For Quick Alerts
ALLOW NOTIFICATIONS  
For Daily Alerts

ಮುಖದ ಕೊಬ್ಬು ಕರಗಿಸಿ ನೈಸರ್ಗಿಕವಾಗಿಯೇ ಆಕರ್ಷಕ ತ್ವಚೆ ನಿಮ್ಮದಾಗಿಸಿಕೊಳ್ಳಿ

|

ಚಿಕ್ಕಂದಿನಲ್ಲಿದ್ದಾಗ ಉಬ್ಬಿರುವ ಕೆನ್ನೆ, ಗುಳಿಬೀಳುವ ಗದ್ದ ಎಲ್ಲರ ಮನಸೂರೆಗೊಳ್ಳುತ್ತದೆ. ಶಿಕ್ಷಕರಂತೂ ಈ ಮಗುವನ್ನು ನೋಟದಿಂದಲೇ ತಮ್ಮ ನೆಚ್ಚಿನ ವಿದ್ಯಾರ್ಥಿಯನ್ನಾಗಿಸುತ್ತಾರೆ. ಆದರೆ ವಯಸ್ಕರಲ್ಲಿ ಹೀಗೆ ಕೆನ್ನೆಗಳು ಉಬ್ಬಿಕೊಂಡಿದ್ದರೆ ಇದು ಸ್ಥೂಲಕಾಯದ ಪ್ರತೀಕವಾಗಿ ಕಾಣಬರುತ್ತದೆ. ಮುಖದ ಮೇಲೆ ಅತಿಯಾದ ಕೊಬ್ಬಿನ ಸಂಗ್ರಹದಿಂದಲೇ ಕೆನ್ನೆಗಳು ಉಬ್ಬಿರುತ್ತವೆ. ಹೀಗೆ ಊದಿಕೊಂಡಿರುವ ಕೆನ್ನೆಗಳು ನಿಜವಾದುದಕ್ಕಿಂತಲೂ ಹೆಚ್ಚು ವಯಸ್ಸಾದಂತೆ ಕಾಣಿಸುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಹೀಗೆ ಊದಿಕೊಂಡಿರುವ ಕೆನ್ನೆಗಳು ಮುಜುಗರಕ್ಕೂ ಕಾರಣವಾಗಬಹುದು. ಈ ಮಹಿಳೆಯರಿಗೆ ಮುಖದ ಮೇಕಪ್ ಅಥವಾ ತೊಟ್ಟಿರುವ ಬಟ್ಟೆಗಳು ಇದೇ ಕಾರಣಕ್ಕೆ ಅಷ್ಟು ಚೆನ್ನಾಗಿ ಹೊಂದಿಕೆಯಾಗದೇ ಹೋಗಬಹುದು.

ಮುಖದಲ್ಲಿ ಅತಿಯಾಗಿರುವ ಕೊಬ್ಬನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು. ಆರೋಗ್ಯಕರ ಸಮತೋಲಿತ ಆಹಾರ ಮತ್ತು ಹೃದಯದ ಗತಿಯನ್ನು ಹೆಚ್ಚಿಸುವ ಯಾವುದೇ ವ್ಯಾಯಾಮಗಳನ್ನು ನಿಮ್ಮ ದಿನಚರಿಯನ್ನಾಗಿಸಿದರೆ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಲು ಮತ್ತು ಆಕರ್ಷಕ ಮೈಕಟ್ಟು ಪಡೆದುಕೊಳ್ಳಲೂ ನೆರವಾಗುತದೆ. ಈ ಮೂಲಕ ಉಬ್ಬಿರುವ ಕೆನ್ನೆ ಮತ್ತು ದುಪ್ಪಟ್ಟಾಗಿರುವ ಗಲ್ಲವನ್ನು ಇಲ್ಲವಾಗಿಸಿ ಮುಖದ ಸೌಂದರ್ಯ ಹೆಚ್ಚಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಉಬ್ಬಿರದ ಕೆನ್ನೆಗಳ ಮುಖದಲ್ಲಿ ಮಂದಹಾಸ ಮೂಡಿದ್ದರೆ ಈ ಮುಖವನ್ನು ತಕ್ಷಣವೇ ಜನರು ಗುರುತಿಸುತ್ತಾರೆ ಮತ್ತು ನಿಮ್ಮಲ್ಲಾದ ಸಕಾರಾತ್ಮಕ ಬದಲಾವಣೆಯನ್ನು ಗಮನಿಸುತ್ತಾರೆ ಮತ್ತು ನಿಮಗೆ ಆತ್ಮೀಯವಾದ ಅಭಿನಂದನೆಗಳನ್ನು ಕಳುಹಿಸುತ್ತಾರೆ.

