For Quick Alerts
ALLOW NOTIFICATIONS  
For Daily Alerts

ರಂಜಾನ್ ಸ್ಪೆಷಲ್: ಕಾಶ್ಮೀರ ಶೈಲಿಯ ಮಿರ್ಚಿ ಕುರ್ಮಾ!

By Super
|

ಮುಸ್ಲಿಮರಿಗೆ ಪವಿತ್ರವಾದ ರಂಜಾನ್ ತಿಂಗಳು ಮತ್ತೆ ಬಂದಿದೆ. ಎಲ್ಲಾ ಮನೆಗಳಲ್ಲಿ ಈ ತಿಂಗಳಿಡೀ ವಿಶೇಷ ಖಾದ್ಯಗಳು ತಯಾರಾಗುತ್ತವೆ. ಅತಿಥಿಗಳನ್ನು ಮನೆಗೆ ಆಹ್ವಾನಿಸುವ, ಎಲ್ಲರೂ ಒಟ್ಟಿಗೆ ಕುಳಿತು ಉಪವಾಸವನ್ನು ಸಂಪನ್ನಗೊಳಿಸುವ ಕ್ರಿಯೆ ಪ್ರತಿದಿನವನ್ನೂ ಹಬ್ಬದ ದಿನವನ್ನಾಗಿಸುತ್ತದೆ. ಸಂತೋಷ ಇಮ್ಮಡಿಸುತ್ತದೆ. ಅದರಲ್ಲೂ ಬಡಿಸಿದ ಖಾದ್ಯ ಅತಿಥಿಗಳು ತುಂಬಾ ಸ್ವಾದಿಷ್ಟವಾಗಿದೆ ಎಂದು ಹೊಗಳಿದರೆ ಅಡುಗೆ ಮಾಡಿದವರ ಮನ ಸಂತಸಗೊಳ್ಳುತ್ತದೆ.

ರಂಜಾನಿನಲ್ಲಿ ಸಾಂಪ್ರಾದಾಯಿಕ ಅಡುಗೆಗಳಿಗೇ ಹೆಚ್ಚಿನ ಪ್ರಾಮುಖ್ಯತೆ ಇರುವುದಾದರೂ ಹೊಸರುಚಿಗೇನೂ ಕೊರತೆಯಿಲ್ಲ. ಆದರೆ ಹೊಸರುಚಿ ಹೇಗಿರುತ್ತದೆಯೋ ಎಂಬ ಆತಂಕವಂತೂ ಇದ್ದೇ ಇರುತ್ತದೆ. ಏಕೆಂದರೆ ಉಪವಾಸದ ಅವಧಿಯಲ್ಲಿ ರುಚಿ ಸಹಾ ನೋಡುವಂತಿಲ್ಲವಲ್ಲ! ಹೀಗಿರುವಾಗ ಸ್ವಾದಿಷ್ಟವಾಗಲೇಬೇಕು ಎಂಬ ನಂಬಿಕೆಯಿಂದ ಸುಲಭವಾಗಿ ತಯಾರಿಸಬಲ್ಲ ಕೆಲವು ಹೊಸರುಚಿಗಳಿಗೆ ಆದ್ಯತೆ ಬರುತ್ತದೆ. ಕಾಶ್ಮೀರಿ ಮಿರ್ಚಿ ಕುರ್ಮಾ ಇಂತಹದ್ದೇ ಒಂದು ಸ್ವಾದಿಷ್ಟ ಅಡುಗೆಯಾಗಿದ್ದು ಅತಿಥಿಗಳ ಮೆಚ್ಚುಗೆಯನ್ನು ಪಡೆಯುವುದು ಖಚಿತವಾಗಿದೆ.

