For Quick Alerts
ALLOW NOTIFICATIONS  
For Daily Alerts

ಮಳೆಯಲಿ ಜೊತೆಯಲಿ... A romantic journey...

By * ಚಂದು
|
Mrs and Mr Chandan
ಈ ಮಳೆನೇ ಹಾಗೆ ಅನ್ನಿಸುತ್ತೆ... ಅವಳ ನೆನೆಪ ಹೊತ್ತು ತರೋದರಲ್ಲಿ ಮೊದಲನೆಯದು. ಈ ಸಾರಿಯ ಮೊದಲ ಮಳೆ ತಂದ ನೆನೆಪನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಅಂತ ಅನಿಸುತಿದೆ. ಅನಿಸುತಿದೆ ಯಾಕೋ ಇಂದು ಆ ಪ್ರೇಮಮಯ ಸಂಜೆಯನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆಂದು.

ನಮ್ಮಿಬ್ಬರ ಹುಟ್ಟುಹಬ್ಬಗಳೇ ಹಾಗೇ.. ನನ್ನದು ಬಿರು ಬೇಸಿಗೆಯಲ್ಲಿ ಇದ್ದರೆ, ಅವಳದು ಜೋರು ಮಳೆಯ ಹೊತ್ತಿಗೆ. ಥೇಟ್ ನಮ್ಮಿಬ್ಬರ ಹಾಗೆ ಫುಲ್ ಉಲ್ಟಾಪುಲ್ಟಾ. ನಾ ಶುದ್ಧ ಮಾಂಸಹಾರಿ. ಅವಳು ಮೊಟ್ಟೆ ಕಂಡ್ರೆ ಇಸ್ಸಿ ಅನ್ನುತ್ತಾಳೆ. ನಾ ನಾನ್ ಸ್ಟಾಪ್ ರೇಡಿಯೊ, ಅವಳು ಮೌನ ಗೌರಿ. ಅವಳು ಮೂರು ಕೋಟಿ ದೇವರಿಗೂ ಭಕ್ತೆ, ಆದರೆ ನಾ ಅವಳಿಗೆ ಮಾತ್ರ ಭಕ್ತ!

ಇದು ನಡೆದದ್ದು ಸುಮಾರು 5 ವರ್ಷಗಳ ಕೆಳಗೆ. ಅಂದು ಅವಳ ಹುಟ್ಟಿದ ದಿನ. ಮಳೆ ಬೇರೆ ಬರುತ್ತಾಯಿತ್ತು ಅಂತ ಸೆಪರೇಟಾಗಿ ಹೇಳುವುದು ಬೇಕ್ಕಿಲ್ಲ ಅಲ್ವಾ. ಬೆಳ್ಳಂಬೆಳ್ಳಗೆ ಅವಳ ಮನೆಗೆ ಹೋಗಿ ಹುಟ್ಟುಹಬ್ಬದ ಶುಭಾಶಯಗಳು ತಿಳಿಸಿ, ಉಡುಗೊರೆ ಕೂಡ ಕೊಟ್ಟಿದ್ದು ಆಯಿತು. ಸಂಜೆ ಅವಳ favourite ದೇವಸ್ಥಾನದಲ್ಲಿ ಸಿಗುವ ಮಾತಾಯಿತು.

"ನಾ ಆಗ್ಲೆ ಬಂದಾಯಿತು ನೀ ಎಲ್ಲಿ ಇದ್ದೀಯ" ಅಂತ ಅವಳ ಕರೆ ಬಂದ ಕೂಡಲೆ ನಾ ಆಫೀಸಿಂದ ಹೊರಟೆ. ಆಗ ಗಂಟೆ 5.33. ದೇವಸ್ಥಾನ ತಲುಪಿದಾಗ 6ಕ್ಕೆ ಎರಡೇ ನಿಮಿಷ ಬಾಕಿ. ಬಿಳಿ ರೇಶಿಮೆಯಲ್ಲಿ ನನ್ನವಳು ನನಗಾಗಿ ಕಾಯುತ್ತಿದ್ದಳು. ಅವಳ ಅಂದವನ್ನು ವರ್ಣಿಸೋದಕ್ಕೆ ಪದಗಳು ಸಾಲುವುದಿಲ್ಲಾ. ಮತ್ತು ಅದರ ಪ್ರಯತ್ನ ಕೂಡ ನಾ ಮಾಡುವುದಿಲ್ಲಾ. ಇವತ್ತಿಗೆ ಅದು ನಡೆದು 5 ವರ್ಷಗಳಾದರೂ ಆ ದೃಶ್ಯ ಇನ್ನೂ ನನ್ನ ಕಣ್ಣಲ್ಲಿ ಅಚ್ಚೊತ್ತಿದಂತೆ ಒಡಮೂಡಿದೆ.

