For Quick Alerts
ALLOW NOTIFICATIONS  
For Daily Alerts

ದಿನಕ್ಕೆರಡು ಬಾರಿ ಮುಖ ತೊಳೆಯಿರಿ, ವ್ಯತ್ಯಾಸ ನೀವೇ ನೋಡಿ!

By Super
|

ದಿನಕ್ಕೊಂದು ಬಾರಿ ಸ್ನಾನ ಮಾಡಿರಿ, ಆದರೆ ದಿನಕ್ಕೆರಡು ಬಾರಿ ಕೈಕಾಲು ಮುಖ ತೊಳೆಯಿರಿ ಎನ್ನುತ್ತದೆ ಆಯುರ್ವೇದ. ಇದಕ್ಕೆ ಕಾರಣವೇನೆಂದರೆ ಮುಖ, ಕೈ, ಪಾದ ಮೊದಲಾದ ಭಾಗಗಳು ಬಟ್ಟೆಯಿಂದ ಆವರಿಸಿರುವುದಿಲ್ಲವಾದುದರಿಂದ ಗಾಳಿಯಲ್ಲಿನ ಕಲ್ಮಶ, ಬಿಸಿಲು ಮತ್ತು ಧೂಳು ಮೊದಲಾದವುಗಳಿಗೆ ನೇರವಾಗಿ ಒಡ್ಡಿಕೊಳ್ಳುತ್ತವೆ. ಅದರಲ್ಲಿಯೂ ಮುಖದಲ್ಲಿ ಅತಿಹೆಚ್ಚಿನ ನರಗಳ ತುದಿಗಳು ಇರುವುದರಿಂದ ವಾತಾವರಣದ ಪ್ರಕೋಪಕ್ಕೆ ಸುಲಭವಾಗಿ ತುತ್ತಾಗುತ್ತವೆ. (ನಾಚಿಕೆಯಾದಾಗ ಮುಖಕ್ಕೆ ರಕ್ತ ನುಗ್ಗಿ ಕೆನ್ನೆ ಕೆಂಪಗಾಗುವುದು ಇದೇ ಕಾರಣಕ್ಕೆ).

ಆದ್ದರಿಂದ ಮುಖವನ್ನು ಆಗಾಗ ಸ್ವಚ್ಛವಾಗಿ ತೊಳೆದುಕೊಳ್ಳದೇ ಇದ್ದರೆ ಕಲ್ಮಶಗಳ ಕಾರಣ ಮುಖದ ಕಾಂತಿ ಕುಂದುವುದು, ಮೊಡವೆಗಳು ಮೂಡುವುದು, ಕಪ್ಪಗಾಗುವುದು, ಕಣ್ಣಕೆಳಗಿನ ಚರ್ಮದಲ್ಲಿ ಅರ್ಧವೃತ್ತಾಕಾರದಲ್ಲಿ ಕಪ್ಪಗಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

Benefits Of Washing Face Twice A Day

ಮುಖ ತೊಳೆದುಕೊಳ್ಳುವುದೆಂದರೆ ಹೇಗೆ? ಸುಮ್ಮನೇ ಮುಖಕ್ಕೆ ನೀರು ಸಿಂಪಡಿಸಿಕೊಂಡರೆ ಸಾಕೇ? ಇಲ್ಲ ಬಟ್ಟೆಯುಜ್ಜುವಂತೆ ಬ್ರಶ್ ತೆಗೆದುಕೊಂಡು ಗಸಗಸ ಉಜ್ಜಬೇಕೇ? ಮೈಗೆ ಹಚ್ಚುವ ಸಾಬೂನು ಅಗತ್ಯವೇ ಅಥವಾ ಇದಕ್ಕೆಂದೇ ಬೇರೆ ಸಾಬೂನು ಇದೆಯೇ? ಈ ವಿಷಯಗಳ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ಆಯುರ್ವೇದದ ಪ್ರಕಾರ ಪ್ರತಿದಿನ ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆದುಕೊಳ್ಳುವ ಮೂಲಕ ಕೇವಲ ಚರ್ವ ಸ್ವಚ್ಛವಾಗುವುದು ಮಾತ್ರವಲ್ಲ, ಮನಸ್ಸೂ ನಿರಾಳವಾಗಿ ದಿನದ ಕೆಲಸದ ಒತ್ತಡವನ್ನು ಎದುರಿಸಲು ಮಾನಸಿಕವಾದ ಸಿದ್ಧತೆ ಮತ್ತು ಆತ್ಮವಿಶ್ವಾಸವನ್ನೂ ನೀಡುತ್ತದೆ.