ಬನ್ನಿ, ಇದಕ್ಕಾಗಿ ಏನು ಮಾಡಬೇಕು ಎಂಬುದನ್ನು ನೋಡೋಣ:

ಸಮತೋಲಿತ ಆಹಾರವನ್ನು ಸೇವಿಸಿ

ಸಮತೋಲಿತ ಆಹಾರವನ್ನು ಸೇವಿಸಿ

ಆರೋಗ್ಯ ಉತ್ತಮವಾಗಿರಬೇಕೆಂದರೆ ಆಹಾರವೂ ಸಮತೋಲಿತವಾಗಿರುವುದು ಅಗತ್ಯ. ಸೂಕ್ತವಾದ ಆಹಾರಕ್ರಮವೇ ತೂಕ ಇಳಿಕೆಗೆ ಮೂಲ ಅಲ್ಲದೇ ದಿನವಿಡೀ ಚೈತನ್ಯ ತುಂಬಿರುತ್ತದೆ. ಅಷ್ಟೇ ಅಲ್ಲ, ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸುವುದೂ ಅಗತ್ಯ. ತೀರಾ ಬೇಗವೂ ಆಗಬಾರದು, ತೀರಾ ತಡವೂ ಆಗಬಾರದು. ಅಗತ್ಯವಿದ್ದರೆ, ಆಹಾರ ತಜ್ಞರನ್ನು ಸಂಪರ್ಕಿಸಿ ಮತ್ತು ಆರೋಗ್ಯಕರ ಆಹಾರ ಸೇವನೆಯ ಬಗ್ಗೆ ಸೂಚನಾ ಪಟ್ಟಿಯೊಂದನ್ನು ತಯಾರಿಸಿ ಆ ಪ್ರಕಾರವೇ ಆಹಾರ ಸೇವಿಸಿ.

ನಿಮ್ಮ ಆಹಾರದಲ್ಲಿ ಸಾಕಷ್ಟು ತಾಜಾ ಹಣ್ಣುಗಳು ಮತ್ತು ಸೊಪ್ಪು ತರಕಾರಿಗಳು ಇರುವಂತೆ ನೋಡಿಕೊಳ್ಳಿ, ದಿನಕ್ಕೆ ಕನಿಷ್ಠ 1-2 ಬಾರಿ. ನಿಮ್ಮ ಊಟದಲ್ಲಿ ಎಲ್ಲಾ ಆಹಾರ ಗುಂಪುಗಳು, ಕರಗುವ ಮತ್ತು ಕರಗದ ನಾರಿನಂಶ, ಕಾರ್ಬೋಹೈಡ್ರೇಟುಗಳು, ಪ್ರೋಟೀನ್, ಆರೋಗ್ಯಕರ ಕೊಬ್ಬು, ಜೀವಸತ್ವಗಳು ಮತ್ತು ಖನಿಜಗಳು ಸಾಕಷ್ಟು ಪ್ರಮಾಣದಲ್ಲಿ ಇರುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆರೋಗ್ಯಕರ ಆಹಾರವು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದನ್ನು ಖಾತ್ರಿಗೊಳಿಸುತ್ತದೆ ಮತ್ತು ಮುಖದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ.

ಹೆಚ್ಚು ಹೆಚ್ಚಾಗಿ ನೀರು ಕುಡಿಯಿರಿ

ಹೆಚ್ಚು ಹೆಚ್ಚಾಗಿ ನೀರು ಕುಡಿಯಿರಿ

ಸಮತೋಲನದ ಆಹಾರ ಸೇವನೆ ಎಷ್ಟು ಮುಖ್ಯವೋ ಅಷ್ಟೇ ನೀರು ಕುಡಿಯುವುದೂ ಮುಖ್ಯ. ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಊಟಕ್ಕೂ ಕೊಂಚ ಹೊತ್ತಿನ ಮುನ್ನ ಸಾಕಷ್ಟು ನೀರು ಕುಡಿಯುವ ಮೂಲಕ ಹೊಟ್ಟೆ ತುಂಬಿದ ಅನುಭವಾಗುವ ಮೂಲಕ ಊಟದ ಸೇವನೆಯ ಪ್ರಮಾಣವನ್ನು ತಗ್ಗಿಸಬಹುದು. ಈ ಕ್ರಮದಿಂದ ಕ್ರಮೇಣ ಕೆನ್ನೆಗಳ ಕೊಬ್ಬು ಕರಗತೊಡಗುತ್ತದೆ. ಅಧ್ಯಯನಗಳ ಮೂಲಕ ನೀರಿನ ಸೇವನೆಯಿಂದ ದೇಹದಲ್ಲಿ ಕೊಬ್ಬಿನ ಬಳಸುವಿಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದರಿಂದಾಗಿ ದೇಹದಲ್ಲಿ ಹೆಚ್ಚುವರಿ ಕೊಬ್ಬಿನ ಸಂಗ್ರಹ ಕಡಿಮೆಯಾಗತೊಡಗುತ್ತದೆ, ಈ ಮೂಲಕ ಕೊಬ್ಬು ಇಲ್ಲವಾಗತೊಡಗುತ್ತದೆ ಎಂದು ಕಂಡುಬಂದಿದೆ. ಕುಡಿಯುವ ನೀರು ಜೀರ ರಾಸಾಯನಿಕ ಕ್ರಿಯೆಯ ದರವನ್ನು 24%ರಷ್ಟು ಹೆಚ್ಚಿಸುತ್ತದೆ, ಇದರಿಂದಾಗಿ ಕ್ಯಾಲೊರಿಗಳು ಬಳಸಿಕೊಳ್ಳುವುದು ಹೆಚ್ಚಾಗುತ್ತದೆ. ಸಕಾರಾತ್ಮಕ ಫಲಿತಾಂಶಕ್ಕಾಗಿ ನೀವು ದಿನಕ್ಕೆ ಕನಿಷ್ಠ 8-12 ಲೋಟದಷ್ಟು ನೀರನ್ನು ಕುಡಿಯುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನಿಯಮಿತವಾಗಿ ವ್ಯಾಯಾಮ ಮಾಡಿ

