For Quick Alerts
ALLOW NOTIFICATIONS  
For Daily Alerts

ಮಜ್ಜಿಗೆ ಮತ್ತು ಲಸ್ಸಿ: ಇವೆರಡರಲ್ಲಿ ಆರೋಗ್ಯಕ್ಕೆ ಯಾರು ಹಿತವರು?

By Super
|

ಪಂಚಭಕ್ಷ್ಯ ಪರಮಾನ್ನದಲ್ಲಿ ಅತ್ಯಂತ ಕಡೆಯದಾಗಿ ಸೇವಿಸುವ ಪಾನೀಯವೆಂದರೆ ಮಜ್ಜಿಗೆ. ಉತ್ತರ ಭಾರತದವರು ಮಜ್ಜಿಗೆಯ ಬದಲು ಸಿಹಿಯಾದ ಲಸ್ಸಿಯನ್ನು ಸೇವಿಸುತ್ತಾರೆ. ದಕ್ಷಿಣ ಭಾರತದವರು ಹಸಿಮೆಣಸು, ಬೆಳ್ಳುಳ್ಳಿ ಸೇರಿಸಿದ ಬೆಣ್ಣೆರಹಿತವಾದ ಮಜ್ಜಿಗೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಇವೆರಡೂ ಮೊಸರಿನಿಂದಲೇ ತಯಾರಿಸಿದ್ದರೂ ಪೋಷಕಾಂಶಗಳ ಮತ್ತು ಆರೋಗ್ಯಕರ ವಿಷಯದಲ್ಲಿ ಎರಡರಲ್ಲಿಯೂ ಕೊಂಚ ವ್ಯತ್ಯಾಸವಿದೆ. ಇವೆರಡರಲ್ಲಿ ಯಾವುದನ್ನು ಆರಿಸಿಕೊಳ್ಳುವುದು ಉತ್ತಮ?

ಆಯ್ಕೆ ಕೊಂಚ ಕಷ್ಟ. ಏಕೆಂದರೆ ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ಎರಡೂ ಪಾನೀಯಗಳನ್ನು ಅದಲು ಬದಲಾಗಿ ಹೆಸರಿಸುವುದುಂಟು. ಇದೇ ಬಗೆಯನ್ನು ದೋಸೆಯಲ್ಲಿಯೂ ಕಾಣಬಹುದು. ಕರ್ನಾಟಕದಲ್ಲಿ ಖಾಲಿ ದೋಸೆ ಎಂದು ಕರೆಯಲ್ಪಡುವ ದಪ್ಪದ ದೋಸೆ ಕೇರಳದಲ್ಲಿ ಸೆಟ್ ದೋಸೆಯಾಗಿ ತಮಿಳುನಾಡಿನಲ್ಲಿ ಕಟ್ ದೋಸೆಯಾಗಿಯೂ ಕರೆಯಲ್ಪಡುತ್ತದೆ. ಮಹಾರಾಷ್ಟ್ರದ ಕಡೆ ಸಾದಾ ದೋಸೆ ಎಂದು ಕರೆಯಲ್ಪಡುತ್ತದೆ. ಲಸ್ಸಿ ಮತ್ತು ಮಜ್ಜಿಗೆಗಳ ಬಗ್ಗೆ ಇತರ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಅಮೃತದಂತಹ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ! ನಂಬುತ್ತೀರಾ?

ಲಸ್ಸಿ: ಪಂಜಾಬಿನ ಅತ್ಯಂತ ಪ್ರಸಿದ್ಧ ಪೇಯ

Buttermilk Vs Lassi: Which one wins the health competition?

