For Quick Alerts
ALLOW NOTIFICATIONS  
For Daily Alerts

ಬ್ರಾ ಎಂಬ ಎದೆ ರಕ್ಷಾ ಕವಚ ಹಾಗೂ ಆರೋಗ್ಯ

By * ಅನಂಗ
|
Bra and Breast Care
ಚೋಲಿಕೆ ಪೀಚೆ ಕ್ಯಾ ಹೈ ಎಂದರೆ ಕನ್ನಡದಲ್ಲಿ ಕುಪ್ಪಸದ ಹಿಂದೆ ಪುಪ್ಪಸ ಎಂದು ಪೋಲಿ ಜೋಕ್ ಪಡ್ಡೆಗಳಲ್ಲಿ ಜನಜನಿತ. ಆದರೆ, ಈ ಕುಪ್ಪಸ ಪುಪ್ಪಸದ ನಡುವೆ ಇರುವ ರಕ್ಷಾ ಕವಚದ ಬಗ್ಗೆ ಮರೆತರೆ ಹೇಗೆ? ಬ್ರಾ ಎಂಬ ಜನಪ್ರಿಯ ಪದ ಬ್ರಾಸೈಯರ್ ಎಂಬುದರ ಸಂಕ್ಷಿಪ್ತ ರೂಪ. ಈ ಎದೆಗವಚಕ್ಕೆ ಎರಡು ಭುಜಪಟ್ಟಿಗಳು, ಕಪ್, ಮಧ್ಯದ ಪ್ಯಾನೆಲ್, ಕಪ್ ಗಳನ್ನು ಹಿಡಿದಿಡುವ ಬ್ಯಾಂಡ್, ಜೊತೆಗೆ ಹುಕ್ ಅಥವಾ ಫಾಸ್ಟ್ ನರ್ ಎಲ್ಲವೂ ಸೇರಿದರೆ ಮಹಿಳೆಯರ ಒಳ ಉಡುಪು ಧರಿಸಲು ಸಿದ್ಧ.

ಆದರೆ, ಬ್ರಾ ಸೈಜ್ ಒಂದು ಬಾರಿಗೆ ನಿರ್ಧರಿಸಬಲ್ಲ ಅಂಶವಂತೂ ಅಲ್ಲ. ದೇಹದ ಬೆಳವಣಿಗೆಯ ಜೊತೆ ಜೊತೆಗೆ ಬ್ರಾ ಸೈಜ್ ಕೂಡಾ ಹೆಚ್ಚು ಕಮ್ಮಿಯಾಗುತ್ತಿರುತ್ತದೆ. ಕನಿಷ್ಠ ವರ್ಷಕ್ಕೊಮ್ಮೆಯಾದರೂ ನಿಮ್ಮ ಎದೆಯ ಸುತ್ತಳತೆಯ ಪರೀಕ್ಷೆ ಮಾಡಿ ಸರಿಯಾದ ಬ್ರಾ ಧರಿಸುವುದೊಳಿತು. ಉತ್ತಮವಾದ ಹಾಗೂ ಸರಿ ಆಕೃತಿಯ ಬ್ರಾ ಆಯ್ಕೆ ಮಾಡಿಕೊಳ್ಳುವುದು ತುಂಬಾ ಮುಖ್ಯ.

ಬಗೆ ಬಗೆ ಬ್ರಾ ವಿನ್ಯಾಸಗಳು: ಬ್ರಾ ಸೈಜ್ ಹೇಗೆ ಕಂಡು ಕೊಳ್ಳುವುದು ಕಷ್ಟ ಕೆಲಸವಲ್ಲ. ಸರಿಯಾದ ಸೈಜ್ ಬ್ರಾಗಳನ್ನು ಧರಿಸಿದೆ ಸ್ಟ್ರಾಪ್ ಇರುವ ಬ್ರಾ ಹಲವರಿಗೆ ಹೊಂದುವುದಿಲ್ಲ. ಸ್ಟ್ರಾಪ್ ಗಳು ಏನೋ ಒಂಥರಾ ಕಿರಿಕಿರಿ ಉಂಟು ಮಾಡುತ್ತವೆ ಎಂದು ಸ್ಟ್ರಾಪ್ ರಹಿತ ಬ್ರಾಗಳಿಗೆ ಮಾರು ಹೋಗುವುದುಂಟು. ಇದು ಒಂದು ರೀತಿ ಒಳ್ಳೆಯದು. ಅಕಸ್ಮಾತ್ ಆಗಿ ಸ್ಟ್ರಾ ಕುಪ್ಪಸದಿಂದ ಹೊರ ಕಾಣಿಸಿಕೊಂಡು ಮುಜುಗರಕ್ಕೀಡಾಗುವ ಪ್ರಸಂಗಗಳನ್ನು ತಪ್ಪಿಸಬಹುದು.