ನಿಯಮಿತವಾಗಿ ವ್ಯಾಯಾಮ ಮಾಡಿ

ಮುಖದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ನಿಯಮಿತ ವ್ಯಾಯಾಮದ ವೇಳಾಪಟ್ಟಿಯನ್ನು ತಪ್ಪದೇ ಅನುಸರಿಸುವುದು. ದೈನಂದಿನ ಜೀವನಕ್ರಮದಿಂದ ರಕ್ತ ಪರಿಚಲನೆ ಹೆಚ್ಚುತ್ತದೆ ಮತ್ತು ಕೊಬ್ಬನ್ನು ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ. ಕೆಲವು ಅಧ್ಯಯನಗಳು ಹೆಚ್ಚಿನ ತೀವ್ರತೆಯ ಹೃದಯದ ವ್ಯಾಯಾಮಗಳನ್ನು ಮಾಡುವುದರಿಂದ ಇತರ ರೀತಿಯ ಚಟುವಟಿಕೆಗಳಿಗಿಂತ ಕೊಬ್ಬನ್ನು ಬೇಗನೆ ಕರಗಿಸಬಹುದು ಎಂದು ಸಾಬೀತುಗೊಳಿಸಿವೆ. ಹೃದಯದ ಬಡಿತವನ್ನು ಹೆಚ್ಚಿಸುವ ಕೆಲವು ಸಾಮಾನ್ಯ ವ್ಯಾಯಾಮಗಳಾದ ನಿಧಾನಗತಿಯ ಓಟ, ಸೈಕಲ್ ತುಳಿಯುವುದು ಮತ್ತು ಈಜು ಈ ಕ್ರಿಯೆಗೆ ಹೆಚ್ಚಿನ ಪ್ರಯೋಜನ ನೀಡುತ್ತವೆ. ಆದ್ದರಿಂದ, ಒಟ್ಟಾರೆ ತೂಕ ಇಳಿಕೆಯ ಮೂಲಕ ಮುಖದ ಮೇಲೂ ಕೊಬ್ಬು ಇಲ್ಲವಾಗಿಸಲು ಕಾರಣವಾಗುತ್ತದೆ. ನೀವು ನಿರ್ದಿಷ್ಟವಾಗಿ ಕಣ್ಣುಗಳ ಸುತ್ತಲಿನ ಪ್ರದೇಶಗಳಿಂದ ಕೊಬ್ಬನ್ನು ಕಳೆದುಕೊಳ್ಳಲು ಬಯಸಿದರೆ, ನಿಧಾನವಾಗಿ ಕಣ್ಣುಗಳನ್ನು ಮುಚ್ಚಿ, ನಿಧಾನವಾಗಿ ಮೇಲಕ್ಕೆ ಮತ್ತು ಕೆಳಕ್ಕೆ ನೋಡಿ. ಈ ವ್ಯಾಯಾಮವನ್ನು ಹಲವಾರು ಬಾರಿ ಪುನರಾವರ್ತಿಸಿ. ನೀವು ಹಾಸಿಗೆಯ ಮೇಲೆ ಬೆನ್ನು ಚೆಲ್ಲಿ ಮಲಗಿರುವಂತೆ ನಿಮ್ಮ ಹುಬ್ಬುಗಳನ್ನು ಸಾಧ್ಯವಾದಷ್ಟು ಎತ್ತರಿಸಿ, ಕಣ್ಣುಗಳನ್ನು ತೆರೆದಿಡಬಹುದು. ನಂತರ ಅವರನ್ನು ಸಾಮಾನ್ಯ ಸ್ಥಿತಿಗೆ ಇಳಿಸಿ. ನೀವು ಈ ವ್ಯಾಯಾಮವನ್ನು ನಿತ್ಯವೂ ಕನಿಷ್ಟ ಹತ್ತು ಬಾರಿ ಪುನರಾವರ್ತಿಸಬಹುದು.

