For Quick Alerts
ALLOW NOTIFICATIONS  
For Daily Alerts

ಯೋಗ, ನ್ಯಾಚುರಾಪತಿ ಮೂಲಕ ಮಧುಮೇಹ ನಿಯಂತ್ರಣ ಹೇಗೆ?

|

ಚಳಿಗಾಲದಲ್ಲಿ ಮಧುಮೇಹಿಗಳಿಗೆ ತಮ್ಮ ಆರೋಗ್ಯವನ್ನು ನಿಯಂತ್ರಣದಲ್ಲಿಸುವುದು ಇತರ ಸಮಯಕ್ಕಿಂತಲೂ ಹೆಚ್ಚು ಸವಾಲಿನ ವಿಷಯವಾಗಿದೆ. ಚಳಿಗಾಲದಲ್ಲಿ ಚಳಿಯಿಂದಾಗಿ ಮನೆಯ ಹೊರಗೆ ಹೋಗುವುದೇ ದುಸ್ತರವಾಗುವ ಕಾರಣ ದೈಹಿಕ ಚಟುವಟಿಕೆಯೂ ಕುಗ್ಗುತ್ತದೆ, ಸಾಮಾನ್ಯವಾಗಿ ಬೆಚ್ಚಗೆ ಹೊದ್ದುಕೊಂಡು ಮನೆಯಲ್ಲಿ ಆರಾಮವಾಗಿರುವುದೇ ಉತ್ತಮ ಎನಿಸುತ್ತದೆ. ಪರಿಣಾಮವಾಗಿ ದೇಹ ಬದುಕುಳಿಯುವ ರಸದೂತಗಳಾದ ಅಡ್ರಿನಲಿನ್ ಮತ್ತು ಕಾರ್ಟಿಸೋಲ್ ಗಳನ್ನು ಸ್ರವಿಸಲು ಪ್ರಾರಂಭಿಸುತ್ತದೆ. ತನ್ಮೂಲಕ ಯಕೃತ್ ಸಹಾ ಹೆಚ್ಚು ಗ್ಲುಕೋಸ್ ಬಿಡುಗಡೆ ಮಾಡುತ್ತದೆ ಹಾಗೂ ಇದರಿಂದಾಗಿ ಮಧುಮೇಹಿಗಳಿಗೆ ಚಳಿಗಾಲದಲ್ಲಿ ಸಕ್ಕರೆಯ ಅಂಶ ಸೇವಿಸದೇ ಇದ್ದರೂ ರಕ್ತದಲ್ಲಿ ಸಕ್ಕರೆಯ ಮಟ್ಟದಲ್ಲಿ ಏರಿಕೆ ಕಾಣಬರುತ್ತದೆ.

ಪ್ರಸ್ತುತ ಭಾರತದಲ್ಲಿ ಸುಮಾರು ಐದು ಕೋಟಿ ಮಧುಮೇಹಿಗಳಿದ್ದಾರೆ ಹಾಗೂ ಈ ಸಂಖ್ಯೆ 2025 ಆಗುವಷ್ಟರಲ್ಲಿ ಆರುಕೋಟಿ ದಾಟುವ ನಿರೀಕ್ಷೆ ಇದೆ. ಇದು ದೇಶಕ್ಕೇ ಅನ್ವಯಿಸುವ ಕಾಳಜಿಯ ವಿಷಯವಾಗಿದೆ. ಮಧುಮೇಹವನ್ನು ನಿಯಂತ್ರಿಸುವಲ್ಲಿ ಜೀವನಕ್ರಮದಲ್ಲಿ ಸುಧಾರಣೆ ತೋರುವ ಪ್ರಕೃತಿ ಚಿಕಿತ್ಸೆಯೂ ಇಂದಿನ ದಿನಗಳಲ್ಲಿ ಹೆಚ್ಚು ಯಶಸ್ವಿಯಾಗುತ್ತಿದ್ದು ಹೆಚ್ಚು ಹೆಚ್ಚು ಮಧುಮೇಹಿಗಳು ಈ ಚಿಕಿತ್ಸೆಯತ್ತ ಒಲವು ತೋರುತ್ತಿದ್ದಾರೆ. ವಿಶೇಷವಾಗಿ ಚಳಿಗಾಲದಲ್ಲಿ ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸೆ ಮಧುಮೇಹ ನಿಯಂತ್ರಣದಲ್ಲಿ ಹೆಚ್ಚು ಫಲಕಾರಿಯಾಗಿದೆ. ಬನ್ನಿ, ಮಧುಮೇಹಿಗಳಿಗೆ ನೆರವಾಗುವ ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸೆಯ ಬಗ್ಗೆ ಹತ್ತು ಸಲಹೆಗಳನ್ನು ನೋಡೋಣ:

1. ಆಹಾರಕ್ರಮ

1. ಆಹಾರಕ್ರಮ

ಮಧುಮೇಹ ನಿಯಂತ್ರಣಕ್ಕೆ ಸಮತೋಲನದ ಆಹಾರ ಸೇವನೆ ಅಗತ್ಯವಾಗಿದ್ದು ಚಳಿಗಾಲ ಮಾತ್ರವಲ್ಲ, ವರ್ಷದ ಎಲ್ಲಾ ದಿನಗಳಲ್ಲಿಯೂ ಇದನ್ನು ಅನುಸರಿಸುವುದು ಅಗತ್ಯ. ಈ ಆಹಾರದಲ್ಲಿ ಸಾಕಷ್ಟು ಹಸಿಯಾಗಿ ಸೇವಿಸಬಹುದಾದ ತರಕಾರಿ, ಬೇಯಿಸಿದ ತರಕಾರಿ, ಇಡಿಯ ಧಾನ್ಯಗಳು, ದ್ವಿದಳ ಧಾನ್ಯಗಳು, ಬೀನ್ಸ್ ಮತ್ತು ಓಟ್ಸ್ ಇರಬೇಕು. ಆದಷ್ಟೂ ಮಟ್ಟಿಗೆ ಸಿಹಿ ಮತ್ತು ಕೊಬ್ಬುಯುಕ್ತ ಆಹಾರಗಳನ್ನು ವರ್ಜಿಸಬೇಕು. ಅಲ್ಲದೇ ಮಧುಮೇಹಿಗಳು ಒಣಫಲಗಳನ್ನು ಸೇವಿಸುವುದನ್ನೂ ತಪ್ಪಿಸಬೇಕು, ಏಕೆಂದರೆ ಇವುಗಳಲ್ಲಿ ಫ್ರುಕ್ಟೋಸ್ ಸಕ್ಕರೆ ಇರುವ ಕಾರಣ ಇವುಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಧಿಡೀರನೇ ಏರಬಹುದು.

2. ಸಾಕಷ್ಟು ನೀರು ಕುಡಿಯುವುದು

2. ಸಾಕಷ್ಟು ನೀರು ಕುಡಿಯುವುದು

ಆರೋಗ್ಯವಂತ ಜನರಂತೆಯೇ ಮಧುಮೇಹಿಗಳಿಗೂ ದಿನದ ಅವಧಿಯಲ್ಲಿ ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ಅಗತ್ಯವಾಗಿದೆ. ಇದರಿಂದ ದೇಹದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ಮೂತ್ರದ ಮೂಲಕ ಹೊರ ಹಾಕಲು ಸಾಧ್ಯವಾಗುತ್ತದೆ. ಮಧುಮೇಹಿಗಳ ದಿನದ ದ್ರವಾಹಾರದಲ್ಲಿ ನೀರೇ ಪ್ರಥಮ ಆಯ್ಕೆಯಾಗಬೇಕು. ಬುರುಗು ಪಾನೀಯ ಮತ್ತು ಸಕ್ಕರೆ ಬೆರೆಸಿದ ಲಘು ಪಾನೀಯಗಳನ್ನು ಕಡ್ಡಾಯವಾಗಿ ವರ್ಜಿಸಬೇಕು.

