯೇ ಕಡಿಮೆಯಾಗುತ್ತದೆ. ಅಂದರೆ ಈ ಸ್ಥಿತಿಗೆ ಮೂತ್ರಪಿಂಡ ಉತ್ತಮ ಕ್ಷಮತೆಯನ್ನೇ ಹೊಂದಿದ್ದರೂ ಸಾಕಷ್ಟು ರಕ್ತದ ಹರಿವೇ ಇಲ್ಲದ ಕಾರಣ ಒಲಿಗ್ಯೂರಿಯಾ ಎದುರಾಗುತ್ತದೆ. ಈ ಸ್ಥಿತಿಗೆ ಸಾಮಾನ್ಯ ಕಾರಣಗಳೆಂದರೆ ಉಸಿರಾಟ ತಡೆತಡೆದು ಪೂರ್ಣವಾಗಿ ಆಗದೇ ಇರುವುದು (respiratory distress syndrome), ರಕ್ತನಾಳಗಳು ನಡುವಿನಲ್ಲಿ ಸೀಳಿರುವುದು (haemorrhage), ನವಜಾತ ಶಿಶುವಿಗೆ ಅಗತ್ಯಪ್ರಮಾಣದ ಆಮ್ಲಜನಕ ಪೂರೈಕೆಯಾಗದೇ ಇರುವುದು (perinatal asphyxia),ರಕ್ತದ ಕೆಂಪು ಕಣಗಳು ಹಾನಿಗೊಳಗಾಗಿರುವುದು ಅಥವಾ ವಿರೂಪವಾಗಿರುವುದು (haemolysis),ಜನ್ಮತಃ ಎದುರಾಗಿರುವ ಹೃದಯದ ವೈಕಲ್ಯಗಳು (congenital heart disease)ಇತ್ಯಾದಿ.

Most Read: ಏನಿದು ಯೂರಿನ್ ಕಲ್ಚರ್ ಟೆಸ್ಟ್? ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ?

ಎರಡನೆಯ ಸ್ಥಿತಿಯಲ್ಲಿ: ಇಲ್ಲಿ ಸಾಕಷ್ಟು ರಕ್ತ ಮೂತ್ರಪಿಂಡಕ್ಕೆ ಹರಿದುಬಂದಿದ್ದರೂ ಸಾಕಷ್ಟು ಮೂತ್ರವನ್ನು ಸಂಗ್ರಹಿಸಲು ಸಾಧ್ಯವಾಗದೇ ಹೋಗಬಹುದು (intrinsic kidney disorders). ಈ ಸ್ಥಿತಿಗೆ ಕಾರಣಗಳೆಂದರೆ ಮೂತ್ರಪಿಂಡಗಳ ಒಳಕ್ಕೆ ರಕ್ತ ಕೊಂಡೊಯ್ಯುವ ನಾಳಗಳು ಕಿರಿದಾಗಿರುವುದು (acute tubular necrosis),ಹೊರಭಾಗದಿಂದ ದೇಹಕ್ಕೆ ಆಗಮಿಸಿರುವ ವಿಷಕಾರಿ ವಸ್ತುಗಳು (exogenous toxins) ಹಾಗೂ ದೇಹದಲ್ಲಿಯೇ ಉತ್ಪತ್ತಿಯಾದ ವಿಷಕಾರಿ ವಸ್ತುಗಳು(endogenous toxins), ಜನ್ಮತಃ ಎದುರಾಗಿರುವ ಮೂತ್ರಪಿಂಡದ ತೊಂದರೆಗಳು (congenital kidney disease), ಜನ್ಮತಃ ಎದುರಾಗುವ ಮೂತ್ರಪಿಂಡ ಮತ್ತು ನರವ್ಯವಸ್ಥೆಯಲ್ಲಿ ಇರುವ ದೋಷಗಳು (vascular and transient renal dysfunction of the newborn).

