For Quick Alerts
ALLOW NOTIFICATIONS  
For Daily Alerts

ಮಕ್ಕಳು ಮದುವೆಯಾದ ಮೇಲೆ ಪೋಷಕರು ಹೀಗೆ ಮಾಡಲೇಬಾರದು

|

ರಾಹುಲ್ ಅಮ್ಮನ ಮುದ್ದು ಮಗ, ಏನೇ ಮಾಡಲಿ ಅಮ್ಮನ ಕೇಳದೆ ಮಾಡುತ್ತಿರಲಿಲ್ಲ. ಅವನು ಸ್ವತಃ ಯಾವ ನಿರ್ಧಾರವೂ ತೆಗೆದುಕೊಳ್ಳುತ್ತಿರಲಿಲ್ಲ. ಅಮ್ಮನಿಗೂ ಮಗ ನನ್ನ ಕೇಳದೆ ಏನೂ ಮಾಡಲ್ಲ ಎಂಬ ಖುಷಿ. ಮದುವೆ ಕೂಡ ಅಮ್ಮ ಮೆಚ್ಚಿದ ಹುಡುಗಿಯ ಜತೆಗೆ ಆಗುತ್ತದೆ. ಎಲ್ಲವೂ ಚೆನ್ನಾಗಿರುತ್ತದೆ ಅಂದುಕೊಂಡಿದ್ದ ಕುಟುಂಬದಲ್ಲಿ ಸಮಸ್ಯೆಗಳು ಶುರುವಾಗುತ್ತದೆ. ಪತಿ ಪ್ರತಿಯೊಂದು ವಿಷಯಕ್ಕೂ ಅಮ್ಮನ ನಿರ್ಧಾರ ಕೇಳುವುದು, ತಾವಿಬ್ಬರು ಔಟಿಂಗ್ ಹೋಗಬೇಕೆಂದರೂ ಅಮ್ಮ ಒಪ್ಪಿಗೆ ಕೊಟ್ಟರೆ ಮಾತ್ರ ಹೊರಡುವುದು, ಈ ರೀತಿಯ ವರ್ತನೆ ಆಕೆಗೆ ಬೇಸರ ತರಿಸುತ್ತದೆ. ಎಲ್ಲಾ ವಿಷಯಕ್ಕೂ ಅಮ್ಮನ ಮಾತು ಕೇಳುತ್ತಾನೆ ಅಂತ ಸೊಸೆ ದೂರಿದರೆ, ಸೊಸೆ ಬಂದು ಮಗನ ಬದಲಾಯಿಸುತ್ತಿದ್ದಾಳೆ ಅಂತ ಅಮ್ಮನಿಗೆ ಬೇಸರ, ಹೀಗಾಗಿ ಆ ಸಂಸಾರದಲ್ಲಿ ಸಣ್ಣ ಪುಟ್ಟ ಕಲಹಗಳು ಶುರುವಾಗುತ್ತದೆ.

 Parents Can Cause Conflict In Your Relationship

ಇನ್ನು ವೈಶಾಲಿ ಮದುವೆಯಾಗಿ ಗಂಡನ ಮನೆ ಸೇರಿರುತ್ತಾಳೆ. ಗಂಡ ಹಾಗೂ ಆತನ ಮನೆಯವರಿಂದ ಯಾವುದೇ ತೊಂದರೆ ಇಲ್ಲದ ಕಾರಣ ದಾಂಪತ್ಯವನ್ನು ಸುಂದರವಾಗಿ ನಡೆಸಿಕೊಂಡು ಹೋಗಲು ಯಾವ ತೊಂದರೆಯಿರಲಿಲ್ಲ. ಆದರೆ ಅವಳ ಪೋಷಕರು ಮಗಳ ವಿಷಯದಲ್ಲಿ ತೋರಿಸುತ್ತಿದ್ದ ಅತೀ ಹೆಚ್ಚು ಪ್ರೀತಿಯೇ ಅವಳ ಸಂಸಾರದಲ್ಲಿ ತೊಂದರೆಯನ್ನು ತಂದಿತು. ಮಗಳ ಸಂಸಾರದಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದರು, ಈಕೆ ಕೂಡ ತನ್ನ ಪೋಷಕರು ಏನು ಹೇಳುತ್ತಾರೋ ಅದರ ಸರಿ-ತಪ್ಪು ಚಿಂತಿಸದೆ ಹಾಗೆಯೇ ನಡೆದುಕೊಳ್ಳುಯತ್ತಿದ್ದಳು ಇದು ಅಳಿಯನಿಗೆ ಇಷ್ಟವಾಗುತ್ತಿರಲಿಲ್ಲ.

