For Quick Alerts
ALLOW NOTIFICATIONS  
For Daily Alerts

ಕಲ್ಲಂಗಡಿಯೇ ಹೇಳಿಕೊಟ್ಟ ಸಿಪ್ಪೆಯ ಪಲ್ಯ

By Prasad
|
Watermelon
ಶೇ.90ರಷ್ಟು ನೀರಿನಂಶವನ್ನು ತುಂಬಿಕೊಂಡಿರುವ ಕೆಂಪುಕೆಂಪನೆಯ ಒಳತಿರುಳಿನ ಚೆಲುವೆ ಕಲ್ಲಂಗಡಿಯ ಒಂದೊಂದು ಅವಯವಗಳೂ ತಿನ್ನಲು ಯೋಗ್ಯ. ಬೀಜ ಬೇರ್ಪಡಿಸಿದ ಕೆಂಪು ತಿರುಳು ತಿನ್ನಲು ಮತ್ತು ಜ್ಯೂಸಿಗಾದರೆ, ಅದರ ಹಿಂದಿನ ಬೂದು ಬಣ್ಣದ ತಿರುಳಿನಿಂದ ಸಿಹಿ ರಸಾಯನ ತಯಾರಿಸಬಹುದು. ಇನ್ನೂ ಕೆಂಪುಚೆಲುವೆಯನ್ನು ಕಾಪಾಡುವ ಹಸಿರು ಸಿಪ್ಪೆಯನ್ನು ಯೂಸ್ಲೆಸ್ ಅಂತ ತಿಪ್ಪೆಗೆ ಎಸೆದೀರಿ ಜೋಕೆ!

ಪಲ್ಯ ಮಾಡುವ ಒಳಗುಟ್ಟನ್ನು ಕಲ್ಲಂಗಡಿ ಹಣ್ಣೇ ಹೇಳಿಕೊಳ್ಳುತ್ತಿದೆ. ಕೇಳಿಸಿಕೊಳ್ಳಿ, ಅಡುಗೆಮನೆಗೆ ನುಗ್ಗಿ . ಬೇಸಿಗೆಯಲ್ಲಿ ಕಲ್ಲಂಗಡಿ ಸೀಸನ್‌ ಮುಗಿಯುವ ಮುನ್ನ ಈ ಬರಹ ಓದಿ ನಿಮಗಿಷ್ಟವೆನಿಸಿದರೆ ಪಲ್ಯ ಮಾಡಿ ಸವಿಯಿಸಿ. ಇಲ್ಲದಿದ್ದರೆ ನೀವುಂಟು ತಿಪ್ಪೆಯುಂಟು.

ಕಲ್ಲಂಗಡಿ ಹಣ್ಣಿನ ಮಾತು ಕೇಳಿಸಿಕೊಳ್ಳಿ...

ಹಸನಾಗಿ ಬಲಿತ ನನ್ನನ್ನು ಅಂಗಡಿಯಿಂದಲೋ, ಸಂತೆಯಿಂದಲೋ ಚೌಕಾಶಿ ಮಾಡಿ ತಂದಿರ್ತೀರಿ. ನನ್ನ ಹೊಟ್ಟೆಗೊಂದು ಚಾಕು ಹಾಕಿ ಬಗೆದು, ಸುತ್ತಲೂ ಕುಳಿತು ಆಹಾ! ಎಷ್ಟು ಕೆಂಪಾಗಿದೆ.. ಎಂದು ಎಲ್ಲರೂ ಸವಿಯುತ್ತೀರಿ. ನಂತರ ನನ್ನ ಸಿಪ್ಪೆಯನ್ನು ತಿಪ್ಪೆಗೋ, ತೆಂಗಿನ ಮರದ ಬುಡಕ್ಕೋ ದಯವಿಟ್ಟು ಹಾಕದಿರಿ. ಬದಲಾಗಿ ನನ್ನನ್ನು ಕೊಂದ ನಂತರ ತುಂಡು ತುಂಡಾಗಿ ಮಾಡಿ ಕೆಂಪಾದ ನನ್ನ ಮಾಂಸವನ್ನು ಮೂಳೆಯಿಂದ(ಸಿಪ್ಪೆ) ಬೇರ್ಪಡಿಸಿ. ಮೂಳೆಯ ಕಾಲು ಇಂಚು ಭಾಗವನ್ನು ಅದರ ದಟ್ಟ ಹಸಿರು ಭಾಗದಿಂದ ಪ್ರತ್ಯೇಕಿಸಿ. ಈಗ ಕಾಲಿಂಚು ದಪ್ಪದ ತುಂಡುಗಳನ್ನು ಅತೀ ಚಿಕ್ಕ ತುಂಡುಗಳನ್ನಾಗಿ ಮಾಡಿ.

ನನ್ನ ಜೊತೆಗೆ ಇವರೆಲ್ಲಾ ಬೇಕು

ಅಡುಗೆ ಎಣ್ಣೆ -4 ಚಮಚ
ಸಾಸಿವೆ -1 ಚಮಚ
ಉದ್ದಿನಬೇಳೆ -2 ಚಮಚ
ಕರಿ ಬೇವು -2 ಕದಿರು
ಉಪ್ಪು - ಬೇಕಾದಷ್ಟು
ಮೆಣಸಿನಪುಡಿ -1 ಚಮಚ ಅಥವಾ ಅಗತ್ಯಕ್ಕೆ ತಕ್ಕಷ್ಟು
ತೆಂಗಿನ ತುರಿ - ಅರ್ಧ ಕಪ್‌

ಬಾಣಲೆಯಲ್ಲಿ ನನ್ನ ಸ್ನೇಹಿತರಾದ ಎಣ್ಣೆಯನ್ನು ಹಾಕಿ, ಬಿಸಿಯಾದಾಗ ಸಾಸಿವೆ ಹಾಕಿ. ಅದು ಬೊಬ್ಬೆ ಹೊಡೆದಾಗ ಉದ್ದಿನ ಬೇಳೆಯನ್ನು ಸೇರಿಸಿ. ಅದು ನಾಚಿ ಕೆಂಪಾದಾಗ ಕರಿಬೇವನ್ನು ಜೊತೆಗೆ ಕಳಿಸಿ. ಚಿಕ್ಕ ಚಿಕ್ಕ ಮೂಳೆಗಳನ್ನು ಸೇರಿಸಿ ಕಾಲು ಗ್ಲಾಸು ನೀರು ಸುರಿದು ಮುಚ್ಚಳ ಮುಚ್ಚಿ. ಸ್ವಲ್ಪ ಮೆತ್ತಗಾದಾಗ ಉಪ್ಪು ಮತ್ತು ಮೆಣಸಿನಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಬೆಂದ ನಂತರ ತೆಂಗಿನ ತುರಿ ಉದುರಿಸಿ. ಅನ್ನ, ತುಪ್ಪದೊಂದಿಗೆ ನನ್ನ ಪಲ್ಯ ಕಲಸಿ ನಿಮ್ಮ ಉದರಕ್ಕಿಳಿಸಿ.

ಇಂತಿ ನಿಮ್ಮ ಪ್ರೀತಿಯ,
ಕಲ್ಲಂಗಡಿ

Story first published: Monday, May 17, 2010, 13:34 [IST]
X
Desktop Bottom Promotion