ಮೆದುಳಿಗೆ ಎಲ್ಲಾ ಸರಿಯಾಗಿದೆ ಎಂಬ ಸೂಚನೆಯನ್ನು ನೀಡುವ ಮೂಲಕ ದಿನದ ಚಟುವಟಿಕೆಗಳು ನಿರ್ವಿಘ್ನವಾಗಿ ನಡೆಯುವಂತೆ ಮಾಡುತ್ತದೆ. thing started well, ends well ಎಂಬ ಮಾತಿಗೆ ಮುಖ ತೊಳೆಯುವ ಪ್ರಕ್ರಿಯೆ ಪೂರಕವಾಗಿದೆ.

ಮುಖದ ಚರ್ಮ ಧೂಳುರಹಿತವಾಗುತ್ತದೆ
ನಮ್ಮ ಚರ್ಮ ವಾಸ್ತವವಾಗಿ ಅತ್ಯಂತ ಸೂಕ್ಷ್ಮ ರಂಧ್ರಗಳಿಂದ ಕೂಡಿದ ಎರಡು ಪದರಗಳ ಜೀವಕೋಶಗಳ ಕವಚವಾಗಿದೆ. ಈ ಸೂಕ್ಷ್ಮ ರಂಧ್ರಗಳಲ್ಲಿಯೂ ಸೂಕ್ಷ್ಮವಾದ ಧೂಳಿನ ಕಣಗಳು ಕುಳಿತುಕೊಳ್ಳುತ್ತವೆ. ಇದರಿಂದಾಗಿ ಬೆವರು ಮತ್ತು ಚರ್ಮದಡಿಯಲ್ಲಿರುವ ತೈಲಗ್ರಂಥಿಗಳು ಒಸರುವ ದ್ರವಗಳು ಹೊರಬರದೇ ಒಳಗೇ ಉಳಿದು ಗಂಟುಗಳಾಗುತ್ತವೆ. ಇದು ನಿಧಾನಕ್ಕೆ ಬೆಳೆದು ಮೊಡವೆ, ಬ್ಲಾಕ್ ಹೆಡ್, ಕೀವುಗುಳ್ಳೆ ಮೊದಲಾದವು ಪ್ರಾರಂಭವಾಗುತ್ತವೆ. ಅಲ್ಲದೇ ಮುಖದಲ್ಲಿ ಕುಳಿತ ಧೂಳು ಮುಖದ ಕಾಂತಿಯನ್ನೇ ಕುಂಠಿತಗೊಳಿಸುತ್ತದೆ. ಬೆವರದ ಕಾರಣ ಮುಖದ ಬಿಸಿ ಹೆಚ್ಚಾಗಿ ಚರ್ಮ ಬಿಳಿಚಿಕೊಳ್ಳುವುದು ಮತ್ತು ಅಸಹನೆಯುಂಟುಮಾಡುತ್ತದೆ. ಈ ಅಸಹನೆ ದಿನದ ಇತರ ಚಟುವಟಿಕೆಗಳಿಗೆ ತೊಂದರೆಯುಂಟುಮಾಡುತ್ತದೆ. ಸ್ವಚ್ಛವಾಗಿ ಮುಖ ತೊಳೆದುಕೊಳ್ಳುವುದರಿಂದ ಧೂಳು ಹೊರಟುಹೋಗಿ ಎಲ್ಲಾ ತೊಂದರೆಗಳಿಂದ ಮುಕ್ತಿ ದೊರಕುತ್ತದೆ.