ಸಾಕಷ್ಟು ನಿದ್ರೆ ಪಡೆಯಿರಿ

ಸಾಕಷ್ಟು ನಿದ್ರೆ ಪಡೆಯಿರಿ

ಇಡೀ ದಿನ ಕೆಲಸ ಮತ್ತು ನಿದ್ದೆ ಇಲ್ಲದೇ ಹೋದರೆ ಮನಸ್ಸು ಮಂಕಾಗುತ್ತದೆ. ವಿವಿಧ ಕಾರಣಗಳಿಗಾಗಿ ನೀವು ಸಾಕಷ್ಟು ನಿದ್ರೆ ಪಡೆಯದಿದ್ದರೆ, ನಿಮ್ಮ ದೇಹದ ಜೀವರಾಸಾಯನಿಕ ಕ್ರಿಯೆ ನಿಧಾನವಾಗುವ ಸಾಧ್ಯತೆಯಿದೆ. ಇದು ಹೆಚ್ಚಿನ ಮಟ್ಟದ ಕಾರ್ಟಿಸೋಲ್ ಎಂಬ ರಸದೂತ ಉತ್ಪತ್ತಿಯಾಗಲು ಕಾರಣವಾಗುತ್ತದೆ, ಈ ರಸದೂತದ ಪ್ರಭಾವದಿಂದ ತೂಕ ಹೆಚ್ಚಾಗುವುದು ಸೇರಿದಂತೆ ಬಹಳಷ್ಟು ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ. ನಿದ್ರೆ ದೇಹದಲ್ಲಿನ ಕೆಲವು ರಸದೂತಗಳ ಮೇಲೆ ಪರಿಣಾಮ ಬೀರುತ್ತದೆ, ಅದು ಹಸಿವು ಮತ್ತು ಹೊಟ್ಟೆ ತುಂಬಿದ ಭಾವನೆಯನ್ನು ನಿಯಂತ್ರಿಸುತ್ತದೆ. ಕಡಿಮೆಯಾದ ನಿದ್ರೆಯಿಂದ ದೇಹದಲ್ಲಿ ಗ್ರೆಲಿನ್ ಎಂಬ ಹಾರ್ಮೋನ್ ಹೆಚ್ಚು ಉತ್ಪತ್ತಿಯಾಗುತ್ತದೆ ಮತ್ತು ಲೆಪ್ಟಿನ್ ಮಟ್ಟವನ್ನು ಕಡಿಮೆ ಮಾಡುವಾಗ ಹಸಿವನ್ನು ಕೂಡಾ ಹೆಚ್ಚಿಸುತ್ತದೆ, ಇದು ಹೊಟ್ಟೆ ತುಂಬಿದ ಭಾವನೆಯನ್ನು ಮೂಡಿಸುವ ರಸದೂತವಾಗಿದೆ. ಆದ್ದರಿಂದ, ಅತಿಯಾಗಿ ತಿನ್ನುವ ಪ್ರವೃತ್ತಿ ಹೆಚ್ಚಾಗುತ್ತದೆ, ಇದರಿಂದಾಗಿ ಮುಖದ ಕೊಬ್ಬು ಕಡಿಮೆಯಾಗುವ ಬದಲು ಇನ್ನಷ್ಟು ಹೆಚ್ಚಾಗುತ್ತದೆ. ಆದ್ದರಿಂದ, ನೀವು ಪ್ರತಿದಿನ ನಿಮ್ಮ 7-8 ಗಂಟೆಗಳ ಗಾಧ ನಿದ್ರೆಯನ್ನು ಪಡೆಯುತ್ತೀರಿ ಎಂದು ಖಚಿತಪಡಿಸಿಕೊಳ್ಳಿ !!

ಚ್ಯೂಯಿಂಗ್ ಗಮ್ ಅಗಿಯಿರಿ

ಚ್ಯೂಯಿಂಗ್ ಗಮ್ ಅಗಿಯಿರಿ

ಮುಖದ, ವಿಶೇಷವಾಗಿ ಕೆನ್ನೆಯ ಕೊಬ್ಬನ್ನು ಕಡಿಮೆ ಮಾಡಲು ನಿಮ್ಮ ದವಡೆ ಮತ್ತು ನಿಮ್ಮ ಮುಖದ ಸ್ನಾಯುಗಳಿಗೆ ಹೆಚ್ಚಿನ ಶ್ರಮ ನೀಡಲು ಇದು ಒಂದು ಸೂಕ್ತ ಆಯ್ಕೆಯಾಗಿದೆ ಇದರಿಂದ ಫಲಿತಾಂಶವೇನೂ ತಕ್ಷಣವೇ ಗೊತ್ತಾಗುವುದಿಲ್ಲ. ಆದರೆ ದೀರ್ಘಕಾಲದ ಬಳಕೆಯ ಬಳಿಕವೇ ಕೆನ್ನೆಯನ್ನು ಸಪಾಟಾಗಿಸಲು ಸಾಧ್ಯವಾಗುತ್ತದೆ. ಆದರೆ ನೀವು ಅದಕ್ಕೆ ವ್ಯಸನಿಯಾಗದಂತೆ ನೋಡಿಕೊಳ್ಳಿ. ಗಮ್ ಅನ್ನು ಅತಿಯಾಗಿ ಅಗಿಯುವುದರಿಂದ ಗಂಭೀರವಾದ ಹಲ್ಲಿನ ಸಮಸ್ಯೆಗಳೂ ಎದುರಾಗಬಹುದು. ಏಕೆಂದರೆ ಚ್ಯೂಯಿಂಗ್ ಗಮ್ ನಲ್ಲಿ ಸಾಂದ್ರೀಕೃತ ಸಕ್ಕರೆ ಇರುತ್ತದೆ. ಆದ್ದರಿಂದ ಮುಖದ ಕೊಬ್ಬನ್ನು ಕಡಿಮೆ ಮಾಡಲು ನೀವು ಪ್ರತಿದಿನ ಸಕ್ಕರೆ ರಹಿತವಾಗಿರುವ ಚ್ಯೂಯಿಂಗ್ ಗಮ್ ಅಗಿಯುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಚ್ಯೂಯಿಂಗ್ ಗಮ್ ಬದಲಿಗೆ ಗೋಧಿಯ ಕೆಲವು ಕಾಳುಗಳನ್ನೂ ಜಗಿಯಬಹುದು.