ಮೂರನೆಯ ಸ್ಥಿತಿಯಲ್ಲಿ: ಮೂತ್ರಪಿಂಡಗಳು ಸೂಕ್ತ ಪ್ರಮಾಣದಲ್ಲಿ ರಕ್ತವನ್ನು ಶೋಧಿಸಿದ್ದರೂ ಇದರ ನಂತರದ ತೊಂದರೆಗಳು ಒಲಿಗ್ಯೂರಿಯಾಕ್ಕೆ ಕಾರಣವಾಗಿರಬಹುದು. ಇದಕ್ಕೆ ಕಾರಣಗಳೆಂದರೆ ಮೂತ್ರನಾಳದ ಮೂಲಕ ಮೂತ್ರ ಹೊರಹರಿಯಲು ಇರುವ ಅಡ್ಡಿ (bladder outlet obstruction), ನರವ್ಯವಸ್ಥೆಗೆ ಉಂಟಾದ ತೊಂದರೆಯಿಂದ ಹೊರಹರಿವು ತಡೆದಿರುವುದು (neurogenic bladder), ಮೂತ್ರಪಿಂಡಗಳಿಂದ ತುದಿಯವರೆಗೆ ಮೂತ್ರ ಹರಿಯುವ ಎರಡಲ್ಲಿ ಕನಿಷ್ಟ ಒಂದು ಮೂತ್ರನಾಳದಲ್ಲೂ ಎದುರಾಗಿರುವ ಅಡ್ಡಿ (ureteral obstruction).

ಒಲಿಗ್ಯೂರಿಯಾ ಎದುರಾಗಲು ಮೇಲೆ ತಿಳಿಸಿದ ಕಾರಣಗಳಲ್ಲಿ ಒಂದಕ್ಕಿಂತ ಹೆಚ್ಚು ಕಾರಣಗಳೂ ಅಥವಾ ಇತರ ಕಾರಣಗಳೂ ಜೊತೆಯಾಗಿ ಈ ಸ್ಥಿತಿಯನ್ನು ಉಲ್ಬಣಿಸಿರುವ ಸಾಧ್ಯತೆಗಳೂ ಇವೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:

Most Read: ಸ್ವ ಮೂತ್ರ ಸೇವನೆಯ ಚಿಕಿತ್ಸೆ-ಅಸಹ್ಯ ಪಡಬೇಡಿ, ಇದು ಹಲವಾರು ರೋಗಗಳಿಗೆ ರಾಮಬಾಣ

ನಿರ್ಜಲೀಕರಣ

ಒಲಿಗ್ಯೂರಿಯಾ ಎದುರಾಗಲು ಇದು ಪ್ರಮುಖ ಕಾರಣವಾಗಿದೆ. ಶೋಧಿಸಲು ನೀರೇ ಇಲ್ಲದಿದ್ದರೆ ಮೂತ್ರಪಿಂಡಗಳಿಂದ ಮೂತ್ರ ಹೊರಬರುವುದಾದರೂ ಹೇಗೆ? ದೇಹದಲ್ಲಿ ಸಾಕಷ್ಟು ನೀರು ಲಭ್ಯವಾಗದೇ ಇದ್ದಾಗ ನಿರ್ಜಲೀಕರಣ ಎದುರಾಗುತ್ತದೆ. ಸಾಮಾನ್ಯವಾಗಿ ಅತಿಸಾರ, ಜ್ವರ, ವಾಂತಿ ಅಥವಾ ದೇಹದಿಂದ ನಷ್ಟಗೊಂಡ ನೀರನ್ನು ಮರುತುಂಬಿಸಲು ಕಷ್ಟವಾಗಿಸುವ ಯಾವುದೇ ಕಾಯಿಲೆ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಕೆಲವೆಡೆ ನೀರು ಕುಡಿದರೆ ಮೂತ್ರ ಬರುತ್ತದೆ, ಮೂತ್ರ ವಿಸರ್ಜಿಸಲು ಸೂಕ್ತ ಸ್ಥಳ ಇಲ್ಲ ಎಂಬ ಕಾರಣಕ್ಕೆ ಹಲವು ಸ್ಥಳಗಳಲ್ಲಿ ಮಹಿಳೆಯರು ನೀರನ್ನೇ ಕುಡಿಯದೇ ನಿರ್ಜಲೀಕರಣಕ್ಕೆ ಒಳಗಾಗುತ್ತಾರೆ. ಹಾಗಾಗಿ ದೇಹದಲ್ಲಿ ನೀರು ಕಡಿಮೆಯಾದರೆ ಮೂತ್ರಪಿಂಡವೂ ತನ್ನಲ್ಲಿ ಆಗಮಿಸಿದ ಅತ್ಯಲ್ಪ ನೀರನ್ನು ಮುಂದೆ ಸಾಗಿಸದೇ ತನ್ನಲ್ಲೇ ಉಳಿಸಿಕೊಳ್ಳುತ್ತದೆ.

