For Quick Alerts
ALLOW NOTIFICATIONS  
For Daily Alerts

ಮಿಕ್ಸಿಯಲ್ಲಿ ಮಾಡುವ ಒರಳು ಚಿತ್ರಾನ್ನ

By * ಉಷಾ ರಾವ್, ಬೆಂಗಳೂರು
|
Oralu chitranna
ನಮ್ಮ ತೀರ್ಥಹಳ್ಳಿ ಮನೆಯಲ್ಲಿ ಅಮ್ಮ ವಾರಕ್ಕೊಮ್ಮೆಯಾದರೂ ಒರಳು ಚಿತ್ರಾನ್ನ ಮಾಡುತ್ತಿದ್ದರು. ಅಮ್ಮಮ್ಮನೂ ಮಾಡುತ್ತಿದ್ದರೆಂದು ಅಮ್ಮ ಹೇಳ್ತಾರೆ. ನಮಗೆ ಈ ಚಿತ್ರಾನ್ನ ತಿಂದೇ ಅಭ್ಯಾಸ. ಬೆಂಗಳೂರಿನಲ್ಲಿ ಮಾಡುವ ಅರಿಶಿನದ ಒಗ್ಗರಣೆ ಚಿತ್ರಾನ್ನ ಮಲೆನಾಡಿನಲ್ಲಿ ಅಷ್ಟಾಗಿ ಜನಪ್ರಿಯ ಇಲ್ಲ. ಇಲ್ಲಿ ಅನ್ನ ಉಳಿತೂ ಅಂದ್ರೆ ಸಾಕು, ಕಾಯ್ತಾ ಇರ್ತಾರೆ ಚಿತ್ರಾನ್ನ ಮಾಡಿ ಇಡ್ತಾರೆ. ಆದರೆ ಊರಿನ ಮನೆಯಲ್ಲಿ ಅನ್ನ ಉಳಿದರೆ ಅದಕ್ಕೆ ನೀರು ಬೆರೆಸಿ ಗಂಜಿ ಮಾಡಿ ಆಕಳಿಗೆ ಇಡುತ್ತಿದ್ದೆವು. ಕೊಟ್ಟಿಗೆಯಲ್ಲಿ ಸದಾ ನಾಲ್ಕಾರು ದನಕರಗಳು ಇರುತ್ತಿದ್ದವು. ಆರು ಸೇರು ಹಾಲು ಕರೀತಿದ್ದವು. ಮದುವೆ ಆಗಿ ತವರು ಮನೆ ಬಿಡುವತನಕ ಕೊಟ್ಟಿಗೆ ಗುಡಿಸುವುದು ಹಾಲು ಕರೆಯುವ ಕೆಲಸಗಳನ್ನು ನಾನೇ ಮಾಡುತ್ತಿದ್ದೆ.

ನಿಮ್ಮ ಅಮ್ಮ ಹೇಳಿಕೊಟ್ಟ ಒರಳು ಚಿತ್ರಾನ್ನ ರೆಸಿಪಿ ಬರೆದುಕೊಡಿ ಎಂದು ಶಾಮ್ ಪದೇ ಪದೇ ಕೇಳುತ್ತಿದ್ದರು. ಇಂಟರ್ನೆಟ್ಟಿನಲ್ಲಿ ತುಂಬಾ ಜನ ಅಡುಗೆ ರೆಸಿಪಿ ಓದುತ್ತಾರೆ, ನಿಮ್ಮ ಅಡುಗೆ ಶೈಲಿ ಬರೆದುಕೊಡಿ ಎಂದು ಅವರು ಒಂದೇಸಮನೆ ಕೇಳುತ್ತಿದ್ದರು. ಬರೆಯುವ ಅವಕಾಶ ಇವತ್ತು ಬಂದಿದೆ. ನೀವೆಲ್ಲ ಇದನ್ನು ಮಾಡಿ ಸವಿಯುತ್ತೀರೆಂದು ನನಗೆ ವಿಶ್ವಾಸವಿದೆ. ನಿಮ್ಮ ಅಭಿಪ್ರಾಯ ಶಾಮ್ ಅವರಿಗೇ ತಿಳಿಸಿ. ನಾನು ವೆಬ್ ಸೈಟು ಓಪನ್ ಮಾಡಲ್ಲ.

ಬೇಕಾಗುವ ಪದಾರ್ಥಗಳು :

ಕಾಲು ಕೆಜಿ ಅಕ್ಕಿ
ಹತ್ತು ಅಥವಾ ಹನ್ನೆರಡು ಒಣಮೆಣಸಿನಕಾಯಿ
ಅರ್ಧ ಬಟ್ಟಲು ಹಸಿ ತೆಂಗಿನ ತುರಿ
ಚಮಚ ಜೀರಿಗೆ
ಸಣ್ಣ ಉಂಡೆ ಬೆಲ್ಲ
ಸ್ವಚ್ಛ ಮಾಡಿದ ಸ್ವಲ್ಪ ಹುಣಿಸೆಹಣ್ಣು
ರುಚಿಗೆ ತಕ್ಕನ ಹಾಗೆ ಉಪ್ಪು.