 Ramazan Special: Kashmiri Mirchi Korma Recipe

ಇದರ ಜೀವಾಳ ಕಾಶ್ಮೀರಿ ಒಣಮೆಣಸು. ಇದು ಆರೋಗ್ಯಕರವೂ ಹೌದು, ಅತಿ ಹೆಚ್ಚಿಲ್ಲದ ಖಾರದಿಂದಾಗಿ ರುಚಿಕರವೂ ಹೌದು. ಕೊಂಚ ತಾಳ್ಮೆ ಬೇಡುವ ಒಂದೇ ಕೆಲಸವೆಂದರೆ ಈ ಒಣಮೆಣಸನ್ನು ಒಂದೊಂದಾಗಿ ಸೀಳಿ ತೊಟ್ಟು ಮತ್ತು ಬೀಜಗಳನ್ನು ಮತ್ತು ಬೀಜಗಳು ಅಂಟಿಕೊಂಡಿರುವ ನೂಲನ್ನು ಸಂಪೂರ್ಣವಾಗಿ ನಿವಾರಿಸಬೇಕು. ಕೇವಲ ಸಿಪ್ಪೆಯ ಭಾಗವನ್ನು ಮಾತ್ರ ಆರಿಸಿಟ್ಟುಕೊಳ್ಳಬೇಕು. ಇನ್ನುಳಿದಂತೆ ಇದು ಪವಿತ್ರ ರಂಜಾನ್ ಮಾಸದ ಅತ್ಯುತ್ತಮ ರುಚಿಯಾಗುವುದರಲ್ಲಿ ಸಂಶಯವೇ ಇಲ್ಲ. ಚಾಂಪ್ ಮಸಾಲ: ರಂಜಾನ್ ಸ್ಪೆಷಲ್

*ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
*ತಗಲುವ ಒಟ್ಟು ಸಮಯ: ಮೂವತ್ತು ನಿಮಿಷಗಳು

ಸಾಮಾಗ್ರಿಗಳು:
*ಕೆಂಪು ಕಾಶ್ಮೀರಿ ಒಣಮೆಣಸು (ತೊಟ್ಟು, ಬೀಜ ನಿವಾರಿಸಿದ್ದು) - ಹತ್ತು (ಮಧ್ಯಮ ಗಾತ್ರದ್ದಾದರೆ ಹದಿನೈದು) ಮೆಣಸು ದೊಡ್ಡದಿದ್ದಷ್ಟೂ ರುಚಿ ಹೆಚ್ಚು
*ಈರುಳ್ಳಿ : 3 (ಮಧ್ಯಮ ಗಾತ್ರ)-ಚಿಕ್ಕದಾಗಿ ಹೆಚ್ಚಿದ್ದು
*ಚೆಕ್ಕೆ (ಅಥವಾ ಲವಂಗಪಟ್ಟೆ) - ಸುಮಾರು ಒಂದಿಂಚಿನ ಎರಡು ಚಿಕ್ಕ ತುಂಡುಗಳು
*ಶುಂಠಿ ಬೆಳ್ಳುಳ್ಳಿ ಪೇಸ್ಟ್: ಒಂದು ದೊಡ್ಡ ಚಮಚ
*ಜೀರಿಗೆ : ಒಂದು ದೊಡ್ಡ ಚಮಚ
*ಲವಂಗ, ಏಲಕ್ಕಿ: ತಲಾ 5


*ಮೀಟ್ ಮಸಾಲಾ ಪುಡಿ : ಒಂದು ದೊಡ್ಡ ಚಮಚ
*ದೊಡ್ಡ ಜೀರಿಗೆ: ಒಂದು ದೊಡ್ಡ ಚಮಚ (ಕೊಂಚವೇ ಹುರಿದು ಚಿಕ್ಕದಾಗಿ ಪುಡಿ ಮಾಡಿದ್ದು)
*ಬಿಳಿ ಹುಣಸೆ ಹುಳಿ ಕಿವುಚಿದ್ದು : ಎರಡು ದೊಡ್ಡ ಚಮಚ (ಬೀಜ, ನಾರು ರಹಿತವಾಗಿಸಿದ್ದು)
*ಉಪ್ಪು : ರುಚಿಗನುಸಾರ
*ಕುರಿ ಮಾಂಸ : ಒಂದು ಕೇಜಿ (ತಾಜಾ ಇದ್ದಷ್ಟೂ ಉತ್ತಮ)-ಚೆನ್ನಾಗಿ ತೊಳೆದು ನೀರು ಬಸಿದಿದ್ದು. (ನೀರು ಉಳಿದರೆ ಅಡುಗೆ ಕಹಿಯಾಗುವ ಸಂಭವವಿದೆ)
*ಅಡುಗೆ ಎಣ್ಣೆ: ಮೂರು ಅಥವಾ ನಾಲ್ಕು ದೊಡ್ಡ ಚಮಚ
*ಕೊತ್ತಂಬರಿ ಸೊಪ್ಪು: ಒಂದು ಕಟ್ಟು (ದಂಟುಗಳನ್ನು ನಿವಾರಿಸಿ ಕೇವಲ ಎಲೆಗಳನ್ನು ಮಾತ್ರ ಚಿಕ್ಕದಾಗಿ ಹೆಚ್ಚಿದ್ದು)