ಮುಖದ ರಂಧ್ರಗಳನ್ನು ತೆರೆದು ಸ್ವಚ್ಛಗೊಳಿಸುತ್ತದೆ
ಮುಖದ ಸೂಕ್ಷ್ಮರಂಧ್ರಗಳಲ್ಲಿ ಹುದುಗಿದ್ದ ಧೂಳು ಮತ್ತಿತರ ಕಣಗಳನ್ನು ಸುಲಭವಾಗಿ ಹೊರತೆಗೆಯಲು ಸಾಧ್ಯವಾಗುತ್ತದೆ. ಅನಿವಾರ್ಯ ಕಾರಣಗಳಿಂದ ಹಿಂದಿನ ದಿನಗಳಲ್ಲಿ ಸ್ವಚ್ಛತೆ ಪಾಲಿಸದಿದ್ದ ಕಾರಣ ಕೊಳೆ ಈಗಾಗಲೇ ಚರ್ಮದೊಳಗೆ ಸಂಗ್ರಹವಾಗಿದ್ದು ಸುಲಭವಾಗಿ ಹೋಗದೇ ಇದ್ದಲ್ಲಿ ಮುಖವನ್ನು ಕೆಲನಿಮಿಷಗಳ ಕಾಲ ಹಬೆಗೆ ಒಡ್ಡುವುದರಿಂದ ಚರ್ಮದ ರಂಧ್ರಗಳ ಒಳಗಿದ್ದ ಧೂಳಿನ ಕಣಗಳು ಹೊರಬರುತ್ತವೆ. ಆ ಬಳಿಕ ಪ್ರತಿದಿನವೂ ತಣ್ಣೀರಿನಲ್ಲಿ ತೊಳೆದುಕೊಳ್ಳುತ್ತಾ ಇದ್ದರೆ ಸೌಂದರ್ಯ ಮತ್ತು ಆರೋಗ್ಯ ಎರಡೂ ವೃದ್ಧಿಸುತ್ತವೆ.

ಚರ್ಮದ 'ಉಸಿರಾಟ' ಸರಾಗವಾಗುತ್ತದೆ
ನಮ್ಮ ಶ್ವಾಸಕೋಶಗಳು ಗಾಳಿಯನ್ನು ಒಳಗೆಳೆದು ಹೊರಬಿಡುವ ರೀತಿಯಲ್ಲಿಯೇ ನಮ್ಮ ಚರ್ಮ ಸಹಾ ತನ್ನ ಸೂಕ್ಷ್ಮ ರಂಧ್ರಗಳ ಮೂಲಕ 'ಉಸಿರಾಡುತ್ತದೆ'. ಗಾಳಿಯಲ್ಲಿರುವ ಆರ್ದ್ರತೆಯನ್ನು ಹೀರಿ ಬೆವರಿನ ಮೂಲಕ ನೀರನ್ನು ಹೊರಹಾಕುತ್ತದೆ. (ಚಳಿಗಾಲದಲ್ಲಿ ಬಿಸಿಲು ಕಡಿಮೆಯಾಗುವುದರಿಂದ ಗಾಳಿಯಲ್ಲಿ ನೀರಿನ ಪಸೆ ಇರುವುದೇ ಇಲ್ಲ. ಹಾಗಾಗಿ ಚರ್ಮಕ್ಕೆ ಆರ್ದ್ರತೆ ಹೀರಲು ಸಾಧ್ಯವಾಗದೇ ಒಣಗುತ್ತದೆ. ಇದನ್ನೇ ನಾವು ಚಳಿಯಿಂದ ಚರ್ಮ ಒಡೆದಿದೆ ಎನ್ನುತ್ತೇವೆ). ಈ ಪ್ರಕ್ರಿಯೆ ಮುಖದಲ್ಲಿ ಅತಿ ಹೆಚ್ಚಾಗಿ ಜರುಗುತ್ತದೆ. ಗಾಳಿಗೆ ತೆರೆದುಕೊಂಡಿರುವ ಮುಖದ ಸೂಕ್ಷ್ಮರಂಧ್ರಗಳು ಧೂಳು, ಪರಾಗ ಮತ್ತಿತರ ಕಣಗಳಿಗೆ ಸುಲಭವಾಗಿ ತುತ್ತಾಗುವುದರಿಂದ ಸರಾಗವಾದ ಉಸಿರಾಟಕ್ಕೆ ತಡೆನೀಡುತ್ತದೆ. ಮುಖ ತೊಳೆದುಕೊಳ್ಳುವುದರಿಂದ ಈ ತೊಂದರೆ ನಿವಾರಣೆಯಾಗುತ್ತದೆ. ಬೇಸಿಗೆಯ ಸುಡು ಬಿಸಿಲಿಗೆ ತ್ವಚೆಯ ಕಾಳಜಿ ವಹಿಸುವುದು ಹೇಗೆ?

