For Quick Alerts
ALLOW NOTIFICATIONS  
For Daily Alerts

ಹಂದಿಜ್ವರ : ಹೊಟೇಲ್ ತಿಂಡಿಯಿಂದ ದೂರವಿರಿ

By Super
|
Do not eat outside to stay away from Swine Flu
ಬೆಂಗಳೂರು, ಆ.20 : ಹಂದಿಜ್ವರದ ಭಯದಿಂದಾಗಿ ಬೆಂಗಳೂರಿನ ಮಂದಿ ಹೋಟೆಲುಗಳಲ್ಲಿ ಆಹಾರ ಸೇವಿಸುವ ಅಭ್ಯಾಸಕ್ಕೆ ಕಡಿವಾಣ ಹಾಕುತ್ತಿದ್ದಾರೆ. ಮನೆಯಲ್ಲೇ ತಯಾರಿಸಿದ ಆಹಾರ ಸೇವನೆ ಅಥವಾ ಹೆಚ್ಚೆಂದರೆ ಹೋಟೆಲುಗಳಿಂದ ಪಾರ್ಸೆಲ್ ತರಿಸಿ ತಿನ್ನುವ ಅಭ್ಯಾಸಕ್ಕೆ ಮೊರೆ ಹೋಗುತ್ತಿದ್ದಾರೆ.

ಬೆಂಗಳೂರಿನಂಥ ಕಾಸ್ಮೋಪಾಲಿಟನ್ ನಗರಗಳಲ್ಲಿ ವೀಕೆಂಡುಗಳಲ್ಲಿ ಮತ್ತು ಬೇಕೆನಿಸಿದಾಗ ಮನೆಯಡುಗೆಗೆ ಚಕ್ಕರ್ ಹಾಕಿ ಹೊಟೇಲ್ ಗಳಿಗೆ, ಈಟೌಟ್ ಗಳಿಗೆ ಎಡತಾಕುವುದು ಇತ್ತೀಚೆಗೆ ಹೆಚ್ಚಾಗಿದೆ. ಗಂಡ ಹೆಂಡತಿಯರಿಬ್ಬರೂ ಕೆಲಸ ಮಾಡುವುದರಿಂದ ಶನಿವಾರ, ಭಾನುವಾರಗಳಂದು ಅಡುಗೆಮನೆಗೆ ಬೀಗಹಾಕಿ ಹೊರಗಡೆ ಹೋಗುವುದು ಸರ್ವೇಸಾಮಾನ್ಯ. ಹಂದಿಜ್ವರದ ಭೀತಿಯಿಂದ ಇವೆಲ್ಲಕ್ಕೆ ಸದ್ಯಕ್ಕೆಬ್ರೇಕ್ ಬಿದ್ದಿದೆ. ಜನ ಜಾಗೃತರಾಗಿದ್ದಾರೆ. ಸ್ವೈನ್ ಫ್ಲೂನಿಂದ ದೂರವಿರಲು ಹೊರಗಡೆ ತಿನ್ನುವುದರಿಂದ ದೂರವಿರುವುದು ಅವಶ್ಯ ಕೂಡ. ಹಂದಿಜ್ವರ ಬರದಂತೆ ತಡೆಯಲು ತಿನಿಸಿಗೆ ಸಂಬಂಧಿಸಿದ ವಿದ್ಯಮಾನಗಳು ಹೀಗಿವೆ, ಓದಿ.

ಎಚ್1ಎನ್1 ಸೋಂಕಿನಿಂದ ಉಂಟಾದ ಸಾವಿನ ಭಯದಿಂದಾಗಿ ಜನ ಹೋಟೆಲುಗಳಿಗೆ ಬರುವುದು ಕಮ್ಮಿ ಆಗಿದೆ, ಆದರೆ ಊಟ ತಿಂಡಿ ಪಾರ್ಸೆಲ್ ಪ್ರಮಾಣದಲ್ಲಿ ಶೇಕಡಾ 10ರಷ್ಟು ಹೆಚ್ಚು ಕಂಡುಬಂದಿದೆ ಎನ್ನುತ್ತಾರೆ ಹಂಗ್ರಿ ಜೋನ್ ಡಾಟ್ ಕಾಂನ ಸಹ ಸಂಸ್ಥಾಪಕ ರಿತೀಶ್ ದ್ವಿವೇದಿ. ಜನಪ್ರಿಯ ಹೋಟೆಲುಗಳು ಮತ್ತು ಆಹಾರ ಪಾರ್ಸೆಲ್ ಮಾಡುವ ಬೆಂಗಳೂರಿನ ಆಹಾರ ಪೂರೈಸುವ ಜಾಗಗಳ ಬಗೆಗೆ ಮಾಹಿತಿ ಕೊಡುವ ಕೆಲಸವನ್ನು ಹಂಗ್ರಿಜೋನ್ ಮಾಡುತ್ತದೆ. ಈ ಚಾಳಿ ಬಹುತಾರಾ ಹೋಟೆಲುಗಳಿಗಿಂತ ಹೆಚ್ಚಾಗಿ ಮಧ್ಯಮ ಗಾತ್ರದ ಹೋಟೆಲುಗಳಲ್ಲಿ ಕಂಡುಬಂದಿದೆ ಎಂದು ಅವರು ಹೇಳಿದರು.