3. ಯೋಗಾಭ್ಯಾಸ

3. ಯೋಗಾಭ್ಯಾಸ

ಭಾರತದ ಪುರಾತನ ವ್ಯಾಯಮಪದ್ದತಿಯಾಗಿರುವ ಯೋಗಾಭ್ಯಾಸ ದೇಹದಲ್ಲಿ ಅದ್ಭುತಗಳನ್ನೇ ಸಾಧಿಸಬಲ್ಲುದು. ಮಧುಮೇಹವನ್ನು ನಿಯಂತ್ರಣದಲ್ಲಿರಿಸಲೂ ಯೋಗಾಭ್ಯಾಸ ಉತ್ತಮವಾಗಿದೆ. ಆರೋಗ್ಯ ಉತ್ತಮವಾಗಿದ್ದರೇ ಉಳಿದ ಭಾಗ್ಯಗಳೂ ಅಲ್ಲವೇ! ದೇಹವನ್ನು ಆದಷ್ಟೂ ಮಟ್ಟಿಗೆ ಬಾಗಿಸುವ ಮತ್ತು ತಿರಿಚುವ ಮೂಲಕ ದೇಹದ ಎಲ್ಲಾ ಸ್ನಾಯುಗಳು ಹಾಗೂ ಆಂತರಿಕ ಅಂಗಗಳಿಗೆ ಪ್ರಚೋದನೆ ನೀಡಬಹುದು ಮತ್ತು ವಿಶೇಷವಾಗಿ ಮೇದೋಜೀರಕ ಗ್ರಂಥಿಯ ಪ್ರಚೋದನೆಯಿಂದ ಎಂಡ್ರೋಕ್ರೈನ್ ವ್ಯವಸ್ಥೆಯೂ ಉತ್ತಮಗೊಳ್ಳುತ್ತದೆ. ಪರಿಣಾಮವಾಗಿ ಇನ್ಸುಲಿನ್ ಸ್ರವಿಕೆಯೂ ಹೆಚ್ಚುತ್ತದೆ ಹಾಗೂ ಮಧುಮೇಹಿಗಳ ರಕ್ತದಲ್ಲಿ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿರಿಸುತ್ತದೆ.

4. ಪರ್ಯಾಯ ಚಿಕಿತ್ಸೆಗಳು

4. ಪರ್ಯಾಯ ಚಿಕಿತ್ಸೆಗಳು

ಆಕ್ಯುಪಂಕ್ಚರ್, ಫಿಸಿಯೋಥೆರಪಿ, ಹೈಡ್ರೋಥೆರಪಿ ಮೊದಲಾದ ಪರ್ಯಾಯ ಚಿಕಿತ್ಸೆಗಳೂ ಇಂದು ಲಭ್ಯವಿದ್ದು ಮಧುಮೇಹಿಗಳಿಗೆ ಉತ್ತಮ ಆರೋಗ್ಯ ಪಡೆಯಲು ನೆರವಾಗುತ್ತವೆ. ಆಕ್ಯುಪಂಕ್ಚರ್ ನಲ್ಲಿ ದೇಹದ ನಿರ್ದಿಷ್ಟ ಭಾಗಗಳಲ್ಲಿ ಅತಿ ಸಪೂರವಾದ ಸೂಜಿಗಳನ್ನು ಚುಚ್ಚುವ ಮೂಲಕ ನರಗಳಿಗೆ ಪ್ರಚೋದನೆ ನೀಡಲಾಗುತ್ತದೆ. ಇದು ತೂಕ ಇಳಿಕೆ, ರಕ್ತದಲ್ಲಿ ಸಕ್ಕರೆಯ ಮಟ್ಟದ ನಿಯಂತ್ರಣ ಮತ್ತು ಇನ್ಸುಲಿನ್ ಸಹಿಷ್ಣುತೆಯನ್ನು ಸಾಧಿಸುವ ಮೂಲಕ ಮಧುಮೇಹದ ನಿಯಂತ್ರಣಕ್ಕೆ ನೆರವಾಗುತ್ತದೆ. ಹೈಡ್ರೋಥೆರಪಿಯ ಮೂಲಕ ನರವ್ಯವಸ್ಥೆ ಮತ್ತು ಸ್ನಾಯು-ಮೂಳೆಗಳ ಕಾರ್ಯಗಳು ಉತ್ತಮಗೊಳ್ಳುತ್ತವೆ ಹಾಗೂ ತೂಕ ಇಳಿಕೆಯೂ ಸಾಧ್ಯವಾಗುತ್ತದೆ ಮತ್ತು ಮಾನಸಿಕ ಒತ್ತಡ ಮತ್ತು ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ.

