For Quick Alerts
ALLOW NOTIFICATIONS  
For Daily Alerts

ಮನೆಯೊಳಗಣ ಶತ್ರುವಿನ ನಿರ್ದಾಕ್ಷಿಣ್ಯ ವಧೆ

By Prasad
|

"ರೀ ಬರ್ತೀರಾ ಇಲ್ಲಿ, ನೋಡಿ ಮೊನ್ನೆ ತಾನೆ ಕಿಚನ್ ಕ್ಲೀನ್ ಮಾಡಿದ್ದೆ ಅಷ್ಟರಲ್ಲೇ ಜಿರಲೆಗಳು ಮತ್ತೆ ತುಂಬಿಕೊಂಡಿವೆ. ಅಯ್ಯೋ ಮತ್ತೆ ಹಿಟ್ ಹೊಡೀಬೇಡಿ, ಪಾತ್ರೆಗಳೆಲ್ಲಾ ವಾಸ್ನೆಯಾಗಿಬಿಡ್ತವೆ" ಅಂತ ಕಿರಿಚಾಡುವ ಮಹಿಳಾಮಣಿಗಳು ಇಲ್ಲದಿದ್ದರೆ ಅಡುಗೆಮನೆಗೆ ಕಳೆಯೇ ಇರುವುದಿಲ್ಲ. ಅಡುಗೆಮನೆಯಲ್ಲಿ ಶಾಶ್ವತವಾಗಿ ಬಿಡಾರ ಹೂಡಿ ನಮಗೆ ತೊಂದರೆ ಕೊಡದಿದ್ದರೆ ತರಲೆ ಜಿರಲೆಗಳಿಗೂ ಸಮಾಧಾನವಿರುವುದಿಲ್ಲ.

ಇಲಿ, ಸೊಳ್ಳೆ, ನೊಣ, ತಿಗಣೆಗಳಿಗಿಂತ ಜಿರಲೆಗಳದ್ದು ಒಂದು ಕೈ ಮೇಲೆಯೇ ಎಂಬ ರಂಪಾಟ. ಸದ್ಯಕ್ಕೆ ಗೃಹಿಣಿಯರು ಎದುರಿಸುತ್ತಿರುವ ಅತೀ ದೊಡ್ಡ ಸವಾಲು ಎಂದರೂ ಅಡ್ಡಿಯಿಲ್ಲ. ಜಿರಲೆ ಸರ್ವಾಂತರ್ಯಾಮಿ, ಜಿರಲೆ ಚಿರಂಜೀವಿ, ಜಿರಲೆಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಯಾವುದೇ ಶಾಶ್ವತ ಪರಿಹಾರ ಕಂಡುಹಿಡಿಯಲಾಗಿಲ್ಲ.

ಇಂತಿಪ್ಪ ಜಿರಲೆಗಳು ಮೂರು ಸಾವಿರದ ಐನೂರು ಲಕ್ಷ ವರುಷಗಳಿಂದ ಭೂಮಿಯ ಮೇಲೆ ರಾಜ್ಯಭಾರ ನಡೆಸುತ್ತಿವೆ ಎಂಬ ಸಂಗತಿಯನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಜಿರಲೆ ಜಾತಿಗೆ ಸೇರಿದ ಒಟ್ಟು 3700 ಕೀಟಗಳು ಭೂಮಿಯ ಮೇಲಿವೆ. ಅವುಗಳಲ್ಲಿ 30 ಪಂಗಡಗಳು ನಮ್ಮ ಭಾರತದಲ್ಲಿನ ಗಾಳಿ ಮತ್ತು ಆಹಾರ ಸೇವಿಸುತ್ತಿವೆ. ಎಲ್ಲೆಲ್ಲಿ ತೇವಾಂಶವಿದೆಯೋ ಶುಚಿತ್ವವಿಲ್ಲವೋ ಅಲ್ಲೆಲ್ಲ ಸಾಮ್ರಾಜ್ಯವನ್ನು ಸ್ಥಾಪಿಸುತ್ತವೆ. ಅದರಲ್ಲೂ ಹೆಂಗಳೆಯರ ಪ್ರೀತಿಯ ಅಡುಗೆ ಮನೆ ಅಂದ್ರೆ ಇವುಗಳಿಗೆ ಬಲು ಪ್ರೀತಿ. ಇವುಗಳಿಂದ ಟೈಫಾಯ್ಡ್, ಬೇಧಿ, ಕಾಲರಾ ತಂದಿಡುವುದು ಮಾತ್ರವಲ್ಲ ಹೆಪಟೈಟಿಸ್ ಬಿ ವೈರಾಣುಗಳನ್ನು ಒಬ್ಬರಿಂದೊಬ್ಬರಿಗೆ ಹರಡಿಸುವಲ್ಲಿ ಏಕಮಾದ್ವಿತೀಯ ಈ ಜಿರಲೆ.