ಗ್ರಾಹಕರ ಈ ಪ್ರವೃತ್ತಿಗೆ ಕಾರಣ ನಿಸ್ಸಂದೇಹವಾಗಿ ಹಂದಿಜ್ವರದ ಭೀತಿ. ಜನನಿಬಿಬಡ ಜಾಗಗಳಲ್ಲಿ ಅಲೆಯಬಾರದು ಮತ್ತು ಆಹಾರ ಸೇವಿಸಬಾರದು ಎಂದು ಜನ ಭಾವಿಸಿರುವುದು ಬದಲಾದ ಪ್ರವೃತ್ತಿಗೆ ಕಾರಣವಾಗಿದೆ. ಆಹಾರದ ಪೊಟ್ಟಣಗಳನ್ನು ಮನೆಗೆ ತರಿಸಿಕೊಳ್ಳುವ ಅಭ್ಯಾಸ ಮುಖ್ಯವಾಗಿ ಐಟಿ ಮತ್ತು ಬ್ಯಾಂಕ್ ಉದ್ಯೋಗಿ ವಲಯದಲ್ಲಿ ಹೆಚ್ಚು. ತಮ್ಮ ಒಟ್ಟು ವ್ಯಾಪಾರದ ಶೇ 30ರಷ್ಟು ಫುಡ್ ಪಾರ್ಸೆಲ್ ನಿಂದ ಒದಗುತ್ತದೆ ಎಂದೂ ರಿತೀಶ್ ನುಡಿದರು. ತಮ್ಮ ಮಕ್ಕಳು ಎಲ್ಲಂದರಲ್ಲಿ ತಿಂದು ಸೋಂಕು ತಗಲಿಸಿಕೊಳ್ಳಬಹುದು ಎಂಬ ಭಯದಿಂದ ತಂದೆತಾಯಿಯರು, ಪೋಷಕರು ಆಹಾರ ಪಾರ್ಸೆಲ್ ಗೆ ಮೊರೆ ಹೋಗುತ್ತಿರುವ ಅನೇಕ ನಿದರ್ಶನಗಳು ಇವೆಯಂತೆ.

ವೆಬ್ ಡಾಬಾ ಡಾಟ್ ಕಾಂನ ಸಹ ಸಂಸ್ಥಾಪಕ ಅಜಯ್ ಅವರ ಅಭಿಪ್ರಾಯ ಕೂಡ ಹೀಗೇ ಇದೆ. ಫುಡ್ ಜಾಯಿಂಟ್ ಗಳು ಊಟ ಪಾರ್ಸೆಲ್ ಮಾಡುವ ಸಾಧ್ಯತೆಗಳತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಇನ್ನು ಕೆಲವು ತಿಂಗಳುಗಳ ಕಾಲ ಈ ತರಹದ ವ್ಯಾಪಾರವೇ ಜಾಸ್ತಿ ಇರುತ್ತದೆ ಎನ್ನುವುದು ಅವರ ಲೆಕ್ಕಾಚಾರ. ಊಟ ಬಿಡಿ, ವಿರಾಮದ ಸಮಯಲ್ಲಿ ಟೀ ಅಂಗಡಿಗೆ ಹೋಗುವ ನಮ್ಮ ಚಟಕ್ಕೆ ಬ್ರೇಕ್ ಬಿದ್ದಿದೆ ಎನ್ನುತ್ತಾರೆ ಡಾಟಾ ಕಾನ್ ಸಂಸ್ಥೆಯ ಉದ್ಯೋಗಿ ನೂತನ್ ಶಾ. ಆವಾಗ ಆವಾಗ ಲಂಚ್ ಗೆ ಎಲ್ಲಾದರೂ ಹೊರಗೆ ಹೋಗುತ್ತಿದ್ದೆವು ಆದರೆ, ಈಗ ಅದನ್ನು ನಿಲ್ಲಿಸಿದ್ದೇವೆ. ಬೇಕಿದ್ದರೆ ಫೋನ್ ಮಾಡಿ ಆರ್ಡರ್ ಮಾಡಿ ಕಚೇರಿಗೆ ಊಟ ತರಿಸಿ ತಿನ್ನುವುದು ಕ್ಷೇಮ ಎನ್ನುತ್ತಾರೆ ಕೋಜೆಂಟ್ನ ನಿರಂಜನ ವಾಲಿ.