ಯಾವತ್ತೂ ದೇವಸ್ಥಾನಗಳಿಗೆ ಹೋಗದ ನಾನು ಅಂದು ಮರುಮಾತಿಲ್ಲದೆ ಅವಳ ಹಿಂದೆ ದೇವಳದ ಒಳಗೆ ಹೋದೆ. ಅವಳ ಚಿತ್ತವೆಲ್ಲಾ ದೇವರ ಮೇಲಿದ್ದರೆ, ನನ್ನ ಗಮನವೆಲ್ಲಾ ನನ್ನ ದೇವತೆ ಕಡೆಗೇನೆ. ಯಾಕೋ ಗೊತ್ತಿಲ್ಲಾ ಆ ದಿನ ನನ್ನ ದೇವತೆ ತುಂಬಾ ಖುಷಿಯಾಗಿದ್ದಳು. ಸೋ, ಆಕೆಯ ಭಕ್ತನಾದ ನಾನು ಕೂಡ ಖುಷಿಯಾಗಿದ್ದೆ.

ಪೂಜೆ ಮುಗಿಸಿ ಹೊರಬಂದಾಗ 6.30. ಹೊರಗೆ ತುಂತುರು ಮಳೆ ಹಾಗೆ ಬೀಳ್ತಾಯಿತ್ತು. ಮನೆಗೆ ಹೋಗುವ ಎಂದು ನಾ ನನ್ನ ಬೈಕ್ ತೆಗದೆ. ಅವಳು ನಮ್ಮೂರ ಮಹರಾಣಿ ನೋಡಿ, ಛತ್ರಿ ಓಪನ್ ಮಾಡಿ ಬೈಕ್ ನ ಹಿಂಬದಿಯಲ್ಲಿ ಕುಳಿತಳು. ತುಂಬಾ ಟ್ರಾಫಿಕ್ ಇದ್ದ ಕಾರಣ ತುಂಬಾ ನಿಧಾನವಾಗಿ ಗಾಡಿ ಓಡಿಸುತ್ತಿದ್ದೆ. ಬೈಕಲ್ಲಿ ಇದ್ರೂ ಕೂಡ ಅವಳು ಛತ್ರಿಯನ್ನು ಮಡಿಚಿರಲಿಲ್ಲಾ. ನಮ್ಮ ಈ ರೈಡ್ ಯಾವುದೋ ಮಹಾರಾಣಿಯ ಮೆರವಣಿಗೆಯನ್ನು ನೆನಪಿಸುವಂತಿತ್ತು. ಸುತ್ತಮುತ್ತ ಇದ್ದ ಜನರೆಲ್ಲಾ ನಮ್ಮನ್ನೆ ನೋಡುತ್ತಿದ್ದರು.

ಇಂಥ ಸುಖ ಜಗತ್ತಿನ ಎಷ್ಟು ಜನರಿಗೆ ಸಿಗುತ್ತೆ ಹೇಳಿ? ಮನದನ್ನೆಯನ್ನ ಬೈಕಿನಲ್ಲಿ ಕೂರಿಸಿಕೊಂಡು ಮಳೆಯಲ್ಲಿ ನೆನೆಯುತ್ತಾ, ಅವಳು ನೆಪ ಮಾತ್ರಕ್ಕೆ ಛತ್ರಿ ಬಿಚ್ಚಿ ರಾಣಿಯ ಹಾಗೆ ಪೋಸು ಕೊಡುತ್ತಾ, ನೆರೆಹೊರೆಯವರ ದೃಷ್ಟಿಗಳಿಸುತ್ತಾ ನಿಧಾನವಾಗಿ ಮೈನ್ ರೋಡಿನಲ್ಲಿ ಸಾಗುವುದು.. ಒಹ್.. ಹೇಗೆ ಬಣ್ಣಿಸಲಿ?

ಮಳೆಯಲಿ ನೆನೆದು ಅವಳ ಮನೆ ತಲುಪಿದಾಗ ರಾತ್ರಿ 8. ಅವಳಿಗೆ ಗುಡ್ ನೈಟ್ ಹೇಳಿ, ಆ ಸಂಜೆಯ ನೆನಪುಗಳನ್ನು ಜೋಪಾನವಾಗಿ ಜೋಡಿಸಿಕೊಂಡು ನಾ ನನ್ನ ಮನೆಗೆ ಹೊರಟೆ. ಇಂದು ಅವಳು ನನ್ನಿಂದ ದೂರಾಗಿದ್ದಾಳೆ. ಆದರೆ, ಅವಳ ಜೊತೆ ಕಳೆದ ಒಂದೊಂದು ಗಳಿಗೆ ಕೊಡ ಇನ್ನು ಹಸಿರಾಗೇ ಇದೆ.. ಮುಂದೊಮ್ಮೆ ಕೂಡ ಈ ದಿನ ಮತ್ತೆ ನನ್ನ ಬಾಳಲ್ಲಿ ಬರುತ್ತ್ತೆಅನ್ನೋ ನಂಬಿಕೆಯಿಂದ ದಿನ ದೂಡುತಾ ಇದ್ದೀನಿ.

English summary

A romantic journey in rainy season | Valentine's day 2012 | A love story | ಮಳೆಯಲಿ ಪ್ರೇಮಿಯ ಜೊತೆಯಲಿ

I cannot forget at rainy day. It was drizzling, my love was sitting on bike holding the umbrella. We completely drenching not just in rain, in love also. Though my love is not with me the memories always stay. A love letter by Chandu.
Story first published: Friday, February 10, 2012, 14:37 [IST]
X
Desktop Bottom Promotion