ಇವುಗಳನ್ನು ಮನೆಯಿಂದ ಹೊರಗಟ್ಟಲು ನಾನಾ ಪಾಡುಗಳನ್ನು ಎಲ್ಲರೂ ಪಟ್ಟಿರುತ್ತಾರೆ. ಕೆಲ ತಂತ್ರಗಳನ್ನು ಹೂಡದಿದ್ದರೆ ನಾವು ಮತ್ತೆ ನಿಮ್ಮ ಹೆಂಡತಿಯಿಂದ ಬೈಗುಳ ತಿನ್ನುವುದು ಖಚಿತ. ಪ್ರಯತ್ನಿಸಿ ನೋಡಿ.

ಜಿರಲೆಗಳನ್ನು ಸಾಯಿಸಲು ಕೆಲ ಟಿಪ್ಸ್

1. ಜಿರಲೆಗಳಿಗೆ ನ್ಯಾಫ್ಥಲಿನ್ ಗುಳಿಗೆಗಳ ವಾಸನೆ ಕಂಡರಾಗುವುದಿಲ್ಲವಾದ್ದರಿಂದ ಮಾರ್ಕೆಟ್ಟಿನಲ್ಲಿ ಸಿಗುವ ಓರೀಜಿನಲ್ ನ್ಯಾಫ್ಥಲಿನ್ ಗುಳಿಗೆಗಳನ್ನು ತಂದಿಡಿ.

2. ಸೋಪಿನ ನೀರು ಜಿರಲೆಯ ಮೈಮೇಲೆ ಬಿದ್ದರೆ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡಿ ಸಾಯುತ್ತದೆ.

3. ಜಿರಲೆ ಇರುವ ಮೂಲೆಯಲ್ಲಿ ಬೋರಿಕ್ ಆಸಿಡ್ ಸಿಂಪಡಿಸಿದರೆ ಅವು ಬೇಗ ಸಾಯುತ್ತವೆ.

4. ಹಿಟ್ ಹೊಡೆದರೆ ಜಿರಲೆಗಳು ಸಾಯುತ್ತವೆಯೇನೋ ನಿಜ ಆದರೆ ಅದರ ಬಳಕೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಅಗಾಧ. ಅಸ್ತಮಾ ಇದ್ದರಂತೂ ಕೀಟನಾಶಕಗಳ ಸ್ಪ್ರೇ ಮಾಡಲೇಬಾರದು.

ಜಿರಲೆಗಳನ್ನು ನಿಯಂತ್ರಣದಲ್ಲಿಡಲು ಕೆಲ ಟಿಪ್ಸ್

1. ಮನೆ ಸ್ವಚ್ಛವಾಗಿರಲಿ ಮತ್ತು ತೇವಾಂಶದಿಂದ ಮುಕ್ತವಾಗಿರಲಿ. ನೀರು ತೊಟ್ಟಿಕ್ಕುವ ಜಾಗವಿದ್ದರೆ ಮೊದಲು ಮುಚ್ಚಿಸಿ.

2. ಡಬ್ಬಿಯ ಮುಚ್ಚಳಗಳು ಏರ್ ಟೈಟ್ ಇರಲಿ.

3. ಸಿಂಕಿನಲ್ಲಿ ತೊಳೆಯದ ಪಾತ್ರೆಗಳಿದ್ದರೆ ಅವುಗಳನ್ನು ಸೋಪಿನ ನೀರಿನಲ್ಲಿ ಮುಳುಗಿಸಿಡಿ.

4. ಕಪಾಟುಗಳನ್ನು ತಪ್ಪದೆ ಪ್ರತಿ ವಾರ ಸ್ವಚ್ಛ ಮಾಡಿ.

5. ಮನೆಯಲ್ಲಿ ಸೂರ್ಯನ ರಶ್ಮಿ ಯತೇಚ್ಛವಾಗಿ ಬರುವಂತೆ ನೋಡಿಕೊಳ್ಳಿ. ಇದು ಕ್ರಿಮಿಗಳು ಕಡಿಮೆಯಾಗಲು ಬಲು ಸಹಕಾರಿ.

ಜಿರಲೆಗಳ ನಿರ್ನಾಮ ಮನಸ್ಸಿಗೆ ನೆಮ್ಮದಿ ಮಾತ್ರವಲ್ಲ ಅನೇಕ ರೋಗಗಳಿಂದ ನಮ್ಮನ್ನು ದೂರ ಇಡುತ್ತವೆ. ನಿಮಗೆ ಕೂಡ ಜಿರಲೆಗಳನ್ನು ಓಡಿಸುವ ಉಪಾಯ ತಿಳಿದಿದ್ದರೆ ನಮಗೆ ಬರೆಯಿರಿ.

X