ಮೂತ್ರವ್ಯವಸ್ಥೆಗೆ ಸಂಪೂರ್ಣ ಅಡ್ಡಿ (Total urinary tract obstruction)

ಒಂದು ವೇಳೆ ಮೂತ್ರಪಿಂಡದಿಂದ ಮೂತ್ರ ಹೊರಬರದೇ ಇದ್ದರೆ ಈ ಸ್ಥಿತಿ ಎದುರಾಗುತ್ತದೆ. ಇದು ಕೇವಲ ಮೂತ್ರಪಿಂಡವೊಂದನ್ನು ಅಥವಾ ವಿಪರೀತ ಸ್ಥಿತಿಯಲ್ಲಿ ಎರಡೂ ಮೂತ್ರಪಿಂಡಗಳನ್ನು ವೈಫಲ್ಯದತ್ತ ಕೊಂಡೊಯ್ಯಬಹುದು. ಮೂತ್ರಪಿಂಡಕ್ಕೆ ಆಗುವ ಹಾನಿಯ ಪ್ರಮಾಣ ಹೆಚ್ಚಿದಷ್ಟೂ ಇದರ ಕ್ಷಮತೆಯೂ ಉಡುಗುತ್ತಾ ಸಾಗುತ್ತದೆ ಹಾಗೂ ಕಡೆಗೊಮ್ಮೆ ಸ್ಥಗಿತಗೊಳ್ಳಲೂಬಹುದು. ಈ ಸ್ಥಿತಿ ಎದುರಾದ ಬಳಿಕ ದೇಹಕ್ಕೆ ವೇಗವಾಗಿ ಇನ್ನಿತರ ತೊಂದರೆಗಳು ಎದುರಾಗುತ್ತವೆ. ಸತತ ವಾಂತಿ, ಮೈಯಿಡೀ ನೋವು, ವಾಕರಿಕೆ, ಜ್ವರ ಹಾಗೂ ಪ್ರಾಸ್ಟೇಟ್ ಗ್ರಂಥಿಯ ಊತ ಮೊದಲಾದವು ಎದುರಾಗುತ್ತವೆ.

Most Read: ಕಳೆದ ಆರು ವರ್ಷದಿಂದ ಈತ ತನ್ನದೇ ಮೂತ್ರ ಕುಡಿಯುತ್ತಿದ್ದನಂತೆ!!

ಕೆಲವು ಔಷಧಿಗಳ ಪರಿಣಾಮ

ಔಷಧಿಗಳನ್ನು ಆರೋಗ್ಯ ವೃದ್ಧಿಗಾಗಿಯೇ ನೀಡಲಾಗುತ್ತದಾದರೂ ಯಾವುದೇ ಔಷಧಿ ಅಡ್ಡಪರಿಣಾಮದಿಂದ ಹೊರತಾಗಿಲ್ಲ. ಹಾಗಾಗಿ ಔಷಧಿಗಳ ಗುಣಲಕ್ಷಣಗಳೊಂದಿಗೇ ಇವುಗಳ ಅಡ್ಡಪರಿಣಾಮಗಳನ್ನೂ ಕಡ್ಡಾಯವಾಗಿ ವಿವರಿಸಲಾಗಿರುತ್ತದೆ. ಮೆದುಳಿಗೆ ತಲುಪುವ ಸಂಕೇತಗಳನ್ನು ತಡೆಯುವ ಔಷಧಿಗಳು (anticholinergics), ಮೂತ್ರವರ್ಧಕ ಔಷಧಿಗಳು, ಕ್ಯಾನ್ಸರ್ ಚಿಕಿತ್ಸೆಗೆ ನೀಡುವ ಔಷಧಿಗಳು (ಖೀಮೋಥೆರಪಿ), ದೇಹದ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವ ಔಷಧಿಗಳು (immunosuppressant drugs) ಮೊದಲಾದವು ಮೂತ್ರದ ಪ್ರಮಾಣವನ್ನು ತಗ್ಗಿಸುತ್ತವೆ. angiotensin-converting enzyme (ACE) inhibitors ಹಾಗೂ gentamicin ಮೊದಲಾದ ಪ್ರತಿಜೀವಕ (ಆಂಟಿ ಬಯಾಟಿಕ್) ಔಷಧಿಗಳ ಸೇವನೆಯಿಂದಲೂ ಈ ತೊಂದರೆ ಎದುರಾಗಬಹುದು.