ಇದು ಬರೀ ರಾಹುಲ್‌, ವೈಶಾಲಿ ಕತೆಯಲ್ಲ ಎಷ್ಟೋ ಸಂಸಾರದಲ್ಲಿ ಪೋಷಕರ ಅತಿಯಾದ ಮಧ್ಯಪ್ರವೇಶದಿಂದ ಕಲಹಗಳು ಉಂಟಾಗುವುದನ್ನು ಕಾಣಬಹುದು. ಒಂದು ಕುಟಂಬ ಅಂದ ಮೇಲೆ ಅಲ್ಲಿ ಬರೀ ಗಂಡ-ಹೆಂಡತಿ ಮಾತ್ರ ಸಾಕು ಎಂದು ನಾವು ಹೇಳುತ್ತಿಲ್ಲ. ಕುಟುಂಬ ಮತ್ತಷ್ಟು ಸುಂದರವಾಗಲು ಪೋಷಕರ ಮಾರ್ಗದರ್ಶನ ಹಾಗೂ ಅವರ ಸಹಕಾರ ಬೇಕೇ ಬೇಕು. ಎಷ್ಟೋ ಬಾರಿ ಗಂಡ-ಹೆಂಡತಿ ನಡುವೆ ಏರ್ಪಡುವ ವೈಮನಸ್ಸು ಸರಿಪಡಿಸಲು ಕೂಡ ಹಿರಿಯರು ಬೇಕೇ ಬೇಕು. ಆದರೆ ಮಕ್ಕಳ ಮೇಲೆ ಅತಿಯಾಗಿ ತೋರಿಸುವ ಕಾಳಜಿ ಅವರ ದಾಂಪತ್ಯ ಬದುಕಿನಲ್ಲಿ ಕಲಹ ಉಂಟಾಗುವಂತೆ ಇರಬಾರದು ಅಷ್ಟೇ. ಆದ್ದರಿಂದ ಪೋಷಕರು ಈ ರೀತಿ ಮಾಡಬಾರದು:

ಮಕ್ಕಳ ಖಾಸಗಿ ವಿಷಯದಲ್ಲಿ ತಲೆ ಹಾಕುವುದು

ಮಕ್ಕಳ ಖಾಸಗಿ ವಿಷಯದಲ್ಲಿ ತಲೆ ಹಾಕುವುದು

ತೀರಾ ಅಗ್ಯತವಿದ್ದಾಗ ಮಕ್ಕಳೇ ನಿಮ್ಮ ಸಲಹೆ ಕೇಳುತ್ತಾರೆ. ಗಂಡ-ಹೆಂಡತಿ ನಡುವೆ ಯಾವುದೋ ಚಿಕ್ಕ ವಿಷಯಕ್ಕೆ ಮುನಿಸು ಏರ್ಪಟಿದ್ದರೆ ಅದನ್ನು ಅವರಷ್ಟಕ್ಕೆ ಸರಿಪಡಿಸಲು ಬಿಡಬೇಕು. ಅಲ್ಲಿನೀವು ನಿಮ್ಮ ಅಭಿಪ್ರಾಯ ಹೇಳಲು ಹೋಗಬಾರದು. ಅವರು ಅವರ ಭವಿಷ್ಯವನ್ನು ಹೇಗೆ ನಡೆಸಬೇಕು ಎನ್ನುವುದು ಅವರ ನಿರ್ಧಾರಕ್ಕೆ ಬಿಡಬೇಕು. ಮದುವೆಯಾದ ಬಳಿಕ ಮಕ್ಕಳಿಗೆ ನೀವು ನೀಡುವ ಸಲಹೆಗಳು ಸಂಗಾತಿಗೆ ಇಷ್ಟವಾಗಬಹುದೆಂದು ಹೇಳಲು ಸಾಧ್ಯವಿಲ್ಲ. ಆದರೆ ಮಕ್ಕಳ ದಾಂಪತ್ಯ ಜೀವನ ಸರಿಯಿಲ್ಲದಿದ್ದರೆ, ಅದು ವಿಚ್ಛೇಧನದ ದಿಕ್ಕಿಗೆ ಸಾಗುತ್ತಿದ್ದರೆ ಆಗ ಪೋಷಕರು ಮಧ್ಯಪ್ರವೇಶಿಸಿ ಒಡೆದು ಹೋಗುತ್ತಿರುವ ಸಂಬಂಧವನ್ನು ಒಂದು ಗೂಡಿಸುವ ಪ್ರಯತ್ನ ಮಾಡಬೇಕು.