ಬಿಸಿನೀರಿಗಿಂತಲೂ ತಣ್ಣೀರೇ ಉತ್ತಮ
ಬಿಸಿನೀರಿನಿಂದ ಮುಖ ತೊಳೆದುಕೊಳ್ಳುವಾಗ ಕೊಂಚ ಆಹ್ಲಾದಕರ ಎನಿಸಿದರೂ ಮುಖದ ಚರ್ಮಕ್ಕೆ ತಣ್ಣೀರೇ ಅತ್ಯಂತ ಸೂಕ್ತವಾಗಿದೆ. ಏಕೆಂದರೆ ಮುಖದ ಚರ್ಮ ಅತ್ಯಂತ ಸೂಕ್ಷ್ಮಸಂವೇದಿಯಾಗಿದ್ದು ತಾಪಮಾನಕ್ಕೆ ಅತಿಹೆಚ್ಚಾಗಿ ಸ್ಪಂದಿಸುತ್ತದೆ. ಬಿಸಿನೀರಿನಿಂದ ಚರ್ಮದ ಸೂಕ್ಷ್ಮ ರಂಧ್ರಗಳು ಹೆಚ್ಚು ಸ್ಪಂದಿಸಿ ಹೆಚ್ಚಾಗಿ ತೆರೆದುಕೊಳ್ಳುತ್ತವೆ. ದೊಡ್ಡದಾಗಿ ತೆರೆದ ರಂಧ್ರಗಳು ಇನ್ನೂ ದೊಡ್ಡ ಧೂಳಿನ ಕಣಗಳಿಗೆ ಆಹ್ವಾನ ನೀಡುತ್ತದೆ.

ಜೊತೆಗೇ ಹೆಚ್ಚಿನ ಪ್ರಮಾಣದ ಮತ್ತು ಆಳವಾಗಿ ಕುಳಿತುಕೊಳ್ಳಲು ನಾವೇ ರತ್ನಗಂಬಳಿ ಹಾಸಿ ಬೇಡದ ಅತಿಥಿಗಳನ್ನು ಕರೆದಂತಾಗುತ್ತದೆ. ಚರ್ಮ ಸಡಿಲವಾಗಿ ನೆರಿಗೆಗಳು ಶೀಘ್ರವಾಗಿ ಆವರಿಸುತ್ತವೆ. ಬದಲಿಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಈ ರಂಧ್ರಗಳು ಇನ್ನಷ್ಟು ಕಿರಿದಾಗಿ ಧೂಳಿನ ಕಣಗಳ ಪ್ರವೇಶಕ್ಕೆ ಪ್ರವೇಶವಿಲ್ಲ ಎಂಬ ಫಲಕ ತೋರಿಸುತ್ತವೆ. ಇದರಿಂದ ಚರ್ಮ ತನ್ನ ಸಹಜ ಸೆಳೆತವನ್ನು ಪಡೆದು ನೆರಿಗೆಗಳಿಂದ ಮುಕ್ತವಾಗಿರುತ್ತದೆ.

ಮುಖ ತೊಳೆಯಲು ಅತಿ ಸೌಮ್ಯವಾದ ಮಾರ್ಜಕ ಬಳಸಿ
ಮುಖ ಅತ್ಯಂತ ಸಂವೇದಿಯಾಗಿರುವುದರಿಂದ ಸೂಕ್ಷ್ಮರಂಧ್ರದ ಮೂಲಕ ಸೋಪಿನ ಕಣಗಳೂ ಪ್ರವೇಶ ಪಡೆಯಬಹುದು. ಗಡಸು ಸೋಪಿನಿಂದ ಮುಖ ತೊಳೆಯುವುದರಿಂದ ಮತ್ತು ಬ್ರಶ್ ಬಳಸಿ ಗಸಗಸ ಉಜ್ಜುವುದರಿಂದ ಚರ್ಮ ಅತೀವವಾಗಿ ಘಾಸಿಗೊಳ್ಳುತ್ತದೆ. ಅಲ್ಲದೇ ಮುಖದ ಚರ್ಮದಲ್ಲಿರುವ ತೈಲದ ಅಂಶವನ್ನು ತೊಳೆದುಕೊಂಡು ಹೋಗುತ್ತದೆ. ಇದು ಚರ್ಮವನ್ನು ಒಳಗಿನಿಂದ ಶಿಥಿಲಗೊಳಿಸುತ್ತದೆ.

