For Quick Alerts
ALLOW NOTIFICATIONS  
For Daily Alerts

ಬಾಳೆ ದಿಂಡಿನ ಪಲ್ಯ ಮತ್ತು ಕೋಸಂಬರಿ

By Super
|
Banana stem
ಬಾಳೆ ಎಂದರೆ ರುಚಿಯಾದ ಹಣ್ಣು, ಬಾಳೆಕಾಯಿ ಬಜಿ, ಬಾಳೆಕಾಯಿ ಚಿಪ್ಸು, ಬಾಳೆ ನಾರು, ಇನ್ನೂ ಏನೇನೋ ಮಾತ್ರ ಅಲ್ಲ. ಇನ್ನೂ ಒಂದಿದೆ. ಒಮ್ಮೆ ಏನಾಯಿತೆಂದರೆ, ಮನೆಯಲ್ಲಿ ಸಮಾರಾಧನೆ, ನೆಂಟರೊಬ್ಬರು ಬಂದು ನೇರವಾಗಿ ಒಂದು ಖಾಲಿ ಇದ್ದ ಬಾಳೆ ಎಲೆಯ ಮುಂದೆ ಪಕ್ವಾನ್ನ ಸೇವನೆಗೆ ಕುಳಿತುಕೊಂಡರು. ಅಷ್ಟರಲ್ಲಿ ಬಾಳೆ ಎಲೆ ತೆಗೆಯಲು ಮಹಿಳೆಯರಿಬ್ಬರು ಶುರು ಮಾಡಿದರು. ಖಾಲಿ ಎಲೆ ಏಕೆ ತೆಗೆಯುತ್ತಿದ್ದಾರೆಂದು ನೆಂಟರಿಗೆ ಆಶ್ಚರ್ಯ. ಆದದ್ದೇನೆಂದೆರೆ, ಬಾಳೆ ಎಲೆಯನ್ನು ತೊಳೆದಷ್ಟು ಸ್ವಚ್ಛವಾಗಿ ಯಾರೋ ಒಬ್ಬರು ಊಟ ಮಾಡಿದ್ದರು.

ಬಾಳೆ ಎಲೆಯ ಊಟದ ಸವಿಯೆಂದರೆ ಅದು. ಬಾಳೆ ಎಲೆ ತಿನ್ನುವಂತಿದ್ದರೆ ಅದನ್ನೂ ತಿಂದುಬಿಡುತ್ತಿದ್ದರೇನೋ!

ಬಾಳೆ ಎಂದರೆ ಬಾಯಿ ಚಪ್ಪರಿಸುವಂತೆ ಊಟ, ಒಂದು ತುತ್ತು ಜಾಸ್ತಿನೇ. ಬಾಳೆ ಎಂದರೆ ರುಚಿಯಾದ ಹಣ್ಣು, ಬಾಳೆಕಾಯಿ ಬಜಿ, ಬಾಳೆಕಾಯಿ ಚಿಪ್ಸು, ಬಾಳೆ ನಾರು, ಇನ್ನೂ ಏನೇನೋ ಮಾತ್ರ ಅಲ್ಲ. ಇನ್ನೂ ಒಂದಿದೆ. ಹಳ್ಳಿ ಕಡೆಯವರಾದರೆ ಅದರ ಸವಿಯನ್ನು ಸವಿದೇ ಇರುತ್ತಾರೆ. ಬಾಳೆಗಿಡದ ಕಾಂಡ ಕೂಡ ತಿನ್ನಲು ಯೋಗ್ಯವೆಂದರೆ ನಿಮಗೆ ಆಶ್ಚರ್ಯವಾಗಬಹುದು. ಬಾಳೆ ನಾರುಗಳನ್ನು ಒಂದೊಂದೇ ಪದರವಾಗಿ ಬಿಡಿಸುತ್ತಾ ಹೋದರೆ ತಿರುಳಲ್ಲಿ ಸಿಗುವುದೇ ಬಿಳಿಯಾದ ಬಾಳೆ ದಿಂಡು. ಈಗ ಅದರ ಪಲ್ಯ ಮತ್ತು ಕೋಸಂಬರಿ ಮಾಡುವುದು ಹೇಗೆಂದು ನೋಡೋಣ.