ಕೊಬ್ಬು ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಆದಷ್ಟೂ ಮಿತಗೊಳಿಸಿ

ಕೊಬ್ಬು ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಆದಷ್ಟೂ ಮಿತಗೊಳಿಸಿ

ಸಂಸ್ಕರಿಸಿದ ಆಹಾರಗಳು ಮತ್ತು ಸಂಸ್ಕರಿಸಿದ ಸಕ್ಕರೆ ಅಂಶವಿರುವ ಆಹಾರಗಳು ನಿಮ್ಮ ಆರೋಗ್ಯಕ್ಕೆ ನಂಬಲಾಗದಷ್ಟು ಹಾನಿಕಾರಕ. ಅವು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ತೀವ್ರವಾದ ಏರಿಕೆಗೆ ಕಾರಣವಾಗುತ್ತವೆ ಮತ್ತು ನೀವು ಇನ್ನಷ್ಟು ಹೆಚ್ಚು ತಿನ್ನುವುದಕ್ಕೆ ಕಾರಣವಾಗುತ್ತವೆ. ಸಂಸ್ಕರಿಸಿದ ಆಹಾರಗಳು ಯಾವುದೇ ಅಗತ್ಯ ಪೋಷಕಾಂಶಗಳು ಅಥವಾ ನಾರಿನಂಶಗಳನ್ನು ಹೊಂದಿರುವುದಿಲ್ಲ ಮತ್ತು ಖಾಲಿ ಕ್ಯಾಲೊರಿಗಳನ್ನು (empty calories-ಇವುಗಳಲ್ಲಿ ಯಾವುದೇ ಪೋಷಕಾಂಶ ಇರುವುದಿಲ್ಲ, ಬದಲಿಗೆ ಕೇವಲ ತೂಕವನ್ನು ಹೆಚ್ಚಿಸುವ ಗುಣವಿದೆ) ಹೊಂದಿರುತ್ತವೆ. ನಿಯಮಿತವಾಗಿ ಮತ್ತು ಅತಿಯಾಗಿ ಸೇವಿಸುತ್ತಾ ಬಂದರೆ ಅವು ತೂಕದಲ್ಲಿ ಶೀಘ್ರವಾಗಿ ಮತ್ತು ಅತಿಯಾದ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಸಂಸ್ಕರಿಸಿದ ಆಹಾರಗಳ ಕೆಲವು ಉದಾಹರಣೆಗಳೆಂದರೆ ಸಿದ್ಧ ರೂಪದಲ್ಲಿ ಲಭ್ಯವಿರುವ ಪಾಸ್ಟಾ, ನೂಡಲ್ಸ್, ಬಿಳಿ ಸಕ್ಕರೆ, ಬ್ರೆಡ್, ಚಾಕೊಲೇಟ್ ಸಿರಪ್ ಮತ್ತು ಜಾಮ್ ಇತ್ಯಾದಿ. ಈ ಹಾನಿಕಾರಕ ಆಹಾರಗಳನ್ನು ಕಡಿತಗೊಳಿಸಿ ಮತ್ತು ನಿಮ್ಮ ದೇಹದಲ್ಲಿ ಕ್ರಮೇಣ ಸಕಾರಾತ್ಮಕ ಬದಲಾವಣೆಯನ್ನು ಗಮನಿಸಿ.