ಮಕ್ಕಳ ಬಗ್ಗೆ ಅತಿಯಾದ ಕಾಳಜಿ

ಮಕ್ಕಳ ಬಗ್ಗೆ ಅತಿಯಾದ ಕಾಳಜಿ

ಮಗನ ಎಲ್ಲಾ ಬೇಕು ಬೇಡಗಳು, ಅವನ ಇಷ್ಟದ ತಿಂಡಿಗಳು ಎಲ್ಲವೂ ಸೊಸೆಗಿಂತ ತಾಯಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಯಾವಾಗ ಸೊಸೆ ಬರುತ್ತಾಳೋ ಆಗ ಅವಳು ಅವನಿಗೆ ಇಷ್ಟವಿಲ್ಲದ ಅಡುಗೆ ಮಾಡಿದಾಗ ಅದು ಅವನು ತಿನ್ನುವುದೇ ಇಲ್ಲ ಅಂತ ಮಗನಿಗಿಷ್ಟವಾದ ಅಡುಗೆ ಮಾಡಿ ಹಾಕಲು ಹೋಗಬಾರದು. ತನ್ನ ಗಂಡನ ಬಗ್ಗೆ ನಿಧಾನಕ್ಕೆ ತಿಳಿದುಕೊಂಡು ಅವನಿಗೆ ಹೊಂದಿಕೊಳ್ಳುವ ಪ್ರಯತ್ನ ಅವಳು ಮಾಡಿದರೆ, ಹೆಂಡತಿಗಾಗಿ ತನ್ನ ಸ್ವಭಾವವನ್ನು ಅವನು ಬದಲಾಯಿಸಿಕೊಳ್ಳಬಹುದು. ಆದ್ದರಿಂದ ಇಂಥ ಸಣ್ಣ-ಪುಟ್ಟ ವಿಚಾರದಲ್ಲಿ ಪೋಷಕರು ತಲೆಹಾಕಲು ಹೋಗಲೇಬಾರದು.

ಹಣಕಾಸಿನ ನಿರ್ವಹಣೆ

ಹಣಕಾಸಿನ ನಿರ್ವಹಣೆ

ಮಕ್ಕಳು ಒಂದು ಹಂತಕ್ಕೆ ಬಂದ ಮೇಲೆ ನಿರ್ವಹಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ಕಲಿಸಬೇಕು. ಮಗ ದುಡಿಯದೆ ಸೋಮಾರಿಯಾಗಿದ್ದು ಮಗನ ಖರ್ಚು, ಮನೆ ನಿರ್ವಹಣೆ ಎಲ್ಲಾ ಪೋಷಕರೇ ಮಾಡುತ್ತಿದ್ದರೆ ಅದು ಅವನ ಸಂಗಾತಿಗೆ ಇಷ್ಟವಾಗುವುದಿಲ್ಲ. ನಿಮಗೆ ನೀವು ಮಗನಿಗೆ ಸಹಾಯ ಮಾಡುತ್ತಿದ್ದೀರಿ ಎಂದು ಅನಿಸಿದರೂ, ಇದೇ ಕಾರಣಕ್ಕೆ ನಿಮ್ಮ ಮಕ್ಕಳ ಕುಟುಂಬದಲ್ಲಿ ಕಲಹ ಬರಬಹುದು. ಮಕ್ಕಳು ಮದುವೆಯಾದ ಮೇಲೆ ಅವರ ಕುಟುಂಬದ ಜವಾಬ್ದಾರಿಯೂ ನೀವೇ ಹೊರಲು ಹೋಗಬಾರದು. ಅಷ್ಟು ಅಗ್ಯತವಿರುವ ಸಂದರ್ಭದಲ್ಲಿ ಮಾತ್ರ ಹಣಕಾಸಿನ ಸಹಾಯ ಮಾಡಬೇಕೇ ಹೊರತು ಆತನ ದಿನನಿತ್ಯದ ಹಣಕಾಸಿನ ಜವಾಬ್ದಾರಿ ತೆಗೆದುಕೊಳ್ಳಲು ಹೋಗಬೇಡಿ.

