For Quick Alerts
ALLOW NOTIFICATIONS  
For Daily Alerts

ಮರಳಿ ಬರಬಾರದೇ ಆ ದಿನಗಳು...

By ಪೂರ್ಣಿಮಾ ಹೆಗಡೆ
|

ಮನೆಯಲ್ಲಂತೂ ಅದೇ ಗೋಳು, ಯಾವಾಗ ಸ್ಯಾಲರಿ ಹೈಕ್ ಆಗತ್ತೆ ? ಒಂದು ವರ್ಷ ಆಯ್ತು ತಾನೇ, ಏನಂತೆ ನಿಮ್ ಬಾಸ್ ದು? ಬೇರೆ ಕಡೆ ಕೆಲಸ ಹುಡುಕು, ಅದ್ಸರಿ ಏನ್ ಮಾಡ್ತಿ ಬಂದ ಸಂಬಳನೇಲ್ಲ? ನಿನ್ನ ಖರ್ಚಿಗಾದ್ರೂ ಸಾಕಾಗತ್ತೆ ತಾನೆ? ಇಲ್ಲಿರೋದು ವ್ಯಂಗ್ಯನೋ ಸಹಾನುಭೂತಿಯೋ ಅದು ನೀವು ಅರ್ಥಮಾಡಿಕೊಂಡ ಹಾಗೆ!

ನಮಗೂ ಇದೇ ಯೋಚನೆಗಳು ಬಿಡಿ. ರೂಮ್ ಬಾಡಿಗೆ 4000, ಬ್ಯಾಂಕ್ ಲೋನ್ 3000 ಮನೆಗೊಂದೆರಡು ಸಾವಿರ ..... ತಿಂಗಳ ಮೊದಲಿಗೆ ಸಿಕ್ಕ ಎಂಟರಿಂದ ಹತ್ತು ಸಾವಿರ ಮೊದಲ್ ದಿನವೇ ಹಂಚಿಯಾಯಿತು. ಇನ್ನು ತಿಂಗಳ ಕೊನೆಯನ್ನು ಕಾಯುವುದೊಂದೇ ಕೆಲ್ಸ. ಮತ್ತೆ ರೂಮಿಗೋ, ಪಿಜಿ (ಪೇಯಿಂಗ್ ಗೆಸ್ಟ್) ಗೋ ಬರೊದು, ಪೆನ್ನು ಪಟ್ಟಿ ಹಿಡಿದುಕೊಂಡು ಈ ತಿಂಗಳ ಹತ್ತು ಸಾವಿರ ಹೇಗೆ ಖರ್ಚಾಯ್ತು ? ಲೆಕ್ಕಾಚಾರ ತಲೆಕೆಳಗಾಗಿ ನಿಂತ್ರು ಬ್ಯಾಲೆನ್ಸ್ ಮಾತ್ರ ನಿಲ್ .. ಕೊನೆಗೆ ಬೆಂಗಳೂರಿಗೆ ಬೈದು ಬೈದು ಬಾಯಿ ಚಪಲ ತೀರಿಸಿಕೊಳ್ಳುತ್ತಾ ಕೊನೆಗೆ ಅಪ್ಪ ಮಾಡೋ ಶುಂಠಿ ಬೇಸಾಯಕ್ಕಾದ್ರೂ ಕೈ ಜೋಡಿಸಿದ್ರೆ ಒಳ್ಳೆದೇನೋ ಅಂದುಕೊಳ್ಳುವಷ್ಟರಲ್ಲಿ ಮೊಬೈಲ್ ರಿಂಗ್.. ಮನೆ.. ಏನಮ್ಮಾ ಸ್ಯಾಲರಿ ಸಿಕ್ತಾ...? ನಮ್ಮ ಜೀವನ ನಮಗೇ ಭಾರವಾಗಿ ಬಿಟ್ಟಿದೆ ಅಥವಾ ದುಬಾರಿಯಾಗಿಬಿಟ್ಟಿದೆ.