ರಕ್ತದ ನಷ್ಟವಾಗುವಿಕೆ

ಗಾಯ ಅಥವಾ ಇತರ ಕಾರಣಗಳಿಂದ ದೇಹದಿಂದ ರಕ್ತ ಯಾವುದೇ ರೂಪದಲ್ಲಿಯಾದರೂ ಸರಿ, ಹೊರಹರಿದು ಹೋದರೆ ಹಾಗೂ ಈ ಪ್ರಮಾಣ ಗಣನೀಯವಾದರೆ ಸಹಾ ಒಲಿಗ್ಯೂರಿಯಾ ಎದುರಾಗಬಹುದು. ಏಕೆಂದರೆ ರಕ್ತದ ಕೊರತೆಯಿದ್ದಾಗ ದೇಹ ಅಗತ್ಯ ಕೆಲಸಗಳಿಗೆ ಪೂರ್ಣಪ್ರಮಾಣದ ರಕ್ತವನ್ನು ಶೋಧಿಸದೇ ಬಳಸಿಕೊಳ್ಳಲು ಉಪಯೋಗಿಸುವುದರಿಂದ ಮೂತ್ರಪಿಂಡಗಳಿಗೆ ಆಗಮಿಸುವ ರಕ್ತದ ಪ್ರಮಾಣ ತಗ್ಗುತ್ತದೆ.

ಗಂಭೀರವಾದ ಆಘಾತ / ಸೋಂಕು

ತೀವ್ರ ಆಘಾತಕ್ಕೊಳಗಾದಾಗಲೂ ಒಲಿಗ್ಯೂರಿಯಾ ಎದುರಾಗಬಹುದು. ಸೋಂಕು, ವಿಷ ಅಥವಾ ಅಲರ್ಜಿಯ ಆಘಾತ (anaphylactic shock)ಗಳ ಪರಿಣಾಮದಿಂದಲೂ ದೇಹದ ಒಳಭಾಗ ಅಂಗಗಳು ಪ್ರಭಾವಕ್ಕೊಳಗಾಗುತ್ತವೆ ಹಾಗೂ ಮೊದಲನೆಯ ಸ್ಥಿತಿಯ ಒಲಿಗ್ಯೂರಿಯಾ ಎದುರಾಗಬಹುದು. ನಮ್ಮ ದೇಹದಲ್ಲಿ ಸತತವಾಗಿ ಹರಿಯುತ್ತಿರುವ ಒಟ್ಟಾರೆ ದ್ರವಗಳ ಪ್ರಮಾಣ ಒಂದು ವೇಳೆ ಆಘಾತ ಅಥವಾ ಸೋಂಕಿನಿಂದಾಗಿ ಏರುಪೇರಾದಾಗಲೂ ಈ ಪ್ರಮಾಣವನ್ನು ಸಮತೋಲನದಲ್ಲಿರಿಸುವ ವ್ಯವಸ್ಥಿತ ಪ್ರಕ್ರಿಯೆ (systematic response)ಯ ಕಾರ್ಯವಿಧಾನ ಏರುಪೇರಾಗಿ ಒಲಿಗ್ಯೂರಿಯಾ ಎದುರಾಗಬಹುದು.