ಬ್ರಾ ಗಳ ಬಳಕೆ ಹೆಚ್ಚಳಕ್ಕೆ ಹಾಗೂ ಬಗೆ ಬಗೆ ವಿನ್ಯಾಸ, ವಿಚಿತ್ರವಾದ ಆಕಾರಗಳ ಬ್ರಾಗಳು ಹೆಂಗಳೆಯರ ಎದೆಗಪ್ಪುವುದಕ್ಕೆ ಹಾಗೂ ಅಗತ್ಯಕ್ಕಿಂತ ಹೆಚ್ಚು ಬ್ರಾ ಮೇಲೆ ಸ್ತ್ರೀ ವರ್ಗ ಅವಲಂಬಿತವಾಗಿರುವುದಕ್ಕೆ ಮಾಧ್ಯಮಗಳ ಕೊಡುಗೆ ಅಪಾರ. ಗ್ರಾಹಕರ ಅಜ್ಞಾನದ ಪೂರ್ಣ ಲಾಭ ಪಡೆದು ಬ್ರಾ ತೊಡದಿದ್ದರೆ ಬದುಕೇ ವ್ಯರ್ಥ ಎಂಬಂತೆ ಮಾಡಿಬಿಟ್ಟಿದ್ದಾವೆ.

ಅದರಲ್ಲೂ ಬ್ರಾ ಮಾರುವ ಲವಬೆಲ್, ಡೈಸಿ ಡೆ, ಜಾಕಿ .. ಇತ್ಯಾದಿ ಇತ್ಯಾದಿಗಳು ನಮ್ಮ ದೇಸಿ ಹುಡುಗಿಯರ ವಿದೇಶಿ ಒಳ ಉಡುಪಿನ ಅಂದ ಚೆಂದ ಮೋಹ ಭರಿಸುತ್ತವೆ. ಪರಸಂಗದ ಗೆಂಡೆತಿಮ್ಮ ನಂತೆ ಬುಟ್ಟಿಯಲ್ಲಿಟ್ಟು ಕೊಂಡು ಮಾರಿದ್ದೇ ಎದೆಗವಚ ಎಂದು ಕೊಳ್ಳಲು ನಮ್ ಯುವತಿಯರೇನೂ ಬುದ್ದುಗಳಲ್ಲ ಬಿಡಿ. ಬಹಳ ತಿಳಿದವರಾದರೂ ಕೆಲ ವಿಷಯಗಳಲ್ಲಿ ಜ್ಞಾನ ಕಮ್ಮಿ. ಕಂಚುಕವನ್ನು ಧರಿಸಲು, ಸಣ್ಣ ಸ್ತನಗಳನ್ನು ಹಿರಿದು ಮಾಡಿಕೊಳ್ಳಬೇಕು.

ಅಥವಾ ಇರುವ ಸ್ತನವನ್ನು ಇರುವ ಗಾತ್ರಕ್ಕಿಂತ ಹೆಚ್ಚಿನ ಗಾತ್ರದಲ್ಲಿರುವಂತೆ ಬಿಂಬಿಸುವುದು, ಸ್ತನಗಳ ಗಟ್ಟಿಯಾಗಿ, ಆಕರ್ಷಕವಾಗಿರಿಸಲು ಇದಕ್ಕೆ ಒಂದಿಷ್ಟು ಕ್ರೀಮ್, ಸರ್ಜರಿ, ಮಾಶ್ಚುರೈಸರ್ ಗಳು ಅದನ್ನು ಮಾರುವ ಬಂಡವಾಳಶಾಹಿ ಕಂಪೆನಿಗಳು. ಬ್ರಾ ಡಿಸೈನ್ ನಲ್ಲಿ ಬದಲಾವಣೆ ಆಗಿರುವಂತೆ, ಅದನ್ನು ತೊಡುವ ಕಾರಣಗಳು ಬದಲಾವಣೆಯಾಗಿದೆ. ಎದೆಗೆ ರಕ್ಷಾ ಕವಚ ಅಷ್ಟೇ ಆಗಿರದೆ. ಸ್ತ್ರೀಯರ ಆಕರ್ಷಣೆಯ ಅಂಗಕ್ಕೆ ಇನ್ನಷ್ಟು ಮೆರಗು ನೀಡಲು ಬ್ರಾ ಸದ್ಬಳಕೆಯಾಗುತ್ತಿದೆ.