ದೊಡ್ಡದಾದುವ ರಂಧ್ರಗಳ ಕಾರಣ ಚರ್ಮ ಜರಡಿಯಂತಾಗಿ ಸುಲಭವಾಗಿ ನೆರಿಗೆ ಬೀಳಲು ಸಾಧ್ಯವಾಗುತ್ತದೆ. ಆದ್ದರಿಂದ ಮುಖ ತೊಳೆಯಲೆಂದೇ ಮಾರುಕಟ್ಟೆಯಲ್ಲಿ ದೊರಕುವ ಫೇಸ್ ವಾಷ್ ಅಥವಾ ಫೇಸ್ ಸೋಪ್ ಉಪಯೋಗಿಸುವುದು ಅತ್ಯಂತ ಉತ್ತಮ. ಮೈಗೆ ಹಚ್ಚುವ ಸೋಪು, (ಬಟ್ಟೆ ಸೋಪು ಅತ್ಯಂತ ಅನಾಹುತಕಾರಿ), ತಲೆಗೆ ಹಚ್ಚುವ ಶಾಂಪೂ ಮೊದಲಾದವುಗಳನ್ನು ಕೂಡ ತಾಗಿಸಬೇಡಿ.

ಚರ್ಮದ ಪದರ ನಿವಾರಣೆಯನ್ನು ಕಡಿಮೆಗೊಳಿಸಿ
ದೇಹದ ಇತರ ಚರ್ಮದಂತೆಯೇ ಮುಖದ ಚರ್ಮವೂ ತನ್ನ ಹೊರಪದರದ ಜೀವಕೋಶಗಳನ್ನು ಕಳೆದುಕೊಳ್ಳುತ್ತದೆ. ಈ ಜೀವಕೋಶಗಳು ಹೊರಚರ್ಮಕ್ಕೆ ಅಂಟಿಕೊಂಡಿದ್ದು ಕಳೆಯನ್ನು ಕುಂದಿಸುತ್ತವೆ. ಮುಖದ ಪ್ರದರ್ಶನವೇ ಮುಖ್ಯವಾಗಿರುವ ಕಲಾವಿದರಿಗೆ ಈ ಪದರದ ನಿವಾರಣೆ ಅಗತ್ಯವಾಗಿದೆ. ಇದನ್ನು ನಿವಾರಿಸಲು exfoliation ಎಂಬ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಈ ವಿಧಾನದ ಮೂಲಕ ಚರ್ಮದ ಹೊರಪದರ ಕೊಂಚವಾಗಿ ಘಾಸಿಗೊಳ್ಳುವುದರಿಂದ ಪದೇ ಪದೇ ಮಾಡಿಸಿಕೊಳ್ಳುವುದು ಉತ್ತಮವಲ್ಲ. ಬದಲಿಗೆ ಸ್ವಚ್ಛವಾಗಿ ಮುಖ ತೊಳೆದುಕೊಳ್ಳುತ್ತಿರುವಾಗ ನೈಸರ್ಗಿಕವಾಗಿಯೇ ಈ ಪದರ ಹೊರಹೋಗುತ್ತದೆ.

ಮುಖದ ಚರ್ಮಕ್ಕೆ ಟವೆಲ್ ಒತ್ತಿ ಒಣಗಿಸಿ, ಒರೆಸಲು ಹೋಗಬೇಡಿ
ಮುಖದ ಚರ್ಮವನ್ನು ನೀರಿನಿಂದ ತೊಳೆದುಕೊಂಡ ಬಳಿಕ ಟವೆಲ್ಲಿನಿಂದ ಒರೆಸಿಕೊಳ್ಳುವುದರಿಂದ ಚರ್ಮವನ್ನು ಹಿಸಿದಂತಾಗುತ್ತದೆ. ಆದ್ದರಿಂದ ಮುಖದ ಚರ್ಮಕ್ಕೆ ಎಂದಿಗೂ ಟವೆಲ್ಲಿನಿಂದ ಒತ್ತಿ ಒಣಗಿಸಿ. ಇದಕ್ಕಾಗಿ ಸಾಧ್ಯವಾದಷ್ಟು ದಪ್ಪನಾಗಿರುವ ಟವೆಲ್ ಉಪಯೋಗಿಸಿವುದು ಅಗತ್ಯ. ದಪ್ಪನೆಯ ಟವೆಲ್ಲಿನಲ್ಲಿ ಹೆಚ್ಚಿನ ಹತ್ತಿಯ ನೂಲುಗಳಿದ್ದು ಚರ್ಮದ ನೀರನ್ನು ಸುಲಭವಾಗಿ ಮತ್ತು ಸೌಮ್ಯವಾಗಿ ಹೀರಿಕೊಳ್ಳುತ್ತವೆ. ಅಲ್ಲದೇ ಒಂದು ತೆಳುವಾದ ನೀರಿನ ಪದರವನ್ನು ಚರ್ಮದ ಮೇಲೆ ಉಳಿಸಿ ಚರ್ಮದ ಉಸಿರಾಟಕ್ಕೆ ಸಹಕರಿಸುತ್ತವೆ.

