For Quick Alerts
ALLOW NOTIFICATIONS  
For Daily Alerts

ದೊಡ್ಡಪತ್ರೆಯನ್ನು ರೋಗನಿರೋಧಕ ಶಕ್ತಿ ವೃದ್ಧಿಸಲು ಬಳಸುವುದು ಹೇಗೆ?

By Lavakumar
|

ಇಲ್ಲಿ ತನಕ ಜ್ವರ, ಶೀತ ಕಾಣಿಸಿಕೊಂಡರೆ ಮಾತ್ರೆ ನುಂಗಿದರೆ ಅದು ಸರಿ ಹೋಗುತ್ತಿತ್ತು. ಅಷ್ಟೇ ಅಲ್ಲ ಜ್ವರ, ಶೀತಕ್ಕೆ ಅಷ್ಟೊಂದಾಗಿ ಯಾರೂ ಹೆದರುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಕೊರೋನಾ ಸೋಂಕು ಕಾಲಿಟ್ಟ ಬಳಿಕ ಎಲ್ಲರೂ ಭಯ ಬಿದ್ದಿದ್ದಾರೆ. ಇದನ್ನು ಎದುರಿಸುವ ಸಲುವಾಗಿ ಎಲ್ಲ ರೀತಿಯ ಸರ್ಕಸ್ ಮಾಡುತ್ತಿದ್ದಾರೆ.

ಬಹಳಷ್ಟು ಮಂದಿ ಆಯುರ್ವೇದಿಕ್ ಗಿಡಮೂಲಿಕೆಗಳತ್ತ ಮುಖ ಮಾಡಿದ್ದಾರೆ. ವಿವಿಧ ಗಿಡಮೂಲಿಕೆಗಳನ್ನು ಬಳಸಿ ಕಷಾಯ ಮಾಡಿ ಕುಡಿಯುವ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಇದೀಗ ನಮಗೆ ನಮ್ಮ ಹಿತ್ತಲಲ್ಲೇ ಇರುವ ಗಿಡಗಳಲ್ಲಿರುವ ಔಷಧೀಯ ಮಹತ್ವಗೊತ್ತಾಗುತ್ತಿದೆ. ನಮಗೆ ಗೊತ್ತಿಲ್ಲದಷ್ಟು ಔಷಧೀಯ ಗುಣಗಳು ನಮ್ಮ ಸುತ್ತಮುತ್ತ ಬೆಳೆಯುವ ಸಸ್ಯಗಳಲ್ಲಿರುತ್ತವೆ. ಹಿಂದಿನ ಕಾಲದವರು ಅವುಗಳ ಮಹತ್ವವನ್ನು ಅರಿತು ಅವುಗಳನ್ನು ಬಳಕೆ ಮಾಡುತ್ತಿದ್ದರು.

ದೊಡ್ಡಪತ್ರೆ ಬೆಳೆಯಲು ಕಾರಣವಿದೆ..

ದೊಡ್ಡಪತ್ರೆ ಬೆಳೆಯಲು ಕಾರಣವಿದೆ..

ಗಿಡಗಳಲ್ಲಿರುವ ಔಷಧಿಯನ್ನು ತಿಳಿದು ಅದನ್ನು ತಮ್ಮ ಮನೆಗಳ ಹಿತ್ತಲಲ್ಲಿ ಬೆಳೆಯುತ್ತಿದ್ದರು. ಇಂತಹ ಗಿಡಗಳ ಪೈಕಿ ದೊಡ್ಡಪತ್ರೆಯೂ ಒಂದಾಗಿದೆ. ಇದನ್ನು ಮನೆಯ ಹಿತ್ತಲಲ್ಲಿ ಬೆಳೆಯಲು ಕಾರಣವೂ ಇದೆ. ಅವತ್ತಿನ ಕಾಲದಲ್ಲಿ ಕಾಲಾರದಂತಹ ರೋಗವನ್ನೇ ಹತೋಟಿಗೆ ತರುವಂತಹ ಶಕ್ತಿಯನ್ನು ಇದು ಹೊಂದಿತ್ತು.

