For Quick Alerts
ALLOW NOTIFICATIONS  
For Daily Alerts

ಗದಗ ಸಮ್ಮೇಳನ ವಿಶೇಷ : ಗುರೆಳ್ಳು ಚಟ್ನಿಪುಡಿ

By Prasad
|
Gurellu or Huchchellu for chatnipudi
ಗುರೆಳ್ಳು ಚಟ್ನಿಪುಡಿಯನ್ನು ಗದಗ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳಿಗಾಗಿ ಶೇಂಗಾ ಹೋಳಿಗೆ ಗಳಂಥ ಸಿಹಿ ತಿನಿಸುಗಳೊಂದಿಗೆ ವಿಶೇಷವಾಗಿ ತಯಾರಿಸಲಾಗುತ್ತಿದೆ. ಉತ್ತರ ಕರ್ನಾಟಕದ ವಿಶೇಷ ಚಟ್ನಿಪುಡಿಯನ್ನು ಭಕ್ಕರಿಯೊಡನೆ ಮೆಲ್ಲಲು ತಿಂಡಿ ಪ್ರೇಮಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಗದಗಿಗೆ ಹೋದರೆ ಗುರೆಳ್ಳು ಅಥವಾ ಹುಚ್ಚೆಳ್ಳು ಚಟ್ನಿಪುಡಿ ತಿನ್ನುವುದನ್ನು ಮರೆಯಬೇಡಿ. ಹೋಗದಿದ್ದರೆ ಮನೆಯಲ್ಲೇ ಮಾಡಿ ಸಾಹಿತ್ಯ ಸಮ್ಮೇಳನವನ್ನು ವಿಶೇಷವಾಗಿ ಆಚರಿಸಿಕೊಳ್ಳಿರಿ.

* ಸುನಂದ ಅರುಣಕುಮಾರ್ ಗೋಸಿ

ಬೇಕಾಗುವ ಪದಾರ್ಥಗಳು :

ಗುರೆಳ್ಳು - 1 ಕಪ್
ಬ್ಯಾಡಗಿ ಒಣಮೆಣಸಿನಕಾಯಿ - 10
ಒಣ ಕೊಬ್ಬರಿ - ಸ್ವಲ್ಪ
ಹುಣಸೇಹಣ್ಣು - ಸ್ವಲ್ಪ
ಬೆಳ್ಳುಳ್ಳಿ ಎಸಳು - 6
ಕರಿಬೇವು - ಸ್ವಲ್ಪ
ಉಪ್ಪು ರುಚಿಗೆ

ಮಾಡುವ ವಿಧಾನ :

ಬಹುಶಃ ಗುರೆಳ್ಳು ಚಟ್ನಿಪುಡಿ ಮಾಡುವಷ್ಟು ಸುಲಭದ ವಿಧಾನ ಮತ್ತೊಂದಿರಲಿಕ್ಕಿಲ್ಲ. ಮೊದಲಿಗೆ ಗುರೆಳ್ಳನ್ನು ಮತ್ತು ಬ್ಯಾಡಗಿ ಒಣ ಮೆಣಸಿನಕಾಯಿಯನ್ನು ಬೇರೇಬೇರೆಯಾಗಿ ಹುರಿದಿಟ್ಟುಕೊಳ್ಳಿ. ನಂತರ ಹುರಿದ ಗುರೆಳ್ಳು, ಒಣಮೆಣಸಿನಕಾಯಿ, ಒಣ ಕೊಬ್ಬರಿ, ಹುಣಸೇಹಣ್ಣು, ಬೆಳ್ಳುಳ್ಳಿ, ಕರಿಬೇವು, ಉಪ್ಪು ಎಲ್ಲಾ ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿದರೆ ಗುರೆಳ್ಳು ಚಟ್ನಿಪುಡಿ ರೆಡಿ.

ಗುರೆಳ್ಳು ಚಟ್ನಿಪುಡಿಗೆ ಹುಚ್ಚೆಳ್ಳು ಚಟ್ನಿಪುಡಿ ಅಂತನೂ ಕರೆಯುತ್ತಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಜೋಳದ ರೊಟ್ಟಿಯನ್ನು ಒಳೆಯ ಹಿಂದಿಟ್ಟು ಬೆಂಕಿಯ ಶಾಖಕ್ಕೆ ಕಟಕು ರೊಟ್ಟಿಯಾಗಿ ಮಾರ್ಪಾಟಾದ ನಂತರ ಗುರೆಳ್ಳು ಚಟ್ನಿಪುಡಿಗೆ ಒಂದಿಷ್ಟು ಹಸಿ ಎಣ್ಣೆ ಅಥವಾ ಗಟ್ಟಿ ಕೆನೆ ಮೊಸರನ್ನು ಹಾಕಿ ಜಡಿದರೆ ಹೇಗಿರತ್ತೆ ಗೊತ್ತಾ? ಜೊತೆಗೊಂದಿಷ್ಟು ಕೆಂಪು ಕಾರ ಚಟ್ನಿ ಇದ್ದರಂತೂ ಬಾಯಲ್ಲಿ ಮಾತ್ರವಲ್ಲ ಕಣ್ಣಲ್ಲೂ ನೀರು.

X
Desktop Bottom Promotion