ಒಲಿಗ್ಯೂರಿಯಾ ಎದುರಾಗಿರುವ ಇತರ ಲಕ್ಷಣಗಳು:

* ಮೂತ್ರದ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿರುವುದು
* ಮೂತ್ರ ಬಣ್ಣ ಅತಿಯಾಗಿಯೇ ಗಾಢವಾಗಿರುವುದು
* ಅತಿಯಾದ ಸುಸ್ತು
* ಇಡಿಯ ದೇಹದಲ್ಲಿ ನೋವು
• ವಾಕರಿಕೆ
• ದೇಹ ಊದಿಕೊಳ್ಳುವುದು
• ಜ್ವರ
• ವಾಂತಿ

ಇತ್ಯಾದಿಗಳು:

Most Read: ಮೂತ್ರದಲ್ಲಿ ರಕ್ತ: ಅಪ್ಪಿ ತಪ್ಪಿಯೂ ನಿರ್ಲಕ್ಷ್ಯ ಮಾಡಬೇಡಿ

ಒಲಿಗ್ಯೂರಿಯಾ ಇರುವಿಕೆಯ ಪತ್ತೆಹಚ್ಚುವಿಕೆ

ಈ ಸ್ಥಿತಿಗೆ ಎದುರಾಗುವ ಕಾರಣವನ್ನು ಪತ್ತೆ ಹಚ್ಚುವುದು ಮೊದಲ ಆದ್ಯತೆಯಾಗಿದೆ. ಒಂದು ವೇಳೆ ಮೂತ್ರ ಪ್ರಮಾಣ ಕಡಿಮೆಯಾಗಿದ್ದರೆ ಅಥವಾ ಮೇಲೆ ತಿಳಿಸಿದ ಯಾವುದೇ ಲಕ್ಷಣ ಕಂಡುಬಂದರೂ ಆದಷ್ಟೂ ಬೇಗನೇ ವೈದ್ಯರನ್ನು ಕಾಣಬೇಕು. ಅಲ್ಲದೇ ಈ ಸ್ಥಿತಿಗೆ ಯಾವುದೇ ಬಗೆಯ ಸ್ವ ಚಿಕಿತ್ಸೆ ಪಡೆಯದೇ ಕೇವಲ ವೈದ್ಯರ ಸಲಹೆಯನ್ನು ಮಾತ್ರವೇ ಪಡೆಯಬೇಕು.

ಈ ಸ್ಥಿತಿಯ ಕುರಿತಾಗಿ ವೈದ್ಯರು ಹಲವಾರು ಪರೀಕ್ಷೆಗಳನ್ನು ನಡೆಸಬಹುದು ಹಾಗೂ ಇದು ಎಂದಿನಿಂದ ಪ್ರಾರಂಭವಾಯಿತು? ನಿಧಾನವಾಗಿಯೂ, ಥಟ್ಟನೇ ಎದುರಾಯಿತೋ ಮೊದಲಾದ ಅವಶ್ಯಕ ಪ್ರಶ್ನೆಗಳನ್ನು ಕೇಳಬಹುದು. ಈ ಪ್ರಶ್ನೆಗಳಿಗೆ ಆದಷ್ಟೂ ನಿಖರ ಮತ್ತು ಪ್ರಾಮಾಣಿಕ ಉತ್ತರಗಳನ್ನು ನೀಡಬೇಕು. ಅಲ್ಲದೇ ನೀವು ಕುಡಿಯುವ ನಿತ್ಯದ ನೀರು ಮತ್ತು ದ್ರವಾಹಾರದ ಪ್ರಮಾಣದ ಬಗ್ಗೆ ಸೂಕ್ತ ವಿವರಗಳನ್ನು ಸಲ್ಲಿಸಬೇಕು. ಇದರಿಂದ ವೈದ್ಯರಿಗೆ ಸೂಕ್ತ ಕಾರಣ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನೀವು ಸೇವಿಸುವ ದ್ರವಾಹಾರ ಮತ್ತು ನೀರಿನ ಪ್ರಮಾಣ ಈ ಸ್ಥಿತಿಯ ಮೇಲೆ ನೇರವಾದ ಪ್ರಭಾವ ಬೀರುತ್ತದೆ ಎಂಬ ಅರಿವು ನಿಮಗಿರಬೇಕು.

