For Quick Alerts
ALLOW NOTIFICATIONS  
For Daily Alerts

ರುಚಿಗೆ ಮೋಸ ಇಲ್ಲದ ಬನಾರಸಿ ದೋಸಾ

By * ನಿವೇದಿತಾ ಪ್ರಭಾಕರ್, ಬೆಂಗಳೂರು
|
A dosa with difference
ಏನೇ ಆಗಲಿ ಈವತ್ತು ಮಸಾಲೆ ದೋಸೆ ತಿನ್ನಲೇಬಾರದು ಅಂತ ಬೆಳಿಗ್ಗೆಯೇ ಶಪಥ ಮಾಡಿಬಿಟ್ಟಿರುತ್ತೀರಾ. ಮನೆಬಿಟ್ಟು ಹೊಟೇಲಿನ ಬಳಿ ಬೈಕ್ ನಿಲ್ಲಿಸುವ ಹಂತದವರೆಗೂ ಶಪಥ ಕಾಪಾಡಿಕೊಳ್ಳಲೇಬೇಕು ಅಂತನೂ ಅಂದುಕೊಂಡಿರುತ್ತೀರ. ಆದರೆ, ದರ್ಶಿನಿ ಒಳಗಡೆ ಕಾಲಿಡುತ್ತಿದ್ದಂತೆಯೇ ಘಮಘಮ ಮಸಾಲೆ ದೋಸೆ ವಾಸನೆ ಬಡಿಯುತ್ತಿದ್ದಂತೆ ಶಪಥ ಶತಪಥವಾಗಿಬಿಟ್ಟಿರುತ್ತದೆ.

ದೋಸೆಯ ಕಮಾಲೇ ಅಂತಹುದು. ಮಸಾಲೆ ದೋಸೆ, ದಾವಣಗೆರೆ ಬೆಣ್ಣೆ ದೋಸೆ, ನೀರು ದೋಸೆ, ರಾಗಿ ದೋಸೆ, ಪುದೀನಾ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ಖಾಲಿ ದೋಸೆ, ಗ್ರೀನ್ ಪೀಸ್ ದೋಸೆ... ಪಟ್ಟಿಹಾಕುತ್ತಲೇ ಇರಬೇಕಾಗುತ್ತದೆ. ಅಷ್ಟೊಂದು ವೆರೈಟಿಯ ದೋಸೆಗಳು ಜಿಹ್ವಾ ಚಾಪಲ್ಯ ತಣಿಸಲು. ಪ್ರತಿಯೊಂದರದೂ ಒಂದೊಂದು ರುಚಿ.

ಇವುಗಳಲ್ಲಿಯೇ ವಿಶೇಷವಾದದ್ದು ಬನಾರಸಿ ದೋಸೆ. ಖಂಡಿತ ಜಯನಗರ ಮೂರನೇ ಬ್ಲಾಕ್ ನಲ್ಲಿರುವ ಹೊಟೇಲ್ ಗಣೇಶ್ ದಲ್ಲಿ ತಿಂದೇ ಇರುತ್ತೀರ. ಇಲ್ಲಿ ತಿಳಿಸಿರುವ ರೆಸಿಪಿಯನ್ನು ಪ್ರಿಂಟ್ ಔಟ್ ತೆಗೆದುಕೊಂಡು ಗಂಡಾಗಿದ್ದರೆ ನಿಮ್ಮ ಹೆಂಡತಿಯ ಮುಂದೆ, ಹೆಣ್ಣಾಗಿದ್ದರೆ ನಿಮ್ಮ ಅತ್ತೆಯ ಮುಂದೆ ಹೋಗಿ ಹಿಡಿಯಿರಿ. ಕಾಡಿಸಿ, ಪೀಡಿಸಿ ಬನಾರಸ್ ದೋಸೆ ಮಾಡಿಸಿಕೊಂಡು ಜಮಾಯಿಸಿ.