 ತುಂಬಾ ನಿರೀಕ್ಷೆ ಬೇಡ

ತುಂಬಾ ನಿರೀಕ್ಷೆ ಬೇಡ

ಹೆಚ್ಚು ನಿರೀಕ್ಷೆ ಅಧಿಕ ನೋವು ಕೊಡುತ್ತದೆ ಎಂಬ ಮಾತನ್ನು ಮರೆಯಬೇಡಿ. ಪೋಷಕರಿಗೆ ಮಕ್ಕಳ ಮೇಲೆ ತುಂಬಾ ನಿರೀಕ್ಷೆಗಳಿರುವುದು ಸಹಜ. ಮಕ್ಕಳು ಮನೆಕೊಳ್ಳಬೇಕು, ಮೊಮ್ಮಕ್ಕಳನ್ನು ನೊಡಬೇಕು ಎಂದೆಲ್ಲಾ ನಿರೀಕ್ಷೆಗಳಿರುವುದು ಸಹಜ. ಆದರೆ ನಿಮ್ಮ ನಿರೀಕ್ಷೆ ಮಕ್ಕಳ ಮನಸ್ಸಿಗೆ ನೋವುಂಟು ಮಾಡಬಾರದು. ಉದಾಹರಣೆ ದಂಪತಿಗೆ ಮದುವೆಯಾಗಿ ಐದು ವರ್ಷ ಕಳೆದಿದ್ದರೂ ಮಕ್ಕಳಾಗಿರುವುದಿಲ್ಲ, ಆ ಕೊರಗು ಅವರಲ್ಲಿರುತ್ತದೆ. ಆದರೆ ಯಾವಾಗ ಪೋಷಕರು ನಮಗೆ ಮೊಮ್ಮಕ್ಕಳು ಬೇಕು ಎಂದು ಹೇಳಲು ಪ್ರಾರಂಭಿಸಿದರೆ ಅದು ಆ ದಂಪತಿ ಮೇಲೆ ಸಾಕಷ್ಟು ಒತ್ತಡ ಬೀಳುತ್ತದೆ.

ಸೊಸೆ/ಅಳಿಯನ ಬಗ್ಗೆ ದೂರುವುದು

ಸೊಸೆ/ಅಳಿಯನ ಬಗ್ಗೆ ದೂರುವುದು

ಸೊಸೆ ಬಗ್ಗೆ ಮಗನಲ್ಲಿ, ಅಳಿಯ ಬಗ್ಗೆ ಮಗಳಲ್ಲಿ ಆಗಾಗ ದೂರುತ್ತಿದ್ದರೆ ಅವರಿಗೆ ತಮ್ಮ ಸಂಗಾತಿ ಮೇಲೆ ಬೇಸರ ಉಂಟಾಗಬಹುದು. ಇದರ ಪರಿಣಾಮ ಅವರ ದಾಂಪತ್ಯದಲ್ಲಿ ಜಗಳ ಬರಬಹುದು. ಮಕ್ಕಳು ಏನಾದರೂ ಚಿಕ್ಕ ತಪ್ಪು ಮಾಡಿದರೆ ಅದು ತಪ್ಪಾಗಿ ಕಾಣುವುದಿಲ್ಲ, ಅದೇ ತಪ್ಪು ಸೊಸೆ ಅಥವಾ ಅಳಿಯನ ಕಡೆಯಿಂದ ಆದರೆ ಅದು ದೊಡ್ಡದಾಗಿ ಕಾಣುವುದು ಸಹಜ. ಆದರೆ ಅವರ ಬಗ್ಗೆ ತಮ್ಮ ಮಕ್ಕಳ ಬಳಿ ಪದೇ ಪದೇ ಹೇಳುತ್ತಿದ್ದರೆ ಮಕ್ಕಳಿಗೆ ಕಿರಿಕಿರಿ ಅನಿಸಬಹುದು.

 ಮಕ್ಕಳ ದಾಂಪತ್ಯ ಜೀವನದಲ್ಲಿ ನಿಮ್ಮ ನಿರ್ಧಾರ ಹೇರಬೇಡಿ

ಮಕ್ಕಳ ದಾಂಪತ್ಯ ಜೀವನದಲ್ಲಿ ನಿಮ್ಮ ನಿರ್ಧಾರ ಹೇರಬೇಡಿ

ದಾಂಪತ್ಯ ಅಂದ ಮೇಲೆ ಅಲ್ಲಿ ಗಂಡ-ಹೆಂಡತಿ ಸೇರಿ ನಿರ್ಧಾರ ತೆಗೆದುಕೊಳ್ಳಬೇಕು. ಪೋಷಕರ ನಿರ್ಧಾರ ಬೇಕು ಅನಿಸಿದಾಗ ಅವರೇ ಕೇಳುತ್ತಾರೆ. ಆದರೆ ಪೋಷಕರು ಮಕ್ಕಳು ಮದುವೆಯಾದ ಮೇಲೆ ಅವರ ಜೀವನದಲ್ಲಿ ತಮ್ಮ ನಿರ್ಧಾರಗಳನ್ನು ಹೇರಲು ಹೋಗಬಾರದು. ನೀವು ಹೇಳುವ ಮಾತುಗಳನ್ನು ನಿಮ್ಮ ಮಗ/ ಮಗಳು ಕೇಳಿದರೂ ಅದು ಅವರ ಸಂಗಾತಿಗೆ ಇಷ್ಟವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

English summary

Reasons How Your Parents Can Cause Conflict In Your Relationship

If your or partner has the habit of sharing every secret with his/her parents then that nature may create problem in your relationship.
X
Desktop Bottom Promotion