ಉಪ್ಪು ಮತ್ತು ಸಕ್ಕರೆ ಸೇವನೆಯನ್ನು ನಿಗ್ರಹಿಸಿ

ಉಪ್ಪು ಮತ್ತು ಸಕ್ಕರೆ ಸೇವನೆಯನ್ನು ನಿಗ್ರಹಿಸಿ

ಮುಖದ ಕೊಬ್ಬನ್ನು ಶೀಘ್ರವಾಗಿ ಕಡಿಮೆ ಮಾಡುವುದು ಹೇಗೆ ಎಂದು ತಿಳಿಯಲು ನೀವು ಉತ್ಸುಕರಾಗಿರಬಹುದು. ಸುಲಭ ಮಾರ್ಗ ಎಂದರೆ ಉಪ್ಪು ಮತ್ತು ಸಕ್ಕರೆಯ ಸೇವನೆಯನ್ನು ಆದಷ್ಟೂ ಮಟ್ಟಿಗೆ ತ್ಯಜಿಸುವುದು. ಹೆಚ್ಚಿನ ಉಪ್ಪಿನ ಸೇವನೆಯು ದೇಹದಲ್ಲಿ ಅಗತ್ಯಕ್ಕೂ ಹೆಚ್ಚಿನ ನೀರನ್ನು ಉಳಿಸಿಕೊಳ್ಳಲು ಕಾರಣವಾಗುತ್ತದೆ ಮತ್ತು ಕೆನ್ನೆ ಮತ್ತು ಮುಖ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ನೀರು ತುಂಬಿಕೊಂಡು ಊದಿಕೊಳ್ಳುತ್ತವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಸಿದ್ಧರೂಪದ ತಿಂಡಿಗಳು ಹೆಚ್ಚಿನ ಉಪ್ಪು ಮತ್ತು ಸೋಡಿಯಂ ಅಂಶವನ್ನು ಹೊಂದಿರುತ್ತವೆ, ಆದ್ದರಿಂದ ಸಂಸ್ಕರಿಸಿದ ಪದಾರ್ಥಗಳಿಗಿಂತ ಬೆರಳೆಣಿಕೆಯಷ್ಟು ಒಣಫಲಗಳು ಅಥವಾ ತಾಜಾ ಹಣ್ಣುಗಳಂತಹ ಆರೋಗ್ಯಕರ ಹಾಗೂ ಮನೆಯಲ್ಲಿ ತಯಾರಿಸಿದ ಆಹಾರಗಳಿಗೇ ಆದ್ಯತೆ ನೀಡಿ.

ಬಿಳಿವಿಷಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿರುವ ಸಕ್ಕರೆ ಸಹಾ ಖಾಲಿ ಕ್ಯಾಲೊರಿಗಳನ್ನು ಹೊಂದಿರುತ್ತದೆ ಮತ್ತು ಹೆಚ್ಚು ಪೌಷ್ಟಿಕ ಮೌಲ್ಯವನ್ನು ಹೊಂದಿರುವುದಿಲ್ಲ. ಸಿದ್ಧ ರೂಪದ ಜ್ಯೂಸ್ (ವಾಸ್ತವದಲ್ಲಿ ಇವು ಹಣ್ಣಿನ ರಸಗಳೇ ಅಲ್ಲ, ಬದಲಿಗೆ ಕೃತಕ ಸಿಹಿಕಾರಕ ಮತ್ತು ಅತಿ ಹೆಚ್ಚಿನ ಸಕ್ಕರೆ ಸೇರಿಸಿದ ಕೃತಕ ದ್ರವಗಳಾಗಿವೆ) ಮತ್ತು ಸಿಹಿ ತಿಂಡಿಗಳು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತವೆ ಮತ್ತು ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿವೆ. ನಿಮ್ಮ ಗಲ್ಲ ವಡೆಯಂತೆ ಊದಿಕೊಂಡಿದ್ದರೆ ಇದನ್ನು ಆದಷ್ಟೂ ಬೇಗನೇ ಸಾಮಾನ್ಯವಾಗಿಸಲು ನಿಮ್ಮ ಸಕ್ಕರೆ ಸೇವನೆಯ ಬಯಕೆಯನ್ನು ತ್ಯಜಿಸಬೇಕಾಗುತ್ತದೆ. ಇನ್ನು ಮುಂದೆ ಸೋಡಾ, ಸಕ್ಕರೆ ಬೆರೆತಿರುವ ಯಾವುದೇ ಪಾನೀಯ ಅಥವಾ ಸಿಹಿ ಪದಾರ್ಥಗಳನ್ನು ವರ್ಜಿಸಿ.