ಹೋಟೆಲ್ ಕೆಲಸಗಾರರ ಆರೋಗ್ಯದ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗುತ್ತದೆ. ಪ್ರತಿ ನಾಲಕ್ಕು ಗಂಟೆಗೊಮ್ಮೆ ಅವರ ತಾಪಮಾನ ಅಳೆಯಲಾಗುತ್ತದೆ. ಯಾರಿಗಾದರೂ ಜ್ವರ, ಕೆಮ್ಮು, ನೆಗಡಿ ಇರುವ ಸೂಚನೆ ಕಂಡುಬಂದರೆ ಎಲ್ಲ ಗ್ರಾಹಕರ ಆರೋಗ್ಯ ಹಿತದೃಷ್ಟಿಯಿಂದ ಅಂತಹ ನೌಕರರನ್ನು ಕೆಲಸ ಮಾಡುವುದಕ್ಕೆ ನಾವು ಬಿಡುವುದಿಲ್ಲ ಎಂದು ಹೇಳಿದವರು ಮ್ಯಾಕ್ ಡೊನಾಲ್ಡ್ ಸೀನಿಯರ್ ಮ್ಯಾನೇಜರ್ ಅಮೃತಾ ಪೈ.

ಬೆಂಗಳೂರಿನಲ್ಲಿ ಈ ಪರಿಸ್ಥಿತಿ ಇದ್ದರೆ ಪುಣೆಯ ಹೋಟೆಲುಗಳ ಹಣೆಬರಹ ಕೇಳುವುದೇ ಬೇಡ. ಪುಣೆಯ ಪ್ರಖ್ಯಾತ ಹೋಟೆಲ್ ಅಭಿಷೇಕ್ ನ ಮ್ಯಾನೇಜರ್ ಲಕ್ಷ್ಮೀಶ ಅವರ ಪ್ರಕಾರ ಶನಿವಾರ, ಭಾನುವಾರ ಮತ್ತು ರಜಾದಿನಗಳಂದು ಸರಿಸುಮಾರು 70ರಿಂದ 80 ಸಾವಿರ ರೂಪಾಯಿ ವ್ಯಾಪಾರ ಆಗುತ್ತಿತ್ತು. ಆದರೆ ಕಳೆದ ಶನಿವಾರ ಆಗಸ್ಟ್ 15ರಂದು ಗಲ್ಲಾ ಪೆಟ್ಟಿಗೆಯಲ್ಲಿ ತುಂಬಿದ ಹಣ 900 ರೂ ಮಾತ್ರ ಎಂದು ದಟ್ಸ್ ಕನ್ನಡಕ್ಕೆ ತಿಳಿಸಿದರು. ಪುಣೆ ರೈಲ್ವೆ ಸ್ಟೇಷನ್ನಿನಲ್ಲಿ ಈಗ ಜನವೇ ಇಲ್ಲ. ಅಲ್ಲಿ ಯಾರೂ ರೈಲು ಹತ್ತುವುದಿಲ್ಲ, ಇಳಿಯುವುದಿಲ್ಲ. ಸಿಗ್ನಲ್ ಮ್ಯಾನ್ , ಸ್ಟೇಷನ್ ಮ್ಯಾನ್ ಬಿಟ್ಟರೆ ಅಲ್ಲಿ ಇನ್ಯಾರೂ ಕಣ್ಣಿಗೆ ಕಾಣಿಸುವುದಿಲ್ಲ. ಮಿನರಲ್ ವಾಟರ್ ಮಾರುವ ಅಂಗಡಿಗಳೂ ಬೀಗ ಜಡಿದುಕೊಂಡಿವೆ ಎಂದು ಅವರು ಹೇಳಿದರು.