Memoreies Of The Past

ಇನ್ನೊಂದು ಮುಖ್ಯ ವಿಷಯ ಅಂದ್ರೆ ಬೆಂಗಳೂರಲ್ಲಿ ಬದುಕುವುದಕ್ಕೆ ಈ ಹಣ, ಮನೆ ಎಷ್ಟು ಮುಖ್ಯನೋ ಅಷ್ಟೇ ಬಾಯ್ ಫ್ರೇಂಡ್, ಗರ್ಲ್ ಫ್ರೇಂಡ್ ಇರೋದಂತೆ! ಈ ಸೌಲಭ್ಯಗಳಿಂದ ವಂಚಿತರಾದವರು ಹೇಳೋ ಮಾತಿದು. ಇದೇಷ್ಟು ಸತ್ಯನೋ ಏನೋ ಆದರೆ ಹೀಗೊಬ್ಬ ಜೊತೆಗಾರರಿಲ್ಲದ , ಸ್ನೇಹಿತರೂ ಇಲ್ಲದ ಮೊಬೈಲ್ ಕೂಡಾ ಸೈಲೆಂಟ್ ಆಗಿಬಿಡತ್ತೆ. ಯಾವುದೋ ಕೆಲಸ ಮಾಡುವುದಕ್ಕೆ ಯೋಗ್ಯ ಎಂದು ನಮಗೆ ನಾವೇ ಒಂದಿಷ್ಟು ತಿಂಗಳ ಸಂಬಳಕ್ಕೆ ಬೆಲೆಕಟ್ಟಿ ಆ ಹಣಕ್ಕಾಗಿ ಕಾಯುತ್ತಿದ್ದೆವಲ್ಲಾ ಇದೇನ್ರಿ ಜೀವನಾ?

ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆಯಂತೆ ಅಂತ ನಮ್ಮ ನಗುವನ್ನ ನೋಡಿ ಕಂಡವರು ಕರುಬೋ ಹಾಗೆ ಕಳೆದ ದಿನಗಳನ್ನು ಮತ್ತೆ ನೆನಪು ಮಾಡಿಕೊಳ್ಳುತ್ತಾ ಕಳೆದವೆಲ್ಲಾ ಕಾಲೇಜು ಜೀವನ .. ಮರಳಿ ಬಾ ಮತ್ತೆ.. ಆಗಲೂ ಕಷ್ಟ ಸಹಿಸಲಾಗದೇ ಅತ್ತಿದ್ದಿದೆ, ಬೇಜಾರಾಗಿ ಸ್ನೇಹಿತರೊಂದಿಗೆ ಕೇವಲ ಒಂದು ಬಾರಿಯಲ್ಲ ಮತ್ತೆ ಮತ್ತೆ ಹೇಳಿಕೊಂಡದ್ದೆ. ಅಪ್ಪನ ದುಡ್ಡಲ್ಲೇ ಪಾನೀಪುರಿ ತಿಂದರೂ ಒಬ್ಬನೇ ತಿನ್ನುತ್ತಿಲ್ಲ ಗೆಳೆಯರಿಗೂ ಕೊಡಿಸುತ್ತಿದ್ದೇನೆ ಎನ್ನುವ ಸಮಾಧಾನ. ಜಂಭವಿದ್ದರೂ ಇರಬಹುದು!

ಅಸೈನ್ಮೆಂಟ್ ಕೊನೆದಿನ, ರಾತ್ರಿ 9 ರಿಂದ ಬೆಳಗಿನ ಜಾವ 4ರವರೆಗೆ ಸಿನಿಮಾ ಹೀರೂ/ ಹೀರೋಯಿನ್ ತರ ಕಷ್ಟಪಟ್ಟು ಬರೆದಿದ್ದು ಇದೆ. ಬೆಳಿಗ್ಗೆ ಎಲ್ಲರಿಗಿಂತ ಮೊದಲೇ ಹೋಗಿ ಇನ್ನೇನು ಫೈಲ್ ಇಡಬೇಕು ಅಷ್ಟರಲ್ಲಿ ಸ್ನೇಹಿತರ ದಂಡು ಇವತ್ತು ಅಸೈನ್ಮೆಂಟ್ ಸಬ್ಮಿಟ್ ಮಾಡಬೇಡ. ಎಲ್ಲರಿಗಿಂತ ನಾನೇ ಮೊದಲು ಎನ್ನೊ ಗೆಲುವಿಗಿಂತ ಸ್ನೇಹಿತರು ಹಾದಿ ತಪ್ಪಿಸಿದ್ದರೂ (ತಮಾಷೆಗೆ ಎಂದುಕೊಳ್ಳಿ) ಪಾನೀ ಪುರಿ ತಿನ್ನೋವಷ್ಟು ಖುಷಿಯಾಗುತ್ತಿತ್ತು.
ಹೆಸರಿಲ್ಲದ, ನಾವೇ ನಾಮಕರಣ ಮಾಡಿದ ಬೇಂಚ್, ಡೆಸ್ಕ್ ಗಳು, ಇನ್ನೊಂದು ಹೆಸರು ನಮ್ಮಿಂದಲೇ ಇಡಬೇಕು ಎಂಬ ಕಡ್ಡಾಯ ನಿಯಮದಂತೆ ಪ್ರತಿಯೊಬ್ಬ ಉಪನ್ಯಾಸಕರಿಗೂ ಉಚಿತ / ಔಚಿತ್ಯ ನಾಮದೇಯ, ಇವೆಲ್ಲವನ್ನೂ ಚಾಚೂ ತಪ್ಪದೇ ತಲೆತಲಾಂತರಗಳಿಂದ ವಿದ್ಯಾರ್ಥಿಗಳಾಗಿ ಮಾಡಿಕೊಂಡು ಬಂದ ಕೀಟಲೆಗಳಲ್ಲವೆ?