ಪ್ರತಿಬಾರಿ ಹೊಸ ಮತ್ತು ಸ್ವಚ್ಛ ಟವೆಲ್ ಉಪಯೋಗಿಸಿ
ಮಾರುಕಟ್ಟೆಯಲ್ಲಿ ಫೇಸ್ ಟವೆಲ್ ಎಂದು ಕೇಳಿದಾಗ ಒಂದರ ಬದಲು ಹತ್ತು ಟವೆಲುಗಳಿರುವ ಒಂದು ಅಟ್ಟೆಯೇ ಸಿಗುತ್ತದೆ. ಏಕೆಂದು ಯೋಚಿಸಿದ್ದೀರಾ? ಮುಖವನ್ನು ಸ್ವಚ್ಛಗೊಳಿಸಲೆಂದೇ ನಿರ್ಮಿಸಲಾಗಿರುವ ಈ ಟವೆಲ್ಲುಗಳು ವಾಸ್ತವವಾಗಿ ಪ್ರತಿಬಾರಿಯೂ ಒಂದು ಬಾರಿ ಮಾತ್ರ ಉಪಯೋಗಿಸಬೇಕು. ಒಮ್ಮೆ ಮುಖ ಒರೆಸಿಕೊಂಡ ಬಳಿಕ ಮರುಉಪಯೋಗಿಸದೇ ಒಗೆಯಲು ಹಾಕಬೇಕು. ಆದ್ದರಿಂದ ಪ್ರತಿಯೊಬ್ಬರಿಗೂ ಹಲವು ಫೇಸ್ ಟವೆಲ್ ಅಥವಾ ಮುಖದ ವಸ್ತ್ರವಿರುವುದು ಅಗತ್ಯ.
ಉಪಯೋಗಿಸಿದ ಟವೆಲ್ ಒಗೆಯುವ ಮುನ್ನ ಮತ್ತೊಮ್ಮೆ ಒರೆಸಿದರೆ ಅದರಲ್ಲಿ ಅಂಟಿಕೊಂಡಿದ್ದ ಧೂಳು ಮತ್ತು ಕೊಳೆ ಹಿಂದಿರುಗಿ ಮುಖದ ಮೇಲೆ ಮತ್ತೊಮ್ಮೆ ಕುಳಿತುಕೊಳ್ಳುವ ಸಂಭವವಿದೆ. ಆದ್ದರಿಂದ ಪ್ರತಿಬಾರಿ ಹೊಸ ಟವೆಲ್ಲನ್ನೇ ಉಪಯೋಗಿಸಿ. ಪ್ರಯಾಣ ಮೊದಲಾದ ಸಂದರ್ಭದಲ್ಲಿ ಇದು ಸಾಧ್ಯವಾಗದಿದ್ದರೆ ಈಗ ಎಲ್ಲೆಡೆ ಲಭ್ಯವಿರುವ ಕಾಗದದ ನ್ಯಾಪ್ಕಿನ್ ಗಳನ್ನು ನಾಲ್ಕೈದು ಒಟ್ಟಿಗೇ ಉಪಯೋಗಿಸಿ ಮುಖದ ಮೇಲೆ ಒತ್ತಿ ಒಣಗಿಸಿ (ಒರೆಸಲು ಹೋಗಬೇಡಿ).

English summary

Benefits Of Washing Face Twice A Day

Face is the most exposed area of the body that receives all the dirt and pollution. Be it any weather the face has to brave it all. A proper care regime is needed to keep the face glowing and healthy looking. And for this purpose the benefits of washing face twice in a day cannot be missed.
X
Desktop Bottom Promotion