For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುವ ಸಿಹಿ ತಿನಿಸು ಮೈಸೂರು ಪಾಕ್

By Staff
|

ಪಾಕಿನ ಜೊತೆ ಅಂಟಿಕೊಂಡಿರುವ ಮೈಸೂರು ಸ್ಥಳಸೂಚಕವೇನಲ್ಲ. ಮೆಸ್ಸೂರು (ಕಡಲೆಹಿಟ್ಟು) ಪಾಕು ನಾಲಗೆಗಳಲ್ಲಿ ಹೊರಳಿ ಮೈಸೂರ್‌ ಪಾಕ್‌ ಆಗಿದೆಯಷ್ಟೆ...

ಆ ಪಕ್ಕದ ಮನೆ ಉಮಾ ಎಷ್ಟು ಚೆನ್ನಾಗಿ ಮೈಸೂರು ಪಾಕ್‌ ಮಾಡ್ತಾಳೆ ಗೊತ್ತಾ ? ನಾನು ತಿಪ್ಪರಲಾಗ ಹಾಕಿದ್ರೂ ಅಂಥಾ ಹದ ಕಂಡುಕೊಳ್ಳೋಕಾಗಿಲ್ಲ. ನಾಳೆ ನಮ್ಮ ಯಜಮಾನ್ರು ಅವ್ರ ಕೊಲೀಗ್ಸನ್ನ ಊಟಕ್ಕೆ ಕರೆದಿದ್ದಾರೆ. ಅದಕ್ಕೆ ಉಮಾಗೆ ಮಧ್ಯಾಹ್ನ ಬಿಡುವು ಮಾಡ್ಕೊಳ್ಳೋಕೆ ಹೇಳಿದೀನಿ...


ಇಂಥ ಸಂಭಾಷಣೆಗಳು ನಿಮಗೇನೂ ಹೊಸದಲ್ಲ . ಹಾಗಂತ ಅದು ಕ್ಲೀಷೆ ಅಂತಲೂ ಅನ್ನಿಸೋದಿಲ್ಲ. ಅದು ಸತ್ಯ. ಮೈಸೂರು ಪಾಕು ಮಾಡೋದು ಬಲು ನಾಜೂಕಿನ ಕೆಲಸ. ಅದನ್ನು ಮಾಡಿ ಸೈ ಅನ್ನಿಸಿಕೊಂಡೋಳ ಬಾಯಿಗೆ ಸಕ್ಕರೆ ಹಾಕ ಎಂಬುದು ಜನಜನಿತ. ನೀವೂ ಮತ್ಯಾವುದೋ ಉಮಾಳನ್ನು ಹುಡುಕಿಕೊಂಡು ಹೋಗೋ ಪ್ರಮೇಯವಿಲ್ಲ. ಮೈಸೂರು ಪಾಕು ಮಾಡೋದನ್ನ ನಾವು ಕಲಿಸ್ತೇವೆ. ನೀವು ಆಸ್ಥೆಯಿಂದ ಮಾಡಬೇಕಷ್ಟೆ.

ಬೇಕಾಗೋದು ಇಷ್ಟು-
1 ಲೋಟ ಜರಡಿ ಹಿಡಿದ ಕಡಲೇಹಿಟ್ಟು
2 ಲೋಟ ಸಕ್ಕರೆ
3 ಲೋಟ ಶುದ್ಧ ತುಪ್ಪ (ಸಿಕ್ಕರೆ!)
ಒಂದೂವರೆ ಲೋಟ ನೀರು

ಆರ್‌ ಯು ರೆಡಿ. ಮೈಸೂರು ಪಾಕು ಮಾಡೋದು ಹೀಗೆ...

ಬಾಯಿ ಅಗಲವಿರುವ ಪಾತ್ರೆಯಲ್ಲಿ ನೀರಿಗೆ ಸಕ್ಕರೆ ಸೇರಿಸಿ, ಒಂದು ಹರಳೂ ಉಳಿಯದಂತೆ ಕರಗಿಸಿ. ಸಕ್ಕರೆ ದ್ರಾವಣದ ಪಾತ್ರೆಯನ್ನು ಒಲೆ ಮೇಲಿಟ್ಟು ಕಾಯಿಸಿ. ಒಲೆಯ ಉರಿ ಕಡಿಮೆಯಿರಲಿ. ಪಾತ್ರೆಯಲ್ಲಿನ ದ್ರಾವಣವನ್ನು ಸಣ್ಣ ಚಮಚೆಯಿಂದ ಹದನಾಗಿ ಕಲಕುತ್ತಾ ಹೋಗಿ. ದ್ರಾವಣ ಸುಮಾರಾಗಿ ಲೋಳೆಯಾಗಬೇಕು. ಎರಡು ಬೆರಳುಗಳ ನಡುವೆ ದ್ರಾವಣ ಹಾಕಿ, ಸೇರಿಸಿದ ಬೆರಳುಗಳನ್ನು ಬೇರೆ ಬೇರೆ ಮಾಡಿದರೆ ದ್ರಾವಣದ ನೂಲಿನ ಸೇತುವೆ ಕಾಣಬೇಕು. ಈ ಹದಕ್ಕೆ ಪಾಕ ಸಿದ್ಧ ಮಾಡಿಕೊಳ್ಳಿ. ಸಿದ್ಧವಾದ ಪಾಕವನ್ನು ಒಲೆ ಮೇಲಿಂದ ಕೆಳಗಿಳಿಸಿ.