ವಿಧಾನ :

ಅಕ್ಕಿಯನ್ನು 15 ನಿಮಿಷ ನೀರಿನಲ್ಲಿ ನೆನೆಯಿಟ್ಟು ಆನಂತರ ಒಂದಕ್ಕೆ ಎರಡರಷ್ಟು ನೀರು(ಪಾವು ಅಕ್ಕಿಗೆ ಎರಡು ಪಾವು ನೀರು)ಹಾಕಿ ಅನ್ನ ಮಾಡಿಟ್ಟುಕೊಳ್ಳಬೇಕು.

ಮೇಲೆ ಬರೆದ ಇನ್ನಿತರ ಎಲ್ಲ ಪದಾರ್ಥಗಳನ್ನು ಸೇರಿಸಿ ಒಟ್ಟಿಗೆ ರುಬ್ಬಿಕೊಳ್ಳಬೇಕು. ತೀರಾ ನುಣ್ಣಗೂ ಬೇಡ, ತೀರಾ ತರಿತರಿಯಾಗಿಯೂ ಇರಬಾರದು.

ಬಾಣಲೆಯಲ್ಲಿ ಹತ್ತು ಟೀ ಚಮಚದಷ್ಟು ಎಣ್ಣೆ ಹಾಕಿ ಬಿಸಿಮಾಡಿ ಅದಕ್ಕೆ ಸಾಸಿವೆ ಕರಿಬೇವು ಕಡಲೆಬೇಳೆ ಚೂರು ಜೀರಿಗೆ ಮತ್ತು ಚೂರುಚೂರು ಮಾಡಿದ ಮುರೋ ನಾಲಕ್ಕೋ ಒಣಮೆಣಸಿಕಾಯಿ ಹಾಕಿ ಒಗ್ಗರಣೆ ಮಾಡಿ. ಹಸಿ ವಾಸನೆ ಹೋಗುವುವವರೆಗೆ ಕಾದಿದ್ದು ಬಾಣಲೆ ಕೆಳಗಿಳಿಸಿ. ದೊಡ್ಡ ತಟ್ಟೆ ಅಥವಾ ಬೇಸಿನ್ನಿನಲ್ಲಿ ಅನ್ನಹಾಕಿ ಆರಿಸಿ. ಇದಕ್ಕೆ ರುಬ್ಬಿಕೊಂಡ ಸಾಮಗ್ರಿ ಸುರುವಿ ಕೈಯಲ್ಲಿ ನಿಧಾನವಾಗಿ ಕಲಸಿ. ಉಪ್ಪು ಸಾಕಾ ಅಥವಾ ಬೇಕಾ ಎಂದು ತಿಳಿಯಲು ಕಲಸುವಾಗಲೇ ಚಿತ್ರಾನ್ನದ ಸ್ವಲ್ಪ ರುಚಿನೋಡಿಕೊಳ್ಳಿ. ಕಲಸಿದ ಮೇಲೂ ಗೊಜ್ಜು ಉಳಿದರೆ ಫ್ರಿಜ್ಜಿನಲ್ಲಿ ಇಟ್ಟುಕೊಂಡಿರಿ.

ಅಮ್ಮ ಇದನ್ನು ಒರಳಲ್ಲಿ ರುಬ್ಬಿ ಮಾಡುತ್ತಿದ್ದರಿಂದ ಇದಕ್ಕೆ ಒರಳು ಚಿತ್ರಾನ್ನ ಎಂಬ ಹೆಸರು ಬಂದಿದೆ. ಆದರೆ ಬೆಂಗಳೂರಿನ ಮನೆಯಲ್ಲಿ ಮನೆಕಟ್ಟಿದ ಕಂಟ್ರ್ಯಾಕ್ಟರ್ ಒರಳು ಮಾಡಿಸಿ ಇಟ್ಟಿಲ್ಲ. ನಾನು ಮಿಕ್ಸಿಯಲ್ಲೇ ಮಾಡುತ್ತೇನೆ. ಊರಲ್ಲಿ ಈಗೀಗ ಅಮ್ಮ ಕೂಡ ಮಿಕ್ಸಿಯಲ್ಲೇ ಒರಳು ಚಿತ್ರಾನ್ನ ಮಾಡುತ್ತಾರಂತೆ. ಅವಳಿಗೂ ವಯಸ್ಸಾಯಿತು, ಕೈಲಾಗಲ್ಲ.

Story first published: Tuesday, December 29, 2009, 12:42 [IST]
X
Desktop Bottom Promotion