ಬೇಕಾಗುವ ಪದಾರ್ಥಗಳು

* ದೋಸೆ ಹಿಟ್ಟು (ತಯಾರಿಸುವುದು ಹೇಗೆಂದು ಕೆಳಗೆ ನೋಡಿ)
* ಬ್ರೆಡ್ ಸ್ಲೈಸ್ ನಾಲ್ಕು
* ಬ್ರೆಡ್ ಕರಿಯಲು ಎಣ್ಣೆ ಸ್ವಲ್ಪ
* ಈರುಳ್ಳಿ 1 ಸಣ್ಣಗೆ ಹೆಚ್ಚಿದ್ದು
* ಸಾಸಿವೆ 1 ಚಮಚ
* ಮೆಣಸಿನ ಪುಡಿ 1 ಚಮಚ
* ಕರಿಬೇವು
* ರುಚಿಗೆ ಉಪ್ಪು

ತಯಾರಿಸುವ ವಿಧಾನ

ದೋಸೆ ಹಿಟ್ಟು : ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಏಳು ಗಂಟೆಗಳ ಕಾಲ ನೆನೆಯಿಟ್ಟು, ರಾತ್ರಿ ರುಬ್ಬಿಕೊಂಡು ಸ್ವಲ್ಪ ಉಪ್ಪು ಮತ್ತು ಸೋಡಾ ಬೆರೆಸಿ ಪ್ಲೇಟ್ ಮುಚ್ಚಿಡಿ.

ನಂತರ, ಬ್ರೆಡ್ ಪೀಸುಗಳನ್ನು ಸಣ್ಣ ಚೌಕಾಕಾರದಲ್ಲಿ ತುಂಡರಿಸಿಕೊಳ್ಳಿ. ಒಂದು ಅಗಲ ತಳದ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು, ಕಾದ ಕೂಡಲೆ ಸಾಸಿವೆ ಕಾಳು ಹಾಕಿ ಚಟಪಟ ಅಂದ ಮೇಲೆ ಬ್ರೆಡ್ ತುಂಡುಗಳನ್ನು ತಾಳಿಸಿಕೊಳ್ಳಿ. ಅದರ ಮೇಲೆ ಮೆಣಸಿನಪುಡಿ ಉದುರಿಸಿ ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ.

ಈಗ ನಾನ್ ಸ್ಟಿಕ್ ದೋಸೆ ತವಾವನ್ನು ಸ್ಟೌ ಮೇಲಿಟ್ಟು ಕಾದ ಕೂಡಲೆ ಎಣ್ಣೆ ಸವರಿ ದೋಸೆ ಹುಯ್ಯಿರಿ. ಅದರ ಮೇಲೆ ಕತ್ತರಿಸಿಟ್ಟುಕೊಂಡ ಈರುಳ್ಳಿ ಮತ್ತು ಕರಿದ ಬ್ರೆಡ್ ತುಂಡುಗಳನ್ನು ಉದುರಿಸಿ, ಎರಡೂ ಬದಿ ಚೆನ್ನಾಗಿ ಬೇಯಿಸಿ. ಬೊಂಬಾಟ್ ಬನಾಸರ್ ದೋಸೆ ರೆಡಿ.

ಆಹಾ, ಏನು ವಾಸನೆ ಅಂತೀರಾ? ಹೊಟ್ಟೆ ಚುರುಗುಟ್ತಾ ಐತೆ. ಗಟ್ಟಿ ಚಟ್ನಿ, ಬಟ್ಟಲಲ್ಲಿ ಸಾಂಬಾರ್, ಜೊತೆಗೊಂದಿಷ್ಟು ಬೆಣ್ಣೆ ಮುದ್ದೆ ಹಾಕಿಕೊಂಡು ಎರಡು ಬನಾರಸಿ ದೋಸೆ ಹೊಟ್ಟೆಗಿಳಿಸಿ.

English summary

Banarasi dosa recipe | A dosa with a difference | South indian cuisine | ಬನಾರಸಿ ದೋಸೆ ರೆಸಿಪಿ | ಬೆಳಗಿನ ತಿಂಡಿಗೆ ವಿಭಿನ್ನ ತಿಂಡಿ

Banarasi dosa recipe, a dosa with a difference. Preperation of this south Indian cuisine is just like any other dosa, but the taste is great. Try it at home.
Story first published: Tuesday, July 12, 2011, 13:47 [IST]
X
Desktop Bottom Promotion