ಮದ್ಯ ಸೇವನೆಯನ್ನು ಮಿತಗೊಳಿಸಿ

ಮದ್ಯ ಸೇವನೆಯನ್ನು ಮಿತಗೊಳಿಸಿ

ಅತಿ ಮಿತ ಪ್ರಮಾಣದಲ್ಲಿದ್ದಾಗಲೇ ಮದ್ಯ ಔಷಧಿಯಂತೆ ಕೆಲಸ ಮಾಡುತ್ತದೆಯೇ ಹೊರತು ಮಿತಿಗಳನ್ನು ಮೀರಿದಾಗ ಇದು ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಮೊದಲಾಗಿ ಮದ್ಯ ಸೇವನೆಯಿಂದ ಎದುರಾಗುವ ಅಮಲಿನಿಂದ ಯಕೃತ್ ಗೆ ಹಾನಿ ಮತ್ತು ಪರೋಕ್ಷ ಪರಿಣಾಮಗಳನ್ನು ಪಟ್ಟಿ ಮಾಡಲು ಸಾಧ್ಯವೇ ಇಲ್ಲವೆನ್ನುವಷ್ಟು ಅಧಿಕವಾಗಿವೆ. ಮದ್ಯ ದೇಹದಲ್ಲಿ ನೀರನ್ನು ಉಳಿಸಿಕೊಳ್ಳುವ ಕಾರಣ ಮದ್ಯಪಾನಿಗಳ ಕೆನ್ನೆಗಳು ಇತರ ಸಮಯಕ್ಕಿಂತಲೂ ಹೆಚ್ಚಾಗಿ ಊದಿಕೊಳ್ಳುತ್ತವೆ. ಅಲ್ಲದೇ ಮದ್ಯ ಸಹಾ ಖಾಲಿ ಕ್ಯಾಲೋರಿಗಳಿಂದ ತುಂಬಿದ್ದು ಯಾವುದೇ ಪೌಷ್ಠಿಕಾಂಶದ ಮೌಲ್ಯವನ್ನು ಸೇರಿಸದೆಯೇ ಶೀಘ್ರವಾದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ವಿಶೇಷವಾಗಿ ಇದು ಮುಖ ಮತ್ತು ಕುತ್ತಿಗೆಯ ಭಾಗದ ಸುತ್ತ ಕೊಬ್ಬು ತುಂಬಿಕೊಂಡು ತೂಕ ಹೆಚ್ಚಾಗುವುದನ್ನು ಉತ್ತೇಜಿಸುತ್ತದೆ.

ಆಲ್ಕೊಹಾಲ್ ಸಂತೃಪ್ತಿಯ ಭಾವನೆಯನ್ನು ಮೂಡಿಸುವ ರಸದೂತಗಳನ್ನು ನಿಗ್ರಹಿಸುತ್ತದೆ, ಇದರಿಂದಾಗಿ ನೀವು ತಿನ್ನುತ್ತಾ ಹೋದಂತೆ ನಿಲ್ಲಿಸಲು ಸಾಧ್ಯವಾಗದೇ ಅಗತ್ಯಕ್ಕೂ ಹೆಚ್ಚಿನ ಆಹಾರ ಸೇವಿಸುವಂತಾಗುತ್ತದೆ ಹಾಗೂ ಇದು ಸೊಂಟದ ಸುತ್ತ ಮತ್ತು ಮುಖದ ಸುತ್ತ ತೂಕ ಹೆಚ್ಚಿಸಲು ಪ್ರಮುಖ ಕಾರಣವಾಗಿದೆ ಎಂದು ಸಂಶೋಧನೆ ಸಾಬೀತುಪಡಿಸಿದೆ. ನಿಮ್ಮ ಮುಖದಿಂದ ಆ ಊದಿಕೊಂಡಿರುವ ಕೊಬ್ಬನ್ನು ನೀವು ನಿವಾರಿಸ ಬಯಸಿದರೆ ಕುಡಿಯುವುದು ಮತ್ತು ಧೂಮಪಾನದ ವ್ಯಸನದಿಂದ ಸಂಪೂರ್ಣವಾಗಿ ಹೊರಬರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗುತ್ತದೆ. ಯಾವುದೇ ವ್ಯಸನದಂತೆ ಮದ್ಯ ವ್ಯಸನವನ್ನೂ ಒಮ್ಮೆಲೇ ಬಿಡಬಾರದು. ತಜ್ಞರ ಅಥವಾ ಕುಟುಂಬ ವೈದ್ಯರ ಸಲಹೆಯನ್ನು ಪಾಲಿಸಿ ಕ್ರಮೇಣ ಕಡಿಮೆ ಮಾಡುತ್ತಾ ಬರಬೇಕು. ಧೂಮಪಾನವು ಮುಖದ ಗೆರೆಗಳನ್ನು ಆಳಗೊಳಿಸಿ ವಯಸ್ಸಾದ ಲಕ್ಷಣಗಳನ್ನು ಇನ್ನೂ ಸ್ಪಷ್ಟವಾಗಿ ಪ್ರಕಟಿಸುತ್ತದೆ. ಒಟ್ಟಾರೆ ನಿಮ್ಮ ಯೌವ್ವನದ ಲಕ್ಷಣಗಳು ಕಾಣೆಯಾಗತೊಡಗುತ್ತವೆ.. ಆದ್ದರಿಂದ ಮುಖದ ಕೊಬ್ಬನ್ನು ಕಳೆದುಕೊಳ್ಳಲು ನೀವು ಹೆಣಗಾಡುತ್ತಿದ್ದರೆ, ವೇಗವಾಗಿ ಫಲಿತಾಂಶಗಳನ್ನು ಸಾಧಿಸಲು ಮದ್ಯ ಸೇವನೆಯಿಂದ ಮುಕ್ತರಾಗುವುದು ಅಗತ್ಯ.