ಇವತ್ತಿಗೂ ದೊಡ್ಡಪತ್ರೆ ಗಿಡಗಳು ಹೆಚ್ಚಿನ ಮನೆಗಳ ಹಿತ್ತಲಿನಲ್ಲಿ ಕಂಡು ಬರುತ್ತದೆ. ಇದನ್ನು ಸಂಬಾರಬಳ್ಳಿ, ಸಾವಿರ ಸಂಬಾರ(ಅಜವಾನದೆಲೆ), ಕರ್ಪೂರವಳ್ಳಿ, ಚೆಂಪರವಳ್ಳಿ ಹೀಗೆ ಹಲವು ಹೆಸರುಗಳಿಂದ ಕರೆಯುವುದನ್ನು ನಾವು ಕಾಣಬಹುದು. ಇದು ನೆಲದ ಮೇಲೆ ಪೊದೆಯಾಗಿ ಬೆಳೆಯುತ್ತದೆ. ಎಲೆಗಳು ಹಸಿರಾಗಿ, ದಪ್ಪವಾಗಿರುತ್ತದೆ. ಅಷ್ಟೇ ಅಲ್ಲ ಎಲೆಗಳಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಎಲೆಗಳನ್ನು ಕೊಯ್ದು ಸ್ವಲ್ಪ ಬೆಂಕಿಯಲ್ಲಿ ಬಾಡಿಸಿ ಹಿಂಡಿದರೆ ನೀರು ಸಿಗುತ್ತದೆ. ಈ ನೀರಿನಲ್ಲಿ ಔಷಧಿಯ ಗುಣವಿದೆ.

ವಿಟಿಸ್ ಇಂಡಿಕಾ ಸಸ್ಯವರ್ಗಕ್ಕೆ ಸೇರಿದೆ

ವಿಟಿಸ್ ಇಂಡಿಕಾ ಸಸ್ಯವರ್ಗಕ್ಕೆ ಸೇರಿದೆ

ಸುವಾಸನೆ ಹೊಂದಿರುವ ದೊಡ್ಡಪತ್ರೆ ವಿಟಿಸ್ ಇಂಡಿಕಾ ಎಂಬ ಸಸ್ಯವರ್ಗಕ್ಕೆ ಸೇರಿದೆ. ಜ್ಯೇಷ್ಠದಿಂದ ಭಾದ್ರಪದದವರೆಗೆ ಎಲೆಗಳು ಹುಲುಸಾಗಿ ಬೆಳೆದಿರುತ್ತವೆ. ತೇವವಿರುವ ಮತ್ತು ಜವಳು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮನೆಗಳಲ್ಲಿ ಹೂಕುಂಡಗಳಲ್ಲಿ ಇದನ್ನು ಬೆಳೆಸಬಹುದಾಗಿದೆ.

ಭಾರತದ ಮಲಬಾರ ತೀರ ಸೇರಿದಂತೆ ಕರ್ನಾಟಕದ ಹೆಚ್ಚಿನ ಕಡೆ ಇದು ಚೆನ್ನಾಗಿ ಬೆಳೆಯುತ್ತದೆ. ಉಷ್ಣವಲಯದ ಏಷಿಯಾ ಮತ್ತು ಆಫ್ರಿಕಾ ಖಂಡದಲ್ಲಿ ಸಾಧಾರಣವಾಗಿ ಇಪ್ಪತ್ತು ಪ್ರಭೇದಗಳಿವೆಯಂತೆ. ಭಾರತದಲ್ಲಿ ಸುಮಾರು ಹದಿಮೂರು ಬಗೆಗಳಿದ್ದು ಅವುಗಳಲ್ಲಿ ಕೆರೆನೋಷಸ್‌ವಾಲ್(ಅಚಿಡಿoಟಿosus ತಿಚಿಟಟ) ಎಂಬ ವರ್ಗ ಹೆಚ್ಚು ಜನಪ್ರಿಯವಾಗಿದ್ದು, ಅದನ್ನೇ ಹೆಚ್ಚಾಗಿ ಬೆಳೆಸುತ್ತಾರೆ. ಪೊದೆಯಂತೆ ಕಾಂಡ ಹರಡಿ ಬೆಳೆಯುವುದರಿಂದ ಸಸ್ಯಾಭಿವೃದ್ಧಿಗೆ ಕಾಂಡವನ್ನು ಬಳಸಬಹುದಾಗಿದೆ.