ಮತ್ತೊಂದು ನಾನ್‌ಸ್ಟಿಕ್‌ ಪ್ಯಾನ್‌ ತೆಗೆದುಕೊಳ್ಳಿ (ಸಾದಾ ಬಾಣಲೆಯಾದರೂ ಆದೀತು). ಅದರಲ್ಲಿ 3-4 ಚಮಚ ತುಪ್ಪ ಹಾಕಿ ಕಾಯಿಸಿ, ಕರಗಿಸಿ. ಕಾದ ತುಪ್ಪಕ್ಕೆ 3-4 ಚಮಚ ಕಡಲೇ ಹಿಟ್ಟು ಸೇರಿಸಿ, ಅದೇ ಅಳತೆ (3-4 ಚಮಚ) ಯ ಪಾಕ ಹಾಕಿ ಹದವಾಗಿ ಕಾಯಿಸಿ. ಮಿಶ್ರಣವನ್ನು ಚಮಚದಿಂದ ಕಲಕುವುದನ್ನು ಮರೆಯಬೇಡಿ. ಮೂರ್ನಾಲ್ಕು ನಿಮಿಷದ ನಂತರ ಮತ್ತೆ ಅದೇ ಕ್ರಿಯೆಯನ್ನು ಮುಂದುವರೆಸಿ (ಅಷ್ಟೇ ಪ್ರಮಾಣ). ತುಪ್ಪ ಹಾಗೂ ಪಾಕ ಪೂರ್ತಿ ಖಾಲಿಯಾಗುವವರೆಗೆ ಬೆರೆಸುವಿಕೆ ಮುಂದುವರೆಸಿ. ಒಂದು ಹಂತದಲ್ಲಿ ಮಿಶ್ರಣ ಲಘು ಹಳದಿ ಬಣ್ಣಕ್ಕೆ ತಿರುಗುತ್ತದೆ. ಬಾಣಲೆಯ ಅಂಚಿನಲ್ಲಿ ಮಿಶ್ರಣ ಘನೀರ್ಭವಿಸಿ, ಪ್ಯಾನಿನ ಸಂಬಂಧ ಕಡಿದುಕೊಳ್ಳುತ್ತಿರುವುದು ಕಾಣುತ್ತದೆ. ತಕ್ಷಣ ಒಲೆಯ ಉರಿ ನಂದಿಸಿ.

ಅಗಲವಾದೊಂದು ತಟ್ಟೆಯ ಮೈದಾನಕ್ಕೆಲ್ಲಾ ತುಪ್ಪ ಸವರಿ, ಮಿಶ್ರಣವನ್ನು ಅದಕ್ಕೆ ಸುರಿಯಿರಿ. 15 ನಿಮಿಷ ಬಿಟ್ಟು, ಚಾಕುವಿನಿಂದ ನಿಮ್ಮ ಇಚ್ಛಾನುಸಾರ ಗಾತ್ರಕ್ಕೆ ಕತ್ತರಿಸಿ. ತಣ್ಣಗಾಗುವವರೆಗೆ ಸುಮ್ಮನಾಗಿ. ಮೈಸೂರು ಪಾಕು ಸಿದ್ಧ. ಮುಚ್ಚಳವಿರುವ ಡಬ್ಬದಲ್ಲಿ ಸಂಗ್ರಹಿಸಿಡಿ. ಮೈಸೂರು ಪಾಕನ್ನು 15- 20 ದಿನಗಳವರೆಗೆ ಇಟ್ಟು, ತಿನ್ನಬಹುದು. ಒಮ್ಮೆಲೆ ಅಬ್ಬಬ್ಬಾ ಅಂದರೆ ಎರಡು ತುಂಡು ತಿನ್ನೋದು ಆರೋಗ್ಯದ ದೃಷ್ಟಿಯಿಂದ ಒಳ್ಳೇದು.

English summary

Mysore Pak, the pride of karnataka | Sweet dish Mysuru Pak | ಮೈಸೂರು ಪಾಕ್

Karnataka kitchen: sweet delicacies : Mysore Pak. Prepare it for any occasion to serve the guests at home.
X
Desktop Bottom Promotion