5. ಸಾಕಷ್ಟು ನಿದ್ದೆ

5. ಸಾಕಷ್ಟು ನಿದ್ದೆ

ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ನಮಗೆ ಸಾಕಷ್ಟು ನಿದ್ದೆಯ ಅವಶ್ಯಕತೆ ಇದೆ. ಮಾನಸಿಕ ಒತ್ತಡ ಮತ್ತು ಇನ್ನೂ ಹಲವಾರು ತೊಂದರೆಗಳು ಬಾರದೇ ಇರಲೂ ನಿದ್ದೆ ಅಗತ್ಯವಾಗಿದೆ. ಮಧುಮೇಹಿಗಳು ಕನಿಷ್ಟ ದಿನಕ್ಕೆ ಆರರಿಂದ ಏಳು ಘಂಟೆಗಳಾದರೂ ಗಾಢ ನಿದ್ದೆಯನ್ನು ಪಡೆಯುವ ಗುರಿಯನ್ನು ಹೊಂದಿರಬೇಕು. ಈ ಗಾಢನಿದ್ದೆಯ ಸಮಯದಲ್ಲಿ ದೇಹ ಘಾಸಿಗೊಂಡಿದ್ದ ಭಾಗಗಳನ್ನು ದುರಸ್ತಿಗೊಳಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

6. ಮಾನಸಿಕ ಆರೋಗ್ಯ

6. ಮಾನಸಿಕ ಆರೋಗ್ಯ

ಮಧುಮೇಹಿಗಳಿಗೆ ಮಾನಸಿಕ ಒತ್ತಡ ಸಾಮಾನ್ಯವೇ ಹೌದು. ಪರಿಣಾಮವಾಗಿ ಉದ್ವೇಗ, ಮನೋಭಾವದಲ್ಲಿ ಏರುಪೇರು, ಗೊಂದಲ ಮತ್ತು ಖಿನ್ನತೆ ಮೊದಲಾದವು ಕಾಣಿಸಿಕೊಳ್ಳುತ್ತವೆ. ಅಮೇರಿಕನ್ ಡಯಬಿಟೀಸ್ ಅಸೋಸಿಯೇಶನ್ ಸಂಸ್ಥೆಯ ಪ್ರಕಾರ ಋತುಮಾನದಿಂದ ಪ್ರಭಾವಿತವಾದ ತೊಂದರೆ (Seasonal Affective Disorder (SAD) ಸಾಮಾನ್ಯವಾಗಿ ಚಳಿಗಾಲದಲ್ಲಿ ಆವರಿಸುತ್ತದೆ. ಆದರೆ ಇದನ್ನು ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಇದಕ್ಕಾಗಿ ಆಪ್ತರು ಮತ್ತು ಕುಟುಂಬ ಸದಸ್ಯರೊಡನೆ ಕಾಲ ಕಳೆಯುವುದು, ತಮ್ಮ ಆಸಕ್ತಿಯ ವಿಷಯದ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವುದು, ವೃತ್ತಿಪರರಿಂದ ಸಲಹೆ ಪಡೆಯುವುದು ಮೊದಲಾದವು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.

