For Quick Alerts
ALLOW NOTIFICATIONS  
For Daily Alerts

ಅಪ್ಪಂದಿರ ದಿನದ ವಿಶೇಷ: ಅಪ್ಪನ ಬಗ್ಗೆ ನಾವು ಅರಿಯುವಷ್ಟರಲ್ಲಿ...

|

ಜೂನ್‌ 20 ಅಪ್ಪಂದಿರ ದಿನ..ಅಪ್ಪನ ಬಗ್ಗೆ ಬಹುತೇಕರ ಅಭಿಪ್ರಾಯ ಏನಿರುತ್ತದೆ, ಅದರ ಸತ್ಯ ಅರಿಯುವಷ್ಟರಲ್ಲಿ ಏನಾಗಿರುತ್ತದೆ ಎಂಬುವುದನ್ನು ನಮ್ಮ ಈ ಲೇಖಕರು ವಿವರಿಸಿದ್ದಾರೆ ನೋಡಿ...

ಅಪ್ಪನ ಮಾತು ಹಿಡಿಸಲ್ಲ, ಅಪ್ಪನ ಹಠ ಇಷ್ಟ ಇಲ್ಲ, ಅವರ ನೋಟ ಇಷ್ಟ ಇಲ್ಲ, ಉಪದೇಶವೂ ಇಷ್ಟ ಇಲ್ಲ. ಅವರ ಸಹಭಾಗಿತ್ವವೂ ಬೇಕಿಲ್ಲ. ಅಪ್ಪ ಸದಾ ಅನಗತ್ಯ ಪ್ರಶ್ನೆ ಕೇಳುವ ಅಧಿಕ ಪ್ರಸಂಗಿ.

Fathers Day Special: Daughter Writes Emotional Note

ಹೌದು..ನಾವು ಬೆಳೆದಂತೆ ಅಪ್ಪನ ಬಗೆ ಹೀಗೊಂದು ನಕಾರಾತ್ಮಕ ಪಟ್ಟಿಯೂ ಬೆಳೆಯತೊಡಗುತ್ತದೆ.
ಕುಟುಂಬದ ಜವಾಬ್ದಾರಿ ಹೆಗಲ ಮೇಲೆ ಹೊತ್ತಿಕೊಂಡಿರುವ ಅಪ್ಪ,ಲೌಕಿಕ ಸುಖಲೋಲುಪತೆಗಳಿಗೆ ಐಹಿಕ ಸುಖಾಡರಂಬಗಳಿಗೆ ಕುಟುಂಬಕ್ಕಾಗಿ ತಿಲಾಂಜಲಿ ಇಟ್ಟು ಬದುಕಿನಲ್ಲಿ ತಾಯಿ, ಪತ್ನಿ, ಸಹೋದರ, ಸಹೋದರಿ, ಅತ್ತೆ, ಮಾವ ಇವರೆಲ್ಲರ ಮಧ್ಯೆ ಸಣ್ಣಪುಟ್ಟ ಕಲಹಗಳನ್ನು ಮೆಟ್ಟಿ ನಿಂತು ಸಮದೂಗಿಸಿ ನ್ಯಾಯದ ತಕ್ಕಡಿಯಾಗಿ ಜೀವಿಸುತ್ತಾನೆ. ಈತನ ಪರಿಸ್ಥಿತಿ ಹೇಗೆ ಅಂದ್ರೆ ಅತ್ತವೂ ವಾಲಬಾರದು, ಇತ್ತವೂ ವಾಲಬಾರದು.

ಕುಟುಂಬದ ಭದ್ರತೆಗಾಗಿ, ಪ್ರತಿಷ್ಠೆಗಾಗಿ, ಐಕ್ಯತೆಗಾಗಿ, ಸಮಾಧಾನಕ್ಕಾಗಿ ತನ್ನ ಆಸೆ, ನೋವುಗಳನ್ನು ಮರೆತು ಕುಟುಂಬಕ್ಕಾಗಿಯೇ ತನ್ನ ಬದುಕು ಸವಿಸುತ್ತಾನೆ. ಮಕ್ಕಳಿಗೆ ಬ್ರಾಂಡೆಡ್ ಐಟಮ್ ಕೊಡಿಸಿ ತಾನು ಹರಿದ ಬನಿಯನ್, ಹವಾಯಿ ಚಪ್ಪಲಿ ಧರಿಸುತ್ತಾನೆ.