ಪಲ್ಯ

ಬೇಕಾದ ಸಾಮಗ್ರಿಗಳು

ಬಾಳೆ ದಿಂಡು, ಆಫ್‌ ಕೋರ್ಸ್‌
ಉಳಿದಂತೆ ಯಾವುದೇ ಪಲ್ಯಕ್ಕೆ ಬೇಕಾದ ಸಾಮಾನುಗಳು
ಕೊಬ್ಬರಿ ತುರಿ

ಮಾಡುವ ವಿಧಾನ : ಬಾಳೆ ದಿಂಡನ್ನು ಯಾವುದೇ ತರಕಾರಿಯಂತೆ ಹೆಚ್ಚಲು ಅಥವ ಕೊಚ್ಚಲು ಆಗುವುದಿಲ್ಲ. ಅದನ್ನು ಹೆಚ್ಚಿಕೊಳ್ಳುವ ರೀತಿಯೇ ಬೇರೆ. ನಾರು ನಾರು ಇರುವುದರಿಂದ ದಿಂಡನ್ನು ಗಜ್ಜರಿ ಹೆಚ್ಚಿಕೊಂಡಂತೆ ದುಂಡಗೆ ಹೆಚ್ಚಿಕೊಳ್ಳಬೇಕು. ನಂತರ ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಬಾಳೆ ದಿಂಡನ್ನು ಕೈಗೆತ್ತಿಕೊಳ್ಳುವ ಮೊದಲು ಕೈಗೆ ಕೊಬ್ಬರಿ ಎಣ್ಣೆಯನ್ನು ಸವರಿಕೊಳ್ಳಬೇಕು. ಇದ್ದದಿದ್ದರೆ, ಕೈಗಂಟುವ ಅಂಟು ಅಥವ ಡಾಗು ಬೇಗನೆ ಹೋಗುವಂಥವದಲ್ಲ.

ಸಣ್ಣದಾಗಿ ಹೆಚ್ಚಿಕೊಂಡ ದಿಂಡನ್ನು ಯಾವುದೇ ತರಕಾರಿ ಪಲ್ಯದಂತೆ ವಗ್ಗರಣೆಯಲ್ಲಿ ಚೆನ್ನಾಗಿ ತಾಳಿಸಿ ಉಪ್ಪು, ಕಾರ, ರುಚಿಗೆ ಸ್ವಲ್ಪ ಬೆಲ್ಲ. ಕೊನೆಗೆ ತುರಿದ ಕೊಬ್ಬರಿ ಹಾಕಲು ಮರೆಯದಿರಿ. ಹಸಿ ಕೊಬ್ಬರಿ ಪಲ್ಯದ ರುಚಿಯನ್ನು ದ್ವಿಗುಣಗೊಳಿಸಬಲ್ಲದು.

ಬಾಳೆದಿಂಡಿನ ಕೋಸಂಬರಿ

ಪಲ್ಯದಂತೆ ಕೋಸಂಬರಿ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಇದನ್ನು ಸೌತೆಕಾಯಿ, ಗಜ್ಜರಿ ಕೋಸಂಬರಿಯಂತೆ ಇದನ್ನು ಹಸಿಯಾಗಿಯೇ ಸೇವಿಸಬಹುದು. ಸಣ್ಣದಾಗಿ ಹೆಚ್ಚಿಕೊಂಡ ದಿಂಡಿಗೆ ವಗ್ಗರಣೆಯಾಂದಿಗೆ ಸ್ವಲ್ಪ ಉಪ್ಪು, ಅಗೇನ್‌ ಕೊಬ್ಬರಿ ತುರಿ ಮತ್ತು ಸ್ವಲ್ಪ ಮೊಸರು ಸೇರಿಸಿದರೆ ಬಾಳೆ ಎಲೆ ಮೇಲೆ ಹಾಕಿದ ಕೋಸಂಬರಿ ಜೊತೆ ಬಾಳೆ ಎಲೆಯನ್ನೂ ತಿನ್ನುವಷ್ಟು ರುಚಿಯಾಗಿರುತ್ತದೆ.

ಒಮ್ಮೆ ಪಲ್ಯ, ಕೋಸಂಬರಿಯನ್ನು ತಯಾರಿಸಿ ನೋಡಿ. ಯಪ್ಪೋ, ನೆನೆಸಿಕೊಂಡರೇ ಬಾಯಲ್ಲಿ ನೀರು ಬರುತ್ತಿದೆ.

ಬಾಳೆಕಾಯಿ ಬಜಿ, ಬಾಳೆಕಾಯಿ ಚಿಪ್ಸು ಜೊತೆ ಮತ್ತೊಂದು ಸ್ವಾದಿಷ್ಟವಾದ ತಿನಿಸನ್ನೂ ಮಾಡಬಹುದು ಯಾವುದು ಗೊತ್ತೇ? ಗೊತ್ತಿದ್ದರೆ ನಮಗೆ ಬರೆದು ತಿಳಿಸಿ, ಇಲ್ಲದಿದ್ದರೆ ಮುಂದಿನ ಸಂಡೇ ತನಕ ಕಾಯಿರಿ. ಸಂಡೇ ಸ್ಪೇಷಲ್‌ಗೆ.

X
Desktop Bottom Promotion