For Quick Alerts
ALLOW NOTIFICATIONS  
For Daily Alerts

  ನಮ್ಮ ಮೊಸರನ್ನದಲ್ಲಿದೆ ಆರೋಗ್ಯದ ಗುಟ್ಟು! ತಪ್ಪದೇ ಸೇವಿಸಿ

  By Arshad
  |

  ಮೊಸರಿನ ಸೇವನೆಯಿಂದ ಎಷ್ಟೋ ಬಗೆಯ ಆರೋಗ್ಯಕರ ಪ್ರಯೋಜನಗಳಿವೆ ಎಂಬುದನ್ನು ನೂರಾರು ವರ್ಷಗಳಿಂದ ಅರಿತು ಬಂದ ವಿಷಯವಾಗಿದೆ. ಆದರೆ ಮೊಸರನ್ನವನ್ನು ನಿತ್ಯವೂ, ಇದು ಸಾಧ್ಯವಾಗದಿದ್ದರೆ ಆದಷ್ಟೂ ನಿಯಮಿತವಾಗಿ ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುವುದು ಮಾತ್ರವಲ್ಲ, ಒಟ್ಟಾರೆ ಆರೋಗ್ಯವೂ ವೃದ್ಧಿಸುತ್ತದೆ. ಮೊಸರನ್ನ ದಕ್ಷಿಣ ಭಾರತದಲ್ಲಿ ಮೊದಲಾಗಿ ಪ್ರಾರಂಭವಾಯಿತು ಎಂದು ತಿಳಿದುಬರುತ್ತದೆ. ಆದರೆ ಇದರ ಆರೋಗ್ಯಕರ ಗುಣವನ್ನು ಕಂಡುಕೊಂಡ ಬಳಿಕ ಇಡಿಯ ದೇಶದ ಜನರು ಈಗ ಸೇವಿಸುತ್ತಿದ್ದಾರೆ. ಇಂದು ಉತ್ತರ ಭಾರತದಲ್ಲಿ ಅತಿ ಜನಪ್ರಿಯ ತಿನಿಸಾಗಿದ್ದು, ವಿಶೇಷವಾಗಿ ಬೇಸಿಗೆಯಲ್ಲಿ ಜನರು ಹೆಚ್ಚಾಗಿ ಸೇವಿಸುತ್ತಾರೆ.

  ಅದರಲ್ಲೂ ಹೊಟ್ಟೆ ಕೆಟ್ಟಿದ್ದರೆ ಮೊಸರನ್ನವೇ ಅತಿ ಸೂಕ್ತವಾದ ಆಹಾರವಾಗಿದೆ ಎಂದು ಇಂದು ಎಲ್ಲರೂ ತಿಳಿದುಕೊಂಡಿರುವುದರಿಂದ ಹೊಟ್ಟೆಯ ಸಾಮಾನ್ಯ ತೊಂದರೆಗಳಿಗೆ ವೈದ್ಯರ ಬಳಿ ಹೋಗುವ ಮುನ್ನ ಮೊಸರನ್ನವನ್ನು ಸೇವಿಸುವುದನ್ನು ಪ್ರಥಮ ಚಿಕಿತ್ಸೆಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಬನ್ನಿ, ತಯಾರಿಸಲು ಅತ್ಯಂತ ಸುಲಭವಾದ ಈ ಮೊಸರನ್ನ ಸೇವಿಸುವ ಮೂಲಕ ಎಷ್ಟೆಲ್ಲಾ ಆರೋಗ್ಯಕರ ಲಾಭಗಳಿವೆ ಎಂಬುದನ್ನು ನೋಡೋಣ:

  curd rice benefits in kannada

  ಹೊಟ್ಟೆಯುಬ್ಬರಿಕೆ

  • ಹೊಟ್ಟೆಯುಬ್ಬರಿಕೆಯಾದರೆ ಇದಕ್ಕೆ ತಕ್ಷಣದ ಪರಿಹಾರವೆಂದರೆ ಮೊಸರನ್ನದ ಸೇವನೆ. ಅಜೀರ್ಣತೆ ಅಥವಾ ಹೊಟ್ಟೆ ಕೆಟ್ಟಿರುವ ಯಾವುದೇ ಸೂಚನೆ ಕಂಡು ಬಂದರೆ ಮೊದಲಾಗಿ ಮೊಸರನ್ನವನ್ನು ಸೇವಿಸಿಬಿಡಬೇಕು. ಅಲ್ಲದೇ ಮೊಸರನ್ನ ಜೀರ್ಣಿಸಿಕೊಳ್ಳಲು ಸುಲಭವಾಗಿರುವ ಕಾರಣ ಎಲ್ಲಾ ವಯಸ್ಸಿನವರೂ ಇದನ್ನು ಯಾವುದೇ ಅಳುಕಿಲ್ಲದೇ ಸೇವಿಸಬಹುದು.