ವಯಸ್ಸಾದಂತೆ, ಅನಾರೋಗ್ಯ ಪೀಡಿತರಾದಾಗ ಕ್ಷೀಣರಾಗುತ್ತಾರೆ. ಮಕ್ಕಳಿಗೆ ಭಾರ ಎಂದು ಅನಿಸತೊಡಗುತ್ತದೆ.
ಮಕ್ಕಳು ಕೂಡ ಅಮ್ಮನೊಂದಿಗೆ ಮಾತ್ರ ವ್ಯವಹರಿಸುತ್ತಾರೆ. ತನ್ನ ಇಷ್ಟಾರ್ಥಗಳನ್ನೆಲ್ಲ ಬದಿಗಿಟ್ಟು, ಕನಸ್ಸೆಲ್ಲ ನುಚ್ಚುನೂರು ಮಾಡಿ ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂಬ ವಿಷಾದ. ಇದು ಕೇವಲ ಒಂದು ಅಪ್ಪನ ಸಮಸ್ಯೆಯಲ್ಲ. ಸುತ್ತಮುತ್ತಲ ಲಕ್ಷಾಂತರ ಅಪ್ಪಂದಿರ ದುಃಖ.

ಅಮ್ಮನ ಮಹತ್ವವನ್ನು ಎಲ್ಲರೂ ಕೊಂಡಾಡುತ್ತಾರೆ, ಕಣ್ಣೀರಿಡುವ ಅಮ್ಮನನ್ನು ಮಕ್ಕಳು ನೋಡುತ್ತಾರೆ. ಆದರೆ ಕಣ್ಣೀರಿಡುವ ಅಪ್ಪನನ್ನು ಕಾಣುವುದಿಲ್ಲ. ಅಪ್ಪ ಅವರೆದುರೂ ಕಣ್ಣೀರು ಇಡುವುದೂ ಇಲ್ಲ..

9 ತಿಂಗಳು ಹೊತ್ತ ಅಮ್ಮನ ಕಥೆಯನ್ನು ಮಕ್ಕಳು ಕೇಳುತ್ತಾರೆ. ಹೆರಿಗೆಯ ನೋವು, ಬೆಳೆಸಿದ ಕಷ್ಟ ಇವುಗಳ ಬಗ್ಗೆ ಕತೆ, ಕವನ, ನಾಟಕ, ಬರಹ ಸಾಕಷ್ಟಿದೆ.
ಪತ್ನಿಯ ಗರ್ಭ ಕಾಲದಲ್ಲಿ ಹುಟ್ಟುವ ಮಗುವಿನ ಆರೋಗ್ಯಕ್ಕಾಗಿ ಪೋಷಕಾಂಶ ಆಹಾರ, ಹಣ್ಣುಹಂಪಲು, ವೈದ್ಯರ ಶುಶ್ರೂಷೆ, ಮಕ್ಕಳ ತಜ್ಞರ ಬಳಿ ಓಡಾಡಿದ ಅಪ್ಪನ ಬಗ್ಗೆ ಯಾರೂ ಕೇಳಿರುವುದಿಲ್ಲ. ಆಕೆಯ ಹೆರಿಗೆಯ ಸಮಯದಲ್ಲಿ ಗಾಳಿ ಮಳೆಯನ್ನು ಲೆಕ್ಕಿಸದೆ ಆಸ್ಪತ್ರೆ ಯ ವರಾಂಡದಲ್ಲಿ ಸೊಳ್ಳೆಯ ಕಾಟವನ್ನು ಸಹಿಸಿ ಆಕೆಗೋಸ್ಕರ ಕಾವಲು ನಿಂತು, ನೋವನ್ನು ಅನುಭವಿಸಿದ ಪ್ರೀತಿಯ ಕತೆಯನ್ನು ಕೇಳಿರುವುದಿಲ್ಲ. ಹೇಳಿಯೂ ಇರುವುದಿಲ್ಲ. ರಾತ್ರಿಯನ್ನು ಹಗಲಾಗಿ ಪರಿವರ್ತಿಸಿ ದುಡಿದ ಕಾವಲುಗಾರನ ಕತೆಯನ್ನು ಕೇಳಿರುವುದಿಲ್ಲ.