7. ವೈಯಕ್ತಿಕ ನೈರ್ಮಲ್ಯ

7. ವೈಯಕ್ತಿಕ ನೈರ್ಮಲ್ಯ

ಮಧುಮೇಹಿಗಳು ವೈಯಕ್ತಿಕ ನೈರ್ಮಲ್ಯಕ್ಕೂ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ ಹಾಗೂ ಆಗಾಗ, ಕೈಗಳನ್ನು ನೈಸರ್ಗಿಕ ಸೋಪು ಬಳಸಿ ತೊಳೆದುಕೊಳ್ಳುತ್ತಾ ಇರಬೇಕು. ಅಲ್ಲದೇ ಮೂಗನ್ನು ಸ್ವಚ್ಛಗೊಳಿಸುವ ಉಪ್ಪಿನ ದ್ರಾವಣ (saline rinse) ಬಳಸಿ ಆಗಾಗ ಮೂಗು ಮತ್ತು ಶ್ವಾಸನಾಳಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಾ ಇರಬೇಕು.

8. ತೂಕ ಇಳಿಸಿಕೊಳ್ಳುವುದು

8. ತೂಕ ಇಳಿಸಿಕೊಳ್ಳುವುದು

ಮಧುಮೇಹದಿಂದ ಎದುರಾಗುವ ಯಾವುದೇ ಕಾಯಿಲೆಗಳ ಸಾಧ್ಯತೆಯನ್ನು ಸ್ಥೂಲದೇಹ ಹೆಚ್ಚಿಸುತ್ತದೆ. ವಿಶೇಷವಾಗಿ ಟೈಪ್ 2 ಮಧುಮೇಹ ಎದುರಾಗುವ ಸಾಧ್ಯತೆ 80-85 ಶೇಖಡಾದಷ್ಟು ಹೆಚ್ಚುತ್ತದೆ. ದೇಹ ಸ್ಥೂಲವಾದರೂ ನಮ್ಮ ಅಂಗಾಗಗಳೇನೂ ದೊಡ್ಡದಾಗದ ಕಾರಣ ಮಧುಮೇಹಿಗಳ ಮೇದೋಜೀರಕ ಗ್ರಂಥಿ ದೇಹದ ಅಗತ್ಯತೆಯನ್ನು ಪೂರೈಸಲು ವಿಫಲಗೊಳ್ಳುತ್ತವೆ. ಆದ್ದರಿಂದ ಮಧುಮೇಹಿ ವ್ಯಕ್ತಿ ಸ್ಥೂಲಕಾಯವನ್ನೂ ಹೊಂದಿದ್ದರೆ ತಕ್ಷಣದಿಂದಲೇ ತೂಕ ಇಳಿಸುವ ಪ್ರಯತ್ನಗಳನ್ನು ಪ್ರಾರಂಭಿಸಬೇಕು. ಆರೋಗ್ಯ ಉಳಿಸಿಕೊಳ್ಳಲು ಇದೊಂದೇ ಮಾರ್ಗವಾಗಿದೆ. ನಿಯಮಿತ ವ್ಯಾಯಾಮ, ವೇಗದ ನಡಿಗೆ, ಆಹಾರದಲ್ಲಿ ಕಟ್ಟುನಿಟ್ಟು ಅನುಸರಿಸುವ ಮೂಲಕ ತೂಕ ಇಳಿಕೆ ಖಂಡಿತವಾಗಿಯೂ ಸಾಧ್ಯವಾಗುತ್ತದೆ.