ಸಾಮಾನ್ಯವಾಗಿ ವೈದ್ಯರು ಸಲಹೆ ಮಾಡುವ ಪರೀಕ್ಷೆಗಳು ಇಂತಿವೆ:

ರಕ್ತಪರೀಕ್ಷೆ

ಈ ಪರೀಕ್ಷೆಯ ಮೂಲಕ ಮೂತ್ರಪಿಂಡದ ವೈಫಲ್ಯ, ಮೂತ್ರನಾಳದ ಸೋಂಕು, ರಕ್ತದ ಸೋರುವಿಕೆ, ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವಷ್ಟು ಪ್ರಬಲವಾದ ರಾಸಾಯನಿಕಗಳು ರಕ್ತದಲ್ಲಿ ಇರುವುದು ಮೊದಲಾದ ಅಂಶಗಳನ್ನು ಪರಿಶೀಲಿಸಲಾಗುತ್ತದೆ.

ಸಿಟಿ ಸ್ಕ್ಯಾನ್

ಸೊಂಟ ಮತ್ತು ಹೊಟ್ಟೆಯ ಭಾಗದ ಅಂಗಗಳ ಕ್ಷಮತೆಯನ್ನು ಪರಿಶೀಲಿಸಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ ಹಾಗೂ ವಿಶೇಷವಾಗಿ ಹೊಟ್ಟೆಯ ಒಳ ಅಂಗಗಳು ಮತ್ತು ಮೂತ್ರಪಿಂಡಗಳನ್ನು ಅತಿ ಹತ್ತಿರದಿಂದ ಪರೀಕ್ಷಿಸಲು ಸಾಧ್ಯವಾಗುತ್ತದೆ.

ಮೂತ್ರದ ಪರಿಶೀಲನೆ (Urinalysis)

ಮೂತ್ರದಲ್ಲಿ ಬೆರೆತಿರುವ ಪ್ರೋಟೀನ್, ಬಿಳಿರಕ್ತಕಣಗಳು, ಕೆಂಪುರಕ್ತಕಣಗಳು ಮೊದಲಾದ ಅಂಶಗಳನ್ನು ಪರಿಗಣಿಸಿ ಇವುಗಳಲ್ಲಿ ಯಾವುದರಿಂದಲಾದರೂ ಮೂತ್ರಪಿಂಡ ಅಥವಾ ಮೂತ್ರಕೋಶಗಳಲ್ಲಿ ಸೋಂಕು ಉಂಟಾಗಿರುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತದೆ.

ಮೂತ್ರಪಿಂಡಗಳ ಎಕ್ಸ್ ರೇ (Intravenous pyelogram (IVP)

ರಟ್ಟೆಯ ನರದ ಮೂಲಕ ರಕ್ತವನ್ನು ಗಾಢವಾಗಿಸುವ ದ್ರವವನ್ನು ಇಂಜೆಕ್ಷನ್ ಮೂಲಕ ಹಾಯಿಸಿ ತಕ್ಷಣವೇ ಮಧ್ಯಮ ಪ್ರಾಬಲ್ಯದ ಎಕ್ಸ್ ರೇ ಕಿರಣಗಳನ್ನು ಮೂತ್ರಪಿಂಡ ಮತ್ತು ಮೂತ್ರಕೋಶಗಳ ಮೂಲಕ ಹಾದುಹೋಗುವಂತೆ ಮಾಡಿ, ಪೂರ್ಣ ವಿಸರ್ಜನೆಗೊಳ್ಳುವವರೆಗೆ ಮೂತ್ರವ್ಯವಸ್ಥೆ ಸೂಕ್ತವಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

ಹೊಟ್ಟೆಯ ಭಾಗದ ಅಲ್ಟ್ರಾಸೌಂಡ್ (Abdominal ultrasound)

ಈ ಪರೀಕ್ಷೆಯ ಮೂಲಕ ಹೊಟ್ಟೆಯ ಭಾಗದಲ್ಲಿ ಅಸಹಜವದ ಬೆಳವಣಿಗೆಯೇನಾದರೂ ಆಗಿದೆಯೇ ಅಥವಾ ರಕ್ತ ಮತ್ತು ಮೂತ್ರದ ಹರಿವಿಗೆ ಏನಾದರೂ ತಡೆಯುಂಟಾಗುತ್ತಿದೆಯೇ ಅಥವಾ ಮೂತ್ರಪಿಂಡಗಳಲ್ಲಿ ಸೋಂಕು ಉಂಟಾಗಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ.