  ಮೊಸರನ್ನ ತಣ್ಣಗಿರುವಾಗಲೇ ಸೇವಿಸಿ

  • ಮೊಸರನ್ನವನ್ನು, ತಣ್ಣಗಿದ್ದಂತೆಯೇ, ನಿತ್ಯವೂ ಸೇವಿಸಬೇಕೆಂದು ಆಹಾರತಜ್ಞರ ಅಭಿಪ್ರಾಯವಾಗಿದೆ. ಇದರಿಂದ ದೇಹವನ್ನು ಒಳಗಿನಿಂದ ತಪಾಗಿರಿಸಲು ಸಾಧ್ಯವಾಗುತ್ತದೆ ಹಾಗೂ ದೇಹದ ತಾಪಮಾನವನ್ನೂ ಆರೋಗ್ಯಕರ ಮಿತಿಗಳಲ್ಲಿರಿಸಬಹುದು. ವಿಶೇಷವಾಗಿ ಜ್ವರ ಆವರಿಸಿದಾಗ ಸೇವಿಸಲು ಮೊಸರನ್ನ ಅತ್ಯುತ್ತಮವಾದ ಆಹಾರವಾಗಿದೆ. ಅಲ್ಲದೇ, ಬೇಸಿಗೆಯ ದಿನಗಳಲ್ಲಿ, ಮೊಸರನ್ನದ ಸೇವನೆಯಿಂದ ದೇಹ ಅತಿ ಶೀಘ್ರವಾಗಿ ತಾಪವೇರದಂತೆ ನೋಡಿಕೊಳ್ಳುವ ಮೂಲಕ ಬಿಸಿಲ ಝಳವನ್ನು ಸಹಿಸಿಕೊಳ್ಳಲೂ ನೆರವಾಗುತ್ತದೆ.

  curd rice benefits in kannada

  ಮೊಸರಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು

  ಮೊಸರಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು, ಜೀರ್ಣಸ್ನೇಹಿ ಬ್ಯಾಕ್ಟೀರಿಯಾಗಳು ಹಾಗೂ ಕೊಬ್ಬುಗಳು ಎಲ್ಲವೂ ಆರೋಗ್ಯಕ್ಕೆ ಉತ್ತಮವೇ ಆಗಿವೆ. ಅಲ್ಲದೇ ಮೊಸರಿನ ಸೇವನೆಯಿಂದ ಮಾನಸಿಕ ಒತ್ತಡವನ್ನೂ ಸುಲಭವಾಗಿ ನಿರ್ವಹಿಸಬಹುದು. ಇದೇ ಕಾರಣಕ್ಕೆ ಮೊಸರನ್ನು ಒತ್ತಡ ನಿವಾರಕವೆಂದೂ ಕರೆಯುತ್ತಾರೆ. ಅಲ್ಲದೇ ಭಾವನೆಗಳ ಮೂಲಕ ಮೆದುಳಿಗೆ ಎದುರಾಗುವ ನೋವು ಮತ್ತು ವೇದನೆಯನ್ನೂ ನಿರ್ವಹಿಸಲು ಮೊಸರು ನೆರವಾಗುತ್ತದೆ.