ತಯಾರಿಕಾ ವಿಧಾನ:
1) ದಪ್ಪತಳದ ಅಗಲವಾದ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ
2) ಇದಕ್ಕೆ ನೀರು ಸಂಪೂರ್ಣವಾಗಿ ಹೋಗಿರುವ ಮಾಂಸ ಹಾಕಿ ತಿರುವುದನ್ನು ಮುಂದುವರೆಸಿ. ಸುಮಾರು ಅರ್ಧದಷ್ಟು ಬೆಂದಿದೆ ಅನ್ನಿಸಿದ ಬಳಿಕ ಏಲಕ್ಕಿ, ಲವಂಗ, ಚೆಕ್ಕೆ, ಜೀರಿಗೆ ಕಾಳು, ದೊಡ್ಡಜೀರಿಗೆ ಪುಡಿ ಮತ್ತು ಮೀಟ್ ಮಸಾಲಾ ಪುಡಿ ಹಾಕಿ ತಿರುವುದನ್ನು ಮುಂದುವರೆಸಿ.
3) ಸುಮಾರು ತೊಂಭತ್ತು ಭಾಗ ಬೆಂದಿದೆ ಎನ್ನುವಾಗ ಮಾಂಸ ಮುಳುಗುವಷ್ಟು ನೀರು ಹಾಕಿ ಬೆಂಕಿಯನ್ನು ಕೊಂಚ ಹೆಚ್ಚಿಸಿ ಮುಚ್ಚಳ ಮುಚ್ಚಿ ಹದಿನೈದು ನಿಮಿಷ ಬೇಯಿಸಿ. (ಚಿಕ್ಕ ತೂತಿರುವ ಗಾಜಿನ ಮುಚ್ಚಳ ಇದ್ದ ಪಾತ್ರೆಯಾದರೆ ಉತ್ತಮ. ಇಲ್ಲದಿದ್ದರೆ ಮುಚ್ಚಳವನ್ನು ಕೊಂಚವೇ ಬದಿಗೆ ಸರಿಸಿ ಆವಿ ಹೊರಬರಲು ಅವಕಾಶ ಮಾಡಿಕೊಡಿ)