ಇಷ್ಟೆಲ್ಲಾ ಸಂಕಷ್ಟಗಳನ್ನು ಮನೆ ಮಂದಿಗೆ ಹಂಚಿ ಮನಸ್ಸು ಹಗುರ ಮಾಡೋಣವೆಂದರೆ 'ನಿಮ್ಮ ಪುರಾಣ ಸಾಕು' ಎಂಬ ಪ್ರತ್ಯುತ್ತರ. ಅಪ್ಪನ ಪ್ರೀತಿಯ ಅಳೆಯುವುದು ಅಸಾಧ್ಯದ ಮಾತು. ಪ್ರೀತಿ ಪ್ರಕಟಿಸಲು ತಿಳಿಯದ ಅಪ್ಪ. ಮಕ್ಕಳನ್ನು ತಿದ್ದಲು ಹೊರಟರೆ 'ನಿಮ್ಮ ಹಳೆಯ ಕಾಲವಲ್ಲ' ಎಂದು ಹೇಳುವ ಅಮ್ಮಂದಿರು. ಇದೇ ಕಾರಣದಿಂದ ಅಪ್ಪ ಮನೆಯಲ್ಲಿ ಅನ್ಯನಾಗುತ್ತಾನೆ. ಮನೆಯೊಳಗಡೆ ಪಬ್ಜಿ, ಟಿಕ್‌ಟಾಕ್, ಗೇಮ್ಸ್, ಟಿ.ವಿ.ಸೀರಿಯಲ್‌ಗಳು ನೋಡುವಾಗ ನ್ಯೂಸ್ ನೋಡಲಾಗದ ಸ್ಥಿತಿಯಲ್ಲಿ ಅಪ್ಪ ಮೂಲೆಯಲ್ಲಿ ಯಾವುದೋ ಹಳೆಯ ಪೇಪರ್ ಓದುವಂತೆ ನಟಿಸುತ್ತಾನೆ.

ಮಕ್ಕಳು ಅಪ್ಪನಿಗೆ ಮರುತ್ತರ ಕೊಡುವಾಗ ಅವರ ಕಣ್ಣುಗಳನ್ನೊಮ್ಮೆ ನೋಡಿ. ಸಾಗರದಷ್ಟು ದುಃಖವನ್ನು ಮನಸ್ಸಿನೊಳಗಿಟ್ಟು ಅಭಿಮಾನದಿಂದ ತಲೆ ಎತ್ತಿ ನಡೆಯುವ ಅಪ್ಪನ ಗೌರವ ಮತ್ತು ಸಹನೆಯನ್ನು ತಿಳಿಯಬೇಕಾದರೆ ಪ್ರತೀ ಮಗನೂ ತಂದೆಯಾಗಬೇಕು. ಇದೆಲ್ಲವನ್ನೂ ನೆನೆದು ಪಶ್ಚಾತ್ತಾಪ ಪಡುವ ಹೊತ್ತಿನಲ್ಲಿ ಅಪ್ಪ ಕಾಣದ ಲೋಕಕ್ಕೆ ಯಾತ್ರೆ ಹೊರಟಿರುತ್ತಾನೆ. ಅಪ್ಪಾ, ಅಪ್ಪಾ ಎಂದು ಬೊಬ್ಬಿಟ್ಟು ಕರೆದರೂ ಮರಳಿ ಬಾರದ ಲೋಕಕ್ಕೆ. ಆದರೂ ಅಪ್ಪ ಕೊನೆಯವರೆಗೂ ಮಕ್ಕಳ ಯಶಸ್ವಿಗಾಗಿಯೇ ಪ್ರಾರ್ಥಿಸುತ್ತಾನೆ. ಕೋಪ ತೋರಿಸುವ ಪ್ರೀತಿಗಾಗಿ ಅದನ್ನೆಲ್ಲಾ ನುಂಗುವ ಹೇಡಿಯಾಗಿದ್ದಾನೆ..

ಸಿದ್ದೀಕ್ ಕಲ್ಲಡ್ಕ
(ಮೂಲ ಮಲಯಾಳಂ.)

English summary

Father's Day 2022 Special: Son Writes Emotional Note about his Dad

Father's Day Special: Son Writes Emotional Note....
X
Desktop Bottom Promotion