  ತೂಕ ಕಳೆದುಕೊಳ್ಳಲು

  ತೂಕ ಕಳೆದುಕೊಳ್ಳುವ ಯತ್ನದಲ್ಲಿರುವ ವ್ಯಕ್ತಿಗಳು ಅತಿ ಹೆಚ್ಚು ಜನರು ಬಯಸುವ ಆಹಾರವಾಗಿರುವ ಮೊಸರನ್ನ ದಿನದ ಒಂದು ಹೊತ್ತಿನಲ್ಲಾದರೂ, ಕೊಂಚ ಪ್ರಮಾಣದಲ್ಲಿಯಾದರೂ ಇರಬೇಕೆಂದು ಬಯಸುತ್ತಾರೆ. ಒಂದು ಕಪ್ ನಷ್ಟು ಮೊಸರನ್ನ ಸೇವಿಸಿದರೆ ಹೊಟ್ಟೆ ತುಂಬಿದಂತಾಗುತ್ತದೆ ಹಾಗೂ ಅನಗತ್ಯವಾಗಿ ಹೆಚ್ಚಿನ ಕ್ಯಾಲೋರಿ ಇರುವ ಅನಾರೋಗ್ಯಕರ ಆಹಾರ ಸೇವನೆಯಿಂದ ತಡೆಯುತ್ತದೆ. ಅನ್ನದಿಂದ ತಯಾರಿಸುವ ಇತರ ಖಾದ್ಯಗಳಾದ ಪಲಾವ್, ಘೀ ರೈಸ್ ಮೊದಲಾದವುಗಳಿಗೆ ಹೋಲಿಸಿದರೆ ಮೊಸರನ್ನದಲ್ಲಿ ನಗಣ್ಯ ಪ್ರಮಾಣದ ಕ್ಯಾಲೋರಿಗಳಿವೆ.

  ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು

  ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳ ಕಾರಣ ಅನಾರೋಗ್ಯದ ಸಮಯದಲ್ಲಿ ಸೇವಿಸಲು ನೀಡುವ ಪ್ರಮುಖ ಆಹಾರವಾಗಿ ಮೊಸರನ್ನವನ್ನು ಆಯ್ಕೆ ಮಾಡಲಾಗುತ್ತದೆ. ಮೊಸರನ್ನದ ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ದಿಸುತ್ತದೆ ಹಾಗೂ ಹಲವಾರು ಸೋಂಕುಗಳ ವಿರುದ್ದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಶಕ್ತಿಯನ್ನು ನೀಡುವ ಮೂಲಕ ಅನಾರೋಗ್ಯದಿಂದ ಶೀಘ್ರವೇ ಚೇತರಿಸಿಕೊಳ್ಳಲೂ ಸಹಕರಿಸುತ್ತದೆ.

  curd rice benefits in kannada

  ಇನ್ನೂ ಕೆಲವು ಕಾರಣಗಳಿವೆ

  ಮೇಲೆ ವಿವರಿಸಿದ ಕಾರಣಗಳಿಗೆ ಹೊರತಾಗಿ, ಮೊಸರನ್ನವನ್ನು ಕಡ್ಡಾಯವಾಗಿ ಏಕೆ ಸೇವಿಸಬೇಕೆಂದು ನಿರೂಪಿಸಲು ಇನ್ನೂ ಕೆಲವು ಕಾರಣಗಳಿವೆ. ಮೊಸರನ್ನವನ್ನು ಹಾಲುಹಲ್ಲಿನ ಪುಟ್ಟ ಮಕ್ಕಳಿಗೂ ಸೇವಿಸಲು ನೀಡಬಹುದು. ಮೊಸರನ್ನದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರ್ಬೋಹೈಡ್ರೇಟುಗಳು ಹಾಗೂ ಪ್ರೋಟೀನುಗಳು ದೇಹದ ಅಗತ್ಯತೆಯನ್ನು ಪೂರೈಸುತ್ತದೆ ಹಾಗೂ ವಿಶೇಷವಾಗಿ ಹುರಿದ ಅಥವಾ ಖಾರವಾಗಿರುವ ಆಹಾರಗಳ ಸೇವನೆಯ ಬಳಿಕ ಮೊಸರನ್ನವನ್ನು ಸೇವಿಸಿದರೆ ಜೀರ್ಣಕ್ರಿಯೆ ನೆರವಾಗುತ್ತದೆ ಹಾಗೂ ಮರುದಿನದ ಬಹಿರ್ದೆಸೆಯ ಸಮಯದಲ್ಲಿ ಉರಿಯಾಗದಂತೆ ರಕ್ಷಿಸುತ್ತದೆ. ವಿಶೇಷವಾಗಿ ಮೊಸರಿನ ಸೇವನೆಯಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ ಹಾಗೂ ಇದೇ ಕಾರಣಕ್ಕೆ ಮುಖಕ್ಕೆ ಲೇಪಿಸುವ ಕೆಲವಾರು ಮುಖಲೇಪಗಳಲ್ಲಿ ಮೊಸರನ್ನು ಬಳಸಲಾಗುತ್ತದೆ.