ಬೆಲೂನುಗಳನ್ನು ಊದಿ

ಬೆಲೂನುಗಳನ್ನು ಊದಿ

ಪುಗ್ಗ ಅಥವಾ ಬೆಲೂನುಗಳು ಕೇವಲ ಹುಟ್ಟುಹಬ್ಬದ ಕೂಟಗಳಿಗೆ ಮಾತ್ರ ಸೀಮಿತವಲ್ಲ. ಬದಲಿಗೆ ಇದರಲ್ಲಿ ಗಾಳಿ ತುಂಬಲು ನಡೆಸುವ ಯತ್ನ ಮುಖದ ಸ್ನಾಯುಗಳಿಗೆ ಹೆಚ್ಚಿನ ಸೆಳೆತವನ್ನು ನೀಡುವ ಮೂಲಕ ಕೊಬ್ಬನ್ನು ಕಡಿಮೆ ಮಾಡಲೂ ನೆರವಾಗುತ್ತವೆ. ಬೆಲೂನುಗಳನ್ನು ಬಾಯಿಯಿಂದ ಊದುವ ಮೂಲಕ ವಿಶೇಷವಾಗಿ ಕೆನ್ನೆಯ ಸ್ನಾಯುಗಳಿಗೆ ಉತ್ತಮವಾದ ವ್ಯಾಯಾಮ ದೊರಕುತ್ತದೆ. ತನ್ಮೂಲಕ ಮುಖದ ಕೊಬ್ಬನ್ನು ಕಡಿಮೆ ಮಾಡಲು ಸೂಕ್ತ ಎಂದು ಈಗಾಗಲೇ ಸಾಬೀತಾಗಿದೆ. ಹಾಗಾಗಿ, ಈ ಸುಲಭ ವ್ಯಾಯಾಮವನ್ನು ನಿರ್ವಹಿಸಲು ಮುಂದಿನ ಹುಟ್ಟುಹಬ್ಬಕ್ಕೆ ಕಾಯಬೇಕಾಗಿಲ್ಲ, ನಿತ್ಯವೂ ಏಕಾಂತದಲ್ಲಿದ್ದಾಗ ಕೆಲವಾರು ಬೆಲೂನುಗಳನ್ನು ಊದಿ ಉಬ್ಬಿಸಿ ಬಳಿಕ ಹೊರಬಿಡಿ. ನಿತ್ಯವೂ ಎಷ್ಟು ಬೆಲೂನುಗಳನ್ನು ಉಬ್ಬಿಸುತ್ತೀರಿ ಎಂಬುದನ್ನು ಗುರುತು ಹಾಕಿಕೊಂಡು ಕ್ರಮೇಣ ಈ ಸಂಖ್ಯೆಯನ್ನು ಹೆಚ್ಚಿಸಿ. ನಿಮ್ಮ ಬೆಲೂನುಗಳ ಸಂಖ್ಯೆ ಹೆಚ್ಚಿದಷ್ಟೂ ಬೇಗನೇ ನಿಮ್ಮ ಕೆನ್ನೆಯ ಕೊಬ್ಬೂ ಕರಗತೊಡಗುತ್ತದೆ.

ಆದಷ್ಟೂ ಮಟ್ಟಿಗೆ ನಗುತ್ತಲೇ ಇರಿ

ಆದಷ್ಟೂ ಮಟ್ಟಿಗೆ ನಗುತ್ತಲೇ ಇರಿ

ನಗುನಗುತಾ ನಲೀ ನಲೀ, ಏನೇ ಆಗಲಿ ಎಂಬ ಕನ್ನಡದ ಹಾಡಿನ ಪ್ರಕಾರ, ನಿಮ್ಮ ಮೊಗದಲ್ಲಿ ಸದಾ ನಗು ಇರಲಿ. ವಾಸ್ತವದಲ್ಲಿ ನಗುವಿನ ಮೂಲಕ ನಮ್ಮ ಮುಖದಲ್ಲಿರುವ ಒಟ್ಟು 43 ಸ್ನಾಯುಗಳಲ್ಲಿ ಎಲ್ಲಾ ಸ್ನಾಯುಗಳಿಗೂ ಪರಿಪೂರ್ಣವಾದ ವ್ಯಾಯಾಮ ಸಿಗುತ್ತದೆ. ಇಷ್ಟು ಪ್ರಮಾಣದ ವ್ಯಾಯಾಮ ಇತರ ಕ್ರಿಯೆಗಳಲ್ಲಿ, (ಮಂದಹಾಸ, ಅಳು, ಮುಖ ಬಿಗಿದುಕೊಳ್ಳುವುದು) ಲಭಿಸದು. ಅಷ್ಟೇ ಅಲ್ಲ, ನಗುವಿನ ಮೂಲಕ ನಿಮ್ಮ ಅಕ್ಕ ಪಕ್ಕದವರೊಂದಿಗೆ ಉತ್ತಮ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಬಬಹುದು. ನಗು ಸಾಂಕ್ರಾಮಿಕ. ನೀವೂ ನಗಿ, ಸುತ್ತಲಿನವರನ್ನೂ ನಗಿಸಿ. ಈ ಮೂಲಕವೂ ಕೆನ್ನೆಯ ಕೊಬ್ಬನ್ನು ಶೀಘ್ರವಾಗಿ ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

English summary

Tips to Lose Weight in Your Face Fast in Kannada

The best way to prevent excess face fat is to maintain a healthy weight and exercise regularly. A healthy balanced diet and proper cardio exercise routine will go miles in enhancing your facial beauty and help you get rid of those bulging cheeks and double chin. Read more.
X