9. ರೋಗ ನಿರೋಧಕ ವ್ಯವಸ್ಥೆಯನ್ನು ಕುಗ್ಗಿಸುವ ಆಹಾರಗಳನ್ನು ವರ್ಜಿಸಬೇಕು

9. ರೋಗ ನಿರೋಧಕ ವ್ಯವಸ್ಥೆಯನ್ನು ಕುಗ್ಗಿಸುವ ಆಹಾರಗಳನ್ನು ವರ್ಜಿಸಬೇಕು

ಮಧುಮೇಹಿಗಳು ಅಧಿಕ-ಕೊಬ್ಬಿನ ಆಹಾರಗಳು, ಮದ್ಯ, ಕೆಫೇನ್ ಮತ್ತು ಬಿಳಿ ಸಕ್ಕರೆಯನ್ನು ಕಡ್ಡಾಯವಾಗಿ ವರ್ಜಿಸಬೇಕು. ಇವೆಲ್ಲವೂ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತವೆ. ಅಲ್ಲದೇ ಅಧಿಕ ಕೊಬ್ಬಿನ ಆಹಾರಗಳಿಂದ ದುಗ್ಧರಸ ವ್ಯವಸ್ಥೆಗೆ ತಡೆ ಉಂಟಾಗುತ್ತದೆ ಹಾಗೂ ಸೋಂಕು ಎದುರಾಗುವ ಸಾಧ್ಯತೆ ಹೆಚ್ಚುತ್ತದೆ.

10. ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯಿರಿ

10. ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯಿರಿ

ಪ್ರಕೃತಿಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮನೋಭಾವನೆ ಉತ್ತಮಗೊಳ್ಳುವ ಜೊತೆಗೇ ವಿಟಮಿನ್ ಡಿ ಮಟ್ಟಗಳೂ ಹೆಚ್ಚುತ್ತವೆ. ನಮ್ಮ ದೇಹ ಪರಾವಲಂಬಿ ಜೀವಿಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಟಮಿನ್ ಡಿ ಪಾತ್ರ ಮಹತ್ತರದ್ದಾಗಿದೆ. ವಿಶೇಷವಾಗಿ ಇನ್ಫ್ಲೂಯೆಂಜ಼ಾ ಜ್ವರ ಬರಲು ವಿಟಮಿನ್ ಡಿ ಕೊರತೆ ಪ್ರಮುಖ ಕಾರಣವಾಗಿದೆ.

ಅಂತಿಮ ತೀರ್ಮಾನ: ಮಧುಮೇಹ ಎಂದರೆ ಕೇವಲ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬೇಕಾದ ಕಾಯಿಲೆಯಲ್ಲ, ದೇಹದ ಒಟ್ಟಾರೆ ಎಲ್ಲಾ ವ್ಯವಸ್ಥೆಗಳನ್ನು ಆರೋಗ್ಯಕರವಾಗಿ ಇರಿಸುವ ಸಂಕೀರ್ಣ ಕ್ರಮವಾಗಿದೆ. ಇದಕ್ಕಾಗಿ ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರಕ್ರಮ, ಅರೋಗ್ಯಕರ ತೂಕವನ್ನು ಪಡೆಯುವುದು ಅಗತ್ಯವಾಗಿದೆ. ಆರೋಗ್ಯವಂತ ವ್ಯಕ್ತಿಗಳಿಗೂ ಮುಂದೆ ಮಧುಮೇಹ ಆವರಿಸದೇ ಇರಲು ಇವು ಅಗತ್ಯವಾಗಿದೆ. ಪ್ರಕೃತಿ ಚಿಕಿತ್ಸೆಯಲ್ಲಿ ಈ ಅಂಶಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮಧುಮೇಹಿಗಳು ಚಳಿಗಾಲದಲ್ಲಿ ಈ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

English summary

Management Of Diabetes through Yoga and Naturopathy

Here is how to manage diabetes through yoga and naturopathy, read on...
X