ನಾನೂ ಅವಳೂ ಒಂದೇ ತಪ್ಪನ್ನು ಮಾಡಿದ್ದರೂ ಅವಳಿಗೆ ಮಾತ್ರ ಬೈದರೆ ಅವಳಿಗೆ ಸಾಂತ್ವಾನ ಹೇಳುವುದೂ ಅಥವಾ ನನಗೆ ಸಮಾಧಾನವೂ ಒಟ್ಟಿನಲ್ಲಿ ಈಡೀ ಕ್ಲಾಸಿಗೇ ಸುದ್ಧಿಯಾಗಿತ್ತಿದ್ದುದು ಸುಳ್ಳಲ್ಲ. ನಮಗೇನೋ ಜವಾಬ್ದಾರಿ ವಹಿಸಿ ಕ್ಲಾಸಿಗೆ ಕೈಕೊಟ್ಟ ಮೇಡಂ ಆಂತರಿಕ ಮೌಲ್ಯಮಾಪನ ಮಾಡುವಾಗ ಮಾತ್ರ ಬೇಧ ಭಾವ ಮಾಡಿದ್ದು ಅಳಿಸಿದ್ದು ಮಾರ್ಕ್ಸ್ ಕಾರ್ಡ್ ನೋಡಿದಾಗಲೆಲ್ಲ ಮೇಡಂ ನ್ನು ಬೈದು ಕೊಳ್ಳುವಂತೆ ಮಾಡುತ್ತದೆ. ಇದು ಹುಸಿ ಕೋಪ ಎಂದು ಮತ್ತೇನು ಬಿಡಿಸಿ ಹೇಳಬೇಕಾಗಿಲ್ಲ ತಾನೇ? ನನಗೆ ಅವಳು ಅವಳಿಗೆ ಅವನು ಚಾಲೆಂಜ್ ಹಾಕಿಯೋ ಹಾಕದೇಯೋ ಕೊಡಿಸುತ್ತಿದ್ದ ಬೊಂಡ ಜ್ಯೂಸ್ ನ ರುಚಿಯನ್ನು ಈ ನಾಲಿಗೆ ಮರೆಯುವುದೆಂದು?

ಹೇಗಾದರೂ ಮಾಡಿ ಇಂಗ್ಲಿಷ್ ಮಾತನಾಡಲೇ ಬೇಕು ಎಂದು ಇಂಗ್ಲೀಷ್ ತಿಳಿದಿದ್ದ ಸ್ನೇಹಿತರು ಕ್ರಾಂತಿಯೆಬ್ಬಿಸಿ 1 ರೂಪಾಯಿ ದಂಡದ ಡಬ್ಬಿಯನ್ನೆ ತಂದಿಟ್ಟು ಹಣ ಸಂಗ್ರಹಿಸಿದ ಶ್ರಮಕ್ಕೆ ಸಾಟಿಯುಂಟೇ? ಹಣದ ಡಬ್ಬ ಹೇಗೆ ಖಾಲಿಯಾಯಿತೋ, ಅಂತೂ ಇಂಗ್ಲಿಷ್ ಪಂಡಿತರಾಗುವತ್ತ ಇಂದಿಗೂ ಸ್ನೇಹಿತರ ಪಯಣ ಸಾಗಿದೆ ಎನ್ನುವುದೇ ಹೆಮ್ಮೆಯ ಸಂಗತಿ !