ಹಂದಿಜ್ವರ ಬರದಂತೆ ತಡೆಯಲು

1) ಬೀದಿಬದಿಯಲ್ಲಿ, ಬೀದಿಗಾಡಿಗಳಲ್ಲಿ, ಈಟೌಟ್ ಗಳಲ್ಲಿ, ಹೊಟೇಲುಗಳಲ್ಲಿ ತಿನ್ನುವುದನ್ನು ಕಡಿಮೆ ಮಾಡಿ.
2) ಹೊಟೇಲುಗಳಲ್ಲಿ ನೀರನ್ನು ಕುಡಿಯಲೇಬೇಡಿ. ಬೇಕಿದ್ದರೆ ಬಿಸಿನೀರಿ ಕೇಳಿ ಕುಡಿಯಿರಿ. ಶುದ್ಧವಾದ ನೀರನ್ನು ಕುಡಿಯಿರಿ ಮತ್ತು ಜಾಸ್ತಿ ಕುಡಿಯಿರಿ.
3) ಮನೆಯಲ್ಲಿ ಕೂಡ ಫಿಲ್ಟರ್ ಮಾಡಿದ ನೀರು, ಕುದಿಸಿದ ನೀರಿಗೆ ಪ್ರಾಶಸ್ತ್ಯ ನೀಡಿರಿ.
4) ಬಿಸಿಬಿಸಿಯಾದ ಆಹಾರ ಸೇವಿಸಿ. ಹೊಟೇಲಿನಿಂದ ತರಿಸಿದರೂ ಬಿಸಿಯಾಗಿರಲಿ. ತಣ್ಣಗಿನ (ತಂಗಳು) ಆಹಾರ ಸೇವಿಸಲೇಬೇಡಿ.
5) ಐಸ್ ಕ್ರೀಮ್, ಕರಿದ ತಿಂಡಿ, ಜಂಕ್ ಫುಡ್ ಗಳಿಂದ ಅಟ್ಲೀಸ್ಟ್ ಹಂದಿಜ್ವರ ದೂರವಾಗುವವರೆಗೆ ದೂರವಿರಿ.
6) ಯಾವುದೇ ಬಗೆಯ ಆಹಾರ ಸೇವಿಸುವ ಮುನ್ನ ಲಿಕ್ವಿಡ್ ಸೋಪು ಬಳಸಿ ಚೆನ್ನಾಗಿ ಕೈತೊಳೆಯುವುದು ಮರೆಯಬೇಡಿ.
7) ಕೆಲವರಿಗೆ ಮನೆಯ ಆಹಾರ ಸೇವಿಸುವಾಗಲೂ ಮದ್ಯ ಸೇವಿಸುವ ಅಭ್ಯಾಸವಿರುತ್ತದೆ. ಅದನ್ನು ನಿಲ್ಲಿಸಿ.
8) ರೋಗನಿರೋಧಕ ಶಕ್ತಿ ಬರಲು ಪೌಷ್ಟಿಕಯುಕ್ತ ಆಹಾರ ಸೇವಿಸುವುದು ಉತ್ತಮ. ಕಾಳು, ಧಾನ್ಯ, ಹಸಿರು ತರಕಾರಿ, ಹಣ್ಣುಗಳ ಸೇವನೆ ಯಥೇಚ್ಛವಾಗಿರಲಿ.
9) ನಿಮ್ಮ ಆರೋಗ್ಯ ನಿಮ್ಮ ಜೀವನ ಶೈಲಿಯ ಮೇಲೆ ನಿಂತಿದೆ, ನೆನಪಿಡಿ.
10) ಇದೆಲ್ಲದರ ಜೊತೆ ಇತರ ಎಚ್ಚರಿಕೆಗಳನ್ನೂ ತಪ್ಪದೇ ಪಾಲಿಸಿ.

English summary

Swine flu | H1N1 | Food habit | Hotel | Healthy food | Nutritious food - ಹಂದಿಜ್ವರ : ಹೊಟೇಲ್ ತಿಂಡಿಯಿಂದ ದೂರವಿರಿ

Eat only healthy nutritious food to stay away from swine flu. Do not eat roadside food and visit hotels. ಹಂದಿಜ್ವರ : ಹೊಟೇಲ್ ತಿಂಡಿಯಿಂದ ದೂರವಿರಿ.
X
Desktop Bottom Promotion