  ಮೊಸರನ್ನವನ್ನು ತಯಾರಿಸುವುದು ಹೇಗೆ?

  ಮೊಸರನ್ನವನ್ನು ಸುಲಭವಾಗಿ, ಕೆಲವೇ ಕ್ಷಣಗಳಲ್ಲಿ ತಯಾರಿಸಬಹುದು. ಒಂದು ಚಿಕ್ಕ ಪಾತ್ರೆಯಲ್ಲಿ ಸರಿಸುಮಾರು ಸಮಪ್ರಮಾಣದಲ್ಲಿ ಅನ್ನ ಮತ್ತು ಮೊಸರನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಹುರಿಯುವ ಪಾತ್ರೆಯಲ್ಲಿ ಕೊಂಚ ಎಣ್ಣೆ ಬಿಸಿ ಮಾಡಿ ಕೊಂಚ ಸಾಸಿವೆ, ಜೀರಿಗೆ, ಕಡ್ಲೆ ಬೇಳೆ ಹಾಗೂ ಬೇವಿನ ಎಲೆಗಳನ್ನು ಹಾಕಿ ಒಗ್ಗರಣೆ ಕೊಡಿ. ಬಳಿಕ ಇದರಲ್ಲಿ ಮಿಶ್ರಣ ಮಾಡಿಟ್ಟಿದ್ದ ಮೊಸರನ್ನವನ್ನು ಬೆರೆಸಿ ಚೆನ್ನಾಗಿ ಕಲಕಿ. ಕೊಂಚವೇ ಉಪ್ಪನ್ನು ಬೆರೆಸಿ. ಮೊಸರನ್ನ ಸೇವಿಸಲು ಸಿದ್ಧವಾಗಿದೆ. ರುಚಿಗಾಗಿ ಶೇಂಗಾಬೀಜಗಳನ್ನೂ ಸೇರಿಸಬಹುದು. ತಯಾರಿಸಲು ಸುಲಭ ಹಾಗೂ ವಿಶೇಷವಾಗಿ ಜ್ವರ ಬಂದ ವ್ಯಕ್ತಿಯೂ ಯಾರ ಸಹಾಯವೂ ಇಲ್ಲದೇ ಮೊಸರನ್ನವನ್ನು ತಾನೇ ತಯಾರಿಸಿಕೊಳ್ಳಬಹುದು.

  ಕಡಿಮೆ ಸಮಯದಲ್ಲಿ ತಯಾರಿಸಬಹುದು

  ಸುಲಭವಾಗಿ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಕಾರಣ ಸುಸ್ತಾಗುವ ಅಥವಾ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯೂ ಇಲ್ಲ. ನಿಮ್ಮ ಅಭಿರುಚಿಗೆ ತಕ್ಕಂತೆ ಮೊಸರನ್ನಕ್ಕೆ ಕೊಂಚ ಹಸಿಮೆಣಸು, ಒಣದ್ರಾಕ್ಷಿ, ಗೋಡಂಬಿ, ಚಿಕ್ಕದಾಗಿ ಹೆಚ್ಚಿದ ಕ್ಯಾರೆಟ್ ತುರಿ, ದಾಳಿಂಬೆ ಹಣ್ಣಿನ ಕಾಳುಗಳು, ದ್ರಾಕ್ಷಿ, ಹಸಿ ಮಾವಿನಕಾಯಿಯನ್ನು ತುರಿದು, ಕೊಂಚ ಕೊತ್ತಂಬರಿ ಸೊಪ್ಪನ್ನು ಹೆಚ್ಚಿ ಅಥವಾ ನಿಮ್ಮ ನೆಚ್ಚಿನ ಇತರ ಹಣ್ಣಿನ ತಿರುಳನ್ನೂ ಬೆರೆಸಿ ವೈವಿಧ್ಯಮಯವಾಗಿಸಬಹುದು.