ಈ ತಿಂಗಳಲ್ಲಿ ಒಟ್ಟೂ ಮೂರು ಬರ್ತಡೇ. ಅವಳೇನು ಅಷ್ಟು ಸ್ನೇಹಿತಳಲ್ಲ. ಅವನಂತೂ ಪಾಪ, ಇವಳು ಕೊನೆಯ ತಿಂಗಳ ನನ್ನ ಹುಟ್ಟಿದ ಹಬ್ಬಕ್ಕೆ ಗಿಫ್ಟ್ ಕೊಟ್ಟಿದ್ದಾಳೆ. ಅಂತೂ ಆಯ್ಕೆ ಮಾಡಿ ಗಿಫ್ಟ್ ಕೊಡಲು ತಯಾರಿ ನಡೆಸಿದ್ದಾಯಿತು. ಇನ್ನು ಗಿಫ್ಟ್ ಹಣ ಭರಿಸೋಕೆ ಗೆಳೆತಿಯೊಬ್ಬಳನ್ನು ಹುಡುಕಿ ಅರ್ಧ ಹಣ ಅವಳೂ ಭರಿಸುವಂತೆ ಮಾಡಿದ್ದು ಕಣ್ಣಮುಂದೆಯೇ ಸುಳಿದಾಡುತ್ತದೆ.

ನಮಗೆ ಸರಿ ಎನಿಸಿದ ಐವರು ಕ್ಯಾಂಟಿನ್ ಗೆ ಜೊತೆ ಹೋಗಲು ಇನ್ನಿಬ್ಬರು ಅಸೈನ್ಮೆಂಟ್ ಸಹಾಯಕ್ಕೆ, ಇನ್ನೂ ಮೂವರು ತರಲೆ ಮಾಡಲು ಸಂಜೆ ಸ್ಚಲ್ಪ ಸಮಯ ಸುತ್ತಾಡಲು ಕೊನೆಗೆ ಮೂವರು ರೂಮ್ ಮೇಟ್ಸ್, ಈ ಟೈಮ್ ಟೇಬಲ್ ಸಿದ್ಧ ಮಾಡುವುದಕ್ಕೆ ತೆಗೆದುಕೊಂಡ ಸಮಯ ಕನಿಷ್ಠ ಮೂರು ತಿಂಗಳಿಗಳಷ್ಟೇ!

ಈ ದಿನಗಳ ನೆನೆಪಿನೊಂದಿಗೆ ಯಾಂತ್ರಿಕ ಬದುಕಿಗೆ ಮರಳುದ್ದೇನೆ. ಇದು ಶಾಶ್ವತ ಹಿಂತಿರುಗುವಿಕೆ. ನಗುವ ನಗಿಸುವ, ಅಳಿಸುವ. ಲೆಕ್ಚರರ್ ಹತ್ತಿರ ಚಾಡಿ ಹೇಳುವ , ಮತ್ತೆ ಒಳ್ಳೆಯವರೇ ಆಗಿರುವ, ಸಹಾಯ ಹಸ್ತ ಚಾಚುವ, ತಪ್ಪನ್ನು ಮುಚ್ಚಿ ಅದೆಷ್ಟೋ ಸಲ ಸಂಕಷ್ಟದಿಂದ ಪಾರು ಮಾಡಿರುವ ಸ್ನೇಹಿತರು ಆ ಸುಂದರ ನೆನೆಪಷ್ಟೇ...

English summary

Memoreies Of The Past | Love And Relationship | ಮರಳಿ ಬರಬಾರದೇ ಆ ದಿನಗಳು, ಪ್ರೀತಿ ಮತ್ತು ಸಂಬಂಧ

Right after the college, i stepped into proffesional life. In this busy life i am missing my thiose days. Some moments of the millions we cherished together never ever forget.
Story first published: Wednesday, January 16, 2013, 11:14 [IST]
X
Desktop Bottom Promotion