ಬ್ರಾ ತೊಡುವುದರಿಂದ ತೊಂದರೆಗಳು: ಬ್ರಾ ತೊಡುವುದರಿಂದ ಆಕರ್ಷಕವಾಗಿ ಕಾಣಬಹುದೇನೋ ನಿಜ ಆದರೆ, ಇದರಿಂದ ತೊಂದರೆಯೇ ಹೆಚ್ಚು. ಬೆನ್ನು ನೋವು ಸ್ತ್ರೀಯರಿಗೆ ಅಂಟಿದ ಆನಾದಿ ಕಾಲದ ವ್ಯಾಧಿ. ಅದರಲ್ಲೂ ಉನ್ನತ ಸ್ತನವುಳ್ಳ ಮಹಿಳೆಯರಿಗೆ ಬೆನ್ನು ನೋವು ಬರುವುದೇ ಜಾಸ್ತಿ. ಅವರು ಧರಿಸುವ ಬ್ರಾ ಸರಿಯಾದ ಸೈಜ್ ಇಲ್ಲದಿರುವುದು ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು.

ಬೆನ್ನಿನ ಸುತ್ತಳತೆಯನ್ನು ಕಡೆಗಣಿಸುವುದು ಅಥವಾ ಕಪ್ ಸೈಜ್ ಆಯ್ಕೆಯಲ್ಲಿ ಹೆಚ್ಚು ಕಮ್ಮಿಯಾದರೆ ಪುಪ್ಪಸ ಸಂಪೂರ್ಣ ಭಾರ ಭುಜದ ಮೇಲೆ ಬೀಳುತ್ತದೆ. ಇದರಿಂದ ಬೆನ್ನಿನ ಮೇಲ್ಭಾಗ, ಭುಜ, ಕುತ್ತಿಗೆಗೆ ನೋವು ಆರಂಭವಾಗುತ್ತದೆ. ಉನ್ನತಸ್ತನವುಳ್ಳ ದಢೂತಿ ಹೆಂಗಸರು ಯಾವ ಸೈಜ್ ಅಥವಾ ಸ್ಟೈಲ್ ನ ಬ್ರಾ ಧರಿಸಿದರೂ ಅಗಾಧವಾದ ಬೆನ್ನುನೋವು ಕಾಡದೆ ಬಿಡದು. ಇದಕ್ಕೆ ಪರಿಹಾರವಾಗಿ ಕೆಲವರು ಸ್ತನದ ಗಾತ್ರ ಕುಗ್ಗಿಸಲು ಸರ್ಜರಿಗೆ ಮೊರೆ ಹೋಗುತ್ತಾರೆ. ಇದರಿಂದ ಮತ್ತೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

ತುಂಬಾ ಟೈಟ್ ಆದ ಬ್ರಾ ಧರಿಸುವುದರಿಂದ ಪುಪ್ಪಸವು ಎದೆಗೂಡಿಗೆ ಆತುಕೊಂಡು ಶ್ವಾಸಕೋಶ ಹಾಗೂ lymphatic system ಮೇಲೆ ಪರಿಣಾಮ ಬೀರುತ್ತದೆ. ಮೇಲ್ಪದರದ thoracic and cervical vertebrae (spine), ನರಮಂಡಲಕ್ಕೂ ಧಕ್ಕೆ ಉಂಟಾಗುತ್ತದೆ. ಇನ್ನು ಒಂದು ಸೀಕ್ರೆಟ್ ಹೇಳಬೇಕೆಂದರೆ, ಬ್ರಾ ಧರಿಸುವುದರಿಂದ ವಯಸ್ಸಾದಂತೆ ಸ್ತನಗಳು ಕಳಾಹೀನವಾಗಿ ಕೆಳಮುಖವಾಗುತ್ತದೆ.