  ಅತಿಸಾರ ಎದುರಾದಾಗ

  ಅತಿಸಾರ ಎದುರಾದಾಗ ಸೇವಿಸಲು ಅತ್ಯುತ್ತಮ ಆಹಾರವಾಗಿರುವ ಮೊಸರನ್ನಕ್ಕೆ ಕೊಂಚ ಮೆಂತೆಯನ್ನು ಸೇರಿಸಬೇಕಾಗುತ್ತದೆ. ಇದರಿಂದ ಹೊಟ್ಟೆಯ ತೊಂದರೆ ತಕ್ಷಣವೇ ಇಲ್ಲವಾಗುತ್ತದೆ. ಅಲ್ಲದೇ ರಜೋನಿವೃತ್ತಿ ಸಮೀಪಿಸುತ್ತಿರುವ ಮಹಿಳೆಯರಿಗೆ ಮೊಸರನ್ನವನ್ನು ಸೇವಿಸುವಂತೆ ವೈದ್ಯರು ಸಲಹೆ ಮಾಡುತ್ತಾರೆ. ಏಕೆಂದರೆ ಈ ಸಮಯದಲ್ಲಿ ಮಹಿಳೆಯರ ದೇಹಕ್ಕೆ ಹೆಚ್ಚಿನ ಕ್ಯಾಲ್ಸಿಯಂ ಅಗತ್ಯವಿದ್ದು ಮೊಸರನ್ನ ಈ ಕೊರತೆಯನ್ನು ನೀಗಿಸುತ್ತದೆ.

  ಹಾಲಿಗೆ ಹೋಲಿಸಿದರೆ

  ಹಾಲಿಗೆ ಹೋಲಿಸಿದರೆ ಮೊಸರು ಉತ್ತಮವಾದ ಆಯ್ಕೆಯಾಗಿದೆ. ಮೊಸರನ್ನು ಮೊಸರನ್ನದ ರೂಪದಲ್ಲಿ ಸೇವಿಸುವುದು ಅತ್ಯುತ್ತಮವಾಗಿದೆ. ಅಲ್ಲದೇ ಹಾಲು ಕುಡಿದಾದ ಬಳಿಕ ಎದುರಾಗುವ ಹೊಟ್ಟೆಯ ಭಾರವಾಗುವ ಭಾವನೆ ಅದೇ ಪ್ರಮಾಣದ ಮೊಸರನ್ನು ಸೇವಿಸಿದ ಬಳಿಕ ಎದುರಾಗುವುದಿಲ್ಲ. ಅಲ್ಲದೇ ಮೊಸರು ಅತಿ ಸುಲಭವಾಗಿ ಹಾಗೂ ಹಾಲಿಗಿಂತಲೂ ಶೀಘ್ರವಾಗಿ ಜೀರ್ಣಿಸಲ್ಪಡುತ್ತದೆ ಎಂದು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ.

  ಅಲ್ಲದೇ ಇದರಲ್ಲಿರುವ ಪೊಟ್ಯಾಶಿಯಂ ರಕ್ತದ ಒತ್ತಡವನ್ನೂ ಆರೋಗ್ಯಕರ ಮಿತಿಯಲ್ಲಿರಿಸಲು ನೆರವಾಗುತ್ತದೆ. ಮೊಸರಿನೊಂದಿಗೆ ಕೊಂಚವೇ ಜೇನನ್ನು ಬೆರೆಸಿ ಸೇವಿಸುವುದರಿಂದ ಕಾಮಾಲೆ ರೋಗ ಗುಣವಾಗುವುದನ್ನೂ ಕಂಡುಕೊಳ್ಳಲಾಗಿದೆ. ಮೊಸರನ್ನ ದೇಹವನ್ನು ತಂಪುಗೊಳಿಸುವ ಆಹರವಾಗಿರುವ ಕಾರಣ ಬೇಸಿಗೆಯಲ್ಲಿ ಸೇವಿಸಲು ಅತ್ಯುತ್ತಮವಾಗಿದೆ ಹಾಗೂ ಪ್ರತಿಯೊಬ್ಬರೂ ಮೊಸರನ್ನವನ್ನು ವಿಶೇಷವಾಗಿ ಬೇಸಿಗೆಯಲ್ಲಿ ಕೊಂಚ ಪ್ರಮಾಣದಲ್ಲಿಯಾದರೂ ಸರಿ, ನಿತ್ಯದ ಆಹಾರದಲ್ಲಿ ಅಗತ್ಯವಾಗಿ ಸೇರಿಸಿಕೊಳ್ಳಬೇಕು.

  English summary

  Here's Why You Should Include Curd Rice In Your Diet

  Curd rice has been associated with many health benefits. This humble food can be prepared easily and it has got many health benefits. It helps in combating bloating and cools down your body temperature. If you suffer from indigestion or stomach upset, eating curd rice becomes the best remedy.Over the years,
  Story first published: Friday, March 30, 2018, 18:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more