ಮೂತ್ರದಲ್ಲಿ ಬ್ಯಾಕ್ಟೀರಿಯಾ ಪರಿಶೀಲನೆ (Urine culture)

ಈ ಪರೀಕ್ಷೆಯಲ್ಲಿ ಮೂತ್ರದಲ್ಲಿ ಏನಾದರೂ ಬ್ಯಾಕ್ಟೀರಿಯಾಗಳಿವೆಯೇ ಇದ್ದರೆ ಎಷ್ಟು ಮಟ್ಟಿಗೆ ವೃದ್ದಿಸಿವೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಈ ಮೂಲಕ ಮೂತ್ರಕೋಶ ಅಥವಾ ಮೂತ್ರಪಿಂಡಗಳಿಗೆ ಎದುರಾಗಿರುವ ಸೋಂಕು ಇರುವುದು ಗೊತ್ತಾಗುತ್ತದೆ.

ಒಲಿಗ್ಯೂರಿಯಾಕ್ಕೆ ಚಿಕಿತ್ಸೆ

ಈ ಸ್ಥಿತಿಯನ್ನು ತಡೆಯಲು ಯಾವುದೇ ಚಿಕಿತ್ಸೆಯಿಲ್ಲ. ಇದೊಂದು ಗಂಭೀರವಾಗಿ ಪರಿಗಣಿಸಬೇಕಾಗಿರುವ ಕಾಯಿಲೆಯಾಗಿದ್ದು ತಕ್ಷಣವೇ ವೈದ್ಯರ ನೆರವು ಮತ್ತು ಪೂರ್ಣ ವೈದ್ಯಕೀಯ ಸೌಲಭ್ಯಗಳ ಅಗತ್ಯವಿದೆ. ಆದರೆ ನಿರ್ಜಲೀಕರಣವೇ ಇದಕ್ಕೆ ಪ್ರಮುಖ ಕಾರಣವಾಗಿರುವುದರಿಂದ ನೀರನ್ನು ತಕ್ಷಣವೇ ಹೆಚ್ಚು ಹೆಚ್ಚಾಗಿ ಕುಡಿಯಲು ಪ್ರಾರಂಭಿಸಿ ಈ ತೊಂದರೆ ನಿವಾರಣೆಯಾಯ್ತೇ ಎಂದು ಪರಿಶೀಲಿಸಿಕೊಳ್ಳಬೇಕು.

ಆದ್ದರಿಂದ ಯಾವುದೇ ಕಾರಣಕ್ಕೂ ನಿರ್ಜಲೀಕರಣಕ್ಕೆ ಒಳಗಾಗುವ ಸ್ಥಿತಿಯನ್ನು ಮುಂಗಂಡು ಸೂಕ್ತ ಸೌಕರ್ಯಗಳನ್ನು ನೀವೇ ಏರ್ಪಡಿಸಿಕೊಳ್ಳಬೇಕು (ಉದಾಹರಣೆಗೆ ಪ್ರಯಾಣದ ಹೊತ್ತಿನಲ್ಲಿ ನೀರಿನ ಬಾಟಲಿಯೊಂದನ್ನು ಜೊತೆಗೆ ತೆಗೆದುಕೊಂಡು ಹೋಗುವುದು)