ಹಾಲಿನ ಹೊಳೆಯೇ ಹರಿಯುವ ಪಂಜಾಬ್ ರಾಜ್ಯದಲ್ಲಿ ಲಸ್ಸಿ ಪ್ರಾರಂಭವಾಗಿರುವ ಬಗ್ಗೆ ಹಲವು ಮಾಹಿತಿಗಳು ದೊರಕುತ್ತವೆ. ಯಥೇಚ್ಛವಾಗಿ ದೊರಕುವ ಹಾಲನ್ನು ವ್ಯರ್ಥಮಾಡಲು ಬಯಸದ ಪಂಜಾಬಿಗಳು ಇದನ್ನು ಮೊಸರನ್ನಾಗಿಸಿ ಬಳಿಕ ಲಸ್ಸಿಯನ್ನಾಗಿಸಿ ಊಟದ ಜೊತೆಗೆ, ದಿನದ ಇತರ ಹೊತ್ತಿನಲ್ಲಿ ಕುಡಿದು ಸದ್ಬಳಕೆ ಮಾಡಿಕೊಳ್ಳುತ್ತಾರೆ. ಗಟ್ಟಿಮೊಸರಿಗೆ ಕೊಂಚ ನೀರು ಸೇರಿಸಿ ಮೊಸರಿನ ಕಡೆಗೋಲಿನಿಂದ ಕಡೆದು ನೊರೆಯಾಗಿಸಿ ರುಚಿಗನುಸಾರವಾಗಿ ಸಕ್ಕರೆ ಅಥವಾ ಉಪ್ಪನ್ನು ಸೇರಿಸಿ ಕುಡಿದರೆ..... ಆಹಾ ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು ರುಚಿ. ಬೇಕಿದ್ದರೆ ಹಣ್ಣುಗಳ ಚಿಕ್ಕ ಚಿಕ್ಕ ತುಂಡುಗಳನ್ನೂ, ಮಸಾಲೆ ಪುಡಿಗಳನ್ನೂ ನಿಮಗಿಷ್ಟವಾದ ಬೇರೆ ರುಚಿಯ ಮಸಾಲೆಗಳನ್ನೂ ಸೇರಿಸಬಹುದು.

ಲಸ್ಸಿಯ ಆರೋಗ್ಯಕರ ಗುಣಗಳು:
೧) ಊಟದ ಕಡೆಯಲ್ಲಿ ಲಸ್ಸಿ ಕುಡಿಯುವುದರಿಂದ ಮೊಸರಿನ ಎಲ್ಲಾ ಗುಣಗಳು ದೇಹಕ್ಕೆ ದೊರಕುತ್ತವೆ. ಮೊಸರು ಈಗಾಗಲೇ ಅರ್ಧಕ್ಕಿಂತ ಹೆಚ್ಚು ಜೀರ್ಣಗೊಂಡಿರುವ ಆಹಾರವಾದುದರಿಂದ ಕಡೆದಿರುವ ಮೊಸರು ಇನ್ನಷ್ಟು ಸುಲಭವಾಗಿ ಜೀರ್ಣವಾಗುತ್ತದೆ. ಜೊತೆಗೆ ಜೀರ್ಣಕ್ರಿಯೆಯಲ್ಲಿಯೂ ನೆರವಾಗುತ್ತದೆ.
೨) ಲಸ್ಸಿಯಲ್ಲಿ ಪ್ರೋಟೀನುಗಳು ಹೇರಳವಾಗಿರುವುದರಿಂದ ದೇಹದ ಸ್ನಾಯುಗಳನ್ನು ಬಲಗೊಳಿಸಲು ನೆರವಾಗುತ್ತದೆ.
೩) ಹಾಲಿನಲ್ಲಿರುವ ಕ್ಯಾಲ್ಸಿಯಂ ಮೊಸರಾಗುವ ವೇಳೆ ನಷ್ಟವಾಗದ ಕಾರಣ ಸುಲಭವಾಗಿ ದೇಹಕ್ಕೆ ದೊರೆತು ಮೂಳೆಗಳು ಮತ್ತು ಹಲ್ಲುಗಳನ್ನು ಬಲಗೊಳಿಸಲು ನೆರವಾಗುತ್ತದೆ.


೪) ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಯಲ್ಲಿಯೂ ನೆರವಾಗುತ್ತದೆ. ಜೊತೆಗೇ ಬಾಯಿ ಮತ್ತು ಗಂಟಲಿನಲ್ಲಿ ಶೇಖರವಾಗಿದ್ದ ಆಹಾರದ ಕಣಗಳಲ್ಲಿರುವ ಬ್ಯಾಕ್ಟೀರಿಯಾಗಳಿಂದ ಆಹಾರ ಕೊಳೆಯುವುದನ್ನು ತಡೆಗಟ್ಟುತ್ತದೆ. ಪರಿಣಾಮವಾಗಿ ಬಾಯಿಯ ದುರ್ವಾಸನೆಯಿಂದ ಮುಕ್ತಿ ದೊರಕುತ್ತದೆ.
೫) ಲಸ್ಸಿಯಲ್ಲಿ ಒಂದು ಊಟದಿಂದ ದೊರಕುವಷ್ಟು ಪೋಷಕಾಂಶಗಳು ದೊರಕುವುದರಿಂದ ಊಟದ ಬದಲಿಗೆ ಒಂದು ದೊಡ್ಡ ಲೋಟ ಕುಡಿದರೆ ಆ ದಿನದ ಊಟ ಮಾಡದಿರದ ಕೊರತೆ ಪೂರ್ಣವಾಗುತ್ತದೆ. ಅಲ್ಲದೇ ಕ್ರೀಡಾಪಟುಗಳು ಮತ್ತು ಹೆಚ್ಚು ದೈಹಿಕ ಶಕ್ತಿಯನ್ನು ವ್ಯಯಿಸುವವರಿಗೆ ಲಸ್ಸಿ ಅಗತ್ಯವಿರುವ ಶಕ್ತಿಯನ್ನೂ ನೀಡುತ್ತದೆ.