ಹಲವು ರೋಗಗಳಿಗೆ ದಿವ್ಯೌಷಧಿ

ಹಲವು ರೋಗಗಳಿಗೆ ದಿವ್ಯೌಷಧಿ

ದೊಡ್ಡಪತ್ರೆ ಮನೆಯ ಹಿತ್ತಲಿನಲ್ಲಿ ನೆಟ್ಟು ಬೆಳೆಸುವುದರಿಂದ ಏನು ಉಪಯೋಗ ಎಂಬುವುದನ್ನು ನೋಡುವುದಾದರೆ, ಇದನ್ನು ಮಕ್ಕಳಲ್ಲಿ ಕಂಡು ಬರುವ ಉಬ್ಬಸ ಕಫಗಳ ನಿವಾರಣೆಗೆ ಬಳಸಬಹುದಂತೆ ಅದು ಹೇಗೆಂದರೆ? ಗಿಡದಿಂದ ಎಲೆಗಳನ್ನು ಕೊಯ್ದು ಚೆನ್ನಾಗಿ ತೊಳೆದು ಕೆಂಬೂದಿಯಲ್ಲಿ ಅಥವಾ ಬೆಂಕಿಯಲ್ಲಿ ಬಾಡಿಸಿಕೊಂಡು ಮಕ್ಕಳ ಎದೆಗೆ ಶಾಖ ಕೊಡಬಹುದಾಗಿದೆ.

ಎಲೆಗಳಿಂದ ಕಷಾಯ ಮಾಡಿ ಕುಡಿದರೆ ಕೆಮ್ಮು, ಉಬ್ಬಸ ಕಡಿಮೆಯಾಗುತ್ತದೆ. ಎಲೆಗಳಲ್ಲಿ ಕ್ಲೇಷ್ಮ ಬಿಡಿಸುವ ಗುಣವಿರುವುದರಿಂದ ಕಫ, ನೆಗಡಿಯಾಗಿ ಮೂಗು ಕಟ್ಟಿದರೆ ಎಲೆಗಳನ್ನು ಬಿಸಿ ಬೂದಿ ಇರುವ ಒಲೆಯಲ್ಲಿ ಹಾಕಿಬಾಡಿಸಿ ಬಳಿಕ ಎಲೆಯನ್ನು ಹಿಂಡಿ ಅದರಿಂದ ಬರುವ ಮೂರ‍್ನಾಲ್ಕು ತೊಟ್ಟು ರಸವನ್ನು ಜೀರಿಗೆ ಕಷಾಯದಲ್ಲಿ ಹಾಕಿ ಕುಡಿದರೆ ಒಳ್ಳೆಯದಾಗುತ್ತದೆ. ಶೀತದಿಂದಾಗಿ ಮಕ್ಕಳಿಗೆ ಮಲಬದ್ಧತೆಯಾದರೆ ಎಲೆಗಳ ರಸದಲ್ಲಿ ಜೇನುತುಪ್ಪ ಬೆರೆಸಿ ಕುಡಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