ಸಂಸ್ಕೃತಿ V/s ಆರೋಗ್ಯ : ಈಗಲೂ ಎಷ್ಟೋ ಕಡೆ ಸಂಪ್ರದಾಯಸ್ಥ ಹೆಂಗಸರು ಬ್ರಾ ಧರಿಸುವುದಿಲ್ಲ. ಮಲೆನಾಡು, ಕರಾವಳಿಯ ಬುಡಕಟ್ಟು ಜನಾಂಗದವರು ಆಗಿನ ಕಾಲದ ಗೌಡತಿಯರು, ಕುಣಬಿಗಳು ಗೊಬ್ಬೆ ಸೀರೆಯಲ್ಲೇ ಮಾನ ಮುಚ್ಚಿಕೊಳ್ಳುತ್ತಿದ್ದಾರೆ ಹಾಗೂ ಆರೋಗ್ಯಕರವಾಗಿದ್ದಾರೆ.

ಬ್ರಾ ಧರಿಸುವ ಮೂಲಕ ಎದೆಗೂಡಿಗೆ ಒತ್ತಡ ಬೀಳುವುದರಿಂದ ಮುಂದೆ ಸ್ತನ ಕ್ಯಾನ್ಸರ್ ಕೂಡ ಆವರಿಸುವ ಸಾಧ್ಯತೆಗಳಿವೆ. ಆದರೆ, ಈ ಬಗ್ಗೆ ಯಾವುದೇ ಕ್ಯಾನ್ಸರ್ ಸಂಶೋಧನಾ ಕೇಂದ್ರಗಳು ದೃಢಪಡಿಸಿಲ್ಲವಾದರೂ, ಬ್ರಾನಿಂದ ಸಂತ್ರಸ್ತರಾದ ಮಹಿಳೆಯರು ಈ ಸಾಧ್ಯತೆಯನ್ನು ಒಪ್ಪಿಕೊಂಡಿದ್ದಾರೆ.

ಆರೋಗ್ಯVs ಸಂಸ್ಕೃತಿ: ಮಹಿಳೆ ಹಾಗೂ ಉಡುಗೆ ತೊಡಗೆ ಕುರಿತು ಸಂಶೋಧನೆ ಮಾಡಿ 'ಡ್ರೆಸ್ಡ್ ಟು ಕಿಲ್' ಎಂಬ ಹೊತ್ತಿಗೆ ಹೊರತಂದಿರುವ ಸಿಡ್ನಿ ರೊಸ್ ಸಿಂಗರ್ ಹಾಗೂ ಸೊಮ ಗ್ರಿಸ್ಮೈಜೆರ್ ಅವರ ಪ್ರಕಾರ ಬ್ರಾಗೆ ನಿಷೇಧ ಹೇರಿರುವ ಪಂಗಡಗಳಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕಮ್ಮಿ ಎಂಬ ಅಂಶ ಕಂಡು ಬಂದಿದೆ ಎಂದು ಹೇಳುತ್ತಾರೆ. lymphatic drainage ಹಾಗೂ ಎದೆಗೂಡಿಗೆ ಉಂಟಾಗುವ ಶಾಖದ ಆಧಾರ ಮೇಲೆ ನಡೆಸಿದ ಸಮೀಕ್ಷೆಯ ತಯಾರಿಸಿದ್ದಾರೆ. ಆದರೆ, ಬ್ರಾನಿಂದ ಉಂಟಾಗುವ ಸಮಸ್ಯೆ ಬಗ್ಗೆ ಹೆಚ್ಚೆಚ್ಚು ಹೇಳುತ್ತಾ ಹೋದಂತೆ, ಅನೇಕ ಸಂಸ್ಥೆಗಳಿಂದ ಹೆಚ್ಚೆಚ್ಚು ವಿರೋಧಗಳು ಕಾಣಿಸತೊಡಗಿ, ಮೆಡಿಕಲ್ ಸಾಹಿತ್ಯ ಭಂಡಾರಕ್ಕೆ ಮಾತ್ರ ಸೀಮಿತವಾಗಿಬಿಟ್ಟಿದೆ.

ಮಹಿಳೆಯರೆ, ಸ್ತನ ಕ್ಯಾನ್ಸರ್ ಜಾಗೃತಿ ಮಾಸದಲ್ಲಿ ನಿಮ್ಮ ದೇಹದ ನಿಮ್ಮದೇ ಆದ ಅಂಗದ ಬಗ್ಗೆ ಒಂದಿಷ್ಟು ಕಾಳಜಿ ವಹಿಸಿ ಸೂಕ್ತ ಪರೀಕ್ಷೆ ಮಾಡಿಕೊಳ್ಳಿ. ಅನುಮಾನ ಬಂದರೆ ಕೂಡಲೇ ವೈದ್ಯರನ್ನು ಕಾಣಿರಿ.

Story first published: Friday, March 30, 2012, 16:21 [IST]
X
Desktop Bottom Promotion