Most Read: ಮೂತ್ರದಲ್ಲಿ ರಕ್ತದ ಕಣಗಳು ಕಾಣುತ್ತಿವೆಯೇ? ಈ ಲೇಖನ ತಪ್ಪದೇ ಓದಿ

ಒಂದು ವೇಳೆ ವಾಂತಿ, ಅತಿಸಾರ ಅಥವಾ ಇನ್ನಾವುದೇ ತೊಂದರೆ ಎದುರಾದರೆ ನೀವು ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕು. ದೇಹದಲ್ಲಿ ಎಲೆಕ್ಟ್ರೋಲೈಟುಗಳನ್ನು ಉಳಿಸಿಕೊಳ್ಳುವ ದ್ರವಾಹಾರಗಳನ್ನೇ ಹೆಚ್ಚು ಹೆಚ್ಚಾಗಿ ಸೇವಿಸಬೇಕು (ಇದಕ್ಕೆ ಎಳನೀರು ಅತ್ಯುತ್ತಮ)

ದೀರ್ಘಕಾಲದಿಂದ ಅನುಭಸಿಕೊಂಡು ಬರುತ್ತಿರುವ ಒಲಿಗ್ಯೂರಿಯಾ:

ನಮ್ಮಲ್ಲಿ ಹೆಚ್ಚಿನವರಿಗೆ ದೈಹಿಕ ತೊಂದರೆಗಳು ಎಲ್ಲಿಯವರೆಗೆ ಅನಿವಾರ್ಯ ಎನಿಸುವುದಿಲ್ಲವೋ ಅಲ್ಲಿಯವರೆಗೆ ಚಿಕಿತ್ಸೆ ಪಡೆಯದೇ 'ತಾನಾಗಿಯೇ ಗುಣವಾಗುತ್ತದೆ' ಎಂಬ ಹುಸಿಭರವಸೆಯಿಂದ ಇರುವವರಾಗಿದ್ದಾರೆ. ಒಲಿಗ್ಯೂರಿಯಾ ತೊಂದರೆಗೆ ಒಳಗಾದವರೂ ಅಷ್ಟೇ, ತಮ್ಮಿಂದ ಹೊರಹೋಗುತ್ತಿರುವ ಮೂತ್ರದ ಪ್ರಮಾಣ ಕಡಿಮೆಯಾಗಿದ್ದರೂ, ಇದರಿಂದ ಹೆಚ್ಚೇನೂ ತೊಂದರೆ ಇಲ್ಲವಲ್ಲ ಎಂದು ನಿರ್ಲಕ್ಷಿಸಿಬಿಡುತ್ತಾರೆ. ಆದರೆ ಈ ಬಗ್ಗೆ ಅಲಕ್ಷ್ಯ ಸಲ್ಲದು. ಪ್ರಾರಂಭದಲ್ಲಿ ಇದರ ಪರಿಣಾಮ ಗೊತ್ತಗದೇ ಹೋದರೂ ಉಲ್ಬಣಗೊಂಡರೆ ಇದರ ಪರಿಣಾಮ ವಿಪರೀತವಾಗಬಹುದು ಹಾಗೂ ಇವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ತೆರನಾಗಿರಬಹುದು. ಒಂದು ವೇಳೆ ಚಿಕಿತ್ಸೆ ಲಭಿಸದೇ ಹೋದರೆ ಮೂತ್ರಪಿಂಡದ ವೈಫಲ್ಯದ ಹೊರತಾಗಿ ಈ ಕೆಳಗಿನ ಗಂಭೀರ ತೊಂದರೆಗಳು ಕಾಣಿಸಿಕೊಳ್ಳಬಹುದು:

* ಹೃದಯದ ವೈಫಲ್ಯ
* ರಕ್ತಹೀನತೆ
* ರಕ್ತದಲ್ಲಿರುವ ಪ್ಲೇಟ್ಲೆಟ್ ಗಳ ಕ್ಷಮತೆ ಕುಸಿಯುವುದು
* ಅತಿಯಾದ ಒತ್ತಡ
* ಜೀರ್ಣಾಂಗಗಳಲ್ಲಿ ತೊಂದರೆ

English summary

Symptoms & Causes Of Low Urine Output

Oliguria is also defined as the condition of the decreased output of urine, which is caused due to pre-renal, renal and post-renal failures within your body. The most common symptoms of oliguria are dehydration, total urinary tract obstruction, shock or infection, blood loss, and consumption of certain antibiotics. The symptoms of oliguria include fluid retention, dark urine, fatigue, body pain, nausea, and swelling etc.
X
Desktop Bottom Promotion