ಮಜ್ಜಿಗೆ: ದಕ್ಷಿಣದ ಅಹ್ಲಾದಕರ ಪೇಯ
ಕರ್ನಾಟಕದಲ್ಲಿ ಮಜ್ಜಿಗೆ ಎಂದೂ ಮಹಾರಾಷ್ಟ್ರದಲ್ಲಿ ಛಾಸ್ ಎಂದೂ ಕರೆಯಲ್ಪಡುವ ಈ ಸುಲಭ ಪೇಯವೂ ಮೊಸರಿನಿಂದಲೇ ಮಾಡಿದ್ದುದಾಗಿದೆ. ಗುಜರಾತ್, ರಾಜಸ್ಥಾನಗಳಲ್ಲಿಯೂ ಊಟದ ಬಳಿಕ ಮತ್ತು ಬೇಸಿಗೆಯಲ್ಲಿ ತಂಪನ್ನೆರೆಯುವ ಪಾನೀಯವಾಗಿ ಕುಡಿಯಲ್ಪಡುತ್ತದೆ. ಮಜ್ಜಿಗೆಯನ್ನು ಎರಡು ತರಹದಲ್ಲಿ ತಯಾರಿಸಲಾಗುತ್ತದೆ. ಅಪ್ಪಟ ಮಜ್ಜಿಗೆಯನ್ನು ಮೊಸರನ್ನು ಕಡೆದು ಬೆಣ್ಣೆ ತೆಗೆದಾದ ಬಳಿಕ ಉಳಿದ ನೀರಿಗೆ ಉಪ್ಪು, ಹಸಿಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ ಮೊದಲಾದವುಗಳನ್ನು ಸೇರಿಸಿ ಕುಡಿಯಲಾಗುತ್ತದೆ. ಬೆಣ್ಣೆ ತೆಗೆದು ಉಳಿದ ನೀರನ್ನು ಬಳಸುವಷ್ಟು ವ್ಯವಧಾನವಿಲ್ಲದಿರುವವರು ಮೊಸರಿಗೇ ಧಾರಾಳವಾಗಿ ನೀರನ್ನು ಸೇರಿಸಿ ಉಳಿದ ಖಾರದ ಸಾಮಗ್ರಿಗಳನ್ನು ಸೇರಿಸಿಯೂ ಕುಡಿಯಲಾಗುತ್ತದೆ. ಖಾರ ಹೆಚ್ಚು ಬೇಕೆನ್ನುವವರು ಕೊಂಚ ಕಾಳುಮೆಣಸಿನ ಪುಡಿಯನ್ನೂ ಸೇರಿಸಬಹುದು. ಮಜ್ಜಿಗೆ ಹುಲ್ಲಿನ ತಂಬುಳಿ

ಮಜ್ಜಿಗೆಯ ಆರೋಗ್ಯಕರ ಗುಣಗಳು:


ಪ್ರತಿ ಊಟದ ಬಳಿಕ ಒಂದು ದೊಡ್ಡ ಲೋಟ ಮಜ್ಜಿಗೆ ಕುಡಿಯುವುದರಿಂದ ಈ ಕೆಳಗಿನ ಲಾಭಗಳಿವೆ.
೧) ಪ್ರತಿ ಊಟದ ಬಳಿಕ, ಅದರಲ್ಲಿಯೂ ಮಸಾಲೆಭರಿತ ಆಹಾರದ ಊಟದ ಬಳಿಕ ಮಜ್ಜಿಗೆಯನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ಆಹಾರದ ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾಗುವ ಅನಿಲ ಮತ್ತು ಉರಿಯಾಗುವುದನ್ನು ತಪ್ಪಿಸಿ ಹೊಟ್ಟೆಯುಬ್ಬರ, ವಾಯುಪ್ರಕೋಪದಿಂದ ಕಾಪಾಡುತ್ತದೆ.
೨) ಅಜೀರ್ಣ ಅಥವಾ ಒಗ್ಗದ ಆಹಾರ ಸೇವಿಸಿದ ಬಳಿಕ ಕಾಡುವ ಅತಿಸಾರ, ಆಮ್ಲೀಯತೆ ಮತ್ತು ನೀರಿನ ಕೊರತೆಗಳನ್ನು ಮಜ್ಜಿಗೆ ಸೇವಿಸುವ ಮೂಲಕ ಬಹುತೇಕವಾಗಿ ಕಡಿಮೆಗೊಳಿಸಬಹುದು.
೩) ಮಜ್ಜಿಗೆಯಲ್ಲಿ ಬಿ. ಕಾಂಪ್ಲೆಕ್ಸ್ ವಿಟಮಿನ್ನುಗಳೂ, ಪ್ರೋಟೀನುಗಳೂ ಮತ್ತು ಪೊಟ್ಯಾಶಿಯಂನತಹ ಖನಿಜಗಳೂ ಇರುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ.
೪) ಹಾಲಿನಲ್ಲಿರುವ ಲಾಕ್ಟೋಸ್ ಎಂಬ ಪೋಷಕಾಂಶಕ್ಕೆ ಅಲರ್ಜಿ ಹೊಂದಿರುವ ವ್ಯಕ್ತಿಗಳು ಮಜ್ಜಿಗೆಯನ್ನು ಧಾರಾಳವಾಗಿ ಸೇವಿಸಬಹುದು. ಏಕೆಂದರೆ ಈ ಅಂಶ ಬೆಣ್ಣೆಯ ಮೂಲಕ ನಿವಾರಿಸಲ್ಪಟ್ಟಿರುವುದರಿಂದ ಯಾವುದೇ ಅಲರ್ಜಿಯಾಗದೇ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳನ್ನು ನೀಡುತ್ತದೆ. ಅಲ್ಲದೇ ಕೊಬ್ಬು ಇಲ್ಲದಿರುವುದರಿಂದ ತೂಕ ಇಳಿಸುವವರಿಗೂ ಸೂಕ್ತವಾದ ಆಹಾರವಾಗಿದೆ.
೫) ಒಂದು ಸಂಶೋಧನೆಯ ಪ್ರಕಾರ ಪ್ರತಿದಿನ ಊಟದ ಬಳಿಕ ಮಜ್ಜಿಗೆಯನ್ನು ಸೇವಿಸುವುದರಿಂದ ಹೆಚ್ಚಿನ ರಕ್ತದೊತ್ತಡ ಇಳಿಸಲು ನೆರವಾಗುತ್ತದೆ. ಅಲ್ಲದೇ ರಕ್ತದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಏರದಂತೆ ತಡೆಯುತ್ತದೆ.

ಯಾರು ಹಿತವರು ನಿಮಗೆ ಈ ಎರಡರೊಳಗೆ?
ಎರಡೂ ಪೇಯಗಳ ಬಗ್ಗೆ ತಿಳಿದ ಬಳಿಕ ನಿಮಗೆ ಯಾವ ಪೇಯ ಸೂಕ್ತ ಎಂಬ ಅರಿವಾಗಿರಬಹುದು. ಹೆಚ್ಚಿನ ಶಕ್ತಿ ಅಗತ್ಯವಿರುವವರಿಗೆ ಲಸ್ಸಿ ಸೂಕ್ತವಾದರೆ ತೂಕ ಹೆಚ್ಚಿದ್ದು ಇಳಿಸಲು ಪ್ರಯತ್ನಪಡುತ್ತಿರುವವರಿಗೆ ಮಜ್ಜಿಗೆ ಒಳ್ಳೆಯದು. ಆಹಾರ ಶೀಘ್ರವಾಗಿ ಸಿಗದ ಅಥವಾ ಉತ್ತಮ ಆಹಾರ ಸಿಗದಿರುವ ಸಂದರ್ಭದಲ್ಲಿ ಲಸ್ಸಿ ಉತ್ತಮವಾದರೆ ಭಾರೀ ಊಟದ ಬಳಿಕ ಸೇವಿಸಲು ಮಜ್ಜಿಗೆ ಉತ್ತಮವಾಗಿದೆ. ಬೇಸಿಗೆಯ ಝಳ ಹೆಚ್ಚಿದ್ದು ತಲೆಸುತ್ತುವಂತಿದ್ದರೆ ಲಸ್ಸಿ ಒಳ್ಳೆಯದು. ವಾತಾವರಣ ತಂಪಾಗಿದ್ದು ಹೆಚ್ಚಿನ ಬೆವರು ಇಲ್ಲದಿದ್ದರೆ ಮಜ್ಜಿಗೆ ಉತ್ತಮ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಎರಡರಲ್ಲೊಂದನ್ನು ಆರಿಸಿಕೊಳ್ಳಬಹುದು.

English summary

Buttermilk Vs Lassi: Which one wins the health competition?

Buttermilk and Lassi are the most commonly available and favourite summer drink for the people of India. They both are made from yoghurt but there is a lot of difference in how they are made as well as their qualities. But still, many a times they are confused as one or either their names are interchanged.
X
Desktop Bottom Promotion