ತುರಿಕೆ, ಕಜ್ಜಿಗೆ ರಾಮಬಾಣ

ತುರಿಕೆ, ಕಜ್ಜಿಗೆ ರಾಮಬಾಣ

ಎಳ್ಳೆಣ್ಣೆಗೆ ದೊಡ್ಡಪತ್ರೆ ರಸವನ್ನು ಸೇರಿಸಿ ತಲೆಗೆ ಹಚ್ಚುವುದರಿಂದ ತಲೆ ತಂಪಾಗುತ್ತದೆ. ಅಷ್ಟೇ ಅಲ್ಲ ಕಣ್ಣುರಿಯೂ ಕಡಿಮೆಯಾಗುತ್ತದೆ. ಇನ್ನು ಬೇಸಿಗೆ ಸಮಯದಲ್ಲಿ ಬಿಗಿಯಾದ ಬಟ್ಟೆ ತೊಡುವುದರಿಂದ ಬೆವರಿನಿಂದ ತುರಿಕೆ, ಕಜ್ಜಿ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ದೊಡ್ಡಪತ್ರೆ ಎಲೆ, ಅರಶಿನ ಪುಡಿ ಸೇರಿಸಿ ಸೇರಿಸಿ ಬೆಣ್ಣೆಯಲ್ಲಿ ಅರೆದು ಚೆನ್ನಾಗಿ ಕಲೆಸಿ ಮುಲಾಮು ಮಾಡಿಟ್ಟುಕೊಂಡು ದಿನಕ್ಕೆ ಒಂದೆರಡು ಬಾರಿ ಹಚ್ಚುತ್ತಾ ಬಂದರೆ ತುರಿಕೆ ಮಾಯವಾಗುತ್ತದೆ.

ಇನ್ನು ಎಲೆಗಳ ರಸವನ್ನು ತೆಗೆದು ಗಂಟೆಗೊಮ್ಮೆ ಒಂದು ಚಮಚದಷ್ಟು ಕಾಯಿಸಿ ಆರಿಸಿದ ನೀರಿನಲ್ಲಿ ಹಾಕಿ ಕುಡಿದರೆ ಕಾಲರಾ ಹತೋಟಿಗೆ ಬರುವುದು. ಶೀತ, ಕೆಮ್ಮಿಗೆ ಕಬ್ಬಿನ ರಸದೊಂದಿಗೆ ಎಲೆಗಳ ರಸವನ್ನು ಬೆರೆಸಿ ಕುಡಿಯಬಹುದಾಗಿದೆ.

ತೆಂಗಿನ ಹಾಲಿನೊಂದಿಗೆ ಡೊಡ್ಡಪತ್ರೆ ಬೇರಿನ ರಸವನ್ನು ಬೆರೆಸಿ ಕುಡಿದರೆ ಅಲ್ಸರ್ ಗುಣವಾಗುತ್ತದೆ ಎನ್ನಲಾಗಿದೆ. ಇನ್ನು ಕುರುನಂತಹ ವೃಣಗಳಾದಾಗ ಬೇರನ್ನು ಜಜ್ಜಿ ಎಣ್ಣೆ ಮತ್ತು ತೆಂಗಿನ ಹಾಲಿನೊಂದಿಗೆ ಬೆರೆಸಿ ಹಚ್ಚಬೇಕು. ಇನ್ನು ಎಲೆಗಳನ್ನು ಚಟ್ನಿ, ತಂಬುಳಿ ಮೊದಲಾದವುಗಳನ್ನು ಸೇವಿಸಿದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಆರೋಗ್ಯದ ಗಣಿಯಾಗಿರುವ ದೊಡ್ಡಪತ್ರೆಯನ್ನು ಮನೆಯ ಹಿತ್ತಲಿನಲ್ಲಿ ಬೆಳೆಯುವುದರಿಂದ ಹಲವು ರೀತಿಯ ಉಪಯೋಗ ಪಡೆಯಬಹುದು ಎಂಬುವುದರಲಿ ಎರಡು ಮಾತಿಲ್ಲ.

English summary

How to Use Oregano Leaves to Boost Immunity in Kannada

Oregano has amazing health benefits, here is how to use oregano leaves to immunity boost, read on....
Story first published: Wednesday, September 9, 2020, 17:29 [IST]
X
Desktop Bottom Promotion