4) ನಂತರ ಈ ಪಾತ್ರೆಯ ಎಲ್ಲಾ ಪ್ರಮಾಣವನ್ನು ಪ್ರೆಷರ್ ಕುಕ್ಕರಿನಲ್ಲಿ ಹಾಕಿ ಸುಮಾರು ಎರಡು ಸೀಟಿ ಬರುವವರೆಗೆ ಬೇಯಿಸಿ. ಒಂದು ವೇಳೆ ಮಾಂಸ ಕೊಂಚ ಗಡಸು ಎಂದು ಅನ್ನಿಸಿದರೆ ನಾಲ್ಕು ಸೀಟಿಗಳ ಕಾಲ ಬೇಯಿಸಿ.
5) ಇನ್ನೊಂದು ಬಾಣಲೆ ಅಥವಾ ಚಿಕ್ಕ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಒಣಮೆಣಸನ್ನು ಹಾಕಿ ಮೆತ್ತಗಾಗುವವರೆಗೆ ಬೇಯಿಸಿ.
6) ಈಗ ನೀರನ್ನು ಬಸಿದು ಮಿಕ್ಸಿಯ ಚಿಕ್ಕ ಬೋಗುಣಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ.
7) ಇದಕ್ಕೆ ಕಿವುಚಿಟ್ಟಿರುವ ಹುಣಸೆಹುಳಿ ಹಾಕಿ ನಯವಾದ ಮಿಶ್ರಣ ಮಾಡಿ.
8) ಈ ಮಿಶ್ರಣವನ್ನು ಕುಕ್ಕರಿನಲ್ಲಿರುವ ಬೆಂದಿರುವ ಮಾಂಸಕ್ಕೆ ಹಾಕಿ ಸುಮಾರು ಎರಡು ನಿಮಿಷಗಳ ಕಾಲ ಚೆನ್ನಾಗಿ ತಿರುವಿ. (ಈ ಸಮಯದಲ್ಲಿ ಉರಿ ಚಿಕ್ಕದಿರಬೇಕು)
9) ನಿಮ್ಮ ಅಗತ್ಯಕ್ಕೆ ಎಷ್ಟು ಗಾಢವಾಗಬೇಕೋ ಅಷ್ಟು ನೀರು ಹಾಕಿ ಕುದಿಬರುವ ತನಕ ತಿರುವಿ ಕೊತ್ತಂಬರಿ ಸೊಪ್ಪು ಸೇರಿಸಿ ತಿರುವಿ ತಕ್ಷಣ ಇಳಿಸಿ.
10) ಬಳಿಕ ಮುಚ್ಚಳವಿಲ್ಲದೇ ಕೆಲವು ನಿಮಿಷ ಆವಿಯಾರಲು ಬಿಡಿ. ಬಿಸಿ ಬಿಸಿಯಿರುವಂತೆಯೇ ರೊಟ್ಟಿ, ಚಪಾತಿ, ಅನ್ನ, ಅಕ್ಕಿರೊಟ್ಟಿ, ನಾನ್, ಕುಲ್ಛಾ, ಮೊದಲಾದವುಗಳ ಜೊತೆ ಸವಿಯಲು ನೀಡಿ.

ಸಲಹೆ
*ಬಿಳಿ ಹುಣಸೆ ಹುಳಿ ಸೇರಿಸಿರುವುದರಿಂದ ಖಾರ ಮತ್ತು ಹುಳಿಯ ರುಚಿ ಇದರಲ್ಲಿ ಹದವಾಗಿರುತ್ತದೆ. ಒಂದು ವೇಳೆ ಬಿಳಿ ಹುಣಸೆ ಇಲ್ಲದಿದ್ದು ಕಪ್ಪು ಹುಣಸೆಯನ್ನು ಉಪಯೋಗಿಸಬೇಕಾದ ಸಂದರ್ಭ ಬಂದರೆ ಈ ಪ್ರಮಾಣವನ್ನು ಅರ್ಧಕ್ಕಿಳಿಸಿ ಉಳಿದ ಪ್ರಮಾಣದ ಬದಲು ಮೊಸರನ್ನು ಸೇರಿಸಬಹುದು. ಆದರೆ ಮೊಸರು ಹಾಕಿದ ಖುರ್ಮಾ ಒಂದು ದಿನಕ್ಕಿಂತ ಹೆಚ್ಚು ಕಾಲ ಸಂಗ್ರಹಿಸಿಡಲಾಗದು. ಮೇಲಿನ ರೆಸಿಪಿ ಸುಮಾರು ಎರಡು ದಿನ ತನ್ನ ರುಚಿಯನ್ನು ಉಳಿಸಿಕೊಳ್ಳುತ್ತದೆ.

English summary

Ramazan Special: Kashmiri Mirchi Korma Recipe

Mirchi korma is a spicy and tasty kashmiri cuisine. It is a special dish which gives a unique taste of red dried chilies. It aids in digestion and treats stomach upset. If you don't like to eat anything in sehri (dawn time) then try out this tasty mirchi korma.
Story first published: Wednesday, June 17, 2015, 20:15 [IST]
X
Desktop Bottom Promotion